Tag: 2018 ಸಿನಿಮಾ

  • 2018ರ ಸಿನಿ ಲೋಕದ ಸುಂದರ ಪ್ರೇಮ ಕಹಾನಿಗಳು

    2018ರ ಸಿನಿ ಲೋಕದ ಸುಂದರ ಪ್ರೇಮ ಕಹಾನಿಗಳು

    ಸಿನಿ ಲೋಕ ಅಂದ್ರೆ ಸಾಕು ತೆರೆಯ ಮೇಲೆ ಅದೆಷ್ಟೂ ಪ್ರೇಮ ಕಹಾನಿಗಳು ಬರುತ್ತವೋ ಹಾಗೆಯೇ ತೆರೆಯ ಹಿಂದೆ ಸಹ ಲವ್ ಸ್ಟೋರಿಗಳು ಕೇಳಿರುತ್ತೇವೆ. ಕೆಲವರು ಅಧಿಕೃತವಾಗಿ ಹೇಳಿಕೊಂಡ್ರೆ, ಬಹುತೇಕರು ನಾವು ಜಸ್ಟ್ ಫ್ರೆಂಡ್ಸ್ ಅಂತಾನೇ ಹೇಳಿಕೊಂಡು ಬಂದು ಕೊನೆಗೆ ಒಂದು ದಿನ ಮದುವೆಯಾಗುವ ಮೂಲಕ ಸಿಹಿಸುದ್ದಿ ನೀಡುತ್ತಾರೆ. 2018ರ ಆರಂಭದಿಂದಲೂ ಸಿನಿ ಅಂಗಳದಲ್ಲಿ ಗಟ್ಟಿಮೇಳದ ಸದ್ದು ಕೇಳಿ ಬಂದಿದೆ.

    ಈ ಬಾರಿ ಅತಿ ಹೆಚ್ಚು ಸುದ್ದಿ ಮಾಡಿದ್ದು ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ. ನಂತರ ಪ್ರಿಯಾಂಕ ಚೋಪ್ರಾ, ಕನ್ನಡದ ಸ್ಟಾರ್ ಗಳಾದ ಚಿರಂಜೀವಿ ಸರ್ಜಾ, ದಿಗಂತ್ ಕಲ್ಯಾಣ ಸುದ್ದಿಗಳು ಅತಿ ಹೆಚ್ಚು ಸುದ್ದಿಯಾಗಿತ್ತು. ಜನವರಿ ಯಿಂದ ಡಿಸೆಂಬರ್ ವರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಲಾವಿದರ ಸಂಪೂರ್ಣ ವಿವರ ಇಲ್ಲಿದೆ.

    ಭಾವನಾ:
    ಬಹುಭಾಷಾ ಚಿತ್ರ ತಾರೆ, ಮಲೆಯಾಳಂ ಬೆಡಗಿ ನಟಿ ಭಾವನಾ ಮೆನನ್ ಕನ್ನಡದ ಹುಡುಗ ನವೀನ್ ಅವರ ಜತೆ ಜನವರಿ 22 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೇರಳದ ತ್ರಿಶೂರಿನ ಜವರ್ಲಾಲ್ ಕನ್ವೇಷನ್ ಹಾಲ್‍ನಲ್ಲಿ ಕೇರಳ ಸಂಪ್ರದಾಯದಂತೆ ಮದುವೆ ನೆರವೇರಿತ್ತು. ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು.

    ಗೊಂಬೆ ಖ್ಯಾತಿಯ ನೇಹಾ ಗೌಡ:
    ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಗೊಂಬೆ ಎಂದೇ ಪ್ರಖ್ಯಾತಿ ಪಡೆದುಕೊಂಡಿರುವ ನೇಹಾ ಗೌಡ ತಮ್ಮ ಬಾಲ್ಯದ ಗೆಳೆಯ ಚಂದನ್ ಅವರನ್ನು ವಿವಾಹವಾಗಿದ್ದಾರೆ. ನಟಿ ಸೋನುಗೌಡ ಅವರ ಸಹೋದರಿ ಆಗಿರುವ ನೇಹಾಗೌಡ ಮೈಸೂರು ರಸ್ತೆಯಲ್ಲಿರುವ ಸಾಯಿ ಪ್ಯಾಲೆಸ್ ನಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ. ಚಂದನ್ ಬ್ಯಾಂಕಾಕ್ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

    ನಿರ್ದೇಶಕ ಸಂತೋಷ್ ಆನಂದ್ ರಾಮ್:
    ರಾಜಕುಮಾರ’ ಚಿತ್ರ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ಬಳ್ಳಾರಿ ಮೂಲದ ಸುರಭಿ ಹತ್ವಾರ್ ಜೊತೆ ಫೆಬ್ರವರಿ 21ರಂದು ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಜೆ.ಪಿ ನಗರದ ಸಿಂಧೂರಿ ಕನ್ವೆಂಷನ್ ಸೆಂಟರ್ ನಲ್ಲಿ ಆರತಕ್ಷತೆ ನಡೆದಿತ್ತು. ಸ್ಯಾಂಡಲ್ ವುಡ್ ನಲ್ಲಿ `ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ’ ಚಿತ್ರದ ಮೂಲಕ ನಿರ್ದೇಶನಕ್ಕೆ ಎಂಟ್ರಿ ಕೊಟ್ಟ ಸಂತೋಷ್ ಆನಂದ್ ರಾಮ್ ಅವರ ಮೊದಲ ಚಿತ್ರವೇ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಎರಡನೇ ಚಿತ್ರ `ರಾಜಕುಮಾರ’ ಕೂಡ ಅದ್ಧೂರಿ ಹಿಟ್ ಕಂಡಿದೆ.

    ಶ್ರೇಯಾ ಸರಣ್:
    ಬಾಲಿವುಡ್ ನಟಿ ಶ್ರೇಯಾ ಸರಣ್ ಮದುವೆಯನ್ನು ನಿರಾಕರಿಸುತ್ತಲೇ ಮಾರ್ಚ್ 12, 2018ರಂದು ಆಪ್ತರ ಸಮ್ಮುಖದಲ್ಲಿ ರಷ್ಯಾದ ಗೆಳೆಯನನ್ನು ವರಿಸಿದ್ದರು. 2017ರಲ್ಲಿಯೇ ಮಾಧ್ಯಮಗಳು ಇಬ್ಬರ ಪ್ರೀತಿಯ ವಿಷಯವನ್ನು ಪ್ರಸ್ತಾಪಿಸಿದಾಗ ನಾವಿಬ್ಬರು ಒಳ್ಳೆಯ ಗೆಳೆಯರು ಅಂತಾ ಹೇಳಿಕೊಂಡಿದ್ದರು. ಮುಂಬೈ ನಿವಾಸದಲ್ಲಿ ರಷ್ಯಾದ ಟೆನ್ನಿಸ್ ಆಟಗಾರ ಆ್ಯಂಡ್ರಿ ಕೋಸ್ಟವೆವ್ ರನ್ನು ಮದುವೆ ಆಗುವ ಸಾಂಸರಿಕ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪುನೀತ್ ರಾಜ್‍ಕುಮಾರ್ ಅಭಿನಯದ ‘ಅರಸು’, ರಜಿನಿಕಾಂತ್ ನಟನೆ ‘ಶಿವಾಜಿ’ ಸಿನಿಮಾದಲ್ಲಿ ಶ್ರೇಯಾ ನಟಿಸಿದ್ದಾರೆ.

    ಸುಂದರ್ ಗೌಡ:
    ಮಾರ್ಚ್ 9 ಮಾಸ್ತಿಗುಡಿ ಚಿತ್ರದ ನಿರ್ದೇಶಕ ಸುಂದರ್ ಗೌಡ ಕಾಂಗ್ರೆಸ್ ನಾಯಕ ಶಿವಮೂರ್ತಿ ನಾಯ್ಕ್ ಅವರ ಪುತ್ರಿಯನ್ನು ರಹಸ್ಯವಾಗಿ ಮದುವೆಯಾಗಿ ಮಾಧ್ಯಮಗಳ ಮುಂದೆ ಬಂದಿದ್ದರು. ಇವರಿಬ್ಬರ ಮದುವೆಗೆ ನಟ ದುನಿಯಾ ವಿಜಯ್ ಸಾಕ್ಷಿಯಾಗಿದ್ದರು. ಮದುವೆ ಬಳಿಕ ನೇರವಾಗಿ ದುನಿಯಾ ವಿಜಯ್ ಜೊತೆ ಪೊಲೀಸ್ ಠಾಣೆಗೆ ಬಂದು ಸುದ್ದಿಗೋಷ್ಠಿ ನಡೆಸಿದ್ದರು.

    ಕಾಮಿಡಿ ಕಿಲಾಡಿ ನಯನ:
    ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದಿದ್ದ ಕಾಮಿಡಿ ಕಿಲಾಡಿ ನಯನ, ಬೆಂಗಳೂರಿನ ಉದ್ಯಮಿ ಶರತ್ ಜೊತೆ ಏಪ್ರಿಲ್ 22ರಂದು ಸಪ್ತಪದಿ ತುಳಿದಿದ್ದರು. ನಯನ ತಂದೆಯ ವಿರೋಧದ ನಡುವೆಯೂ ಅಭಿನಯ ಮಾಡಬೇಕೆಂದು ಕನಸು ಇಟ್ಟುಕೊಂಡು ಕಾಮಿಡಿ ಕಿಲಾಡಿಗಳು ತಂಡಕ್ಕೆ ಸೇರಿಕೊಂಡಿದ್ದರು. ಇಂದು ಆ ಕಾರ್ಯಕ್ರಮದ ಮೂಲಕವೇ ಖ್ಯಾತಿ ಪಡೆದಿದ್ದಾರೆ.

    ಮೇಘನಾ ರಾಜ್-ಚಿರಂಜೀವಿ ಸರ್ಜಾ:
    ಸ್ಯಾಂಡಲ್‍ವುಡ್ ತಾರೆಯರಾದ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಏಪ್ರಿಲ್ 29ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದರು. ಮೇ 2ರಂದು ಮತ್ತೊಮ್ಮೆ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದರು. ತಾರಾ ಕುಟುಂಬದ ಹಿನ್ನೆಲೆಯುಳ್ಳ ಜೋಡಿ ಆಗಿದ್ದರಿಂದ ಮದುವೆಗೆ ಚಂದನವನದ ಗಣ್ಯರೆಲ್ಲರು ಭಾಗವಹಿಸಿ ನವದಂಪತಿಗೆ ಶುಭಕೋರಿದ್ದರು.

    ಬಿಗ್‍ಬಾಸ್ ಸ್ಪರ್ಧಿ ಗೌತಮಿ ನಿಶ್ಚಿತಾರ್ಥ:
    ರಿಯಾಲಿಟಿ ಶೋ ಬಿಗ್ ಬಾಸ್ 3ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ನಟಿ ಗೌತಮಿ ಗೌಡ ತಾವು ಪ್ರೀತಿಸುತ್ತಿದ್ದ ಹುಡುಗನ ಜೊತೆ ಮೇ 1ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗೌತಮಿ ಕೆಲವು ವರ್ಷಗಳಿಂದ ಜಾರ್ಜ್ ಕ್ರಿಸ್ಟಿ ಅವರನ್ನು ಪ್ರೀತಿಸುತ್ತಿದ್ದರು. ನಂತರ ಎರಡು ಕುಟುಂಬದವರು ಒಪ್ಪಿ ಗುರು-ಹಿರಿಯರು ಸೇರಿ ಇತ್ತೀಚೆಗೆಷ್ಟೆ ಗೌತಮಿ ಗೌಡ ಹಾಗು ಜಾರ್ಜ್ ಕ್ರಿಸ್ಟಿ ಅವರ ನಿಶ್ಚಿತಾರ್ಥವನ್ನು ಮಾಡಿದ್ದಾರೆ. ಗೌತಮಿಗೌಡ ಅವರು ಕಿರುತೆರೆ ಮಾತ್ರವಲ್ಲದೇ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.

    ಸೋನಂ ಕಪೂರ್:
    ಬಾಲಿವುಡ್ ಮೋಸ್ಟ್ ಹ್ಯಾಂಡ್‍ಸಮ್ ಸ್ಟಾರ್ ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಬಹು ದಿನಗಳ ಗೆಳೆಯ ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಜೊತೆ ಮೇ 8ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋನಮ್ ಬಾಂದ್ರಾದಲ್ಲಿರುವ ತನ್ನ ಆಂಟಿಯ ಬಂಗಲೆಯಲ್ಲಿ ಸಿಖ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಸೋನಮ್ ಕಪೂರ್ ಮದುವೆಗೆ ಬಾಲಿವುಡ್‍ನ ಗಣ್ಯಾತಿಗಣ್ಯರು ಹಾಜರಾಗಿದ್ದರು.

    ನೇಹಾ ಧುಪಿಯಾ:
    ಬಾಲಿವುಡ್‍ನ ರೌಡಿ ನಟಿ ಅಂತಾನೇ ಕರೆಸಿಕೊಳ್ಳುವ ನೇಹಾ ಧುಪಿಯಾ ಬಹುದಿನಗಳ ಗೆಳೆಯ ಅಂಗದ್ ಬೇಡಿ ಜೊತೆಗೆ ಮೇ 10ರಂದು ನೇಹಾ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದಾರೆ. ನವದೆಹಲಿಯಲ್ಲಿ ತುಂಬಾ ಸರಳವಾಗಿ ಪೋಷಕರು ಮತ್ತು ಆಪ್ತ ಬಂಧುಗಳು ಸಮ್ಮುಖದಲ್ಲಿ ಮದುವೆ ನಡೆದಿದೆ. ಅಂಗದ್ ಬೇಡಿ ಹಿರಿತೆರೆ ಮತ್ತು ಕಿರುತೆರೆ ಎರೆಡರಲ್ಲೂ ಮಿಂಚುತ್ತಿದ್ದಾರೆ. ನೇಹಾ ಸಹ ಹಿರಿತೆರೆ ಮತ್ತು ಕಿರುತೆರೆಗಳಲ್ಲಿ ಗುರುತಿಸಿಕೊಂಡಿದ್ದಾರೆ. 2004ರಲ್ಲಿ ತೆರೆಕಂಡ ಖಯಾಮತ್: ಸಿಟಿ ಅಂಡರ್ ಥ್ರೀಟ್ ಸಿನಿಮಾ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು.

    ಅಯ್ಯಪ್ಪ ನಿಶ್ಚಿತಾರ್ಥ:
    ಬಿಗ್ ಬಾಸ್ ಸೀಸನ್-3 ಖ್ಯಾತಿಯ ಕ್ರಿಕೆಟರ್ ಎನ್.ಸಿ ಅಯ್ಯಪ್ಪ ಕನ್ನಡದ ನಟಿ ಅನು ಪೂವಮ್ಮ ಜೊತೆ ಮೇ 18ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದಂತೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದ್ದು, ಮುಂದಿನ ವರ್ಷ ಕೊಡಗಿನ ವಿರಾಜಪೇಟೆಯಲ್ಲಿ ಅಯ್ಯಪ್ಪ ಹಾಗೂ ಅನು ಮದುವೆಯಾಗಲಿದ್ದಾರೆ. ಅನು ಪೂವಮ್ಮ ಕನ್ನಡದ ಕರ್ವ, ಕಥಾವಿಚಿತ್ರ, ಲೈಫ್ ಸೂಪರ್, ಪಾನಿಪೂರಿ ಚಿತ್ರಗಳಲ್ಲಿ ನಟಿಸಿದ್ದಾರೆ.

    ನಟ ರಮಣ್: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಾಧಾ ರಮಣ ಧಾರಾವಾಹಿಯ ನಟ ಸ್ಕಂದ ಆಶೋಕ್ 4 ವರ್ಷಗಳಿಂದ ಪ್ರೀತಿಸುತ್ತಿದ್ದ ತನ್ನ ಪ್ರೇಯಸಿ ಶಿಖಾ ಪ್ರಸಾದ್ ಜೊತೆ ಮೇ 31ರಂದು ಮದುವೆಯಾಗಿದ್ದಾರೆ. ಈ ಜೋಡಿಯ ಮದುವೆ ಆರು ದಿನಗಳ ಕಾಲ ನಡೆದಿದೆ. ಮೇ 25ರಿಂದ ಮೇ 31 ವರೆಗೂ ಮದುವೆ ಕಾರ್ಯಕ್ರಮಗಳು ನಡೆದಿದ್ದು, ಬೆಂಗಳೂರು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಸುನೀಲ್ ರಾವ್: ಸ್ಯಾಂಡಲ್‍ವುಡ್ ಖ್ಯಾತ ಗಾಯಕಿ ಬಿ.ಕೆ ಸುಮಿತ್ರ ಅವರ ಪುತ್ರ ನಟ ಹಾಗೂ ಗಾಯಕ ಸುನೀಲ್ ರಾವ್ ತನ್ನ ಪ್ರೇಯಸಿ ಶ್ರೇಯಾ ಐಯ್ಯರ್ ಜೊತೆ ಜೂನ್ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ ಸುನೀಲ್ ಹಾಗೂ ಶ್ರೇಯಾ ಅವರ ಮದುವೆ ನಡೆದಿದೆ. ಸುನೀಲ್ ರಾವ್ ಅವರ ಪತ್ನಿ ಶ್ರೇಯಾ ಐಯ್ಯರ್ ವೃತ್ತಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದು, ಸುನಿಲ್ ಅಭಿನಯಿಸಿದ ವೆಬ್ ಸೀರಿಸ್‍ಗೆ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.

    ರಾಘವೇಂದ್ರ ರಾಜ್‍ಕುಮಾರ್ ಪುತ್ರನ ನಿಶ್ಚಿತಾರ್ಥ: ಸ್ಯಾಂಡಲ್‍ವುಡ್ ದೊಡ್ಮನೆಯ ರಾಘವೇಂದ್ರ ರಾಜ್‍ಕುಮಾರ್ ಪುತ್ರ ಯುವರಾಜ್‍ಕುಮಾರ್ ಹಾಗೂ ಶ್ರೀದೇವಿಯು ನಿಶ್ಚಿತಾರ್ಥ ಜುಲೈ 5ರಂದು ನಡೆದಿದೆ. ಖಾಸಗಿ ಹೊಟೇಲ್‍ನಲ್ಲಿ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ರಾಜ್ ಕುಟುಂಬಸ್ಥರು ಕೇವಲ ಆಪ್ತರಿಗಷ್ಟೆ ಆಹ್ವಾನ ನೀಡಲಾಗಿತ್ತು.

    ಪವನ್ ಒಡೆಯರ್ ಮದುವೆ: ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿರುವ ಗೌರಿ ಶಂಕರ್ ಕಲ್ಯಾಣ ಮಂಟಪದಲ್ಲಿ ನಿರ್ದೇಶಕ ಪವನ್ ಒಡೆಯರ್ ಮತ್ತು ನಟಿ ಅಪೇಕ್ಷಾ ಅವರನ್ನು ಆಗಸ್ಟ್ 20ರಂದು ಮದುವೆಯಾದರು. ನಿರ್ದೇಶಕ ಪವನ್ ಒಡೆಯರ್ `ರಣವಿಕ್ರಮ’, `ನಟರಾಜ ಸರ್ವಿಸ್’, `ಗೂಗ್ಲಿ’ ಹಾಗೂ `ಗೋವಿಂದಾಯ ನಮಃ’ ಸಿನಿಮಾಗಳನ್ನು ಮಾಡಿದ್ದಾರೆ. ನಟಿ ಅಪೇಕ್ಷಾ ಟಿಎನ್ ಸೀತಾರಾಮ್ ಅವರ `ಕಾಫೀ ತೋಟ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

    ಹರ್ಷವರ್ಧನ್: ರಾಜಾಹುಲಿ ಸಿನಿಮಾ ಖ್ಯಾತಿಯ, ಯಶ್ ಗೆಳೆಯ ಹರ್ಷವರ್ಧನ್ ಡಿಸೆಂಬರ್ 3ರಂದು ತಿರುಮಲದಲ್ಲಿ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದರು. ರೂಪದರ್ಶಿ ಐಶ್ವರ್ಯ ಜೊತೆ ಸಪ್ತಪದಿ ತುಳಿದರು. ಮೇ ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಹರ್ಷವರ್ಧನ್ ಮತ್ತು ಮಾಡೆಲ್ ಐಶ್ವರ್ಯ ಅವರ ನಿಶ್ಚಿತಾರ್ಥ ನೆರವೇರಿತ್ತು.

    ದೀಪಿಕಾ ಪಡುಕೋಣೆ: ಬಾಲಿವುಡ್‍ನ ಹಾಟ್ ಜೋಡಿ ಎಂದೇ ಗುರುತಿಸಿಕೊಂಡಿದ್ದ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಇಟಲಿಯ ಕೋಮೋ ಸಿಟಿಯಲ್ಲಿ ನವೆಂಬರ್ 14 ಮತ್ತು 15ರಂದು ಅದ್ಧೂರಿಯಾಗಿ ಮದುವೆಯಾದರು. ಮದುವೆ ಬಳಿಕ ಸ್ವದೇಶಕ್ಕೆ ಮರಳಿದ ಬಳಿಕ ಬೆಂಗಳೂರು ಮತ್ತು ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ದರು. ಇಟಲಿಯಲ್ಲಿ ನಡೆದ ಮದುವೆಯ ಒಂದು ಫೋಟೋ ಸಹ ಲೀಕ್ ಆಗದಂತೆ ಜೋಡಿ ಎಚ್ಚರಿಕೆ ವಹಿಸಿತ್ತು.

    ಪ್ರಿಯಾಂಕ ಚೋಪ್ರಾ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ, ವಿದೇಶಿ ಗೆಳೆಯ ನಿಕ್ ಜೋನ್ಸ್ ರನ್ನು ಡಿಸೆಂಬರ್ 1 ಮತ್ತು 2ರಂದು ಹಿಂದೂ ಹಾಗು ಕ್ರೈಸ್ತ ಧರ್ಮದಂತೆ ಮದುವೆಯಾದರು. ಜೋಧ್‍ಪುರದ ಉಮೈದ್ ಭವನದಲ್ಲಿ ನಡೆದ ಮದುವೆಗೆ ಕೇವಲ ಆಪ್ತ ಬಂಧುಗಳಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಡಿಸೆಂಬರ್ 4ರಂದು ದೆಹಲಿಯಲ್ಲಿ ನಡೆದ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿ ನವದಂಪತಿಗೆ ಶುಭ ಹಾರೈಸಿದ್ದರು.

    ಧೃವ ಸರ್ಜಾ ನಿಶ್ಚಿತಾರ್ಥ: ಬೆಂಗಳೂರಿನ ಬನಶಂಕರಿ ಬಳಿಯ ಧರ್ಮಗಿರಿ ದೇವಾಲಯದ ಆವರಣದಲ್ಲಿ ಡಿಸೆಂಬರ್ 9 ರಂದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಿಶ್ಚಿತಾರ್ಥ ಶಾಸ್ತ್ರಕ್ಕೆ ಅದ್ಧೂರಿಯಾಗಿ ನಡೆಯಿತು. ಧ್ರುವ ಸರ್ಜಾ ತಮ್ಮ ಬಾಲ್ಯದ ಗೆಳತಿ ಪ್ರೇರಣಾ ರಿಂಗ್ ತೊಡಿಸುವ ಮೂಲಕ ಭಾನುವಾರ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಧ್ರುವ ಮತ್ತು ಪ್ರೇರಣಾ ಅವರ ಮದುವೆಯನ್ನು ಗುರು-ಹಿರಿಯರು ಮುಂದಿನ ವರ್ಷ ಏಪ್ರಿಲ್ ನಲ್ಲಿ ಫಿಕ್ಸ್ ಮಾಡಿದ್ದಾರೆ. ಆದರೆ ಇನ್ನೂ ದಿನಾಂಕವನ್ನು ನಿಗದಿ ಮಾಡಿಲ್ಲ. ಏಪ್ರಿಲ್ ಕೊನೆಯ ವಾರದಲ್ಲಿ ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ.

    ಸುಮಂತ್ ಶೈಲೇಂದ್ರ: ನಟ ಸುಮಂತ್ ಶೈಲೇಂದ್ರ ಡಿಸೆಂಬರ 12ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಂತ್ ಶೈಲೇಂದ್ರ ಅವರು ಖ್ಯಾತ ನಿರ್ಮಾಪಕ ಶೈಲೇಂದ್ರ ಬಾಬು ಅವರ ಮಗನಾಗಿದ್ದು, ಶ್ರೀನಿವಾಸ್ ಮತ್ತು ಚಂದ್ರಕಲಾ ಅವರ ಪುತ್ರಿ ಅನಿತಾ ಅವರನ್ನು ಸುಮಂತ್ ಮದುವೆಯಾಗಿದ್ದಾರೆ. ಸುಮಂತ್ `ಆಟ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿದ್ದು, ನಂತರ ರಾಧಿಕಾ ಪಂಡಿತ್ ಅವರ ಜೊತೆ `ದಿಲ್‍ವಾಲಾ’ ಹಾಗೂ ಕೃತಿ ಕರಬಂಧ ಜೊತೆ `ತಿರುಪತಿ ಎಕ್ಸ್‍ಪ್ರೆಸ್’ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.

    ದಿಗಂತ್-ಐಂದ್ರಿತಾ: ಸ್ಯಾಂಡಲ್‍ವುಡ್ ಕ್ಯೂಟ್ ಕಪಲ್ ದೂದ್‍ಪೇಡ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಡಿಸೆಂಬರ್ 12 ಮತ್ತು 13ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ಚಿಕ್ಕಬಳ್ಳಾಪುರದ ನಂದಿಬೆಟ್ಟದ ಸಮೀಪವಿರುವ ಡಿಸ್ಕವರಿ ವಿಲೇಜ್ ರೆಸಾರ್ಟ್ ನಲ್ಲಿ ಕ್ಯೂಟ್ ಕಪಲ್ ಮದುವೆಯಾದ್ರು. ನಿಸರ್ಗಧಾಮದಲ್ಲಿ ಸತಿ-ಪತಿಗಳಾದ ದಿಗಂತ್ ಮತ್ತು ಐಂದ್ರಿತಾ ಡಿಸೆಂಬರ್ 15ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದರು.

    ಕಪಿಲ್ ಶರ್ಮಾ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಕಪಿಲ್ ಶರ್ಮಾ ಶೋ’ ಮೂಲಕ ಖ್ಯಾತರಾಗಿರುವ ಹಾಸ್ಯನಟ, ನಿರೂಪಕ ಕಪಿಲ್ ಶರ್ಮಾ ತಮ್ಮ ಬಹುಕಾಲದ ಗೆಳತಿ ಗಿನ್ನಿ ಚಾತ್ರಥ್ ಜೊತೆ ಡಿಸೆಂಬರ್ 14ರಂದು ಆಕೆಯ ಮನೆಯಲ್ಲೇ ಸಿಖ್ ಸಂಪ್ರದಾಯದ ಪ್ರಕಾರ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ರಾಖಿ ಸಾವಂತ್ ಮದುವೆ ಡ್ರಾಮಾ:
    ನವೆಂಬರ್ ನಲ್ಲಿ ಬಾಲಿವುಡ್ ನಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಡ್ರಾಮಾ ಕ್ವೀನ್ ಅಂತಾನೇ ಗುರುತಿಸಿಕೊಳ್ಳುವ ಹಾಟ್ ಬೆಡಗಿ ರಾಖಿ ಸಾವಂತ್ ತಾನು ಮದುವೆ ಆಗುತ್ತಿದ್ದೇನೆಂದು ಘೋಷಿಸಿಕೊಂಡರು. ದೀಪಕ್ ಕಲಾಲ್ ಎಂಬತಾನೊಂದಿಗೆ ಮದುವೆ ಆಗುತ್ತಿದ್ದು, ಅದಕ್ಕಾಗಿ ಕನ್ಯತ್ವ ಪರೀಕ್ಷೆ ಮಾಡಿಸಿಕೊಂಡಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡರು. ಇದಾದ ಕೆಲ ದಿನಗಳ ಬಳಿಕ ನಾನು ಮದುವೆ ಆಗುತ್ತಿಲ್ಲ. ದೀಪಕ್ ವರ್ತನೆ ಸರಿ ಇಲ್ಲ. ಆತನ ನಡವಳಿಕೆ ಸರಿಯಾಗಿಲ್ಲ. ಆತನಿಂದ ನಾನು ದೂರವಾಗುತ್ತಿದ್ದೇನೆ ಕಣ್ಣೀರು ಹಾಕುತ್ತ ವಿಡಿಯೋ ಹಾಕಿಕೊಂಡಿದ್ದರು.

    ಮದುವೆ ಶಾಪಿಂಗ್‍ಗಾ ದೀಪಕ್ 1 ಕೋಟಿ ನೀಡಿದ್ದ ಎಲ್ಲವೂ ಖರ್ಚು ಅಗಿದೆ. 20 ಲಕ್ಷ ಉಳಿದಿದ್ದು, ಅದನ್ನು ನಾನು ಕೊಡಲ್ಲ. ನಿಶ್ಚಿತಾರ್ಥಕ್ಕೆ ತೊಡೆಸಿದ್ದ ವಜ್ರದ ಉಂಗುರು ಹಿಂದಿರುಗಿ ನೀಡಲ್ಲ ಎಂದು ಸಾಲು ಸಾಲು ವಿಡಿಯೋ ಹಾಕಿಕೊಂಡು ಕಣ್ಣೀರು ಹಾಕಿದ್ದರು. ಮತ್ತೆ ವಿಡಿಯೋ ಹಾಕಿಕೊಂಡ ರಾಖಿ, ನನಗೆ ಹಿಂದಿರುಗಿಸಲು ಆಗ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ಆತನನ್ನೇ ಮದುವೆ ಆಗುತ್ತಿದ್ದೇನೆ ಅಂತಾ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2018ರಲ್ಲಿ ಸಿನಿಮಾರಂಗ ಕಳೆದುಕೊಂಡ ಕಲಾವಿದರು

    2018ರಲ್ಲಿ ಸಿನಿಮಾರಂಗ ಕಳೆದುಕೊಂಡ ಕಲಾವಿದರು

    2018 ಮುಗಿದು 2019ಕ್ಕೆ ಎಲ್ಲರು ಪಾದಾರ್ಪಣೆ ಮಾಡುತ್ತಿದ್ದೇವೆ. ಸ್ಯಾಂಡಲ್‍ವುಡ್, ಬಾಲಿವುಡ್, ಟಾಲಿವುಡ್ ಸೇರಿದಂತೆ ಚಿತ್ರರಂಗ ಹಲವು ಏರುಪೇರುಗಳನ್ನು ಕಂಡಿದೆ. ಸಿನಿಮಾದ ದಂತಕತೆ ಎಂದು ಕರೆಸಿಕೊಳ್ಳುತ್ತಿದ್ದ ಅಂಬರೀಶ್, ಶ್ರೀದೇವಿ, ಕಾಶಿನಾಥ್ ಸೇರಿದಂತೆ ಹಲವು ಗಣ್ಯರನ್ನು 2018ರಲ್ಲಿ ನಾವೆಲ್ಲ ಕಳೆದುಕೊಂಡಿದ್ದೇವೆ.

    ಕಾಶಿನಾಥ್:
    ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಜನವರಿ 18ರಂದು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಶ್ರೀಶಂಕರ್ ಆಸ್ಪತ್ರೆಯಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದರು. ಚಾಮರಾಜಪೇಟೆಯ ಟಿಆರ್ ಮಿಲ್‍ನಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆದಿತ್ತು. ಕಾಶಿನಾಥ್ ಅವರು 43 ಸಿನಿಮಾಗಳಲ್ಲಿ ನಟಿಸಿದ್ದರು. 11 ಕನ್ನಡ, 1 ಹಿಂದಿ ಹಾಗೂ 1 ತೆಲುಗು ಚಿತ್ರ ನಿರ್ಮಾಣ ಮಾಡಿದ್ದರು. 80ರ ದಶಕದ ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಇತ್ತೀಚಿನ ಚೌಕ ಸಿನಿಮಾ ಕಾಶಿನಾಥ್ ಅವರ ಕೊನೆಯ ಸಿನಿಮಾ. ಅಷ್ಟೇ ಅಲ್ಲದೇ ಉಪೇಂದ್ರರಂತಹ ಕಲಾವಿದರನ್ನ ಪರಿಚಯಿಸಿದ ಹೆಗ್ಗಳಿಕೆ ಕಾಶಿನಾಥ್ ಅವರದ್ದಾಗಿದೆ.

    ಕೃಷ್ಣಕುಮಾರಿ:
    60-80 ರ ದಶಕದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಕೃಷ್ಣಕುಮಾರಿ ಜನವರಿ 24ರಂದು ವಿಧಿವಶರಾದರು. ಕೃಷ್ಣಕುಮಾರಿ ನೈಹಾತಿಯ ತೆಲಗು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು. ತೆಲುಗು, ತಮಿಳು, ಕನ್ನಡ ಮಲೆಯಾಳಂ ಹಾಗು ಹಿಂದಿ ಸೇರಿದಂತೆ ಸುಮಾರು 230ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೃಷ್ಣಕುಮಾರಿ ನಟಿಸಿದ್ದರು. 1951ರಲ್ಲಿ ನವ್ವಿತೆ ನವರತ್ನುಲು ಎಂಬ ತೆಲುಗು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಕೃಷ್ಣ ಕುಮಾರಿ, ಡಾ.ರಾಜ್ ಕುಮಾರ್, ಎನ್‍ಟಿಆರ್, ಎಎನ್‍ಆರ್, ಶಿವಾಜಿ ಗಣೇಶನ್ ರಂತಹ ಸ್ಟಾರ್ ನಟರ ಜೊತೆ ನಟಿಸಿದ್ದರು.

    ಶ್ರೀದೇವಿ:
    ಬಾಲಿವುಡ್‍ನ ಹಿರಿಯ ನಟಿ ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಫೆಬ್ರವರಿ 25ರಂದು ಹೃದಯಾಘಾತಗೊಂಡು ನಿಧನರಾಗಿದ್ದರು. 13ನೇ ವಯಸ್ಸಿನಲ್ಲಿ ಜೂಲಿ ಚಿತ್ರದೊಂದಿಗೆ ಬಾಲಿವುಡ್‍ಗೆ ಎಂಟ್ರಿಕೊಟ್ಟ ಶ್ರೀದೇವಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. 1971ರಲ್ಲಿ ಮಲೆಯಾಳಂನ ಪೂಂಪಟ್ಟಾ ಚಿತ್ರದಲ್ಲಿ ನಟಿಸಿದ್ದ ಶ್ರೀದೇವಿ ಅವರಿಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಸಿಕ್ಕಿತ್ತು. 2013ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ ಶ್ರೀದೇವಿ ಅವರನ್ನು ಗೌರವಿಸಿತ್ತು.

    ಪಿ.ಎನ್.ಸತ್ಯ:
    ನಿರ್ದೇಶಕ, ನಟ ಪಿ.ಎನ್ ಸತ್ಯ ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೆ ಮೇ 5ರಂದು ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಮೆಜೆಸ್ಟಿಕ್, ಡಾನ್, ದಾಸ, ಶಾಸ್ತ್ರೀ, ಗೂಳಿ ಸೇರಿದಂತೆ 16 ಚಿತ್ರಗಳನ್ನ ನಿರ್ದೇಶಿಸಿದ್ದ ಸತ್ಯ ಅವರ ಕೊನೆಯ ಚಿತ್ರ ಮರಿ ಟೈಗರ್ ಆಗಿತ್ತು. ನಿರ್ದೇಶನ ಮಾತ್ರವಲ್ಲದೇ 21 ಚಿತ್ರಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದರು. ಇವರ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಬನಿ ಮಿಡಿದಿದ್ದರು.

    ನಿರೂಪಕ ಚಂದನ್:
    ಖಾಸಗಿ ವಾಹಿನಿ ನಿರೂಪಕ ಚಂದನ್ ಅಪಘಾತದಲ್ಲಿ ಮೃತಪಟ್ಟಿದ್ದರು. ಚಂದನ್ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಪತ್ನಿ ಮೀನಾ ತಮ್ಮ ಮಗ ತುಷಾರ್ ನನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಕೊನೆಗೂ ಅವರು ಮೃತಪಟ್ಟಿದ್ದಾರೆ. ತುಷಾರ್ ಕಣ್ಣನ್ನು ಕುಟುಂಬದವರು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.

    ಹಾಸ್ಯನಟ ಮಲ್ಲೇಶ್:
    ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಚಲನಚಿತ್ರ ಹಾಸ್ಯ ನಟ ವಠಾರ ಮಲ್ಲೇಶ್(42) ಜೂನ್ 6ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ್ರು. ಮಲ್ಲೇಶ್ ಬನ್ನೇರುಘಟ್ಟದ ಜಂಗಲಪಾಳ್ಯದಲ್ಲಿ ವಾಸವಾಗಿದ್ದರು. ಮಲ್ಲೇಶ್ ಮೂಲತಃ ಕೃಷಿಕ ಕುಟುಂಬದವರಾಗಿದ್ದು, ಟೆಲಿಫೋನ್ ಬೂತ್ ಕೆಲಸ ಮಾಡುತ್ತಿದ್ದರು. ಮಲ್ಲೇಶ್ ಅವರು ಸುಮಾರು 250ಕ್ಕೂ ಹೆಚ್ಚು ನಾಟಕದಲ್ಲಿ ಅಭಿನಯಿಸಿದ್ದಾರೆ. ಇನ್ನು ಕಿರುತೆರೆಯಲ್ಲಿ ಸುಮಾರು 60ಕ್ಕೂ ಅಧಿಕ ಧಾರಾವಾಹಿಯಲ್ಲಿ ನಟಿಸಿದ್ದಾರೆ.

    ಸದಾಶಿವ ಬ್ರಹ್ಮಾವರ್:
    ತೆರೆಯ ಮೇಲೆ ಜನರನ್ನು ರಂಜಿಸಿ ಅದೆಷ್ಟೋ ಪಾತ್ರಕ್ಕೆ ಜೀವ ತುಂಬಿದ ಮೇರು ಕಲಾವಿದ ಸದಾಶಿವ ಬ್ರಹ್ಮಾವರ್(90) ವಯೋಸಹಜ ಖಾಯಿಲೆಯಿಂದ ಸೆಪ್ಟೆಂಬರ್ 20ರಂದು ವಿಧಿವಶರಾಗಿದ್ದಾರೆ. ಸದಾಶಿವ ಬ್ರಹ್ಮಾವರ್ ಅವರು ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಉಪೇಂದ್ರ, ಪುನೀತ್, ದರ್ಶನ್, ಸುದೀಪ್, ರವಿಚಂದ್ರನ್, ಜಗ್ಗೇಶ್ ಸೇರಿದಂತೆ ಅನೇಕ ನಟರ ಜೊತೆ ಅಭಿನಯಿಸಿದ್ದರು. ಇವರು ಸುಮಾರು 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಾವುದೇ ಪಾತ್ರ ಕೊಟ್ಟರು ಅದಕ್ಕೆ ಜೀವ ತುಂಬುತ್ತಿದ್ದರು.

    ಅನ್ನಪೂರ್ಣ ದೇವಿ:
    ಖ್ಯಾತ ಹಿಂದುಸ್ತಾನಿ ಗಾಯಕಿ ಅನ್ನಪೂರ್ಣದೇವಿ (91) ಅಕ್ಟೋಬರ್ 13ರಂದು ವಿಧಿವಶರಾಗಿದ್ದಾರೆ. ಪದ್ಮಭೂಷಣ ಪುರಸ್ಕೃತ, ಮಾಯಿಹಾರ್ ಗರಾನಾ ಸಂಸ್ಥಾಪಕರಾದ ಅನ್ನಪೂರ್ಣ ದೇವಿಯವರು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅಲ್ಲಾವುದಿನ್ ಖಾನ್ ಮತ್ತು ಮದೀನಾ ಬೇಗಮ್ ದಂಪತಿಯ ನಾಲ್ಕು ಮಕ್ಕಳ ಪೈಕಿ ಕಿರಿಯ ಮಗಳಾದ ಅನ್ನಪೂರ್ಣ ದೇವಿ ಅವರು ಮಧ್ಯಪ್ರದೇಶದ ಮಾಯಿಹಾರ್ನಲ್ಲಿ 1927ರ ಏಪ್ರಿಲ್ 23 ರಂದು ಜನಿಸಿದ್ದರು. ಪೋಷಕರು ಮಗಳಿಗೆ ರೋಷನಾರಾ ಎಂದು ಹೆಸರನ್ನು ಇಟ್ಟಿದ್ದರೂ ಮಧ್ಯಪ್ರದೇಶದ ರಾಜ ಬ್ರಿಜನಾಥ್ ಸಿಂಗ್ ಅನ್ನಪೂರ್ಣ ದೇವಿ ಎಂದು ಹೆಸರನ್ನು ನೀಡಿದ್ದರು. ಮುಂದೆ ಅನ್ನಪೂರ್ಣದೇವಿ ಎನ್ನುವ ಹೆಸರೇ ಪ್ರಸಿದ್ಧವಾಗಿತ್ತು.

    ಅಂಬರೀಶ್:
    ನವೆಂಬರ್ 24 ರೆಬೆಲ್ ಸ್ಟಾರ್ ಅಂಬಬರೀಶ್ ನಿಧನದ ಸುದ್ದಿ ಚಂದನವನಕ್ಕೆ ಬರ ಸಿಡಲಿನಂತೆ ಅಪ್ಪಳಿಸಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅಂಬರೀಶ್ ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್ 24 ಶನಿವಾರ ರಾತ್ರಿ ವಿಧಿವಶರಾದರು. ಭಾನುವಾರ ಕಂಠೀರವ ಸ್ಟೇಡಿಯಂನಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಮಂಡ್ಯದ ಜನತೆಗೆ ಅಂತಿಮ ದರ್ಶನದ ವ್ಯವಸ್ಥೆ ಕಲ್ಪಿಸಬೇಕೆಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಅಭಿಮಾನಿಗಳಿಗಾಗಿ ಅಂಬಿ ಮೃತ ದೇಹವನ್ನು ವಿಶೇಷ ಸೇನಾ ಹೆಲಿಕಾಪ್ಟರ್ ಮೂಲಕ ಮಂಡ್ಯದ ವಿಶ್ವೇಶರಯ್ಯ ಕ್ರೀಡಾಂಗಣಕ್ಕೆ ರವಾನಿಸಲಾಗಿತ್ತು.

    ಭಾನುವಾರ ರಾತ್ರಿ ಚಳಿಯನ್ನು ಲೆಕ್ಕಿಸದೇ ತಮ್ಮ ನೆಚ್ಚಿನ ನಟ, ಜನನಾಯಕ ಅಂತಿಮ ದರ್ಶನ ಪಡೆದರು. ಸೋಮವಾರ ನವೆಂಬರ್ 25ರಂದು ಬೆಳಗ್ಗೆ ಅದೇ ಹೆಲಿಕಾಪ್ಟರ್ ಮೂಲಕ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆತರಲಾಯ್ತು. ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆ ಮೂಲಕ ಕಂಡೀರವ ಸ್ಟುಡಿಯೋ ತಲುಪಿಸಲಾಯ್ತು. ವಿಧಿವಿಧಾನಗಳ ಮೂಲಕ ಕುಟುಂಬಸ್ಥರು, ಹಿರಿಯ ನಟರು, ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು.

    ನಿರ್ದೇಶಕ ಎ.ಆರ್.ಬಾಬು:
    ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಿರ್ದೇಶಕ, ನಟ ಎ.ಆರ್. ಬಾಬು ಡಿಸೆಂಬರ್ 4ರಂದು ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದ್ರು. ನಟ ಮತ್ತು ನಿರ್ದೇಶಕರಾಗಿದ್ದ ಎ.ಆರ್. ಬಾಬು ಚಂದನವನದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಬಾಬು ಅವರಿಗೆ 56 ವರ್ಷ ವಯಸ್ಸಾಗಿತ್ತು. ಹಲೋ ಯಮ, ಖಳನಾಯಕ, ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ, ಕಾಸಿದ್ದವನೇ ಬಾಸು, ಸಪ್ನೋಂಕಿ ರಾಣಿ, ಚಮ್ಕಾಯಿಸಿ ಚಿಂದಿ ಉಡಾಯಿಸಿ, ಕೂಲಿ ರಾಜ, ಮರುಜನ್ಮ ಸಿನಿಮಾಗಳು ಬಾಬು ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದವು. ಚಂದನವನದ ಹಿರಿಯ ನಿರ್ದೇಶಕರಾಗಿದ್ದ ಬಾಬು ಅವರ ಗರಡಿಯಲ್ಲಿ ಜೋಗಿ ಪ್ರೇಮ್ ಪಳಗಿದ್ದರು. ನಿರ್ದೇಶಕನ ಸಾವಿಗೆ ಸ್ಯಾಂಡಲ್‍ವುಡ್ ಗಣ್ಯರು ಸಂತಾಪ ಸೂಚಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv