Tag: 2022-23 Budget

  • ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮಗಳ ಸಕಾಲಿಕ ಅನುಷ್ಠಾನಕ್ಕೆ ಸೂಚನೆ: ಬೊಮ್ಮಾಯಿ

    ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮಗಳ ಸಕಾಲಿಕ ಅನುಷ್ಠಾನಕ್ಕೆ ಸೂಚನೆ: ಬೊಮ್ಮಾಯಿ

    ಬೆಂಗಳೂರು: ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮಗಳು ಸಕಾಲಿಕವಾಗಿ ಅನುಷ್ಠಾನಗೊಳಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    2022-23ನೇ ಸಾಲಿನ ಬಜೆಟ್ ಅನುಷ್ಠಾನ, ಆಡಳಿತವನ್ನು ಚುರುಕುಗೊಳಿಸುವುದು, ಕಡತ ವಿಲೇವಾರಿ ಹಾಗೂ ಇನ್ನಿತರೆ ವಿಷಯಗಳ ಕುರಿತಂತೆ ಚರ್ಚಿಸಲು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿದ ನಂತರ ಮಾಧ್ಯಮದವರಿಗೆ ಅವರು ಪ್ರತಿಕ್ರಿಯೆ ನೀಡಿದರು.

    ಬಜೆಟ್‍ನಲ್ಲಿನ ಕಾರ್ಯಕ್ರಮಗಳ ಶೀಘ್ರ ಅನುಷ್ಠಾನ, ಯೋಜನೆಗಳ ಜಾರಿಗೆ ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ರೈತರಿಗೆ, ಎಸ್‍ಸಿಎಸ್‍ಟಿ, ಓಬಿಸಿ ಸೇರಿದಂತೆ ಜನರಿಗೆ ನೇರವಾಗಿ ಡಿಬಿಟಿ ಮೂಲಕ ಆರ್ಥಿಕ ನೆರವು ನೀಡುವ ಕಾರ್ಯಕ್ರಮಗಳನ್ನು ಜೂನ್ ತಿಂಗಳೊಳಗೆ ಪ್ರಾರಂಭಿಸುವ ಸೂಚನೆ ನೀಡಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಕಾರ್ಯಕ್ರಮಗಳು ಮುಟ್ಟಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ ಎಂದರು.

    ಬಜೆಟ್ ಕಾರ್ಯಕ್ರಮಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ನೀಡುವ ಯೋಜನೆಗಳಿಗೆ ಭೂ ಸ್ವಾಧೀನ, ಟೆಂಡರ್ ಪ್ರಕ್ರಿಯೆಗಳು ಶೀಘ್ರದಲ್ಲಿ ಮುಗಿಸಬೇಕು. ಆಡಳಿತಕ್ಕೆ ವೇಗ ತಂದು, ದಕ್ಷತೆಯಿಂದ ಕೆಲಸಗಳಾಗಬೇಕು. ಜನಸಾಮಾನ್ಯರಿಗೆ ಸರ್ಕಾರದ ಕಾರ್ಯಕ್ರಮಗಳಿಗೆ ಲಾಭವಾಗಬೇಕು ಎನ್ನುವ ಉದ್ದೇಶದಿಂದ ಇಂದಿನ ಸಭೆಯನ್ನು ನಡೆಸಲಾಗಿದೆ ಎಂದರು.

    ನಿರ್ಣಯ ತೆಗೆದುಕೊಳ್ಳುವ ಹಂತಗಳನ್ನು ಕಡಿಮೆ ಮಾಡುವುದು, ಆಡಳಿತಾತ್ಮಕ ಪ್ರಕ್ರಿಯೆಗೆ ಹೊಸ ಚಾಲನೆ ನೀಡುವ ನಿಟ್ಟಿನಲ್ಲಿ ಆಡಳಿತ ಸುಧಾರಣೆ ಸಮಿತಿ ತಿಳಿಸಿರುವಂತೆ ಅನುಷ್ಠಾನ ಮಾಡಲು ಸೂಚನೆ ನೀಡಲಾಗಿದೆ ಎಂದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಅಪರ ಮುಖ್ಯ ಕಾರ್ಯದರ್ಶಿಗಳ, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳೊಂದಿಗೆ ನಡೆಸಿದ ತುರ್ತು ಸಭೆಯ ಮುಖ್ಯಾಂಶಗಳು:

    1. ಬಜೆಟ್‍ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಕೂಡಲೇ ಕ್ರಮ ವಹಿಸಬೇಕು.

    2. ನಿಮ್ಮ ಹಂತದಲ್ಲಿ ಕಾರ್ಯಾದೇಶವಾಗಬೇಕು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳ ಹಂತದಲ್ಲಿ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಬೇಕು.

    3. ಬಜೆಟ್‍ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕಾರ್ಯಾದೇಶದ ಜೊತೆಗೆ ಡಿಪಿಆರ್ ಆಗಬೇಕು. ಅಂದಾಜುಪಟ್ಟಿ, ಟೆಂಡರ್ ಪ್ರಕ್ರಿಯೆ ಭೂ ಸ್ವಾಧೀನ ಪ್ರಕ್ರಿಯೆಗಳು ಕ್ಷಿಪ್ರಗತಿಯಲ್ಲಿ ಆಗಬೇಕು. ಇಲಾಖೆಗಳು ಕಾಲಮಿತಿಯೊಳಗೆ ಅನುಷ್ಠಾನ ಮಾಡಬೇಕು.

    4. ಮುಂದುವರೆದ ಕಾರ್ಯಕ್ರಮಗಳು, ಹೊಸ ಘೋಷಣೆಗಳ ವಿಶ್ಲೇಷಣೆ ಅಗತ್ಯ. ಇಲಾಖೆ ಮುಖ್ಯಸ್ಥರಿಗೆ ಈ ಬಗ್ಗೆ ಸ್ಪಷ್ಟತೆ ಇರಬೇಕು.

    5. ಕಾನೂನು ತಿದ್ದುಪಡಿಗಳನ್ನು ಪರಿಗಣಿಸಬೇಕು. ಹೊಸ ಕಾನೂನುಗಳನ್ನು ಅಧ್ಯಯನ ಮಾಡಿ ಅನುಷ್ಠಾನಕ್ಕೆ ತರಬೇಕು.

    6. ಬಜೆಟ್ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳಬಾರದು. ಬಜೆಟ್ ಘೋಷಣೆಗಳಿಗೆ ಪ್ರಸ್ತುತತೆ ಹಾಗೂ ಅರ್ಥಪೂರ್ಣತೆ ನೀಡುವುದು ನಮ್ಮ ಮುಖ್ಯ ಉದ್ದೇಶ. ಇದರ ಅರಿವು ನಿಮಗಿರಬೇಕು.

    7. ಮಳೆಗಾಲದಲ್ಲಿ ಚಾಲನೆ ನೀಡಬಹುದಾದ ವೆಬ್ ಸೈಟ್, ಡಿಬಿಟಿ ಮುಂತಾದ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದು.

    8. ಅಗಸ್ಟ್ ತಿಂಗಳಿನೊಳಗೆ ಎಲ್ಲಾ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕು.

    9. ಈ ವರ್ಷ 6500 ಕ್ಕೂ ಹೆಚ್ಚು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಾಲೆಗಳ ಗುರುತಿಸುವಿಕೆ ಪ್ರಾರಂಭಿಸಿ. ಜೂನ್, ಜುಲೈ ಒಳಗೆ ತಯಾರಿ ನಡೆಸಿ ಅಗಸ್ಟ್‍ನಲ್ಲಿ ಕಾಮಗಾರಿ ಪ್ರಾರಂಭವಾಗಬೇಕು.

    10. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆಗೇರಿಸುವ ಕಾರ್ಯಕ್ರಮ, ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಅಗತ್ಯ.

    11. ರಸ್ತೆ, ರೈಲು, ಬಂದರು ಮುಂತಾದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವುದು.

    12. ಸಾಮಾಜಿಕ ವಲಯ, ಶಿಕ್ಷಣ, ಆರೋಗ್ಯ ಇಲಾಖೆ ಕಾರ್ಯಕ್ರಮಗಳನ್ನು ಹೇಗೆ ಅನುಷ್ಠಾನ ಮಾಡುವುದು ಎಂದು ಮೈಕ್ರೋ ಮಟ್ಟದಲ್ಲಿ ಯೋಜನೆ ಆಗಬೇಕು.

    13. ಗೋಶಾಲೆ, ಪಶು ಚಿಕಿತ್ಸಾಲಯ, ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳ ಕಾರ್ಯಕ್ರಮಗಳು ಅನುಷ್ಠಾನಕ್ಕೆ ತರಲು ಸೂಕ್ತ ಯೋಜನೆ ಅಗತ್ಯ.

    14. ಕ್ಯಾನ್ಸರ್ ರೋಗಿಗಳಿಗೆ 10 ಕಿಮೋಥೆರಪಿ ಕೇಂದ್ರಗಳ ಸ್ಥಾಪಿಸುವ ಯೋಜನೆಗೆ ರೂಪುರೇಷೆ ಸಿದ್ಧಪಡಿಸಿ. 16,000 ಸೈಕಲ್ಸ್ ಹೆಚ್ಚಿಸಿರುವ ಬಗ್ಗೆ ರೂಪುರೇಷೆ ಸಿದ್ಧಪಡಿಸಿ.

    15. ಒಂದು ತಂಡವಾಗಿ, ಅಡಚಣೆಗಳನ್ನು ನಿವಾರಿಸಿ ಕಾರ್ಯ ನಿರ್ವಹಿಸಬೇಕು. ಅನುದಾನ ಹಾಗೂ ಸಮಯಕ್ಕೆ ಸರಿಯಾದ ನಿರ್ವಹಣೆ ಅತ್ಯವಶ್ಯ.

    16. ಕಡತ ವಿಲೇವಾರಿಗೆ ಇಲಾಖೆಗಳಿಗೆ ಗಡುವು ನೀಡಿ. ಸಕಾಲ ಯೋಜನೆಯಡಿ ಕಡತ ವಿಲೇವಾರಿ ಮಾಡುವುದು.

    17. ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳು ಪೂರ್ಣಗೊಳ್ಳಬೇಕು.

    18. ಯಾವುದೇ ನಿಗಮಗಳಲ್ಲಿ ಬಿಡುಗಡೆಯಾಗಿರುವ ಅನುದಾನವನ್ನು ಬಳಸದೇ ಖಾತೆಗಳಲ್ಲಿ ಇಡಬಾರದು.

  • ಬಜೆಟ್‍ನಲ್ಲಿ ಅಬಕಾರಿ ಇಲಾಖೆಗೆ ಹೊಸ ರೂಪ – ಪೂರ್ವಭಾವಿ ಸಭೆಯಲ್ಲಿ ಸಿಎಂ ಸ್ಪಷ್ಟನೆ

    ಬಜೆಟ್‍ನಲ್ಲಿ ಅಬಕಾರಿ ಇಲಾಖೆಗೆ ಹೊಸ ರೂಪ – ಪೂರ್ವಭಾವಿ ಸಭೆಯಲ್ಲಿ ಸಿಎಂ ಸ್ಪಷ್ಟನೆ

    ಬೆಂಗಳೂರು: 2022-23 ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ಅಬಕಾರಿ ಇಲಾಖೆಗೆ ಹೊಸ ಸ್ವರೂಪ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    2022-23ನೇ ಸಾಲಿನ ರಾಜ್ಯ ಬಜೆಟ್ ಕುರಿತು ವಿಧಾನಸೌಧದಲ್ಲಿಂದು ನಡೆದ ಇಲಾಖಾವಾರು ಆಯವ್ಯಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಬಕಾರಿ ಉದ್ಯಮ ವ್ಯಾಪ್ತಿ ಹೆಚ್ಚಿಸಿಕೊಂಡಿದೆ. ಯಾವುದೇ ಉದ್ಯಮ ವ್ಯಾಪ್ತಿ ಹೆಚ್ಚಿಸಿಕೊಂಡಾಗ ಬದಲಾವಣೆ ಆಗಲು ಸಮಯ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಲ ಕಾಲಕ್ಕೆ ವಿಚಾರಣೆ ಮಾಡಿ ಸರಿಪಡಿಸುವುದು ಎಲ್ಲರ ಕೆಲಸ ಎಂದರು. ಇದನ್ನೂ ಓದಿ: ಅಗ್ನಿ ಅವಘಡ – ಕಟ್ಟಡದಿಂದ ಹಾರಿ ಜೀವ ಉಳಿಸಿಕೊಂಡ ತಾಯಿ, ಮಗಳು

    ಇಲಾಖೆ ಬಗ್ಗೆ ಸಹಾನೂಭೂತಿ ಇದೆ. ಹಾಗೆಯೇ ಇಲಾಖೆಯಲ್ಲಿ ನಡೆಯುತ್ತಿರುವ ಕಿರುಕುಳ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ವ್ಯವಸ್ಥೆಯಲ್ಲಿ ಬದಲಾವಣೆ ತರಲು ಬಜೆಟ್‍ನಲ್ಲಿ ಇಲಾಖೆಗೆ ಹೊಸ ಸ್ವರೂಪ ನೀಡಲಾಗುವುದು. ಆರ್ಥಿಕ ಮಿತಿಗಳನ್ನು ನೋಡಿಕೊಂಡು ನೌಕರರಿಗೆ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗುವುದಲ್ಲದೇ ಕಾನೂನುಗಳನ್ನು ಬದಲಾಯಿಸುವ ಸಂಬಂಧ ಗಮನಹರಿಸಲಾಗುವುದು ಎಂದು ಹೇಳಿದರು.

    ರಾಜ್ಯದಲ್ಲಿ ನಕಲಿ ಮದ್ಯ ತಯಾರಿಕೆ ಮತ್ತು ಹೊರ ರಾಜ್ಯದಲ್ಲಿ ಆಗಮಿಸುವ ನಕಲಿ ಮದ್ಯ ತಡೆಗೆ ಸರ್ಕಾರ ಉಗ್ರ ಕ್ರಮ ಕೈಗೊಂಡಿದೆ. ಇದರಿಂದ ಸರ್ಕಾರಕ್ಕೆ ಆದಾಯ ಕೂಡ ಬರುತ್ತದೆ. ನಕಲಿ ಜಾಲದ ಹಿಂದೆ ಯಾರೇ ಇದ್ದರೂ ಅವರನ್ನು ಮುಲಾಜಿಲ್ಲದೇ ಅಮಾನತು ಮಾಡುವಂತೆ ಇಲಾಖಾ ಆಯುಕ್ತರಿಗೆ ಇದೇ ಸಂದರ್ಭದಲ್ಲಿ ಸಿಎಂ ಸೂಚಿಸಿದರು. ಇದನ್ನೂ ಓದಿ: ಹರ್ಷ ಹತ್ಯೆ ಹಿಂದೆ ಎಸ್ ಡಿಪಿಐ, ಸಿಎಫ್‍ಐಗಳ ಕೈವಾಡವಿದೆ: ಮಾಜಿ ಎಂಎಲ್‍ಸಿ ಗಣೇಶ್ ಕಾರ್ಣಿಕ್

    ಸಿಎಲ್ 7, ಸಿಎಲ್ 9 ವಿಚಾರದಲ್ಲಿ ಸಾಕಷ್ಟು ದೂರುಗಳು ಬಂದಿವೆ. ಇದೆಲ್ಲವನ್ನೂ ಸರಿಪಡಿಸುವ ಕೆಲಸ ಆಗಬೇಕು. ವ್ಯಾಪಾರ, ಆದಾಯ ಮೂರು ಮುಖ್ಯ ಅಂಶಗಳನ್ನು ಇಟ್ಟುಕೊಂಡು ಕೆಲಸ ಮಾಡುವಂತೆ ಸೂಚಿಸಿದರಲ್ಲದೇ ಸಮಯ ನೀಡಿದರೆ ಇಲಾಖೆಯಲ್ಲಿ ಆ ಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.