Tag: 2019 Lok Sabha elections

  • 2019; ಮೋದಿ ಅಲೆಯಲ್ಲಿ ಮತ್ತೆ ಅರಳಿದ ಕಮಲ

    2019; ಮೋದಿ ಅಲೆಯಲ್ಲಿ ಮತ್ತೆ ಅರಳಿದ ಕಮಲ

    – ಸಿಎಂ ಪುತ್ರನ ವಿರುದ್ಧ ಗೆದ್ದು ಬೀಗಿದ್ದ ಸುಮಲತಾ
    – ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡಗೆ ಸೋಲು

    – ಪಬ್ಲಿಕ್‌ ಟಿವಿ
    2019 ಮೋದಿ (Narendra Modi) ನೇತೃತ್ವದ ಸರ್ಕಾರಕ್ಕೆ ಅತ್ಯಂತ ಮಹತ್ವದ ವರ್ಷವಾಗಿತ್ತು. ದೇಶದಲ್ಲಿ ಮೋದಿ ಅಲೆ ಹೇಗಿತ್ತು ಎಂಬುದು 17ನೇ ಸಾರ್ವತ್ರಿಕ ಚುನಾವಣಾ ಫಲಿತಾಂಶದಿಂದ ತಿಳಿಯಿತು. ಚುನಾವಣೆಗೂ ಮೊದಲು ಮೋದಿ ನೇತೃತ್ವದ ಐದು ವರ್ಷಗಳ ಆಡಳಿತದ ಬಗ್ಗೆ ಹಲವಾರು ಟೀಕೆಗಳೂ ಕೇಳಿಬಂದಿದ್ದವು. ನೋಟು ರದ್ದತಿ, ತನಿಖಾ ಸಂಸ್ಥೆಗಳ ದುರ್ಬಳಕೆ, ಸರ್ವಾಧಿಕಾರ ಆಡಳಿತ ಆರೋಪಗಳು ಕೇಳಿಬಂದಿದ್ದವು. ಇದರ ನಡುವೆ ಸ್ವಚ್ಛಭಾರತ ಅಭಿಯಾನ, ಸಿಎಎ ಜಾರಿ ಭರವಸೆ, ಆಯುಷ್ಮಾನ್ ಭಾರತದಂತಹ ಕ್ರಮಗಳು ಬಿಜೆಪಿ ಕೈಹಿಡಿದವು. ಇದೆಲ್ಲದಕ್ಕಿಂತ ಮುಖ್ಯವಾಗಿ ಚುನಾವಣಾ ಹೊತ್ತಲ್ಲಿ ಆದ ಪುಲ್ವಾಮಾ ದಾಳಿ ದೇಶದ ರಾಜಕೀಯ ದಿಕ್ಕನ್ನೇ ಬದಲಿಸಿತು.

    ಸ್ವಚ್ಛಭಾರತ
    2014 ರಲ್ಲಿ ಮೋದಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದರು. ಅವರ ಪ್ರಮುಖ ಯೋಜನೆಗಳಲ್ಲಿ ಸ್ವಚ್ಛಭಾರತ ಕೂಡ ಒಂದು. ಈ ಕಾರ್ಯಕ್ರಮದಡಿ ಭಾರತವು ಶೌಚ ಮುಕ್ತ ದೇಶವಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿತು. ಆದರೂ ಶೌಚಾಲಯ ಹೊಂದಿರುವ ಮನೆಗಳ ಪ್ರಮಾಣ ಶೇ.100 ಇಲ್ಲ. ಆದರೂ ಯೋಜನೆಯಿಂದಾಗಿ ದೇಶದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಸಿಕ್ಕಿತು. ಇದನ್ನೂ ಓದಿ: 2014; ಪಾತಾಳಕ್ಕೆ ಕುಸಿದ ಕಾಂಗ್ರೆಸ್ – ದಿಲ್ಲಿ ಗದ್ದುಗೆಯೇರಿದ ನರೇಂದ್ರ ಮೋದಿ

    ನೋಟು ರದ್ದತಿ
    2016 ರ ನವೆಂಬರ್ 8 ರಂದು ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ 500 ರೂ. ಮತ್ತು 1000 ರೂ. ಮುಖಬೆಲೆ ನೋಟುಗಳನ್ನು ರದ್ದು ಮಾಡಿ ಪ್ರಧಾನಿ ಮೋದಿ ಆದೇಶ ಹೊರಡಿಸಿದ್ದರು. ಹೆಚ್ಚು ಮುಖಬೆಲೆಯ ನೋಟುಗಳಿಂದ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಜೊತೆಗೆ ಭಯೋತ್ಪಾದನೆ ನಿಗ್ರಹಕ್ಕೆ ಈ ಕ್ರಮ ಅಗತ್ಯ ಎಂದು ಕೇಂದ್ರ ಸರ್ಕಾರ ನೋಟು ರದ್ದತಿ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ನೋಟು ರದ್ದತಿ ಕಾರಣದಿಂದಾಗಿ ಸುಮಾರು 100 ಜನ ತಮ್ಮ ಪ್ರಾಣ ಕಳೆದುಕೊಂಡರು. ಕೇಂದ್ರ ಕ್ರಮವನ್ನು ವಿಪಕ್ಷಗಳು ಟೀಕಿಸಿದ್ದವು. ಇದೊಂದು ಆರ್ಥಿಕ ನರಮೇಧ ಮತ್ತು ವ್ಯವಸ್ಥಿತ ಲೂಟಿ ಎಂದು ಕೇಂದ್ರ ಸರ್ಕಾರವನ್ನು ದೂರಿದ್ದವು.

    ಒಂದು ದೇಶ ಒಂದು ತೆರಿಗೆ
    2017 ರಲ್ಲಿ ಸರಕು ಮತ್ತು ಸೇವಾ ತೆರಿಗೆ-ಜಿಎಸ್‌ಟಿಯನ್ನು (GST) ಕೇಂದ್ರ ಸರ್ಕಾರ ಜಾರಿಗೆ ತಂದಿತು. ಒಂದು ದೇಶ ಒಂದು ತೆರಿಗೆ ಪರಿಕಲ್ಪನೆಯಲ್ಲಿ ಯೋಜನೆ ಜಾರಿಗೊಳಿಸಿತು. ಆದರೂ ಜಿಎಸ್‌ಟಿ ಜಾರಿಯಿಂದ ರಾಜ್ಯ ಸರ್ಕಾರಗಳು ನಷ್ಟ ಅನುಭವಿಸಿದವು. ಇದನ್ನು ಕೇಂದ್ರ ಸರ್ಕಾರವೇ ಭರಿಸುವುದಾಗಿ ಒಪ್ಪಿಕೊಂಡರೂ, ಪರಿಹಾರವನ್ನು ಪೂರ್ಣ ಪ್ರಮಾಣದಲ್ಲಿ ರಾಜ್ಯ ಸರ್ಕಾರಗಳಿಗೆ ನೀಡಿಲ್ಲ. ಇದನ್ನೂ ಓದಿ: 2009, 2014, 2019ರ ಲೋಕಸಭಾ ಚುನಾವಣೆಯಲ್ಲಿ ಏನಾಗಿತ್ತು? ಗೆದ್ದ ಕಲಿಗಳು ಯಾರು? – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

    ಪುಲ್ವಾಮಾ ದಾಳಿ
    ಚುನಾವಣೆ ಇನ್ನೇನು ಹತ್ತಿರದಲ್ಲಿದೆ ಎನ್ನುವಾಗಲೇ ಜಮ್ಮುವಿನ ಪುಲ್ವಾಮಾದಲ್ಲಿ (Pulwama Attack) ಸಿಆರ್‌ಪಿಎಫ್ ಯೋಧರ ವಾಹನಗಳ ಮೇಲೆ ಉಗ್ರರ ದಾಳಿ ನಡೆಯಿತು. ಸಿಆರ್‌ಪಿಎಫ್‌ನ 40 ಯೋಧರು ದಾಳಿಯಲ್ಲಿ ಮೃತಪಟ್ಟರು. ಪುಲ್ವಾಮಾ ದಾಳಿ ಪ್ರತಿಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ತಾಣಗಳ ಮೇಲೆ ದಾಳಿ ನಡೆಸಿತು. ಬಾಲಾಕೋಟ್ ವೈಮಾನಿಕ ದಾಳಿ ಮತ್ತು ಸೇನಾ ಕಾರ್ಯಾಚರಣೆಗಳು ಹೆಚ್ಚು ಸದ್ದು ಮಾಡಿದವು. ನಂತರ ನಡೆದ ಚುನಾವಣೆಯಲ್ಲಿ ಮೋದಿ ಸರ್ಕಾರ ಅಭೂತಪೂರ್ವ ಜಯ ಸಾಧಿಸಿತು.

    39 ದಿನ ಚುನಾವಣೆ
    ಏ.11 ರಿಂದ ಮೇ 19 ರ ವರೆಗೆ ಚುನಾವಣೆ ನಡೆಯಿತು. ಒಟ್ಟು 543 ಕ್ಷೇತ್ರಗಳಿಗೆ 39 ದಿನ ಮತದಾನ ನಡೆಯಿತು.

    ಒಟ್ಟು ಮತದಾರರು: 91.2 ಕೋಟಿ
    ಮತ ಚಲಾಯಿಸಿದವರ ಸಂಖ್ಯೆ: 61,20,81,902
    ಮತ ಪ್ರಮಾಣ: 69.05%

    ರಾಜ್ಯಗಳು: 36

    ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
    ಬಿಜೆಪಿ – 303
    ಕಾಂಗ್ರೆಸ್ – 52
    ಡಿಎಂಕೆ – 23
    ಎಐಟಿಸಿ – 22
    ವೈಎಸ್‌ಆರ್‌ಸಿಪಿ – 22
    ಪಕ್ಷೇತರ – 4
    ಇತರೆ – 116

    ಮತ್ತೆ ಗೆದ್ದ ಮೋದಿ
    ಚುನಾವಣೆಯಲ್ಲಿ ಬಿಜೆಪಿ 37.36% ಮತಗಳನ್ನು ಪಡೆಯಿತು. ಇದು 1989 ರ ಸಾರ್ವತ್ರಿಕ ಚುನಾವಣೆಯ ನಂತರ ರಾಜಕೀಯ ಪಕ್ಷವೊಂದು ಪಡೆದ ಅತ್ಯಧಿಕ ಮತ ಪ್ರಮಾಣವಾಗಿದೆ. 303 ಸ್ಥಾನಗಳನ್ನು ಗೆದ್ದ ಬಿಜೆಪಿ ಕಳೆದ ಚುನಾವಣೆಗಿಂತ ಬಹುಮತವನ್ನು ಹೆಚ್ಚಿಸಿಕೊಂಡಿತು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 353 ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ 52 ಸ್ಥಾನಗಳನ್ನು ಗೆದ್ದುಕೊಂಡಿತು. ವಿರೋಧ ಪಕ್ಷವಾಗಲು ಬೇಕಾದ ಸ್ಥಾನಗಳನ್ನು ಪಡೆಯುವಲ್ಲೂ ವಿಫಲವಾಯಿತು. ಇದರ ಜೊತೆಗೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) 91 ಸ್ಥಾನಗಳನ್ನು ಗೆದ್ದಿತು.

    ಕರ್ನಾಟಕದಲ್ಲಿ ಏನಾಗಿತ್ತು?
    ಬಿಜೆಪಿ – 25
    ಕಾಂಗ್ರೆಸ್ – 1
    ಜೆಡಿಎಸ್ – 1
    ಪಕ್ಷೇತರ – 1

    ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಹೊಡೆತ
    ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಲೋಕಸಭಾ ಚುನಾವಣೆಯಲ್ಲಿ (2019 Lok Sabha Elections) ಬಿಜೆಪಿ ವಿರುದ್ಧ ಮೈತ್ರಿ ಪಕ್ಷಗಳು ಸ್ಪರ್ಧೆ ಮಾಡಿದ್ದವು. ಆದರೆ ಮೋದಿ ಅಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹೀನಾಯ ಸ್ಥಿತಿ ತಲುಪಿದವು. ಬಿಜೆಪಿ 25 ಸ್ಥಾನಗಳನ್ನು ಗೆದ್ದರೆ, ಮೈತ್ರಿ ಪಕ್ಷಗಳು ತಲಾ 1 ಸ್ಥಾನಗಳನ್ನು ಮಾತ್ರ ಗೆದ್ದವು. ಇದನ್ನೂ ಓದಿ: 1999: ಮತ್ತೆ ಪ್ರಧಾನಿಯಾದ ‘ಅಜಾತಶತ್ರು’ – 5 ವರ್ಷ ಪೂರ್ಣ ಆಡಳಿತ ನಡೆಸಿದ ಮೊದಲ ಬಿಜೆಪಿ ನಾಯಕ

    ಗೆದ್ದು ಬೀಗಿದ ಮಂಡ್ಯ ಸೊಸೆ
    2019 ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದ ಕ್ಷೇತ್ರ ಮಂಡ್ಯ. ನಟ ಅಂಬರೀಶ್‌ ನಿಧನದ ಬಳಿಕ ಆಪ್ತರ ಸಲಹೆಯಂತೆ ಅನಿರೀಕ್ಷಿತವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಚುನಾವಣಾ ಕಣಕ್ಕಿಳಿದರು. ರಾಜಕೀಯವಾಗಿ ಅನುಭವ ಇಲ್ಲದ ಸುಮಲತಾ ಅವರು ಗೆಲ್ಲುತ್ತಾರೆಯೇ ಎಂಬ ಪ್ರಶ್ನೆ ಮೂಡಿತ್ತು. ಇತ್ತ ಮೈತ್ರಿ ಅಭ್ಯರ್ಥಿಯಾಗಿ ಆಗಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧೆ ಮಾಡಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡ್ಯದಲ್ಲಿ ತನ್ನ ಅಭ್ಯರ್ಥಿಯನ್ನು ಹಾಕಲಿಲ್ಲ. ಸುಮಲತಾ ಅವರಿಗೆ ಬೆಂಬಲ ಘೋಷಿಸಿತು. ಜಿದ್ದಾಜಿದ್ದಿನ ಕಣದಲ್ಲಿ ಸುಮಲತಾ ಗೆದ್ದು ಬೀಗಿದರು. ಈ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಏಕೈಕ ಅಭ್ಯರ್ಥಿಯಾದರು.

    ಮಾಜಿ ಪ್ರಧಾನಿಗೆ ಸೋಲು
    ಹಲವು ವರ್ಷಗಳ ಬಳಿಕ ಕಾರ್ಯಕರ್ತರ ಒತ್ತಾಯದ ಮೇರೆಗೆ ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೋಲಿನ ರುಚಿ ಕಂಡರು. ಅವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಗೆದ್ದು ಬೀಗಿದರು. ಮಾಜಿ ಪ್ರಧಾನಿ ಸ್ಪರ್ಧೆ ಕಾರಣಕ್ಕೆ ಈ ಕ್ಷೇತ್ರವೂ ಗಮನ ಸೆಳೆದಿತ್ತು.

  • 2019ರ ಲೋಕಸಭಾ ಚುನಾವಣೆ; ಹೆಚ್ಚು, ಕಡಿಮೆ ಮತಗಳ ಅಂತರದಿಂದ ಗೆದ್ದವರಿವರು

    2019ರ ಲೋಕಸಭಾ ಚುನಾವಣೆ; ಹೆಚ್ಚು, ಕಡಿಮೆ ಮತಗಳ ಅಂತರದಿಂದ ಗೆದ್ದವರಿವರು

    ಬೆಂಗಳೂರು: ಬಿರು ಬೇಸಿಗೆ ಹೊತ್ತಲ್ಲೇ ಲೋಕಸಭಾ ಚುನಾವಣಾ (Lok Sabha Election) ಕಾವು ದಿನೇ ದಿನೆ ಏರುತ್ತಿದೆ. ಈಗಾಗಲೇ ರಾಜ್ಯದ 28 ಕ್ಷೇತ್ರಗಳಿಗೆ ಮೂರು ಪಕ್ಷಗಳು ಹುರಿಯಾಳುಗಳನ್ನು ಘೋಷಿಸಿವೆ. ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆಯೂ ಜೋರಾಗಿ ನಡೆಯಿತು. ಬಿಜೆಪಿ-ಜೆಡಿಎಸ್ ಮೈತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

    ಮೂರು ಪಕ್ಷಗಳು ಹಲವು ಬದಲಾವಣೆಯೊಂದಿಗೆ ಈ ಬಾರಿ ಚುನಾವಣಾ ಕಣಕ್ಕಿಳಿದಿವೆ. ಮೈತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಗಮನಿಸಿದರೆ ಇದು ತಿಳಿಯುತ್ತದೆ. ಹಲವೆಡೆ ಹಿರಿಯರು, ಕಿರಿಯರೆನ್ನದೆ ಬದಲಾವಣೆ ಮಾಡಲಾಗಿದೆ. ಕೆಲವು ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಮಣೆ ಹಾಕಲಾಗಿದೆ. ಕಳೆದ ಲೋಕಸಭಾ ಚುನಾವಣಾ ಫಲಿತಾಂಶ ಗಮನದಲ್ಲಿಟ್ಟುಕೊಂಡು ಇಂತಹ ಮಾರ್ಪಾಡನ್ನು ಪಕ್ಷಗಳು ಮಾಡಿವೆ. ಇದನ್ನೂ ಓದಿ: ಬೆಳಗ್ಗೆದ್ದು ಸೆಲ್‌ ಕ್ಲೀನ್‌, ಯೋಗ ನಂತ್ರ 2 ಪೀಸ್‌ ಬ್ರೆಡ್-‌ ಜೈಲಲ್ಲಿರೋ ಕೇಜ್ರಿವಾಲ್‌ ದಿನಚರಿ ಹೇಗಿದೆ?

    2019 ರ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದವರು ಈ ಸಲವೂ ಅದೇ ಹುರುಪಿನಿಂದ ಅಖಾಡಕ್ಕಿಳಿದಿದ್ದಾರೆ. ಅತಿ ಕಡಿಮೆ ಮತಗಳ ಅಂತರದಿಂದ ಸೋತವರು ಒಂದೆಡೆ ಈ ಬಾರಿ ಏನಾಗುತ್ತೋ ಎಂಬ ಆತಂಕ ಮತ್ತೊಂದೆಡೆ ಇನ್ನೂ ಹೆಚ್ಚಿನ ಶ್ರಮ ಹಾಕಿ ಹೇಗಾದರು ಗೆಲ್ಲಲೇ ಬೇಕು ಎಂಬ ಭರವಸೆಯೊಂದಿಗೆ ಕಣದಲ್ಲಿದ್ದಾರೆ. ಇತ್ತ ಅತಿ ಕಡಿಮೆ ಅಂತರದಿಂದ ಸೋತವರು ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಹಠದಿಂದ ತಯಾರಿ ನಡೆಸುತ್ತಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದವರನ್ನೇ ಬದಲಾಯಿಸಿ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಿರುವುದು ಕುತೂಹಲ ಮೂಡಿಸಿದೆ.

    ಹೆಚ್ಚು ಮತಗಳ ಅಂತರದಿಂದ ಗೆದ್ದವರು (2019)
    ಉತ್ತರ ಕನ್ನಡ – ಅನಂತ್‌ಕುಮಾರ್ ಹೆಗಡೆ (ಬಿಜೆಪಿ): 4,79,649
    ಬೆಳಗಾವಿ – ಸುರೇಶ್ ಅಂಗಡಿ (ಬಿಜೆಪಿ): 3,91,304
    ಉಡುಪಿ-ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ (ಬಿಜೆಪಿ): 3,49,599
    ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ (ಬಿಜೆಪಿ): 3,31,192
    ದಕ್ಷಿಣ ಕನ್ನಡ – ನಳಿನ್ ಕುಮಾರ್ ಕಟೀಲ್ (ಬಿಜೆಪಿ): 2,74,621
    ವಿಜಯಪುರ – ರಮೇಶ್ ಜಿಗಜಿಣಗಿ (ಬಿಜೆಪಿ): 2,58,038
    ಶಿವಮೊಗ್ಗ – ಬಿ.ವೈ.ರಾಘವೇಂದ್ರ (ಬಿಜೆಪಿ): 2,23,360
    ಕೋಲಾರ – ಎಸ್.ಮುನಿಸ್ವಾಮಿ (ಬಿಜೆಪಿ): 2,10,021
    ಬೆಂಗಳೂರು ಗ್ರಾಮಾಂತರ – ಡಿ.ಕೆ.ಸುರೇಶ್ (ಕಾಂಗ್ರೆಸ್): 2,06,870
    ಧಾರವಾಡ – ಪ್ರಹ್ಲಾದ್ ಜೋಶಿ (ಬಿಜೆಪಿ): 2,05,072

    ಕಡಿಮೆ ಮತಗಳ ಅಂತರದಿಂದ ಗೆದ್ದವರು
    ಚಾಮರಾಜನಗರ – ವಿ.ಶ್ರೀನಿವಾಸ ಪ್ರಸಾದ್ (ಬಿಜೆಪಿ): 1,817
    ತುಮಕೂರು – ಜಿ.ಎಸ್.ಬಸವರಾಜ್ (ಬಿಜೆಪಿ): 13,339
    ಕೊಪ್ಪಳ – ಸಂಗಣ್ಣ ಕರಡಿ (ಬಿಜೆಪಿ): 38,397
    ಬಳ್ಳಾರಿ – ವೈ.ದೇವೇಂದ್ರಪ್ಪ (ಬಿಜೆಪಿ): 55,707
    ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್ (ಬಿಜೆಪಿ): 70,968
    ಚಿತ್ರದುರ್ಗ – ಎ.ನಾರಾಯಣಸ್ವಾಮಿ (ಬಿಜೆಪಿ): 80,178
    ಕಲಬುರಗಿ – ಡಾ. ಉಮೇಶ್ ಜಾದವ್ (ಬಿಜೆಪಿ): 95,452
    ಬೀದರ್ – ಭಗವಂತ್ ಖೂಬಾ (ಬಿಜೆಪಿ): 1,16,834
    ರಾಯಚೂರು – ರಾಜಾ ಅಮರೇಶ್ವರ ನಾಯಕ್ (ಬಿಜೆಪಿ): 1,17,716
    ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ (ಬಿಜೆಪಿ): 1,18,877

    ಈ ಬಾರಿ ಆದ ಪ್ರಮುಖ ಬದಲಾವಣೆಗಳೇನು?
    ಉತ್ತರ ಕನ್ನಡ: ಲೋಕಸಭಾ ಕ್ಷೇತ್ರದಲ್ಲಿ ಆರು ಬಾರಿ ಗೆದ್ದು ತನ್ನದೇ ವರ್ಚಸ್ಸು ಹೊಂದಿದ್ದ ಅನಂತ್‌ಕುಮಾರ್ ಹೆಗಡೆಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡದೇ ಅಚ್ಚರಿ ಮೂಡಿಸಿದೆ. 2019 ರಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಬಳಿಕ ಕ್ಷೇತ್ರದಿಂದ ನಾಪತ್ತೆಯಾಗಿ ಚುನಾವಣೆ ಸಂದರ್ಭದಲ್ಲಿ ಹೆಗಡೆ ಕ್ಷೇತ್ರದಲ್ಲಿ ಪ್ರತ್ಯಕ್ಷರಾಗಿದ್ದಾರೆ ಎಂದು ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದರು. ಇದೇ ಹೊತ್ತಿನಲ್ಲಿ ಸಂವಿಧಾನ ಬದಲಾವಣೆ ಕುರಿತು ಸಂಸದ ಆಡಿದ ಮಾತುಗಳು ಪಕ್ಷ ಮುಜುಗರಕ್ಕೀಡಾಗುವಂತೆ ಮಾಡಿತು. ಈ ಎಲ್ಲದರ ಪರಿಣಾಮವಾಗಿ ಹೆಗಡೆಗೆ ಕೊಕ್ ಕೊಟ್ಟು ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿಜೆಪಿ ಮಣೆ ಹಾಕಿದೆ. ಇದನ್ನೂ ಓದಿ: ಬಿಎಸ್‌ವೈ ಸಮ್ಮುಖದಲ್ಲಿ ಸುಮಲತಾ ಅಂಬರೀಶ್‌ ಬಿಜೆಪಿ ಸೇರ್ಪಡೆ

    ದಕ್ಷಿಣ ಕನ್ನಡ: ಅತ್ತ ರಾಜ್ಯಾಧ್ಯಕ್ಷ ಸ್ಥಾನವೂ ಹೋಯ್ತು ಇತ್ತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಕೂಡ ನಳಿನ್ ಕುಮಾರ್ ಕಟೀಲ್‌ಗೆ ಮಿಸ್ ಆಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಪ್ರತಿಫಲ ಇದು ಎಂದು ವಿಶ್ಲೇಷಿಸಲಾಗಿದೆ. 2024 ರ ಚುನಾವಣೆಗೆ ಕಟೀಲ್ ಬದಲಿಗೆ ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ.

    ಉಡುಪಿ-ಚಿಕ್ಕಮಗಳೂರು: 2019 ರ ಚುನಾವಣೆಯಲ್ಲಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಕೇಂದ್ರ ಮಂತ್ರಿಯಾಗಿದ್ದರೂ ಶೋಭಾ ಕರಂದ್ಲಾಜೆ ಅವರ ಸ್ಪರ್ಧೆಗೆ ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾಯಿತು. ಪರಿಣಾಮವಾಗಿ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಶಿಫ್ಟ್ ಮಾಡಲಾಯಿತು. ಉಡುಪಿ ಕ್ಷೇತ್ರದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಇದನ್ನೂ ಓದಿ: ಮೋದಿಯನ್ನು ಅಧಿಕಾರದಿಂದ ಇಳಿಸುವುದೇ ನಮ್ಮ ಮುಂದಿನ ಗುರಿ: ಮಲ್ಲಿಕಾರ್ಜುನ ಖರ್ಗೆ

    ಚಾಮರಾಜನಗರ: ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಿದ್ದ ವಿ.ಶ್ರೀನಿವಾಸ್ ಪ್ರಸಾದ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು. ಆದರೆ ಕಾಂಗ್ರೆಸ್‌ನ ಆರ್.ಧ್ರುವನಾರಾಯಣ್ ವಿರುದ್ಧ ಅತಿ ಕಡಿಮೆ ಮತಗಳ ಅಂತರದ ಪ್ರಾಯಾಸದ ಗೆಲುವು ಕಂಡಿದ್ದರು. ಅನಾರೋಗ್ಯ, ವಯಸ್ಸಿನ ಕಾರಣ ಈ ಸಲ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರ ಬದಲಾಗಿ ಎಸ್.ಬಾಲರಾಜ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಾಂಗ್ರೆಸ್‌ನ ಸುನೀಲ್ ಬೋಸ್ ವಿರುದ್ಧ ಬಾಲರಾಜ್ ಕಣಕ್ಕಿಳಿದಿದ್ದಾರೆ.

    ತುಮಕೂರು ಕ್ಷೇತ್ರದಲ್ಲಿ ಬಸವರಾಜ್ ಬದಲಿಗೆ ವಿ.ಸೋಮಣ್ಣ ಹಾಗೂ ಕೊಪ್ಪಳದಲ್ಲಿ ಸಂಗಣ್ಣ ಕರಡಿ ಬದಲಿಗೆ ಡಾ. ಬಸವರಾಜ್ ಕ್ಯಾವಟರ್‌ಗೆ ಬಿಜೆಪಿ ಟಿಕೆಟ್ ನೀಡಿದೆ.

  • 2019ರ ಲೋಕಸಭಾ ಚುನಾವಣೆಯಲ್ಲಿ ಏನಾಗಿತ್ತು? – ಗೆದ್ದವರು ಯಾರು? ಸೋತವರು ಯಾರು? – ಇಲ್ಲಿದೆ ಸಂಪೂರ್ಣ ಮಾಹಿತಿ

    2019ರ ಲೋಕಸಭಾ ಚುನಾವಣೆಯಲ್ಲಿ ಏನಾಗಿತ್ತು? – ಗೆದ್ದವರು ಯಾರು? ಸೋತವರು ಯಾರು? – ಇಲ್ಲಿದೆ ಸಂಪೂರ್ಣ ಮಾಹಿತಿ

    2019 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 28 ಕ್ಷೇತ್ರಗಳ ಪೈಕಿ 25 ರಲ್ಲಿ ಜಯಭೇರಿ ಬಾರಿಸಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದರೂ, ಎರಡೂ ಪಕ್ಷಗಳು ತಲಾ ಒಂದೊಂದು ಸ್ಥಾನಕ್ಕಷ್ಟೇ ತೃಪ್ತಿ ಪಟ್ಟುಕೊಂಡಿದ್ದವು. ಇನ್ನು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್‌ ಗೆಲುವು ದಾಖಲಿಸಿದ್ದರು. ಹಾಗಾದರೆ ಯಾವ ಕ್ಷೇತ್ರದಲ್ಲಿ ಯಾರ‍್ಯಾರು ಗೆದ್ದಿದ್ದರು, ಯಾರು ಸೋತಿದ್ದರು ಎಂಬ ವಿವರ ಇಲ್ಲಿದೆ.

    ಬೆಳಗಾವಿ:

    2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುರೇಶ್ ಅಂಗಡಿ 7,61,991 ಮತಗಳನ್ನು ಪಡೆದು, 3,91,304 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಸಾಧುನವರ್ 3,70,687 ಮತಗಳನ್ನು ಪಡೆದು ಪರಾಭವಗೊಂಡಿದ್ದರು.

    ಬಳ್ಳಾರಿ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ವೈ. ದೇವೇಂದ್ರಪ್ಪ 6,16,338 ಮತಗಳನ್ನು ಪಡೆದು, 55,707 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಉಗ್ರಪ್ಪ 5,60,681 ಮತಗಳನ್ನು ಪಡೆದು ಸೋಲುಕಂಡಿದ್ದರು.

    ಬಾಗಲಕೋಟೆ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಪಿ.ಸಿ ಗದ್ದಿಗೌಡರ್ 1,68,638 ಮತಗಳನ್ನು ಪಡೆದು, 1,68,187 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ್ 4,96,451 ಮತಗಳನ್ನು ಪಡೆದು ಸೋಲುಕಂಡಿದ್ದರು.

    ಬೀದರ್:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಭಗವಂತ್ ಖೂಬಾ 5,85,471 ಮತಗಳನ್ನು ಪಡೆದು, 1,16,834 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆ 4,68,637 ಮತಗಳನ್ನು ಪಡೆದು ಸೋಲುಕಂಡಿದ್ದರು.

    ಬೆಂಗಳೂರು ಕೇಂದ್ರ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಪಿ.ಸಿ ಮೋಹನ್ 6,02,853 ಮತಗಳನ್ನು ಪಡೆದು, 70,968 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ 5,31,885 ಮತಗಳನ್ನು ಪಡೆದು ಸೋಲುಕಂಡಿದ್ದರು.

    ಬೆಂಗಳೂರು ಉತ್ತರ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಸದಾನಂದಗೌಡ 8,24,500 ಮತಗಳನ್ನು ಪಡೆದು, 1,47,518 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ 6,76,982 ಮತಗಳನ್ನು ಪಡೆದು ಸೋಲುಕಂಡಿದ್ದರು.

    ಬೆಂಗಳೂರು ಗ್ರಾಮಾಂತರ:

    ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿ.ಕೆ ಸುರೇಶ್ 8,78,258 ಮತಗಳನ್ನು ಪಡೆದು, 2,06,870 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಪ್ರತಿಸ್ಪರ್ಧಿ ಅಶ್ವಥ್ ನಾರಾಯಣಗೌಡ 6,71,388 ಮತಗಳನ್ನ ಪಡೆದು ಸೋಲನುಭವಿಸಿದ್ದರು.

    ಬೆಂಗಳೂರು ದಕ್ಷಿಣ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ತೇಜಸ್ವಿ ಸೂರ್ಯ 7,39,229 ಮತಗಳನ್ನು ಪಡೆದು, 3,31,192 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಅಖಾಡಕ್ಕಿಳಿದಿದ್ದ ಪ್ರತಿಸ್ಪರ್ಧಿ ಬಿ.ಕೆ ಹರಿಪ್ರಸಾದ್ 6,08,037 ಮತಗಳನ್ನು ಪಡೆದು ಸೋಲುಕಂಡಿದ್ದರು.

    ಚಾಮರಾಜನಗರ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ. ಶ್ರೀನಿವಾಸ್ ಪ್ರಸಾದ್ 5,68,537 ಮತಗಳನ್ನು ಪಡೆದು, 1,817 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಪ್ರತಿಸ್ಪರ್ಧಿ ಆರ್. ಧ್ರುವನಾರಾಯಣ 5,66,720 ಮತಗಳನ್ನು ಪಡೆದು ಸೋಲುಕಂಡಿದ್ದರು.

    ಚಿಕ್ಕಬಳ್ಳಾಪುರ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಎನ್ ಬಚ್ಚೇಗೌಡ 7,45,912 ಮತಗಳನ್ನು ಪಡೆದು, 1,82,110 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಪ್ರತಿಸ್ಪರ್ಧಿ ಎಂ. ವೀರಪ್ಪ ಮೊಯ್ಲಿ 5,63,802 ಮತಗಳನ್ನು ಪಡೆದು ಸೋಲುಕಂಡಿದ್ದರು.

    ಉಡುಪಿ-ಚಿಕ್ಕಮಗಳೂರು:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಶೋಭಾ ಕರಂದ್ಲಾಜೆ 7,18,916 ಮತಗಳನ್ನು ಪಡೆದು, 3,49,599 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಪ್ರತಿಸ್ಪರ್ಧಿ ಪ್ರಮೋದ್ ಮಧ್ವರಾಜ್ 3,69,317 ಮತಗಳನ್ನು ಪಡೆದು ಸೋಲುಕಂಡಿದ್ದರು.

    ಚಿಕ್ಕೋಡಿ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಅಣ್ಣಾ ಸಾಹೇಬ್ ಜೊಲ್ಲೆ 6,45,017 ಮತಗಳನ್ನು ಪಡೆದು, 1,18,887 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಪ್ರತಿಸ್ಪರ್ಧಿ ಪ್ರಕಾಶ್ ಹುಕ್ಕೇರಿ 5,26,140 ಮತಗಳನ್ನು ಪಡೆದು ಸೋಲುಕಂಡಿದ್ದರು.

    ಚಿತ್ರದುರ್ಗ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಎ.ನಾರಾಯಣಸ್ವಾಮಿ 6,26,195 ಮತಗಳನ್ನು ಪಡೆದು, 80,178 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಪ್ರತಿಸ್ಪರ್ಧಿ ಬಿ.ಎನ್ ಚಂದ್ರಪ್ಪ 5,46,017 ಮತಗಳನ್ನು ಪಡೆದು ಸೋಲುಕಂಡಿದ್ದರು.

    ದಕ್ಷಿಣ ಕನ್ನಡ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ನಳಿನ್‌ಕುಮಾರ್ ಕಟೀಲ್ 7,74,285 ಮತಗಳನ್ನು ಪಡೆದು, 2,74,621 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಪ್ರತಿಸ್ಪರ್ಧಿ ಮಿಥುನ್ ರೈ 4,99,664 ಮತಗಳನ್ನು ಪಡೆದು ಸೋಲುಕಂಡಿದ್ದರು.

    ದಾವಣಗೆರೆ:

    ಬಿಜೆಪಿಯಿಂದ ಸ್ಪರ್ಧಿಸಿದ್ದ 6,52,996 ಮತಗಳನ್ನು ಪಡೆದು, 1,69,702 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಪ್ರತಿಸ್ಪರ್ಧಿ ಹೆಚ್.ಬಿ ಮಂಜಪ್ಪ 4,83,294 ಮತಗಳನ್ನು ಪಡೆದು ಸೋಲುಕಂಡಿದ್ದರು.

    ಧಾರವಾಡ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಹ್ಲಾದ್ ಜೋಶಿ 6,84,837 ಮತಗಳನ್ನು ಪಡೆದು, 2,05,072 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಪ್ರತಿಸ್ಪರ್ಧಿ ವಿನಯ್ ಕುಲಕರ್ಣಿ 4,79,765 ಮತಗಳನ್ನು ಪಡೆದು ಸೋಲುಕಂಡಿದ್ದರು.

    ಹಾಸನ:

    ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಪಡೆದು, 1,41,324 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಪ್ರತಿಸ್ಪರ್ಧಿ ಎ.ಮಂಜು 5,35,282 ಮತಗಳನ್ನು ಪಡೆದು ಸೋಲುಕಂಡಿದ್ದರು.

    ಹಾವೇರಿ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಶಿವಕುಮಾರ್ ಉದಾಸಿ 6,83,660 ಮತಗಳನ್ನು ಪಡೆದು, 1,40,882 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಪ್ರತಿಸ್ಪರ್ಧಿ 1,40,882 ಮತಗಳನ್ನು ಪಡೆದು ಸೋಲುಕಂಡಿದ್ದರು.

    ಕಲಬುರಗಿ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ.ಉಮೇಶ್ ಜಾಧವ್ 6,20,192 ಮತಗಳನ್ನು ಪಡೆದು, 95,452 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ 4,24,740 ಮತಗಳನ್ನು ಪಡೆದು ಸೋಲುಕಂಡಿದ್ದರು.

    ಕೋಲಾರ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್. ಮುನಿಸ್ವಾಮಿ 7,09,165 ಮತಗಳನ್ನು ಪಡೆದು, 2,10,021 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಪ್ರತಿಸ್ಪರ್ಧಿ ಕೆ.ಹೆಚ್. ಮುನಿಯಪ್ಪ 6,99,144 ಮತಗಳನ್ನು ಪಡೆದು ಪರಾಭವಗೊಂಡಿದ್ದರು.

    ಕೊಪ್ಪಳ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಕರಡಿ ಸಂಗಣ್ಣ 5,86,783 ಮತಗಳನ್ನು ಪಡೆದು, 38,397 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಬಸವರಾಜ ಹಿಟ್ನಾಳ್ 5,48,386 ಮತಗಳನ್ನು ಪಡೆದು ಪರಾಭವಗೊಂಡಿದ್ದರು.

    ಮಂಡ್ಯ:

    ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಷ್ 7,03,660 ಮತಗಳನ್ನು ಪಡೆದು, 1,25,876 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಿಖಿಲ್ ಕುಮಾರಸ್ವಾಮಿ 5,77,784 ಮತಗಳನ್ನು ಪಡೆದು ಸೋಲು ಕಂಡಿದ್ದರು.

    ಮೈಸೂರು:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪ್ ಸಿಂಹ 6,88,974 ಮತಗಳನ್ನು ಪಡೆದು, 1,38,647 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಿ.ಹೆಚ್ ವಿಜಯ್ ಶಂಕರ್ 5,50,327 ಮತಗಳನ್ನು ಪಡೆದು ಪರಾಭವಗೊಂಡಿದ್ದರು.

    ರಾಯಚೂರು:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಅಮರೇಶ್ವರ ನಾಯಕ 5,98,337 ಮತಗಳನ್ನು ಪಡೆದು, 1,17,716 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ.ವಿ ನಾಯಕ್ 4,80,621 ಮತಗಳನ್ನು ಪಡೆದು ಸೋಲನುಭವಿಸಿದ್ದರು.

    ಶಿವಮೊಗ್ಗ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ವೈ ರಾಘವೇಂದ್ರ 7,29,872 ಮತಗಳನ್ನು ಪಡೆದು, 5,06,512 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪ 5,06,512 ಮತಗಳನ್ನು ಪಡೆದು ಸೋಲನುಭವಿಸಿದ್ದರು.

    ತುಮಕೂರು:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ.ಎಸ್ ಬಸವರಾಜು 5,96,127 ಮತಗಳನ್ನು ಪಡೆದು, 13,339 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಹೆಚ್.ಡಿ ದೇವೇಗೌಡ 5,82,788 ಮತಗಳನ್ನು ಪಡೆದು ಸೋಲನುಭವಿಸಿದ್ದರು.

    ಉತ್ತರ ಕನ್ನಡ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ಅನಂತ್‌ಕುಮಾರ್ ಹೆಗಡೆ 7,86,042 ಮತಗಳನ್ನು ಪಡೆದು, 4,79,649 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಆನಂದ್ ಟಸ್ನೋಟಿಕರ್ 3,06,393 5,82,788 ಮತಗಳನ್ನು ಪಡೆದು ಸೋಲನುಭವಿಸಿದ್ದರು.

    ವಿಜಯಪುರ:

    ಬಿಜೆಪಿಯಿಂದ ಸ್ಪರ್ಧಿಸಿದ್ದ ರಮೇಶ್ ಜಿಗಜಿಣಗಿ 6,35,867 ಮತಗಳನ್ನು ಪಡೆದು, 2,58,038 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸುನಿತಾ ದೇವಾನಂದ್ ಚವ್ಹಾಣ್ 3,77,829 ಮತಗಳನ್ನು ಪಡೆದು ಸೋಲನುಭವಿಸಿದ್ದರು.