Tag: 3rd World War

  • ಅಮೆರಿಕಕ್ಕೆ ಕೃತಜ್ಞತೆ ಸಲ್ಲಿಸದ ದಿನವೇ ಇಲ್ಲ – ಟ್ರಂಪ್‌ ಜೊತೆ ವಾಗ್ವಾದದ ಬಳಿಕ ಝಲೆನ್ಸ್ಕಿ ವಿಡಿಯೋ ರಿಲೀಸ್‌

    ಅಮೆರಿಕಕ್ಕೆ ಕೃತಜ್ಞತೆ ಸಲ್ಲಿಸದ ದಿನವೇ ಇಲ್ಲ – ಟ್ರಂಪ್‌ ಜೊತೆ ವಾಗ್ವಾದದ ಬಳಿಕ ಝಲೆನ್ಸ್ಕಿ ವಿಡಿಯೋ ರಿಲೀಸ್‌

    ಕೈವ್‌: ಅಮೆರಿಕದ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಜೊತೆಗಿನ ವಾಗ್ವಾದದ ಬಳಿಕ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ವಿಡಿಯೋವೊಂದನ್ನ ಹಂಚಿಕೊಂಡಿದ್ದು, ಅಮೆರಿಕಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

    ಲಂಡನ್‌ನಲ್ಲಿ ಯುಕೆ ಪ್ರಧಾನಿ ಕೀರ್‌ ಸ್ಟಾಮರ್‌ ನೇತೃತ್ವದಲ್ಲಿ ಭಾನುವಾರ ಭದ್ರತಾ ಶೃಂಗಸಭೆ ನಡೆಯಿತು. ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗೆ ಫ್ರಾನ್ಸ್‌ನ ಎಮ್ಯಾನುಯೆಲ್ ಮ್ಯಾಕ್ರನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ 18 ನಾಯಕರು ಪಾಲ್ಗೊಂಡಿದ್ದರು. ಈ ವೇಳೆ ರಷ್ಯಾ, ಉಕ್ರೇನ್‌ ನಡಿವಿನ ಯುದ್ಧ ನಿಲ್ಲಿಸಲು ಕದನ ವಿರಾಮ ಒಪ್ಪಂದಕ್ಕೆ ಸಂಪೂರ್ಣ ಸಹಮತ ಹೊಂದಿರುವುದಾಗಿ ಬ್ರಿಟನ್‌ ಹಾಗೂ ಫ್ರಾನ್ಸ್‌ ದೇಶಗಳು ಹೇಳಿದವು. ಅಲ್ಲದೇ ಇದರ ಬಗ್ಗೆ ಉಕ್ರೇನ್‌ ನಾಯಕರೊಂದಿಗೆ ಮಾತನಾಡುವುದಾಗಿ ಉಭಯ ನಾಯಕರು ಹೇಳಿದ್ದಾರೆ.

    ಲಂಡನ್‌ನಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಕುರಿತಾದ ಪ್ರಮುಖ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಝಲೆನ್ಸ್ಕಿ ವಿಡಿಯೋವೊಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಷ್ಯಾ ವಿರುದ್ಧ ಯುದ್ಧದಲ್ಲಿ ಅಮೆರಿಕ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸದ ದಿನವೇ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭದ್ರತಾ ಖಾತ್ರಿಯಿಲ್ಲದೇ ಕದನ ವಿರಾಮ ಸಾಧ್ಯವಿಲ್ಲ – ಟ್ರಂಪ್‌ಗೆ ಝಲೆನ್ಸ್ಕಿ ಖಡಕ್‌ ಪ್ರತಿಕ್ರಿಯೆ

    ಅಮೆರಿಕದ ಮಹತ್ವವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅವರು ನೀಡಿದ ಬೆಂಬಲಕ್ಕೆ ನಾವು ಕೃತಜ್ಞತೆ ಸಲ್ಲಿಸದ ಒಂದೂ ದಿನವೂ ಇಲ್ಲ. ಅಮೆರಿಕದೊಂದಿಗೆ ಮತ್ತೆ ಒಟ್ಟಾಗಿ ರಾಜತಾಂತ್ರಿಕ ಕೆಲಸ ಮಾಡಲು ಪ್ರಯತ್ನಿಸುತ್ತೇವೆ. ಶಾಂತಿಗಾಗಿ ರಾಜತಾಂತ್ರಿಕತೆ ಇರಲಿದೆ. ನಾವೆಲ್ಲರೂ ಒಟ್ಟಾಗಿ ಇರುವುದಕ್ಕಾಗಿ, ಐರೋಪ್ಯ ಒಕ್ಕೂಟ ಹಾಗೂ ಅಮೆರಿಕದೊಂದಿಗೆ ರಾಜತಾಂತ್ರಿಕತೆ ಇರಲಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಟ್ರಂಪ್-ಝೆಲೆನ್ಸ್ಕಿ ನಡ್ವೆ ಮಾತಿನ ಚಕಮಕಿಗೆ ಬೆಚ್ಚಿಬಿದ್ದ ವಿಶ್ವ – ನಿಮ್ಮಿಂದ 3ನೇ ಮಹಾಯುದ್ಧ ಎಂದ ಯುಎಸ್‌ ಅಧ್ಯಕ್ಷ

    ಝಲೆನ್ಸ್ಕಿ ಸ್ಪಷ್ಟನೆ ನೀಡಿದ್ದೇಕೆ?
    ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ವೊಲೊಡಿಮಿರ್ ಝೆಲೆನ್ಸ್ಕಿ, ಟ್ರಂಪ್‌ ಜೊತೆಗೆ ಮಾತುಕತೆ ನಡೆಸಿದ್ದರು. ಆರಂಭದಲ್ಲಿ ಅಮೆರಿಕ ಮತ್ತು ಉಕ್ರೇನ್‌ ನಡುವೆ ಖನಿಜ ಒಪ್ಪಂದಗಳ ನಡುವೆ ಮಾತುಕತೆ ಸಾಗಿತ್ತು. ಈ ವೇಳೆ ಭದ್ರತಾ ವಿಚಾರಗಳ ಕುರಿತು ಚರ್ಚಿಸಲು ಮುಂದಾದರು, ಆಗ ಟ್ರಂಪ್‌ ನಾನು ಭದ್ರತೆಯ ಬಗ್ಗೆ ಈಗ ಮಾತನಾಡಲು ಬಯಸುವುದಿಲ್ಲ. ಈಗ ಖನಿಜ ಒಪ್ಪಂದಗಳ ಬಗ್ಗೆ ಮಾತನಾಡಲು ಬಯಸುತ್ತೇನೆ ಎಂದರು. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ, ಟ್ರಂಪ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಶ್ವೇತಭವನದಿಂದ ಹೊರಹೋಗುವಂತೆ ಸೂಚಿಸಿದ್ದರು.

    ಇದಕ್ಕೆ ಪ್ರತ್ಯುತ್ತರ ನೀಡಿದ್ದ ಝಲೆನ್ಸ್ಕಿ, ನಾವು ಕದನ ವಿರಾಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ, ಏಕೆಂದರೆ ಅದು ಎಂದಿಗೂ ಪ್ರಯೋಜನಕಾರಿಯಾಗಲಿಲ್ಲ. ಪುಟಿನ್‌ ಅವರು 25 ಬಾರಿ ಕದನ ವಿರಾಮ ಘೋಷಿಸಿ, ಯುದ್ಧ ಮುಂದುವರಿಸಿದ್ದಾರೆ. ಭದ್ರತಾ ಖಾತ್ರಿಯಿಲ್ಲದೇ ಕದನ ವಿರಾಮ ಮುಂದುವರಿಸಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಅಲ್ಲದೇ ಪತ್ರಕರ್ತರ ಎದುರು ಈ ರೀತಿ ಮಾತನಾಡುವುದು ಶೋಭೆಯಲ್ಲ ಎಂದು ಟ್ರಂಪ್‌ಗೆ ಹೇಳಿದ್ದರು. ಈ ವೇಳೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್‌, ಅಮೆರಿಕ ಮಾಡಿರುವ ಸಹಾಯವನ್ನು ಸ್ಮರಿಸಿ ಮಾತನಾಡಬೇಕು ಎಂದು ಬೇಸರ ಹೊರಹಾಕಿದ್ದರು. ಇಂದು ಈ ಬಗ್ಗೆ ಝಲೆನ್ಸ್ಕಿ ಸ್ಪಷ್ಟನೆ ನೀಡಿದ್ದಾರೆ.

  • ಟ್ರಂಪ್-ಝೆಲೆನ್ಸ್ಕಿ ನಡ್ವೆ ಮಾತಿನ ಚಕಮಕಿಗೆ ಬೆಚ್ಚಿಬಿದ್ದ ವಿಶ್ವ – ನಿಮ್ಮಿಂದ 3ನೇ ಮಹಾಯುದ್ಧ ಎಂದ ಯುಎಸ್‌ ಅಧ್ಯಕ್ಷ

    ಟ್ರಂಪ್-ಝೆಲೆನ್ಸ್ಕಿ ನಡ್ವೆ ಮಾತಿನ ಚಕಮಕಿಗೆ ಬೆಚ್ಚಿಬಿದ್ದ ವಿಶ್ವ – ನಿಮ್ಮಿಂದ 3ನೇ ಮಹಾಯುದ್ಧ ಎಂದ ಯುಎಸ್‌ ಅಧ್ಯಕ್ಷ

    – ಭದ್ರತಾ ಖಾತ್ರಿಯಿಲ್ಲದೇ ಕದನವಿರಾಮ ಸಾಧ್ಯವಿಲ್ಲ: ಝೆಲೆನ್ಸ್ಕಿ

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜೊತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ನಡೆಸಿದ ಚರ್ಚೆ ಉದ್ವಿಗ್ನತೆ ಪಡೆದುಕೊಂಡಿದೆ, ಚರ್ಚೆ ವೇಳೆ ನಡೆದ ವಾಗ್ವಾದ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ.

    ಓವಲ್ ಕಚೇರಿಯಲ್ಲಿ ನಾಯರಿಬ್ಬರ ಭೇಟಿ ಸಮಯದಲ್ಲಿ ಈ ವಿದ್ಯಮಾನ ನಡೆದಿದೆ. ಆರಂಭದಲ್ಲಿ ಅಮೆರಿಕ ಮತ್ತು ಉಕ್ರೇನ್‌ ನಡುವೆ ಖನಿಜ ಒಪ್ಪಂದಗಳ ನಡುವೆ ಮಾತುಕತೆ ಸಾಗಿತ್ತು. ಈ ವೇಳೆ ಭದ್ರತಾ ವಿಚಾರಗಳ ಕುರಿತು ಚರ್ಚಿಸಲು ಮುಂದಾದರು, ಆಗ ಟ್ರಂಪ್‌ ನಾನು ಭದ್ರತೆಯ ಬಗ್ಗೆ ಈಗ ಮಾತನಾಡಲು ಬಯಸುವುದಿಲ್ಲ. ಈಗ ಖನಿಜ ಒಪ್ಪಂದಗಳ ಬಗ್ಗೆ ಮಾತನಾಡಲು ಬಯಸುತ್ತೇನೆ ಎಂದರು. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ, ಟ್ರಂಪ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಶ್ವೇತಭವನದಿಂದ ಹೊರಹೋಗುವಂತೆ ಸೂಚಿಸಿದರು.

    ಝೆಲೆನ್ಸ್ಕಿ ಉಕ್ರೇನ್‌ಗೆ ಯುಎಸ್ ಬೆಂಬಲವನ್ನು ಕೋರಿದರು. ಆದರೆ ಈ ಭೇಟಿ ಒಪ್ಪಂದಕ್ಕೆ ಸಹಿ ಹಾಕದೇ ಮತ್ತು ಜಂಟಿ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸುವುದರೊಂದಿಗೆ ಕೊನೆಗೊಂಡಿತು. ಝೆಲೆನ್ಸ್ಕಿ ಅಮೆರಿಕದ ಬೆಂಬಲಕ್ಕೆ ಕೃತಜ್ಞತೆ ತೋರಿಸದಿರುವುದು ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ರಾಜತಾಂತ್ರಿಕ ನಿಲುವನ್ನು ಚರ್ಚಿಸಲು ಪ್ರಯತ್ನಿಸಿದ್ದಕ್ಕೆ ಟ್ರಂಪ್ ಮತ್ತು ವ್ಯಾನ್ಸ್ ತೀವ್ರವಾಗಿ ಟೀಕಿಸಿದರು. ನೀವು ಇದೇ ರೀತಿ ನಡೆದುಕೊಂಡರೆ, ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ನಿಮ್ಮಿಂದ 3ನೇ ಮಹಾಯುದ್ಧ:
    ಝಲೆನ್ಸ್ಕಿ ಭದ್ರತಾ ವಿಚಾರಗಳ ಕುರಿತು ಚರ್ಚಿಸಲು ಮುಂದಾದಾಗ ನೀವು ಲಕ್ಷಾಂತರ ಜನರ ಜೀವಗಳೊಂದಿಗೆ ಆಟವಾಡುತ್ತಿದ್ದೀರಿ, 3ನೇ ಮಹಾಯುದ್ಧದೊಂದಿಗೆ (3rd World War) ಜೂಜಾಡುತ್ತಿದ್ದೀರಿ, ನಿಮ್ಮಿಂದ ಯುದ್ಧ ನಡೆಯಬಹುದು. ನೀವು ಹೀಗೆ ಮಾಡುತ್ತಿರುವುದು ಈ ದೇಶಕ್ಕೆ ತುಂಬಾ ಅಗೌರವವಾಗಿದೆ ಎಂದು ನೇರ ವಾಗ್ದಾಳಿ ನಡೆಸಿದರು.

    ಮುಂದುವರಿದು, ನೀವು ಧೈರ್ಯವಂತರಿರಬಹುದು, ಆದ್ರೂ ಖನಿಜ ಒಪ್ಪಂದಕ್ಕೆ ಸಹಿ ಹಾಕಲೇಬೇಕು. ಇಲ್ಲದಿದ್ರೆ ನಾವು ನಿಮಗೆ ಸಹಾಯ ಮಾಡುವುದಿಲ್ಲ. ನಾವು ಸಹಾಯ ಮಾಡದಿದ್ದರೆ, ನೀವು ಯುದ್ಧ ಮುಂದುವರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ನೀವು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ರು. ಈ ವೇಳೆ ಝಲೆನ್ಸ್ಕಿ.. ಪತ್ರಕರ್ತರ ಎದುರು ನೀವು ಈ ರೀತಿ ಮಾತನಾಡುವುದು ಗೌರವ ತರುವುದಿಲ್ಲ ಎಂದು ಹೇಳಿದಕ್ಕೆ ಕೆಂಡವಾದ ಟ್ರಂಪ್‌ ನಿಮ್ಮ ನಡೆಯಿಂದ 3ನೇ ಮಹಾಯುದ್ಧ ಸಂಭವಿಸಬಹುದು. ಇದು ಇಡೀ ಜಗತ್ತು ಸಮಸ್ಯೆಗೆ ಸಿಲುಕಿಕೊಳ್ಳಬಹುದು ಎಂದು ಘರ್ಜಿಸಿದರು.

    ಈಗಾಗಲೇ ಉಕ್ರೇನ್‌ಗೆ ಫ್ರಾನ್ಸ್‌, ಬ್ರಿಟನ್‌ ಹಾಗೂ ಇತರ ದೇಶಗಳು ಭದ್ರತೆ ಒದಗಿಸುತ್ತಿವೆ ಎಂದು ನನಗೆ ತಿಳಿದಿದೆ. ಆದ್ರೆ ನಾವು ಯುದ್ಧವನ್ನು ಮುಂದುವರಿಸಲು ಸಿದ್ಧರಿಲ್ಲ. ಈ ಸಮಸ್ಯೆಯನ್ನು ಸಮಾಪ್ತಿ ಮಾಡಲು ಎದುರುನೋಡುತ್ತಿದ್ದೇವೆ. ಆದ್ರೆ ನಾವು ಉಕ್ರೇನ್‌ಗೆ ಬೇರೊಂದು ರೀತಿಯಲ್ಲಿ ಭದ್ರತೆ ನೀಡುತ್ತೇವೆ. ನಮ್ಮ ಕಾರ್ಮಿಕರು ಅಲ್ಲಿಯೇ ಇದ್ದು ಖನಿಜ ಸಂಪತ್ತನ್ನು ಹೊರ ತೆಗೆಯುತ್ತಾರೆ. ನಾವು ನಿಮ್ಮ ದೇಶದಲ್ಲಿ ಉತ್ತಮ ಉತ್ಪನ್ನಗಳನ್ನು ತಯಾರಿಸುತ್ತೇವೆ ಎಂದು ಟ್ರಂಪ್‌ ಆರ್ಥಿಕವಾಗಿ ಅಭಿವೃದ್ಧಿಪಡಿಸಿರುವ ಭರವಸೆ ನೀಡಿದರು.

    ಭದ್ರತಾ ಖಾತ್ರಿಯಿಲ್ಲದೇ ಕದನವಿರಾಮ ಸಾಧ್ಯವಿಲ್ಲ:
    ಇದೇ ವೇಳೆ ಪತ್ರಕರ್ತರಿಗೆ ಭದ್ರತೆಯ ಬಗ್ಗೆ ಝಲೆನ್ಸ್ಕಿ ಕೂಡ ಪ್ರತಿಕ್ರಿಯಿಸಿದರು. ನಾವೀಗ ಕದನ ವಿರಾಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ, ಏಕೆಂದರೆ ಅದು ಎಂದಿಗೂ ಪ್ರಯೋಜನಕಾರಿಯಾಗಲಿಲ್ಲ. ಪುಟಿನ್‌ ಅವರು 25 ಬಾರಿ ಕದನ ವಿರಾಮ ಘೋಷಿಸಿ, ಯುದ್ಧ ಮುಂದುವರಿಸಿದ್ದಾರೆ. ಭದ್ರತಾ ಖಾತ್ರಿಯಿಲ್ಲದೇ ಕದನ ವಿರಾಮ ಮುಂದುವರಿಸಲು ಸಾಧ್ಯವಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ ಖಡಾಖಂಡಿತವಾಗಿ ಹೇಳಿದರು.

    ಟ್ರಂಪ್‌ ಈ ಯುದ್ಧ ನಿಲ್ಲಿಸುವ ಉದ್ದೇಶ ಹೊಂದಿರಬಹುದು. ಆದ್ರೆ ಅದಕ್ಕೆ ನಮ್ಮ ಬಳಿಯೂ ಬಲವಾದ ಸೈನ್ಯ ಇರಬೇಕು. ನಾವು ಬಲಿಷ್ಠವಾಗಿದ್ದರೆ ಮಾತ್ರ ಪುಟಿನ್‌ ಸೈನ್ಯವು ನಮಗೆ ಹೆಸರುತ್ತದೆ. ನಮ್ಮ ಸೈನ್ಯವು ಖಾಲಿಯಾಗಿದ್ದರೆ, ಪುಟಿನ್‌ ಸೇನೆ ನಮ್ಮ ಮೇಲೆ ಸವಾರಿ ಮಾಡುತ್ತದೆ. ಆಗ ನಮ್ಮನ್ನೂ ನಾವು ಉಳಿಸಿಕೊಳ್ಳು ಸಾಧ್ಯವಾಗಲ್ಲ ಎಂದು ಝಲೆನ್ಸ್ಕಿ ಕಳವಳ ವ್ಯಕ್ತಪಡಿಸಿದರು.

  • ರಷ್ಯಾ, ಉಕ್ರೇನ್ ಘರ್ಷನೆಯಿಂದ 3ನೇ ವಿಶ್ವ ಯುದ್ಧವಾಗದಂತೆ ತಡೆಯಲು ನಾವು ಶ್ರಮಿಸಬೇಕು: ಜೋ ಬೈಡೆನ್

    ರಷ್ಯಾ, ಉಕ್ರೇನ್ ಘರ್ಷನೆಯಿಂದ 3ನೇ ವಿಶ್ವ ಯುದ್ಧವಾಗದಂತೆ ತಡೆಯಲು ನಾವು ಶ್ರಮಿಸಬೇಕು: ಜೋ ಬೈಡೆನ್

    ನ್ಯೂಯಾರ್ಕ್: ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ ನ್ಯಾಟೋ ಮತ್ತು ರಷ್ಯಾ ನಡುವಿನ ಮೊದಲ ಘರ್ಷಣೆಯು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಹೀಗಾಗಿ ನಾವು ಅದನ್ನು ತಡೆಯಲು ಶ್ರಮಿಸಬೇಕು ಎಂದು ಹೇಳಿದ್ದಾರೆ.

    ನ್ಯಾಟೋ ತನ್ನ ಭೂಪ್ರದೇಶದ ಪ್ರತಿಯೊಂದು ಇಂಚನ್ನು ರಕ್ಷಿಸುತ್ತದೆ. ಆದರೆ ಅದು ಉಕ್ರೇನ್‍ನಲ್ಲಿ ರಷ್ಯಾದ ವಿರುದ್ಧ ಯುದ್ಧ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನ್ಯಾಟೋ ಉಕ್ರೇನ್‍ನಲ್ಲಿ ರಷ್ಯಾದ ವಿರುದ್ಧ ಯುದ್ಧ ಮಾಡುವುದಿಲ್ಲ ಎಂದು ಯುಎಸ್ ಅಧ್ಯಕ್ಷ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಏಕೆಂದರೆ ಅದು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ನಾನು ಸ್ಪಷ್ಟವಾಗಿರಲು ಬಯಸುತ್ತೇನೆ. ನಾವು ನ್ಯಾಟೋದ ಪ್ರತಿಯೊಂದು ಇಂಚನ್ನು ಒಂದು ಏಕೀಕೃತ ಮತ್ತು ಕಲಾಯಿ ನ್ಯಾಟೋದ ಸಂಪೂರ್ಣ ಶಕ್ತಿಯೊಂದಿಗೆ ರಕ್ಷಿಸುತ್ತೇವೆ. ಆದರೆ ನಾವು ಉಕ್ರೇನ್‍ನಲ್ಲಿ ರಷ್ಯಾದ ವಿರುದ್ಧ ಯುದ್ಧ ಮಾಡುವುದಿಲ್ಲ. ನ್ಯಾಟೋ ಮತ್ತು ರಷ್ಯಾದ ನಡುವಿನ ನೇರ ಮುಖಾಮುಖಿ 3ನೇ ವಿಶ್ವ ಯುದ್ಧವಾಗದಂತೆ ನಾವು ತಡೆಯಲು ಶ್ರಮಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

    ಆದಾಗ್ಯೂ, ಬಿಡೆನ್ ಅವರು ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ ಮತ್ತು ರೊಮೇನಿಯಾದಂತಹ ರಷ್ಯಾದ ಗಡಿಯಲ್ಲಿ 12,000 ಸೈನಿಕರನ್ನು ಸ್ಥಳಾಂತರಿಸಿದ್ದಾರೆ. ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧ ನಡೆಸಿದ ಯುದ್ಧದಲ್ಲಿ ವಿಜಯಶಾಲಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ

    ಯುಎಸ್ ನೇತೃತ್ವದ ನಿರ್ಬಂಧಗಳು ರಷ್ಯಾದ ಆರ್ಥಿಕತೆಯ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತಿದೆ. ಇದರ ಮಧ್ಯೆ, ಜಿ7 ರಾಷ್ಟ್ರಗಳು ಪ್ರಮುಖ ಉತ್ಪನ್ನಗಳಿಗೆ ಸಂಬಂಧಿಸಿದಂತೆ ರಷ್ಯಾಕ್ಕೆ ಅತ್ಯಂತ ಒಲವುಳ್ಳ ರಾಷ್ಟ್ರದ ಸ್ಥಾನಮಾನವನ್ನು ನೀಡಲು ನಿರಾಕರಿಸಲು ಒಪ್ಪಿಕೊಂಡಿವೆ. ಇದರಿಂದ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ರಷ್ಯಾದ ಸದಸ್ಯತ್ವದ ಪ್ರಯೋಜನಗಳನ್ನು ಹಿಂತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

  • 3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ

    3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ

    ಮಾಸ್ಕೋ: ಮೂರನೇ ಮಹಾಯುದ್ಧ ನಡೆದರೆ ಅದು ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುತ್ತದೆ. ಜೊತೆಗೆ ವಿನಾಶಕಾರಿಯಾಗಿರುತ್ತದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ.

    ಕೀವ್‌ ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಂಡರೆ ನಿಜವಾದ ಅಪಾಯ ಎದುರಿಸಬೇಕಾಗುತ್ತದೆ ಎಂದು ಉಕ್ರೇನ್‌ಗೆ ಲಾವ್ರೊವ್ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇದನ್ನೂ ಓದಿ: ಭಾರತದ ಧ್ವಜ ಹಿಡಿದು ಸುರಕ್ಷಿತವಾಗಿ ಉಕ್ರೇನ್‌ ಗಡಿ ದಾಟಿದ ಪಾಕಿಸ್ತಾನ ವಿದ್ಯಾರ್ಥಿಗಳು!

    ರಷ್ಯಾದ ಪಡೆಗಳು ಉಕ್ರೇನ್‌ನ ಎರಡನೇ ನಗರ ಖಾರ್ಕಿವ್‌ನ ಮಧ್ಯಭಾಗದಲ್ಲಿರುವ ಸ್ಥಳೀಯ ಸರ್ಕಾರದ ಪ್ರಧಾನ ಕಛೇರಿಯ ಮೇಲೆ ಭೀಕರ ದಾಳಿ ನಡೆಸಿತು. ಇದರಿಂದ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಉಕ್ರೇನ್‌ ರಾಜಧಾನಿ ಕೀವ್‌ನ ಟೆಲಿವಿಷನ್‌ ಟವರ್‌ ಮೇಲೂ ರಷ್ಯಾ ದಾಳಿ ನಡೆಸಿದ್ದು, ಐವರು ಬಲಿಯಾಗಿದ್ದಾರೆ.

    ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜೊತೆಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ದೂರವಾಣಿ ಕರೆಯಲ್ಲಿ ಮಾತನಾಡಿ, ಆಕ್ರಮಣಕಾರಿ ರಷ್ಯಾವನ್ನು ತಡೆಯಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 6 ದಿನದಲ್ಲಿ 6 ಸಾವಿರ ರಷ್ಯಾ ಯೋಧರ ಹತ್ಯೆ: ಉಕ್ರೇನ್ ಅಧ್ಯಕ್ಷ

    ನಿನ್ನೆ ಕೂಡ ಯೂರೋಪಿಯನ್‌ ನಾಯಕರೊಂದಿಗೆ ವೀಡಿಯೋ ಕರೆಯಲ್ಲಿ ಮಾತನಾಡಿದ್ದ ಝೆಲೆನ್‌ಸ್ಕಿ, ನಾವು ನಿಮ್ಮೊಂದಿಗಿದ್ದೇವೆ ಎಂಬುದನ್ನು ಸಾಬೀತುಪಡಿಸಿ ಎಂದು ಯೂರೋಪಿಯನ್‌ ನಾಯಕರಿಗೆ ತಾಕೀತು ಮಾಡಿದ್ದರು. ನೀವಿಲ್ಲದೇ ಉಕ್ರೇನ್‌ ಏಕಾಂಗಿಯಾಗಲಿದೆ ಎಂದು ಹೇಳಿದ್ದರು.

    ರಷ್ಯಾದ ಆಕ್ರಮಣದ ನಂತರ 6,77,000 ಕ್ಕೂ ಹೆಚ್ಚು ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಪಲಾಯನ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಯುಎನ್‌ನ ನಿರಾಶ್ರಿತರ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

  • ನಾನು ರಾಜಕೀಯ ಸೇರಿದ್ರೆ ಮೂರನೇ ಮಹಾಯುದ್ಧ ಆಗುತ್ತೆ: ಇಂದ್ರಾ ನೂಯಿ

    ನಾನು ರಾಜಕೀಯ ಸೇರಿದ್ರೆ ಮೂರನೇ ಮಹಾಯುದ್ಧ ಆಗುತ್ತೆ: ಇಂದ್ರಾ ನೂಯಿ

    ನವದೆಹಲಿ: ನಾನು ಏನಾದರೂ ರಾಜಕೀಯ ಪ್ರವೇಶ ಮಾಡಿದರೆ, ನನ್ನ ನೇರ ಮಾತುಗಳಿಂದಲೇ ಮೂರನೇ ಮಹಾಯುದ್ಧ ನಡೆಯೋದು ಗ್ಯಾರೆಂಟಿ ಎಂದು ಪೆಪ್ಸಿಕೋ ಕಂಪನಿಯ ಮಾಜಿ ಸಿಇಒ ಇಂದ್ರಾ ನೂಯಿ ಹೇಳಿದ್ದಾರೆ.

    ಮಾನವೀಯತೆ, ಉದ್ಯಮದಲ್ಲಿ ಸಾಧನೆ ಮತ್ತು ಮಹಿಳಾ ಪರ ನಿಲುವಿಗಾಗಿ ಏಷ್ಯಾ ಸೊಸೈಟಿ ಸಂಸ್ಥೆ 62 ವರ್ಷದ ಇಂದ್ರಾ ನೂಯಿ ಅವರಿಗೆ “ಗೇಮ್ ಚೇಂಜರ್ ಅವಾರ್ಡ್ ಆಫ್ ದಿ ಇಯರ್” ಪ್ರಶಸ್ತಿಯನ್ನು ನೀಡಿ ಗೌರವಿಸಿತು.

    ಈ ಸಮಾರಂಭದಲ್ಲಿ ನಡೆದ ಮಾತುಕತೆಯಲ್ಲಿ, ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಂತ್ರಿಮಂಡಲವನ್ನ ಸೇರಲು ಇಚ್ಛಿಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ನೂಯಿ, “ನನಗೂ ಮತ್ತು ರಾಜಕೀಯಕ್ಕೂ ಹೊಂದಿಕೊಳ್ಳಲು ಅಸಾಧ್ಯ. ಏಕೆಂದರೆ ನಾನು ಎಲ್ಲವನ್ನ ನೇರವಾಗಿ ಹೇಳಿಕೊಳ್ಳುತ್ತೇನೆ. ನಾನು ರಾಜತಾಂತ್ರಿಕಳಲ್ಲ. ಯಾವ ರಾಜತಾಂತ್ರಿಕತೆಯ ಬಗ್ಗೆಯೂ ನನಗೆ ಗೊತ್ತಿಲ್ಲ. ನಾನೇನಾದರೂ ರಾಜಕೀಯ ಪ್ರವೇಶ ಮಾಡಿದರೆ ನನ್ನಿಂದಲೇ ಮೂರನೇ ಮಹಾಯುದ್ಧ ಉಂಟಾಗುವುದು ಖಚಿತ. ರಾಜಕೀಯಕ್ಕೆ ನನ್ನನ್ನು ದೂಡುವ ಕೆಲಸವನ್ನ ಮಾಡಬೇಡಿ” ಎಂದರು.

    ನೂಯಿಯವರ 40 ವರ್ಷದ ಉದ್ಯಮದ ಕಾರ್ಯ ವೈಖರಿಯ ಬಗ್ಗೆ ಕೇಳಿದಾಗ,”ನಾನು ದಿನದಲ್ಲಿ ಸುಮಾರು 18-20 ತಾಸಿನವರೆಗೆ ಕೆಲಸ ಮಾಡುತ್ತಿದ್ದೆ. ಇಡೀ ದಿನ ಆಫೀಸಿನಲ್ಲಿ ಕೆಲಸ ಮಾಡುವ ನನಗೆ ಈಗ ಹುದ್ದೆಯಿಂದ ಕೆಳಗಿಳಿದ ನಂತರ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಬೆಳಗ್ಗೆ 4 ಘಂಟೆಗೆ ಶುರುವಾಗುತ್ತಿದ್ದ ನನ್ನ ದಿನಚರಿಯಿಂದ ಈಗ ನನಗೆ ಮುಕ್ತಿ ದೊರೆತಿದೆ ಎಂದು ಹೇಳಿದರು.

    ವಿಶ್ವದ ಎರಡನೇ ತಂಪು ಪಾನೀಯದ ಪೆಪ್ಸಿಕೋ ಕಂಪೆನಿಯಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ನೂಯಿ 12 ವರ್ಷಗಳ ನಂತರ ಕಂಪೆನಿಯಿಂದ ಹೊರಬರುತ್ತಿದ್ದಾರೆ. ಅಕ್ಟೋಬರ್ 3ಕ್ಕೆ ಅವರ ಅವಧಿ ಮುಕ್ತಾಯವಾಗಿದ್ದು, 2019 ರವರೆಗೂ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ. ಇಂದ್ರಾ ನೂಯಿರವರು 1980 ರಲ್ಲಿ ರಾಜ್ ನೂಯಿ ಎಂಬವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv