Tag: 2019 World Cup

  • 2019ರ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಉದ್ದೇಶ ಪೂರ್ವಕವಾಗಿ ಸೋತಿತ್ತು: ಪಾಕ್ ಕ್ರಿಕೆಟಿಗ

    2019ರ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಉದ್ದೇಶ ಪೂರ್ವಕವಾಗಿ ಸೋತಿತ್ತು: ಪಾಕ್ ಕ್ರಿಕೆಟಿಗ

    ಇಸ್ಲಾಮಾಬಾದ್: ಇಂಗ್ಲೆಂಡ್ ವಿರುದ್ಧ 2019ರ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಉದ್ದೇಶ ಪೂರ್ವಕವಾಗಿ ಸೋತಿತ್ತು ಎಂಬ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಪಾಕಿಸ್ತಾನ ಮಾಜಿ ಆಲ್‍ರೌಂಡರ್ ಅಬ್ದುಲ್ ರಜಾಕ್ ಆರೋಪಿಸಿದ್ದಾರೆ.

    ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದರೆ ಪಾಕಿಸ್ತಾನಕ್ಕೆ ಸೆಮಿ ಫೈನಲ್ ಪ್ರವೇಶಿಸುವ ಅವಕಾಶವಿತ್ತು. ಆದರೆ ಭಾರತ ಸೋಲುವ ಮೂಲಕ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರ ನಡೆಯುವಂತೆ ಮಾಡಿತ್ತು ಎಂದು ಅಬ್ದುಲ್ ರಜಾಕ್ ಹೇಳಿದ್ದಾರೆ.

    ಅಂದು ಪಂದ್ಯದ ವೀಕ್ಷಕ ವಿಶ್ಲೇಷಣೆ ಮಾಡುತ್ತಿದ್ದ ಎಲ್ಲರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ನಾನು ಈ ಬಗ್ಗೆ ಐಸಿಸಿಗೂ ಮನವಿ ಸಲ್ಲಿಸಿದ್ದೆ. ಐಸಿಸಿ, ಆಟಗಾರರ ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿರುತ್ತದೆ. ಆದರೆ ತಂಡವೊಂದು ಮತ್ತೊಂದು ತಂಡವನ್ನು ಸೆಮಿ ಫೈನಲ್‍ಗೆ ತಲುಪದಂತೆ ಮಾಡಲು ಉದ್ದೇಶ ಪೂರ್ವಕವಾಗಿ ಸೋತರೆ ದಂಡ ತೆರಬೇಕು ಎಂದು ತಿಳಿಸಿದ್ದಾರೆ.

    ಕ್ರಿಕೆಟ್ ಆಡಿದ ಯಾವುದೇ ಆಟಗಾರ ಇಂತಹ ಅಂಶಗಳನ್ನು ಸುಲಭವಾಗಿ ಅರಿತುಕೊಳ್ಳಬಹುದು. ಯಾವುದೇ ಒಬ್ಬ ಉತ್ತಮ ಬೌಲರ್ ಲೈನ್ ಅಂಡ್ ಲೆಂಥ್ ತಪ್ಪಿಸಿ ಬೌಲ್ ಮಾಡಲು ಪ್ರಯತ್ನಿಸುವುದು. ವಿಕೆಟ್ ಪಡೆಯಲು ಯತ್ನಿಸದೆ ಸುಲಭವಾಗಿ ರನ್ ಬಿಟ್ಟುಕೊಡುವುದು ನೋಡಿದರೆ ಅದು ಉದ್ದೇಶ ಪೂರ್ವಕವಾಗಿಯೇ ಮಾಡಿದ್ದಾರೆ ಎಂದು ಹೇಳಬಹುದು. ಇದು ಕೂಡ ಐಸಿಸಿ ನಿಯಮಗಳ ಭಾಗಬೇಕು. ಅಲ್ಲದೇ ಐಸಿಸಿ ಲೆವೆಲ್ 1,2..5ರ ಉಲ್ಲಂಘನೆ ಅಡಿ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದಿದ್ದಾರೆ.

    ಈ ವೇಳೆ ಭಾರತ ಉದ್ದೇಶವಾಗಿ ಪಂದ್ಯದಲ್ಲಿ ಸೋಲುಂಡಿತ್ತಾ ಎಂಬ ಪ್ರಶ್ನೆಗೆ ಉತ್ತರಿಸುವ ಅಬ್ದುಲ್ ರಜಾಕ್, ಖಂಡಿತ ಇದರಲ್ಲಿ ಯಾವುದೇ ಸಂದೇಹವಿಲ್ಲ. ಸಿಕ್ಸರ್ ಸಿಡಿಸುವ ಸಾಮರ್ಥ್ಯವಿರೋ ಆಟಗಾರ, ಬೌಂಡರಿ ಅಥವಾ ಚೆಂಡನ್ನು ಬ್ಲಾಕ್ ಮಾಡುತ್ತಿದ್ದರೆ ಸುಲಭವಾಗಿ ಇದನ್ನು ಆರ್ಥೈಸಬಹುದಾಗಿದೆ. ನಾನು ಮಾತ್ರವಲ್ಲದೇ ಹಲವು ಕ್ರಿಕೆಟ್ ಆಟಗಾರರು ಇದನ್ನೇ ಹೇಳಿದ್ದಾರೆ. ಐಸಿಸಿ ಉದ್ದೇಶ ಪೂರ್ವಕವಾಗಿ ಸೋಲುವವರ ವಿರುದ್ಧ ನಿಯಮಗಳನ್ನು ರೂಪಿಸಬೇಕಿದೆ ಎಂದು ಹೇಳಿದ್ದಾರೆ.

    ಅಂದು ಪಂದ್ಯದಲ್ಲಿ ಗೆಲ್ಲಲು 338 ರನ್ ಗುರಿ ಪಡೆದಿದ್ದ ಟೀಂ ಇಂಡಿಯಾ ಅಂತಿಮ 5 ಓವರ್ ಗಳಲ್ಲಿ 71 ರನ್ ಗಳಿಸುವ ಗುರಿಯನ್ನು ಹೊಂದಿತ್ತು. ಆ ವೇಳೆ ಧೋನಿ ಹಾಗೂ ಕೇಧಾರ್ ಜಾಧವ್ ಬ್ಯಾಟ್ ಬೀಸುತ್ತಿದ್ದರು. ಆದರೆ ಅಂದು ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 306 ರನ್ ಕಲೆ ಹಾಕಿ 31 ರನ್ ಅಂತರದಲ್ಲಿ ಸೋಲುಂಡಿತ್ತು. ಅಂತಿಮ 5 ಓವರ್ ಗಳಲ್ಲಿ ಟೀಂ ಇಂಡಿಯಾ ಆಟಗಾರರು 39 ರನ್ ಕಲೆ ಹಾಕಲು ಮಾತ್ರ ಸಾಧ್ಯವಾಗಿತ್ತು. ಧೋನಿ 31 ಎಸೆತಗಳಲ್ಲಿ 42 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಟೀಂ ಇಂಡಿಯಾ ಆಟಗಾರರು ಇನ್ನಿಂಗ್ಸ್ ನಲ್ಲಿ ಕೇವಲ 1 ಸಿಕ್ಸರ್ ಸಿಡಿಸಿದ್ದರು. ಇಂಗ್ಲೆಂಡ್ ಆಟಗಾರು 13 ಸಿಕ್ಸರ್ ಸಿಡಿಸಿದ್ದರು. ಪಂದ್ಯದ ಬಳಿಕ ಮಾತನಾಡಿದ್ದ ನಾಯಕ ಕೊಹ್ಲಿ, ಧೋನಿ ನಿಧಾನ ಗತಿ ಬ್ಯಾಟಿಂಗ್ ಶೈಲಿಗೆ ಸ್ಪಷ್ಟನೆ ನೀಡಿದ್ದರು. ಅನುಭವಿ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಆಗಿದ್ದ ಧೋನಿ ಬೌಂಡರಿ ಸಿಡಿಸಲು ಸಾಕಷ್ಟು ಪ್ರಯತ್ನಿಸಿದ್ದರು ಎಂದಿದ್ದರು.

  • ವಿಶ್ವಕಪ್‍ನಲ್ಲಿ ಶಮಿ ಹ್ಯಾಟ್ರಿಕ್ ವಿಕೆಟ್ ಹಿಂದೆ ಧೋನಿ ಮಾಸ್ಟರ್ ಮೈಂಡ್

    ವಿಶ್ವಕಪ್‍ನಲ್ಲಿ ಶಮಿ ಹ್ಯಾಟ್ರಿಕ್ ವಿಕೆಟ್ ಹಿಂದೆ ಧೋನಿ ಮಾಸ್ಟರ್ ಮೈಂಡ್

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ಇಡೀ ಜಗತ್ತನ್ನು ಆವರಿಸಿರುವ ಪರಿಣಾಮ ಎಲ್ಲಾ ಕ್ರೀಡಾಕೂಟ, ಟೂರ್ನಿಗಳು ಜುಲೈವರೆಗೆ ಮುಂದೂಡಲ್ಪಟ್ಟಿವೆ ಹಾಗೂ ರದ್ದುಗೊಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಕ್ರಿಕೆಟಿಗರು ಸೇರಿದಂತೆ ವಿಶ್ವದ ಇತರ ಆಟಗಾರರು ಸಹ ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಆನ್‍ಲೈನ್‍ನಲ್ಲಿ ಸ್ನೇಹಿತರೊಂದಿಗೆ ಚಾಟ್ ನಡೆಸಿದ್ದಾರೆ. ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಇರ್ಫಾನ್ ಪಠಾಣ್ ಅವರೊಂದಿಗೆ ವಿಡಿಯೋ ಕಾನ್ಫರನ್ಸ್ ಕಾಲ್‍ನಲ್ಲಿ ಮಾತನಾಡಿದ್ದಾರೆ.

    2019ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿ ಅಫ್ಘಾನಿಸ್ತಾನ ವಿರುದ್ಧದಲ್ಲಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಈ ಸಾಧನೆಯ ಹಿಂದೆ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಅವರ ಮಾಸ್ಟರ್ ಮೈಂಡ್ ಇತ್ತು ಎನ್ನುವುದನ್ನು ಶಮಿ ರಿವೀಲ್ ಮಾಡಿದ್ದಾರೆ.  ಇದನ್ನೂ ಓದಿ: ಎಂಎಸ್‍ಡಿ ನಿವೃತ್ತಿ ಘೋಷಿಸಿದ್ರೆ ಸಿಎಸ್‍ಕೆ ಮುಂದಿನ ನಡೆ ಏನು?

    ಅಫ್ಘಾನಿಸ್ತಾನದ ಪಂದ್ಯದಲ್ಲಿ ಎರಡು ವಿಕೆಟ್ ಪಡೆದ ನಂತರ ಅಂದಿನ ನಾಯಕ ಮಹೇಂದ್ರ ಸಿಂಗ್ ಧೋನಿ ಶಮಿ ಅವರಿಗೆ ಸಲಹೆ ನೀಡಿದ್ದರು. ಅದನ್ನು ಅನುಸರಿಸಿದ ಶಮಿ ಮೂರನೇ ವಿಕೆಟ್ ತೆಗೆದುಕೊಂಡಿದ್ದರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಪಡೆದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ವಿಶ್ವಕಪ್‍ನಲ್ಲಿ ಮೊಹಮ್ಮದ್ ಶಮಿ ಅವರಿಗೂ ಮುನ್ನ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆಯನ್ನು ಭಾರತದ ಚೇತನ್ ಶರ್ಮಾ ಮಾಡಿದ್ದರು. ನಾಗ್ಪುರದಲ್ಲಿ ನಡೆದ 1987ರ ವಿಶ್ವಕಪ್‍ನಲ್ಲಿ ಚೇತನ್ ಶರ್ಮಾ ಅವರು ನ್ಯೂಜಿಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು.

    ಇರ್ಫಾನ್ ಪಠಾಣ್ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಭಾರತೀಯ ಎಂಬ ಸಾಧನೆ ಮಾಡಿದ್ದಾರೆ. 2006ರಲ್ಲಿ ಪಾಕಿಸ್ತಾನದ ವಿರುದ್ಧ ಕರಾಚಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪಠಾಣ್ ಅವರು, ಸಲ್ಮಾನ್ ಬಟ್, ಯೂನುಸ್ ಖಾನ್ ಮತ್ತು ಮೊಹಮ್ಮದ್ ಯೂಸುಫ್ ಅವರನ್ನು ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದರು. ಇವರಲ್ಲದೆ ಹರ್ಭಜನ್ ಸಿಂಗ್ ಮತ್ತು ಜಸ್‍ಪ್ರೀತ್ ಬುಮ್ರಾ ಕೂಡ ಟೆಸ್ಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧಿಸಿದ್ದಾರೆ.

    “ಅದು ನನ್ನ ಓವರಿನ 5ನೇ ಎಸೆತವಾಗಿತ್ತು. ಅದಕ್ಕೂ ಮುನ್ನವೇ ಸತತ 2 ವಿಕೆಟ್‍ಗಳನ್ನು ಪಡೆದಿದ್ದೆ. ಆಗ ಮಹೀ (ಧೋನಿ) ನನ್ನ ಬಳಿಗೆ ಬಂದರು. ನೀವು ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದೀರಿ. ಹೀಗೆ ಮುಂದುವರಿಸಿ, ಆದರೆ ಚೆಂಡನ್ನು ವೇಗವಾಗಿ ಎಸೆಯಿರಿ ಎಂದು ಸಲಹೆ ನೀಡಿದರು. ಆಗ ನಾನು 140 ವೇಗದಲ್ಲಿ ಬಾಲಿಂಗ್ ಮಾಡುತ್ತೇನೆ ಎಂದು ಮಹಿ ಭಾಯ್‍ಗೆ ತಿಳಿಸಿದೆ. ಹಾಗೇ ನಾನು ಮಾಡಿದೆ. ಈ ಮೂಲಕ ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದೆ. ಆ ಪಂದ್ಯದಲ್ಲಿ ಭಾರತವು ಅಫ್ಘಾನಿಸ್ತಾನದ ವಿರುದ್ಧ 11 ರನ್‍ಗಳಿಂದ ಗೆದ್ದಿತ್ತು” ಎಂದು ಶಮಿ, ಇರ್ಫಾನ್ ಪಠಾಣ್ ಅವರಿಗೆ ತಿಳಿಸಿದ್ದಾರೆ.

    ಶಮಿಗೆ ನಾಲ್ಕು ವಿಕೆಟ್:
    ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರು 9.5 ಓವರ್ ಬೌಲಿಂಗ್ ಮಾಡಿ 40 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಕೊನೆಯ ಓವರ್‍ನಲ್ಲಿ ಅಫ್ಘಾನಿಸ್ತಾನಕ್ಕೆ 16 ರನ್‍ಗಳ ಅಗತ್ಯವಿತ್ತು. ಆಗ ಮೊಹಮ್ಮದ್ ನಬಿ ಅವರು ಶಮಿ ಎಸೆದ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದರು. ಆದರೆ ಎರಡನೇ ಎಸೆತದಲ್ಲಿ ಯಾವುದೇ ರನ್ ಗಳಿಸಲಿಲ್ಲ. ಮುಂದಿನ ಮೂರು ಎಸೆತಗಳಲ್ಲಿ ಶಮಿ ಅವರು ಅಫ್ಘಾನಿಸ್ತಾನದ ನಬಿ, ಅಫ್ತಾಬ್ ಆಲಂ ಮತ್ತು ಮುಜೀಬ್ ಉರ್ ರೆಹಮಾನ್ ಅವರ ವಿಕೆಟ್ ಪಡೆದು ತಂಡಕ್ಕೆ ಜಯ ತಂದುಕೊಂಡಿದ್ದರು.

  • ಓವರ್ ಥ್ರೋಗೆ 6 ರನ್ – ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಐಸಿಸಿ

    ಓವರ್ ಥ್ರೋಗೆ 6 ರನ್ – ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಐಸಿಸಿ

    ಸಿಡ್ನಿ: 2019ರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಓವರ್ ಥ್ರೋಗೆ ಅಂಪೈರ್ ಗಳು 6 ರನ್ ನೀಡಿದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ವಿಚಾರದ ಬಗ್ಗೆ ಎಚ್ಚೆತ್ತುಕೊಂಡ ಐಸಿಸಿ ಅಂಪೈರ್ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿ ಈ ಪ್ರಕರಣದಿಂದ ಜಾರಿಕೊಂಡಿದೆ.

    ಓವರ್ ಥ್ರೋ ಕುರಿತು ಫಾಕ್ಸ್ ನ್ಯೂಸ್‍ಗೆ ಐಸಿಸಿಯ ವಕ್ತಾರರು ಪ್ರತಿಕ್ರಿಯಿಸಿ, ಮೈದಾನದಲ್ಲಿರುವ ಅಂಪೈರ್‍ಗಳು ಐಸಿಸಿಯ ನಿಯಮಗಳ ಪುಸ್ತಕವನ್ನು ಆಧಾರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಅಂಪೈರ್‌ಗಳು ತೆಗೆದುಕೊಳ್ಳುವ ಈ ತೀರ್ಮಾನಗಳ ಬಗ್ಗೆ ನಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

    ಅಂಪೈರ್ ನಿರ್ಣಯದ ಬಗ್ಗೆ ಸೋಮವಾರವೇ ಪ್ರತಿಕ್ರಿಯೆ ನೀಡಿದ್ದ ಆಸ್ಟ್ರೇಲಿಯಾದ ಖ್ಯಾತ ಮಾಜಿ ಅಂಪೈರ್ ಸೈಮನ್ ಟಫೆಲ್ ಅವರು, ಫೈನಲ್ ಪಂದ್ಯದಲ್ಲಿ ಆನ್ ಫೀಲ್ಡ್ ಅಂಪೈರ್‌ಗಳು ಓವರ್ ಥ್ರೋ ಕಾರಣಕ್ಕೆ 6 ರನ್ ನೀಡಿದ್ದು ತಪ್ಪು. ನಿಯಮಗಳ ಅನ್ವಯ ಅಲ್ಲಿ 5 ರನ್ ಮಾತ್ರ ನೀಡಬೇಕಿತ್ತು ಎಂದು ಹೇಳಿದ್ದರು.

    ವಿಶ್ವಕಪ್ ಪಂದ್ಯ ಟೈನಲ್ಲಿ ಅಂತ್ಯಗೊಂಡ ಬಳಿಕ ಅಂಪೈರ್ ಓವರ್ ಥ್ರೋಗೆ 6 ರನ್ ನೀಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಫಾಕ್ಸ್ ಸ್ಫೋಟ್ರ್ಸ್‍ಗೆ ಪ್ರತಿಕ್ರಿಯೆ ನೀಡಿದ ಟಫೆಲ್, ಇದರಲ್ಲಿ ತಪ್ಪು ಸ್ಪಷ್ಟವಾಗಿದೆ. 6 ರನ್ ನೀಡುವಂತಿಲ್ಲ. 5 ರನ್ ಮಾತ್ರ ನೀಡಬೇಕಿತ್ತು ಎಂದು ತಿಳಿಸಿದ್ದಾರೆ.

    ಕಾನೂನು ಏನು ಹೇಳುತ್ತೆ?
    ಓವರ್ ಥ್ರೋಗೆ ಸಂಬಂಧಿಸಿದ ಐಸಿಸಿಯ 19.8 ಕಾನೂನು ಪ್ರಕಾರ ಫೀಲ್ಡರ್ ಎಸೆದ ಬಾಲ್ ಓವರ್ ಥ್ರೋ ಅಥವಾ ಉದ್ದೇಶಪೂರ್ವಕವಾಗಿ ಬಾಲ್ ಎಸೆದಾಗ ಇಬ್ಬರು ಬ್ಯಾಟ್ಸ್ ಮನ್ ಗಳು ಪಿಚ್ ಮಧ್ಯದಲ್ಲಿ ಒಬ್ಬರನ್ನೊಬ್ಬರು ದಾಟಿರಬೇಕು.

    ವಿವಾದ ಏನು?
    ಗುಪ್ಟಿಲ್ ಚೆಂಡನ್ನು ಎಸೆಯುವ ವೇಳೆ ಸ್ಟೋಕ್ಸ್ ಹಾಗೂ ಆದಿಲ್ ರಶೀದ್ ಒಬ್ಬರನ್ನೊಬ್ಬರನ್ನು ದಾಟಿರಲಿಲ್ಲ. ಎರಡನೇ ರನ್ ಪೂರ್ಣಗೊಳಿಸುವ ಸಂದರ್ಭದಲ್ಲಿ ಬಾಲ್ ಬ್ಯಾಟಿಗೆ ಬಡಿದ ಕಾರಣ ಚೆಂಡು ಬೌಂಡರಿಗೆ ಹೋಗಿದೆ. ಈ ಕಾರಣಕ್ಕೆ ಎರಡನೇಯ ರನ್ ಪರಿಗಣಿಸಬಾರದು. ಆದರೆ ಬೌಂಡರಿ ಜೊತೆಗೆ 2 ರನ್ ನೀಡಿದ ಪರಿಣಾಮ ಪಂದ್ಯ ಟೈ ಆಗಿದೆ. 5 ರನ್ ಮಾತ್ರ ನೀಡಿದ್ದರೆ ನ್ಯೂಜಿಲೆಂಡ್ ಜಯಗಳಿಸುತಿತ್ತು ಎಂದು ಕ್ರಿಕೆಟ್ ಅಭಿಮಾನಿಗಳು ವಾದಿಸುತ್ತಿದ್ದಾರೆ.

    242 ರನ್ ಬೆನ್ನತ್ತಿದ್ದ ಇಂಗ್ಲೆಂಡ್‍ಗೆ ಕೊನೆಯ 3 ಎಸೆತಗಳಿಗೆ 9 ರನ್ ಗಳಿಸುವ ಅನಿವಾರ್ಯತೆ ಎದುರಾಗಿತ್ತು. ಈ ಸಂದರ್ಭದಲ್ಲಿ ಸ್ಟೋಕ್ಸ್ ಬ್ಯಾಟಿಗೆ ತಾಗಿದ್ದ ಚೆಂಡು ಬೌಂಡರಿ ಗೆರೆದಾಡಿತ್ತು. ಆದರೆ ಈ ಸಂದರ್ಭದಲ್ಲಿ ಸ್ಟೋಕ್ಸ್ 2ನೇ ರನ್ ಕದಿಯುವ ಪ್ರಯತ್ನದಲ್ಲಿದ್ದರು.

    ಇಂಗ್ಲೆಂಡಿಗೆ 50ನೇ ಓವರಿನಲ್ಲಿ 15 ರನ್ ಬೇಕಿತ್ತು. ಬೌಲ್ಟ್ ಎಸೆದ ಮೊದಲ ಎರಡು ಎಸೆತಗಳಲ್ಲಿ ಯಾವುದೇ ರನ್ ಬಾರದೇ ಇದ್ದರೆ ಮೂರನೇ ಎಸೆತವನ್ನು ಬೆನ್ ಸ್ಟೋಕ್ಸ್ ಸಿಕ್ಸರಿಗೆ ಅಟ್ಟಿದ್ದರು. ನಾಲ್ಕನೇ ಎಸೆತದಲ್ಲಿ ಒಂದು ರನ್ ಓಡಿ ಎರಡನೇ ರನ್ ಕದಿಯುವ ವೇಳೆ ಗುಪ್ಟಿಲ್ ಎಸೆದ ಚೆಂಡು ಬೆನ್ ಸ್ಟೋಕ್ಸ್ ಬ್ಯಾಟಿಗೆ ತಗಲಿ, ಕೀಪರ್ ಹಿಂದುಗಡೆ ಸಾಗಿ ಬೌಂಡರಿ ಗೆರೆಯನ್ನು ತಲುಪಿತು. ಎರಡು ರನ್ ಜೊತೆಗೆ ಇತರೇ ರೂಪದಲ್ಲಿ 4 ರನ್ ಬಂತು. ಹೀಗಾಗಿ ಕೊನೆಯ ಎರಡು ಎಸೆತಗಳಲ್ಲಿ ಮೂರು ರನ್ ಗಳಿಸಬೇಕಿತ್ತು. ಸ್ಟ್ರೈಕ್ ನಲ್ಲಿದ್ದ ಬೆನ್ ಸ್ಟೋಕ್ಸ್ ಎರಡು ರನ್ ಕದಿಯಲು ಯತ್ನಿಸಿದಾಗ ನಾನ್ ಸ್ಟ್ರೈಕ್ ನಲ್ಲಿದ್ದ ಅದಿಲ್ ರಶೀದ್ ರನೌಟ್ ಆದರು. ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಈ ಎಸೆತದಲ್ಲಿ ಒಂದು ರನ್ ಕಸಿದು ಎರಡನೇ ರನ್ ಓಡಲು ಯತ್ನಿಸಿದಾಗ ಮಾಕ್ ವುಡ್ ರನೌಟ್ ಆದರು. ಈ ಮೂಲಕ ಪಂದ್ಯ ಟೈ ಆಗಿ ಫಲಿತಾಂಶಕ್ಕೆ ಮೊದಲ ಬಾರಿಗೆ ಸೂಪರ್ ಓವರ್ ಮೊರೆ ಹೋಗಲಾಯಿತು.

    ಸೂಪರ್ ಓವರಿನ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 15 ರನ್ ಹೊಡೆಯಿತು. ನ್ಯೂಜಿಲೆಂಡ್ ತಂಡಕ್ಕೆ ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಈ ವೇಳೆ ಎರಡು ರನ್ ಕದಿಯಲು ಮುಂದಾಗಿದ್ದ ಗುಪ್ಟಿಲ್ ರನ್ ಔಟ್ ಆದರು. ಟ್ರೆಂಟ್ ಬೌಲ್ಟ್ ಎಸೆದ ಓವರ್ ನಲ್ಲಿ ಬೆನ್ ಸ್ಟೋಕ್ಸ್ ಮತ್ತು ಬಟ್ಲರ್ ಒಂದೊಂದು ಬೌಂಡರಿ ಹೊಡೆದಿದ್ದರು. ಜೋಫ್ರಾ ಅರ್ಚರ್ ಎಸೆದ ಓವರ್ ನಲ್ಲಿ ನಿಶಮ್ ಒಂದು ಸಿಕ್ಸರ್ ಹೊಡೆದರೆ ಯಾವುದೇ ಬೌಂಡರಿ ಬಂದಿರಲಿಲ್ಲ. ಎರಡು ತಂಡಗಳ ರನ್ ಸಮವಾಗಿದ್ದರೂ ಒಟ್ಟು 24 ಬೌಂಡರಿ ಸಿಡಿದ ಪರಿಣಾಮ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿತು. ನ್ಯೂಜಿಲೆಂಡ್ 17 ಬೌಂಡರಿ ಹೊಡೆದಿತ್ತು.

  • 2 ಸಾವಿರ ರೂ. ಉದಾಹರಣೆ ನೀಡಿ ಐಸಿಸಿಯನ್ನು ಟ್ರೋಲ್‍ಗೈದ ಬಿಗ್ ಬಿ

    2 ಸಾವಿರ ರೂ. ಉದಾಹರಣೆ ನೀಡಿ ಐಸಿಸಿಯನ್ನು ಟ್ರೋಲ್‍ಗೈದ ಬಿಗ್ ಬಿ

    ನವದೆಹಲಿ: 2019ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಲು ಕಾರಣವಾದ ಐಸಿಸಿಯ ಬೌಂಡರಿ ಮಾನದಂಡದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಕೂಡ ಟ್ವೀಟ್ ಮೂಲಕ ಐಸಿಸಿ ನಿಯಮವನ್ನು ಟೀಕಿಸಿ ಟ್ರೋಲ್ ಮಾಡಿದ್ದಾರೆ.

    ನಿಮ್ಮ ಬಳಿ 2,000 ರೂ. ನೋಟು ಇದೆ. ನನ್ನ ಹತ್ತಿರವೂ 2,000 ರೂ. ಇದೆ. ಆದರೆ ನಿಮ್ಮ ಬಳಿ 2,000 ಮುಖಬೆಲೆಯ ಒಂದೇ ನೋಟು ಇದ್ದರೆ ನನ್ನ ಹತ್ತಿರ 500 ರೂ. ಮುಖಬೆಲೆಯ 4 ನೋಟುಗಳಿವೆ. ಹಾಗಾದರೆ ಇಬ್ಬರಲ್ಲಿ ಯಾರು ಶ್ರೀಮಂತರು ಎಂದು ಅಮಿತಾಬ್ ಬಚ್ಚನ್ ಟ್ವೀಟ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಓವರ್ ಥ್ರೋಗೆ 6 ರನ್ ನೀಡಿದ್ದು ತಪ್ಪು – ಮಾಜಿ ಅಂಪೈರ್ ಸೈಮನ್ ಟಫೆಲ್

    ಅದೇ ಟ್ವೀಟ್‍ನಲ್ಲಿ ಉತ್ತರ ನೀಡಿರುವ ಬಿಗ್ ಬಿ, ಐಸಿಸಿ ನಿಯಮ ಪ್ರಕಾರ ಯಾರು 500ರ ನಾಲ್ಕು ನೋಟು ಹೊಂದಿರುತ್ತಾರೋ ಅವರೇ ಶ್ರೀಮಂತರು ಎಂದು ಕುಟುಕಿದ್ದಾರೆ. ಅಷ್ಟೇ ಅಲ್ಲದೆ ನಗುವ ಎಮೋಜಿ ಹಾಕಿ ಐಸಿಸಿ ರೂಲ್ಸ್ ಹ್ಯಾಶ್ ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಐಸಿಸಿ ನಿಯಮಗಳ ಪ್ರಕಾರ ನ್ಯೂಜಿಲೆಂಡ್ ಚಾಂಪಿಯನ್!

    ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಜನಕರಿಗೆ ವಿಶ್ವಕಪ್ ಕಿರೀಟ ಒಲಿದಿದೆ. ಆದರೆ ಫೈನಲ್‍ನಲ್ಲಿ ಇಂಗ್ಲೆಂಡ್‍ಗೆ ಗೆಲುವು ನೀಡಿದ ಐಸಿಸಿ ನಿಯಮದ ವಿರುದ್ಧ ವಿಶ್ವದಾದ್ಯಂತ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯ ಟೈ ಆದರೂ ಇಂಗ್ಲೆಂಡ್‍ಗೆ ಹೆಚ್ಚು ಬೌಂಡರಿಗಳ ಆಧಾರ ಮೇಲೆ ಗೆಲುವು ನೀಡಿದ ಐಸಿಸಿ ಈ ನಿಯಮವನ್ನು ಕಟುವಾಗಿ ಟೀಕಿಸಿರುವ ನೆಟ್ಟಿಗರು, ಪಂದ್ಯದಲ್ಲಿ ಬೌಂಡರಿಗಳ ಸಂಖ್ಯೆಯೂ ಒಂದೇ ಆಗಿದ್ದರೆ ಆಟಗಾರರ 10 ಮತ್ತು 12 ನೇ ತರಗತಿಯ ಅಂಕ ನೋಡಿ ವಿಶ್ವಕಪ್ ವಿನ್ನರ್ ತೀರ್ಮಾನ ಮಾಡುತ್ತಿದ್ದರು ಎಂದು ಐಸಿಸಿಯನ್ನು ಕಾಲೆಳದಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಾಲಿವುಡ್ ನಟ ಪರೇಶ್ ರಾವಲ್ ಐಸಿಸಿ ವಿರುದ್ಧ ಕಿಡಿಕಾರಿದ್ದು, ಧೋನಿ ಅವರ ಸೇನಾ ಚಿಹ್ನೆ ಇರುವ ಗ್ಲೋವ್ಸ್ ಬದಲಿಸಲು ಆಸಕ್ತಿ ತೋರಿಸುವ ಐಸಿಸಿ ತನ್ನ ಮೂರ್ಖ ಸೂಪರ್ ಓವರ್ ನಿಯಮಗಳನ್ನು ಬದಲಿಸಲಿ ಎಂದು ಸೋಮವಾರ ಟ್ವೀಟ್ ಮಾಡಿದ್ದರು.

    ಇಂಗ್ಲೆಂಡ್‍ನಲ್ಲಿ ವಿಶ್ವಕಪ್ ನಡೆಯುತ್ತಿರುವ ಕಾರಣ ಐಸಿಸಿ ನಿಯಮಗಳು ಇಂಗ್ಲೆಂಡ್ ಪರವಾಗಿ ಇದೆ. ಈ ನಿಯಮದ ಪ್ರಕಾರ ಇಂಗ್ಲೆಂಡ್ ವಿನ್ ಆಗಿದೆ. ಆದರೆ ಇಂಗ್ಲೆಂಡ್ ವಿಶ್ವಕಪ್ ನಲ್ಲಿ ಜಯಗಳಿಸಿದ ರೀತಿಯಲ್ಲಿ ಹೊರದೇಶದಲ್ಲಿ ಜಯಸಾಧಿಸಲು ಸಾಧ್ಯವಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಹಲವಾರು ನೆಟ್ಟಿಗರು ನಿಜವಾದ ವಿನ್ನರ್ ನ್ಯೂಜಿಲೆಂಡ್ ಎಂದು ಟ್ವೀಟ್ ಮಾಡಿದ್ದಾರೆ.

    ಇಬ್ಬರು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸಮಾನ ಅಂಕ ಬಂದಿದ್ದರೂ ಓರ್ವ ವಿದ್ಯಾರ್ಥಿ ಪ್ರಥಮ ಎಂದು ಘೋಷಿಸಲಾಯಿತು. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ನಾಲ್ಕು ಅಂಕದ ಪ್ರಶ್ನೆಗೆ ಜಾಸ್ತಿ ಉತ್ತರ ಬರೆದಿದ್ದರೆ ಇನ್ನೊಬ್ಬ ಎರಡು ಅಂಕದ ಪ್ರಶ್ನೆಗೆ ಉತ್ತರ ಬರೆದಿದ್ದ. ಈ ರೀತಿಯಾಗಿ ಇಂಗ್ಲೆಂಡ್ ಈ ಬಾರಿ ಟ್ರೋಫಿ ಗೆದ್ದುಕೊಂಡಿದೆ ಎಂದು ಜನ ಕಾಲೆಳೆದಿದ್ದಾರೆ.

    ವಿಶ್ವಕಪ್ ರೀತಿಯ ದೊಡ್ಡ ಪಂದ್ಯಗಳಲ್ಲಿ ಈ ರೀತಿಯ ನಿಯಮವನ್ನು ಐಸಿಸಿ ಅಳವಡಿಸಿರುವುದು ಸರಿಯಲ್ಲ. ಇನ್ನೂ ಮುಂದೆ ಎದುರಾಳಿ ನೀಡಿದ ಮೊತ್ತವನ್ನು ಬೆನ್ನಟ್ಟಿದರೂ ಹೆಚ್ಚು ಬೌಂಡರಿ ಹೊಡೆದಿಲ್ಲ ಎಂದು ಹೇಳಿ ಎದುರಾಳಿ ತಂಡಕ್ಕೆ ಜಯವನ್ನು ನೀಡುವ ನಿಯಮ ಬಂದರೂ ಬರಬಹುದು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

    46 ದಿನಗಳಲ್ಲಿ 48 ಪಂದ್ಯಗಳನ್ನು ಆಡಿಸಿ ವಿಶ್ವಕಪ್‍ನಂತಹ ಟೂರ್ನಿಗಳಲ್ಲಿ ಫೈನಲ್ ವಿಜೇತರನ್ನು ಬೌಂಡರಿಗಳ ಸಂಖ್ಯೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದರೆ ಸೆನ್ಸ್ ಲೆಸ್ ನಿಯಮಗಳನ್ನು ಐಸಿಸಿ ಹೊಂದಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

    ಭಾನುವಾರ ಲಾಡ್ರ್ಸ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡಿತು. ನಿಗದಿತ 50 ಓವರ್ ಗಳಲ್ಲಿ ಇಂಗ್ಲೆಂಡ್‍ಗೆ 241 ರನ್‍ಗಳ ಗುರಿ ನೀಡಿತು. ಆದರೆ ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಈ ಗುರಿಯನ್ನು ಬೆನ್ನಟ್ಟಲಾಗದೆ ಕೊನೆಯಲ್ಲಿ ಬೆನ್ ಸ್ಟೋಕ್ಸ್ ಅವರ ಸೂಪರ್ ಬ್ಯಾಟಿಂಗ್‍ಯಿಂದ ಪಂದ್ಯದಲ್ಲಿ ಟೈ ಸಾಧಿಸಿತ್ತು.

    ಪಂದ್ಯ ಟೈ ಆದ ಕಾರಣ ಐಸಿಸಿ ನಿಯಮದಂತೆ ಸೂಪರ್ ಓವರ್ ಆಡಿಸಲು ತೀರ್ಮಾನ ಮಾಡಲಾಯಿತು. ಸೂಪರ್ ಓವರ್ ನಲ್ಲಿ ಮೊದಲ ಬ್ಯಾಟ್ ಮಾಡಿದ ಇಂಗ್ಲೆಂಡ್ ಬಟ್ಲರ್ ಮತ್ತು ಸ್ಟೋಕ್ಸ್ ಅವರು ತಲಾ ಒಂದೊಂದು ಬೌಡರಿ ಸಿಡಿಸಿ ನ್ಯೂಜಿಲೆಂಡ್ ತಂಡಕ್ಕೆ 15 ರನ್‍ಗಳ ಗುರಿ ನೀಡಿದರು. ಇದನ್ನು ಬೆನ್ನಟ್ಟಿದ ಕೀವೀಸ್ ಆಟಗಾರರಾದ ಜಿಮ್ಮಿ ನೀಶಮ್ ಮತ್ತು ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಅವರ ಬೌಲಿಂಗ್ ನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದರು ನೀಶಮ್ ಅವರು ಒಂದು ಸಿಕ್ಸರ್ ಸಿಡಿಸಿ ಗೆಲ್ಲುವ ಭರವಸೆ ಮೂಡಿಸಿದ್ದರು.

    ಆದರೆ ಕೊನೆಯ ಎಸೆತದಲ್ಲಿ ಗೆಲ್ಲಲು ನ್ಯೂಜಿಲೆಂಡ್‍ಗೆ 2 ರನ್ ಬೇಕಿತ್ತು. ಆಗ ಸ್ಟ್ರೈಕ್‍ನಲ್ಲಿ ಇದ್ದ ಅನುಭವಿ ಆಟಗಾರ ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಎಸೆದ ಕೊನೆಯ ಎಸೆತದಲ್ಲಿ 2 ರನ್ ಕದಿಯಲು ವಿಫಲರಾದರು. ಜೋಫ್ರಾ ಅವರ ಎಸೆತವನ್ನು ಮಿಡ್ ವಿಕೆಟ್ ಕಡೆಗೆ ತಳ್ಳಿದ ಗುಪ್ಟಿಲ್ ಎರಡು ರನ್ ಕದಿಯುವಲ್ಲಿ ಯಶಸ್ವಿಯಾಗಲಿಲ್ಲ. ರಾಯ್ ಅವರು ಎಸೆದ ಉತ್ತಮ ಥ್ರೋವನ್ನು ಬಟ್ಲರ್ ಹಿಡಿದು ರನ್ ಔಟ್ ಮಾಡಿದರು. ಈ ಮೂಲಕ ಸೂಪರ್ ಓವರ್ ಕೂಡ ಟೈ ಆಯ್ತು.

    ಫೈನಲ್‍ನಲ್ಲಿ ಸೂಪರ್ ಓವರ್ ಕೂಡ ಟೈ ಆದ ಕಾರಣ ಐಸಿಸಿ ನಿಯಮದಂತೆ ಹೆಚ್ಚು ಬೌಂಡರಿ ಸಿಡಿಸಿದ ತಂಡಕ್ಕೆ ಗೆಲುವು ಎಂದು ಘೋಷಣೆ ಮಾಡಲಾಯಿತು. ಪಂದ್ಯದಲ್ಲಿ ಇಂಗ್ಲೆಂಡ್ ಒಟ್ಟು 24 ಬೌಂಡರಿ ಹೊಡೆದಿದ್ದರೆ ನ್ಯೂಜಿಲೆಂಡ್ 17 ಬೌಂಡರಿ ಹೊಡೆದಿತ್ತು. ಈ ಮೂಲಕ ಮೊದಲ ಬಾರಿಗೆ ಇಂಗ್ಲೆಂಡ್ ವಿಶ್ವಕಪ್ ಜಯಿಸಿತ್ತು.

  • ವಿಶ್ವಕಪ್‍ಗಾಗಿ ‘ನೋ ರೆಸ್ಟ್’ ಎಂದ ಹಾರ್ದಿಕ್ ಪಾಂಡ್ಯ

    ವಿಶ್ವಕಪ್‍ಗಾಗಿ ‘ನೋ ರೆಸ್ಟ್’ ಎಂದ ಹಾರ್ದಿಕ್ ಪಾಂಡ್ಯ

    ಮುಂಬೈ: ದೇಶದ ಪರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಬೇಕೆಂಬುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರರನ ಜೀವನದ ಗುರಿಯಾಗಿರುತ್ತದೆ. ಸದ್ಯ ವಿಶ್ವಕಪ್ ಆಡುವ ಅವಕಾಶವನ್ನು ಪಡೆದಿರುವ ಟೀಂ ಇಂಡಿಯಾ ಆಲೌಂಡರ್ ಹಾರ್ದಿಕ್ ಪಾಂಡ್ಯ ಟೂರ್ನಿ ಇರುವುದರಿಂದ ವಿಶ್ರಾಂತಿ ಪಡೆಯುವುದಿಲ್ಲ ಎಂದಿದ್ದಾರೆ.

    ವಿಶ್ವಕಪ್ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯ ಬಳಿಕ ಆಟಗಾರರಿಗೆ ಯಾವುದೇ ತರಬೇತಿಯನ್ನ ಆರಂಭಿಸದ ಬಿಸಿಸಿಐ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿತ್ತು. ಈ ಹಿನ್ನೆಲೆ ನಾಯಕ ವಿರಾಟ್ ಕೊಹ್ಲಿ, ಉಪ ನಾಯಕ ರೋಹಿತ್ ಶರ್ಮಾ ಕುಟುಂಬದೊಂದಿಗೆ ಸಮಯ ಪ್ರವಾಸವನ್ನ ಕೈಗೊಂಡಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಮಾತ್ರ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಾ ನೋ ರೆಸ್ಟ್ ಎಂದಿದ್ದಾರೆ.

    ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಹಾರ್ದಿಕ್ ವಿಶ್ರಾಂತಿ ಪಡೆಯುವುದಕ್ಕಿಂತ ಫಿಟ್ನೆಸ್ ಮುಖ್ಯ ಎಂದಿದ್ದಾರೆ. ಹಾರ್ದಿಕ್ ಪೋಸ್ಟ್‍ಗೆ ನೆಟ್ಟಿಗರು ಫಿದಾ ಆಗಿದ್ದು, ವಿಶ್ವಕಪ್‍ಗೆ ಶುಭಕೋರಿ ಪ್ರತಿಕ್ರಿಯೆ ನೀಡಿದ್ದಾರೆ.

    ಕಾಫಿ ವಿಥ್ ಕರಣ್ ಶೋ ವಿವಾದ ಬಳಿಕ ಹಾರ್ದಿಕ್ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಬಂದಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹಾರ್ದಿಕ್ ಮತ್ತಷ್ಟು ಫಿಟ್ ಆಗಲು ಪ್ರಯತ್ನಿಸುತ್ತಿದ್ದಾರೆ. ಈ ಬಾರಿಯ ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡವಾಗಿ ಕಣಕ್ಕೆ ಇಳಿಯುತ್ತಿರುವ ಟೀಂ ಇಂಡಿಯಾ ಮೇ 22 ರಂದು ಇಂಗ್ಲೆಂಡ್‍ಗೆ ಪ್ರಯಾಣಿಸುವ ಸಾಧ್ಯತೆ ಇದೆ.