Tag: 76th United Nations General Assembly

  • ನಾನು ಭಾರತದ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದಿದ್ದೇನೆ: ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್

    ನಾನು ಭಾರತದ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದಿದ್ದೇನೆ: ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್

    ನ್ಯೂಯಾರ್ಕ್: ನಾನು ಭಾರತದ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದಿದ್ದೇನೆ ಎಂದು ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್ ಹೇಳಿಕೆ ನೀಡಿದ್ದಾರೆ.

    ಅವರು ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ವ್ಯಾಕ್ಸಿನ್ ಬಗ್ಗೆ ಮಾತನಾಡಿದ್ದು, ನಾನು ಭಾರತದಲ್ಲಿ ಉತ್ಪಾದಿಸಲಾಗಿರುವ ಕೋವಿಶೀಲ್ಡ್ ನ ಎರಡೂ ಡೋಸ್ ಲಸಿಕೆಯನ್ನು ಪಡೆದಿದ್ದೇನೆ. ಅಲ್ಲದೆ ವಿಶ್ವಾದ್ಯಂತ ಬಹುತೇಕರು ಇದೇ ಲಸಿಕೆಯನ್ನು ಪಡೆದಿದ್ದಾರೆ ಎಂದು ಹೇಳಿದ್ದಾರೆ.

    ವ್ಯಾಕ್ಸಿನ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಭಾರತದ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಪಡೆದಿದ್ದೇನೆ. ಎಷ್ಟು ದೇಶಗಳು ಭಾರತದ ಕೋವಿಶೀಲ್ಡ್ ಸಲಿಕೆಯನ್ನು ಒಪ್ಪಿಕೊಳ್ಳುತ್ತವೆ ಅಥವಾ ಇಲ್ಲ ಎಂಬುದು ನನಗೆ ಗೊತ್ತಿಲ್ಲ. ಆದರೆ ವಿಶ್ವದ ಬಹುತೇಕ ರಾಷ್ಟ್ರಗಳ ಜನ ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ ಸರ್ಕಾರದ ಯೋಜನೆಯ ರಾಯಭಾರಿಯಾದ ಕಂಗನಾ

    ಯಾವುದೇ ಕೋವಿಡ್ ಲಸಿಕೆಯನ್ನು ಪರಿಗಣಿಸಬೇಕೆ ಅಥವಾ ಯಾವುದಾದರೂ ಕೊರೊನಾ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಅಥವಾ ಇನ್ನಾವುದೇ ಸಂಸ್ಥೆಯ ಮಾನ್ಯತೆ ಪಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಲಸಿಕೆ ಪಡೆದು ನಾನು ಬದುಕುಳಿದಿದ್ದೇನೆ. ಆದರೆ ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ಈ ಪ್ರಶ್ನೆಯನ್ನು ವೈದ್ಯಕೀಯ ಪರಿಣಿತರ ಬಿಳಿಯೇ ಕೇಳಿ ಎಂದು ನಗುತ್ತ ಹೇಳಿದ್ದಾರೆ.

    ಭಾರತದ ವ್ಯಾಕ್ಸಿನ್ ಸಾಧನೆ
    ಭಾರತ ಈವರೆಗೆ 100ಕ್ಕೂ ಹೆಚ್ಚು ದೇಶಗಳಿಗೆ 66 ಮಿಲಿಯನ್(6 ಕೋಟಿ) ವ್ಯಾಕ್ಸಿನ್ ಡೋಸ್‍ಗಳನ್ನು ರಫ್ತು ಮಾಡಿದೆ. ವಾಣಿಜ್ಯ ಸಾಗಣೆ ಹಾಗೂ ಕೋವ್ಯಾಕ್ಸ್ ಸೌಲಭ್ಯದ ಮೂಲಕ ರಫ್ತು ಮಾಡಿದೆ. ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್ ಅವರ ತವರು ದೇಶ ಮಾಲ್ಡೀವ್ಸ್. ಭಾರತದ ಲಸಿಕೆಯನ್ನು ಪಡೆದ ಮೊದಲ ದೇಶಗಳಲ್ಲಿ ಮಾಲ್ಡೀವ್ಸ್ ಕೂಡ ಒಂದು. 1 ಲಕ್ಷ ಡೋಸ್‍ಗಳನ್ನು ಆರಂಭದಲ್ಲಿ ಕಳುಹಿಸಲಾಗಿತ್ತು.

    ಕೋವಿಶೀಲ್ಡ್ ಪರಿಗಣಿಸಲು ಆರಂಭದಲ್ಲಿ ಇಂಗ್ಲೆಂಡ್ ಹಿಂದೇಟು ಹಾಕಿತ್ತು. ಈ ನಿರ್ಧಾರದ ಬಗ್ಗೆ ಭಾರತ ತೀವ್ರ ಟೀಕಿಸಿದ ಬಳಿಕ ಸೆಪ್ಟೆಂಬರ್ 22ರಂದು ತನ್ನ ಹೊಸ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಿ ಕೋವಿಶೀಲ್ಡ್ ಲಸಿಕೆಯನ್ನು ಸೇರಿಸಿತು.