Tag: 2025

  • ಕನಸಿಗೆ ಕತ್ತರಿ ಬಿದ್ದರೂ ಹುಲ್ಲಿನಂತೆ ಬೆಳೆಯಬೇಕು!

    ಕನಸಿಗೆ ಕತ್ತರಿ ಬಿದ್ದರೂ ಹುಲ್ಲಿನಂತೆ ಬೆಳೆಯಬೇಕು!

    – ಬೆಳೆದೆ ಬೆಳೆಯುತ್ತೇನೆ ಎಂಬ ಛಲ ಇರಲಿ 

    2024 ಹೋಗಿ 2025 ಬಂದಿದೆ. ಹೊಸ ವರ್ಷದ (New Year) ಆರಂಭದಲ್ಲಿ ಹಲವು ಮಂದಿ ಈ ವರ್ಷ ನಾನು ಈ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ಸಂಕಲ್ಪ ಕೈಗೊಳ್ಳುತ್ತಾರೆ. ನಾನಾ ರೀತಿಯ ರೆಸಲ್ಯೂಷನ್‌ ಹಾಕಿಕೊಳ್ಳುತ್ತಾರೆ. ಈ ವರ್ಷ ಕನಸಿನ ಯೋಜನೆಯನ್ನು (Dream Project) ಪೂರ್ಣಗೊಳಿಸುತ್ತೇನೆ, ಮತ್ತೊಂದು ಉದ್ಯಮವನ್ನ ಆರಂಭಿಸುತ್ತೇನೆ, ವೃತ್ತಿಗೆ ಬೇಕಾಗಿರುವ ಕೌಶಲ್ಯವನ್ನು ಆನ್‌ಲೈನ್‌ನಲ್ಲಿ ಕಲಿಯುತ್ತೇನೆ, ಹೊಸ ಸ್ಥಳಕ್ಕೆ ಭೇಟಿ ನೀಡುತ್ತೇನೆ. ವಾರದಲ್ಲಿ ಒಂದು ಪುಸ್ತಕವಾದರೂ ಓದುತ್ತೇನೆ. ಹೀಗೆ ಮಾಡಬೇಕಾದ ಹಲವು ಪಟ್ಟಿಗಳನ್ನು ಮಾಡುತ್ತಾರೆ.

    ಈ ರೀತಿ ಪಟ್ಟಿ ಮಾಡಿದವರ ಪೈಕಿ ಹಲವು ಮಂದಿಯ ಬಾಯಿಯಲ್ಲಿ ಜನವರಿ ಮೊದಲ ವಾರ ಮಾತ್ರ ಈ ಮಾಡಬೇಕಾದ ಕೆಲಸಗಳ ಪಟ್ಟಿ ಓಡಾಡುತ್ತಿರುತ್ತದೆ. ಎರಡನೇ ವಾರದಿಂದ, ದಿನಗಳು ಮುಂದೂಡಿಕೆ ಆಗುತ್ತಲೇ ಇರುತ್ತದೆ. ದಿನಗಳು ಮುಂದೂಡಿ ಮುಂದೂಡಿ ಕೊನೆಗೆ ವರ್ಷವೇ ಪೂರ್ಣಗೊಳ್ಳುತ್ತದೆ. ಮತ್ತೆ ಪುನ: ಮುಂದಿನ ವರ್ಷ ಈ ಸಂಕಲ್ಪಗಳ ಬಗ್ಗೆ ಮಾತು ಬರುತ್ತದೆ. ಈ ರೀತಿ ಸಂಕಲ್ಪಗಳನ್ನು ಮಾಡಿ ಯಾವುದೇ ಪ್ರಯೋಜನ ಇಲ್ಲ. ಈ ಕಾರಣಕ್ಕೆ ಈ ಬಾರಿ ಹಲವು ರೆಸಲ್ಯೂಷನ್‌ ಕೈಗೊಳ್ಳದೇ ಒಂದೋ ಎರಡು ಮಾಡಲು ಪ್ರಯತ್ನಿಸಿ. ಎಲ್ಲವನ್ನೂ ಒಟ್ಟಿಗೆ ಆರಂಭಿಸಿದರೆ ಅದು ವಿಫಲವಾಗುತ್ತದೆ. ಆದರ ಬದಲು ಒಂದೊಂದನ್ನೇ ಆರಂಭಿಸುತ್ತಾ ಹೋದರೆ ಆ ರೆಸಲ್ಯೂಷನ್‌ ಪೂರ್ಣಗೊಳಿಸುವುದು ಸುಲಭ.

    ಒಂದೊಂದು ಸಂಕಲ್ಪಗಳು ಪೂರ್ಣಗೊಂಡರೆ ಒಂದು ಸಣ್ಣ ಯುದ್ಧ ಗೆದ್ದಂತೆ. ಸಣ್ಣ ಸಣ್ಣ ಯುದ್ಧ ಗೆದ್ದ ಬಳಿಕವಷ್ಟೇ ರಾಜನಾದವನು ಮಹಾರಾಜನಾಗುತ್ತಾನೆ. ಈ ಸಾಧನೆ ಪೂರ್ಣಗೊಳ್ಳುವ ಸಂದರ್ಭದಲ್ಲಿ ಅನುಮಾನ, ಅವಮಾನವಾಗುವುದು ಸಹಜ. ಯಾರೇ ದೊಡ್ಡ ವ್ಯಕ್ತಿಯ ಆತ್ಮಚರಿತ್ರೆ ಓದಿದರೆ ಅದರಲ್ಲಿ ತನಾಗದ ಅವಮಾನ, ಅನುಮಾನದ ಬಗ್ಗೆ ಒಂದು ಅಧ್ಯಾಯ ಇರುತ್ತದೆ. ಈ ಕಾರಣಕ್ಕೆ ನಮ್ಮ ಸಾಧನೆ ಹೇಗಿರಬೇಕು ಅಂದರೆ ನಮ್ಮ ಯೋಗ್ಯತೆ ಬಗ್ಗೆ ಅನುಮಾನ ಪಟ್ಟವರೆಲ್ಲಾ ನಮ್ಮನ್ನು ಮಾತನಾಡಿಸುವ ಮೊದಲು ಅವರ ಯೋಗ್ಯತೆ ಬಗ್ಗೆ ಯೋಚಿಸುವಂತಿರಬೇಕಂತೆ. ಈ ರೀತಿ ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ ಅಗತ್ಯ.

    ಕಠಿಣ ಪರಿಶ್ರಮದ ಜೊತೆ ನಾವು ಆಡುವ ಮಾತಿನ ಮೇಲೆ ಹಿಡಿತ ಇರಬೇಕು. ಕೇವಲ ಮಾತುಗಳು ಆಡಲು ಬಂದರೆ ಸಾಲದು. ಯಾರ ಜೊತೆ ಹೇಗೆ ಮಾತನಾಡಬೇಕೆಂಬ ಅರಿವಿರಬೇಕು. ಈ ಕಾರಣಕ್ಕೆ ನಾಲಿಗೆಗೆ ಜಗತ್ತಿನಲ್ಲಿ ವಿಷ ಮತ್ತು ಅಮೃತ ಇರುವ ಏಕೈಕ ಜಾಗ ಎಂಬ ಹೆಸರು ಬಂದಿದೆ. ಮಾತೇ ಬಂಡವಾಳ ಹೌದು. ಆದರೆ ಸ್ನೇಹಿತರು ಸರಿ ಇಲ್ಲದೇ ಇದ್ದರೆ ಸಂಗ್ರಹಗೊಂಡ ಬಂಡವಾಳ ಕ್ಷಣ ಮಾತ್ರದಲ್ಲಿ ಖಾಲಿಯಾದಿತು.

    ಕೊನೆಯದಾಗಿ ಜೀವನದಲ್ಲಿ ನಾವು ಭೂಮಿಯ ಮೇಲಿರುವ ಹುಲ್ಲಿನಂತೆ ಬೆಳೆಯಬೇಕು. ಯಾರು ಎಷ್ಟೇ ಹೀಯಾಳಿಸಿದರೂ ನಮ್ಮ ಆಸೆ ಕನಸುಗಳನ್ನು ಕತ್ತರಿಸಿದರೂ ಸಹ ಮತ್ತೆ ಬೆಳೆದೆ ಬೆಳೆಯುತ್ತೇನೆ ಎನ್ನುವ ಛಲ ಹೊಂದಿರಬೇಕು. ಈ ಛಲ ಎಲ್ಲರಿಗೂ ಬರಲಿ. ಹೊಸ ವರ್ಷ ಎಲ್ಲರಿಗೂ ಹರ್ಷ ತರಲಿ. 2025ರಲ್ಲಿ ಕನಸುಗಳು ನನಸಾಗಲಿ.

  • ಗುಡ್‍ಬೈ 2024, ವೆಲ್‍ಕಂ 2025 – ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿದ ಜನ

    ಗುಡ್‍ಬೈ 2024, ವೆಲ್‍ಕಂ 2025 – ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿದ ಜನ

    ಗುಡ್‍ಬೈ 2024, ವೆಲ್‍ಕಂ 2025”. ಹೊಸ ವರ್ಷಕ್ಕೆ (New Year) ಭಾರತ ಕಾಲಿಟ್ಟಿದ್ದು, ಕರ್ನಾಟಕ ಜನತೆ 2025ನ್ನು ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿ ಸ್ವಾಗತಿಸಿದ್ದಾರೆ.

    ನಗರದಲ್ಲಿ ಯುವಕ, ಯುವತಿಯರು ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿದರು. ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು. ಹೊಸ ವರ್ಷದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಕೇಂದ್ರಗಳಾದ ಬೆಂಗಳೂರಿನ (Bengaluru) ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍, ಇಂದಿರಾ ನಗರ, ಕೋರಮಂಗಲ ವರ್ಣರಂಜಿತವಾಗಿ ಮಿರಿ ಮಿರಿ ಮಿಂಚುತ್ತಿದ್ದವು. ಇದನ್ನೂ ಓದಿ: ಸರ್ಕಾರ ನಡೀತಿರೋದೆ ಮದ್ಯಪ್ರಿಯರಿಂದ, ಆದ್ರೂ ಏನ್‌ ಅನ್ಯಾಯ ಗುರು? – ಯುವಕನ ಮಾತು

    ಮೊಬೈಲ್‌ಗಳಂತೂ (Mobile) ಫುಲ್‌ ಬ್ಯೂಸಿಯಾಗಿದ್ದವು. ತಮ್ಮ ಆತ್ಮೀಯರಿಗೆ, ಸ್ನೇಹಿತರಿಗೆ, ಹಿರಿಯರಿಗೆ, ಕಿರಿಯರಿಗೆ ಹೊಸ ವರ್ಷದ ಶುಭಾಶಯದ ಸಂದೇಶಗಳನ್ನು ಕಳುಹಿಸುವುದರಲ್ಲಿ ಜನರು ತಲ್ಲಿನರಾಗಿದ್ದರು. ಪರಿಣಾಮ ಹಲವು ಸ್ಥಳಗಳಲ್ಲಿ ನೆಟ್‌ವರ್ಕ್‌ ಜಾಮ್‌ ಆಗಿತ್ತು. ನೆಟ್‌ವರ್ಕ್ ಒತ್ತಡದಿಂದ ಮೆಸೇಜ್‌ ತಡವಾಗಿ ತಲುಪುತ್ತಿದ್ದವು.

    ಬಾರ್, ಪಬ್‌ಗಳು ವಿಶೇಷ ಆಫರ್‌ ನೀಡಿದ್ದವು. ಪರಿಣಾಮ ಪಾನ ಪ್ರಿಯರು ರಾತ್ರಿಯಿಂದಲೇ ಪಾರ್ಟಿ ಮಾಡುತ್ತಾ ಡಿಜೆ ಹಾಡಿಗೆ ನೃತ್ಯ ಮಾಡುತ್ತಿದ್ದರು. ಇದರಿಂದ ಭರ್ಜರಿ ವ್ಯಾಪಾರವೂ ನಡೆಯಿತು. ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.

    ಬೇಕರಿಗಳಲ್ಲಿ ಹೊಸ ವರ್ಷದ ಕೇಕ್‌ಗಳಿಗೆ ಭಾರೀ ಬೇಡಿಕೆ ಇತ್ತು. ಬಡಾವಣೆಯ ಜನರು ರಾತ್ರಿ 12 ಗಂಟೆ ಆಗುತ್ತಿದ್ದಂತೆ ರಸ್ತೆಯಲ್ಲಿ ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷವನ್ನು ಬರ ಮಾಡಿಕೊಂಡರು.

     

    ಬೆಂಗಳೂರಿನಲ್ಲಿ ಪೊಲೀಸರು ಟೈಟ್ ಸೆಕ್ಯೂರಿಟಿ ಮಾಡಿಕೊಂಡಿದ್ದರು. ಪೊಲೀಸರು ಇಲ್ಲ ಎಂದುಕೊಂಡರೂ ಚಲನವಲನ, ಕಿಡಿಗೇಡಿ ಕೆಲಸಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿವೆ.

    ಹೊಸ ವರ್ಷಕ್ಕೆ ಕ್ಯಾಲೆಂಡರ್‌ ಬದಲಾಯಿಸಿದ್ದು ಆಯ್ತು. ಈಗ ಸಂಭ್ರಮಿಸುವ, ಕುಣಿದು ಕುಪ್ಪಳಿಸುವ ಘಳಿಗೆ. ಹೊಸ ವರ್ಷದಲ್ಲಿ ಹೊಸ ತುಡಿತವಿರಲಿ. ಪಾಸಿಟಿವ್‌ ಆಲೋಚನೆಗಳಿರಲಿ. ಯಶಸ್ಸು ಕಡೆಗೆ ದಿಟ್ಟ ನಿಲುವಿರಲಿ. ಎಲ್ಲರೊಟ್ಟಿಗೆ ಪ್ರೀತಿ-ವಿಶ್ವಾಸದಿಂದ ಸಾಗುವ ಭಾವನೆ ಇರಲಿ. ಎಲ್ಲರೂ ಒಟ್ಟಾಗಿ ಹೊಸ ವರ್ಷವನ್ನು ಸ್ವಾಗತಿಸೋಣ.

     

  • 2025ಕ್ಕೆ ಬೆಂಗಳೂರು ಜಿಲ್ಲೆ ಕ್ಷಯರೋಗ ಮುಕ್ತವಾಗಬೇಕು: ಜೆ ಮಂಜುನಾಥ್

    2025ಕ್ಕೆ ಬೆಂಗಳೂರು ಜಿಲ್ಲೆ ಕ್ಷಯರೋಗ ಮುಕ್ತವಾಗಬೇಕು: ಜೆ ಮಂಜುನಾಥ್

    ಬೆಂಗಳೂರು: ಜಿಲ್ಲೆಯನ್ನು 2025ರ ವೇಳೆಗೆ ಕ್ಷಯ ರೋಗ ಮುಕ್ತ ಜಿಲ್ಲೆಯಾಗಿಸುವುದು ನಮ್ಮ, ನಿಮ್ಮೆಲ್ಲರ ಮುಖ್ಯ ಗುರಿಯಾಗಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

    ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಬೆಂಗಳೂರು ಪೂರ್ವ ತಾಲೂಕಿನ ಕಣ್ಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆ.ಮಂಜುನಾಥ್, ವಿಶ್ವ ಕ್ಷಯರೋಗ ದಿನಾಚರಣೆ ಹಮ್ಮಿಕೊಂಡಿದ್ದು ಇದರ ಮೂಲ ಉದ್ದೇಶ ಕ್ಷಯ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಿ ಈ ರೋಗದ ಬಗ್ಗೆ ಜನರಿಗೆ ಮಾಹಿತಿ ಕೊಡುವುದರ ಜೊತೆಗೆ ವಾಸ್ತವದ ಸ್ಥಿತಿಗತಿಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.

    ಪ್ರಪಂಚದ ರೋಗಿಗಳಲ್ಲಿ ಕಾಲು ಭಾಗದಷ್ಟು ರೋಗಿಗಳು ಭಾರತದ ದೇಶದಲ್ಲಿ ಕಂಡುಬರುತ್ತಾರೆ. 2020 ರ ಟಿಬಿ ವರದಿ ಪ್ರಕಾರ ಭಾರತದಲ್ಲಿ 24.04 ಲಕ್ಷ ರೋಗಿಗಳು ನಿಕ್ಷಯ್ ನಲ್ಲಿ ನೋಂದಣಿ ಆಗಿದ್ದಾರೆ. ದೇಶದಲ್ಲಿ ಶೇಕಡಾ 40 ರಷ್ಟು ಜನರಲ್ಲಿ ಈ ರೋಗಾಣುಗಳಿರುತ್ತವೆ ಎಂದು ಅಂದಾಜಿಸಲಾಗಿದ್ದು, ಪ್ರತಿ ಐದು ನಿಮಷಕ್ಕೆ ಇಬ್ಬರು ಕ್ಷಯ ರೋಗದಿಂದ ಮರಣ ಹೊಂದುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಕ್ಷಯರೋಗ ಪತ್ತೆ ಪ್ರಮಾಣವು ನಮ್ಮ ನಗರ ಜಿಲ್ಲೆಯಲ್ಲಿ ಒಂದು ಲಕ್ಷ ಜನ ಸಂಖ್ಯೆಗೆ 136 ಸರಾಸರಿ ಇದೆ. ಕ್ಷಯ ರೋಗ ಗುಣಪಡಿಸುವಲ್ಲಿ ಶೇ.100 ರಷ್ಟು ಸಾಧನೆಯಾಗಬೇಕು, ಒಂದು ಲಕ್ಷ ಜನ ಸಂಖ್ಯೆಗೆ 10 ಕೇಸ್‍ಗಿಂತ ಕಡಿಮೆ ಪ್ರಮಾಣದಲ್ಲಿ ರೋಗ ಪತ್ತೆಯಾಗುವಂತೆ ಕ್ರಮವಹಿಸಲು ಎಲ್ಲರೂ ಶ್ರಮಿಸಬೇಕಿದೆ. ಅಲ್ಲದೇ, ಈ ರೋಗದಿಂದ ಯಾವುದೇ ಸಾವು ನೋವು ಸಂಭವಿಸದಂತೆ ಎಚ್ಚರ ವಹಿಸುವ ಅಗತ್ಯವಿದೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ರಾತ್ರಿ ವೇಳೆಯಲ್ಲಿ ಜ್ವರ, ಬೆವರುವುದು, ಕಫದಲ್ಲಿ ರಕ್ತ, ತೂಕ ಇಳಿಕೆ, ಹಸಿವಾಗದಿರುವುದು ಇಂತಹ ಯಾವುದೇ ಲಕ್ಷಣಗಳು ಕಂಡುಬಂದರೂ, ಸಾರ್ವಜನಿಕರು ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.

    ಜಿಲ್ಲೆಯು 2025 ರೊಳಗೆ ಕ್ಷಯ ರೋಗ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದ್ದು, ನಮ್ಮ ಮುಂದೆ ದೊಡ್ಡ ಸವಾಲು ಇದೆ. ಈಗಾಗಲೇ, ಬೆಂಗಳೂರು ನಗರ ಜಿಲ್ಲೆಯಲ್ಲಿ 343 ಜನರು ಕ್ಷಯರೋಗದಿಂದ ಬಳಲುತ್ತಿದ್ದಾರೆ ಎಂದು ಗುರುತಿಸಲಾಗಿದ್ದು. ಇಂತವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ರೋಗವನ್ನು ಗುಣಪಡಿಸುವುದಲ್ಲದೇ ರೋಗ ಬರುವುದನ್ನು ತಡೆಗಟ್ಟಲೂ ಸಹ ಸಾಧ್ಯವಿದೆ. ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆಗೆ ಹಲವಾರು ವ್ಯವಸ್ಥೆ ಇದ್ದು, ಜಿಲ್ಲಾ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ‘ಸಿಬಿನ್ಯಾಟ್’ ಯಂತ್ರಗಳು ಲಭ್ಯವಿದ್ದು, ಈಗಾಗಲೇ ಕ್ಷಯ ರೋಗಕ್ಕೆ ತುತ್ತಾಗಿರುವ ರೋಗಿಗಳಿಗೆ ಚಿಕಿತ್ಸೆ ಉಚಿತವಾಗಿದ್ದು, ಭಾರತ ಸರ್ಕಾರ ನಿಕ್ಷಯ ಪೋಷಣೆ ಯೋಜನೆಯಡಿಯಲ್ಲಿ ಕ್ಷಯ ರೋಗಕ್ಕೆ ತುತ್ತಾದವರಿಗೆ ಪ್ರತಿ ತಿಂಗಳು ರೂ 500 ಪ್ರೋತ್ಸಾಹ ಧನ ಕೂಡ ನೀಡಲಾಗುವುದು. ಅಷ್ಟೇ ಅಲ್ಲದೆ ಖಾಸಗಿ ಆಸ್ಪತ್ರೆ ಅವರು ಇಂತಹ ಪ್ರಕರಣವನ್ನು ಗುರುತಿಸಿ ವರದಿ ನೀಡಿದರೆ ಅವರಿಗೆ ಸಹ ಒಂದು ಸಾವಿರ ಪ್ರೋತ್ಸಾಹ ಧನ ನೀಡಲಾಗುವುದೆಂದು ಅವರು ತಿಳಿಸಿದರು.

    ಜಿಲ್ಲಾ ಮತ್ತು ಪ್ರಾಥಮಿಕ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ನೀಡುವ ಮೂಲಕ ಬೆಂಗಳೂರು ನಗರ ಮಾತ್ರವಲ್ಲದೆ ಒಟ್ಟಾರೆ ಕರ್ನಾಟಕವನ್ನು ಕ್ಷಯ ರೋಗ ಮುಕ್ತ ಮಾಡಲು ಕೈಜೋಡಿಸಬೇಕು. ದೇಶದಲ್ಲಿ ಕರೋನಾ ಸೋಂಕಿನ ಎರಡನೇ ಅಲೆ ತಲೆದೋರುತ್ತಿದ್ದು, ಸೋಂಕು ತಡೆಯುವಲ್ಲಿ ಸಾರ್ವಜನಿಕ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿಕೊಂಡರು.
    ನಂತರ ಮಾತನಾಡಿದ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ಮಹೇಶ್ ಕುಮಾರ್, ಕ್ಷಯ ರೋಗವನ್ನು ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದಾದ ರೋಗವಾಗಿದ್ದು, ಕ್ಷಯ ರೋಗ ಹರಡುವುದನ್ನು ತಡೆಗಟ್ಟಲು, ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸುವ ಅಗತ್ಯವಿದೆ ಎಂದರು.

    ಕ್ಷಯ ರೋಗ ಪತ್ತೆ ಕುರಿತು ಆರೋಗ್ಯ ಇಲಾಖೆಯೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಖಾಸಗಿ ವೈದ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ಷಯ ರೋಗದ ಕುರಿತು ಜಾಗೃತಿ ಮೂಡಿಸುವ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪೂರ್ವ ತಾಲೂಕಿನ ಆರೋಗ್ಯಾಧಿಕಾರಿಗಳಾದ ಡಾ. ಚಂದ್ರಶೇಖರಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಶ್ರೀನಿವಾಸ ಜಿ.ಎ, ಕಣ್ಣೂರಿನ ಪ್ರಾಥಮಿಕ ಆರೋಗ್ಯಾಧಿಕಾರಿಯಾ ಉಮಾ ರಾಕೇಶ್, ಗ್ರಾ ಪಂ. ಅಧ್ಯಕ್ಷರಾದ ಅಕ್ಕಯ್ಯಮ್ಮ, ಮತ್ತು ಉಪಾಧ್ಯಕ್ಷರು, ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಕಣ್ಣೂರಿನ ಪ್ರಾಥಮಿಕ ಆರೋಗ್ಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.