Tag: 200 ರೂ. ನೋಟು

  • ಎಟಿಎಂಗಳಲ್ಲಿ 200 ರೂ. ನೋಟ್‍ಗಳು ಸಿಗಲು ಇನ್ನೂ 3 ತಿಂಗಳಾಗ್ಬಹುದು

    ಎಟಿಎಂಗಳಲ್ಲಿ 200 ರೂ. ನೋಟ್‍ಗಳು ಸಿಗಲು ಇನ್ನೂ 3 ತಿಂಗಳಾಗ್ಬಹುದು

    ನವದೆಹಲಿ: ಆರ್‍ಬಿಐ 200 ರೂ. ನೋಟುಗಳನ್ನ ಈಗಾಗಲೇ ಬಿಡುಗಡೆ ಮಾಡಿದೆ. ಆದ್ರೆ ಈ ನೋಟುಗಳು ಎಟಿಎಂಗಳಲ್ಲಿ ಸಿಗಬೇಕಾದ್ರೆ ಇನ್ನೂ 3 ತಿಂಗಳು ಬೇಕು. ಯಾಕಂದ್ರೆ ಹೊಸ ನೋಟುಗಳನ್ನ ವಿತರಿಸಲು ಎಟಿಎಂಗಳ ಮರುಜೋಡಣೆ ಆಗಬೇಕು.

    ಹೊಸ 200 ರೂ. ನೋಟುಗಳ ಪೂರೈಕೆ ಇನ್ನೂ ಸಿಗದಿದ್ದರೂ ಕೆಲವು ಬ್ಯಾಂಕ್‍ಗಳು ಈಗಾಗಲೇ ಯಂತ್ರಗಳ ಮರುಜೋಡಣೆಗೆ ಹೊಸ ನೋಟುಗಳನ್ನ ಪರೀಕ್ಷಿಸಲು ಎಟಿಎಂ ಕಂಪೆನಿಗಳಿಗೆ ಕೇಳಿವೆ. ಕಳೆದ ವರ್ಷವಷ್ಟೇ ನೋಟ್‍ಬ್ಯಾನ್ ಆದಾಗ ಎಟಿಎಂ ಯಂತ್ರಗಳ ಮರುಜೋಡಣೆ ಮಾಡಲಾಗಿತ್ತು.

    ಹೊಸ 200 ರೂ. ನೋಟುಗಳು ಅಗತ್ಯ ಪ್ರಮಾಣದಲ್ಲಿ ಸಿಗುವಂತೆ ಪೂರೈಕೆಯನ್ನ ಹೆಚ್ಚಿಸಲಾಗುತ್ತದೆ ಎಂದು ಆರ್‍ಬಿಐ ಹೇಳಿಕೆ ನೀಡಿದೆ. ಆದ್ರೆ ಎಟಿಎಂ ಯಂತ್ರಗಳ ಮರುಜೋಡಣೆಗೆ ಆರ್‍ಬಿಐನಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಎಟಿಎಂ ಉತ್ಪಾದಕ ಕಂಪೆನಿಗಳು ಹೇಳಿವೆ. ಆದ್ರೆ 200 ರೂ. ನೋಟುಗಳ ಗಾತ್ರ ಭಿನ್ನವಾಗಿರುವುದರಿಂದ ಅವನ್ನ ಪರೀಕ್ಷಿಸಲು ಅನೌಪಚಾರಿಕವಾಗಿ ಕೆಲವು ಬ್ಯಾಂಕ್‍ಗಳು ಕೇಳಿವೆ ಎಂದು ಎಟಿಎಂ ಉತ್ಪಾದಕ ಕಂಪೆನಿಗಳು ಹೇಳಿವೆ. ಭಾರತದಾದ್ಯಂತ ಎಲ್ಲಾ 2.25 ಲಕ್ಷ ಎಟಿಎಂಗಳನ್ನೂ ಕೂಡ ಮರುಜೋಡಣೆ ಮಾಡಲಾಗುತ್ತದಾ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

    ಈ ಬಗ್ಗೆ ಹೇಳಿಕೆ ನೀಡಿರೋ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿಮಿಟೆಡ್‍ನ ಅಧ್ಯಕ್ಷರಾದ ರವಿ ಬಿ ಗೋಯಲ್, ಆರ್‍ಬಿಐನಿಂದ ಸೂಚನೆ ಬಂದ ಕೂಡಲೇ ನಾವು ಎಟಿಎಂಗಳ ಮರುಜೋಡಣೆ ಶುರುಮಾಡುತ್ತೇವೆ. ಈಗಿರುವ ನೋಟುಗಳಿಗಿಂತ ಹೊಸ ನೋಟಿನ ಗಾತ್ರ ಭಿನ್ನವಾಗಿದೆ. ಹೀಗಾಗಿ ಹೊಸ ನೋಟನ್ನು ಸ್ವೀಕರಿಸಿದ ನಂತರ ಅದರ ಅಳತೆಯನ್ನು ನೋಡಿ ಎಟಿಎಂ ಕ್ಯಾಸೆಟ್‍ಗಳನ್ನ ಮರುವಿನ್ಯಾಸ ಮಾಡಬೇಕು. ನಂತರ ಕ್ಯಾಸೆಟ್‍ಗಳು ಸಂಪೂರ್ಣ ಸಾಮಥ್ರ್ಯದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಪ್ರಮಾಣದಲ್ಲಿ ನೋಟಿನ ಪೂರೈಕೆ ಇದೆಯಾ ಎಂದು ನೋಡಬೇಕು ಎಂದು ಅವರು ಹೇಳಿದ್ದಾರೆ.

    ಎಟಿಎಂಗಳ ಮರುಜೋಡಣೆಯ ಸಂಪೂರ್ಣ ಪ್ರಕ್ರಿಯೆ 90 ದಿನಗಳಲ್ಲಿ ಮುಗಿಯುತ್ತದೆ. ಇದರಿಂದ ದಿನನಿತ್ಯದ ಎಟಿಎಂ ಕಾರ್ಯನಿರ್ವಹಣೆಗೆ ದೊಡ್ಡ ಮಟ್ಟದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಮರುಜೋಡಣೆಯ ವೇಳೆ ಎಟಿಎಂಗಳು ಸಂಪೂರ್ಣವಾಗಿ ಕಾರ್ಯಗತವಾಗಿದ್ದು, 100, 500 ಹಾಗೂ 2 ಸಾವಿರ ರೂ. ನೋಟುಗಳನ್ನ ಪೂರೈಕೆ ಮಾಡುತ್ತವೆ ಎಂದು ಅವರು ಹೇಳಿದ್ದಾರೆ.

    ಎಟಿಎಂ ಮರುಜೋಡಣೆ ಹೇಗೆ ಆಗುತ್ತದೆ?: ಸಾಮಾನ್ಯವಾಗಿ ಎಟಿಎಂಗಳಲ್ಲಿ 4 ಕ್ಯಾಸೆಟ್‍ಗಳಿರುತ್ತವೆ. ಇವುಗಳಲ್ಲಿ ಮೂರನ್ನು 100 ರೂ., 500 ರೂ., ಹಾಗೂ 2 ಸಾವಿರ ರೂ., ನೋಟುಗಳಿಗಾಗಿ ಬಳಸಲು ಮುಂದುವರೆಸಬಹುದು. ನಾಲ್ಕನೇ ಕ್ಯಾಸೆಟನ್ನು ಹೊಸ 200 ರೂ. ನೋಟಿಗಾಗಿ ಬಳಸಬಹುದು. ಸರಾಸರಿಯಲ್ಲಿ ಒಂದು ಕ್ಯಾಸೆಟ್ 2 ಸಾವಿರದಿಂದ 2500 ನೋಟುಗಳನ್ನ ಹಿಡಿದುಕೊಳ್ಳಬಹುದಾಗಿವೆ. ಆದರೂ ಬಹುತೇಕ ಎಟಿಎಂಗಳಲ್ಲಿ ಎರಡು ಅಥವಾ ಮೂರು ಕ್ಯಾಸೆಟ್‍ಗಳು ಮಾತ್ರ ಇರುತ್ತವೆ.

    ಬ್ಯಾಂಕುಗಳ ಆದ್ಯತೆಗೆ ಅನುಗುಣವಾಗಿ ಎಟಿಎಂಗಳಲ್ಲಿನ ಸ್ಲಾಟ್‍ಗಳನ್ನು ಮರುವಿನ್ಯಾಸಗೊಳಿಸಬಹುದು. ಎಟಿಎಂ ಯಂತ್ರವಿರುವ ಪ್ರದೇಶದಲ್ಲಿನ ಗ್ರಾಹಕರಿಗೆ ಅನುಗುಣವಾಗಿ ಹಾಗೂ ಆ ಯಂತ್ರದಲ್ಲಿ ನಡೆಯುವ ವಹಿವಾಟಿನ ಸಂಖ್ಯೆಗೆ ಅನುಗುಣವಾಗಿ ಯಾವ ಮುಖಬೆಲೆಯ ನೋಟಿಗೆ ಎಟಿಎಂ ಮರುವಿನ್ಯಾಸ ಮಾಡಬೇಕು ಎಂಬುದನ್ನ ಬ್ಯಾಂಕ್‍ಗಳು ನಿರ್ಧರಿಸಬೇಕು.

    ಹೊಸ ಮುಖಬೆಲೆಗಾಗಿ ಒಂದು ಎಟಿಎಂ ಮರುಜೋಡಣೆ ಮಾಡಲು 30 ರಿಂದ 45 ನಿಮಿಷ ಬೇಕಾಗುತ್ತದೆ. ಓರ್ವ ಎಂಜಿನಿಯರ್ ಪ್ರತಿ ಎಟಿಎಂಗೆ ಭೇಟಿ ನೀಡಿ ಅಗತ್ಯ ಮುಖಬೆಲೆಯ ನೋಟು ವಿತರಣೆಯಾಗುವದಂತೆ ಮರುವಿನ್ಯಾಸ ಮಾಡಬೇಕಾಗುತ್ತದೆ.

    ಪ್ರಸ್ತುತ 200 ರೂ. ನೋಟುಗಳು ಆಯ್ದ ಆರ್‍ಬಿಐ ಕಚೇರಿ ಹಾಗೂ ಕೆಲವು ಬ್ಯಾಂಕ್‍ಗಳಲ್ಲಿ ಮಾತ್ರ ಲಭ್ಯವಿದೆ.

  • ಹೊಸ 200 ರೂ. ನೋಟು ಇಂದಿನಿಂದ ಪೂರೈಕೆ

    ಹೊಸ 200 ರೂ. ನೋಟು ಇಂದಿನಿಂದ ಪೂರೈಕೆ

     

    ನವದೆಹಲಿ: ಸಾಕಷ್ಟು ದಿನಗಳಿಂದ 200 ರೂಪಾಯಿ ನೋಟು ಸುದ್ದಿಯಲ್ಲಿತ್ತು. ಗಣೇಶ ಹಬ್ಬದ ದಿನವಾದ ಇಂದು 200 ರುಪಾಯಿ ಮುಖಬೆಲೆಯ ಹೊಸ ನೋಟುಗಳು ಬ್ಯಾಂಕ್‍ಗಳಿಗೆ ಪೂರೈಕೆ ಆಗಲಿದೆ.
    ಆರಂಭದಲ್ಲಿ ಆಯ್ದ ಆರ್‍ಬಿಐ ಕಚೇರಿ ಹಾಗೂ ಕೆಲವು ಬ್ಯಾಂಕ್‍ಗಳಲ್ಲಿ ಮಾತ್ರ ಹೊಸ 200 ರೂ. ನೋಟು ವಿತರಣೆಯಾಗಲಿದೆ.

    ಇಂದಿನಿಂದ 3 ದಿನ ಸರ್ಕಾರಿ ರಜೆ ಇದ್ದು, ಸೋಮವಾರದಿಂದ ಹೊಸ ನೋಟು ಸಿಗಲಿದೆ. ಇದ್ರಿಂದ ಚಿಲ್ಲರೆ ಸಮಸ್ಯೆ ಬಗೆಹರಿಯಲಿದೆ ಅಂತ ಆರ್‍ಬಿಐ ಹೇಳಿದೆ.

    200ರ ನೋಟು ಕಡು ಹಳದಿ ಬಣ್ಣದಲ್ಲಿದೆ. ನೋಟಿನ ಹಿಂಭಾಗದಲ್ಲಿ ಸಾಂಚಿ ಸ್ತೂಪದ ಚಿತ್ರವಿದೆ. ದೇವನಾಗರಿಯಲ್ಲಿ 200 ರೂ. ನ ಮುದ್ರಣ, ಮಧ್ಯಭಾಗದಲ್ಲಿ ಮಹಾತ್ಮಾ ಗಾಂಧೀಜಿಯ ಚಿತ್ರವಿದೆ. ಮೈಕ್ರೋ ಲಿಪಿಯಲ್ಲಿ ಆರ್‍ಬಿಐ, ಭಾರತ್, ಇಂಡಿಯಾ ಹಾಗೂ 200 ಮುದ್ರಣವಿದೆ. ಬಣ್ಣ ಬದಲಾಗುವಂತಹ ಸೆಕ್ಯೂರಿಟಿ ಥ್ರೆಡ್ ಇದ್ದು ಅದರ ಮೇಲೆ ಭಾರತ್ ಹಾಗೂ ಆರ್‍ಬಿಐ ಮುದ್ರಣವಿದೆ. ನೋಟನ್ನ ಸ್ವಲ್ಪ ತಿರುಗಿಸಿ ನೋಡಿದ್ರೆ ಈ ಥ್ರೆಡ್‍ನ ಬಣ್ಣ ಹಸಿರಿನಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ.

     

    ನೋಟಿನ ಬಲಭಾಗದಲ್ಲಿ ಅಶೋಕ ಸ್ತಂಭ, 200 ರ ವಾಟರ್‍ಮಾರ್ಕ್ ಇದೆ. ನೋಟಿನ ಮೇಲ್ಭಾಗದ ಎಡಗಡೆ ಹಾಗೂ ಕೆಳಭಾಗದ ಬಲಗಡೆಯಲ್ಲಿ ನಂಬರ್ ಪ್ಯಾನಲ್ ಇದ್ದು, ನಂಬರ್‍ಗಳು ಸಣ್ಣದರಿಂದ ದೊಡ್ಡ ಗಾತ್ರಕ್ಕೆ ಮುದ್ರಣವಾಗಿರಲಿದೆ. ಅಂಧರಿಗೆ ಅನುಕೂಲವಾಗುವಂತೆ ಮಹಾತ್ಮಾ ಗಾಂಧಿ ಹಾಗೂ ಅಶೋಕ ಸ್ತಂಭದ ಉಬ್ಬಿದ ಮುದ್ರಣವಿದೆ. ‘ಹೆಚ್’ ಅಕ್ಷರದ ಉಬ್ಬಿದ ಗುರುತು ಇದೆ. ಎಡ ಹಾಗೂ ಬಲ ಭಾಗದಲ್ಲಿ ಆಂಗುಲರ್ ಬ್ಲೀಡ್ ಲೈನ್‍ಗಳಿದ್ದು, ಲೈನ್‍ಗಳ ಮಧ್ಯೆ ಎರಡು ವೃತ್ತಗಳಿವೆ. ನೋಟಿನ ಹಿಂಭಾಗದಲ್ಲಿ ಮುದ್ರಣದ ವರ್ಷ ಹಾಗೂ ಸ್ವಚ್ಛ ಭಾರತ ಲಾಂಛನವಿದೆ. ಅಲ್ಲದೆ ನೋಟಿನ ಬಣ್ಣಕ್ಕೆ ಹೊಂದಿಕೊಳ್ಳುವಂತೆ ಜಾಮಿಟ್ರಿಕ್ ಪ್ಯಾಟ್ರನ್ ಹಾಗೂ ಇತರೆ ಡಿಸೈನ್‍ಗಳಿವೆ. ನೋಟಿನ ಮೇಲೆ ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಇದೆ.

     

    ಶೀಘ್ರದಲ್ಲೇ ಹೊಸ ವಿನ್ಯಾಸದ 50 ರೂ. ನೋಟು ಕೂಡ ಬಿಡುಗಡೆಯಾಗಲಿದೆ. ಹೊಸ 50 ರೂ. ನೋಟಿನಲ್ಲಿ ವಿಶ್ವವಿಖ್ಯಾತ ಹಂಪಿಯ ಚಿತ್ರವಿರಲಿದೆ.