Tag: 6 sixes

  • ‘ನನ್ನ ಮಗನ ಕೆರಿಯರ್ ಮುಗಿಸಿಬಿಟ್ಟೆ’

    ‘ನನ್ನ ಮಗನ ಕೆರಿಯರ್ ಮುಗಿಸಿಬಿಟ್ಟೆ’

    ನವದೆಹಲಿ: ‘ನನ್ನ ಮಗನ ವೃತ್ತಿ ಜೀವನವನ್ನೇ ಇಲ್ಲಿಗೆ ಮುಗಿಸಿಬಿಟ್ಟೆ’ ಅಂತ ಇಂಗ್ಲೆಂಡ್‍ನ ಮಾಜಿ ಆಟಗಾರ, ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ನನ್ನ ವಿರುದ್ಧ ದೂರಿದ್ದರು ಎಂದು ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ನೆನೆದಿದ್ದಾರೆ.

    ಯುವಿ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. 2007ರ ಟಿ20 ವಿಶ್ವಕಪ್‍ನ ಟೂರ್ನಿಯಲ್ಲಿ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಓವರಿನಲ್ಲಿ ಯುವರಾಜ್ ಸಿಂಗ್ ಬ್ಯಾಕ್ ಟು ಬ್ಯಾಕ್ ಆರು ಸಿಕ್ಸರ್ ಸಿಡಿಸಿ ಇತಿಹಾಸ ಸೃಷ್ಟಿಸಿದ್ದರು. ಟಿ20 ಮಾದರಿಯಲ್ಲಿ ಈ ಸಾಧನೆಯನ್ನು ಮಾಡಿದ ಮೊದಲ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಅಂದು ನಡೆದ ಘಟನೆ ಬಳಿಕ ನಡೆದ ಆಸಕ್ತಿಕಾರ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

    ಅಂದು ಯುವಿ ಸಿಡಿಸಿದ ‘ಸಿಕ್ಸ‌ರ್‌ಗಳು’ ಸ್ಟುವರ್ಟ್ ಬ್ರಾಡ್ ಅವರ ವೃತ್ತಿಜೀವನವನ್ನು ಅಲ್ಲಿಗೆ ಕೊನೆಗೊಳಿಸಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಸ್ಟುವರ್ಟ್ ಅವರು ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿ, ತಂಡದಲ್ಲಿ ಉಳಿದರು. ಸದ್ಯ ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್‍ನ ಟೆಸ್ಟ್ ತಂಡದಲ್ಲಿ ಜೇಮ್ಸ್ ಆಂಡರ್ಸನ್ ಜೊತೆಗೆ ವೇಗದ ಬೌಲರ್ ಪಟ್ಟಿಯಲ್ಲಿದ್ದಾರೆ. ಅವರು 2012 ಮತ್ತು 2014ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದರು.

    ಅಂದಿನ ಪಂದ್ಯವನ್ನು ನೆನೆದ ಯುವಿ, ”ಸ್ಟುವರ್ಟ್ ಬ್ರಾಡ್ ತಂದೆ, ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರು ಪಂದ್ಯದ ಮರುದಿನ ನನ್ನ ಬಳಿಗೆ ಬಂದಿದ್ದರು. ಆಗ ಅವರು, ನೀವು ನನ್ನ ಮಗನ ವೃತ್ತಿಜೀವನವನ್ನು ಬಹುತೇಕ ಮುಗಿಸಿದ್ದೀರಿ. ಈಗ ನೀವು ಅವನ ಶರ್ಟ್ ಮೇಲೆ ಸಹಿ ಮಾಡಬೇಕಾಗಿದೆ ಎಂದು ಹೇಳಿದ್ದರು. ಹಾಗಾಗಿ ನಾನು ನನ್ನ ಜರ್ಸಿಯ ಮೇಲೆ ‘ಆಲ್ ದಿ ಬೆಸ್ಟ್’ ಎಂದು ಬರೆದು ಅವರಿಗೆ ಕೊಟ್ಟಿದ್ದೆ” ಎಂದರು.

    ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್ ಪರ ಆಡಿದ ಅತ್ಯುತ್ತಮ ವೇಗದ ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ ಎಂದು ಯುವರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 485 ಟೆಸ್ಟ್ ವಿಕೆಟ್‍ಗಳನ್ನು ಪಡೆದಿರುವ ಅವರು ಇಂಗ್ಲೆಂಡ್ ತಂಡದ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಎರಡನೇ ಬೌಲರ್ ಆಗಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ 178 ವಿಕೆಟ್ ಮತ್ತು ಟಿ20ಯಲ್ಲಿ 65 ವಿಕೆಟ್ ಗಳಿಸಿದ್ದಾರೆ. ಬ್ರಾಡ್ 2017ರಿಂದ ವೈಟ್-ಬಾಲ್ ಕ್ರಿಕೆಟ್‍ನಿಂದ ದೂರ ಉಳಿದಿದ್ದಾರೆ.

    ಅಂದಿನ ಪಂದ್ಯದಲ್ಲಿ ಏನಾಗಿತ್ತು?:
    2007ರ ಸೆಪ್ಟೆಂಬರ್ 10ರಂದು ನಡೆದಿದ್ದ ಪಂದ್ಯದ ಇನ್ನಿಂಗ್ಸ್ ನ 17 ಓವರ್ ಎಸೆದ ಫ್ಲಿಂಟಾಫ್ ಬೌಲಿಂಗ್‍ನಲ್ಲಿ ಯುವಿ 2 ಬೌಂಡರಿ ಸಿಡಿಸಿದ್ದರು. ಆದರೆ ಓವರಿನ ಅಂತಿಮ ಎಸೆತದಲ್ಲಿ ನಾನ್ ಸ್ಟ್ರೈಕ್‍ನಲ್ಲಿದ್ದ ಯುವರಾಜ್ ಸಿಂಗ್ ಅವರನ್ನು ಫ್ಲಿಂಟಾಫ್ ಮಾತಿನ ಚಾಟಿ ಬೀಸಿ ಕೆರಳಿಸಿದ್ದರು. ಆನ್‍ಫೀಲ್ಡ್‌ನಲ್ಲೇ ಫ್ಲಿಂಟಾಫ್ ವಿರುದ್ಧ ತಿರುಗಿಬಿದ್ದಿದ್ದ ಯುವಿ, ಬ್ಯಾಟ್ ತೋರಿಸಿ ಮುನ್ನುಗ್ಗಿದ್ದರು. ಆದರೆ ಈ ವೇಳೆಗೆ ಇತರೇ ಆಟಗಾರರು, ಅಂಪೈರ್ ನಡುವೆ ಬಂದು ಇಬ್ಬರ ಜಗಳ ಬಿಡಿಸುವ ಕಾರ್ಯ ಮಾಡಿದರು.

    ಫ್ಲಿಂಟಾಫ್ ಮಾತಿನ ಚಾಟಿಯಿಂದ ಸಿಟ್ಟಿಗೆದ್ದ ಯುವಿ 18ನೇ ಓವರ್ ಎಸೆದ ಸ್ಟುವರ್ಟ್ ಬ್ರಾಡ್ ಬೌಲಿಂಗ್‍ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಅಂದು ತಮಗೆ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಯೋಚನೆ ಇರಲಿಲ್ಲ. ಆದರೆ ಫ್ಲಿಂಟಾಪ್ ತೋರಿದ ವರ್ತನೆಯಿಂದ ಕೋಪಗೊಂಡು ಎಲ್ಲಾ ಎಸೆತಗಳನ್ನು ಬೌಂಡರಿ ಗೆರೆದಾಡಿ ಹೊಡೆಯಲು ಯತ್ನಿಸಿದೆ. ಅಲ್ಲದೇ 6 ಸಿಕ್ಸರ್ ಸಿಡಿಸಿದ ಬಳಿಕ ಪಂದ್ಯದ ಹಲವು ಅಚ್ಚರಿಯ ಘಟನೆಗಳು ನಡೆದವು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 30 ಎಸೆತಗಳಲ್ಲಿ 70 ರನ್ ಸಿಡಿಸಿದ ಬಳಿಕ ವಿಕೆಟ್ ಕೀಪರ್ ಆಡಮ್ ಗಿಲ್‍ಕ್ರಿಸ್ಟ್ ಬ್ಯಾಟ್ ಕುರಿತು ಸಂಶಯ ವ್ಯಕ್ತಪಡಿಸಿದ್ದರು ಎಂದು ಯುವಿ ಈ ಹಿಂದೆ ಹೇಳಿದ್ದರು.

  • ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ ಕಿವೀಸ್ ಬ್ಯಾಟ್ಸ್‌ಮನ್: ವಿಡಿಯೋ

    ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ ಕಿವೀಸ್ ಬ್ಯಾಟ್ಸ್‌ಮನ್: ವಿಡಿಯೋ

    ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್ ಬ್ಯಾಟ್ಸ್‌ಮನ್ ಲಿಯೋ ಕಾರ್ಟರ್ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಆರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಕ್ರೈಸ್ಟ್ ಚರ್ಚ್ ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ನ್ಯೂಜಿಲ್ಯಾಂಡ್‍ನ ದೇಶಿಯ ಟಿ20 ಟೂರ್ನಮೆಂಟ್‍ನಲ್ಲಿ ನಾರ್ಥನ್ ನೈಟ್ಸ್ ವಿರುದ್ಧದ ಪಂದ್ಯದಲ್ಲಿ ಲಿಯೋ ಕಾರ್ಟರ್ ಈ ಸಾಧನೆ ಮಾಡಿದ್ದಾರೆ. ಇನ್ನಿಂಗ್ಸ್ 16ನೇ ಓವರ್ ನಲ್ಲಿ ಎಡಗೈ ಬ್ಯಾಟ್ಸ್‌ಮನ್ ಲಿಯೋ ಕಾರ್ಟರ್ ಆರು ಎಸೆತಗಳನ್ನು ಸಿಕ್ಸರ್ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಲಿಯೋ ಕಾರ್ಟರ್ 29 ಎಸೆತಗಳಲ್ಲಿ 70 ರನ್ (7 ಸಿಕ್ಸರ್, 4 ಬೌಂಡರಿ) ಗಳಿಸಿದರು. ಲಿಯೋ ಕಾರ್ಟರ್ ಅವರ 70 ರನ್ ಸಹಾಯದಿಂದ ದಿ ಕಿಂಗ್ಸ್ 220 ರನ್ ಗಳಿಸಿತು.

    ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ವೆಸ್ಟ್ ಇಂಡೀಸ್‍ನ ಮಾಜಿ ಬ್ಯಾಟ್ಸ್‌ಮನ್ ಗ್ಯಾರಿ ಸೋಬರ್ಸ್ ಒಂದೇ ಓವರ್‍ನಲ್ಲಿ ಆರು ಸಿಕ್ಸರ್ ಗಳನ್ನು ಮೊದಲ ಬಾರಿಗೆ ಸಿಡಿಸಿದ್ದರು. 1968ರಲ್ಲಿ ನಾಟಿಂಗ್ ಹ್ಯಾಮ್ ಶೈರ್ ಪರ ಆಡುತ್ತಿದ್ದಾಗ ಕೌಂಟಿ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ್ದರು. ಬಳಿಕ ಭಾರತದ ಮಾಜಿ ಆಟಗಾರ ರವಿಶಾಸ್ತ್ರಿ, ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್, ಟೀಂ ಇಂಡಿಯಾದ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್, ಇಂಗ್ಲೆಂಡ್‍ನ ರಾಸ್ ವೈಟ್ಲಿ, ಅಫ್ಘಾನಿಸ್ತಾನದ ಹಜರತುಲ್ಲಾ ಝಝಾಯ್ ಬಳಿಕ ಲಿಯೋ ಕಾರ್ಟರ್ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ.

    1985ರಲ್ಲಿ ರವಿಶಾಸ್ತ್ರಿ ರಣಜಿ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರೆ, ಟಿ-20 ಕ್ರಿಕೆಟ್‍ನಲ್ಲಿ ಯುವರಾಜ್ ಸಿಂಗ್ 6 ಸಿಕ್ಸ್ ಸಿಡಿಸಿದ್ದರು.

    https://twitter.com/imApuravDhiman/status/1024211695525416960