Tag: 35ಎ

  • ನಾವು ಹಿಂದುಳಿಯಲು ಕಾಂಗ್ರೆಸ್, 370 ವಿಧಿ ಕಾರಣ – ವೈರಲ್ ಆಗ್ತಿದೆ ಲಡಾಖ್ ಯುವ ಸಂಸದನ ಭಾಷಣ

    ನಾವು ಹಿಂದುಳಿಯಲು ಕಾಂಗ್ರೆಸ್, 370 ವಿಧಿ ಕಾರಣ – ವೈರಲ್ ಆಗ್ತಿದೆ ಲಡಾಖ್ ಯುವ ಸಂಸದನ ಭಾಷಣ

    ನವದೆಹಲಿ: ನಮ್ಮ ಪ್ರದೇಶ ಭಾರತದಲ್ಲಿ ಹಿಂದುಳಿಯಲು ಕಾಂಗ್ರೆಸ್ ಮತ್ತು ಸಂವಿಧಾನದ 370ನೇ ವಿಧಿ ಕಾರಣ ಎಂದು ಲಡಾಖ್ ಬಿಜೆಪಿ ತ್ಸೆರಿಂಗ್ ನಮ್‍ಗ್ಯಾಲ್ ಅಭಿಪ್ರಾಯ ಪಟ್ಟಿದ್ದಾರೆ.

    370ನೇ ವಿಧಿಯ ರದ್ದು ಚರ್ಚೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಹಿಂದಿನ ರಾಜ್ಯ ಸರ್ಕಾರಗಳು ಸರ್ಕಾರಿ ಕೆಲಸಗಳನ್ನು ನೀಡುವ ವಿಚಾರದಲ್ಲಿಯೂ ಸಹ ಲಡಾಕ್ ಜನರಿಗೆ ತಾರತಮ್ಯ ಮಾಡಿವೆ. ಇಷ್ಟು ವರ್ಷ ಕಳೆದರೂ ಲಡಾಖ್‍ನಲ್ಲಿ ಯಾವುದೊಂದೂ ಉನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲಿಲ್ಲ. ಇದು ಸಮಾನತೆಯೇ ಎಂದು ಪ್ರಶ್ನಿಸಿದ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಡಿ ಒಂದು ವಿಶ್ವವಿದ್ಯಾಲಯವನ್ನು ಲಡಾಖ್ ಪಡೆದುಕೊಂಡಿದೆ ಎಂದು ತಿಳಿಸಿದರು.

    ಕಾಶ್ಮೀರ ರಾಜಕೀಯ ಪಕ್ಷಗಳ ನಿಲುವು ತುಂಬಾ ವಿಪರ್ಯಾಸವಾಗಿದ್ದು, ಒಂದೆಡೆ ಪಂಚಾಯತ್ ಚುನಾವಣೆಗಳನ್ನು ಬಹಿಷ್ಕರಿಸುತ್ತಾರೆ. ಇನ್ನೊಂದೆಡೆ ಅವರಿಗೆ ಅನುಕೂಲವಾಗುವ ಚುನಾವಣೆಗಳಲ್ಲಿ ಭಾಗವಹಿಸುತ್ತಾರೆ. ಕಾಶ್ಮೀರ ಕೇಂದ್ರಿತ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ವಿರುದ್ಧ ವಾಗ್ದಾಳಿ ನಡೆಸಿದ ತ್ಸೆರಿಂಗ್ ನಮ್‍ಗ್ಯಾಲ್, ಎರಡು ಕುಟುಂಬದ ಸದಸ್ಯರು ಇನ್ನೂ ಮಾದಕ ವ್ಯಸನಿಗಳಾಗಿದ್ದಾರೆ. ಅಲ್ಲದೆ, ಕಾಶ್ಮೀರ ತಮ್ಮ ತಂದೆಯ ಆಸ್ತಿ ಎಂದು ಭಾವಿಸಿದ್ದಾರೆ ಎಂದು ಕಿಡಿಕಾರಿದರು.

    ಇಲ್ಲಿರುವ ಮುಫ್ತಿ ಮತ್ತು ಅಬ್ದುಲ್ಲಾ ಈ ಎರಡು ಕುಟುಂಬಗಳ ಸದಸ್ಯರು ಮಾತ್ರ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳಾಗಿದ್ದಾರೆ. ನಿನ್ನೆ ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಿಸಿದ ನಂತರ ಈಗ ಸಮಾನತೆಯ ಮಾತುಗಳನ್ನಾಡುತ್ತಿದ್ದಾರೆ. ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಹಣ ಸಂಗ್ರಹಿಸಿದಾಗ, ಲಡಾಖ್ ಅಭಿವೃದ್ಧಿಗೆಂದು ಮೀಸಲಿರಿಸಿದ್ದ ಹಣವನ್ನು ಕಾಶ್ಮೀರಕ್ಕೆ ವರ್ಗಾಯಿಸಿಕೊಂಡಿರಿ. ಇದು ನಿಮ್ಮ ಸಮಾನತೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

    ಲೋಕಸಭಾ ಚುನಾವಣೆಯಲ್ಲಿ ಲೇಹ್, ಲಡಾಖ್ ಮತ್ತು ಕಾರ್ಗಿಲ್ ಜನರು ಕೇಂದ್ರಾಡಳಿತ ಪ್ರದೇಶಕ್ಕಾಗಿಯೇ ಮತ ಹಾಕಿದ್ದರು. ಅಂದಿನ ಗೃಹ ಸಚಿವ ರಾಜನಾಥ್ ಸಿಂಗ್ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ವೇಳೆ ಹೆಚ್ಚಿನ ಜನರು ಲಡಾಕ್‍ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದರು ಎಂದು ತ್ಸೆರಿಂಗ್ ನಮ್‍ಗ್ಯಾಲ್ ಇದೇ ವೇಳೆ ತಿಳಿಸಿದರು.

    ನಿನ್ನೆ ರಾಜ್ಯಸಭೆಯ ಕಾಂಗ್ರೆಸ್ ಮುಖಂಡರು ಲಡಾಕ್‍ಗೆ ಏನಾಗಬಹುದು ಎಂದು ಬೊಬ್ಬೆ ಹೊಡೆಯುತ್ತಿದ್ದರು. 2008ರಲ್ಲಿ ಕಾಂಗ್ರೆಸ್ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ 8 ಹೊಸ ಜಿಲ್ಲೆಗಳನ್ನು ರಚಿಸಿತು. ಆಗ ನಾಲ್ಕು ಜಮ್ಮುವಿಗೆ ಉಳಿದ ನಾಲ್ಕು ಕಾಶ್ಮೀರಕ್ಕೆ ನೀಡಿ ಎಂದು ಜಮ್ಮುವಿನ ಜನರು ಹೋರಾಡಿದರು. ಆದರೆ, ಲಡಾಖ್‍ಗೆ ಏನೂ ಸಿಗಲಿಲ್ಲ. ಇದು ನಿಮ್ಮ ಸಮಾನತೆಯೇ ಎಂದು ನಮ್‍ಗ್ಯಾಲ್ ಪ್ರಶ್ನಿಸಿದರು.

    ನಿಮ್ಮಂತೆ ಜಮ್ಮು ಮತ್ತು ಕಾಶ್ಮೀರದ ಕುರಿತು ಪುಸ್ತಕದಲ್ಲಿ ಓದಿ ನಾನು ಇಲ್ಲಿಗೆ ಬಂದಿಲ್ಲ. ಲಡಾಖ್ ನೆಲದ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ನೀವು ಕಾಶ್ಮೀರಿ ಮತ್ತು ಡೋಗ್ರಿಗಳನ್ನು ನಿಗದಿತ ಭಾಷೆ ಎಂದು ಗುರುತಿಸುತ್ತೀರಿ. ಆದರೆ, ಲಡಾಖಿ ಜನರ ಭಾಷೆಯ ಗತಿ ಏನು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

    ಲೋಕಸಭೆಯಲ್ಲಿ ತ್ಸೆರಿಂಗ್ ನಮ್‍ಗ್ಯಾಲ್ ಒಂದೊಂದೆ ಅಂಶವನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಅಮಿತ್ ಶಾ ಸೇರಿದಂತೆ ಬಿಜೆಪಿ ಸಂಸದರು ಮೇಜು ಕುಟ್ಟಿ ಸ್ವಾಗತಿಸುತ್ತಿದ್ದರು. ಅಮಿತ್ ಶಾ ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ಹಾಕಿ ಮೆಚ್ಚುಗೆ ಸೂಚಿಸಿದ್ದಾರೆ.

    ನಮ್‍ಗ್ಯಾಲ್ ಅವರು ಲೋಕಸಭೆಯಲ್ಲಿ ಮಾಡಿದ ಭಾಷಣದ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಾಷಣದ ಕೊನೆಯಲ್ಲಿ ಲೋಕಸಭೆಯ ಸಭಾಧ್ಯಕ್ಷರಾದ ಓಂ ಬಿರ್ಲಾ ಸಹ ನಮ್‍ಗ್ಯಾಲ್ ಅವರ ಭಾಷಣ ಮತ್ತು ಉತ್ಸಾಹವನ್ನು ಶ್ಲಾಘಿಸಿದರು. ಸದನವು ನಮ್‍ಗ್ಯಾಲ್ ಅವರಂತಹ ಯುವ ಸದಸ್ಯರನ್ನು ಪ್ರೋತ್ಸಾಹಿಸಬೇಕು ಮೆಚ್ಚುಗೆ ವ್ಯಕ್ತಪಡಿಸಿದರು.

  • ದೀರ್ಘಕಾಲದ ಬೇಡಿಕೆ ಈಡೇರಿದೆ – ಕೇಂದ್ರವನ್ನು ಹೊಗಳಿದ ಮಾಯಾವತಿ

    ದೀರ್ಘಕಾಲದ ಬೇಡಿಕೆ ಈಡೇರಿದೆ – ಕೇಂದ್ರವನ್ನು ಹೊಗಳಿದ ಮಾಯಾವತಿ

    ಲಕ್ನೋ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮಾಜವಾದಿ ಪಕ್ಷದ ವರಿಷ್ಠೆ ಮಾಯಾವತಿ ಅವರು ಬೆಂಬಲಿಸಿದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.

    ಸಂವಿಧಾನದಲ್ಲಿ ರೂಪಿಸಲಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ದೇಶಾದ್ಯಂತ ವಿಸ್ತರಿಸಬೇಕು. 370ನೇ ವಿಧಿ ಮತ್ತು 35ಎ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ದೀರ್ಘಕಾಲದ ಬೇಡಿಕೆಯಾಗಿತ್ತು. ಅದು ಈಗ ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಉತ್ತಮ ಲಾಭ ಪಡೆಯಲಿದ್ದಾರೆ ಎಂದು ಬಿಎಸ್‍ಪಿ ನಂಬಿದೆ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

    ಅಲ್ಲದೆ, ಲಡಾಕ್‍ನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದ್ದ ನಿರ್ಧಾರವನ್ನು ಸಹ ಮಾಯಾವತಿ ಅವರು ಸ್ವಾಗತಿಸಿದ್ದಾರೆ. ಇದರಿಂದ ಬೌದ್ಧ ಜನರ ಹಳೆಯ ಬೇಡಿಕೆಗಳನ್ನು ಈಡೇರಿಸಿದಂತಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಬೌದ್ಧ ಅನುಯಾಯಿಗಳು ದೇಶಾದ್ಯಂತ ಸಂತಸಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಸೋಮವಾರ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಿಚಯಿಸಿದ 370ನೇ ವಿಧಿ ಹಾಗೂ 35ಎ ರದ್ದತಿ ಕುರಿತ ನಿರ್ಧಾರಕ್ಕೆ ಹಲವು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ಕೇಂದ್ರ ಸರ್ಕಾರದ ನಿಲುವಿಗೆ ಬಿಎಸ್‍ಪಿ ಬೆಂಬಲ ವ್ಯಕ್ತಪಡಿಸಿತ್ತು.

  • ತುಂಡು ಭೂಮಿಯಿಂದಲ್ಲ, ಜನರಿಂದ ದೇಶ ನಿರ್ಮಾಣ – ಕೇಂದ್ರದ ವಿರುದ್ಧ ರಾಹುಲ್ ಕಿಡಿ

    ತುಂಡು ಭೂಮಿಯಿಂದಲ್ಲ, ಜನರಿಂದ ದೇಶ ನಿರ್ಮಾಣ – ಕೇಂದ್ರದ ವಿರುದ್ಧ ರಾಹುಲ್ ಕಿಡಿ

    ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಕೇಂದ್ರ ಸರ್ಕಾರದ ನಡೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಡೆಗೂ ಮೌನ ಮುರಿದಿದ್ದು, ದೇಶದ ಭದ್ರತೆ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಏಕಪಕ್ಷೀಯವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಇಬ್ಭಾಗ ಮಾಡುವ ನಿರ್ಧಾರ ಕೈಗೊಳ್ಳುವುದು, ಜನಪ್ರತಿನಿಧಿಗಳನ್ನು ಬಂಧಿಸುವುದು ಹಾಗೂ ಸಂವಿಧಾನವನ್ನು ಉಲ್ಲಂಘಿಸುವ ಮೂಲಕ ರಾಷ್ಟ್ರದ ಏಕೀಕರಣವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಜನರಿಂದ ದೇಶ ನಿರ್ಮಾಣವಾಗಿದೆ. ಇದು ಕೇವಲ ತುಂಡು ಭೂಮಿಯಲ್ಲ. ಆಡಳಿತಾತ್ಮಕ ಅಧಿಕಾರದ ದುರುಪಯೋಗ ಮಾಡಿರುವುದು ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಕಿಡಿ ಕಾರಿದ್ದಾರೆ.

    ರಾಹುಲ್ ಗಾಂಧಿ ಅವರು ತಾಯಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಸಂಸದರು ಹಾಗೂ ನಾಯಕರೊಂದಿಗೆ ನಡೆದ ಸಭೆ ಬಳಿಕ ಟ್ವೀಟ್ ಮಾಡಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

    ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಕುರಿತು ಸೋಮವಾರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಘೋಷಣೆ ಮಾಡಿದರು. ಈ ವೇಳೆ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸುವಲ್ಲಿ ಎಡವಿದ್ದರಿಂದ ರಾಹುಲ್ ಗಾಂಧಿ ಚಕಾರ ಎತ್ತಿರಲಿಲ್ಲ.

    ಅಮಿತ್ ಶಾ 370ನೇ ವಿಧಿ ಹಾಗೂ 35ಎ ರದ್ದು ಪಡಿಸುವ ಘೋಷಣೆ ಕೂಗುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ನಾಯಕರು ಗದ್ದಲ ಎಬ್ಬಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದ್ದರು. ಅಲ್ಲದೆ, ಕಾಂಗ್ರೆಸ್ ನಾಯಕರು ಈ ನಿರ್ಧಾರವನ್ನು ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಸಂಸತ್ ಹೊರಗಡೆ ಘೋಷಣೆ ಕೂಗಿದ್ದರು. ಇದಕ್ಕೆ ಜನಾರ್ಧನ್ ದ್ವಿವೇದಿ ಹಾಗೂ ದೀಪೇಂದರ್ ಹೂಡಾರಂತಹ ನಾಯಕರು ಸಹ ಬೆಂಬಲ ವ್ಯಕ್ತಪಡಿಸಿದ್ದರು.

    ಈ ಮಹತ್ವದ ಬೆಳವಣಿಗೆ ಹಿನ್ನೆಲೆ ತುರ್ತು ಸಭೆ ಕರೆಯುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ರಾಹುಲ್ ಗಾಂಧಿ, ನಾನು ಕಾಂಗ್ರೆಸ್ ಅಧ್ಯಕ್ಷನಲ್ಲದ ಕಾರಣ ಯಾವುದೇ ಸಭೆ ಕರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದ ಕಾರಣ ರಾಹುಲ್ ಗಾಂಧಿ ಅವರು ಮೇನಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

    ಇಂದು ಬೆಳಗ್ಗೆ ಕಾಂಗ್ರೆಸ್ ವರಿಷ್ಠೆ, ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಚರ್ಚಿಸಲು ಸಭೆ ಕರೆದಿದ್ದರು. ಸಭೆಯಲ್ಲಿ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಬೇಕೇ ಅಥವಾ ಬೆಂಬಲಿಸಬೇಕೇ ಎಂಬುದರ ಕುರಿತು ಚರ್ಚೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ನಡೆಯನ್ನು ನಾವು ವಿರೋಧಿಸುತ್ತೇವೆ. ಆದರೆ, ನಮ್ಮ ವಿರೋಧವು ಜಮ್ಮು ಮತ್ತು ಕಾಶ್ಮೀರದ ಜನತೆ ಹಾಗೂ ರಾಜ್ಯದ ವಿಧಾನಸಭೆಯನ್ನು ಸಂಪರ್ಕಿಸದಿರುವುದನ್ನು ಆಧರಿಸಿದೆ ಎಂದು ಕಾಂಗ್ರೆಸ್ ಸಂಸದರು ಹಾಗೂ ನಾಯಕರಿಗೆ ಸಭೆಯಲ್ಲಿ ಸ್ಪಷ್ಟಪಡಿಸಲಾಗಿತ್ತು.

  • 370ನೇ ವಿಧಿ ರದ್ದು ಪ್ರಜಾಪ್ರಭುತ್ವದ ಮೇಲೆ ನಡೆಸಲಾದ ದಾಳಿ – ಕಮಲ್ ಹಾಸನ್

    370ನೇ ವಿಧಿ ರದ್ದು ಪ್ರಜಾಪ್ರಭುತ್ವದ ಮೇಲೆ ನಡೆಸಲಾದ ದಾಳಿ – ಕಮಲ್ ಹಾಸನ್

    ಚೆನ್ನೈ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ್ದಕ್ಕೆ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ‘ಪ್ರಜಾಪ್ರಭುತ್ವದ ಮೇಲೆ ನಡೆಸಲಾದ ಸ್ಪಷ್ಟ ದಾಳಿ’ ಎಂದು ಕಿಡಿಕಾರಿದ್ದಾರೆ.

    ಜಮ್ಮು ಕಾಶ್ಮೀರವನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿ, ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿರುವುದು ಪ್ರಜಾಪ್ರಭುತ್ವದ ಮೇಲೆ ನಡೆದ ಸ್ಪಷ್ಟ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದು ಅತ್ಯಂತ ಆಘಾತಕಾರಿ ಹಾಗೂ ನಿರಂಕುಶಾಧಿಕಾರತ್ವ. 370ನೇ ವಿಧಿ ಮತ್ತು 35ಎ ತನ್ನದೇ ಆದ ಮೂಲ ಹೊಂದಿವೆ. ಹೀಗಾಗಿ ಈ ಕುರಿತು ಯಾವುದೇ ಬದಲಾವಣೆ ತರಬೇಕಾದಲ್ಲಿ ಸಮಾಲೋಚನೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ಕಳೆದ ವರ್ಷ ಮಕ್ಕಳ್ ನಿಧಿ ಮೈಯಂ ಪಕ್ಷ (ಎಂಎನ್‍ಎಂ) ಸ್ಥಾಪಿಸಿದ್ದ ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.

    ಪ್ರತಿಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮತಕ್ಕೆ ಹಾಕುವ ಮುನ್ನ ವಿರೋಧ ಪಕ್ಷಗಳೊಂದಿಗೆ ಚರ್ಚೆ ನಡೆಸಬೇಕಿತ್ತು. ಈ ಮೂಲಕ ಬಿಲ್ ಕುರಿತು ಪರಿಶೀಲನೆ ನಡೆಸಬೇಕಿತ್ತು. ಆದರೆ, ಬಲವಂತವಾಗಿ ವಿರೋಧ ಪಕ್ಷಗಳ ಬಾಯನ್ನು ಮುಚ್ಚಿಸಿ ಬಿಲ್ ಪಾಸ್ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

    ಕೇಂದ್ರ ಸರ್ಕಾರ ಸೋಮವಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸಂವಿಧಾನಿಕ ಸವಲತ್ತುನ್ನು ಹಿಂಪಡೆದಿದ್ದು, ಈ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಸ್ವಾಯತ್ತತೆಯನ್ನು ರದ್ದುಗೊಳಿಸಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿ, ಆದೇಶ ಹೊರಡಿಸಿದೆ.

    ಜಮ್ಮು ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಒಟ್ಟು ಗೂಡಿಸುವುದು ಹಾಗೂ ಭಯೋತ್ಪಾದನೆಯನ್ನು ಎದುರಿಸುವುದು ನಮ್ಮ ಗುರಿಯಾಗಿದೆ ಎಂದು ಕೇಂದ್ರ ಸರ್ಕಾರ ನಿನ್ನೆಯಷ್ಟೇ ತಿಳಿಸಿತ್ತು. ಆದರೆ, ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಈ ನಿರ್ಧಾರ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಬಹುದೊಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. ಅಲ್ಲದೆ, ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತದೆ. ಕೇಂದ್ರ ಸರ್ಕಾರದ ಈ ನಿರ್ಧಾರ ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಆಕ್ರೋಶ ವ್ಯಕ್ತಪಡಿಸಿವೆ.

    370ನೇ ವಿಧಿಯನ್ನು ರದ್ದುಗೊಳಿಸುವುದಕ್ಕೂ ಮುನ್ನ ಜಮ್ಮು ಕಾಶ್ಮೀರದಲ್ಲಿ ಅಶಾಂತಿ, ಸಾರ್ವಜನಿಕರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಹೆಚ್ಚು ಸೈನಿಕರನ್ನು ಸ್ಥಳಾಂತರಿಸಿ ಸಂಪೂರ್ಣ ಭದ್ರತೆಯನ್ನು ಒದಗಿಸಲಾಗಿತ್ತು. ಇದೇ ಧೈರ್ಯದಿಂದಲೇ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಕುರಿತು ಘೋಷಿಸಿದರು.

    ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆ ನಂತರ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ‘ಭಾರತದ ಸಂಪೂರ್ಣ ಸಂವಿಧಾನ’ ಜಮ್ಮು ಕಾಶ್ಮೀರಕ್ಕೂ ಅನ್ವಯವಾಗಲಿದೆ ಎಂದು ತಿಳಿಸಿದರು.

  • ಕೇಂದ್ರದ ನಿರ್ಧಾರದಿಂದ ಜಮ್ಮು-ಕಾಶ್ಮೀರ ಅಭಿವೃದ್ಧಿ ಹೊಂದಲಿದೆ- ಕೇಜ್ರಿವಾಲ್

    ಕೇಂದ್ರದ ನಿರ್ಧಾರದಿಂದ ಜಮ್ಮು-ಕಾಶ್ಮೀರ ಅಭಿವೃದ್ಧಿ ಹೊಂದಲಿದೆ- ಕೇಜ್ರಿವಾಲ್

    ನವದೆಹಲಿ: ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದು ಪಡಿಸಿದ್ದಕ್ಕೆ, ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಆದರೆ, ಅಚ್ಚರಿ ಎಂಬಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

    ವಿರೋಧ ಪಕ್ಷಗಳಲ್ಲಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದವರ ಪೈಕಿ ಅರವಿಂದ್ ಕೇಜ್ರಿವಾಲ್ ಏಕೈಕರಾಗಿದ್ದಾರೆ.

    ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜಮ್ಮು ಮತ್ತು ಕಾಶ್ಮೀರದ ಕುರಿತು ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ಈ ನಿರ್ಧಾರದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಲಿದೆ. ಅಲ್ಲದೆ, ರಾಜ್ಯವು ಅಭಿವೃದ್ಧಿ ಹೊಂದಲಿದೆ ಎಂದು ತಿಳಿಸಿದ್ದಾರೆ.

    ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ರಾಜಕೀಯ ಪಯಣದಲ್ಲಿ ವಿವಿಧ ವಿಷಯಗಳ ಕುರಿತು, ವಿಶೇಷವಾಗಿ ದೆಹಲಿಯ ಸ್ವಾಯತ್ತತೆಗೆ ಸಂಬಂಧಿಸಿದಂತೆ ಈವರೆಗೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಲೇ ಬಂದಿದೆ. ವರ್ಷಗಳಿಂದ ಬಿಜೆಪಿ ವಿರುದ್ಧ ಕಿಡಿಕಾರುತ್ತಿದ್ದ ಅರವಿಂದ್ ಕೇಜ್ರಿವಾಲ್ ಅವರು, ಕೇಂದ್ರದ ಬಿಜೆಪಿ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ಮೂಲಕ ದೆಹಲಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ಚುನಾಯಿತ ಸ್ಥಳೀಯ ಸರ್ಕಾರವನ್ನು ಕಡೆಗಣಿಸುತ್ತಿದೆ ಎಂದು ಹಲವು ವರ್ಷಗಳಿಂದ ಆರೋಪಿಸುತ್ತಲೇ ಬಂದಿದ್ದಾರೆ.

    ಜಮ್ಮು ಕಾಶ್ಮೀರಕ್ಕೆ ಆರ್ಟಿಕಲ್ 370 ಹಾಗೂ 35ಎ ಅಡಿ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಕುರಿತ ವಿಧೇಯಕಕ್ಕೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಸಹಿ ಹಾಕಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಸಂಸತ್‍ನಲ್ಲಿ ಹೇಳಿದ್ದರು.

    370ನೇ ವಿಧಿಯನ್ನು ಸಂವಿಧಾನದಿಂದ ತೆಗೆದು ಹಾಕಲು ಒಂದು ಸೆಕೆಂಡ್ ಕೂಡ ತಡವಾಗಬಾರದು ಎಂದು ಗೃಹ ಸಚಿವ ಅಮಿತ್ ಶಾ ಅವರು ಸಂಸತ್‍ನಲ್ಲಿ ಘೋಷಿಸಿದರು. ಅಮಿತ್ ಶಾ ಘೋಷಿಸುತ್ತಿದ್ದಂತೆ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಲು ಪ್ರಾರಂಭಿಸಿದವು.

    ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ದೆಹಲಿಯಂತೆ ಶಾಸಕಾಂಗವನ್ನು ಹೊಂದಿರಲಿದೆ. ಲಡಾಕ್ ಶಾಸಕಾಂಗವಿಲ್ಲದೆ, ಕೇವಲ ಕೇಂದ್ರಾಡಳಿತ ಪ್ರದೇಶವಾಗಿರಲಿದೆ ಎಂದು ಸಂಸತ್‍ನಲ್ಲಿ ಅಮಿತ್ ಶಾ ತಿಳಿಸಿದ್ದಾರೆ.

  • ಕಾಶ್ಮೀರದ ಕುರಿತು ಕೇಂದ್ರ ನಿರ್ಧಾರ, ಬಹಳ ಹಿಂದಿನ ಕನಸು ನನಸಾಗಿದೆ- ಶೋಭಾ ಕರಂದ್ಲಾಜೆ

    ಕಾಶ್ಮೀರದ ಕುರಿತು ಕೇಂದ್ರ ನಿರ್ಧಾರ, ಬಹಳ ಹಿಂದಿನ ಕನಸು ನನಸಾಗಿದೆ- ಶೋಭಾ ಕರಂದ್ಲಾಜೆ

    – ಕಾಲಿಗೆ ಹೊಕ್ಕಿದ್ದ ಮುಳ್ಳನ್ನು ತೆಗೆದಂತಾಗಿದೆ

    ನವದೆಹಲಿ: ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರದಿಂದ ತುಂಬಾ ಸಂತಸವಾಗಿದ್ದು, ಬಹಳ ಹಿಂದಿನ ಕನಸು ಈಗ ನನಸಾಗಿದೆ. ಒಂದು ರೀತಿ ಕಾಲಿಗೆ ಹೊಕ್ಕಿದ್ದ ಮುಳ್ಳನ್ನು ಹೊರ ತೆಗೆದಂತಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

    ದೆಹಲಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಾಶ್ಮೀರದ ವಿಚಾರದಲ್ಲಿ ಬಹಳ ಹಿಂದಿನ ಕನಸು ಈಗ ನನಸಾಗಿದ್ದು, ಜನಸಂಘದ ಸ್ಥಾಪಕರಾದ ಶಾಮ್ ಪ್ರಸಾದ್ ಮುಖರ್ಜಿ ಅವರು ಇದೇ ವಿಷಯವಾಗಿ ಹೋರಾಟ ನಡೆಸಿದ್ದರು. ಅದಕ್ಕಾಗಿಯೇ ಪ್ರಾಣ ತ್ಯಾಗ ಮಾಡಿದ್ದರು. ಅವರ ಕನಸು ಸಹ ಇದೇ ಆಗಿತ್ತು ಎಂದು ತಿಳಿಸಿದರು.

    ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಒಂದು ದೇಶದಲ್ಲಿ ಎರಡು ಧ್ವಜ, ಪ್ರಧಾನಿ ಇರಬಾರದು ಎಂದುಕೊಂಡಿದ್ದರು ಹಾಗೇಯೇ ಆಗಿದೆ. ಇದೀಗ ಅಖಂಡ ಭಾರತ ಒಂದಾಗಿದೆ. ಬೇರೆ ರಾಜ್ಯಗಳಂತೆ ಕಾಶ್ಮೀರ ಕೂಡ ನಮ್ಮದಾಗಬೇಕೆಂಬ ಕನಸು ಆಗಿನಿಂದಲೂ ಇತ್ತು. ಈಗ ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಕಾಶ್ಮೀರದಲ್ಲಿನ ವಿಪಕ್ಷಗಳಿಗೆ ತಿಳಿಯದಂತೆ ಅಲ್ಲಿನ ನಾಯಕರರಿಂದ ಈ ವಿಷಯವನ್ನು ದೂರ ಇಡಲಾಗಿತ್ತು. ಹೀಗಾಗಿ ವಿರೋಧ ಪಕ್ಷದವರನ್ನು ಗೃಹ ಬಂಧನದಲ್ಲಿಡಲಾಗಿದೆ. ದೇಶದ ಹಿತದೃಷ್ಟಿಯಿಂದ ಈ ವಿಚಾರವನ್ನು ಗುಟ್ಟಾಗಿ ಇಡಲಾಗಿತ್ತು. ಕಾಲಿಗೆ ಹೊಕ್ಕಿದ್ದ ಮುಳ್ಳನ್ನು ಹೊರ ತೆಗೆದಂತಾಗಿದೆ. ಇದರಿಂದ ದೇಶಕ್ಕೆ ಅಷ್ಟು ನಿರಾಳತೆ ಒದಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ದೇಶದ ಒಳಿತಿನ ದೃಷ್ಟಿಯಿಂದ ಕೆಲವು ನಿರ್ಧಾರಗಳನ್ನು ದಿಢೀರ್ ತೆಗೆದುಕೊಳ್ಳಬೇಕಿತ್ತು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ನಿರ್ಧಾರವನ್ನು ಗುಪ್ತವಾಗಿಟ್ಟಿದ್ದರು. ಇಲ್ಲವಾದಲ್ಲಿ, ದೊಂಬೆ, ಗಲಾಟೆ, ಭಯೋತ್ಪಾದನೆಯಂತಹ ಕೃತ್ಯಗಳು ನಡೆಯುತ್ತಿದ್ದವು. ಇಷ್ಟು ವರ್ಷಗಳಲ್ಲಿ ಕಾಶ್ಮೀರಕ್ಕಾಗಿ ಬಲಿಯಾಗಿರುವ ಸೈನಿಕರು, ಸಾರ್ವಜನಿಕರ ಆತ್ಮಕ್ಕೆ ಇಂದು ತೃಪ್ತಿಯಾಗಿರುತ್ತದೆ. ಇದಕ್ಕೆ ನಮ್ಮೆಲ್ಲ ಸಂಸದರ ಬೆಂಬಲವಿತ್ತು. ಅಲ್ಲದೆ, ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿಯೂ ಸಹ ಈ ಅಂಶ ಉಲ್ಲೇಖವಾಗಿತ್ತು. ಹೀಗಾಗಿ ನಿರ್ಧಾರದ ಕುರಿತು ಆಶ್ಚರ್ಯವೇನು ಇಲ್ಲ. ನಮಗೆ ಇದು ಹೊಸ ವಿಚಾರವಲ್ಲ. ಇಂತಹ ದಿಟ್ಟ ನಿರ್ಧಾರ ಕೈಗೊಂಡಿದ್ದು, ಶ್ಲಾಘನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾಶ್ಮಿರ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡಿದೆ, ರಾಷ್ಟ್ರಪತಿಗಳ ಹಾಗೂ ಕೇಂದ್ರ ನಾಯಕರ ಆಡಳಿತಕ್ಕೊಳಪಡಲಿದೆ. ಕಾಶ್ಮೀರದ ಕೆಲ ನಾಯಕರನ್ನು ಗೃಹಬಂಧನದಲ್ಲಿರಿಸಿರುವುದು ಗದ್ದಲ ಗಲಾಟೆಗಳಾಗಬಾರದು ಎಂಬ ಉದ್ದೇಶದಿಂದ. ಎಲ್ಲ ನಾಯಕರ ಭದ್ರತೆಯನ್ನು ಕೇಂದ್ರ ಸರ್ಕಾರ ವಹಸಿಕೊಳ್ಳಲಿದೆ. ಕಾಶ್ಮೀರದ ಜನಕ್ಕೆ, ದೇಶದ ಜನಕ್ಕೆ ಕಾಶ್ಮೀರ ನಮ್ಮದು ಎಂಬ ಭಾವನೆಯನ್ನು ಕೇಂದ್ರ ಸರ್ಕಾರ ಮೂಡಿಸುತ್ತಿದೆ ಎಂದರು.

  • ಆರ್ಟಿಕಲ್ 370, 35ಎ ರದ್ದು- ಮತ್ತೆ 8 ಸಾವಿರ ಸೈನಿಕರು ಕಾಶ್ಮೀರಕ್ಕೆ ಸ್ಥಳಾಂತರ

    ಆರ್ಟಿಕಲ್ 370, 35ಎ ರದ್ದು- ಮತ್ತೆ 8 ಸಾವಿರ ಸೈನಿಕರು ಕಾಶ್ಮೀರಕ್ಕೆ ಸ್ಥಳಾಂತರ

    ನವದೆಹಲಿ: ಕೇಂದ್ರ ಸರ್ಕಾರ ಆರ್ಟಿಕಲ್ 370 ಹಾಗೂ 35ಎ ರದ್ದುಪಡಿಸಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಹೆಚ್ಚುವರಿಯಾಗಿ 8 ಸಾವಿರ ಸೈನಿಕರನ್ನು ಸ್ಥಳಾಂತರಿಸಲಾಗಿದೆ.

    ದೇಶದ ವಿವಿಧ ಭಾಗಗಳಲ್ಲಿನ ಸುಮಾರು 8 ಸಾವಿರ ಸೈನಿಕರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಸ್ಥಳಾಂತರಿಸಲಾಗಿದೆ. ಭಾರತೀಯ ವಾಯುಪಡೆಯ ಸಿ-17 ಸಾರಿಗೆ ವಿಮಾನಗಳ ಮೂಲಕ ಸೈನಿಕರನ್ನು ಶ್ರೀನಗರಕ್ಕೆ ಕರೆತರಲಾಗುತ್ತಿದೆ. ಕಳೆದ ವಾರದಲ್ಲಿ ಸುಮಾರು 35 ಸಾವಿರ ಸೈನಿಕರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಹೆಚ್ಚುವರಿಯಾಗಿ 8 ಸಾವಿರ ಸೈನಿಕರನ್ನು ಸ್ಥಳಾಂತರಿಸಲಾಗಿದೆ.

    ಅಲ್ಲದೆ, ಸೈನಿಕರನ್ನು ಹಾಗೂ ವಾಯು ಪಡೆಯನ್ನು ಹೈ ಅಲರ್ಟ್ ನಲ್ಲಿ ಇಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನ ತೆರವುಗೊಳಿಸಿರುವುದು ಭಾವನಾತ್ಮಕ ವಿಚಾರವಾಗಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚು ಸೈನಿಕರನ್ನು ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ ಸರ್ಕಾರ ಅಮರನಾಥ ಯಾತ್ರೆಯನ್ನು ಹಠಾತ್ ರದ್ದುಗೊಳಿಸಿದ ನಂತರ ಸಾವಿರಾರು ಅಮರನಾಥ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರನ್ನು ರಾಜ್ಯದಿಂದ ಹೊರ ಕಳುಹಿಸಿತ್ತು.

    ಆರ್ಟಿಕಲ್ 370 ಜಮ್ಮು ಮತ್ತು ಕಾಶ್ಮೀರಕ್ಕೆ ತನ್ನದೇ ಆದ ಸಂವಿಧಾನವಿತ್ತು. ಅಂದರೆ ರಕ್ಷಣೆ, ಸಂವಹನ ಮತ್ತು ವಿದೇಶಾಂಗ ವ್ಯವಹಾರಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಇತ್ತು. ಇದೀಗ ಸಂವಿಧಾನದ ಈ ಭಾಗವನ್ನು ತೆಗೆದು ಹಾಕಲಾಗಿದ್ದು, ಈ ಮೂಲಕ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಅಂತ್ಯವಾಗಿದೆ. 1947ರಲ್ಲಿ ನೆಹರು ಸರ್ಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿತ್ತು.

    ಅಲ್ಲದೆ, ಸರ್ಕಾರ ಈ ಕುರಿತು ಸ್ಪಷ್ಟಪಡಿಸಿದ್ದು, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದ್ದು, ಈ ಮೂಲಕ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಪರಿಣಾಮಕಾರಿಯಾಗಿ ಅರೆ-ರಾಜ್ಯಗಳಾಗಿವೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರವು ತನ್ನದೇ ಆದ ಶಾಸಕಾಂಗವನ್ನು ಹೊಂದಿದ ಕೇಂದ್ರಾಡಳಿತ ಪ್ರದೇಶವಾಗಿದ್ದು, ದಹಲಿ ಮತ್ತು ಲಡಾಕ್ ನಂತೆ ಕಾರ್ಯನಿರ್ವಹಿಸಲಿದೆ. ರಾಜ್ಯದಲ್ಲಿ ಭಯೋತ್ಪಾದಕ ದಾಳಿಯ ಬೆದರಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಸೈನಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ಕಳೆದ ಮೂರು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ದಾಳಿ ನಡೆಸಲು ಅನೇಕ ಬಾರಿ ಪ್ರಯತ್ನ ಮಾಡಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಜು.29 ರಿಂದ ಜು.31ರ ವೆರೆಗೆ ಗಡಿ ನಿಯಂತ್ರಣ ರೇಖೆಯನ್ನು ದಾಟಲು ಉಗ್ರರು ನಾಲ್ಕರಿಂದ ಐದು ಬಾರಿ ಯಶಸ್ವಿಯಾಗಿದ್ದಾರೆ. ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ನಡೆದ ದಾಳಿ ರೀತಿಯಲ್ಲೇ ಅಮರನಾಥ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ಯೋಜನೆ ರೂಪಿಸಿದ್ದರು. ಇದರಲ್ಲಿ ನಾಲ್ಕರಿಂದ ಐದು ಜನ ಭಾರತದೊಳಗೆ ನುಸುಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಅಮರನಾಥ ಯಾತ್ರಾರ್ಥಿಗಳಿಗೆ ಅವಕಾಶ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.