Tag: 4ಜಿ

  • 4ಜಿ ಡೌನ್‌ಲೋಡ್‌ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಮೊದಲನೇ ಸ್ಥಾನ

    4ಜಿ ಡೌನ್‌ಲೋಡ್‌ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಮೊದಲನೇ ಸ್ಥಾನ

    ನವದೆಹಲಿ: ರಿಲಯನ್ಸ್ ಜಿಯೋ ಸೆಕೆಂಡಿಗೆ 20.8 ಮೆಗಾಬಿಟ್‌(ಎಂಬಿಪಿಎಸ್‌) ಡೌನ್‌ಲೋಡ್ ವೇಗದ ಸೇವೆಯನ್ನು ನೀಡುವ ಮೂಲಕ 4ಜಿ ಡೌನ್‌ಲೋಡ್‌ ವೇಗದ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಜಿಯೋ ತನ್ನ ಹತ್ತಿರದ ಪ್ರತಿಸ್ಪರ್ಧಿ ವೊಡಾಫೋನ್ ಗಿಂತಲೂ ಡಬಲ್ ಡೌನ್‌ಲೋಡ್ ವೇಗವನ್ನು ಹೊಂದಿದೆ.

    ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲಾರ್ ತಮ್ಮ ಮೊಬೈಲ್ ವ್ಯವಹಾರವನ್ನು ವೊಡಾಫೋನ್ ಐಡಿಯಾ ಲಿಮಿಟೆಡ್ ಆಗಿ ವಿಲೀನಗೊಳಿಸಿದರೂ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಇನ್ನೂ ಎರಡೂ ಘಟಕಗಳ ಪ್ರತ್ಯೇಕ ವೇಗ ಡೇಟಾವನ್ನು ಬಿಡುಗಡೆ ಮಾಡುತ್ತಿದೆ.

    ಡಿಸೆಂಬರ್ 10 ರಂದು ಟ್ರಾಯ್‌ ಬಿಡುಗಡೆಗೊಳಿಸಿದ ಮಾಹಿತಿಯ ಪ್ರಕಾರ ನವೆಂಬರ್‌ನಲ್ಲಿ ವೊಡಾಫೋನ್ 9.8 ಎಂಬಿಪಿಎಸ್ ಡೌನ್‌ಲೋಡ್ ವೇಗವನ್ನುದಾಖಲಿಸಿದೆ. ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಕ್ರಮವಾಗಿ 8.8 ಎಂಬಿಪಿಎಸ್ ಮತ್ತು 8 ಎಂಬಿಪಿಎಸ್ ಡೌನ್‌ಲೋಡ್ ವೇಗವನ್ನು ಹೊಂದಿದೆ.

    ಅಪ್‌ಲೋಡ್ ವಿಭಾಗದಲ್ಲಿ ವೊಡಾಫೋನ್ 6.5 ಎಂಬಿಪಿಎಸ್ ವೇಗದೊಂದಿಗೆ ಅಗ್ರಸ್ಥಾನದಲ್ಲಿದೆ. ಐಡಿಯಾ ನಂತರ 5.8 ಎಂಬಿಪಿಎಸ್, ಏರ್‌ಟೆಲ್ 4 ಎಂಬಿಪಿಎಸ್ ಮತ್ತು ಜಿಯೋ 3.7 ಎಂಬಿಪಿಎಸ್ ಅಪ್‌ಲೋಡ್ ವೇಗವನ್ನು ಹೊಂದಿದೆ.

    ನವೆಂಬರ್‌ನಲ್ಲಿ 6.5 ಎಂಬಿಪಿಎಸ್ ಅಪ್‌ಲೋಡ್ ವೇಗದ ಸೇವೆಯನ್ನು ನೀಡಿದ ವೊಡಾಫೋನ್ ಈ ವಿಭಾಗದಲ್ಲಿ ಇತರರಿಗಿಂತ ಮುಂದಿದೆ ಎಂದು ಟೆಲಿಕಾಂ ನಿಯಂತ್ರಕ ಟ್ರಾಯ್ ತನ್ನ ವರದಿಯಲ್ಲಿ ತಿಳಿಸಿದೆ.

    ಡೌನ್‌ಲೋಡ್ ವೇಗವು ಗ್ರಾಹಕರಿಗೆ ವಿಡಿಯೋ ನೋಡಲು, ಆನ್‌ಲೈನ್ ಗೇಮ್ ಆಡಲು ಮತ್ತು ವಿಡಿಯೋ ಮತ್ತು ಆಡಿಯೋ ಗಳನ್ನು ಡೌನ್‌ಲೋಡ್‌ ಮಾಡಲು ಸಹಾಯ ಮಾಡುತ್ತದೆ. ಅಪ್‌ಲೋಡ್ ವೇಗವು ಚಿತ್ರಗಳು, ವಿಡಿಯೋ ಇತ್ಯಾದಿಗಳನ್ನು ಕಳುಹಿಸಲು ಅಥವಾ ಹಂಚಿಕೊಳ್ಳಲು ಸಹಾಯ ಮಾಡುತ್ತದೆ.

    ನೈಜ ಸಮಯದ ಆಧಾರದ ಮೇಲೆ ತನ್ನ ಮೈಸ್ಪೀಡ್ ಅಪ್ಲಿಕೇಶನ್‌ನ ಸಹಾಯದಿಂದ ಭಾರತದಾದ್ಯಂತ ಸಂಗ್ರಹಿಸುವ ಡೇಟಾದ ಆಧಾರದ ಮೇಲೆ ಸರಾಸರಿ ವೇಗವನ್ನು ಟ್ರಾಯ್ ಲೆಕ್ಕಾಚಾರ ಮಾಡುತ್ತದೆ.

  • ದೇಶದ ಮೊದಲ VOLTE ಅಂತರಾಷ್ಟ್ರೀಯ ರೋಮಿಂಗ್ ಪ್ರಾರಂಭಿಸಿದ ಜಿಯೋ

    ದೇಶದ ಮೊದಲ VOLTE ಅಂತರಾಷ್ಟ್ರೀಯ ರೋಮಿಂಗ್ ಪ್ರಾರಂಭಿಸಿದ ಜಿಯೋ

    ಮುಂಬೈ: ಭಾರತ ಮತ್ತು ಜಪಾನ್ ನಡುವೆ ವಾಯ್ಸ್ ಓವರ್ ಎಲ್‍ಟಿಇ(ವಿಓಎಲ್‍ಟಿಇ) ಆಧರಿತ ಒಳಬರುವ (ಇನ್‍ಬೌಂಡ್) ಅಂತರಾಷ್ಟ್ರೀಯ ರೋಮಿಂಗ್ ಸೇವೆಯನ್ನು ರಿಲಯನ್ಸ್ ಜಿಯೋ ಆರಂಭಿಸಿದೆ.

    ಈ ಸೇವೆಯನ್ನು ಆರಂಭಿಸುವ ಮೂಲಕ ಭಾರತದಲ್ಲಿ ವಿಓಎಲ್‍ಟಿಇ ಆಧರಿತ ಅಂತರಾಷ್ಟ್ರೀಯ ರೋಮಿಂಗ್ ಸೇವೆಗಳನ್ನು ಒದಗಿಸಿದ ಮೊದಲ 4ಜಿ ಮೊಬೈಲ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಜಿಯೋ ಪಾತ್ರವಾಗಿದೆ. ಈ ಸೇವೆಯನ್ನು ಬಳಸುವ ಅಂತರಾಷ್ಟ್ರೀಯ ಪ್ರಯಾಣಿಕರು ಎಚ್‍ಡಿ ವಾಯ್ಸ್ ಹಾಗೂ ಎಲ್‍ಟಿಇ ಅತಿವೇಗದ ಡೇಟಾ ಸಂಪರ್ಕವನ್ನು ಪಡೆಯಲಿದ್ದಾರೆ.

    ಜಿಯೋನ ಸಂಪೂರ್ಣ-ಐಪಿ ಮತ್ತು 4ಜಿ ಜಾಲದಲ್ಲಿ ಅತಿವೇಗದ ಡೇಟಾ ಹಾಗೂ ವಾಯ್ಸ್ ಸೇವೆಗಳನ್ನು ಅಂತರಾಷ್ಟ್ರೀಯ ಪ್ರಯಾಣಿಕರೂ ಪಡೆಯಲು ಜಿಯೋ ವಿಓಎಲ್‍ಟಿಇ ಕಾಲಿಂಗ್ ಹಾಗೂ ಎಲ್‍ಟಿಇ ಅಂತಾರಾಷ್ಟ್ರೀಯ ರೋಮಿಂಗ್ ಸೇವೆ ನೆರವಾಗಲಿದ್ದು, ಇದನ್ನು ಬಳಸಲಿರುವ ಮೊದಲ ಅಂತರಾಷ್ಟ್ರೀಯ ಮೊಬೈಲ್ ಸೇವಾ ಸಂಸ್ಥೆ ಜಪಾನಿನ ಕೆಡಿಡಿಐ ಕಾರ್ಪೊರೇಶನ್ ಆಗಲಿದೆ.

    “ಇಡೀ ಭಾರತ ಮತ್ತು ಹಾಗೂ ಜಪಾನಿಗೆ ಭೇಟಿ ನೀಡುವವರಿಗೆ ಅತ್ಯುತ್ತಮ ಡೇಟಾ ಮತ್ತು ವಾಯ್ಸ್ ಅನುಭವವನ್ನು ನೀಡುವುದು ರಿಲಯನ್ಸ್ ಜಿಯೋ ಗುರಿ. ಭಾರತದ ಮೊದಲ ಅಂತರಾಷ್ಟ್ರೀಯ ವಿಓಎಲ್‍ಟಿಇ ಹಾಗೂ ಎಚ್‍ಡಿ ರೋಮಿಂಗ್ ಬಳಕೆದಾರರಾಗಿ ಕೆಡಿಡಿಐ ಗ್ರಾಹಕರನ್ನು ನಾವು ಜಿಯೋಗೆ ಸ್ವಾಗತಿಸುತ್ತೇವೆ,” ಎಂದು ರಿಲಯನ್ಸ್ ಜಿಯೋದ ಮಾರ್ಕ್ ಯಾರ್ಕೋಸ್ಕಿ ಹೇಳಿದರು.

    ಸೆಪ್ಟೆಂಬರ್ 2018ರಲ್ಲಿ 20.6 ಎಂಬಿಪಿಎಸ್ ಡೌನ್‍ಲೋಡ್ ವೇಗದೊಡನೆ, ಟ್ರಾಯ್‍ನ ಮೈಸ್ಪೀಡ್ ಅಪ್ಲಿಕೇಶನ್‍ನಿಂದ ಕಳೆದ ಇಪ್ಪತ್ತು ತಿಂಗಳ ಅವಧಿಯಲ್ಲಿ ಸತತವಾಗಿ ದೇಶದ ಅತ್ಯಂತ ವೇಗದ ಜಾಲವೆಂಬ ಹೆಗ್ಗಳಿಕೆಯನ್ನು ಜಿಯೋ ಪಡೆದುಕೊಂಡಿದೆ. ದೇಶದಲ್ಲೇ ಅತ್ಯಂತ ದೊಡ್ಡದಾದ ಎಲ್‍ಟಿಇ ವ್ಯಾಪ್ತಿ ಹೊಂದಿರುವ ಹೆಗ್ಗಳಿಕೆಯನ್ನೂ ಜಿಯೋ ಹೊಂದಿದೆ.

    ಪ್ರಾರಂಭವಾದ ಎರಡೇ ವರ್ಷಗಳಲ್ಲಿ 25.2 ಕೋಟಿಗೂ ಹೆಚ್ಚಿನ ಗ್ರಾಹಕರನ್ನು ಪಡೆದು, ವಿಶ್ವದ 9ನೇ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಜಿಯೋ ಬೆಳೆದಿದೆ. ಕಡಿಮೆ ಬೆಲೆಯಲ್ಲಿ ಡೇಟಾ ಪ್ಯಾಕ್ ಗಳನ್ನು ಘೋಷಿಸುವುದರೊಂದಿಗೆ ಭಾರತವನ್ನು ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ಬಳಕೆದಾರ ರಾಷ್ಟ್ರವಾಗಿ ಜಿಯೋ ಈಗ ಬದಲಿಸಿದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಡಿಸೆಂಬರ್ 1ರಿಂದ ರಿಲಯನ್ಸ್ 2ಜಿ ಕರೆ ಸ್ಥಗಿತ

    ಡಿಸೆಂಬರ್ 1ರಿಂದ ರಿಲಯನ್ಸ್ 2ಜಿ ಕರೆ ಸ್ಥಗಿತ

    ನವದೆಹಲಿ: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯೂನಿಕೇಶನ್ 2ಜಿ ಕರೆ ಸೇವೆಯನ್ನು ಡಿಸೆಂಬರ್ 1ರಿಂದ ಸ್ಥಗಿತಗೊಳಿಸಲು ನಿರ್ಧರಿಸಿದೆ.

    ಇನ್ನು ಮುಂದೆ ಕೇವಲ 4ಜಿ ಸೇವೆಯನ್ನು ಮಾತ್ರ ನೀಡಲಾಗುವುದು. 4ಜಿ ಸೇವೆ ಬಳಸುತ್ತಿರುವ ಗ್ರಾಹಕರು ರಿಲಯನ್ಸ್ ಸೇವೆಯನ್ನು ಮುಂದುವರಿಸಬಹುದು ಎಂದು ಹೇಳಿದೆ. 2ಜಿ ಸೇವೆಯನ್ನು ಇನ್ನು ಮುಂದೆ ನೀಡಲು ಸಾಧ್ಯವಿಲ್ಲ. 2ಜಿ ಸೇವೆ ಬೇಕಿದ್ದಲ್ಲಿ ಬೇರೆ ಟೆಲಿಕಾಂ ಕಂಪೆನಿಗೆ ಹೋಗಬಹುದು ಎಂದು ಹೇಳಿದೆ.

    ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇತರ ಕಂಪೆನಿಗಳಿಗೆ ರಿಲಯನ್ಸ್ ಗ್ರಾಹಕರು ನಂಬರ್ ಪೋರ್ಟಿಂಗ್ ಅರ್ಜಿ ಹಾಕಿದರೆ ಪೋರ್ಟಿಂಗ್ ಮನವಿಯನ್ನು ಸ್ವೀಕರಿಸುವಂತೆ ಸೂಚಿಸಿದೆ.

    2ಜಿ ಮತ್ತು 4ಜಿ ಸೇವೆಗಳನ್ನು ಒದಗಿಸುತ್ತಿರುವ ರಿಲಯನ್ಸ್ 46 ಸಾವಿರ ಕೋಟಿ ರೂ. ನಷ್ಟದಲ್ಲಿದೆ. ಇತ್ತೀಚೆಗೆ ಏರ್‍ಸೆಲ್ ಕಂಪೆನಿಯನ್ನು ಖರೀದಿಸಲು ರಿಲಯನ್ಸ್ ಪ್ರಯತ್ನ ನಡೆಸಿತ್ತು. ಆದರೆ ಅದರಲ್ಲಿ ಯಶಸ್ವಿಯಾಗಿರಲಿಲ್ಲ.

    ಆಂಧ್ರಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ಉತ್ತಪ್ರದೇಶ ಪೂರ್ವ ಮತ್ತು ಪಶ್ಚಿಮ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ 2ಜಿ ಮತ್ತು 4ಜಿ ಸೇವೆ ಯನ್ನು ರಿಲಯನ್ಸ್ ನೀಡುತ್ತಿದೆ.

  • 2020ರ ವೇಳೆಗೆ ಭಾರತದಲ್ಲಿ ಬರುತ್ತೆ 5ಜಿ: ನೆಟ್ ಸ್ಪೀಡ್ ಎಷ್ಟು ಗೊತ್ತಾ?

    2020ರ ವೇಳೆಗೆ ಭಾರತದಲ್ಲಿ ಬರುತ್ತೆ 5ಜಿ: ನೆಟ್ ಸ್ಪೀಡ್ ಎಷ್ಟು ಗೊತ್ತಾ?

    ನವದೆಹಲಿ: 2020ರ ವೇಳೆಗೆ ದೇಶದಲ್ಲಿ 5ಜಿ ತಂತ್ರಜ್ಞಾನ ಸೇವೆ ಆರಂಭಗೊಳ್ಳಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಂಗಳವಾರ ಸಮಿತಿ ರಚಿಸಿದೆ.

    3ಜಿ ಮತ್ತು 4ಜಿ ಮಾನದಂಡವನ್ನು ನಿರ್ಧರಿಸುವ ಸಂದರ್ಭದಲ್ಲಿ ನಾವು ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದೇವು. ಆದರೆ ವಿಶ್ವದಲ್ಲಿ 5ಜಿ ಮಾನದಂಡ ಸಿದ್ಧತೆ ಮಾಡುವ ಸಂದರ್ಭದಲ್ಲಿ ಭಾರತವೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತದೆ. ಯಾವುದೇ ಕಾರಣಕ್ಕೂ ಈ ಅವಕಾಶವನ್ನು ಕೈತಪ್ಪಲು ಬಿಡುವುದಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ.

    500 ಕೋಟಿ ಮೂಲನಿಧಿಯೊಂದಿಗೆ 5ಜಿ ಸಂಬಂಧಿತ ಸಂಶೋಧನೆ ಹಾಗೂ ಅಭಿವೃದ್ಧಿ ನಡೆಯಲಿದ್ದು, ಈ ಸಮಿತಿಯಲ್ಲಿ ಟೆಲಿಕಾಂ, ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಇರಲಿದ್ದಾರೆ.

    5ಜಿ ಬಂದರೆ ನಗರ ಪ್ರದೇಶದಲ್ಲಿ 10 ಗಿಗಾ ಬೈಟ್ಸ್ ಪರ್ ಸೆಕೆಂಡ್ ಬ್ರಾಡ್‍ಬ್ಯಾಂಡ್ ಸಂಪರ್ಕ ಸಿಕ್ಕಿದರೆ, ಗ್ರಾಮಾಂತರ ಪ್ರದೇಶದಲ್ಲಿ 1 ಗಿಗಾ ಬೈಟ್ಸ್ ಪರ್ ಸೆಕೆಂಡ್ ಸಿಗಲಿದೆ.

    ಕೆಲ ದಿನಗಳ ಹಿಂದೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) 5ಜಿ ಸೇವೆಗೆ 3300- 3400 Mhz ಮತ್ತು 3400- 3600 Mhz ಬ್ಯಾಂಡ್ ಬಳಸಲು ಸಮಯ ನಿಗದಿ ಪಡಿಸಿ ಎಂದು ಟೆಲಿಕಾಂ ಕಂಪೆನಿಗಳಿಗೆ ಹೇಳಿತ್ತು.  ಕೇಂದ್ರ ಸರ್ಕಾರ 5ಜಿ ಸೇವೆ ಆರಂಭಿಸಲು ಉತ್ಸುಕವಾಗಿದ್ದರೂ ಭಾರತೀಯ ಟೆಲಿಕಾಂ ಕಂಪೆನಿ ಹಣಕಾಸು ಸಮಸ್ಯೆ ಎದುರಿಸುತ್ತಿರುವ ಕಾರಣ 2021-2022ರ ವೇಳೆಗೆ 5ಜಿ ಭಾರತದಲ್ಲಿ ಆರಂಭವಾಗಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಇಂಟರ್‍ನ್ಯಾಷನಲ್ ಟೆಲಿಕಮ್ಯೂನಿಕೇಷನ್ ಯುನಿಯನ್(ಐಟಿಯು) 5ಜಿ ಮಾನದಂಡವನ್ನು ಸಿದ್ಧಪಡಿಸಲಿದ್ದು, ಈಗಾಗಲೇ ಪ್ರಸ್ತಾವನೆ ಸಿದ್ದಪಡಿಸಿದೆ. ಫೆಬ್ರವರಿಯಲ್ಲಿ ಪ್ರಸ್ತಾಪಗೊಂಡ ಪ್ರಕಾರ 5ಜಿ ಡೌನ್‍ಲಿಂಕ್ ಸ್ಪೀಡ್ 20 ಗಿಗಾಬೈಟ್ಸ್ ಪರ್ ಸೆಕೆಂಡ್ ಇರಬೇಕೆಂದು ಹೇಳಿದೆ.