Tag: 2 ಸಾವಿರ ನೋಟು

  • ಎಟಿಎಂಗಳಲ್ಲಿ ಸಿಗ್ತಿಲ್ಲ 2 ಸಾವಿರ ರೂ. ನೋಟು- ಮೂರ್ನಾಲ್ಕು ತಿಂಗಳಿಂದ ಪಿಂಕ್ ನೋಟ್ ಮಾಯ

    ಎಟಿಎಂಗಳಲ್ಲಿ ಸಿಗ್ತಿಲ್ಲ 2 ಸಾವಿರ ರೂ. ನೋಟು- ಮೂರ್ನಾಲ್ಕು ತಿಂಗಳಿಂದ ಪಿಂಕ್ ನೋಟ್ ಮಾಯ

    ಬೆಂಗಳೂರು: ಇಷ್ಟು ದಿನ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬ್ಯಾನ್ ಆಗುತ್ತೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಈಗ ಅದಕ್ಕೆ ಪುಷ್ಠಿ ಎಂಬಂತೆ ಮಾರ್ಚ್ 1ರಿಂದ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಸಿಗಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂಬುದು ಜನರ ಮಾತಾಗಿದ್ದು, ಸಿಲಿಕಾನ್ ಸಿಟಿಯ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟ್ ಸಿಗುತ್ತಾ ಇದೆಯಾ? ಇಲ್ವ? ಎಂದು ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ಆತಂಕಕಾರಿ ವಿಚಾರ ಬಯಲಾಗಿದೆ.

    ಇಂಡಿಯನ್ ಬ್ಯಾಂಕ್ ಹೇಳಿದ್ದೇನು?
    ಫೆ. 17ರಂದು ಇಂಡಿಯನ್ ಬ್ಯಾಂಕಿನ ಲೆಂಡರ್ಸ್ ಡಿಜಿಟಲ್ ಬ್ಯಾಂಕಿಂಗ್ ವಿಭಾಗ ಸುತ್ತೋಲೆ ಹೊರಡಿಸಿದೆ. 2000 ರೂಪಾಯಿ ಮುಖಬೆಲೆಯ ನೋಟುಗಳು ಭಾರಿ ಮೊತ್ತದ್ದಾಗಿದ್ದು, ಇದರಿಂದ ಚಿಲ್ಲರೆ ವ್ಯಾಪಾರಿಗಳು ಹಾಗೂ ಗ್ರಾಹಕರು ಚೇಂಜ್ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಈ ನೋಟುಗಳ ವ್ಯವಹಾರವನ್ನು ನಮ್ಮ ಬಾಂಕಿನಲ್ಲಿ ಸ್ಥಗಿತಗೊಳಿಸಲಾಗಿದ್ದು, ಕೇವಲ 100, 200 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳು ಮಾತ್ರ ನಮ್ಮ ಎಟಿಎಂಗಳಲ್ಲಿ ಲಭ್ಯವಿರುತ್ತೆ ಎಂದು ತಿಳಿಸಿತ್ತು. ಅಲ್ಲದೇ ಮಾರ್ಚ್ 1ರಿಂದ 2000 ರೂಪಾಯಿ ನೋಟು ನಮ್ಮಲ್ಲಿ ಸಿಗಲ್ಲ ಎಂದು ಹೇಳಿತ್ತು.

    ಕಳೆದ ನಾಲ್ಕೈದು ತಿಂಗಳಿನಿಂದ ಎಟಿಎಂಗಳಲ್ಲಿ 2 ಸಾವಿರ ನೋಟು ಹೆಚ್ಚಾಗಿ ಸಿಗುತ್ತಿಲ್ಲ. 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂದು ಗ್ರಾಹಕರು ಮಾತಾಡಿಕೊಳ್ಳುತ್ತಿದ್ದರು. ಅದಕ್ಕೆ ಪುಷ್ಠಿ ಎಂಬಂತೆ ಇಂಡಿಯಾನ್ ಬ್ಯಾಂಕ್ ಆತಂಕಕಾರಿ ಮಾಹಿತಿ ನೀಡಿದೆ. ಇದರಿಂದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬೆಂಗಳೂರಿನ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟ್ ಸಿಗುತ್ತಾ ಇದೆಯಾ? ಇಲ್ವ ಎಂದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡಿದಾಗ ಎರಡು ಸಾವಿರ ನೋಟ್ ನಾಪತ್ತೆಯಾಗಿರೋದು ಪತ್ತೆಯಾಗಿದೆ.

    ಸ್ಥಳ- ಮತ್ತಿಕೆರೆ
    ಮತ್ತಿಕೆರೆ ಸರ್ಕಲ್‍ನಲ್ಲಿ ಇರುವ ಎಸ್‍ಬಿಐ ಎಟಿಎಂನಲ್ಲಿ 2 ಸಾವಿರ ನೋಟ್ ಸಿಗುತ್ತಿದೆಯಾ? ಇಲ್ವಾ ಎಂದು ಪಬ್ಲಿಕ್ ಟಿವಿ ತಂಡ ರಿಯಾಲಿಟಿ ಚೆಕ್ ಮಾಡೋದಕ್ಕೆ ಮುಂದಾಯಿತು. ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಗ್ರಾಹಕರನ್ನು ಕೂಡ ಮಾತಾಡಿಸಿದೇವು. ಈ ಎಟಿಎಂನಲ್ಲಿ 2 ಸಾವಿರ ರೂಪಾಯಿ ಡ್ರಾ ಮಾಡಿದಾಗ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬರಲಿಲ್ಲ. ಬದಲಿಗೆ ಬರೀ 500 ರೂಪಾಯಿ ನೋಟುಗಳು ಮಾತ್ರ ಬಂದವು. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರು ಕಳೆದ 20 ದಿನಗಳಿಂದಲೂ 2 ಸಾವಿರ ರೂಪಾಯಿ ನೋಟು ಸಿಗುತ್ತಿಲ್ಲ ಎಂದರು.

    ಸ್ಥಳ- ಯಲಹಂಕ
    ಇತ್ತ ಯಲಹಂಕ ಸರ್ಕಲ್‍ನಲ್ಲಿ ಕೂಡ ಕೊಟಕ್ ಮಹಿಂದ್ರಾ ಬ್ಯಾಂಕ್ ಎಟಿಎಂನಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬರುತ್ತಾ ಅಂತಾ ಚೆಕ್ ಮಾಡಿದ್ದೆವು. ಆದರೆ ಅಲ್ಲಿ ಕೂಡ ಬರೀ 500 ರೂಪಾಯಿ ನೋಟು ಬಂದವು. ಯಾಕೆ 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂದು ಸೆಕ್ಯೂರಿಟಿನಾ ಕೇಳುದರೆ, ಇಲ್ಲಿ ನಾಲ್ಕೈದು ತಿಂಗಳಿಂದ 2 ಸಾವಿರ ನೋಟು ಬರುತ್ತಿಲ್ಲ. ಮತ್ತೆ ಡೆಪಾಸಿಟ್ ಕೂಡ ಮಾಡ್ತಿಲ್ಲ ಎಂದು ತಿಳಿಸಿದರು.

    ಸ್ಥಳ- ಹೆಬ್ಬಾಳ
    ಮತ್ತಿಕೆರೆ ,ಯಲಹಂಕ ಎರಡು ಕಡೆ ಎಟಿಎಂನಲ್ಲೂ ಕೂಡ 2 ಸಾವಿರ ರೂಪಾಯಿ ನೋಟ್ ಬರಲಿಲ್ಲ. ಬಳಿಕ ಹೆಬ್ಬಾಳದ ಐಸಿಐಸಿಐ ಬ್ಯಾಂಕ್‍ನ ಎಟಿಎಂನಲ್ಲಿ ರಿಯಾಲಿಟಿ ಚೆಕ್ ಮಾಡಿದಾಗ, ಅಲ್ಲಿ ಕೂಡ 2 ಸಾವಿರ ರೂಪಾಯಿ ನೋಟು ಸಿಗಲಿಲ್ಲ.

    ಸ್ಥಳ-ಮಲ್ಲೇಶ್ವರಂ
    ಬಳಿಕ ಅಲ್ಲಿಂದ ಮಲ್ಲೇಶ್ವರ ಕಡೆ ಹೋಗಿ ಒಂದು ಎಟಿಎಂನಲ್ಲಿ ಎರಡು ಸಾವಿರ ನೋಟು ಡ್ರಾ ಮಾಡಿಕೊಳ್ಳಲು ಮುಂದಾದೆವು. ಆದರೆ ಇಲ್ಲಿಯೂ ಅದೇ ಪರಸ್ಥಿತಿ, ಕೇವಲ 100, 200 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳೇ ಎಂಟಿಎಂನಲ್ಲಿ ಸಿಕ್ಕಿತು.

    ಹೀಗೆ ಬೆಂಗಳೂರಿನ ಬಹುತೇಕ ಎಟಿಎಂಗಳಲ್ಲಿ 2 ಸಾವಿರ ನೋಟು ಸಿಗಲಿಲ್ಲ. ಬರೀ 500, 200, 100 ರೂಪಾಯಿ ಮುಖಬೆಲೆಯ ನೋಟುಗಳು ಸಿಗುತ್ತಿವೆ. ಈ ಪರಿಸ್ಥಿತಿ ನಾಲ್ಕೈದು ತಿಂಗಳಿಂದನೂ ಇದೆ. ನೋಟು ಸಿಗುತ್ತಿಲ್ಲ ಎಂಬ ಮಾಹಿತಿ ಸದ್ಯ ಗ್ರಾಹಕರಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟುಹಾಕಿದ್ದು, ಮುಂದಿನ ದಿನಗಳಲ್ಲಿ 2 ಸಾವಿರ ನೋಟ್ ಬ್ಯಾನ್ ಆಗುತ್ತಾ ಎಂಬ ಅನುಮಾನಗಳು ಕೂಡ ಗ್ರಾಹಕರಲ್ಲಿ ಕಾಡುತ್ತಿದೆ.

  • ಬ್ಯಾಂಕ್‍ನಲ್ಲಿ ಇಲ್ಲ, ಎಟಿಎಂನಲ್ಲೂ ಸಿಗ್ತಿಲ್ಲ 2ಸಾವಿರ ರೂ. ನೋಟು

    ಬ್ಯಾಂಕ್‍ನಲ್ಲಿ ಇಲ್ಲ, ಎಟಿಎಂನಲ್ಲೂ ಸಿಗ್ತಿಲ್ಲ 2ಸಾವಿರ ರೂ. ನೋಟು

    ಬೆಂಗಳೂರು: ಸದ್ದಿಲ್ಲದೆ ಎರಡು ಸಾವಿರ ನೋಟು ಬ್ಯಾನ್ ಆಗ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿದೆ. ಯಾಕೆಂದರೆ ಎಟಿಎಂನಲ್ಲಿ 2 ಸಾವಿರ ಮುಖ ಬೆಲೆಯ ನೋಟು ಸಿಗ್ತಿಲ್ಲ ಎನ್ನುವ ಸುದ್ದಿಯ ಜೊತೆ, ಕೆಲವೆಡೆ 2 ಸಾವಿರ ನೋಟಿನ ಚಲಾವಣೆಯೂ ಸ್ಥಗಿತಗೊಂಡಿದೆ ಎನ್ನುವ ವಿಚಾರದ ಬಗ್ಗೆ ಆತಂಕ ಸೃಷ್ಟಿಯಾಗಿದೆ.

    ನೋಟು ಅಮಾನ್ಯೀಕರಣ ಆಗಿ 3 ವರ್ಷಗಳು ಕಳೆದಿದೆ. 500, 1 ಸಾವಿರ ಮುಖ ಬೆಲೆಯ ನೋಟ್ ಬ್ಯಾನ್ ಆದಾಗ ಜನಜೀವನ ಅಸ್ತವ್ಯಸ್ತವಾಗಿ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳೋದಕ್ಕೆ ತಿಂಗಳುಗಳೇ ಬೇಕಾಯ್ತು. ಇನ್ನೂ ನೋಟು ಅಮಾನ್ಯೀಕರಣ ಹೊಡೆತದಿಂದ ಹೊರ ಬರಲು ಸಾಧ್ಯವಾಗ್ತಿಲ್ಲ. ಇದರ ಬೆನ್ನಲ್ಲೇ ಈಗ ಇನ್ನೊಂದು ಶಾಕಿಂಗ್ ಸುದ್ದಿ ಹರಿದಾಡುತ್ತಿದ್ದು, 2 ಸಾವಿರ ರೂ. ನೋಟು ಕೂಡ ಬ್ಯಾನ್ ಆಗುವ ಮುನ್ಸೂಚನೆ, ಲಕ್ಷಣಗಳು ಕಾಣಸಿಗುತ್ತಿದೆ.

    ಈಗಾಗಲೇ ಬಹುತೇಕ ಎಟಿಎಂನಲ್ಲಿ ಎರಡು ಸಾವಿರ ನೋಟು ಸಿಗುತ್ತಿಲ್ಲ ಅನ್ನುವ ಸುದ್ದಿಗಳು ಹರಿದಾಡುತ್ತಿದ್ದು, ಇದರ ರಿಯಾಲಿಟಿ ಚೆಕ್ ಪಬ್ಲಿಕ್ ಟಿವಿ ನಡೆಸಿದೆ. ಬಸವೇಶ್ವರ ನಗರ ಸರ್ಕಲ್, ಲಗ್ಗೆರೆ ಕ್ರಾಸ್, ಮತ್ತಿಕೆರೆ, ಬಸವೇಶ್ವರ ನಗರ, ಮಲ್ಲೇಶ್ವರಂ ಸೇರಿದಂತೆ ಬೆಂಗಳೂರಿನ ಹಲವು ಕಡೆ ಎಂಟಿಎಂಗಳಲ್ಲಿ ಹಣ ತೆಗೆದು ಪರಿಶೀಲಿಸಿದಾಗ ಯಾವುದರಲ್ಲೂ 2 ಸಾವಿರ ಮುಖ ಬೆಲೆಯ ನೋಟು ಲಭ್ಯವಾಗಿಲ್ಲ.

    ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿಯೂ ಇದೇ ಪರಸ್ಥಿತಿಯಾಗಿದೆ. ಈ ಎಟಿಎಂನಲ್ಲಿ ಹಣ ಡ್ರಾ ಮಾಡಲು ಬರುವ ಗ್ರಾಹಕರ ಕೈಗೆ ಬರೀ 100, 500 ರೂ. ನೋಟುಗಳು ಮಾತ್ರ ಸಿಗುತ್ತಿವೆ. ಇದರಿಂದ ದೊಡ್ಡ ಮಟ್ಟದ ಹಣವನ್ನ ಡ್ರಾ ಮಾಡಿಕೊಂಡು ಹೋಗೋದಕ್ಕೆ ಸಮಸ್ಯೆಯಾಗುತ್ತಿದೆ ಅಂತ ಗ್ರಾಹಕರು ಹೇಳುತ್ತಿದ್ದಾರೆ.

    ನೋಟು ಪ್ರಿಂಟಿಂಗ್ ಏನಾದರು ಕಡಿಮೆಯಾಗಿದೆಯಾ? ಇಲ್ಲಾ 2 ಸಾವಿರ ನೋಟ್ ಏನಾದರು ಬ್ಯಾನ್ ಆಗುತ್ತಾ ಎಂದು ಜನರು ಗೊಂದಲದಲ್ಲಿದ್ದು, ಮತ್ತೆ ನೋಟ್ ಬ್ಯಾನ್ ಭಯ ಜನಸಾಮಾನ್ಯರನ್ನು ಕಾಡಲು ಆರಂಭಿಸಿದೆ.

  • 2 ಸಾವಿರ ಮುಖಬೆಲೆಯ ನೋಟ್ ಮುದ್ರಣ ನಿಲ್ಲಿಸಲಿದೆ ಆರ್‌ಬಿಐ

    2 ಸಾವಿರ ಮುಖಬೆಲೆಯ ನೋಟ್ ಮುದ್ರಣ ನಿಲ್ಲಿಸಲಿದೆ ಆರ್‌ಬಿಐ

    ನವದೆಹಲಿ: ದೇಶದಲ್ಲಿನ ಕಪ್ಪುಹಣಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ, ನೋಟು ನಿಷೇಧ ನಿರ್ಧಾರದ ಸಮಯದಲ್ಲಿ ಚಲಾವಣೆಗೆ ತಂದಿದ್ದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹಂತ ಹಂತವಾಗಿ ಕಡಿಮೆ ಮಾಡಲಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

    ನವೆಂಬರ್ 8, 2016ರಲ್ಲಿ ನೋಟ್ ಬ್ಯಾನ್ ಆದ ಸಂದರ್ಭದಲ್ಲಿ ಆರ್‌ಬಿಐ 2 ಸಾವಿರ ರೂ.ನಷ್ಟು ದೊಡ್ಡ ಮೊತ್ತದ ನೋಟುಗಳನ್ನು ಹಣಕಾಸು ಕೊರತೆಯನ್ನು ಭರಿಸುವ ಉದ್ದೇಶದಿಂದ ಚಲಾವಣೆಗೆ ತಂದಿತ್ತು.

    ಈ ದೊಡ್ಡ ಮೊತ್ತದ ನೋಟು ಕಾಳಧನಿಕರಿಗೆ ಶತ್ರುವಾಗಿ ಪರಿಣಮಿಸುವ ಬದಲಾಗಿ ಸ್ನೇಹಿಯಾಗಿ ಮಾರ್ಪಾಡಾಗತೊಡಗಿವೆ. ಹೆಚ್ಚು ಮೌಲ್ಯ ಹೊಂದಿರುವ ಕಾರಣಕ್ಕೆ ಈ ಮುಖಬೆಲೆಯ ನೋಟ್‍ಗಳನ್ನು ಸುಲಭವಾಗಿ ಶೇಖರಿಸಿ ಇಡಬಹುದು ಮತ್ತು ಸಾಗಿಸಬಹುದು ಅಂತ ಕಾಳಧನಿಕರು ಉಪಾಯ ಮಾಡಿದ್ದಾರೆ. ಆದರಿಂದ ಈ ನೋಟುಗಳನ್ನು ಹೆಚ್ಚು ಶೇಖರಿಸಿಡುತ್ತಿದ್ದಾರೆ ಎಂಬ ಶಂಕೆ ಬಂದ ಹಿನ್ನೆಲೆಯಲ್ಲಿ ಆರ್‌ಬಿಐ ಹಂತಹಂತವಾಗಿ 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸುತ್ತಿದೆ.

    2 ಸಾವಿರ ರೂ. ನೋಟುಗಳ ಮುದ್ರಣವನ್ನು ಕಡಿಮೆ ಮಾಡಿ, ಮುಂದಿನ ದಿನಗಳಲ್ಲಿ ಕಡಿಮೆ ಮೌಲ್ಯದ ನೋಟುಗಳ ಚಲಾವಣೆಯನ್ನು ಸರ್ಕಾರ ಹೆಚ್ಚಿಸಲಿದೆ. ಇದು ಹೊಸ ಪ್ರಕ್ರಿಯೆ ಏನಲ್ಲ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

    ಮಾರ್ಚ್ 2017ರ ಅಂತ್ಯದಲ್ಲಿ 328 ಕೋಟಿ ರೂ. 2 ಸಾವಿರ ಮುಖಬೆಲೆಯ ನೋಟುಗಳು ದೇಶದಲ್ಲಿ ಚಲಾವಣೆಯಾಗಿತ್ತು. ಬಳಿಕ ಮಾರ್ಚ್ 2018ರ ಅಂತ್ಯದಲ್ಲಿ ಈ ಸಂಖ್ಯೆ 336 ಕೋಟಿಗೆ ಏರಿಕೆಯಾಗಿತ್ತು. ಆರಂಭದಲ್ಲಿ ಶೇ. 86ರಷ್ಟು 2 ಸಾವಿರ ನೋಟುಗಳು ಚಲಾವಣೆಯಲ್ಲಿದ್ದವು. ಆದರೆ 2018ರ ಮಾರ್ಚ್ 31ಕ್ಕೆ ಚಲಾವಣೆಯಲ್ಲಿರುವ ನೋಟುಗಳ ಪ್ರಮಾಣ ಶೇ.37.3ಕ್ಕೆ ಕುಸಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2 ಸಾವಿರ ರೂ. ಪಿಂಕ್ ನೋಟು ಹಂಚುತ್ತಿದ್ದಾರೆ ಈ ನವಜೋಡಿ!

    2 ಸಾವಿರ ರೂ. ಪಿಂಕ್ ನೋಟು ಹಂಚುತ್ತಿದ್ದಾರೆ ಈ ನವಜೋಡಿ!

    ಬೆಂಗಳೂರು: ಹೊಸ ಎರಡು ಸಾವಿರ ನೋಟ್ ಹಿಡ್ಕೊಂಡು, ಫೇಸ್ ಬುಕ್, ವಾಟ್ಸಪ್‍ನಲ್ಲಿ ಪೋಸ್ ಕೊಟ್ಟಿದ ದಿನಗಳು ಮುಗಿದು, ಎಲ್ಲರ ಕೈಯಲ್ಲಿ ದುಡ್ಡು ಓಡಾಡೋಕೆ ಶುರುವಾದರೂ ಎರಡು ಸಾವಿರ ರೂಪಾಯಿ ಕ್ರೇಜ್ ಮಾತ್ರ ಇನ್ನು ಕಮ್ಮಿಯಾಗಿಲ್ಲ. ಅದಕ್ಕೆ ಅನಿಸುತ್ತೆ ಇಲ್ಲೊಂದು ನವ ಜೋಡಿ ತಮ್ಮ ಮದುವೆಗೆ ಎರಡು ಸಾವಿರ ರೂಪಾಯಿ ವಿನ್ಯಾಸ ಹೊಸ ಪಿಂಕ್ ನೋಟ್ ಹಂಚುತ್ತಿದ್ದಾರೆ.

    ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಶ್ವೇತಾ ಮತ್ತು ಅಶೋಕ್ ಎರಡು ಸಾವಿರ ರೂ. ಮುಖಬೆಲೆಯ ನೋಟಿನ ವಿನ್ಯಾಸದಲ್ಲಿ ಮದುವೆ ಆಹ್ವಾನ ಪತ್ರಿಕೆಯನ್ನು ತಯಾರಿಸಿದ್ದಾರೆ. ಸ್ನೇಹಿತರನ್ನು, ಬಂಧುಗಳನ್ನು ಈ ನೋಟ್ ಆಕರ್ಷಿಸುತ್ತಿದ್ದು, ಹೊಸ ಟ್ರೆಂಡ್‍ಗೆ ಫಿದಾ ಆಗಿದ್ದಾರೆ. ಒಂದು ಆಹ್ವಾನ ಪತ್ರಿಕೆ ಕೊಟ್ರೆ ಮತ್ತೊಂದು ಕೊಡಿ ಅಂತ ಕೇಳಿ ಕೇಳಿ ಪಡೆಯುತ್ತಿದ್ದಾರೆ ಎಂದು ವಧು ಶ್ವೇತಾ ಹೇಳುತ್ತಾರೆ.

    ನೋಟಿನ ಬಣ್ಣ ಬಿಟ್ರೆ ಮತ್ಯಾವುದೇ ಪ್ರಿಂಟ್‍ಗಳನ್ನು ಬಳಸಿಕೊಂಡಿಲ್ಲ. ಸದ್ಯ ಈಗ ಈ ನೋಟಿನ ವಿನ್ಯಾಸದ ಆಹ್ವಾನ ಪತ್ರಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಮುದ್ರಣ ಸಂಸ್ಥೆಯ ರಮೇಶ್ ಹೇಳಿದ್ದಾರೆ.