Tag: 2019

  • 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‍ವುಡ್ ಕಲಾವಿದರು

    2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‍ವುಡ್ ಕಲಾವಿದರು

    ಸ್ಯಾಂಡಲ್‍ವುಡ್ ಬೆಳ್ಳಿತೆರೆ ಹಾಗೂ ಕಿರುತೆರೆಯ ಹಲವು ಕಲಾವಿದರು 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಬೆಳ್ಳಿತೆರೆ ಕಲಾವಿದರಿಗಿಂತ ಕಿರುತೆರೆಯ ಕಲಾವಿದರೇ ಹೆಚ್ಚಾಗಿ ಮದುವೆಯಾಗಿದ್ದಾರೆ. ಕೆಲವು ಕಲಾವಿದರು ಬಹುವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳಯ, ಗೆಳತಿಯರನ್ನೇ ಮದುವೆಯಾದರೆ, ಮತ್ತೆ ಕೆಲವು ಕಲಾವಿದರು ಆರೆಂಜ್ಡ್ ಮ್ಯಾರೇಜ್ ಆಗಿದ್ದಾರೆ. 2019ರಲ್ಲಿ ಯಾವೆಲ್ಲಾ ಕಲಾವಿದರು ಮದುವೆಯಾಗಿದ್ದಾರೆ ಎಂಬುದುನ್ನು ಒಮ್ಮೆ ನೋಡಿ

    ವಿಜಯ್ ಸೂರ್ಯ: ಗುಳಿಕೆನ್ನೆಯ ಚೆಲುವ ವಿಜಯ್ ಸೂರ್ಯ ತಮ್ಮ ದೂರದ ಸಂಬಂಧಿ ಚೈತ್ರಾ ಅವರ ಜೊತೆ ಪ್ರೇಮಿಗಳ ದಿನದಂದೇ ವಿವಾಹವಾಗಿದ್ದರು. ಮನೆಯವರೆಲ್ಲ ಮೆಚ್ಚಿದ ಚೈತ್ರಾ ಅವರ ಜೊತೆ ವಿಜಯ್ ಸಪ್ತಪದಿ ತುಳಿದಿದ್ದರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕವೇ ನಟ ವಿಜಯ್ ಸೂರ್ಯ ಜನಪ್ರಿಯತೆ ಪಡೆದವರು. ಚೈತ್ರಾ ಸಾಫ್ಟ್‍ವೇರ್ ಉದ್ಯೋಗಿಯಾಗಿದ್ದಾರೆ.

    ನೇಹಾ ಪಾಟೀಲ್: ಹುಬ್ಬಳ್ಳಿ ಮೂಲದ ನಟಿ ನೇಹಾ ಪಾಟೀಲ್ ಅವರು ಸಿನಿಮಾ ಬಗ್ಗೆ ಆಸಕ್ತಿ ಇರುವ ಬೆಂಗಳೂರಿನ ಎಂಜಿನಿಯರಿಂಗ್ ಹುಡುಗ ಪ್ರಣವ್ ಅವರ ಜೊತೆ ಮದುವೆಯಾಗಿದ್ದರು. ಫೆಬ್ರವರಿ 22ರಂದು ವಿಜಯನಗರದ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ಯಜ್ಞಾ ಶೆಟ್ಟಿ: ಬಹುಭಾಷಾ ನಟಿ ಯಜ್ಞಶೆಟ್ಟಿ ಅವರು ಅಕ್ಟೋಬರ್ 10ರಂದು ತುಳು ಸಿನಿರಂಗದ ನಾಯಕ ನಟ ಸಂದೀಪ್ ಶೆಟ್ಟಿ ಅವರೊಂದಿಗೆ ಮಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕುಟುಂಬ ಸದಸ್ಯರು ಸೇರಿದಂತೆ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮಂಗಳೂರಿನಲ್ಲಿ ಮದುವೆ ನಡೆದಿತ್ತು. ನಟರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವದಂಪತಿಗೆ ಶುಭಕೋರಿದ್ದರು.

    ಗುರು ರಾಜ್ ಕುಮಾರ್: ರಾಜ್ ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಎರಡನೇ ಪುತ್ರ ಯುವರಾಜ್ ಕುಮಾರ್ ಅವರು ಮೈಸೂರಿನ ಶ್ರೀದೇವಿಯನ್ನು ಮೇ 26ರಂದು ಮದುವೆಯಾಗಿದ್ದರು. ಇವರಿಬ್ಬರ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿತ್ತು. ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಇಬ್ಬರು ಸ್ನೇಹಿತರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಎರಡು ಕುಟುಂಬದವರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು.

    ಇಶಿತಾ ವರ್ಷ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ನಟಿ ಇಶಿತಾವರ್ಷ ನವೆಂಬರ್ 10ರಂದು ತಮ್ಮ ಬಹುಕಾಲದ ಗೆಳೆಯ ಮುರುಗಾನಂದ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಾಯಾ ಮದುವೆ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವ ಜೋಡಿಗೆ ಶುಭಾಶಯವನ್ನು ತಿಳಿಸಿದ್ದರು.

    ರಿಷಿ: `ಅಪರೇಷನ್ ಅಲಮೇಲಮ್ಮ’ ಮತ್ತು `ಕವಲುದಾರಿ’ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರುವ ನಟ ರಿಷಿ ಅವರು ಕೂಡ ನವೆಂಬರ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಿಷಿ ಅವರು ಬರಹಗಾರ್ತಿ ಸ್ವಾತಿ ಅವರೊಂದಿಗೆ ಚೆನ್ನೈನಲ್ಲಿ ಮದುವೆಯಾಗಿದ್ದರು. ವಿವಾಹವಾದ ನಂತರ ನವೆಂವರ್ 20ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು.

    ಹಿತಾ ಚಂದ್ರಶೇಖರ್: ಡಿಸೆಂಬರ್ 1ರಂದು ಹಿತಾ ಚಂದ್ರಶೇಖರ್ ತಮ್ಮ ಗೆಳೆಯ ಕಿರಣ್ ಶ್ರೀನಿವಾಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಿರಣ್ ಶ್ರೀನಿವಾಸ್ ಗುರು-ಹಿರಿಯರು ನಿಶ್ಚಯ ಮಾಡಿದ್ದ ಶುಭ ಮುಹೂರ್ತದಲ್ಲಿ ಹಿತಾ ಚಂದ್ರಶೇಖರ್‍ಗೆ ಮಾಂಗಲ್ಯಧಾರಣೆ ಮಾಡಿದ್ದರು. ಈ ಜೋಡಿಯ ಮದುವೆ ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ನಡೆದಿತ್ತು. ಕಿರಣ್ ಮತ್ತು ಹಿತಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಮೇ ತಿಂಗಳಲ್ಲಿ ಕಿರಣ್ ಹಾಗೂ ಹಿತಾ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

    ಚಂದನ್ ಶೆಟ್ಟಿ- ನಿವೇದಿತಾ ಗೌಡ: ಅಕ್ಟೋಬರ್ 21ರಂದು ಚಂದನ್ ಶೆಟ್ಟಿ ತಮ್ಮ ಆತ್ಮೀಯ ಗೆಳತಿ ಬಾರ್ಬಿ ಗರ್ಲ್ ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಶುಭ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು. ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು.

    ಅರ್ಚನಾ: ಸ್ಯಾಂಡಲ್‍ವುಡ್‍ನ `ಆ ದಿನಗಳು’ ಸಿನಿಮಾ ಖ್ಯಾತಿಯ ಅರ್ಚನಾ ವೇದಾ ತಮ್ಮ ಪ್ರಿಯಕರನೊಂದಿಗೆ ನವೆಂಬರ್ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅರ್ಚನಾ ವೇದಾ ತಮ್ಮ ಗೆಳೆಯ ಜಗದೀಶ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹೈದರಾಬಾದಿನಲ್ಲಿ ಗುರು-ಹಿರಿಯರ ನಿಶ್ಚಯಿಸಿದ್ದ ಮೂಹೂರ್ತದಲ್ಲಿ ಈ ಜೋಡಿಯ ಮದುವೆ ಸಾಂಪ್ರದಾಯಿಕವಾಗಿ ನಡೆದಿತ್ತು.

    ಧ್ರುವ ಸರ್ಜಾ: ನವೆಂಬರ್ 24ರಂದು ಧ್ರುವ ಶುಭ ಮುಹೂರ್ತದಲ್ಲಿ ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಅವರನ್ನು ವರಿಸಿದ್ದರು. ಜೆ.ಪಿ.ನಗರದ ಸಂಸ್ಕೃತ ಬೃಂದಾವನ ಕನ್ವೆನ್ಷನ್ ಹಾಲ್‍ನಲ್ಲಿ ಇವರ ವಿವಾಹ ಮಹೋತ್ಸವ ನಡೆದಿದ್ದು, ಅಂದು ಸಂಜೆಯೇ ಸಿನಿಮಾ ಕಲಾವಿದರಿಗಾಗಿ ಅದ್ಧೂರಿಯಾಗಿ ರಿಸೆಪ್ಶನ್ ಏರ್ಪಡಿಸಲಾಗಿತ್ತು. ಮರುದಿನ ಎಂದರೆ 25 ರಂದು ಅಭಿಮಾನಿಗಳಿಗಾಗಿ ವಿಶೇಷ ಆರತಕ್ಷತೆಯನ್ನು ಆಯೋಜೆ ಮಾಡಲಾಗಿತ್ತು.

    ಮನೀಶ್ ಪಾಂಡೆ- ಆಶ್ರಿತಾ ಶೆಟ್ಟಿ: ಭಾರತದ ಕ್ರಿಕೆಟ್ ತಂಡದ ಆಟಗಾರ ಮನೀಶ್ ಪಾಂಡೆ ಡಿಸೆಂಬರ್ 2ರಂದು ತುಳು ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮನೀಶ್ ಪಾಂಡೆ ಅವರು ತುಳು ಹಾಗೂ ದಕ್ಷಿಣ ಭಾರತದ ನಟಿಯಾಗಿರುವ ಆಶ್ರಿತಾ ಶೆಟ್ಟಿ ಅವರ ಜೊತೆ ವಿವಾಹವಾಗಿದ್ದರು. ಇವರ ಮದುವೆಯಲ್ಲಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಭಾಗಿಯಾಗಿದ್ದರು.

    ನಿತ್ಯಾ ರಾಮ್: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಿತ್ಯ ರಾಮ್ ಅವರು ಆಸ್ಟ್ರೇಲಿಯಾ ಉದ್ಯಮಿ ಗೌತಮ್ ಅವರ ಜೊತೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದರು. ಮದುವೆಗೆ ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವಜೋಡಿಗೆ ಶುಭಾಶಯ ತಿಳಿಸಿದ್ದರು.

    ದೀಪಿಕಾ (ಧನ್ಯಾ): ದೀಪಿಕಾ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿರುವ ಅಕ್ಕು ಆಕರ್ಶ್ ಜೊತೆ ನವೆಂಬರ್ 15ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ದೀಪಿಕಾ ಮತ್ತು ಆಕರ್ಶ್ ವಿವಾಹ ಸಾಂಪ್ರದಾಯಿಕವಾಗಿ ನಡೆದಿತ್ತು. ಇವರಿಬ್ಬರು ಪರಸ್ಪರ ಬಹು ದಿನಗಳಿಂದ ಪ್ರೀತಿಸುತ್ತಿದ್ದರು. ನಂತರ ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದಾರೆ. ಎರಡು ಕುಟುಂಬದವರು ಇವರ ಪ್ರೀತಿಯನ್ನು ಖುಷಿಯಿಂದ ಒಪ್ಪಿಕೊಂಡು ಕೆಲ ತಿಂಗಳ ಹಿಂದೆ ಇಬ್ಬರ ನಿಶ್ಚಿತಾರ್ಥ ಮಾಡಿದ್ದರು.

    ಭವಾನಿ ಸಿಂಗ್: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿಯಲ್ಲಿ ಈ ಹಿಂದೆ ನಟಿಸುತ್ತಿದ್ದ ನಟ ಭವಾನಿ ಸಿಂಗ್ ತಮ್ಮ ಬಹುದಿನದ ಗೆಳತಿ ಪಂಕಜಾ ಶಿವಣ್ಣ ಅವರ ಜೊತೆ ನವೆಂಬರ್ 19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಭವಾನಿ ಹಾಗೂ ಪಂಕಜಾ ಎರಡು ವರ್ಷದಿಂದ ಸ್ನೇಹಿತರಾಗಿದ್ದರು. ಬಳಿಕ ಭವಾನಿ ಅವರು ಪಂಕಜಾ ಅವರನ್ನು ಪ್ರಪೋಸ್ ಮಾಡಿದ್ದು, ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಈಗ ಮದುವೆಯಾಗಿದ್ದರು.

  • ಹರ್ಯಾಣದಲ್ಲಿದೆ ಅದೃಷ್ಟದ ಕ್ಷೇತ್ರ – ಈ ಕ್ಷೇತ್ರದಲ್ಲಿ ಗೆದ್ದ ಪಕ್ಷಕ್ಕೆ ಗದ್ದುಗೆ

    ಹರ್ಯಾಣದಲ್ಲಿದೆ ಅದೃಷ್ಟದ ಕ್ಷೇತ್ರ – ಈ ಕ್ಷೇತ್ರದಲ್ಲಿ ಗೆದ್ದ ಪಕ್ಷಕ್ಕೆ ಗದ್ದುಗೆ

    ಲ್ಲ ಕ್ಷೇತ್ರಗಳಲ್ಲಿ ಒಂದು ಅದೃಷ್ಟದ ಕ್ಷೇತ್ರ ಅಂತ ಇರುತ್ತದೆ. ಅದೇ ರೀತಿಯಾಗಿ ಲೋಕಸಭಾ ಚುನಾವಣೆಯಲ್ಲೂ ಒಂದು ಅದೃಷ್ಟದ ಕ್ಷೇತ್ರ ಇದೆ. ಈ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೋ ಆ ಪಕ್ಷವೇ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ವಿಶೇಷ.

    ಹರ್ಯಾಣ ರಾಜ್ಯದಲ್ಲಿ ಕೈಗಾರಿಕೆಗಳು ಹೆಚ್ಚಾಗಿರುವ ಫರಿದಾಬಾದ್ ಕ್ಷೇತ್ರ ತನ್ನ ವಿಶೇಷತೆಯಿಂದಲೇ ಇಡೀ ದೇಶದಲ್ಲಿ ಗುರುತಿಸಿಕೊಂಡಿದೆ. 1951 ರಿಂದ 1976ರವರೆಗೆ ಇದು ಲೋಕಸಭಾ ಕ್ಷೇತ್ರವಾಗಿರಲಿಲ್ಲ. 1977 ರಲ್ಲಿ ಲೋಕಸಭಾ ಕ್ಷೇತ್ರವಾದ ಬಳಿಕ ನಡೆದ 11 ಚುನಾವಣೆಯಲ್ಲಿ ಇಲ್ಲಿ ಗೆದ್ದ ಪಕ್ಷವೇ ಕೇಂದ್ರದಲ್ಲಿ ಅಧಿಕಾರ ಹಿಡಿದು ಅಚ್ಚರಿ ಮೂಡಿಸಿದೆ.

    ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ ನಂತರ ನಡೆದ ಚುನಾವಣೆಯನ್ನು ಜನತಾ ಪಕ್ಷ ಗೆದ್ದುಕೊಂಡಿದೆ. ಆದರೆ 1980 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದ ಜನತೆ ಕಾಂಗ್ರೆಸ್ ಕೈ ಹಿಡಿದಿದ್ದಾರೆ. 1980 ರಿಂದ 1991 ರವರೆಗಿನ ಸಮಯದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. 1980, 1984, 1989, 1991ರ ನಾಲ್ಕು ಚುನಾವಣೆಯಲ್ಲೂ ಕಾಂಗ್ರೆಸ್ ಜಯಗಳಿಸಿತ್ತು.

    1996, 1998, 1999 ರಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರ ರಚಿಸಿತ್ತು. ಈ ಸಂದರ್ಭದಲ್ಲೂ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದರು. 2004 ಮತ್ತು 2009 ರಲ್ಲಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದರೆ 2014 ರಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣ ಪಾಲ್ ಗುರ್ಜರ್ ಜಯಗಳಿಸಿದ್ದರು.

     

  • ನವ ವರ್ಷದ ಮೊದಲ ವಾರದಲ್ಲೇ ಗ್ರಹಣದ ಹಿಡಿತ-ಜನವರಿ ತಿಂಗಳಲ್ಲೇ ಡಬಲ್ ಗ್ರಹಣ

    ನವ ವರ್ಷದ ಮೊದಲ ವಾರದಲ್ಲೇ ಗ್ರಹಣದ ಹಿಡಿತ-ಜನವರಿ ತಿಂಗಳಲ್ಲೇ ಡಬಲ್ ಗ್ರಹಣ

    ಬೆಂಗಳೂರು: ನವ ವರ್ಷದ ಕ್ಯಾಲೆಂಡರ್ ಡಿಸೆಂಬರ್ 31ರ ಕೊನೆ ಕ್ಷಣದ ಆಗಮನಕ್ಕಾಗಿ ಕಾದಿದೆ. ಪ್ರತಿಯೊಬ್ಬರ ಮನದಲ್ಲೂ 2018 ಮುಗಿದು 2019ರ ಮೊದಲ ಮುಂಜಾವು ಬದುಕಿನುದ್ದಕ್ಕೂ ಹೊಸಬೆಳಕನ್ನೇ ಹರಿಸಲಿದೆ ಅನ್ನೋ ಭರವಸೆ ಹೆಚ್ಚಿಸಿದೆ. ಇತ್ತ 2019ರಲ್ಲಿ ಘಟಿಸಲಿರುವ ಸೂರ್ಯ, ಚಂದ್ರ ಮತ್ತು ಭೂಮಿಯ ನಡುವೆ ನಡೆಯಲಿರೋ ಆ ಕಣ್ಣಾಮುಚ್ಚಾಲೆ ಆಟದ ಗ್ರಹಣದ ಕಥೆ ನಿಮ್ಮ ಕೌತುಕತೆಯನ್ನು ಇಮ್ಮಡಿಗೊಳಿಸಲಿದೆ.

    ಹೊಸ ವರ್ಷ ಆರಂಭವಾದ ಕೆಲವೇ ದಿನಗಳಲ್ಲಿ ಧರಣಿಗೆ ಬೆಳಕು ಹರಿಸೋ ಸೂರ್ಯನ ಮೇಲೆ ಚಂದ್ರನ ಛಾಯೆಯ ಮುಸುಕು ವ್ಯಾಪಿಸಿ ನಮ್ಮೆಲ್ಲರನ್ನೂ ತನ್ನತ್ತ ಸೆಳೆಯಲಿದೆ ಸೌರಮಂಡಲ. ಆ ದಿನಗಳನ್ನು ನೋಡುವ ಸಮಯ ಬಹಳ ದೂರವೇನಿಲ್ಲ. ಗ್ರಹಣದ ಛಾಯೆಯಿಂದ ಫಳ ಫಳ ಹೊಳೆಯುವ ಚಂದಿರನು ಕೆಂಬಣ್ಣಕ್ಕೆ ತಿರುಗಿ ಕುಪಿತನಾದವಂತೆ ಗೋಚರಿಸಿ ಅದ್ಯಾವ ಸಂದೇಶ ಹೇಳಬರುತ್ತಿರುವನೋ ಗೊತ್ತಿಲ್ಲ, ಆದ್ರೆ ಆ ದಿನವನ್ನು ನೋಡುವ ಸಮಯವೂ ಬಹಳ ದೂರವೇನಿಲ್ಲ.

    ಖಗೋಳ ತಜ್ಞರ ಚಿತ್ತ ಸೆಳೆದಿರುವ ಈ ಗ್ರಹಣಗಳಿಂದ ಚಂದ್ರ ಮತ್ತು ಸೂರ್ಯರ ಬಗೆಗಿನ ಕೇಳಿರದ ಹೊಸ ಸಂಗತಿಗಳನ್ನು ಅರಿಯಲು ವಿಜ್ಞಾನಿಗಳು ಕಾತುರರಾಗಿದ್ದಾರೆ. ಗ್ರಹಣಕ್ಕೆ ಫಿಕ್ಸಾಗಿರೋ ಐದು ದಿನಗಳಿಗಾಗಿ ಆಸಕ್ತಿಯಿಂದ ಕಾದಿದ್ದಾರೆ. ಆದ್ರೆ ಜ್ಯೋತಿಷಿಗಳಿಗೆ ಈ ಗ್ರಹಣಗಳು ಕೊಂಚ ಚಿಂತೆ ಹೆಚ್ಚಿಸಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಐದು ಗ್ರಹಣಗಳು: 2019ರ ಜನವರಿ 6ರ ದಿನ ಖಗೋಳಲೋಕಕ್ಕೆ ಅತ್ಯಂತ ಮಹತ್ವದ್ದು. ಅಂದು ಮುಂಜಾವಿಗೇ ಸೂರ್ಯದೇವನೇನೋ ಎಂದಿನಂತೆ ಬೆಳಕು ಹರಿಸಲು ಎಚ್ಚರವಾಗುವನು. ಆದರೆ ಅದಾಗಲೇ ಗ್ರಹಣದ ಛಾಯೆ ಸೂರ್ಯದೇವನ ರಶ್ಮಿಗಳನ್ನು ಆವರಿಸಿಬಿಟ್ಟಿರುತ್ತಂತೆ. ಅದೇ ರೀತಿ ಜನವರಿ 21ರಂದು ಹೊಳೆಯಲಿರುವ ಚಂದಿರನ ಮೇಲೆ ಗ್ರಹಣದ ನೆರಳು ಆವರಿಸಲಿದೆ. 2019ರಲ್ಲಿ ಇಂಥ ಒಟ್ಟು 5 ದಿನಗಳು ಬರಲಿದ್ದು ಇಡೀ ಜಗತ್ತು ಆವತ್ತಿಗೆ ಅಚ್ಚರಿಯ ಕಂಗಳಿಂದ ಆಕಾಶ ದಿಟ್ಟಿಸುತ್ತಾ ನೋಡುತ್ತಿದೆ.

    ಜನವರಿ ಗ್ರಹಣ..!: ಜನವರಿ 6ರಂದು ಜರುಗುವ ವರ್ಷದ ಪ್ರಪ್ರಥಮ ಸೂರ್ಯಗ್ರಹಣವು ಜಗತ್ತಿನಾದ್ಯಂತ ಭಾಗಶಃ ಗೋಚರಿಸಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಸಂಜೆ 5 ಗಂಟೆ 4 ನಿಮಿಷದಿಂದ ರಾತ್ರಿ 9 ಗಂಟೆ 18 ನಿಮಿಷದವರೆಗೂ ಗೋಚರಿಸಲಿದೆ. ಗ್ರಹಣದ ಈ ಕಾಲಮಾನ ನೋಡಿದ್ರೆ ಗೊತ್ತಾಗುತ್ತೆ, ಭಾರತದಲ್ಲಂತೂ ಈ ಸೂರ್ಯಗ್ರಹಣ ಗೋಚರಿಸುವುದಿಲ್ಲ.

    ಗ್ರಹಣ ಕಾಲ:
    2019ರ ಜುಲೈ 2ರಂದು ನಡೆಯುವ ವರ್ಷದ 2ನೇ ಸೂರ್ಯ ಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11.31ರಿಂದ ಬೆಳಗಿನ ಜಾವ 2.41ರ ತನಕ ಜರುಗುವುದು. ಈ ಅವಧಿಯಲ್ಲೂ ಭಾರತದಲ್ಲಿ ಕತ್ತಲು ಆವರಿಸಿರೋದ್ರಿಂದ 2ನೇ ಸೂರ್ಯಗ್ರಹಣವೂ ಭಾರತೀಯರಿಗೆ ಗೋಚರಿಸುವ ಸಂಭವವೇ ಇಲ್ಲ. ವರ್ಷದ ಕೊನೆಯಲ್ಲಿ ಡಿಸೆಂಬರ್ 26ರಂದು ಬರುವ ಕೊನೆಯ ಗ್ರಹಣವು ಭಾರತೀಯರಿಗೆ ಗೋಚರಿಸುವ ಏಕೈಕ ಸೂರ್ಯ ಗ್ರಹಣವಾಗಿದೆ.

    ಭಾರತೀಯರಿಗೆ ಗೋಚರಿಸುವ ಈ ಸೂರ್ಯ ಗ್ರಹಣವು ಬೆಳಗ್ಗೆ 8 ಗಂಟೆ 17 ನಿಮಿಷದಿಂದ ಬೆಳಗ್ಗೆ 10 ಗಂಟೆ 57 ನಿಮಿಷದವರೆಗೂ ಇರಲಿದೆ. ಭಾರತದಲ್ಲಿ ಈ ಗ್ರಹಣದ ಸಾಕ್ಷಾತ್ ದರ್ಶನವಾಗೋದ್ರಿಂದ ಈ ವೇಳೆ ಸೂತಕವಿರಲಿದೆ ಅಂತ ಹೇಳಲಾಗ್ತಿದೆ. ಯಾವ ರೀತಿಯ ಸೂತಕ? ಆ ಸೂತಕದಿಂದ ಏನಾದ್ರೂ ಕಂಟಕವುಂಟಾ ಅನ್ನೋದು ಕೌತುಕ ಕೆರಳಿಸಿದೆ. ಹೊಸ ವರ್ಷದ ಜನವರಿಯ 21ನೇ ತಾರೀಖು ಜರುಗಲಿರೋ ಗ್ರಹಣವು ಪೂರ್ಣ ಚಂದ್ರ ಗ್ರಹಣವಾಗಿರಲಿದ್ದು, 9 ಗಂಟೆ 3 ನಿಮಿಷದಿಂದ ಶುರುವಾಗಿ, 12 ಗಂಟೆ 20 ನಿಮಿಷದವರೆಗೂ ಘಟಿಸಲಿದೆ.

    ವರ್ಷದ 2ನೇ ಚಂದ್ರ ಗ್ರಹಣದ ಯೋಗವು ಜುಲೈ 16-17ನೇ ತಾರೀಖಿನ ಅವಧಿಯಲ್ಲಿ ಘಟಿಸಲಿದೆ. ಈ ಚಂದ್ರಗ್ರಹಣವು ಭಾಗಶಃ ಗೋಚರಿಸಲಿದ್ದು, ರಾತ್ರಿ 1 ಗಂಟೆ 31 ನಿಮಿಷದಿಂದ ಶುರುವಾಗಿ ಬೆಳಗಿನ ಜಾವ 4 ಗಂಟೆ 29 ನಿಮಿಷದವರೆಗೂ ನಡೆಯಲಿದೆ. ಭಾರತ ಮತ್ತು ಇತರೆ ಏಷ್ಯಾ ದೇಶಗಳಲ್ಲದೆ ದ.ಅಮೆರಿಕ, ಯುರೋಪ್, ಆಫ್ರಿಕಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಕಾಣಬಹುದಾಗಿದೆ.

    ಪಂಚ ಗ್ರಹಣದ ಫಲಾಫಲ:
    ಗ್ರಹಣಗಳು ಬಂದರೆ ಖಗೋಳ ಲೋಕದಲ್ಲಿರುವಂತೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಇನ್ನಿಲ್ಲದ ಮಹತ್ವವಿರೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ವಿಜ್ಞಾನಿಗಳ ಪಾಲಿಗೆ ಅವೆಷ್ಟೋ ಉತ್ತರವಿಲ್ಲದ ಪ್ರಶ್ನೆಗಳಿಗೆ ಗ್ರಹಣಗಳು ಜವಾಬು ಕೊಡಲಿದ್ದರೆ, ಜ್ಯೋತಿಷಿಗಳು ಈಗಲೇ ಈ ಪಂಚಗ್ರಹಣಗಳಿಂದ ದ್ವಾದಶ ರಾಶಿಗಳ ಮೇಲಾಗುವ ಆಗುಹೋಗುಗಳ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಯಾರಿಗೆ ಕಂಟಕ? ಯಾರಿಗೆ ಸಂತಸ? ಯಾರಿಗೆ ಯಾವ ಪರಿಹಾರ ಅನ್ನೋ ಅಂದಾಜು ಜೋರಾಗಿ ನಡೆಯುತ್ತಿದೆ.

    ಸೂರ್ಯ ಗ್ರಹಣದ ಕುರಿತಂತೆ ಜ್ಯೋತಿಷ್ಯ ಮತ್ತು ಧಾರ್ಮಿಕವಾಗಿರುವ ಮಹತ್ವವನ್ನು ಹಲವರು ತಳ್ಳಿ ಹಾಕುತ್ತಾರೆ. ಆದರೆ ಇದಕ್ಕಿರೋ ವೈಜ್ಞಾನಿಕ ಮಹತ್ವವನ್ನು ಯಾರೂ ತಳ್ಳಿ ಹಾಕಲಾರರು. ಯಾಕಂದ್ರೆ ಗ್ರಹಣದ ಅವಧಿಯು ಬ್ರಹ್ಮಾಂಡದಲ್ಲಿ ಘಟಿಸುವ ಅಸಂಖ್ಯ ವಿಲಕ್ಷಣ ಘಟನಾವಳಿಗಳನ್ನು ಕಣ್ಮುಂದೆ ತರುವ ಪ್ರಮುಖ ಕ್ಷಣವಾಗಿರುತ್ತದೆ. ಇದರಿಂದಾಗಿ ವಿಜ್ಞಾನಿಗಳಿಗೆ ಹೊಸ ಹೊಸ ತತ್ವಗಳನ್ನು ಅರಿಯುವ ಸುವರ್ಣಾವಕಾಶ ಒದಗಿಬರುತ್ತದೆ.

    ಚಂದ್ರ ಭೂಮಿಗೆ ಅತ್ಯಂತ ಸನಿಹದಲ್ಲಿರುವ ಗ್ರಹ. ಹಾಗಾಗಿಯೇ ಚಂದ್ರನಿಂದ ಭೂಮಿಯ ಮೇಲೆ ಅತಿ ಹೆಚ್ಚು ಪ್ರಭಾವಗಳು ಸಂಭವಿಸುವವು. ಹುಣ್ಣಿಮೆಯ ದಿನಗಳಲ್ಲಿ ಭೂಮಿಗೆ ಅತಿ ಸನಿಹಕ್ಕೆ ಬರುವ ಚಂದ್ರನಿಂದ ಹೆಚ್ಚುವ ಗುರುತ್ವಾಕರ್ಷಣ ಬಲದಿಂದ ಸಮುದ್ರದಲ್ಲಿ ಆಳೆತ್ತರದ ಅಲೆಗಳು ಅಬ್ಬರಿಸುತ್ತವೆ. ಕೆಲವೊಮ್ಮೆ ಭೂಮಿಯ ಒಳಪದರಗಳು ಅಲುಗುವುದರ ಹಿಂದೆಯೂ ಚಂದ್ರಮನ ಇದೇ ಶಕ್ತಿಯ ಪ್ರಭಾವ ಕಾರಣವಂತೆ. ಅದರ ಘೋರ ಪರಿಣಾಮವೇ ಭಯಂಕರ ಭೂಕಂಪಗಳು. ಈ ವರ್ಷ ಸಂಭವಸಿದ ಗ್ರಹಣದ ವೇಳೆಯಲ್ಲೂ ಕೆಲ ಅಹಿತಕರ ಘಟನೆಗಳಿಗೆ ಜಗತ್ತು ಸಾಕ್ಷಿಯಾಗಿದ್ದನ್ನು ಈ ವೇಳೆ ಉಲ್ಲೇಖಿಸಬಹುದು.

    https://www.youtube.com/watch?v=C-pwPrGbAWo

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv