Tag: 4G

  • 4ಜಿ ಡೌನ್‌ಲೋಡ್‌ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಮೊದಲನೇ ಸ್ಥಾನ

    4ಜಿ ಡೌನ್‌ಲೋಡ್‌ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಮೊದಲನೇ ಸ್ಥಾನ

    ನವದೆಹಲಿ: ರಿಲಯನ್ಸ್ ಜಿಯೋ ಸೆಕೆಂಡಿಗೆ 20.8 ಮೆಗಾಬಿಟ್‌(ಎಂಬಿಪಿಎಸ್‌) ಡೌನ್‌ಲೋಡ್ ವೇಗದ ಸೇವೆಯನ್ನು ನೀಡುವ ಮೂಲಕ 4ಜಿ ಡೌನ್‌ಲೋಡ್‌ ವೇಗದ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಜಿಯೋ ತನ್ನ ಹತ್ತಿರದ ಪ್ರತಿಸ್ಪರ್ಧಿ ವೊಡಾಫೋನ್ ಗಿಂತಲೂ ಡಬಲ್ ಡೌನ್‌ಲೋಡ್ ವೇಗವನ್ನು ಹೊಂದಿದೆ.

    ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲಾರ್ ತಮ್ಮ ಮೊಬೈಲ್ ವ್ಯವಹಾರವನ್ನು ವೊಡಾಫೋನ್ ಐಡಿಯಾ ಲಿಮಿಟೆಡ್ ಆಗಿ ವಿಲೀನಗೊಳಿಸಿದರೂ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಇನ್ನೂ ಎರಡೂ ಘಟಕಗಳ ಪ್ರತ್ಯೇಕ ವೇಗ ಡೇಟಾವನ್ನು ಬಿಡುಗಡೆ ಮಾಡುತ್ತಿದೆ.

    ಡಿಸೆಂಬರ್ 10 ರಂದು ಟ್ರಾಯ್‌ ಬಿಡುಗಡೆಗೊಳಿಸಿದ ಮಾಹಿತಿಯ ಪ್ರಕಾರ ನವೆಂಬರ್‌ನಲ್ಲಿ ವೊಡಾಫೋನ್ 9.8 ಎಂಬಿಪಿಎಸ್ ಡೌನ್‌ಲೋಡ್ ವೇಗವನ್ನುದಾಖಲಿಸಿದೆ. ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಕ್ರಮವಾಗಿ 8.8 ಎಂಬಿಪಿಎಸ್ ಮತ್ತು 8 ಎಂಬಿಪಿಎಸ್ ಡೌನ್‌ಲೋಡ್ ವೇಗವನ್ನು ಹೊಂದಿದೆ.

    ಅಪ್‌ಲೋಡ್ ವಿಭಾಗದಲ್ಲಿ ವೊಡಾಫೋನ್ 6.5 ಎಂಬಿಪಿಎಸ್ ವೇಗದೊಂದಿಗೆ ಅಗ್ರಸ್ಥಾನದಲ್ಲಿದೆ. ಐಡಿಯಾ ನಂತರ 5.8 ಎಂಬಿಪಿಎಸ್, ಏರ್‌ಟೆಲ್ 4 ಎಂಬಿಪಿಎಸ್ ಮತ್ತು ಜಿಯೋ 3.7 ಎಂಬಿಪಿಎಸ್ ಅಪ್‌ಲೋಡ್ ವೇಗವನ್ನು ಹೊಂದಿದೆ.

    ನವೆಂಬರ್‌ನಲ್ಲಿ 6.5 ಎಂಬಿಪಿಎಸ್ ಅಪ್‌ಲೋಡ್ ವೇಗದ ಸೇವೆಯನ್ನು ನೀಡಿದ ವೊಡಾಫೋನ್ ಈ ವಿಭಾಗದಲ್ಲಿ ಇತರರಿಗಿಂತ ಮುಂದಿದೆ ಎಂದು ಟೆಲಿಕಾಂ ನಿಯಂತ್ರಕ ಟ್ರಾಯ್ ತನ್ನ ವರದಿಯಲ್ಲಿ ತಿಳಿಸಿದೆ.

    ಡೌನ್‌ಲೋಡ್ ವೇಗವು ಗ್ರಾಹಕರಿಗೆ ವಿಡಿಯೋ ನೋಡಲು, ಆನ್‌ಲೈನ್ ಗೇಮ್ ಆಡಲು ಮತ್ತು ವಿಡಿಯೋ ಮತ್ತು ಆಡಿಯೋ ಗಳನ್ನು ಡೌನ್‌ಲೋಡ್‌ ಮಾಡಲು ಸಹಾಯ ಮಾಡುತ್ತದೆ. ಅಪ್‌ಲೋಡ್ ವೇಗವು ಚಿತ್ರಗಳು, ವಿಡಿಯೋ ಇತ್ಯಾದಿಗಳನ್ನು ಕಳುಹಿಸಲು ಅಥವಾ ಹಂಚಿಕೊಳ್ಳಲು ಸಹಾಯ ಮಾಡುತ್ತದೆ.

    ನೈಜ ಸಮಯದ ಆಧಾರದ ಮೇಲೆ ತನ್ನ ಮೈಸ್ಪೀಡ್ ಅಪ್ಲಿಕೇಶನ್‌ನ ಸಹಾಯದಿಂದ ಭಾರತದಾದ್ಯಂತ ಸಂಗ್ರಹಿಸುವ ಡೇಟಾದ ಆಧಾರದ ಮೇಲೆ ಸರಾಸರಿ ವೇಗವನ್ನು ಟ್ರಾಯ್ ಲೆಕ್ಕಾಚಾರ ಮಾಡುತ್ತದೆ.

  • ಕೇಂದ್ರ ಸರ್ಕಾರದಿಂದಲೇ ಚೀನಾ ವಸ್ತುಗಳ ಬಹಿಷ್ಕಾರ ಶುರು

    ಕೇಂದ್ರ ಸರ್ಕಾರದಿಂದಲೇ ಚೀನಾ ವಸ್ತುಗಳ ಬಹಿಷ್ಕಾರ ಶುರು

    – 4ಜಿ ಸೇವೆಗೆ ಚೀನಾದ ಉಪಕರಣ ಬಳಸದಂತೆ ಸೂಚನೆ

    ನವದೆಹಲಿ: 4ಜಿ ಸೇವೆಯ ನವೀಕರಣದಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‍ಎನ್‍ಎಲ್)ಗೆ ಸೂಚನೆ ನೀಡಿದೆ. ಈ ಹಿನ್ನೆಲೆ ಟೆಲಿಕಾಮ್ ಇಲಾಖೆ “ಚೀನಾ ವಸ್ತು ಬಹಿಷ್ಕಾರ”ದ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ.

    ಟೆಲಿಕಾಂ ಕಂಪೆನಿಗಳಾದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ರಸ್ತುತ ಚೀನಾ ಮೂಲದ ಹುವಾವೇ ಕಂಪನಿಯೊಂದಿಗೆ ಕೆಲಸ ಮಾಡುತ್ತಿವೆ. ಇತ್ತ ಬಿಎಸ್‍ಎನ್‍ಎಲ್‍ನೊಂದಿಗೆ ಝಡ್‍ಟಿಇ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಚೀನಾದ ಸಂಸ್ಥೆಗಳು ತಯಾರಿಸುವ ಸಲಕರಣೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡವಂತೆ ಭಾರತದಲ್ಲಿರುವ ಖಾಸಗಿ ಕಂಪನಿಗಳಿಗೆ ಸಲಹೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

    ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷನೆ ಹಿನ್ನೆಲೆಯಲ್ಲಿ ಕೇಂದ್ರ ಮಧ್ಯೆ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ. ಭಾರತ-ಚೀನಾದ ಸೈನಿಕರ ನಡುವೆ ಸೋಮವಾರ ರಾತ್ರಿ ಲಡಾಖ್‍ನ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಮ್ಮ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ. ಸುಮಾರು ಐದು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದೊಂದಿಗಿನ ನಿಯಂತ್ರಣ ರೇಖೆಯಲ್ಲಿ ಸಾವುನೋವುಗಳು ವರದಿಯಾಗಿವೆ.

    ಚೀನಾದ ಆಕ್ರಮಣಕಾರಿ ನೀತಿಯ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಚೀನಾದ ವಸ್ತುಗಳನ್ನು ಬಳಸದಂತೆ ಒತ್ತಾಯಿಸಲಾಗುತ್ತಿದೆ. ಕರ್ನಾಟಕ ಅಷ್ಟೇ ಅಲ್ಲದೆ ದೇಶದ ವಿವಿಧ ಮೂಲೆಯಲ್ಲಿ ಚೀನಾ ವಸ್ತು, ಸೇವೆಗಳ ಬಳಕೆ ನಿಷೇದಕ್ಕೆ ಕೂಗು ಕೇಳಿ ಬಂದಿದೆ.

  • 2020ರ ವೇಳೆಗೆ ಭಾರತದಲ್ಲಿ ಬರುತ್ತೆ 5ಜಿ: ನೆಟ್ ಸ್ಪೀಡ್ ಎಷ್ಟು ಗೊತ್ತಾ?

    2020ರ ವೇಳೆಗೆ ಭಾರತದಲ್ಲಿ ಬರುತ್ತೆ 5ಜಿ: ನೆಟ್ ಸ್ಪೀಡ್ ಎಷ್ಟು ಗೊತ್ತಾ?

    ನವದೆಹಲಿ: 2020ರ ವೇಳೆಗೆ ದೇಶದಲ್ಲಿ 5ಜಿ ತಂತ್ರಜ್ಞಾನ ಸೇವೆ ಆರಂಭಗೊಳ್ಳಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಂಗಳವಾರ ಸಮಿತಿ ರಚಿಸಿದೆ.

    3ಜಿ ಮತ್ತು 4ಜಿ ಮಾನದಂಡವನ್ನು ನಿರ್ಧರಿಸುವ ಸಂದರ್ಭದಲ್ಲಿ ನಾವು ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದೇವು. ಆದರೆ ವಿಶ್ವದಲ್ಲಿ 5ಜಿ ಮಾನದಂಡ ಸಿದ್ಧತೆ ಮಾಡುವ ಸಂದರ್ಭದಲ್ಲಿ ಭಾರತವೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತದೆ. ಯಾವುದೇ ಕಾರಣಕ್ಕೂ ಈ ಅವಕಾಶವನ್ನು ಕೈತಪ್ಪಲು ಬಿಡುವುದಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ.

    500 ಕೋಟಿ ಮೂಲನಿಧಿಯೊಂದಿಗೆ 5ಜಿ ಸಂಬಂಧಿತ ಸಂಶೋಧನೆ ಹಾಗೂ ಅಭಿವೃದ್ಧಿ ನಡೆಯಲಿದ್ದು, ಈ ಸಮಿತಿಯಲ್ಲಿ ಟೆಲಿಕಾಂ, ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಇರಲಿದ್ದಾರೆ.

    5ಜಿ ಬಂದರೆ ನಗರ ಪ್ರದೇಶದಲ್ಲಿ 10 ಗಿಗಾ ಬೈಟ್ಸ್ ಪರ್ ಸೆಕೆಂಡ್ ಬ್ರಾಡ್‍ಬ್ಯಾಂಡ್ ಸಂಪರ್ಕ ಸಿಕ್ಕಿದರೆ, ಗ್ರಾಮಾಂತರ ಪ್ರದೇಶದಲ್ಲಿ 1 ಗಿಗಾ ಬೈಟ್ಸ್ ಪರ್ ಸೆಕೆಂಡ್ ಸಿಗಲಿದೆ.

    ಕೆಲ ದಿನಗಳ ಹಿಂದೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) 5ಜಿ ಸೇವೆಗೆ 3300- 3400 Mhz ಮತ್ತು 3400- 3600 Mhz ಬ್ಯಾಂಡ್ ಬಳಸಲು ಸಮಯ ನಿಗದಿ ಪಡಿಸಿ ಎಂದು ಟೆಲಿಕಾಂ ಕಂಪೆನಿಗಳಿಗೆ ಹೇಳಿತ್ತು.  ಕೇಂದ್ರ ಸರ್ಕಾರ 5ಜಿ ಸೇವೆ ಆರಂಭಿಸಲು ಉತ್ಸುಕವಾಗಿದ್ದರೂ ಭಾರತೀಯ ಟೆಲಿಕಾಂ ಕಂಪೆನಿ ಹಣಕಾಸು ಸಮಸ್ಯೆ ಎದುರಿಸುತ್ತಿರುವ ಕಾರಣ 2021-2022ರ ವೇಳೆಗೆ 5ಜಿ ಭಾರತದಲ್ಲಿ ಆರಂಭವಾಗಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಇಂಟರ್‍ನ್ಯಾಷನಲ್ ಟೆಲಿಕಮ್ಯೂನಿಕೇಷನ್ ಯುನಿಯನ್(ಐಟಿಯು) 5ಜಿ ಮಾನದಂಡವನ್ನು ಸಿದ್ಧಪಡಿಸಲಿದ್ದು, ಈಗಾಗಲೇ ಪ್ರಸ್ತಾವನೆ ಸಿದ್ದಪಡಿಸಿದೆ. ಫೆಬ್ರವರಿಯಲ್ಲಿ ಪ್ರಸ್ತಾಪಗೊಂಡ ಪ್ರಕಾರ 5ಜಿ ಡೌನ್‍ಲಿಂಕ್ ಸ್ಪೀಡ್ 20 ಗಿಗಾಬೈಟ್ಸ್ ಪರ್ ಸೆಕೆಂಡ್ ಇರಬೇಕೆಂದು ಹೇಳಿದೆ.