– ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 97 ರನ್ ಮುನ್ನಡೆ
– 4 ಇನ್ನಿಂಗ್ಸ್ ಗಳಲ್ಲಿ ಕೇವಲ 38 ರನ್ ಗಳಿಸಿದ ಕೊಹ್ಲಿ
ಕ್ರೈಸ್ಟ್ ಚರ್ಚ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಂದೇ ದಿನಕ್ಕೆ 16 ವಿಕೆಟ್ ಪತನಗೊಂಡಿವೆ.
ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 73.1 ಓವರ್ ಗಳಲ್ಲಿ 235 ರನ್‍ಗೆ ಸರ್ವಪತನ ಕಂಡಿತು. 7 ರನ್ ಮುನ್ನಡೆ ಪಡೆದ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 36 ಓವರ್ ನಲ್ಲಿ 90 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿದೆ. ಇದನ್ನೂ ಓದಿ: ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿದ ಜಡೇಜಾ – ವಿಡಿಯೋ ವೈರಲ್
ಹನುಮಾ ವಿಹಾರಿ 5 ರನ್ ಮತ್ತು ರಿಷಭ್ ಪಂತ್ 1 ರನ್ ಗಳಿಸಿ ಅಜೇಯರಾಗಿದ್ದಾರೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ ಸರಣಿಯ ಸತತ ನಾಲ್ಕನೇ ಇನ್ನಿಂಗ್ಸ್ ನಲ್ಲೂ ತಮ್ಮ ವೈಫಲ್ಯವನ್ನು ಮುಂದುವರಿಸಿದ್ದಾರೆ. ವೆಲ್ಲಿಂಗ್ಟನ್ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್ ನಲ್ಲಿ 2 ರನ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 19 ರನ್ ಗಳಿಸಿದ್ದರು. ಕ್ರೈಸ್ಟ್ ಚರ್ಚ್ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇವಲ 3 ರನ್ ಹಾಗೂ 14 ರನ್ ಗಳಿಸಿದ್ದಾರೆ.
ನ್ಯೂಜಿಲೆಂಡ್‍ನ ಟ್ರೆಂಟ್ ಬೌಲ್ಟ್ ಟೀಂ ಇಂಡಿಯಾದ ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ ಹಾಗೂ ಉಮೇಶ್ ಯಾದವ್ ಅವರನ್ನು ಔಟ್ ಮಾಡಿದರು. ಮಾಯಂಕ್ 3 ರನ್ ಗಳಿಸಿದರೆ, ಪೂಜಾರ 24 ರನ್ ಹಾಗೂ ಉಮೇಶ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
9 ರನ್ ಗಳಿಸಿದ್ದ ಅಜಿಂಕ್ಯ ರಹಾನೆ ನೀಲ್ ವ್ಯಾಗ್ನರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ವಿರಾಟ್ ಕೊಹ್ಲಿ ಕಾಲಿನ್ ಡಿ ಗ್ರ್ಯಾಂಡ್‍ಹೋಮ್ ಓವರಿನಲ್ಲಿ ಎಲ್‍ಬಿಡಬ್ಲ್ಯೂಗೆ ತುತ್ತಾದರು. ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ್ದ ಪೃಥ್ವಿ ಶಾ ಇಂದಿನ ಪಂದ್ಯದಲ್ಲಿ 14 ರನ್ ಗಳಿಸಿ ಪೆವಿಲಿಯನ್‍ಗೆ ಮರಳಿದರು.
ಎರಡಂಕಿ ದಾಟದ 5 ಬ್ಯಾಟ್ಸ್‌ಮನ್‌ಗಳು:
ಶನಿವಾರ ಟಾಸ್ ಸೋತ ನಂತರ ಭಾರತ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 242 ರನ್‍ಗಳಿಗೆ ಇಳಿಸಿತ್ತು. ಭಾರತದ 5 ಬ್ಯಾಟ್ಸ್‌ಮನ್‌ಗಳಾದ ನಾಯಕ ವಿರಾಟ್ ಕೊಹ್ಲಿ 3 ರನ್, ಮಾಯಾಂಕ್ ಅಗರ್ವಾಲ್ 7 ರನ್, ಅಜಿಂಕ್ಯ ರಹಾನೆ 7 ರನ್, ರವೀಂದ್ರ ಜಡೇಜಾ 9 ರನ್ ಮತ್ತು ಉಮೇಶ್ ಯಾದವ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
69 ದಿನಗಳಿಂದ ಶತಕ ಬಾರಿಸದ ಕೊಹ್ಲಿ:
ವಿರಾಟ್ ಕೊಹ್ಲಿ ಕಳೆದ 69 ದಿನಗಳಿಂದ ಎಲ್ಲಾ ಮೂರು ಸ್ವರೂಪಗಳಲ್ಲಿ (ಏಕದಿನ, ಟೆಸ್ಟ್ ಮತ್ತು ಟಿ20) ಒಂದೇ ಶತಕ ಗಳಿಸಲು ಸಾಧ್ಯವಾಗಿಲ್ಲ. ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಮೂರನೇ ಬಾರಿಗೆ ಇಂತಹ ವೈಫಲ್ಯ ತೋರಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ 22 ಇನ್ನಿಂಗ್ಸ್ ಆಡಿದ್ದಾರೆ. ಅವರು ಕೊನೆಯದಾಗಿ ಡಿಸೆಂಬರ್ 22 ರಂದು ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 136 ರನ್ ಗಳಿಸಿದ್ದರು. ಇದಕ್ಕೂ ಮೊದಲು ಫೆಬ್ರವರಿ 25ರಿಂದ ಅಕ್ಟೋಬರ್ 2014 ರವರೆಗೆ ಸುಮಾರು 210 ದಿನಗಳಲ್ಲಿ ಹಾಗೂ ಫೆಬ್ರವರಿ 24ರಿಂದ 2011ರ ಸೆಪ್ಟೆಂಬರ್ ವರೆಗೆ ಸುಮಾರು 180 ದಿನಗಳಲ್ಲಿ ಕೊಹ್ಲಿ ಒಂದೇ ಒಂದು ಶತಕ ಗಳಿಸಲು ಸಾಧ್ಯವಾಗಿರಲಿಲ್ಲ.
ನ್ಯೂಜಿಲೆಂಡ್ ಇನ್ನಿಂಗ್ಸ್:
ಇದಕ್ಕೂ ಮುನ್ನ ನ್ಯೂಜಿಲೆಂಡ್‍ನ ಮೊದಲ ಇನ್ನಿಂಗ್ಸ್ ನಲ್ಲಿ ಟಾಮ್ ಲಾಥಮ್ 52 ರನ್ ಹಾಗೂ ಕೈಲ್ ಜಾಮಿಸನ್ 49 ರನ್ ಹಾಗೂ ಟಾಮ್ ಬ್ಲೆಂಡಾಲ್ 30 ರನ್ ಗಳಿಸಿದ್ದರು. ಜಾಮಿಸನ್ 9ನೇ ವಿಕೆಟ್‍ಗೆ 51 ರನ್‍ಗಳ ನಿರ್ಣಾಯಕ ಪಾಲುದಾರಿಕೆಯನ್ನು ನೀಲ್ ವ್ಯಾಗ್ನರ್ ಜೊತೆಗೆ ಹಂಚಿಕೊಂಡರು. ಆದಾಗ್ಯೂ ಅವರು ತಮ್ಮ ವೃತ್ತಿಜೀವನದ ಮೊದಲ ಅರ್ಧಶತಕವನ್ನು ತಪ್ಪಿಸಿಕೊಂಡರು.
ಮಿಂಚಿದ ಶಮಿ, ಬುಮ್ರಾ:
ಭಾರತದ ವೇಗದ ಬೌಲರ್ ಗಳಾದ ಮೊಹಮ್ಮದ್ ಶಮಿ 4 ವಿಕೆಟ್ ಹಾಗೂ ಜಸ್‍ಪ್ರೀತ್ ಸ್ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತು ಮಿಂಚಿದರು. ಸ್ಪಿನ್ನರ್ ರವೀಂದ್ರ ಜಡೇಜಾ 2 ವಿಕೆಟ್ ಪಡೆದರೆ, ಉಮೇಶ್ ಯಾದವ್ 1 ವಿಕೆಟ್ ಕಿತ್ತರು.