Tag: 5ಎ ಕಾಲುವೆ

  • 5ಎ ಕಾಲುವೆ ಹೋರಾಟ- ರಾಯಚೂರು ಡಿಸಿ ಮನವೊಲಿಕೆ ಯತ್ನ ವಿಫಲ

    5ಎ ಕಾಲುವೆ ಹೋರಾಟ- ರಾಯಚೂರು ಡಿಸಿ ಮನವೊಲಿಕೆ ಯತ್ನ ವಿಫಲ

    ರಾಯಚೂರು: ಎನ್‍ಆರ್ ಬಿಸಿ ಯೋಜನೆಯಡಿ 5ಎ ಕಾಲುವೆಗೆ ಒತ್ತಾಯಿಸಿ ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರಿನಲ್ಲಿ ರೈತರು ನಡೆಸಿರುವ ಪ್ರತಿಭಟನಾ ಸ್ಥಳಕ್ಕೆ ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಭೇಟಿ ನೀಡಿ ರೈತರೊಂದಿಗೆ ಚರ್ಚೆ ನಡೆಸಿದರು. ಧರಣಿ ನಿರತ ರೈತ ಮುಖಂಡರೊಂದಿಗೆ ಯೋಜನೆ ಅನುಷ್ಠಾನದ ತಾಂತ್ರಿಕ ವಿಷಯಗಳ ಬಗ್ಗೆ ಮಾತನಾಡಿದರು.

    ಜಿಲ್ಲಾಧಿಕಾರಿಗಳ ಜೊತೆ ರೈತರು ಸಮಾಲೋಚನೆ ನಡೆಸಿದರಾದರೂ 5ಎ ಕಾಲುವೆ ಜಾರಿಯಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಅಂತ ಸ್ಪಷ್ಟಪಡಿಸಿದರು. 5ಎ ಕಾಲುವೆ ಬದಲಾಗಿ ಬೇರೆ ಯೋಜನೆಗಳನ್ನ ಸರ್ಕಾರ ಜಾರಿಗೆ ತರಲು ಮುಂದಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಯೋಜನೆಯ ಅನುಷ್ಠಾನಕ್ಕಾಗಿ 12 ವರ್ಷಗಳಿಂದ ರೈತರು ಹೋರಾಟ ಮಾಡುತ್ತಿದ್ದರೂ ಇಲ್ಲಿಯವರೆಗೂ ಯೋಜನೆ ಘೋಷಣೆ ಆಗಿಲ್ಲ. ಕೂಡಲೇ ಘೋಷಣೆ ಮಾಡಬೇಕು ಅಂತ ರೈತರು ಒತ್ತಾಯಿಸಿದರು.

    ಜಿಲ್ಲಾಧಿಕಾರಿ ಭೇಟಿ ವೇಳೆ ಎನ್‍ಆರ್ ಬಿಸಿ ಮುಖ್ಯ ಅಭಿಯಂತರ ರಂಗರಾಮ್, ಲಿಂಗಸಗೂರು ಸಹಾಯಕ ಆಯುಕ್ತ ರಾಜಶೇಖರ್ ಡಂಬಳ, ಮಸ್ಕಿ ತಹಶೀಲ್ದಾರ್ ಬಲರಾಮ್ ಕಟ್ಟಿಮನಿ, ಸಹಾಯಕ ಕಾರ್ಯನಿರ್ವಾಹಕ ಬಿ.ಡಿ. ಬಿರಾದಾರ್, ಇನ್ನಿತರೆ ಅಧಿಕಾರಿಗಳು ಹಾಗೂ ರೈತರು ಹಾಜರಿದ್ದರು.

  • 60 ದಿನ ಪೂರೈಸಿದ 5 ಎ ಕಾಲುವೆ ಹೋರಾಟ – ರೈತರ ಮಧ್ಯೆ ಬಿರುಕು ಮೂಡಿಸಲು ಯತ್ನ?

    60 ದಿನ ಪೂರೈಸಿದ 5 ಎ ಕಾಲುವೆ ಹೋರಾಟ – ರೈತರ ಮಧ್ಯೆ ಬಿರುಕು ಮೂಡಿಸಲು ಯತ್ನ?

    – ಪ್ರತಾಪ್‍ಗೌಡ ಪಾಟೀಲ್ ವಿರುದ್ದ ರೈತರ ಆಕ್ರೋಶ
    – ಮೊದಲು ಭರವಸೆ ಕೊಟ್ಟು ಈಗ ಅವೈಜ್ಞಾನಿಕ ಅಂತಿರೋ ಸರ್ಕಾರ

    ರಾಯಚೂರು: ಜಿಲ್ಲೆಯ ಮಸ್ಕಿಯ ನಾರಾಯಣಪುರ ಬಲದಂಡೆ 5 ಎ ಕಾಲುವೆ ಹೋರಾಟ 60 ದಿನಗಳನ್ನ ಪೂರೈಸಿದರು ಸರ್ಕಾರ ರೈತರಿಗೆ ಸ್ಪಂದಿಸಿಲ್ಲ. ಬದಲಾಗಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ರೈತರ ಮಧ್ಯೆ ಜಗಳ ತಂದಿಡುವ ಕೆಲಸ ಮಾಡಿದ್ದಾರೆ ಅಂತ ರೈತರು ಕಿಡಿಕಾರಿದ್ದಾರೆ. ಹೋರಾಟದ ದಿಕ್ಕನ್ನ ಬದಲಿಸುವ ಪ್ರಯತ್ನ ನಡೆದಿದೆ ಅಂತ ರೈತರು ರೊಚ್ಚಿಗೆದ್ದಿದ್ದಾರೆ.

    ನಾಲ್ಕು ಗ್ರಾಮ ಪಂಚಾಯತಿಗಳ ಬಹಿಷ್ಕಾರ, ಮಸ್ಕಿ ಬಂದ್, ಸತತ 60 ದಿನಗಳಿಂದ ಅನಿರ್ಧಿಷ್ಟಾವದಿ ಧರಣಿ ನಡೆಸಿದರು 5 ಎ ಕಾಲುವೆ ಹೋರಾಟಕ್ಕೆ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ರಾಯಚೂರಿನ ಮಸ್ಕಿಯ ಪಾಮನಕಲ್ಲೂರಿನಲ್ಲಿ ರೈತರು ಕಾಲುವೆಗಾಗಿ ನಿರಂತರ ಹೋರಾಟವನ್ನ ನಡೆಸಿದ್ದಾರೆ. ಆದ್ರೆ ಪ್ರತಾಪ್ ಗೌಡ ಪಾಟೀಲ್ ತಮ್ಮ ಬೆಂಬಲಿಗರನ್ನೇ 5 ಎ ಕಾಲುವೆ ಹೋರಾಟ ನಿರತ ರೈತರು ಅಂತ ಬೆಂಗಳೂರಿಗೆ ಕರೆದೊಯ್ದು ಸರ್ಕಾರಕ್ಕೆ ಹರಿ ನೀರಾವರಿ ಬಗ್ಗೆ ಮನವಿ ಮಾಡಿದ್ದಾರೆ. ನೀರಾವರಿ ಸಚಿವರೊಂದಿಗೆ ಮಾತನಾಡಿದವರು ಯಾರೂ 5 ಎ ರೈತರಲ್ಲ ಬದಲಾಗಿ ಪ್ರತಾಪ್ ಗೌಡ ಪಾಟೀಲ್ ಬೆಂಬಲಿಗರು. ರೈತರ ಮಧ್ಯೆ ತಂದಿಡುವ ಕೆಲಸವನ್ನ ಮಾಡಲಾಗುತ್ತಿದೆ ಅಂತ ರೈತರು ಆರೋಪಿಸಿದ್ದಾರೆ.

    5 ಎ ಕಾಲುವೆ ಅವೈಜ್ಞಾನಿಕವಾಗಿರುವುದರಿಂದ ನಂದವಾಡಗಿಯಿಂದ 23 ಗ್ರಾಮಗಳಿಗೆ ಅನುಕೂಲವಾಗುವಂತೆ ತೆರೆದ ಕಾಲುವೆ ಮುಖಾಂತರ ಹನಿ ನೀರಾವರಿ ಬದಲು ಹರಿ ನೀರಾವರಿ ಯೋಜನೆ ಜಾರಿ ಮಾಡಲಾಗುವುದು ಅಂತ ಸರ್ಕಾರ ಈಗ ಹೇಳುತ್ತಿದೆ. ಇದು ಸರಿಯಾದ ಕ್ರಮವಲ್ಲ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಾವಿರಾರು ಹೆಕ್ಟೇರ್ ಫಲವತ್ತಾದ ಭೂಮಿ ಇದ್ರೂ ನೀರಿನ ಅಲಭ್ಯತೆಯಿಂದ ರೈತರು ಗುಳೆ ಹೋಗುತ್ತಿದ್ದಾರೆ. ಹೀಗಾಗಿ 12 ವರ್ಷಗಳಿಂದ 5ಎ ಕಾಲುವೆಗಾಗಿ ಹೋರಾಟ ನಡೆದಿದೆ. ಹಲವಾರು ತಾಂತ್ರಿಕ ಕಾರಣಗಳ ನೆಪವೊಡ್ಡಿ ಮಸ್ಕಿ, ಮಾನ್ವಿ, ಸಿರವಾರ ಹಾಗೂ ರಾಯಚೂರು ತಾಲೂಕಿನ 107 ಗ್ರಾಮಗಳನ್ನ ನೀರಿನಿಂದ ವಂಚಿತರನ್ನಾಗಿ ಮಾಡಲಾಗಿದೆ. ಮಸ್ಕಿಯ ಕಾಳಾಪುರದಿಂದ ಶುರುವಾಗಬೇಕಿದ್ದ 5 ಎ ಕಾಲುವೆ ಕಾಮಗಾರಿ ಈವರೆಗೂ ಪ್ರಾರಂಭ ಮಾಡಿಯೇ ಇಲ್ಲ. ಕೂಡಲೇ ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸಬೇಕು ಅಂತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಒತ್ತಾಯಿಸಿದ್ದಾರೆ.

    ಒಟ್ನಲ್ಲಿ, ರೈತರ ಹೋರಾಟಕ್ಕೆ ಸ್ಪಂದಿಸಿ ಅನುಕೂಲ ಮಾಡಿಕೊಡಬೇಕಾದ ಸರ್ಕಾರ ಅನ್ನದಾತರಿಗೆ ಒಳಿತು ಮಾಡುವ ಬದಲು ಸಮಯವ್ಯರ್ಥ ಮಾಡುತ್ತ ಚೆಲ್ಲಾಟವಾಡುತ್ತಿದೆ. ಈ ಮೊದಲು ಚುನಾವಣಾ ಪ್ರಚಾರ ಭಾಷಣದಲ್ಲಿ ಕಾಲುವೆ ನಿರ್ಮಾಣ ಬಗ್ಗೆ ಭರವಸೆ ನೀಡಿದ ಜನಪ್ರತಿನಿಧಿಗಳೇ ಈಗ ವರಸೆ ಬದಲಿಸಿದ್ದಾರೆ. ಹೀಗಾಗಿ ರೈತರು 5 ಎ ಕಾಲುವೆ ಜಾರಿಯಾಗುವವರೆಗೂ ಹೋರಾಟ ಮುಂದುವರೆಸುವುದಾಗಿ ಪಟ್ಟು ಹಿಡಿದಿದ್ದಾರೆ.

  • 5ಎ ಕಾಲುವೆಗಾಗಿ ನಿಲ್ಲದ ರೈತರ ಹೋರಾಟ: ಮಸ್ಕಿ ಬಂದ್ ಯಶಸ್ವಿ

    5ಎ ಕಾಲುವೆಗಾಗಿ ನಿಲ್ಲದ ರೈತರ ಹೋರಾಟ: ಮಸ್ಕಿ ಬಂದ್ ಯಶಸ್ವಿ

    – 30 ಗ್ರಾಮಗಳ ರೈತರಿಂದ 50 ದಿನಗಳ ಸತತ ಹೋರಾಟ
    – ಭರವಸೆ ನೀಡಿದ ಸರ್ಕಾರದಿಂದ ಸ್ಪಂದನೆಯಿಲ್ಲ

    ರಾಯಚೂರು: 5 ಎ ಕಾಲುವೆಗೆ ಒತ್ತಾಯಿಸಿ ರೈತರು ಕರೆ ನೀಡಿದ್ದ ಜಿಲ್ಲೆ ಮಸ್ಕಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 30ಕ್ಕೂ ಅಧಿಕ ಹಳ್ಳಿಗಳ ರೈತರು ಸತತ 50 ದಿನಗಳಿಂದ ಹೋರಾಟ ನಡೆಸುತ್ತಿದ್ದರು ಸರ್ಕಾರ ಕಿವಿಗೊಡದ ಹಿನ್ನೆಲೆ 5 ಎ ಕಾಲುವೆ ಹೋರಾಟ ಸಮಿತಿ ಮಸ್ಕಿ ಬಂದ್‍ಗೆ ಕರೆ ನೀಡಿತ್ತು. ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನ ಮುಚ್ವುವ ಮೂಲಕ ಬಂದ್‍ಗೆ ಬೆಂಬಲ ನೀಡಿದ್ದಾರೆ. ಹೋರಾಟದಲ್ಲಿ 30ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಜನ ಭಾಗವಹಿಸಿ ಹಕ್ಕೊತ್ತಾಯ ಮಾಡಿದರು.

    ಮಹಿಳೆಯರು, ಮಕ್ಕಳು, ವೃದ್ಧರು ಸಹ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಕಾಲುವೆಗಾಗಿ ಒತ್ತಾಯಿಸಿದರು. ಭಿತ್ತಿ ಪತ್ರಗಳನ್ನ ಪ್ರದರ್ಶಿಸಿ ಮಕ್ಕಳು ಗಮನ ಸೆಳೆದರೆ, ಹೋರಾಟಗಾರರೊಂದಿಗೆ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಭಾಗಿಯಾಗಿ ವೃದ್ಧೆ ರೈತರಿಗೆ ಸ್ಪೂರ್ತಿ ತುಂಬಿದಳು. ನಮಗೆ ಕಾಲುವೆ ನಿರ್ಮಿಸಿ ನೀರು ಕೊಡಿ ಎಂದು ಘೋಷಣೆ ಕೂಗಿದಳು. ಲಿಂಗಸಗೂರು -ಸಿಂಧನೂರು ಮಾರ್ಗ ಬಸ್ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈಗಲೂ ಸರ್ಕಾರ ಎಚ್ಚೆತ್ತು ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಎನ್ ಆರ್ ಬಿ ಸಿ 5ಂ ಉಪ ಕಾಲುವೆಯನ್ನ ನಿರ್ಮಾಣ ಮಾಡಿ ನೀರು ಕೊಡಲು ಒತ್ತಾಯಿಸಿ ನಡೆದಿರುವ ಹೋರಾಟಕ್ಕೆ ಈವರೆಗೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ
    ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಈಗಾಗಲೇ ನಾಲ್ಕು ಗ್ರಾಮಗಳ ಗ್ರಾಮಸ್ಥರು ಚುನಾವಣೆಯನ್ನೇ ಬಹಿಷ್ಕಾರ ಮಾಡಿದ್ದರು. ಮುಂಬರುವ ಮಸ್ಕಿ ವಿಧಾನಸಭಾ ಉಪಚುನಾವಣೆ ಸೇರಿ ಎಲ್ಲಾ ಚುನಾವಣೆ ಮತದಾನವನ್ನ ಬಹಿಷ್ಕರಿಸುವುದಾಗಿ ರೈತರು ಹೇಳಿದ್ದಾರೆ.