Tag: 6ನೇ ಮೈಲಿ

  • 6ನೇ ಮೈಲಿ ಸಿನಿಮಾ ನೋಡಿ: ಅಪರ ಪೊಲೀಸ್ ಆಯುಕ್ತರಿಂದ ಸುತ್ತೋಲೆ

    6ನೇ ಮೈಲಿ ಸಿನಿಮಾ ನೋಡಿ: ಅಪರ ಪೊಲೀಸ್ ಆಯುಕ್ತರಿಂದ ಸುತ್ತೋಲೆ

    ಬೆಂಗಳೂರು: ಪೊಲೀಸರು `6ನೇ ಮೈಲಿ’ ಸಿನಿಮಾ ನೋಡಬೇಕು ಎಂದು ಬೆಂಗಳೂರು ನಗರ ಅಪರ ಪೊಲೀಸ್ ಆಯುಕ್ತ ಎಂ.ನಂಜುಂಡಸ್ವಾಮಿ ಸುತ್ತೋಲೆ ಹೊರಡಿಸಿದ್ದಾರೆ.

    ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ವಿಶೇಷವಾಗಿ ಪೊಲೀಸರಿಗೆ 6ನೇ ಮೈಲಿ ಸಿನಿಮಾ ಪ್ರದರ್ಶನ ಆಯೋಜಿಸಲಾಗಿದೆ. ಚಿತ್ರವು ಸರಣಿ ಕೊಲೆ ಭೇದಿಸುವ ಕಥೆಯನ್ನು ಹೊಂದಿದೆ. ಅತ್ಯಾಧುನಿಕ ತಂತ್ರಾಜ್ಞಾನ ಬಳಸಿಕೊಂಡು ಪ್ರಕರಣ ಭೇದಿಸುವ ಸಿನಿಮಾ ಇದಾಗಿದ್ದು, ಪ್ರತಿ ವಿಭಾಗದಿಂದ 5 ಪೊಲೀಸ್ ಅಧಿಕಾರಿಗಳನ್ನು ಸಿನಿಮಾ ನೋಡಲು ಕಳುಹಿಸಿಕೊಡುವಂತೆ ಎಂ.ನಂಡುಂಡಸ್ವಾಮಿ ಸೂಚನೆ ನೀಡಿದ್ದಾರೆ.

    ಸದ್ಯ ಪೊಲೀಸರಿಗಾಗಿಯೇ ಚಾಮರಾಜಪೇಟೆಯಲ್ಲಿ ವಿಶೇಷ ಪ್ರದರ್ಶನ ಮಂಗಳವಾರ ಸಂಜೆ 7 ಗಂಟೆಗೆ ಸಿನಿಮಾ ಪ್ರದರ್ಶನ ಆರಂಭವಾಗಿದೆ.

    ಸುತ್ತೋಲೆಯಲ್ಲಿ ಏನಿದೆ?
    6ನೇ ಮೈಲಿ ಸಿನಿಮಾದ ನಿರ್ಮಾಪಕರು ಪೊಲೀಸ್ ಅಧಿಕಾರಿಗಳಿಗೆ ಗೌರವ ಸೂಚಕವಾಗಿ ವಿಶೇಷ ಪ್ರದರ್ಶನವನ್ನು ಬುಧವಾರ ಸಂಜೆ 7 ಗಂಟೆಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಆಯೋಜಿಸಿದ್ದಾರೆ. ಹೀಗಾಗಿ ಸಿನಿಮಾ ವೀಕ್ಷಣೆಗೆ ಪ್ರತಿ ವಿಭಾಗದ ಐದು ಜನ ಪೊಲೀಸ್ ಅಧಿಕಾರಿಗಳನ್ನು ಹಾಗೂ ಬಿಡುವು ಇರುವವರನ್ನು ಕಳುಹಿಸಿಕೊಡಬೇಕು ಎಂದು ಎಂ.ನಂಜುಂಡಸ್ವಾಮಿ ಸುತ್ತೋಲೆಯಲ್ಲಿ ತಿಳಿಸಿದ್ದರು.

  • ಕತ್ತಲು ಕಷ್ಟವೆನಿಸಿದರೂ ‘6ನೇ ಮೈಲಿ’ಯಲ್ಲಿ ಅಚ್ಚರಿಯಿದೆ!

    ಕತ್ತಲು ಕಷ್ಟವೆನಿಸಿದರೂ ‘6ನೇ ಮೈಲಿ’ಯಲ್ಲಿ ಅಚ್ಚರಿಯಿದೆ!

    ಬೆಂಗಳೂರು: ವಿಶಿಷ್ಟವಾದ ಪಾತ್ರಗಳ ಮೂಲಕವೇ ಹೆಸರಾಗಿರುವ ಸಂಚಾರಿ ವಿಜಯ್ ನಟಿಸಿರೋ 6ನೇ ಮೈಲಿ ಚಿತ್ರ ತೆರೆ ಕಂಡಿದೆ. ಪಶ್ಚಿಮಘಟ್ಟಗಳೆಂದರೇನೇ ಹಲವಾರು ಕೌತುಕಳನ್ನು ಒಡಲೊಳಗೆ ಬಚ್ಚಿಟ್ಟುಕೊಂಡಿರುವ ಪ್ರದೇಶ. ಈಗಂತೂ ನೈಸರ್ಗಿಕ ಆಹ್ಲಾದವನ್ನೇ ಮಂಕಾಗಿಸುವಂಥಾ ಮಾಫಿಯಾಗಳೂ ಅಲ್ಲಿ ರಾರಾಜಿಸುತ್ತಿವೆ. ಇಂಥಾ ಪ್ರದೇಶದ ಕಥೆ ಅಂದ ಮೇಲೆ ಕುತೂಹಲ ಹುಟ್ಟದಿರೋದಿಲ್ಲ. ಇಂಥಾ ನಿರೀಕ್ಷೆಯೊಂದಿಗೆ ಥಿಯೇಟರು ಹೊಕ್ಕವರನ್ನು ಅಲ್ಲಲ್ಲಿ ನಿರಾಸೆ ಮಾಡಿದರೂ ಚೆಂದದ್ದೊಂದು ಅನುಭವ ಕಟ್ಟಿ ಕೊಡುವಲ್ಲಿ ಈ ಚಿತ್ರ ತಕ್ಕಮಟ್ಟಿಗೆ ಗೆದ್ದಿದೆ!

    ಉಜಿರೆ ವ್ಯಾಪ್ತಿಯ ದಟ್ಟವಾದ ಕಾಡಿನಲ್ಲಿಯೇ ಈ ಕಥಾನಕ ಬಿಚ್ಚಿಕೊಳ್ಳುತ್ತದೆ. ನೈಸರ್ಗಿಕ ಸೌಂದರ್ಯದ ಗಣಿಯಂತಿರೋ ಆ ಕಾಡಿನ ವಾತಾವರಣದಲ್ಲಿ ಬಹು ಕಾಲದಿಂದಲೂ ನಕ್ಸಲ್ ಚಟುವಟಿಕೆ ನಡೆದು ಬಂದಿರುತ್ತೆ. ಹಾಗಿದ್ದರೂ ಅದು ಚಾರಣಪ್ರಿಯರ ಹಾಟ್ ಸ್ಪಾಟ್ ಆಗಿಯೇ ಮುಂದುವರೆದಿರುತ್ತೆ. ಹೆಣ್ಣು ಗಂಡುಗಳ ಜೋಡಿ ಜೋಡಿ ಗುಂಪು ಚಾರಣದ ಹೆಸರಲ್ಲಿ ದಾಂಗುಡಿ ಇಡುವ ಪ್ರದೇಶದಲ್ಲಿ ಹಿಡಿದು ಸುಲಿಯುವ ದರೋಡೆಕೋರರು, ಅತ್ಯಾಚಾರಿಗಳೂ ಹುಟ್ಟಿಕೊಂಡಿರುತ್ತಾರೆ.

    ಇಂಥಾ ಕ್ರಿಮಿನಲ್ ಚಟುವಟಿಕೆಗಳ ಹಿಂದಿರುವವರನ್ನು ಮಟ್ಟ ಹಾಕಲು ನೈಟ್ ಜರ್ನಿಯ ಬೇಟೆ ಶುರು ಮಾಡಿಕೊಳ್ಳುವ ತನಿಖಾ ತಂಡ ಕ್ರಿಮಿನಲ್ಲುಗಳನ್ನು ಕೆಡವಿಕೊಳ್ಳೋದರ ಸುತ್ತಲಿನ ಕಥೆಯನ್ನು ಆರನೇ ಮೈಲಿ ಹೊಂದಿದೆ. ಆದರೆ ಕತ್ತಲಲ್ಲಿಯೇ ಹೆಚ್ಚಿನ ದೃಶ್ಯಗಳನ್ನು ಕಟ್ಟಿರೋದರಿಂದ ಅಸಲೀ ರೋಚಕತೆಯೊಂದು ಮಬ್ಬು ಮಬ್ಬಾಗಿ, ಪೇಲವವಾಗಿ ಪ್ರೇಕ್ಷಕರನ್ನು ತಲುಪಿಕೊಂಡಿದೆ.

    ಹೆಚ್ಚು ಎಳೆದಾಡಬಾರದೆಂಬ ಉದ್ದೇಶದಿಂದಲೇ ನಿರ್ದೇಶಕ ಸೀನಿ ಇಡೀ ಚಿತ್ರವನ್ನು ನೂರಾ ಇಪ್ಪತ್ತು ನಿಮಿಷಕ್ಕಿಳಿಸಿದ್ದಾರೆ. ಆದರೆ ಈ ಚಿತ್ರದ ನಿಜವಾದ ಕಂಟೆಂಟನ್ನು ಅರವತ್ತು ನಿಮಿಷದಲ್ಲಿಯೇ ಹೇಳುವಂಥಾದ್ದು. ಈ ಎಳೆದಾಟ ಮೊದಲಾರ್ಧದಲ್ಲಿ ಕೊಂಚ ಅಸಹನೆ ಹುಟ್ಟಿಸಿದರೂ ದ್ವಿತೀಯಾರ್ಧದಲ್ಲಿ ತುಂಬಾ ಚೇತೋಹಾರಿ ಅನುಭವ ನೀಡುವ ಮೂಲಕ ನಿರ್ದೇಶಕರು ಚಾಕಚಕ್ಯತೆ ತೋರಿಸಿದ್ದಾರೆ.

    ಕೆಲವಾರು ಕೊರತೆಗಳಾಚೆಗೂ ಬರೀ ಬೋರು ಹೊಡೆಸದೆ ಚೇತೋಹಾರಿ ಅನುಭವ ನೀಡುವ ಈ ಚಿತ್ರದಲ್ಲಿ ಸಂಚಾರಿ ವಿಜಯ್ ಎಂದಿನಂತೆ ಚೆಂದದ ನಟನೆ ನೀಡಿದ್ದಾರೆ. ಮಿಕ್ಕೆಲ್ಲ ಪಾತ್ರಗಳನ್ನೂ ಕೂಡಾ ನಿರ್ದೇಶಕ ಸೀನಿ ಕಥೆಗೆ ಬೇಕಾದಂತೆ ಪಳಗಿಸಿಕೊಂಡಿದ್ದಾರೆ. ಈ ಮೂಲಕವೇ ಅವರು ನಿರ್ದೇಶಕರಾಗಿ ಭರವಸೆ ಹುಟ್ಟಿಸಿದ್ದಾರೆ.

  • 6ನೇ ಮೈಲಿಯಲ್ಲಿ ಸಂಚಾರಿ!

    6ನೇ ಮೈಲಿಯಲ್ಲಿ ಸಂಚಾರಿ!

    ಬೆಂಗಳೂರು: ಸಂಚಾರಿ ವಿಜಯ್ ಅಂದರೇನೇ ವಿಶಿಷ್ಟ ಶೈಲಿಯ ನಟ. ನಟನೆಗೆ ಸವಾಲಾದ ಪಾತ್ರಗಳನ್ನಷ್ಟೇ ಆರಿಸಿಕೊಳ್ಳುತ್ತಾ ಬಂದಿರುವ ವಿಜಯ್, 6ನೇ ಮೈಲಿ ಚಿತ್ರವನ್ನೂ ಕೂಡಾ ಅದೇ ಮಾನದಂಡದಲ್ಲಿಯೇ ಆಯ್ಕೆ ಮಾಡಿಕೊಂಡಿದ್ದಾರಂತೆ. ಸೀನಿ ನಿರ್ದೇಶನದ ಈ ಚಿತ್ರವನ್ನು ಡಾ.ಜಿ.ಎಸ್ ಶೈಲೇಶ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಹರಿಹರ ಮೂಲದವರಾದ ಶೈಲೇಶ್ ಕುಮಾರ್ ವೃತ್ತಿಯಲ್ಲಿ ನ್ಯೂರೋ ಸರ್ಜನ್. ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ಸದಭಿರುಚಿಯ ಸಿನಿಮಾ ನೀಡಬೇಕೆಂಬ ಆಸೆ ಹೊಂದಿದ್ದ ಅವರು 6ನೇ ಮೈಲಿ ಮೂಲಕ ನಿರ್ಮಾಪಕರಾಗಿದ್ದಾರೆ. ಇದೇ ವಾರ ಅಂದರೆ ಜುಲೈ 6ರಂದು 6ನೇ ಮೈಲಿ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

    ಅದ್ಭುತ ಮೈಸಿರಿಯ ಮಲೆನಾಡು ಸೀಮೆ ಎಂಬುದು ಟೆಕ್ಕಿಗಳೂ ಸೇರಿದಂತೆ ಎಲ್ಲರ ಆಕರ್ಷಣೆಯ ತಾಣ. ಟೆಕ್ಕಿಗಳಂತೂ ಇಲ್ಲಿನ ದಟ್ಟ ಕಾಡುಗಳಿಗೆ ವೀಕೆಂಡಿನಲ್ಲಿ ಟ್ರೆಕ್ಕಿಂಗ್ ಬರೋದು ಸಾಮಾನ್ಯ. ಆದರೆ ಇಂಥಾದ್ದೇ ಒಂದು ಪ್ರದೇಶದಲ್ಲಿ ಟ್ರೆಕ್ಕಿಂಗ್‍ಗೆ ಬರುತ್ತಿದ್ದ ಟೆಕ್ಕಿಗಳು ಸಾಲು ಸಾಲಾಗಿ ಕಣ್ಮರೆಯಾಗುತ್ತಿದ್ದರು. ಇದರ ಬೆಂಬಿದ್ದು ಹೋದಾಗ ಅನೇಕ ರೋಚಕ ಅಂಶಗಳೂ ಬಯಲಾಗಿದ್ದವು. ಈ ಕಥೆಯನ್ನೇ ಆರನೇ ಮೈಲಿ ಚಿತ್ರದ ಮೂಲಕ ರೋಚಕವಾಗಿ ಹೇಳಲಾಗಿದೆಯಂತೆ. ಸಾಯಿಕಿರಣ್ ಸಂಗೀತ ನಿರ್ದೇಶನದ ಈ ಚಿತ್ರದ ಹಾಡುಗಳು ಪಿ ಆರ್ ಕೆ ಆಡಿಯೋ ಮೂಲಕ ಬಿಡುಗಡೆಯಾಗಿದೆ.

    ಸೀನಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪರಮೇಶ್ ಪಿ.ಎಂ(ಪರ್ಮಿ) ಅವರ ಛಾಯಾಗ್ರಹಣವಿದೆ. ಮಹೇಶ್ ರೆಡ್ಡಿ ಸಂಕಲನ, ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಂಚಾರಿ ವಿಜಯ್, ಆರ್.ಜೆ.ನೇತ್ರ, ರಘು ಪಾಂಡೇಶ್ವರ್, ಕೃಷ್ಣ ಹೆಬ್ಬಾಳೆ, ಡಾ.ಜಾಹ್ನವಿ, ಆರ್.ಜೆ.ಸುದ್ದೇಶ್, ಹೇಮಂತ್ ಸುಶೀಲ್, ಮೈತ್ರಿ ಜಗ್ಗಿ ಮುಂತಾದವರಿದ್ದಾರೆ.