Tag: 2nd puc

  • ದ್ವಿತೀಯ ಪಿಯುಸಿ ಮಕ್ಕಳು ಪರೀಕ್ಷೆ ಇಲ್ಲದೇ ಪಾಸ್: ಸುರೇಶ್ ಕುಮಾರ್

    ದ್ವಿತೀಯ ಪಿಯುಸಿ ಮಕ್ಕಳು ಪರೀಕ್ಷೆ ಇಲ್ಲದೇ ಪಾಸ್: ಸುರೇಶ್ ಕುಮಾರ್

    ಬೆಂಗಳೂರು: ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಪರೀಕ್ಷೆ ಪೋಷಕರು, ಮಕ್ಕಳು ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಮಕ್ಕಳ ಯೋಗಕ್ಷೇಮ, ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ದ್ವಿತೀಯ ಪರೀಕ್ಷೆಯನ್ನು ರದ್ದು ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಸಚಿವರು ಹೇಳಿದ್ದೇನು?
    ಮಕ್ಕಳ ಯೋಗಕ್ಷೇಮ, ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ದ್ವೀತಿಯ ಪಿಯುಸಿ ಪರೀಕ್ಷೆ ಮಾಡದೇ ಇರಲು ಈಗ ನಿರ್ಧಾರ ಮಾಡಲಾಗಿದೆ. ಈ ವರ್ಷದ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದ್ದೇ ಗ್ರೇಡ್ ಆಧಾರದಲ್ಲಿ ಪಾಸ್ ಹಾಗೂ ಕಲಿಕಾ ಮಟ್ಟದಲ್ಲಿ ಅಂಕ ನೀಡಿ ಪಾಸ್ ಮಾಡಲು ನಿರ್ಧಾರ ಮಾಡಿದ್ದೇವೆ.  

    ಕೆಲ ರಾಜ್ಯದಲ್ಲಿ ಎಕ್ಸಾಂ ರದ್ದು ಮಾಡಿದ ಮೇಲೆ ಆ ರಾಜ್ಯದವರ ಜೊತೆ ಮಾತಾಡಿದ್ದೇವೆ. ಯಾವ ಆಧಾರದಲ್ಲಿ ಪಾಸ್ ಮಾಡ್ತೀರಾ ಅಂತ ಕೇಳಿದ್ದೇವೆ. ಯಾವುದೇ ಮಾನದಂಡ ಯಾರು ಕೊಟ್ಟಿಲ್ಲ. ಮುಂದೆ ಯೋಜನೆ ಮಾಡೋದಾಗಿ ಹೇಳಿದ್ದಾರೆ. ದ್ವಿತಿಯ ಪಿಯುಸಿ ಪರೀಕ್ಷೆ ರದ್ದು ಮಾಡಿದ್ದೇವೆ. ಎಲ್ಲಾ ಮಕ್ಕಳಿಗೆ ಯಾವ ಆಧಾರಲ್ಲಿ ಪಾಸ್ ಮಾಡಬಹುದು ಅಂತ ಆದಷ್ಟು ಬೇಗ ತೀರ್ಮಾನ ಮಾಡುತ್ತೇವೆ.  

    ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ನಾವು ಕೆಲ ಮಾನದಂಡವನ್ನ ರಿಲೀಸ್ ಮಾಡುತ್ತೇವೆ. ಆ ಆಧಾರದಲ್ಲಿ ಎಬಿಸಿ ಮಾದರಿ ಗ್ರೇಡ್ ಕೊಡ್ತೀವಿ. ವಿದ್ಯಾರ್ಥಿಗಳಿಗೆ ಆ ಫಲಿತಾಂಶ ಇಷ್ಟ ಆಗದೇ ಹೋದ್ರೆ ಕೋವಿಡ್ ನಿಯಂತ್ರಣವಾದರೆ ಮಕ್ಕಳಿಗೆ ಪರೀಕ್ಷೆ ಮಾಡೋ ಬಗ್ಗೆ ಚಿಂತನೆ ಮಾಡುತ್ತೇವೆ. ದ್ವಿತಿಯ ಪಿಯುಸಿ ಮಕ್ಕಳು ಗ್ರೇಡ್ ಆಧಾರದಲ್ಲಿ ಪಾಸ್ ಮಾಡುತ್ತೇವೆ.

    ವಿದ್ಯಾರ್ಥಿಗಳು ಗೊಂದಲ ಆಗೋದು ಬೇಡ. ಎಲ್ಲಾ ವಿದ್ಯಾರ್ಥಿಗಳು ಗ್ರೇಡ್ ಆಧಾರಲ್ಲಿ ಪಾಸ್ ಮಾಡಲಾಗುತ್ತದೆ. ಸಿಇಟಿ, ನೀಟ್, ಜೆಇಇ ಪರೀಕ್ಷೆಗೆ ಸಿದ್ಧರಾಗಿರಿ. ನಿಮ್ಮ ಜೀವನ ಉಜ್ವಲ ಆಗಲಿ ಎಂದು ದ್ವಿತಿಯ ಪಿಯಸಿ ಮಕ್ಕಳಿಗೆ ಸಚಿವರುಗೆ ಶುಭ ಕೋರಿದ್ದಾರೆ.

  • ಛತ್ತೀಸ್‍ಗಢದಲ್ಲಿ ಜೂನ್ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ- ಮನೆಯಲ್ಲಿಯೇ ಎಕ್ಸಾಂ

    ಛತ್ತೀಸ್‍ಗಢದಲ್ಲಿ ಜೂನ್ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ- ಮನೆಯಲ್ಲಿಯೇ ಎಕ್ಸಾಂ

    – 5 ದಿನಗಳೊಳಗಾಗಿ ಉತ್ತರ ಪತ್ರಿಕೆ ಹಿಂದಿರುಗಿಸಬೇಕು

    ರಾಯ್‍ಪುರ: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಜೂನ್ 1ರಿಂದ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದ್ದು, ‘ಎಕ್ಸಾಂ ಫ್ರಮ್ ಹೋಂ’ ಎಂಬ ಹೊಸ ಮಾದರಿಯಲ್ಲಿ ಪರೀಕ್ಷೆ ನಡೆಸಲು ತಯಾರಿ ನಡೆಸಿದೆ.

     

    ಕೊರೊನಾ ನಡುವೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸಲು ಈಗಾಗಲೇ ತಯಾರಿಯನ್ನು ನಡೆಸಲಾಗಿದ್ದು, ಜೂನ್ 1ರಿಂದ 5 ರವರೆಗೆ ವಿದ್ಯಾರ್ಥಿಗಳು ಆಯಾ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪ್ರಶ್ನೆ ಪತ್ರಿಕೆ ಮತ್ತು ಖಾಲಿ ಉತ್ತರ ಪತ್ರಿಕೆಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬಳಿಕ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿದ್ದು, ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಪಡೆದುಕೊಂಡ ಐದು ದಿನಗಳ ಒಳಗಾಗಿ ಪರೀಕ್ಷೆ ಬರೆದು ಆಯಾ ಪರೀಕ್ಷಾ ಕೇಂದ್ರಗಳಿಗೆ ಹಿಂದಿರುಗಿಸಿ ಕೊಡುವಂತೆ ಸೂಚನೆ ಹೊರಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಛತ್ತೀಸ್‍ಗಢದಲ್ಲಿ ಒಟ್ಟು 2.86 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಈಗಾಗಲೇ ಜೂನ್ 1ರ ಬಳಿಕ ಪರೀಕ್ಷೆ ನಡೆಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಛತ್ತೀಸ್‍ಗಢದ ಸಿಬಿಎಸ್‍ಇ ಕಾರ್ಯದರ್ಶಿ ವಿ.ಕೆ ಗೋಯಲ್ ತಿಳಿಸಿದ್ದಾರೆ.

    ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಪಡೆದುಕೊಂಡ ನಂತರ ಕಡ್ಡಾಯವಾಗಿ ಉತ್ತರ ಪತ್ರಿಕೆಯೊಂದಿಗೆ ಪಡೆದುಕೊಂಡ 5 ದಿನಗಳ ಒಳಗಾಗಿ ಪರೀಕ್ಷಾ ಕೇಂದ್ರಗಳಿಗೆ ಹಿಂದಿರುಗಿಸಬೇಕು. ಇದೀಗ ಒಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಜೂನ್ 1 ರಂದು ಪ್ರಶ್ನೆ ಪತ್ರಿಕೆಯನ್ನು ಪಡೆದುಕೊಂಡರೆ ಜೂನ್ 6 ಒಳಗಾಗಿ ಹಿಂದಿರುಗಿಸಬೇಕು ಇಲ್ಲವಾದವಲ್ಲಿ ಅಂತವರ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಛತ್ತೀಸ್‍ಗಢದಲ್ಲಿ ಈಗಾಗಲೇ ಕೊರೊನಾದಿಂದಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ.

  • ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುವುದು ಉಚಿತ – ಎಸ್.ಸುರೇಶ್ ಕುಮಾರ್

    ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುವುದು ಉಚಿತ – ಎಸ್.ಸುರೇಶ್ ಕುಮಾರ್

    – ಎಲ್ಲ ರಾಜ್ಯಗಳ ಶಿಕ್ಷಣ ಮಂತ್ರಿಗಳ ಸಭೆಯಲ್ಲಿ ಪ್ರತಿಪಾದನೆ

    ಬೆಂಗಳೂರು: ಪದವಿಪೂರ್ವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸುವುದು ಉಚಿತ ಎಂದು ಸಚಿವ ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

    ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯು ಆಯೋಜಿಸಿದ್ದ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಮಾತನಾಡಿದ ಸುರೇಶ್ ಕುಮಾರ್, ವೃತ್ತಿಪರ ಶಿಕ್ಷಣಕ್ಕೆ ಸನ್ನದ್ಧರಾಗುವ ಹಂತದಲ್ಲಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯಾವುದಾದರೂ ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕಾದ್ದು ಅನಿವಾರ್ಯ. ಕೋವಿಡ್ ಸಂಪೂರ್ಣವಾಗಿ ತಹಬಂದಿಗೆ ಬಂದ ನಂತರ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿಯಾದರೂ ಪರೀಕ್ಷೆಗಳನ್ನು ನಡೆಸುವುದು ಸಮರ್ಪಕವಾಗುತ್ತದೆ ಎಂದು ಪ್ರತಿಪಾದಿಸಿದರು.

    ಪ್ರಸ್ತುತ ಕೋವಿಡ್ ಪ್ರಸರಣವು ಎಲ್ಲೆಡೆ ತೀವ್ರವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಎರಡನೇ ಅಲೆ ತಹಬಂದಿಗೆ ಬಂದ ಕೂಡಲೇ 15-20 ದಿನಗಳ ಕಾಲಾವಕಾಶ ನೀಡಿ ಮುಂಚೆಯೇ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಲು ಸದ್ಯಕ್ಕೆ ತೀರ್ಮಾನಿಸಲಾಗಿದೆ. ಕೋವಿಡ್ ಕಾರಣಕ್ಕಾಗಿ ವಾರ್ಷಿಕ ಪರೀಕ್ಷೆಯನ್ನು ತೆಗೆದುಕೊಳ್ಳಲು ವಿಫಲರಾಗುವ ವಿದ್ಯಾರ್ಥಿಗಳಿಗೆ ಹೊಸದಾಗಿ ಇನ್ನೊಮ್ಮೆ ಪರೀಕ್ಷೆ ಬರೆಯಲು ಇದೇ ಸಾಲಿನಲ್ಲಿ ಅವಕಾಶ ಕಲ್ಪಿಸಲು ಸಹ ಕರ್ನಾಟಕ ಸರ್ಕಾರವು ಯೋಜಿಸಿದೆ ಎಂದರು.

    ಪರೀಕ್ಷಾ ಪ್ರಕ್ರಿಯೆ ಸರಳೀಕರಣಗೊಳ್ಳಬೇಕೆಂದು ಹಲವರ ಪ್ರತಿಪಾದನೆಯಾಗಿದೆ. ಸರಳೀಕೃತ ಮಾದರಿಯಲ್ಲಿ ಇಡೀ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಲು 45 ದಿನಗಳ ಕಾಲಾವಕಾಶ ಅಗತ್ಯವಿದೆ. ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯೂ ಕಡಿಮೆ ಅವಧಿಯ ಪರೀಕ್ಷೆಗಳನ್ನು ನಡೆಸುವ ಯೋಜನೆಯನ್ನು ಸಲಹಾತ್ಮಕವಾಗಿ ಹೇಳಿದೆ. ಕರ್ನಾಟಕ ರಾಜ್ಯವು ಕಳೆದ ಸಾಲಿನಲ್ಲಿ ಕೋವಿಡ್ ಸಂದರ್ಭದಲ್ಲಿಯೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನಡೆಸಿದ ಅನುಭವ ಹೊಂದಿದ್ದು, ಈ ಅನುಭವದ ಹಿನ್ನೆಲೆಯಲ್ಲಿ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಗಳನ್ನು ಸಮರ್ಥವಾಗಿ ಆಯೋಜಿಸುವುದು ಹೆಚ್ಚಿನ ಸಮಸ್ಯೆಯಾಗದಿದ್ದರೂ, ವಿದ್ಯಾರ್ಥಿಗಳ ಕಲಿಕೆ, ಪೋಷಕರ ಮನ:ಸ್ಥಿತಿ, ಕೇಂದ್ರ ಸರ್ಕಾರದ ಸಲಹೆಗಳು ಹಾಗೂ ಪ್ರಸ್ತುತ ಪೂರ್ವಸಿದ್ಧತಾ ಕಾರ್ಯಗಳನ್ನು ಸಮಗ್ರವಾಗಿ ಅವಲೋಕಿಸಿ, ಒಟ್ಟಾರೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

    ದ್ವಿತೀಯ ಪಿಯು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ. ಅತ್ಯಂತ ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಪೂರ್ವ ಸಿದ್ಧತೆಗಳನ್ನು ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಜುಲೈ ತಿಂಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾದಲ್ಲಿ ಆಗಸ್ಟ್ ತಿಂಗಳಲ್ಲಿ ಪರೀಕ್ಷಾ ಫಲಿತಾಂಶವನ್ನು ಘೋಷಿಸಲು ಸಾಧ್ಯವಾಗುತ್ತದೆ. ಹಾಗಾಗಿ ನೀಟ್/ಜೆಇಇ/ಸಿಇಟಿ/ಐಸಿಎಆರ್/ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಗಸ್ಟ್ ತಿಂಗಳ ಸೂಕ್ತ ದಿನಾಂಕಗಳಂದು ಆಯೋಜಿಸಬಹುದಾಗಿದೆಯೆಂದೂ ಸುರೇಶ್ ಕುಮಾರ್ ಸಲಹೆ ನೀಡಿದರು.

    ಕೇಂದ್ರ ಸರ್ಕಾರದ ಈ ರೀತಿಯ ಸಮಾಲೋಚನಾ ಸಭೆಯು ಅಭಿನಂದನಾರ್ಹ ಪ್ರಯತ್ನ. ಇಂತಹ ಪ್ರಯತ್ನಗಳು ಸಂಕಷ್ಟದ ಸಂದರ್ಭದಲ್ಲಿ ಇಡೀ ನಾಗರಿಕ ಸಮಾಜಕ್ಕೆ ವಿಶ್ವಾಸವನ್ನು ಮೂಡಿಸುವಂತಹದ್ದಾಗಿವೆ ಎಂದರು. ಸಭೆಯಲ್ಲಿ ವಿವಿಧ ರಾಜ್ಯಗಳ ಶಿಕ್ಷಣ ಸಚಿವರು ತಮ್ಮ ರಾಜ್ಯಗಳ ಸ್ಥಿತಿಗತಿಗಳನ್ನು ಗಮನಕ್ಕೆ ತಂದರು ಹಾಗೂ ಸಿ.ಬಿ.ಎಸ್.ಇ. ಮಂಡಳಿಯು ಸೇರಿದಂತೆ ಬಹುತೇಕ ರಾಜ್ಯಗಳು ಪರೀಕ್ಷೆ ನಡೆಸುವ ಪರವಾಗಿ ವಿಚಾರ ಮಂಡಿಸಿದರು. ಬಹುಪಾಲು ಸಚಿವರು ಪರೀಕ್ಷೆಗಳನ್ನು ನಡೆಸಲೇಬೇಕೆಂದು ಪ್ರತಿಪಾದಿಸಿದರು. ಸಭೆಯಲ್ಲಿ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ ಸಿಂಗ್, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಜವಳಿ ಸಚಿವೆ ಸ್ಮೃತಿ ಇರಾನಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸೇರಿದಂತೆ ಹಲವು ರಾಜ್ಯಗಳ ಶಿಕ್ಷಣ ಸಚಿವರು ಹಾಜರಿದ್ದರು.

  • ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ- ಯಾವ ದಿನ, ಯಾವ ಪರೀಕ್ಷೆ

    ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ- ಯಾವ ದಿನ, ಯಾವ ಪರೀಕ್ಷೆ

    ಬೆಂಗಳೂರು: 2020-21ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದ್ದು, ಮೇ 24 ರಿಂದ ಜೂನ್ 16ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ.

    ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಧ್ಯಮ ಹೇಳಿಕೆ ಮೂಲಕ ವೇಳಾಪಟ್ಟಿ ಪ್ರಕಟ ಮಾಡಿದ್ದಾರೆ. ಇತ್ತೀಚೆಗೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿ, ಆಕ್ಷೇಪಣೆ ಸಲ್ಲಿಸಲು ಒಂದು ವಾರ ಅವಕಾಶ ಕೊಡಲಾಗಿತ್ತು. ಆಕ್ಷೇಪಣೆ ಪರಿಶೀಲನೆ ಬಳಿಕ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿ ರಚನೆ ಮಾಡಲಾಗಿದೆ. ಮೇ 24 ರಿಂದ ಜೂನ್ 16ರ ವರೆಗೆ ದ್ವೀತಿಯ ಪಿಯಸಿ ಪರೀಕ್ಷೆಗಳು ನಡೆಯಲಿವೆ.

    ವೇಳಾಪಟ್ಟಿ ಹೀಗಿದೆ
    ಮೇ 24- ಇತಿಹಾಸ
    ಮೇ 25- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
    ಮೇ 26- ಭೂಗೋಳ ಶಾಸ್ತ್ರ
    ಮೇ 27- ಮನಃಶಾಸ್ತ್ರ, ಬೇಸಿಕ್ ಗಣಿತ
    ಮೇ 28- ತರ್ಕಶಾಸ್ತ್ರ
    ಮೇ 29- ಹಿಂದಿ
    ಮೇ 31- ಇಂಗ್ಲಿಷ್
    ಜೂನ್ 01- ಮಾಹಿತಿ ತಂತ್ರಜ್ಞಾನ, ಹೆಲ್ತ್‍ಕೇರ್, ವೆಲ್‍ನೆಸ್ ಬ್ಯೂಟಿ
    ಜೂನ್ 02- ರಾಜ್ಯಶಾಸ್ತ್ರ, ಗಣಕ ವಿಜ್ಞಾನ
    ಜೂನ್ 03- ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್
    ಜೂನ್ 04- ಅರ್ಥಶಾಸ್ತ್ರ
    ಜೂನ್ 05- ಗೃಹ ವಿಜ್ಞಾನ
    ಜೂನ್ 07- ವ್ಯವಹಾರ ಅಧ್ಯಯನ, ಭೌತಶಾಸ್ತ್ರ
    ಜೂನ್ 08- ಐಚ್ಛಿಕ ಕನ್ನಡ
    ಜೂನ್ 09- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್
    ಜೂನ್ 10- ಸಮಾಜ ಶಾಸ್ತ್ರ, ರಸಾಯನಶಾಸ್ತ್ರ
    ಜೂನ್ 11- ಉರ್ದು, ಸಂಸ್ಕೃತ
    ಜೂನ್ 12- ಸಂಖ್ಯಾಶಾಸ್ತ್ರ
    ಜೂನ್ 14- ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ ಶಾಸ್ತ್ರ
    ಜೂನ್ 15- ಭೂಗರ್ಭಶಾಸ್ತ್ರ
    ಜೂನ್ 16- ಕನ್ನಡ

  • ಕಲಾ ವಿಭಾಗ ಟಾಪರ್ಸ್ ಲಿಸ್ಟ್ – ಬಳ್ಳಾರಿಯ ಇಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಮೊದಲ ಮೂರು ಸ್ಥಾನ

    ಕಲಾ ವಿಭಾಗ ಟಾಪರ್ಸ್ ಲಿಸ್ಟ್ – ಬಳ್ಳಾರಿಯ ಇಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಮೊದಲ ಮೂರು ಸ್ಥಾನ

    ಬೆಂಗಳೂರು: ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ಪ್ರತಿ ವರ್ಷದಂತೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಇಂದು ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಮೊದಲ ಮೂರು ಸ್ಥಾನಗಳನ್ನು ಈ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

    ಕರೇಗೌಡರ ದಾಸನಗೌಡ 594 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದರೆ, 591 ಅಂಕ ಪಡೆದ ಸ್ವಾಮಿ ಎರಡನೇ ಸ್ಥಾನ ಪಡೆದಿದ್ದಾರೆ. ರಾಜ್ಯದಲ್ಲಿ ಈ ವರ್ಷ ಕಲಾ ವಿಭಾಗದ ಪರೀಕ್ಷೆಗೆ 1,98,875 ಮಂದಿ ಹಾಜರಾಗಿದ್ದು, 82,077 ಮಂದಿ ತೇರ್ಗಡೆಯಾಗುವ ಮೂಲಕ ಶೇ.41.27 ಫಲಿತಾಂಶ ದಾಖಲಾಗಿದೆ.

    ಮೂರು ವಿಭಾಗದದಲ್ಲಿ ಹೊಸಬರು ಒಟ್ಟು 5,56,267 ಮಂದಿ ಪರೀಕ್ಷೆ ಬರೆದಿದ್ದು, 3,84,947 ಮಂದಿ ತೇರ್ಗಡೆಯಾಗಿದ್ದಾರೆ. ಶೇ.69.20 ಫಲಿತಾಂಶ ಬಂದಿದೆ.

    ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
    1. ಕರೇಗೌಡರ ದಾಸನಗೌಡ 594 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ
    2. ಸ್ವಾಮಿ ಎಸ್.ಎಂ 591 ಅಂಕ, ಇಂದು ಪಿಯು ಕಾಲೇಜು, ಬಳ್ಳಾರಿ
    3. ಮಹಮ್ಮದ್ ರಫೀಕ್ ಹೆಚ್ 591 ಅಂಕ, ಇಂದು ಪಿಯು ಕಾಲೇಜು, ಬಳ್ಳಾರಿ
    4. ಗೀತಾ ದೊಗ್ಗಳ್ಳಿ 590 ಅಂಕ, ಎಸ್‍ಯುಜೆಎಂ ಪಿಯು ಕಾಲೇಜು ಹರಪ್ಪನಹಳ್ಳಿ ಬಳ್ಳಾರಿ
    4. ಶಮೀನ್ 590 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ


    5. ಪ್ರಿಯಾಂಕ ಎಂ 589 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ
    5. ಶರಣಬಸಪ್ಪಬಡಿಗೇರ್ 589 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ
    5. ಹಕ್ಕಿ ರೂಪ 589 ಅಂಕ, ಎಸ್‍ಎಸ್‍ಹೆಚ್ ಜೈನ್ ಪಿಯು ಕಾಲೇಜು ಹರಪ್ಪನಹಳ್ಳಿ ಬಳ್ಳಾರಿ
    5. ತೋಟದ ತೇಜಸ್ವಿನಿ 589 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ

  • ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಇಲ್ಲ- ಸುರೇಶ್ ಕುಮಾರ್ ಸ್ಪಷ್ಟನೆ

    ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಇಲ್ಲ- ಸುರೇಶ್ ಕುಮಾರ್ ಸ್ಪಷ್ಟನೆ

    – ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬೋರ್ಡ್ ಸಿದ್ಧ

    ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಬಂದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

    ವಿದ್ಯಾರ್ಥಿನಿಯೊಬ್ಬಳು ಕ್ವಾರಂಟೈನ್ ಮೊಹರು ಅಳಿಸಿ ಪರೀಕ್ಷೆಗೆ ಹಾಜರಾಗಿದ್ದಾಳೆಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇದು ಸತ್ಯಕ್ಕೆ ದೂರವಾಗಿದೆ. ಈಗಾಗಲೇ ವಿದ್ಯಾರ್ಥಿನಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. ಹಾಗಾಗಿ ಆಕೆ ಪರೀಕ್ಷೆ ಬರೆದ ಕೊಠಡಿಯಲ್ಲಿ ಹಾಜರಿದ್ದ ಯಾವುದೇ ಪರೀಕ್ಷಾರ್ಥಿಗಳು ಭಯಪಡಬೇಕಾದ ಅಗತ್ಯವಿಲ್ಲ. ಯಾವುದೇ ವಿದ್ಯಾರ್ಥಿ ಕ್ವಾರಂಟೈನ್‍ಗೆ ಒಳಗಾಗಬೇಕಾದ ಅಗತ್ಯವೂ ಇಲ್ಲ ಎಂದು ತಿಳಿಸಿದರು.

    ವಿದ್ಯಾರ್ಥಿನಿಯೂ ಸಹ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತವಾಗಿದ್ದಾಳೆ. ಆಕೆಯ ತಂದೆ ಈಗಾಗಲೇ ಕ್ವಾರಂಟೈನ್‍ನಲ್ಲಿದ್ದು, ಆರೋಗ್ಯ ಇಲಾಖೆಯ ನಿಗಾದಲ್ಲಿ ಸೂಕ್ತ ಚಿಕಿತ್ಸೆಗೊಳಗಾಗಿದ್ದಾರೆ. ಅವರೂ ಸಹ ಯಾವುದೇ ವಿಶೇಷ ಆರೋಗ್ಯದ ತೊಂದರೆಗೆ ಒಳಗಾಗಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಮಾಹಿರಿ ನೀಡಿದರು.

    ಇಡೀ ರಾಜ್ಯದಲ್ಲಿ ಪರೀಕ್ಷೆ ಬರೆದ 6 ಲಕ್ಷ ವಿದ್ಯಾರ್ಥಿಗಳ ಹಿತವನ್ನು ಕಾಯ್ದ ಶಿಕ್ಷಣ ಇಲಾಖೆಗೆ ಈ ವಿದ್ಯಾರ್ಥಿನಿಯೋರ್ವಳನ್ನು ಪರೀಕ್ಷಿಸದೇ ಬೇರೊಬ್ಬರಿಗೆ ತೊಂದರೆಯನ್ನುಂಟು ಮಾಡುವಂತಹ ಯಾವುದೇ ಉದ್ದೇಶವಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ನಮ್ಮ ಶಿಕ್ಷಣ ಇಲಾಖೆಯ ಆಸ್ತಿಯಾಗಿದ್ದು, ಅವರ ಹಿತವೇ ನಮ್ಮ ಪ್ರಮುಖ ಆದ್ಯತೆಯಾಗಿದೆ. ಜೂನ್ 18ರಂದು ಇಂಗ್ಲಿಷ್ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಸುಮಾರು ಆರು ಲಕ್ಷ ವಿದ್ಯಾರ್ಥಿಗಳು ಅತ್ಯಂತ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆದಿದ್ದಾರೆ. ಶಿಕ್ಷಣ ಇಲಾಖೆಯೊಂದಿಗೆ ಆರೋಗ್ಯ, ಸಾರಿಗೆ, ಗೃಹ ಇಲಾಖೆಗಳು ಸೇರಿದಂತೆ ರಾಜ್ಯದಲ್ಲಿ ಆಯಾ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆದಿವೆ ಎಂದು ಹೇಳಿದರು.

    ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಹಿತರಕ್ಷಣೆಯೇ ನಮ್ಮ ಮೊದಲ ಆದ್ಯತೆಯಾದ್ದರಿಂದ ಮಕ್ಕಳ ಸುರಕ್ಷತೆ ಹೆಚ್ಚು ಒತ್ತು ನೀಡಲಾಗಿದೆ. ಈ ಸಂಬಂಧ ಮಕ್ಕಳನ್ನು ಮನೆಯಿಂದ ಪರೀಕ್ಷಾ ಕೇಂದ್ರ ಹಾಗೆಯೇ ಪರೀಕ್ಷಾ ಕೇಂದ್ರದಿಂದ ಮನೆಯವರೆಗೂ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಕರೆತರಲಾಗಿತ್ತು ಎಂದು ಸಚಿವರು ವಿವರಿಸಿದರು.

    ರಾಜ್ಯದ 1016 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿವೆ. ಜಿಲ್ಲಾ ಕೇಂದ್ರದ 430, ತಾಲೂಕು ಕೇಂದ್ರಗಳಲ್ಲಿನ 328 ಮತ್ತು ಹೋಬಳಿ ಕೇಂದ್ರಗಳ 258 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿತ್ತು. ಈ ಪರೀಕ್ಷಾ ಕೇಂದ್ರಗಳಲ್ಲಿ 23,064 ಕೊಠಡಿಗಳನ್ನು ಮುಂಚೆ ಪರೀಕ್ಷೆಯನ್ನು ನಿರ್ವಹಿಸಲು ಗುರುತಿಸಿಕೊಳ್ಳಲಾಗಿತ್ತು. ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಹೆಚ್ಚುವರಿಯಾಗಿ 13,528 ಕೊಠಡಿಗಳನ್ನು ಸೇರ್ಪಡೆ ಮಾಡಿ 36,592 ಕೊಠಡಿಗಳನ್ನು ಬಳಸಿಕೊಂಡು ಪರೀಕ್ಷೆಗಳನ್ನು ನಿರ್ವಹಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಉಷ್ಣಾಂಶ ಪರೀಕ್ಷೆಯನ್ನು ನಡೆಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದೆ. ಇಡೀ ರಾಜ್ಯದಲ್ಲಿ ಪರೀಕ್ಷಾ ಸಂದರ್ಭದಂದು ಜ್ವರ, ನೆಗಡಿಯಂತಹ ಅನಾರೋಗ್ಯಕ್ಕೆ ಒಳಗಾದ 20 ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿತ್ತು. ಅದೇ ರೀತಿ ರಾಜ್ಯಾದ್ಯಂತ ಒಟ್ಟು 223 ವಿದ್ಯಾರ್ಥಿಗಳು ಕಂಟೈನ್‍ಮೆಂಟ್ ವಲಯಗಳಿಂದ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದರು.

    ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಸ್ಪಷ್ಟ ನಿರ್ದೇಶನಗಳನ್ನು ಪರೀಕ್ಷಾ ಪೂರ್ವದಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರುಗಳಿಗೆ ನೀಡಲಾಗಿದ್ದು, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಕ್ಕೆ ಪ್ರವೇಶಿಸಲು ಅನುಮತಿ ನೀಡಿರುವುದನ್ನು ಮಾಧ್ಯಮಗಳ ಮೂಲಕ ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಈಗಾಗಲೇ ಸೂಚನೆ ನೀಡಿದ್ದೇನೆ. ಅದೇ ರೀತಿ ಇಂಗ್ಲೀಷ್ ಭಾಷಾ ಪರೀಕ್ಷೆಯ ದಿನದಂದು ಕಂಡುಬಂದ ನ್ಯೂನತೆಗಳನ್ನು ಅವಕಾಶಗಳನ್ನಾಗಿ ಬಳಸಿಕೊಂದು ಜೂನ್ 25ರಿಂದ ಆರಂಭವಾಗಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಲ್ಲಿ ಈ ರೀತಿಯ ಯಾವುದೇ ಸಮಸ್ಯೆಗಳು ಎದುರಾಗದ ರೀತಿಯಲ್ಲಿ ಎಲ್ಲ ಕ್ರಮಗಳನ್ನೂ ಅನುಸರಿಸಲು ಈಗಾಗಲೇ ಇಲಾಖಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿರುವ ಯಾವುದೇ ವಿದ್ಯಾರ್ಥಿಯ ಪೋಷಕರು, ಜೊತೆಯಲ್ಲಿ ವಾಸಿಸುವ ಹತ್ತಿರದ ಸಂಬಂಧಿಕರು ಕೊರೊನಾ ಹಿನ್ನೆಲೆಯಲ್ಲಿ ಕ್ವಾರಂಟೈನ್‍ಗೆ ಒಳಗಾಗಿದ್ದಲ್ಲಿ ಅಂತಹ ಪ್ರಕರಣಗಳನ್ನು ಪೂರ್ವಭಾವಿಯಾಗಿ ಪತ್ತೆ ಹಚ್ಚಲಾಗುತ್ತದೆ. ಈ ಮೂಲಕ ನಮ್ಮ ಇಲಾಖೆಯ ದಾಖಲೆ/ದತ್ತಾಂಶಗಳೊಂದಿಗೆ ತಾಳೆ ಮಾಡಿ ಅಂತಹ ವಿದ್ಯಾರ್ಥಿಗಳಿಗೆ ಈ ಬಾರಿ ಪರೀಕ್ಷೆಗೆ ಹಾಜರಾಗಲು ವಿನಾಯ್ತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿರುತ್ತೇನೆ. ಜೊತೆಗೆ ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಹಾಜರಾಗಲು ಅವಕಾಶ ದೊರಕಿಸುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

    ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಘನ ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ನಡೆಯಲಿವೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ 200 ಮಕ್ಕಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೇಂದ್ರಗಳನ್ನು ಪರೀಕ್ಷಾ ಕೇಂದ್ರದ ಮುಖ್ಯದ್ವಾರದಲ್ಲಿ ಸ್ಥಾಪಿಸಲಾಗುತ್ತದೆ. ಪ್ರತಿ ವಿದ್ಯಾರ್ಥಿ ತಲಾ 2 ಮಾಸ್ಕ್ ಗಳನ್ನು ಪಡೆಯಲಿದ್ದಾರೆ. ಪ್ರತಿ ತಾಲೂಕಿನ ಕೇಂದ್ರ ಸ್ಥಾನ ಮತ್ತು ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಕನಿಷ್ಠ 2 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳಾಗಿ ಜಾರಿಯಲ್ಲಿಡಲಾಗುತ್ತದೆ ಎಂದು ವಿವರಿಸಿದ ಸಚಿವರು, ಈಗಾಗಲೇ ಹೇಳಿದಂತೆ ರಾಜ್ಯದ ವಿವಿಧ ಇಲಾಖೆಗಳು ಸಂಪೂರ್ಣ ಸಮನ್ವಯದೊಂದಿಗೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಮಾಜಕ್ಕೆ ಒಂದು ಭರವಸೆ ನೀಡುವ ನಿಟ್ಟಿನಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ನಿರ್ವಹಿಲಿವೆ. ಈ ಬಗ್ಗೆ ಯಾವ ಅಪನಂಬಿಕೆಯೂ ಬೇಡ ಎಂದು ತಿಳಿಸಿದರು.

    ಪರೀಕ್ಷೆಗೆ ಬೋರ್ಡ್ ಸಿದ್ಧತೆ:
    > ಪರೀಕ್ಷಾ ಕೇಂದ್ರದಲ್ಲಿ ಪ್ರತಿ ವಿದ್ಯಾರ್ಥಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತೆ.
    > ಪ್ರತಿ ವಿದ್ಯಾರ್ಥಿಗೆ ಎರಡು ಮಾಸ್ಕ್ ನೀಡಲಾಗುತ್ತೆ.
    > ಪರೀಕ್ಷೆ ಮುಗಿದ ಮೇಲೆ ಕೊಠಡಿ ಸ್ಯಾನಿಟೈಸ್ ಮಾಡಲಾಗುತ್ತೆ.
    > ಪ್ರತಿ ಕೊಠಡಿಗೆ 18 -20 ವಿದ್ಯಾರ್ಥಿಗಳನ್ನ ಮಾತ್ರ ಕೂರಿಸುತ್ತೇವೆ.
    > ಪ್ರತಿ ವಿದ್ಯಾರ್ಥಿ ಮತ್ತು ಪ್ರತಿ ಡೆಸ್ಕ್ ಗೆ 3 ರಿಂದ ಮೂರೂವರೆ ಅಡಿ ಅಂತರ ಇರುವಂತೆ ವ್ಯವಸ್ಥೆ ಮಾಡ್ತೀವಿ.
    > ಪ್ರತಿ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ನಿಯೋಜನೆ.
    > ಆರೋಗ್ಯದಲ್ಲಿ ವ್ಯತ್ಯಾಸ ಇರೋ ವಿದ್ಯಾರ್ಥಿಗಳಿಗೆ ಪತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.
    > ಕಂಟೈನ್ಮೆಂಟ್ ಝೋನ್ ನಲ್ಲಿ ಪರೀಕ್ಷೆ ಇಲ್ಲ.
    > ಪರೀಕ್ಷೆಗೆ ಮೂರು ದಿನ ಮುಂಚೆ ಕಂಟೈನ್ಮೆಂಟ್ ಝೋನ್ ಕಂಡು ಬಂದ್ರೆ ಅ ಕೇಂದ್ರ ಬದಲಾವಣೆ.
    > ಈ ಪರೀಕ್ಷೆ ಬರೆಯಲು ಆಗದ ವಿದ್ಯಾರ್ಥಿಗಳು ಆತಂಕ ಪಡೋದು ಬೇಡ. ಅವ್ರಿಗೆ ಪೂರಕ ಪರೀಕ್ಷೆಯಲ್ಲಿ ರೆಗ್ಯುಲರ್ ವಿದ್ಯಾರ್ಥಿಗಳಾಗಿ ಅವಕಾಶ.

  • 27,002 ವಿದ್ಯಾರ್ಥಿಗಳು ಗೈರು – ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಇಂಗ್ಲಿಷ್‌ ಪರೀಕ್ಷೆ ಬರೆದವರು ಹೆಚ್ಚು

    27,002 ವಿದ್ಯಾರ್ಥಿಗಳು ಗೈರು – ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಇಂಗ್ಲಿಷ್‌ ಪರೀಕ್ಷೆ ಬರೆದವರು ಹೆಚ್ಚು

    – ಆತಂಕವಿಲ್ಲದೇ ಸುರಕ್ಷಾ ಕ್ರಮಗಳೊಂದಿಗೆ ಪರೀಕ್ಷೆ ಯಶಸ್ವಿ
    – ಪೋಷಕರು ಆತಂಕ ಪಡುವ ಅಗತ್ಯವಿಲ್ಲ- ಸುರೇಶ್‌ಕುಮಾರ್‌
    – ಜುಲೈ ಮೊದಲ ವಾರದಲ್ಲಿ ಫಲಿತಾಂಶಕ್ಕೆ ಚಿಂತನೆ

    ಬೆಂಗಳೂರು: ದ್ವಿತೀಯ ಪಿಯುಸಿ ಇಂಗ್ಲಿಷ್ ಪತ್ರಿಕೆಯ ಪರೀಕ್ಷೆ ರಾಜ್ಯದೆಲ್ಲೆಡೆ ಯಾವುದೇ ತೊಂದರೆಗಳಿಲ್ಲದೇ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಯಶಸ್ವಿಯಾಗಿ ನಡೆದಿದೆ.

    ಇಂಗ್ಲಿಷ್ ಪರೀಕ್ಷೆಗೆ ಕಲಾ ವಿಭಾಗದಿಂದ 172350, ವಾಣಿಜ್ಯ 234926, ವಿಜ್ಞಾನ 188721 ಒಟ್ಟು 5,96,300 ಹಾಜರಾಗಬೇಕಿದ್ದು, ಇಂದು ರಾಜ್ಯಾದ್ಯಂತ 32 ಜಿಲ್ಲೆಗಳಲ್ಲಿ 5,72,665 ವಿದ್ಯಾರ್ಥಿಗಳು ಬರೆದರು. 27,002 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕಲಬುರ್ಗಿ ಜಿಲ್ಲೆಯಲ್ಲಿ ಅತಿ ಗರಿಷ್ಠ ಸಂಖ್ಯೆಯ 1748 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕೊಡಗು ಜಿಲ್ಲೆಗಳಲ್ಲಿ ಕನಿಷ್ಠ 99 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಗೈರು ಹಾಜರಿಯ ಕಾರಣವನ್ನು ಗುರುತಿಸಿ ಮುಂದೆ ಅವರು ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ಅಂತಹ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಹಾಜರಾಗಬಹುದಾಗಿದೆ. ಇದರಿಂದ ಯಾವುದೇ ವಿದ್ಯಾಪೋಷಕರು ಆತಂಕ ಪಡಬೇಕಾಗಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯು ಪರೀಕ್ಷೆಗೆ 27,022 ವಿದ್ಯಾರ್ಥಿಗಳು ಗೈರು- ಯಾವ ಜಿಲ್ಲೆಯಲ್ಲಿ ಎಷ್ಟು?

    ವಿಶೇಷವಾಗಿ ಕಳೆದ ವರ್ಷ ನಡೆದ ಇಂಗ್ಲಿಷ್ ಪರೀಕ್ಷೆಗೆ 6,71,635 ವಿದ್ಯಾರ್ಥಿಗಳು ಹಾಜರಾಗಬೇಕಿದ್ದು, 6,34,993 ವಿದ್ಯಾರ್ಥಿಗಳು ಹಾಜರಾಗಿದ್ದರು. 36,642 ವಿದ್ಯಾರ್ಥಿಗಳು ಕಳೆದ ವರ್ಷ ಇಂಗ್ಲಿಷ್ ಪರೀಕ್ಷೆಗೆ ಗೈರು ಹಾಜರಾಗಿದ್ದರು. ಹಾಗಾಗಿ ಕಳೆದ ಸಾಲಿನ ಹಾಜರಾತಿ ಶೇ. 94.54 ಇದ್ದು ಈ ಬಾರಿ ಶೇ. 96.03 ಇದ್ದು, ಕಳೆದ ಬಾರಿಗಿಂತ ಶೇ. 2 ರಷ್ಟು ಹೆಚ್ಚು ವಿದ್ಯಾರ್ಥಿಗಳು ಇಂತಹ ಸಾಮಾಜಿಕ ಪರಿಸ್ಥಿತಿಯಲ್ಲಿಯೂ ಪರೀಕ್ಷೆಗೆ ಹಾಜರಾಗಿರುವುದು ಈ ಸಂದರ್ಭದಲ್ಲಿ ನಮ್ಮ ಪರೀಕ್ಷಾ ವ್ಯವಸ್ಥೆ ಕುರಿತಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಇಟ್ಟಿರುವ ಭರವಸೆಯಾಗಿದ್ದು, ಇದು ನಮಗೆ ಅತ್ಯಂತ ಖುಷಿಯ ಸಂಗತಿಯಾಗಿದೆ ಎಂದು ಅವರು ಗುರುವಾರ ಪರೀಕ್ಷೆಯ ಅವಧಿ ಮುಗಿದ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ಜುಲೈನಲ್ಲಿ ಫಲಿತಾಂಶ:
    ಇದೇ ಸಂದರ್ಭದಲ್ಲಿ. 39 ವಿಷಯಗಳ ಪೈಕಿ 26 ವಿಷಯಗಳ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಾಳೆಯಿಂದ ಪುನರ್ ಪ್ರಾರಂಭವಾಗಲಿರುವ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಉಪನ್ಯಾಸಕ‌ ವೃಂದ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ಜುಲೈ ಮೊದಲ ವಾರದಲ್ಲಿ ಫಲಿತಾಂಶ ನೀಡಲು ಚಿಂತನೆ ನಡೆದಿದೆ. ಇಂಗ್ಲಿಷ್ ಭಾಷಾ ಉತ್ತರ ಪತ್ರಿಕೆಗಳ ಕುರಿತಂತೆ ವಿಕೇಂದ್ರೀಕೃತ ಮೌಲ್ಯಮಾಪನ ವ್ಯವಸ್ಥೆ ಜಾರಿ ಮಾಡಲಾಗುವುದೆಂದರು.

    ಹಲವಾರು ಮಂದಿ ತಮಗಾಗಿ ವಿಶೇಷವಾಗಿ ನಿಗದಿಪಡಿಸಿದ್ದ ಖಾಸಗಿ ಇಲ್ಲವೇ ಸರ್ಕಾರಿ ಬಸ್ ಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬಂದರು. ಬಸ್ ಸೌಲಭ್ಯವಿದ್ದ ಮಾರ್ಗಗಳ ವಿದ್ಯಾರ್ಥಿಗಳು ಮಾರ್ಗ ದ ಬಸ್ ಗಳಲ್ಲಿ ಬಂದರು. ಯಾವುದೇ ಪರೀಕ್ಷಾ ಕೇಂದ್ರಗಳಿಗೆ ಬಸ್ ಸೌಲಭ್ಯ ದೊರಕದೇ ಯಾವೊಬ್ಬ ವಿದ್ಯಾರ್ಥಿಗೂ ಯಾವುದೇ ಸಮಸ್ಯೆಯಾಗಿಲ್ಲ. ಆಂಗ್ಲಭಾಷಾ ವಿಷಯವನ್ನು ಬರೆಯಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸಾರಿಗೆ ಇಲಾಖೆಯಿಂದ ಪರೀಕ್ಷಾ ಕೇಂದ್ರಗಳಿಗೆ ಹೋಗಿ ಬರಲು ತಮ್ಮ ಪ್ರವೇಶ ಪತ್ರವನ್ನು ತೋರಿಸಿ ಉಚಿತವಾಗಿ ಪ್ರಯಾಣ ಬೆಳೆಸಲು ಸಾರಿಗೆ ಇಲಾಯಿಂದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.

    ರಾಜ್ಯದಲ್ಲಿ ಒಟ್ಟು 1016 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಜಿಲ್ಲಾ ಕೇಂದ್ರಗಳಲ್ಲಿ 430 ಪರೀಕ್ಷಾ ಕೇಂದ್ರಗಳು, ತಾಲೂಕು ಕೇಂದ್ರಗಳಲ್ಲಿ 328 ಹಾಗೂ ಹೋಬಳಿ ಕೇಂದ್ರಗಳಲ್ಲಿ 258 ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸಿವೆ. ಜಿಲ್ಲೆಗಳಿಂದ ಬೇರೆ ಜಿಲ್ಲೆಗಳಿಗೆ 18529 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಂಡು ಬದಲಾದ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಹೊರ ರಾಜ್ಯಗಳಿಂದ 1889 ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸಿ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಈ ವಿದ್ಯಾರ್ಥಿಗಳು ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬಂದು ಆಂಗ್ಲಭಾಷಾ ವಿಷಯಕ್ಕೆ ಪರೀಕ್ಷೆ ಬರೆಯುವರಿಗೆ ಅವರು ಆಯ್ಕೆ ಮಾಡಿಕೊಂಡ ಜಿಲ್ಲಾ ವ್ಯಾಪ್ತಿಯಲ್ಲಿ ವಿಶೇಷವಾಗಿ ಗಡಿ ಭಾಗದ ಜಿಲ್ಲೆಗಳಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಡಲಾಗಿತ್ತು. ಇದಕ್ಕಾಗಿ ಸದರಿ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ಕರ್ನಾಟಕಕ್ಕೆ ಬರಲು ವಿಶೇಷ ಪಾಸ್ ಗಳನ್ನು ನೀಡಲಾಗಿತ್ತು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಹೆಚ್ಚುವರಿ ಕೊಠಡಿಗಳು-ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ:
    ಕೋವಿಡ್-19 ಹಿನ್ನೆಲೆಯಲ್ಲಿ ಈ 1016 ಪರೀಕ್ಷಾ ಕೇಂದ್ರಗಳಲ್ಲಿ ಈ ಹಿಂದೆ ಇದ್ದ 23,064 ಕೊಠಡಿಗಳನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಹೆಚ್ಚುವರಿಯಾಗಿ 13,528 ಕೊಠಡಿಗಳನ್ನು ಸೇರ್ಪಡೆ ಮಾಡಿ 36,592 ಕೊಠಡಿಗಳನ್ನು ಬಳಸಿ ಪರೀಕ್ಷೆಗಳನ್ನು ಸೂಕ್ತ ಸಾಮಾಜಿಕ ಅಂತರ ಕಾಯ್ದುಕೊಂಡು ನಿರ್ವಹಿಸಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಹಾಗೂ ಹೆಚ್ಚುವರಿ ಬ್ಲಾಕ್ ಗಳನ್ನು ಮತ್ತು ಕಟ್ಟಡದ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಜ್ ಮಾಡಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ತುರ್ತು ಸಂದರ್ಭಗಳಿಗಾಗಿ ಮಾತ್ರ ಬೇಸಿಕ್ ಮೊಬೈಲ್ ಸೆಟ್(ಕ್ಯಾಮರಾ ಇಲ್ಲದಿರುವ)ನ್ನು ಬಳಸಲು ಅನುಮತಿ ನೀಡಿದ್ದು, ಉಳಿದಂತೆ ಯಾರೂ ಮೊಬೈಲ್‌ ಗಳನ್ನು ತೆಗೆದುಕೊಂಡು ಹೋಗದಂತೆ ನಿಷೇಧಿಸಲಾಗಿತ್ತು. ಅಂತೆಯೇ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವಾಗಿ ಸ್ಥಳೀಯ ಜಿಲ್ಲಾಡಳಿತ ಘೋಷಣೆ ಮಾಡಲಾಗಿತ್ತು. ಈ ಕಾರ್ಯಕ್ಕಾಗಿ ಅಗತ್ಯವಿರುವ ಕಡೆ ಹೆಚ್ಚುವರಿ ಸಿಬ್ಬಂದಿ ಬಳಸಿಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಕೊಠಡಿಗೆ ಹಾಜರಾಗುವ ಮುನ್ನ ಹಾಗೂ ಪರೀಕ್ಷೆ ನಂತರ ನಿರ್ಗಮಿಸುವ ಸಂದರ್ಭದಲ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ಕುರಿತಂತೆ ಎಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಸಚಿವರು ವಿವರಿಸಿದರು.

    ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯು ಪ್ರಾರಂಭವಾಗುವುದಕ್ಕಿಂತ ಪೂರ್ವದಲ್ಲಿ ಥರ್ಮಲ್ ಸ್ಕ್ಯಾನರ್‌ಗಳ  ಮೂಲಕ ವಿದ್ಯಾರ್ಥಿಗಳ ಉಷ್ಣಾಂಶ ಪರೀಕ್ಷೆ ನಡೆಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಕಂಟೈನ್ಮೆಂಟ್ ವಲಯಗಳಿಂದ ಹಾಜರಾಗುವ ವಿದ್ಯಾರ್ಥಿಗಳಿಗೆ ಒಂದು ವಿಶೇಷ ಕೊಠಡಿ ಹಾಗೂ ಇತರೆ ಅನಾರೋಗ್ಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ಒಂದು ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಕಂಟೈನ್ಮೆಂಟ್ ವಲಯಗಳಿಂದ ರಾಜ್ಯಾದ್ಯಂತ ಒಟ್ಟು 223 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲ ವಿದ್ಯಾರ್ಥಿಗಳು ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಲಭ್ಯವಿದ್ದ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಜ್ವರ, ನೆಗಡಿಯಂತಹ ಇತರೆ ಅನಾರೋಗ್ಯಕ್ಕೆ ಒಳಗಾದ ರಾಜ್ಯದ ವಿವಿಧೆಡೆಯ 20 ವಿದ್ಯಾರ್ಥಿಗಳು ತಮಗೆ ಮೀಸಲಾದ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆದಿದ್ದಾರೆಂದು ಸಚಿವರು ತಿಳಿಸಿದರು.

    ಈ ದಿನ ನಡೆದ ಇಂಗ್ಲಿಷ್ ಭಾಷಾ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿ ನಕಲು ಮಾಡಿ ಸಿಕ್ಕಿಬಿದ್ದ ನಿದರ್ಶನಗಳಿಲ್ಲ. ಯಾವುದೇ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯೂ ಆಗಿಲ್ಲ ಎಂದು ಅವರು ಹೇಳಿದರು.

    ಈ ಪರೀಕ್ಷೆ ನಮಗೆ ಜೂ. 25ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಂದು ಲಿಟ್ಮಸ್ ಟೆಸ್ಟ್ ಇದ್ದಂತಾಗಿತ್ತು. ಇದೇ ರೀತಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಸಹ ಆರೋಗ್ಯಕರ ವಾತಾವರಣದಲ್ಲಿ ನಡೆಯಲಿದೆ. ಆರೋಗ್ಯ, ಸಾರಿಗೆ, ಗೃಹ ಇಲಾಖೆ ಸೇರಿದಂತೆ ಆಯಾ ಭಾಗದ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ನಡೆದ ಪರೀಕ್ಷೆಯಲ್ಲಿ ಮಕ್ಕಳು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆದಿದ್ದಾರೆಂದು ಸಚಿವರು ತಿಳಿಸಿದರು.

    ಸಾಮಾಜಿಕ‌ಅಂತರ ಕಾಯ್ದುಕೊಳ್ಳುವಲ್ಲಿ ವಿಫಲರಾಗಿರುವ ಕೆಲ ಪರೀಕ್ಷಾ ಕೇಂದ್ರಗಳ ಸಿಬ್ಬಂದಿಯ ಮೇಲೆ ಕ್ರಮ ವಹಿಸಲು ಸೂಚಿಸಲಾಗಿದೆಯೆಂದರು. ಪತ್ರಿಕಾಗೋಷ್ಠಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಎಂ.ಟಿ. ರೇಜು ಹಾಜರಿದ್ದರು.

  • ದ್ವೀತಿಯ ಪಿಯುಸಿ ಉತ್ತರ ಪತ್ರಿಕೆ ಪುಟಗಳ ಸಂಖ್ಯೆ ಹೆಚ್ಚಳ

    ದ್ವೀತಿಯ ಪಿಯುಸಿ ಉತ್ತರ ಪತ್ರಿಕೆ ಪುಟಗಳ ಸಂಖ್ಯೆ ಹೆಚ್ಚಳ

    – ಎಕ್ಸಾಂ ಹಾಲ್‍ನಲ್ಲಿ ಸಿಬ್ಬಂದಿಗೂ ಮೊಬೈಲ್ ನಿಷೇಧ

    ಬೆಂಗಳೂರು: ದ್ವೀತಿಯ ಪಿಯುಸಿ ಪರೀಕ್ಷೆಗೆ ಸಿದ್ಧತೆಗಳು ಪ್ರಾರಂಭವಾಗಿದೆ. ಮಾರ್ಚ್ ನಲ್ಲಿ ನಡೆಯಲಿರುವ ಪರೀಕ್ಷೆ ಸುಸೂತ್ರವಾಗಿ ನಡೆಯಲು ಖುದ್ದು ಶಿಕ್ಷಣ ಸಚಿವರು ಅಖಾಡಕ್ಕೆ ಇಳಿದಿದ್ದಾರೆ. ಸ್ವತಃ ಸಚಿವ ಸುರೇಶ್ ಕುಮಾರ್ ಪರೀಕ್ಷೆ ಸಿದ್ಧತೆ ಬಗ್ಗೆ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಈ ಬಾರಿಯ ಪರೀಕ್ಷೆ ಹತ್ತು-ಹಲವು ವಿಶೇಷಗಳಿಗೆ, ಹೊಸ ನಿಯಮಗಳಿಗೆ ಸಾಕ್ಷಿಯಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಲುವಾಗಿ ದ್ವೀತಿಯ ಪಿಯುಸಿ ಉತ್ತರ ಪತ್ರಿಕೆಯ ಪುಟಗಳ ಸಂಖ್ಯೆಯನ್ನ ಹೆಚ್ಚಳ ಮಾಡಲಾಗಿದೆ. ಇಷ್ಟು ದಿನ 24 ಪುಟಗಳ ಬುಕ್ ಲೆಟ್‍ನ್ನ ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿತ್ತು. ಇದರಿಂದ ಮಕ್ಕಳು ಹೆಚ್ಚುವರಿ ಉತ್ತರ ಪತ್ರಿಕೆಗೆ ಬೇಡಿಕೆ ಇಡುತ್ತಿದ್ದರು. ಈ ಸಮಸ್ಯೆಯನ್ನ ನಿವಾರಿಸಲು ಈ ವರ್ಷದಿಂದ 40 ಪುಟಗಳ ಉತ್ತರ ಪತ್ರಿಕೆ ನೀಡಲು ಪಿಯುಸಿ ಬೋರ್ಡ್ ನಿರ್ಧಾರ ಮಾಡಿದೆ.

    ಇಷ್ಟೇ ಅಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್ ನಿಷೇಧ ಮಾಡಲಾಗಿತ್ತು. ಆದರೆ ಈ ಬಾರಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗೋ ಎಲ್ಲಾ ಸಿಬ್ಬಂದಿಗೂ ಮೊಬೈಲ್ ಫೋನ್ ನಿಷೇಧ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಲೀಕ್ ಸಮಸ್ಯೆಯನ್ನು ತಡೆಯಲು ಎಂದಿನಂತೆ ಈ ವರ್ಷವೂ ಎಕ್ಸಾಂಮಿನೇಷನ್ ಸೆಕ್ಯೂರ್ ಸಿಸ್ಟಮ್ ಅಳವಡಿಕೆ ಮಾಡಲಾಗುತ್ತಿದೆ. ಫೆಬ್ರವರಿಯಲ್ಲೆ ಪ್ರಶ್ನೆ ಪತ್ರಿಕೆ ಖಜಾನೆಗಳ ಭದ್ರತೆ ಕೆಲಸ ಪ್ರಾರಂಭವಾಗಲಿದೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಖಜಾನೆಯ ನಿರ್ವಹಣೆ ಮಾಡುವ ಜವಾಬ್ದಾರಿ ನೀಡಲಾಗಿದೆ.

    ಪರೀಕ್ಷಾ ಕೇಂದ್ರಗಳಲ್ಲಿ ತಕ್ಷಣ ಮಾಹಿತಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ, ಪರೀಕ್ಷಾ ಕೇಂದ್ರದ ಸಿಬ್ಬಂದಿ, ಉತ್ತರ ಪತ್ರಿಕೆ ರವಾನೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ.

  • ವಿಜ್ಞಾನ ವಿಭಾಗದಲ್ಲಿ ಬೆಂಗ್ಳೂರಿನ ರಜತ್ ಫಸ್ಟ್ – ಟಾಪ್ 10 ಪಟ್ಟಿ ಇಲ್ಲಿದೆ

    ವಿಜ್ಞಾನ ವಿಭಾಗದಲ್ಲಿ ಬೆಂಗ್ಳೂರಿನ ರಜತ್ ಫಸ್ಟ್ – ಟಾಪ್ 10 ಪಟ್ಟಿ ಇಲ್ಲಿದೆ

    ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಎಂದಿನಂತೆ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ. ಪಿಯು ಬೋರ್ಡ್ ನಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಅವರು ಫಲಿತಾಂಶವನ್ನು ಪ್ರಕಟಿಸಿದರು.

    ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಒಟ್ಟು 2,17,766 ಮಂದಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 1,44,983 ಮಂದಿ ತೇರ್ಗಡೆಯಾಗಿ ಶೇ.66.58 ರಷ್ಟು ಫಲಿತಾಂಶ ದಾಖಲಾಗಿದೆ. ಬೆಂಗಳೂರಿನ ಎಸ್. ರಜತ್ ಕಶ್ಯಪ್ 594 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

                                                      ರಯಿಸಾ

    ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಟಾಪ್ 10 ವಿದ್ಯಾರ್ಥಿಗಳು

    1. ಎಸ್. ರಜತ್ ಕಶ್ಯಪ್ – 594 – ಕುಮಾರನ್ಸ್ ಪಿಯು ಕಾಲೇಜು, ಬೆಂಗಳೂರು
    2. ದಿವ್ಯಾ ಕೆ – 593 – ವಿದ್ಯಾಮಂದಿರ ಪಿಯು ಕಾಲೇಜು, ಬೆಂಗಳೂರು
    3. ಪ್ರಿಯಾ ನಾಯಕ್ – 593 – ಆರ್ ವಿ ಪಿಯು ಕಾಲೇಜು, ಬೆಂಗಳೂರು
    4. ರಯಿಸಾ – 592 – ಎಸ್‍ಆರ್ ಪಿಯು ಕಾಲೇಜು, ಉಡುಪಿ
    5. ಡಿ. ನಿಕೇತನ್ ಗೌಡ – 592 – ಮಾಸ್ಟರ್ಸ್ ಪಿಯು ಕಾಲೇಜು, ಹಾಸನ

                                                     ಸ್ವಾತಿ

    6. ಜಾಗೃತಿ. ಜೆ. ನಾಯಕ್ – 592 – ವಿವೇಕಾನಂದ ಪಿಯು ಕಾಲೇಜು, ಪುತ್ತೂರು
    7. ಸ್ವಾತಿ – 592 – ಮಹತ್ಮಾ ಗಾಂಧಿ ಮೆಮೋ ಪಿಯು ಕಾಲೇಜು, ಉಡುಪಿ
    8. ಸೈಶ್ ಶ್ರೀಕಾಂತ್ ಮೆಂದ್ಕೆ – 591 – ಗೋವಿಂದರಾಮ್ ಸೆಕ್ಸಾರಿಯಾ ಪಿಯು ಕಾಲೇಜು, ಬೆಳಗಾವಿ
    9. ಪಲ್ಲವಿ. ಜಿ – 591 – ಎಎಸ್‍ಸಿ ಪಿಯು ಕಾಲೇಜು, ಬೆಂಗಳೂರು
    10. ಪ್ರಥಮ್. ಎನ್ – 591- ಶಾರದಾ ಪಿಯುಸಿ ಕಾಲೇಜು, ಮಂಗಳೂರು

  • ಸೋಮವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

    ಸೋಮವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

    ಬೆಂಗಳೂರು: ಸೋಮವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 6.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

    ಮಾರ್ಚ್ 1 ರಿಂದ 17 ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿತ್ತು. ಸದ್ಯ ಫಲಿತಾಂಶಕ್ಕೆ ಪಿಯುಸಿ ಬೋರ್ಡ್ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಫಲಿತಾಂಶ ಪ್ರಕಟ ಮಾಡಲಿದ್ದಾರೆ.

    ಸೋಮಾವರ ಬೆಳಗ್ಗೆ 11 ಗಂಟೆಗೆ ಪಿಯುಸಿ ಬೋರ್ಡ್ ನಲ್ಲಿ ಸುದ್ದಿಗೋಷ್ಠಿ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಮಧ್ಯಾಹ್ನ 12 ಗಂಟೆಗೆ ವೆಬ್ ಸೈಟ್‍ನಲ್ಲಿ ಫಲಿತಾಂಶ ಹೊರಬರಲಿದ್ದು, ಮಂಗಳವಾರ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

    Pue.kar.nic. ವೆಬ್ ಸೈಟ್‍ನಲ್ಲಿ ಫಲಿತಾಂಶ ವಿವರ ಲಭ್ಯವಾಗಲಿದೆ.