Tag: 71st Republic Day

  • ಧ್ವಜಾರೋಹಣ ಭಾಷಣದಲ್ಲೂ ಕನ್ನಡ ಕಗ್ಗೊಲೆ ಮಾಡಿದ ಶ್ರೀರಾಮುಲು

    ಧ್ವಜಾರೋಹಣ ಭಾಷಣದಲ್ಲೂ ಕನ್ನಡ ಕಗ್ಗೊಲೆ ಮಾಡಿದ ಶ್ರೀರಾಮುಲು

    – ಶೀಘ್ರದಲ್ಲೇ ಸಂಪುಟ ವಿಸ್ತರಣೆ

    ರಾಯಚೂರು: ಆರೋಗ್ಯ ಸಚಿವ ಶ್ರೀರಾಮುಲು ಅವರು ಭಾಷಣ ಮಾಡಿದಾಗಲೆಲ್ಲಾ ಕನ್ನಡ ಕಗ್ಗೊಲೆ ಮಾಡುತ್ತಲೇ ಇದ್ದಾರೆ. ರಾಯಚೂರಿನಲ್ಲಿ ಗಣರಾಜ್ಯೋತ್ಸವ ಹಿನ್ನೆಲೆ ಧ್ವಜಾರೋಹಣ ನೆರವೇರಿಸಿದ ಬಳಿಕ ಭಾಷಣ ಮಾಡಿದ ಅವರು ಪುಂಖಾನುಪುಂಖವಾಗಿ ಕನ್ನಡವನ್ನ ತಪ್ಪುತಪ್ಪಾಗಿ ಮಾತನಾಡಿದ್ದಾರೆ.

    ಕಳೆದ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ದಿನ ಮಾಡಿದ್ದ ಕೆಲ ತಪ್ಪುಗಳನ್ನೇ ಪುನಃ ಆರೋಗ್ಯ ಸಚಿವರು ಮಾಡಿದ್ದಾರೆ. ಈ ಹಿಂದೆ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಅನ್ನುವ ಬದಲು, ಆಗಸ್ಟ್ 15 ಗಣರಾಜ್ಯೋತ್ಸವ ದಿನಾಚರಣೆ ಎನ್ನುವ ಮೂಲಕ ಆರಂಭಿಸಿ ಮಾದರಿ ಪದಕ್ಕೆ ಮಾಧುರಿ ಅಂತ, ಆಜಾದ್ ಪದಕ್ಕೆ ಆಜಾರ್, ಸ್ವಾತಂತ್ರ್ಯಕ್ಕೆ ಸ್ವಾಸಂತ್ರ, ಉಡಾವಣೆ ಬದಲಾಗಿ ಉಗ್ರಾಣಿಗಳು, ತಂತ್ರಜ್ಞಾನದ ಬದಲಾಗಿ ತಂತ್ರಗ ಎಂದು ಉಚ್ಚರಿಸಿ ಶ್ರೀರಾಮುಲು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

    ಈ ಬಾರಿ ಭಾಷಣ ಮಾಡುವಾಗ ಶ್ರೀರಾಮುಲು ಅವರು ನಮ್ಮದು ವೈವಿಧ್ಯತೆ ಹೊಂದಿದ ದೇಶ ಎನ್ನುವ ಬದಲು ವೈವಿಧ್ಯತೆ ಇಲ್ಲದ ದೇಶ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದಾರೆ. ತೆಲುಗು ಪ್ರಭಾವ ಅವರ ಮೇಲೆ ಹೆಚ್ಚಾಗಿ ಇರಬಹುದು. ಆದರೆ ಸಚಿವರು ಕನ್ನಡವನ್ನ ಸರಿಯಾಗಿ ಮಾತನಾಡುವುದನ್ನ ಕಲಿಯದೆ ಇರುವುದು ಕನ್ನಡಿಗರ ದುರಂತವೇ ಸರಿ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು

    ಶೀಘ್ರದಲ್ಲೇ ಸಂಪುಟ ವಿಸ್ತರಣೆ:
    ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗುತ್ತೆ, ಡಿಸಿಎಂ ಹುದ್ದೆ ನೀಡುವ ಬಗ್ಗೆ ಜನರ ಬೇಡಿಕೆ ಇದ್ದರೂ ಪಕ್ಷದ ತೀರ್ಮಾನವೇ ಅಂತಿಮ ಎಂದು ಶ್ರೀರಾಮುಲು ಹೇಳಿದ್ದಾರೆ. ರಾಯಚೂರಿನ ಪೊಲೀಸ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಶ್ರೀರಾಮುಲು ಅವರು, ಸಿಎಂ ಯಡಿಯೂರಪ್ಪ ಶೀಘ್ರದಲ್ಲಿ ದೆಹಲಿಗೆ ಹೋಗಲಿದ್ದಾರೆ. ಅಮಿತ್ ಶಾ, ಜೆ.ಪಿ ನಡ್ಡಾರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಜಿಲ್ಲಾ ಕ್ರೀಡಾಂಗಣ ಹಾಗೂ ಜಿಲ್ಲಾಡಳಿತ ಭವನದ ನಿರ್ಮಾಣ ಕೆಲಸ ಬೇಗ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.