Tag: 20 Lakh crore Package

  • ಕಾಂಗ್ರೆಸ್ ವತಿಯಿಂದ ರಾಜ್ಯದಲ್ಲಿ ಕೋವಿಡ್ ಡೆತ್ ಆಡಿಟ್ ಅಭಿಯಾನ ಡಿಕೆಶಿ

    ಕಾಂಗ್ರೆಸ್ ವತಿಯಿಂದ ರಾಜ್ಯದಲ್ಲಿ ಕೋವಿಡ್ ಡೆತ್ ಆಡಿಟ್ ಅಭಿಯಾನ ಡಿಕೆಶಿ

    ಬೆಂಗಳೂರು: ಕೋವಿಡ್ ನಿಂದಾಗಿ ಸಾವು-ನೋವು ಉಂಡವರು, ಉದ್ಯೋಗ, ಆರೋಗ್ಯ ಕಳೆದುಕೊಂಡವರು, ಆರ್ಥಿಕವಾಗಿ ಸಂಕಷ್ಟಕ್ಕೀಡಾದ ರೈತರು, ಕಾರ್ಮಿಕರು, ವರ್ತಕರು, ಬಡವರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಆತ್ಮಸ್ಥೈರ್ಯ ತುಂಬಿ, ಅವರಿಗೆ ನೆರವಾಗಲು ಕಾಂಗ್ರೆಸ್ ಪಕ್ಷ 30 ದಿನಗಳ ಅಭಿಯಾನ ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

    ಕೋವಿಡ್ ಸಮಯದಲ್ಲಿ ಸರ್ಕಾರ ಏನು ಮಾಡಿತು ಎಂಬುದು ಬಹಳ ಮುಖ್ಯ. ದೇಶ ಹಾಗೂ ರಾಜ್ಯದಲ್ಲಿ ಸಂಕಷ್ಟಕ್ಕೀಡಾದವರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದು ಸರ್ಕಾರವನ್ನು ಕಾಂಗ್ರೆಸ್ ಆಗ್ರಹಿಸಿತ್ತು. 20 ಲಕ್ಷ ಕೋಟಿ ಪ್ಯಾಕೇಜ್ ನಿಂದ ಯಾರಿಗೆ ಅನುಕೂಲವಾಯಿತು ಎಂದು ಕೇಳಿದರೂ ಮಾಹಿತಿ ಕೊಡಲಿಲ್ಲ. ರಾಜ್ಯ ಸರ್ಕಾರದ ಪ್ಯಾಕೇಜ್ ಬಗ್ಗೆಯೂ ಯಾವುದೇ ಮಾಹಿತಿ ಸಿಗಲಿಲ್ಲ.

    ಕೋವಿಡ್ ನಿಂದ ಸತ್ತವರ ಆಡಿಟ್ ಮಾಡಿ ಎಂದು ಕೇಳಿದರೂ ಆ ಬಗ್ಗೆ ಸರ್ಕಾರ ಚಿಂತನೆ ಮಾಡಿಲ್ಲ. ಕೇವಲ ಸೀಮಿತ ಮಾನದಂಡಗಳನ್ನು ಇಟ್ಟುಕೊಂಡು, ಕೆಲವರಿಗೆ ಮಾತ್ರ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿತು. ಇನ್ನು ಕೇಂದ್ರ ಸರ್ಕಾರ 4 ಲಕ್ಷ ಪರಿಹಾರ ಕೊಡುವುದಾಗಿ ಘೋಷಿಸಿ, 8 ತಾಸುಗಳಲ್ಲಿ ಅದನ್ನು ಹಿಂಪಡೆದಿದೆ. ಆಕ್ಸಿಜನ್ ಕೊರತೆ, ಹಾಸಿಗೆ ಸಿಗದೆ, ಚಿಕಿತ್ಸೆ ಸಿಗದೇ ಸತ್ತವರ ಸಂಖ್ಯೆ ಸರ್ಕಾರ ಕೊಟ್ಟಿರುವ ಅಂಕಿ-ಅಂಶಕ್ಕಿಂತ ಐದು ಪಟ್ಟು ಹೆಚ್ಚಾಗಿದೆ. ಡೆತ್ ಆಡಿಟ್ ಮಾಡುವುದಾಗಿ ಸಿಎಂ ಹೇಳಿಕೆ ಕೊಟ್ಟರೂ, ಆ ಸಂಬಂಧ ಆದೇಶ ಹೊರಡಿಸಲಿಲ್ಲ.

    ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಯಾರು ಕೋವಿಡ್ ನಿಂದ ನೊಂದಿದ್ದಾರೆ, ಬೆಂದಿದ್ದಾರೆ, ಜೀವ, ಜೀವನ ಕಳೆದುಕೊಂಡಿದ್ದಾರೆ, ಅವರನ್ನು ತಲುಪಲು ಪಕ್ಷ ಅಭಿಯಾನ ಹಮ್ಮಿಕೊಂಡಿದೆ. ಅಖಿಲ ಭಾರತ ಕಾಂಗ್ರೆಸ್ ಪಕ್ಷ ರಾಷ್ಟ್ರ ವ್ಯಾಪ್ತಿಯಲ್ಲಿ ಒಂದು ತಿಂಗಳ ಕಾಲ ಅಭಿಯಾನ ಹಮ್ಮಿಕೊಂಡು, ನಮಗೂ ಮಾರ್ಗದರ್ಶನ ನೀಡಿದೆ.

    ನಮ್ಮ ಎಲ್ಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವಿಧಾನಸಭೆ ಚುನಾವಣೆಯಲ್ಲಿ ಗೆದ್ದವರು, ಸೋತವರ ಜತೆ ಈ ಮಾಹಿತಿ ಹಂಚಿಕೊಳ್ಳುತ್ತೇವೆ. ಕೋವಿಡ್ ನಿಂದ ಪ್ರಾಣ, ಉದ್ಯೋಗ ಕಳೆದುಕೊಂಡು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವವರ ಬಗ್ಗೆ ಮಾಹಿತಿ ಕಲೆಹಾಕಿ, ಅವರಿಗೆ ಮಾನಸಿಕವಾಗಿ ಶಕ್ತಿ ತುಂಬಲು ಈ ಕಾರ್ಯಕ್ರಮ ರೂಪಿಸಲಾಗಿದೆ.

    ಪಂಚಾಯಿತಿಯಿಂದ ಪಾರ್ಲಿಮೆಂಟ್ ಕ್ಷೇತ್ರದವರೆಗೂ, ಬ್ಲಾಕ್ ಮಟ್ಟದಿಂದ ಟೌನ್ ಗಳವರೆಗೆ ಕೋವಿಡ್ ವಾರಿಯರ್ ಗಳನ್ನು ನೇಮಕ ಮಾಡಿ, ಸ್ಥಳೀಯ ನಾಯಕರ ಮುಂದಾಳತ್ವದಲ್ಲಿ ತಂಡ ರಚಿಸಿ ಕನಿಷ್ಠ 200 ಕುಟುಂಬಗಳನ್ನು ಭೇಟಿ ಮಾಡಿ, ಅವರಿಗೆ ಸಾಂತ್ವನ ಹೇಳುವ ಗುರಿ ಹೊಂದಲಾಗಿದೆ. ಕೋವಿಡ್ ನಿಂದ ಆ ಕುಟುಂಬ ಏನೆಲ್ಲಾ ಸಂಕಷ್ಟ ಅನುಭವಿಸಿದೆ, ನಾವು ಅವರಿಗೆ ಹೇಗೆ ನೆರವಾಗಬಹುದು, ಸರ್ಕಾರದ ಮೇಲೆ ಒತ್ತಡ ಹಾಕಿ ಏನೆಲ್ಲ ನೆರವು ಕೊಡಿಸಬಹುದು ಎಂಬ ಮಾಹಿತಿ ಪಡೆಯಲಾಗುವುದು.

    ತಮ್ಮ ಮನೆಯಲ್ಲಿ ಯಾರಾದರೂ ಸೋಂಕಿತರಾಗಿದ್ದಾರಾ? ಸೋಂಕಿನಿಂದ ಸತ್ತಿದ್ದಾರಾ? ಸತ್ತಿದ್ದರೆ ಅವರ ಹೆಸರು ಹಾಗೂ ವಯಸ್ಸು ಏನು? ಮೃತಪಟ್ಟವರು ಮನೆಯಲ್ಲಿ ದುಡಿಯುವ ವ್ಯಕ್ತಿಯಾಗಿದ್ದರಾ? ಕುಟುಂಬದಲ್ಲಿ ಕೋವಿಡ್/ ಲಾಕ್ ಡೌನ್ ನಿಂದ ಯಾರಾದರೂ ಉದ್ಯೋಗ ಕಳೆದುಕೊಂಡಿದ್ದಾರಾ? ಉದ್ಯೋಗ ಕಳೆದುಕೊಂಡಿದ್ದರೆ ಅವರ ಹೆಸರು ಹಾಗೂ ವಯಸ್ಸು? ಆ ಕುಟುಂಬಕ್ಕೆ ಅಗತ್ಯವಾಗಿರುವ ನೆರವು (ದಿನಸಿ, ಉದ್ಯೋಗ, ಶಿಕ್ಷಣ, ಆರ್ಥಿಕ ನೆರವು) ಏನು? ಎಂಬ ಮಾಹಿತಿ ಕಲೆಹಾಕಿ ಅದನ್ನು ಕೆಪಿಸಿಸಿಗೆ ಕಳುಹಿಸಿಕೊಡಬೇಕು. ನಂತರ ಅದನ್ನು ಎಐಸಿಸಿಗೆ ರವಾನಿಸಲಾಗುವುದು.

    ಸರ್ಕಾರದ ಪರಿಹಾರ ಪಡೆಯಲು ನೋಂದಣಿ ಮಾಡಿಸಿಕೊಳ್ಳುವ ದಿನಾಂಕವನ್ನು ಸರ್ಕಾರ 30ನೇ ತಾರೀಖಿನವರೆಗೆ ವಿಸ್ತರಿಸಿದ್ದು, ಹೀಗಾಗಿ ನಮ್ಮ ಕಾರ್ಯಕರ್ತರು ಎಲ್ಲ ವರ್ಗದವರ ಮಾಹಿತಿ ಪಡೆದು, ಅವರು ಪರಿಹಾರ ಪಡೆಯಲು ನೋಂದಣಿ ಮಾಡಿಸಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ.

    ಜುಲೈ 1 ರಿಂದ 30 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ನಮ್ಮ ನಾಯಕರು, ಪದಾಧಿಕಾರಿಗಳು ಪ್ರತಿ ಬ್ಲಾಕ್ ನಲ್ಲಿ ಕನಿಷ್ಠ 10 ಜನರ ತಂಡ ರಚಿಸಿ, ಜನರ ಧ್ವನಿಯಾಗಿ ಅವರ ಬೆನ್ನಿಗೆ ನಿಲ್ಲಬೇಕು. ಭವಿಷ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅನ್ಯಾಯವಾಗಿರುವ ಎಲ್ಲರಿಗೂ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗುತ್ತದೆ. ಆದರೆ ಈಗ ಸದ್ಯದ ಮಟ್ಟಿಗೆ ಅವರಿಗೆ ನಮ್ಮ ಕೈಲಾದ ನೆರವು ನೀಡುತ್ತೇವೆ.

    1.20 ಲಕ್ಷ ಮರಣ ಪ್ರಮಾಣ ಪತ್ರ:
    ಕೋವಿಡ್ ನಿಂದ ಸತ್ತವರ ಸಂಖ್ಯೆ 30 ಸಾವಿರ ಎಂದು ಸರ್ಕಾರ ಹೇಳುತ್ತಿದೆ. ಆದರೆ ರಾಜ್ಯದಲ್ಲಿ 1.20 ಲಕ್ಷ ಮರಣ ಪ್ರಮಾಣ ಪತ್ರ ವಿತರಿಸಲಾಗಿದೆ. ಮರಣ ಪ್ರಮಾಣಪತ್ರದಲ್ಲಿ ಸಾವಿನ ಕಾರಣ ಹೇಳುವುದಿಲ್ಲ. ಹೀಗಾಗಿ ಅವರಿಗೆ ಪರಿಹಾರ ಸಿಗುವುದಿಲ್ಲ. ಹಾಗಾಗಿ ಜನರಲ್ಲಿ ತಿಳುವಳಿಕೆ ಮೂಡಿಸಿ, ಕೋವಿಡ್ ನಿಂದ ಸತ್ತಿರುವ ಎಲ್ಲರಿಗೂ ಪ್ರಮಾಣಪತ್ರ ಕೊಡಿಸಿ, ಪರಿಹಾರ ಕೊಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತದೆ. ಕೋವಿಡ್ ನಿಂದ ಸತ್ತರೆ ಬೇರೆ ಕಾರಣದ ಸಾವು ಎಂದು ಘೋಷಣೆ ಮಾಡಿರುವ ಉದಾಹರಣೆಗಳು ಇವೆ. ಹೀಗಾಗಿ ಕೋವಿಡ್ ನಿಂದ ಸತ್ತವರ ಕುಟುಂಬಕ್ಕೆ ಸಹಾಯ ಹಸ್ತ ನೀಡಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಸರ್ಕಾರ ಸಮೀಕ್ಷೆ ನಡೆಸಿ, ಪರಿಹಾರ ನೀಡಲು ಹಿಂದೇಟು ಹಾಕಿದೆ. ಹೀಗಾಗಿ ಕಾಂಗ್ರೆಸ್ ಕೋವಿಡ್ ವಾರಿಯರ್ಸ್ ಮನೆ, ಮನೆಗೂ ಹೋಗಿ ಅವರಿಗೆ ನೆರವಾಗಲಿದೆ.

    ನಮ್ಮ ಹೋರಾಟ, ಬಿಜೆಪಿಯವರ ಪ್ರಚಾರ:
    ರಾಜ್ಯದ ಜನರಿಗೆ ಉಚಿತ ಲಸಿಕೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಹೋರಾಟ ಮಾಡಿತು. ನಾವು ಶಾಸಕರ ನಿಧಿಯಿಂದ 100 ಕೋಟಿ ಬಳಸಿಕೊಂಡು ಉಚಿತ ಲಸಿಕೆ ನೀಡುತ್ತೇವೆ ಎಂದು ಹೇಳಿದೆವು. ಆದರೆ ಅನುಮತಿ ನೀಡಲಿಲ್ಲ. ರಾಜ್ಯಪಾಲರನ್ನು ಭೇಟಿಯಾಗಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಪತ್ರ ಬರೆದೆವು. ನಂತರ ನ್ಯಾಯಾಲಯಗಳು ಮಧ್ಯಪ್ರವೇಶಿಸಿ ಲಸಿಕೆ ನೀಡುವಂತೆ ಚಾಟಿ ಬೀಸಿದವು. ಆದರೆ ಒಂದೇ ಒಂದು ದಿನ ರಾಜ್ಯ ಸರ್ಕಾರವಾಗಲಿ, ಸಂಸದರಾಗಲಿ ರಾಜ್ಯದ ಜನರಿಗೆ ಉಚಿತ ಲಸಿಕೆ ನೀಡುವಂತೆ ಧ್ವನಿ ಎತ್ತಲಿಲ್ಲ. ಆದರೆ ಈಗ ಪತ್ರಿಕೆಗಳ ಮುಖಪುಟಗಳಲ್ಲಿ ಜಾಹೀರಾತು ಹಾಕಿಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ.

  • 20 ಲಕ್ಷ ಕೋಟಿ ಕೊರೊನಾ ಪ್ಯಾಕೇಜ್ ‘ಕನ್ನಡಿಯೊಳಗಿನ ಗಂಟು’: ಸಿದ್ದರಾಮಯ್ಯ

    20 ಲಕ್ಷ ಕೋಟಿ ಕೊರೊನಾ ಪ್ಯಾಕೇಜ್ ‘ಕನ್ನಡಿಯೊಳಗಿನ ಗಂಟು’: ಸಿದ್ದರಾಮಯ್ಯ

    -ಹಳೆ ಸರಕಿಗೆ ಹೊಸ ಹೊದಿಕೆ
    -ಪ್ಯಾಕೇಜ್ ‘ಬೆತ್ತಲೆ ಮನುಷ್ಯನ ಮುಂದೆ ಅರಸನ ಬಟ್ಟೆಗಳ ಮೆರವಣಿಗೆ’

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರಭಾರತ ಯೋಜನೆಯಡಿಯಲ್ಲಿ ಘೋಷಿಸಿರುವ ಕೊರೊನಾ ವಿಶೇಷ ಪ್ಯಾಕೇಜ್ ಕನ್ನಡಿಯೊಳಗಿನ ಗಂಟು ಆಗಿದ್ದು, ಹಳೆ ಸರಕಿಗೆ ಹೊಸ ಹೊದಿಕೆ ಹೊದಿಸಿದಂತಾಗಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    20 ಲಕ್ಷ ಕೋಟಿ ರೂ. ಪ್ಯಾಕೇಜ್ ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಐದು ಕಂತುಗಳಾಗಿ ಹಂಚಿದರು. ಈ ಕುರಿತು ಸಹ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು ತಮ್ಮದೇ ಲೆಕ್ಕಾಚಾರವನ್ನು ಜನರ ಮುಂದಿಟ್ಟಿದ್ದಾರೆ. 20 ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ಕುರಿತು ಸಾಲು ಸಾಲು ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಸಿದ್ದರಾಮಯ್ಯನವರ ಟ್ವೀಟ್:
    ಬಹುಪ್ರಚಾರದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ ರೂ.20 ಲಕ್ಷ ಕೋಟಿ ಕೊರೊನಾ ಪ್ಯಾಕೇಜ್ ‘ಕನ್ನಡಿಯೊಳಗಿನ ಗಂಟು’ ಅಷ್ಟೆ. ಟಿವಿ ಪರದೆಯಲ್ಲಿ, ಪತ್ರಿಕೆಯ ಪುಟದಲ್ಲಿ ಕಾಣುತ್ತಿದೆ, ಜನರ ಕೈಗೆ ಸಿಗುತ್ತಿಲ್ಲ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 5 ಕಂತುಗಳಲ್ಲಿ ಬಿಚ್ಚಿಟ್ಟ ಪ್ಯಾಕೇಜ್ ಅಂಕಿ ಅಂಶಗಳ ಕಸರತ್ತು. ಹಳೆಯ ಸರಕಿಗೆ ಹೊಸ ಹೊದಿಕೆ.

    ಕೊರೊನಾ ಹಾವಳಿಯಿಂದ ದೇಶ ಅತ್ಯಂತ ದೊಡ್ಡ ಮಾನವೀಯತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಲಕ್ಷಾಂತರ ವಲಸೆ ಕಾರ್ಮಿಕರು, ಮಹಿಳೆಯರು, ಮಕ್ಕಳು ಊರು ಸೇರಲು ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಈ ಜನರ ಪ್ರಸ್ತಾವವೇ ಇಲ್ಲದ ಪ್ಯಾಕೇಜ್ ‘ಬೆತ್ತಲೆ ಮನುಷ್ಯನ ಮುಂದೆ ಅರಸನ ಬಟ್ಟೆಗಳ ಮೆರವಣಿಗೆ’ ಅಷ್ಟೆ. ಜನರ ಜೇಬಿಗೆ ದುಡ್ಡು ಹಾಕಿ ಎಂದು ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರು, ಪ್ರಖ್ಯಾತ ಆರ್ಥಿಕ ತಜ್ಞರು ಹೇಳುತ್ತಿದ್ದರೆ, ಪ್ರಧಾನಿಗಳು ಅವರು ಖಾಲಿಯಾಗಿರುವ ಸರ್ಕಾರದ ಜೇಬು ತುಂಬಲು ಹೊರಟಿದ್ದಾರೆ.

    ಸರ್ಕಾರ ದಿವಾಳಿ ಆಗಿದೆಯೇ?: ಇದರಿಂದ ಬಡವರಿಗೆ,ಹಸಿದ ಹೊಟ್ಟೆಗಳಿಗೆ, ಕಾರ್ಮಿಕರಿಗೆ, ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಸಿಕ್ಕಿದೆಷ್ಟು? ದೇಶದಲ್ಲಿ ಗುರುತಿಸಲಾದ 13 ಕೋಟಿ ಬಡವರಿಗೆ ಮಾಸಿಕ ರೂ.5000 ನೀಡಿದರೆ ಆಗುವ ವೆಚ್ಚ ರೂ.65,000 ಕೋಟಿ. ರೂ.7000 ನೀಡಿದರೆ ಆಗುವ ವೆಚ್ಚ 97,500 ಕೋಟಿ. ಇಷ್ಟು ಕೊಟ್ಟು ಪುಣ್ಯ ಕಟ್ಕೊಳ್ಳಿ ಎಂದು ನಮ್ಮ ಪಕ್ಷ ಹೇಳುತ್ತಲೇ ಇದೆ. ಇಷ್ಟನ್ನೂ ನೀಡಲು ಸಾಧ್ಯ ಇಲ್ಲದಷ್ಟು ಸರ್ಕಾರ ದಿವಾಳಿ ಆಗಿದೆಯೇ? ನರೇಗಾ ಯೋಜನೆಯ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಿ ಮತ್ತು ಈ ಯೋಜನೆಯನ್ನು ನಗರಪ್ರದೇಶದ ಬಡವರಿಗೂ ವಿಸ್ತರಿಸಿ ಎಂದು ಪ್ರಾರಂಭದಿಂದಲೇ ನಮ್ಮ ಪಕ್ಷ ಹೇಳುತ್ತಲೇ ಬಂದಿದೆ. ಲಕ್ಷ ಕೋಟಿಗಳ ಪ್ಯಾಕೇಜ್ ನಲ್ಲಿ ಇದರ ಪ್ರಸ್ತಾವವೇ ಇಲ್ಲ.

    ಮುಂಗಾರು ಬೆಳೆಯ ಸಿದ್ಧತೆಯಲ್ಲಿರುವ ರೈತರು ಈಗಾಗಲೇ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ದಿವಾಳಿಯಾಗಿದ್ದಾರೆ. ಅವರ ಹಳೆ ಸಾಲ ಮನ್ನಾ ಮಾಡಿ, ರಸಗೊಬ್ಬರ, ಕ್ರಿಮಿನಾಶಕ ಮತ್ತು ಕೃಷಿ ಸಲಕರಣೆಗಳ ಮೇಲಿನ ಜಿಎಸ್ ಟಿ ರದ್ದುಪಡಿಸಿ ಎಂಬ ಬೇಡಿಕೆ ಬಗ್ಗೆ ನರೇಂದ್ರ ಮೋದಿಯವರು ಮೌನವಾಗಿದ್ದಾರೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಮೇಲ್ನೋಟಕ್ಕೆ ಬಂಪರ್ ಕೊಡುಗೆ ಎಂದು ಅನಿಸಿದರೂ ಒಳಗಿನ ಗುಟ್ಟು ಬೇರೆ ಇದೆ. ದೇಶದಲ್ಲಿರುವ 6.2 ಲಕ್ಷ ಕೋಟಿ ಕಿರು ಉದ್ದಿಮೆಗಳಲ್ಲಿ 45 ಲಕ್ಷ ದೊಡ್ಡ ಗಾತ್ರದ ಕಿರು ಉದ್ದಿಮೆಗಳಿಗೆ ಮಾತ್ರ ಈ ನೆರವು ಲಭ್ಯ. ಉಳಿದವರ ಗತಿ ಏನು?

    ದುಡ್ಡು ಮಾಡುವ ಯೋಚನೆ: ಸಣ್ಣ ಕೈಗಾರಿಕೆಗಳಿಗೆ ಸಾಲ, ಸಾಲಕ್ಕೆ ಖಾತರಿ ನೀಡಿಕೆಯ ಬಗ್ಗೆ ಪ್ಯಾಕೇಜ್ ಹೇಳಿದೆ. ಉತ್ಪಾದನೆ ಇಲ್ಲದೆ ಖಾಲಿ ಬಿದ್ದಿರುವ ಕೈಗಾರಿಕೆಗಳಿಗೆ ಸಾಲಮಾಡುವ ಶಕ್ತಿ ಎಲ್ಲಿದೆ? ಕಾರ್ಮಿಕರ ಸಂಬಳ ನೀಡಿಕೆಗೆ ನೆರವು, ಹಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮೊದಲಾದ ನೆರವಿನಿಂದ ಮಾತ್ರ ಸಣ್ಣ ಕೈಗಾರಿಕೆಗಳ ರಕ್ಷಣೆ ಸಾಧ್ಯ. ದೇಶದಲ್ಲಿ ಜನ ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ಹೋಗಲು ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಆಕಾಶದಲ್ಲಿ ವಿಮಾನ ಸಂಚಾರ ವ್ಯವಸ್ಥೆಯನ್ನು ಸುಲಭ ಮಾಡಿ ದುಡ್ಡು ಮಾಡುವ ಯೋಚನೆಯಲ್ಲಿದೆ. ಇದು ಹಸಿದ ಹೊಟ್ಟೆಗಳ ಅಪಹಾಸ್ಯವಲ್ಲದೆ ಇನ್ನೇನು?

    ದೇಶಪ್ರೇಮದ ವಾರಸುದಾರರು ತಾವೆಂದು ಸಾರಿಸಾರಿ ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಈಗ ರಕ್ಷಣಾ ಇಲಾಖೆಯ ಎಫ್‍ಡಿಐ ಮಿತಿಯನ್ನು ಶೇ.74ಕ್ಕೆ ಹೆಚ್ಚಿಸುವ ಮೂಲಕ ದೇಶದ ಭದ್ರತೆಯ ಜೊತೆ ರಾಜಿ ಮಾಡಲು ಹೊರಟಿದ್ದಾರೆ. ಇದೇನಾ ದೇಶ ಪ್ರೇಮ?

  • ಒನ್ ನೇಷನ್, ಒನ್ ರೇಷನ್ ಕಾರ್ಡ್ – ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ಸಾಲ

    ಒನ್ ನೇಷನ್, ಒನ್ ರೇಷನ್ ಕಾರ್ಡ್ – ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ಸಾಲ

    – ಗೃಹಸಾಲದಲ್ಲಿ ಸಬ್ಸಿಡಿ ಸಹಾಯಧನ

    ನವದೆಹಲಿ: ಮುಂದಿನ ಎರಡು ತಿಂಗಳೂ 8 ಕೋಟಿ ವಲಸೆ ಕಾರ್ಮಿಕರಿಗೆ ಉಚಿತ ಪಡಿತರ ವಿತರಣೆ, ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ಸಾಲ, ರೈತರಿಗೆ ಸಾಲದ ಬಡ್ಡಿಯಿಂದ ವಿನಾಯಿತಿ – ಇದು ಕೇಂದ್ರ ಸರ್ಕಾರ ಇಂದು ಪ್ರಕಟಿಸಿದ ಪ್ಯಾಕೇಜ್ ಗಳ ಮುಖ್ಯಾಂಶಗಳು.

    ಕೈಗಾರಿಕೆ, ಉದ್ಯಮ, ರಿಯಲ್ ಎಸ್ಟೇಟ್, ಕಾರ್ಮಿಕರಿಗೆ ಪ್ಯಾಕೇಜ್ ಪ್ರಕಟಿಸಿದರೆ ಇಂದು ಬಡವರು, ಕೃಷಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಪ್ಯಾಕೇಜ್ ಪ್ರಕಟ ಮಾಡಿದೆ.

    ಇಂದು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಲಸೆ ಕಾರ್ಮಿಕರು, ರೈತರಿಗೆ ಚೈತನ್ಯ ತುಂಬುವ ಕೆಲಸವನ್ನು ಮಾಡಿದರು. ಒನ್ ನೇಷನ್, ಒನ್ ರೇಷನ್ ಕಾರ್ಡ್ ಮಹತ್ವದ ಘೋಷಣೆಯನ್ನು ಜಾರಿಗೊಳಿಸಿದರು.

    ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು:
    * ಸರ್ಕಾರ ಲಾಕ್‍ಡೌನ್ ನಡುವೆಯೂ ನಿರಂತರವಾಗಿ ಕೆಲಸ ಮಾಡುತ್ತಿದೆ. 25 ಸಾವಿರ ಕೋಟಿಯ 25 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಾಗುವುದು. ಇದು 3 ಕೋಟಿ ರೈತರಿಗೆ ಲಾಭವಾಗಲಿದೆ. * 3 ಕೋಟಿ ರೈತರಿಗೆ ಸಾಲದ ಬಡ್ಡಿಯಿಂದ ಪಾವತಿಯಿಂದ ವಿನಾಯ್ತಿ.

    * ಬೀದಿ ಬದಿ ವ್ಯಾಪಾರಿ, ಮನೆಯಲ್ಲಿ ಕೆಲಸ ಮಾಡೋರಿಗೆ 10 ಸಾವಿರದವರೆಗೆ ಸಾಲ ಯೋಜನೆ. ಒಂದು ತಿಂಗಳಲ್ಲಿ ಈ ಯೋಜನೆಯನ್ನು ಸರ್ಕಾರ ಜಾರಿಗೆ ತರಲಾಗುವುದು. ಸಾಲ ಪಡೆದ ವ್ಯಾಪಾರಸ್ಥರು ಡಿಜಿಟಲ್ ಮೂಲಕ ವ್ಯವಹರಿಸಿದ್ರೆ ಹೆಚ್ಚು ಲಾಭ ಸಿಗಲಿದೆ. ಇದಕ್ಕಾಗಿ 5 ಸಾವಿರ ಕೋಟಿ ರೂ. ಮೀಸಲು. ಈ ಯೋಜನೆಯಿಂದ 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಲಾಭ ಸಿಗಲಿದೆ.

    * ಮುಂದಿನ ಎರಡು ತಿಂಗಳೂ 8 ಕೋಟಿ ವಲಸೆ ಕಾರ್ಮಿಕರಿಗೆ 3500 ಕೋಟಿ ರೂ. ಅನುದಾನದಲ್ಲಿ ಉಚಿತ ಪಡಿತರ ವಿತರಣೆ. ಪ್ರತಿ ವ್ಯಕ್ತಿಗೆ ಅಕ್ಕಿ ಅಥವಾ ಗೋಧಿ 5 ಕೆ.ಜಿ ಹಾಗೂ ಕುಟುಂಬಕ್ಕೆ 1 ಕೆ.ಜಿ. ಕಾಳು ರಾಜ್ಯ ಸರ್ಕಾರಗಳಿಂದ ನೀಡಲಾಗುವುದು. ರೇಷನ್ ಕಾರ್ಡ್ ಇಲ್ಲದಿದ್ದರೂ ಪಡಿತರ ವಿತರಣೆ.
    * ನ್ಯಾಷನಲ್ ಪೋರ್ಟಬಿಟಲಿ (ಒನ್ ನೇಷನ್, ಒನ್ ರೇಷನ್ ಕಾರ್ಡ್) ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಯಾವುದೇ ರಾಜ್ಯದ ರೇಷನ್ ಕಾರ್ಡ್ ಇದ್ರೂ ಅದನ್ನ ನೀವು ಇರುವ ಸ್ಥಳದಲ್ಲಿ ಬಳಸಬಹುದು.

    * ಕೊರೊನಾ ಸಮಯದಲ್ಲಿ ಕೃಷಿ ಕ್ಷೇತ್ರಕ್ಕೆ 63 ಲಕ್ಷ ಸಾಲವನ್ನು ಮಂಜೂರು ಮಾಡಲಾಗಿದೆ. ಈ ಸಾಲದ ಒಟ್ಟು ಮೊತ್ತ 86,600 ಕೋಟಿ ರೂಪಾಯಿ ಇದೆ.
    * ನಗರ ಪ್ರದೇಶದಲ್ಲಿ ವಾಸವಾಗಿರುವ ಬಡವರಿಗೆ ಎಸ್‍ಡಿಆರ್‍ಎಫ್ ಮೂಲಕ 11 ಸಾವಿರ ಕೋಟಿ ಮಂಜೂರು ಮಾಡಲಾಗುವುದು. ನಿರಾಶ್ರಿತರರಿಗೆ ಸರ್ಕಾರದಿಂದ ದಿನಕ್ಕೆ ಮೂರು ಬಾರಿ ಊಟದ ವ್ಯವಸ್ಥೆ ಕಲ್ಪಿಸೋದರ ಜೊತೆಗೆ ಹಣದ ವ್ಯವಸ್ಥೆಯನ್ನು ಮಾಡಲಾಗುವುದು. 12 ಸಾವಿರ ಸ್ವಸಹಾಯ ಸಂಘಗಳಿಂದ 3 ಕೋಟಿ ಮಾಸ್ಕ್ ಮತ್ತು 1.20 ಲಕ್ಷ ಲೀಟರ್ ಸ್ಯಾನಿಟೈಸರ್ ಉತ್ಪಾದಿಸಲಾಗುವುದು, ಇದು ಪರೋಕ್ಷವಾಗಿ ನಗರ ಪ್ರದೇಶದಲ್ಲಿ ಉದ್ಯೋಗದ ದಿನಗಳನ್ನು ಹೆಚ್ಚಿಸುತ್ತದೆ.

    * ದೇಶಾದ್ಯಂತ ಪೈಸಾ ಪೋರ್ಟಲ್ ಜಾರಿ. ಹೊಸದಾಗಿ 7,200 ಸ್ವಸಹಾಯ ಸಂಘಗಳು ಕಾರ್ಯ ಆರಂಭಗೊಂಡಿವೆ.
    * ಗ್ರಾಮೀಣ ಬ್ಯಾಂಕುಗಳಿಗೆ ನಬಾರ್ಡ್ ನಿಂದ 29,500 ಕೋಟಿ ಸಹಾಯ.
    * ವಲಸೆ ಕಾರ್ಮಿಕರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಇದರ ನೇರ ಲಾಭ ತಲುಪಿಸುವ ಗುರಿ ಇದೆ.

    * ನಗರಗಳಿಂದ ಗ್ರಾಮಗಳಿಗೆ ತೆರಳಿರೋ ವಲಸೆ ಕಾರ್ಮಿಕರಿಗೆ ಪಂಚಾಯ್ತಿ ಮೂಲಕ ನರೇಗಾ ಯೋಜನೆ ಅಡಿ ಉದ್ಯೋಗ ಸೃಷ್ಟಿಸಲಾಗುವುದು. ಕನಿಷ್ಠ ವೇತನವನ್ನು 182ರಿಂದ 202 ರೂ.ಗಳಿಗೆ ಹೆಚ್ಚಿಸಲಾಗುತ್ತದೆ. ಪ್ರತಿಯೊಬ್ಬ ದಿನಗೂಲಿ ಕಾರ್ಮಿಕರ ಆರೋಗ್ಯ ತಪಾಸಣೆಗೆ ಪ್ರಾಮುಖ್ಯತೆ ನೀಡಲಾಗುವುದು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗಾಗಿ ಹೊಸ ಮಾರ್ಗದರ್ಶಿ ಪ್ರಕಟ

    * ಗ್ರಾಮ ಮತ್ತು ನಗರ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ವಲಸೆ ಕಾರ್ಮಿಕರಿಗೆ ಬಾಡಿಗೆ ಮನೆ. ಈ ಕುರಿತು ಸಂಬಂಧಿಸಿದ ಇಲಾಖೆಯಿಂದ ಶೀಘ್ರದಲ್ಲಿ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ. ನಗರದ ಬಡವರಿಗೆ ಬಾಡಿಗೆ ಮನೆಗಳನ್ನು ಸಂಕೀರ್ಣಗಳಾಗಿ ಮಾಡುವ ಪ್ಲಾನ್
    * ಅತಿ ಸಣ್ಣ ಸಾಲದಾರರಿಗೆ ಮುದ್ರಾ ಶಿಶು ಯೋಜನೆಯಡಿಯ ಸಾಲ. ಮುದ್ರಾ ಯೋಜನೆಗಾಗಿ 15 ಸಾವಿರ ಕೋಟಿ. 12 ತಿಂಗಳು ಮುದ್ರಾ ಯೋಜನೆಯಡಿ (ಶಿಶು ಲೋನ್) ಶೇ.2ರಷ್ಟು ಬಡ್ಡಿ ವಿನಾಯ್ತಿ. ಈ ಯೋಜನೆಯಿಂದ ಸುಮಾರು 3 ಕೋಟಿ ಜನರಿಗೆ ಲಾಭ ಸಿಗಲಿದೆ.

    * ಮಧ್ಯಮ ವರ್ಗಕ್ಕೆ ಗೃಹ ಸಾಲದಲ್ಲಿ ಸಬ್ಸಿಡಿ. ಈ ಸಬ್ಸಿಡಿಯ ಅವಧಿಯನ್ನು ಮಾರ್ಚ್ 2021ರವರೆಗೆ ವಿಸ್ತರಿಸಲಾಗುವುದು. 6 ರಿಂದ 18 ಲಕ್ಷ ಆದಾಯವುಳ್ಳ ಮಧ್ಯಮ ವರ್ಗಕ್ಕೆ ಸಬ್ಸಿಡಿ ಸಿಗಲಿದೆ.

    * ಉದ್ಯೋಗ ಸೃಷ್ಟಿಗಾಗಿ 6 ಸಾವಿರ ಕೋಟಿ ಅನುದಾನ. ಬುಡಕಟ್ಟು ಮತ್ತು ಆದಿವಾಸಿಗಳಿಗೆ ತೋಟಗಾರಿಕೆ ಮತ್ತು ಅರಣ್ಯೀಕರಣದಲ್ಲಿ ಉದ್ಯೋಗ ಸೃಷ್ಟಿ.
    * ನಬಾರ್ಡ್ ಮೂಲಕ ರೈತರಿಗೆ 30 ಸಾವಿರ ಕೋಟಿ ತುರ್ತು ಹಣಕಾಸು ನೆರವು. ಮೀನುಗಾರಿಗೆ ಮತ್ತು ಹೈನುಗಾರಿಕೆ ಸೇರಿದಂತೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ 2.5 ಲಕ್ಷ ಕೋಟಿ ಸಾಲ ವಿತರಣೆ.