Tag: 2005 Ayodhya Terror Attack Case

  • ರಾಮಲಲ್ಲಾನ ಜಲಾಭಿಷೇಕಕ್ಕೆ ಪಾಕಿಸ್ತಾನ ಸೇರಿದಂತೆ 155 ದೇಶದ ನದಿಗಳ ನೀರು

    ರಾಮಲಲ್ಲಾನ ಜಲಾಭಿಷೇಕಕ್ಕೆ ಪಾಕಿಸ್ತಾನ ಸೇರಿದಂತೆ 155 ದೇಶದ ನದಿಗಳ ನೀರು

    ಲಕ್ನೋ: ಭವ್ಯವಾಗಿ ನಿರ್ಮಾಣಗೊಳ್ಳುತ್ತಿರುವ ಅಯೋಧ್ಯೆಯ (Ayodhya) ರಾಮ ಮಂದಿರ (Ram Mandir) ಸಿದ್ಧತೆ ಭರ್ಜರಿಯಾಗಿ ಸಾಗಿದೆ. ರಾಮ್‍ಲಲ್ಲಾನ ಅಭಿಷೇಕಕ್ಕೆಂದು ಪಾಕಿಸ್ತಾನ, ಚೀನಾ, ಉಜ್ಬೇಕಿಸ್ತಾನ ಸೇರಿದಂತೆ ವಿವಿಧ ದೇಶಗಳ 155 ನದಿಗಳ ಜಲವು ಅಯೋಧ್ಯೆಗೆ ತಲುಪಿದೆ.

    ಈ ಬಗ್ಗೆ ಬಿಜೆಪಿ (BJP) ಮಾಜಿ ಶಾಸಕ ವಿಜಯ್ ಜಾಲಿ ಮಾಹಿತಿ ನೀಡಿದ್ದಾರೆ. ತಾಂಜಾನಿಯಾ, ನೈಜೀರಿಯಾ, ಅಮೆರಿಕ, ಫ್ರಾನ್ಸ್, ಜರ್ಮನಿ, ಬ್ರಿಟನ್, ನೇಪಾಳ, ಭೂತಾನ್, ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶದಂತಹ ದೇಶಗಳಿಂದಲೂ ನೀರು ತರಲಾಗಿದೆ. ಇದರ ಜೊತೆಗೆ ಅಂಟಾರ್ಟಿಕಾದಿಂದಲೂ ನೀರು ತರಲಾಗಿದೆ. ಈ ಎಲ್ಲಾ ನದಿಗಳ ನೀರನ್ನು ಏ. 23ರಂದು ಉತ್ತಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)  ಅವರು ರಾಮಲಲ್ಲಾಗೆ ಜಲಾಭಿಷೇಕ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

    ಏಪ್ರಿಲ್ 23ರಂದು ಉತ್ತರ ಪ್ರದೇಶದ ಮಣಿರಾಮ್ ದಾಸ್ ಚಾವ್ನಿ ಆಡಿಟೋರಿಯಂನಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರು ಜಲ ಕಲಶವನ್ನು ಪಡೆದ ನಂತರ ಪೂಜಿಸಲಿದ್ದಾರೆ. ವಿಶ್ವದ ವಿವಿಧ ದೇಶಗಳಿಂದ ತಂದಿರುವ ನೀರಿನ ಕಲಶದ ಮೇಲೆ ಆ ದೇಶಗಳ ಹೆಸರು, ಧ್ವಜ ಹಾಗೂ ನದಿಗಳ ಹೆಸರುಗಳ ಸ್ಟಿಕ್ಕರ್‍ಗಳನ್ನು ಹಾಕಲಾಗಿದೆ. ಈ ಕಾರ್ಯಕ್ರಮಕ್ಕೆ ಹಲವು ದೇಶಗಳ ರಾಯಭಾರಿಗಳು ಭಾಗಿಯಾಗಲಿದ್ದಾರೆ ಎಂದರು.

    ಪಾಕಿಸ್ತಾನದ ನೀರನ್ನು ಅಲ್ಲಿನ ಹಿಂದೂಗಳು ದುಬೈಗೆ ಕಳುಹಿಸಿದರು. ನಂತರ ಅದನ್ನು ದುಬೈನಿಂದ ದೆಹಲಿಗೆ ತಂದು ನಂತರ ಅಯೋಧ್ಯೆಗೆ ತರಲಾಯಿತು. ಪಾಕಿಸ್ತಾನವಲ್ಲದೆ, ಸುರಿನಾಮ್, ಉಕ್ರೇನ್, ರಷ್ಯಾ, ಕಜಕಿಸ್ತಾನ್, ಕೆನಡಾ ಮತ್ತು ಟಿಬೆಟ್ ಸೇರಿದಂತೆ ಹಲವು ದೇಶಗಳ ನದಿಗಳಿಂದಲೂ ನೀರು ಬಂದಿದೆ. ಇದನ್ನೂ ಓದಿ: ಅಯೋಧ್ಯೆಯ ಬಾಲರಾಮನ ನಿರ್ಮಾಣಕ್ಕೆ ಕರ್ನಾಟಕದ ಕಲ್ಲು

    2 ಐಷಾರಮಿ ಹೋಟೆಲ್: 2024ರ ಜನವರಿಯಲ್ಲಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ಇದಕ್ಕೂ ಮೊದಲೇ ಸರ್ವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲೇ ಅಯೋಧ್ಯೆಯಲ್ಲಿ 2 ಐಷಾರಾಮಿ ಹೋಟೆಲ್‍ಗಳನ್ನು ನಿರ್ಮಿಸಲು ತಾಜ್ ಗ್ರೂಪ್ ಒಪ್ಪಂದಕ್ಕೆ ಸಹಿ ಹಾಕಿದೆ. 5 ಎಕರೆಗಳಲ್ಲಿರುವ ಈ ಹೋಟೆಲ್ ಪ್ರದೇಶವು ಒಂದರಲ್ಲಿ 100 ಕೊಠಡಿಗಳು ಮತ್ತೊಂದರಲ್ಲಿ 120 ಕೋಣೆಗಳನ್ನು ಹೊಂದಿದೆ. ಇದನ್ನೂ ಓದಿ: ಸೈನಿಕರ ವಾಹನದ ಮೇಲೆ ದಾಳಿ ಪ್ರಕರಣ – 12 ಶಂಕಿತರು ವಶಕ್ಕೆ

  • ರಾಮಮಂದಿರ ಶಿಲಾನ್ಯಾಸಕ್ಕೆ ಭರ್ಜರಿ ಸಿದ್ಧತೆ – ಸಿಎಂ ಯೋಗಿ ಆದಿತ್ಯನಾಥ್ ಪರಿಶೀಲನೆ

    ರಾಮಮಂದಿರ ಶಿಲಾನ್ಯಾಸಕ್ಕೆ ಭರ್ಜರಿ ಸಿದ್ಧತೆ – ಸಿಎಂ ಯೋಗಿ ಆದಿತ್ಯನಾಥ್ ಪರಿಶೀಲನೆ

    ಲಕ್ನೋ: ಅಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಿನಾಂಕ ನಿಗದಿಯಾಗಿದ್ದು, ಭರ್ಜರಿ ಸಿದ್ಧತೆಗಳು ಆರಂಭವಾಗಿದೆ. ಲಾಕ್‍ಡೌನ್ ನಡುವೆ ಐತಿಹಾಸಿಕ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಇಂದು ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿ ಸಲಹೆಗಳನ್ನು ನೀಡಿದರು. ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದ ಸಿದ್ಧತೆಯ ನೇತೃತ್ವ ವಹಿಸಿಕೊಂಡಿದೆ. ಅಗಸ್ಟ್ ಐದರಂದು ಬೆಳಗ್ಗೆ 10:30 ರಿಂದ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

    ಕಾರ್ಯಕ್ರಮದಲ್ಲಿ 300 ಮಂದಿ ಅತಿಥಿಗಳು ಭಾಗಿಯಾಗಲಿದ್ದು ಈ ಪೈಕಿ ಈಗಾಗಲೇ, 200 ಮಂದಿಗೆ ಆಹ್ವಾನ ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ. ಅಯೋಧ್ಯೆಯ ಜನರು ಶಿಲನ್ಯಾಸ ಕಾರ್ಯಕ್ರಮ ವಿಕ್ಷೀಸಲು ಅಲ್ಲಲ್ಲಿ ಎಲ್‍ಇಡಿ ವ್ಯವಸ್ಥೆ ಮಾಡಿದ್ದು, ಲಾಕ್‍ಡೌನ್ ನಿಯಮಗಳೊಂದಿಗೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

    ಶಿಲನ್ಯಾಸದ ಬಳಿಕ ಅಯೋಧ್ಯೆಯ ಪ್ರತಿ ಮನೆಯಲ್ಲೂ ದೀಪ ಬೆಳಗಿಸುವ ಕಾರ್ಯಕ್ರಮಕ್ಕೆ ಚಿಂತಿಸಿದೆ. ರಾಮ ವನವಾಸ ಮುಗಿಸಿ ಬಂದಾಗ ದೀಪಾವಳಿ ಆಚರಿಸಿಲಾಗಿತ್ತು. ಸುದೀರ್ಘ ಕಾನೂನು ಹೋರಾಟ ಬಳಿಕ ಮಂದಿರ ನಿರ್ಮಾಣವಾಗುತ್ತಿದ್ದು ಐತಿಹಾಸಿಕವಾಗಿ ಆಚರಿಸಲು ಯೋಜನೆ ರೂಪಿಸಲಾಗುತ್ತಿದೆ.

  • 2005ರ ಅಯೋಧ್ಯೆ ಉಗ್ರರ ದಾಳಿ ಪ್ರಕರಣ: ನಾಲ್ವರಿಗೆ ಜೀವಾವಧಿ, ಓರ್ವ ಖುಲಾಸೆ

    2005ರ ಅಯೋಧ್ಯೆ ಉಗ್ರರ ದಾಳಿ ಪ್ರಕರಣ: ನಾಲ್ವರಿಗೆ ಜೀವಾವಧಿ, ಓರ್ವ ಖುಲಾಸೆ

    ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2005ರಂದು ನಡೆದ ಉಗ್ರರ ದಾಳಿ ಪ್ರಕರಣ ತೀರ್ಪು ಹೊರಬಂದಿದ್ದು, ನಾಲ್ವರು ಆರೋಪಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

    ಅಲಹಾಬಾದ್ ಜಿಲ್ಲೆಯ ಪ್ರಯಾಗ್‍ರಾಜ್ ವಿಶೇಷ ನ್ಯಾಯಾಲಯವು ಇಂದು ತೀರ್ಪು ನೀಡಿದೆ. ಈ ಮೂಲಕ ಹದಿನಾಲ್ಕು ವರ್ಷಗಳ ಬಳಿಕ ಆರೋಪಿಗಳು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಪ್ರಕರಣ ಐದು ಜನರ ಪೈಕಿ ಮೊಹಮ್ಮದ್ ಅಜೀಜ್ ವಿರುದ್ಧದ ಆರೋಪವನ್ನು ಖುಲಾಸೆಗೊಳಿಸಿ ಕೋರ್ಟ್ ತೀರ್ಪು ನೀಡಿದೆ.

    ಇರ್ಫಾನ್, ಆಶೀಖ್ ಇಕ್ಬಾಲ್ ಅಲಿಯಾಸ್ ಫಾರೂಕ್, ಶಕೀಲ್ ಅಹ್ಮದ್ ಹಾಗೂ ಮೊಹಮ್ಮದ್ ನಸೀಂ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ದಿನೇಶ್ ಚಂದ್ರ ಅವರು ಆರೋಪಿಗಳಿಗೆ ತಲಾ 2.40 ಲಕ್ಷ ರೂ. ದಂಡ ವಿಧಿಸಿದ್ದಾರೆ.

    ಏನಿದು ಪ್ರಕರಣ?:
    ಅಯೋಧ್ಯೆಯಲ್ಲಿ 2005, ಜುಲೈ 5 ರಂದು ಲಷ್ಕರ್ ಎ- ತೋಯ್ಬಾ ಉಗ್ರ ಸಂಘಟನೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಇಬ್ಬರು ಸಾರ್ವಜನಿಕರು ಸಾವನ್ನಪ್ಪಿದ್ದರು. ನಮ್ಮ ಭದ್ರತಾ ಪಡೆಯ ಸಿಬ್ಬಂದಿ ಐವರು ಉಗ್ರರರನ್ನು ಹೊಡೆದುರಳಿಸಿದ್ದರು. ಅಷ್ಟೇ ಅಲ್ಲದೆ 7 ಮಂದಿ ಸಿಆರ್‍ಪಿಎಫ್ ಯೋಧರು ಗಾಯಗೊಂಡಿದ್ದರು.

    ಉಗ್ರನ ಕೈನಲ್ಲಿ ಸಿಕ್ಕ ಮೊಬೈಲ್ ಆಧಾರದ ಮೇಲೆ 14 ವರ್ಷಗಳ ಹಿಂದೆಯೇ ಐವರನ್ನು ಪೊಲೀಸರು ಬಂಧಿಸಿದ್ದರು. ತೀರ್ಪಿನ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ಕುರಿತು ಜೂನ್ 11ರಂದು ವಿಚಾರಣೆ ಪೂರ್ಣಗೊಳಿಸಿದ್ದ ಪ್ರಯಾಗ್‍ರಾಜ್ ವಿಶೇಷ ನ್ಯಾಯಾಲಯವು ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು.