Tag: 2ಎ ಮೀಸಲಾತಿ

  • ಪಂಚಮಸಾಲಿ 2ಎ ಮೀಸಲಾತಿ- ದುಂಡು ಮೇಜಿನ ಸಭೆಯಲ್ಲಿ ಪಂಚ ನಿರ್ಣಯ ಪಾಸ್

    ಪಂಚಮಸಾಲಿ 2ಎ ಮೀಸಲಾತಿ- ದುಂಡು ಮೇಜಿನ ಸಭೆಯಲ್ಲಿ ಪಂಚ ನಿರ್ಣಯ ಪಾಸ್

    ಹುಬ್ಬಳ್ಳಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರ ಸಪ್ಟೆಂಬರ್ 14ರೊಳಗೆ ಅಂತಿಮ ನಿರ್ಧಾರ ಕೈಗೊಳ್ಳದ್ದರೆ ಮತ್ತೆ ಹೋರಾಟದ ಮುನ್ಸೂಚನೆ ದೊರೆತಿದೆ.

    ಹುಬ್ಬಳ್ಳಿಯಲ್ಲಿಂದು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ಅಭಿಯಾನ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಸಮಾಜದ ಮುಖಂಡರು ಹಾಗೂ ಸ್ವಾಮೀಜಿ ಪಂಚ ನಿರ್ಣಯಗಳನ್ನ ಕೈಗೊಂಡು, ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಪಂಚ ನಿರ್ಣಯಗಳ್ಯಾವು?
    ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ವಿಧಾನಸೌಧದ ಅಧಿವೇಶನದಲ್ಲಿ ಪಂಚಮಸಾಲಿ ಸಮಾಜಕ್ಕೆ ಸಪ್ಟೆಂಬರ್ 21ರೊಳಗೆ 2ಎ ಮೀಸಲಾತಿ ನೀಡುವ ಬಗ್ಗೆ ಭರವಸೆ ನೀಡಿದ್ದರು. ಹಿಂದಿನ ಸಿಎಂ ಭರವಸೆ ಪ್ರಕಾರ ಸಪ್ಟೆಂಬರ್ 14ರೊಳಗೆ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಮತ್ತೆ ನೆನಪಿಸುವ ನಿಟ್ಟಿನಲ್ಲಿ ಅಗಸ್ಟ್ 26ರಿಂದ ಮಲೆಮಹದೇಶ್ವರ ಬೆಟ್ಟದಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ಅಭಿಯಾನ ಕೈಗೊಳ್ಳುವುದು.

    ಮೀಸಲಾತಿ ನೀಡುವ ಕುರಿತು ಹಕ್ಕೊತ್ತಾಯ ಮಂಡನೆ ಮಾಡಲು ಸಪ್ಟೆಂಬರ್ 1ರಂದು ಮಾಜಿ ಸಿಎಂ ಜೆ.ಎಚ್.ಪಟೇಲರ ಜಯಂತಿಯಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ಮುಂದುವರೆಸಲಾಗುವುದು. ಕುರುಬ, ವಾಲ್ಮೀಕಿ, ಮಡಿವಾಳ, ಗಂಗಾಮತ, ಆದಿಬಣಜಿಗ, ಕುಡುವಕ್ಕಲಿಗ ಹಾಗೂ ಉಳಿದ ಸಮಾಜಗಳ ಬೇಡಿಕೆಗಳ ಅನುಗುಣವಾಗಿ ಬೇಡಿಕೆಗಳನ್ನ ಈಡೇರಿಸುವುದು ಸೇರಿದಂತೆ ಮೀಸಲಾತಿ ಕೊಡಿಸುವ ವಿಚಾರದಲ್ಲಿ ಸಮಾಜದ ಪರವಾಗಿ ಸಂಧಾನಕಾರರಾಗಿ ಸಚಿವ ಸಿ.ಸಿ.ಪಾಟೀಲರಿಗೆ ಜವಾಬ್ದಾರಿ ವಹಿಸಿವುದು. ಅಲ್ಲದೆ ನೂತನ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪಂಚಮಸಾಲಿ ಸಮುದಾಯ ಆಶೀರ್ವಾದ ನೀಡುತ್ತದೆ ಎನ್ನುವ ಪಂಚ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

  • 2ಎ ಮೀಸಲಾತಿಗಾಗಿ ಪಂಚಮಸಾಲಿಗರ ಹೋರಾಟ – ವೀಕೆಂಡ್ ಮಸ್ತಿ ಅಂತ ರೋಡಿಗೆ ಇಳಿಯೋ ಮುನ್ನ ಎಚ್ಚರ

    2ಎ ಮೀಸಲಾತಿಗಾಗಿ ಪಂಚಮಸಾಲಿಗರ ಹೋರಾಟ – ವೀಕೆಂಡ್ ಮಸ್ತಿ ಅಂತ ರೋಡಿಗೆ ಇಳಿಯೋ ಮುನ್ನ ಎಚ್ಚರ

    – ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಫಿಕ್ಸ್
    – ಬೆಂಗಳೂರಿನ 8 ಕಡೆ ಮಾರ್ಗ ಬದಲಾವಣೆ

    ಬೆಂಗಳೂರು: 2ಎ ಮೀಸಲಾತಿಗಾಗಿ ಪಂಚಮಸಾಲಿ ಲಿಂಗಾಯತರ ಹೋರಾಟ ನೆಡಯಲಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಬೃಹತ್ ಸಮಾವೇಶ ನಡೆಯಲಿದೆ. ಪಂಚಮಸಾಲಿ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ ನಡೆಯಲಿದೆ.

    ಇಂದು ಬೆಳಗ್ಗೆ 11ಕ್ಕೆ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಈ ಸಮಾವೇಶಕ್ಕೆ 10ಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ. ಅದಕ್ಕಾಗಿ ಈಗಾಗಲೇ ಜಿಲ್ಲೆಗಳಿಂದ ಜನ ಆಗಮಿಸಿದ್ದಾರೆ.

    38 ದಿನಗಳ ಪಾದಯಾತ್ರೆ ಮುಗಿಸಿ, ಇಂದು ಪಾಂಚಜನ್ಯ ಹೊರಡಿಸಲಿದ್ದಾರೆ. ಈ ವೇಳೆ ಪಂಚಮಸಾಲಿ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಪ್ರಮುಖರು ಭಾಗಿಯಾಗಲಿದ್ದಾರೆ. ಮೂರೂ ಪಕ್ಷಗಳ ಪಂಚಮಸಾಲಿ ನಾಯಕರಿಗೂ ಆಹ್ವಾನ ನೀಡಲಾಗಿದೆ. ಸಮಾವೇಶದ ಬಳಿಕ ಹೋರಾಟ ಮುಂದುವರಿಸಲು ಸ್ವಾಮೀಜಿಗಳು ನಿರ್ಧಾರ ಮಾಡಿದ್ದು, ವಿಧಾನಸೌಧಕ್ಕೆ ಸ್ವಾಮೀಜಿಗಳ ನೇತೃತ್ವದಲ್ಲಿ ರ್ಯಾಲಿ ನಡೆಯಲಿದೆ. ಆದರೆ ವಿಧಾನಸೌಧದ ಕಡೆಗೆ ಪಂಚಮಸಾಲಿ ರ್ಯಾಲಿಗೆ ಅನುಮತಿ ಸಿಕ್ಕಿಲ್ಲ.

    ವೀಕೆಂಡ್ ಮಸ್ತಿ ಅನ್ನೋ ಬೆಂಗಳೂರಿಗರೆ ಎಚ್ಚರವಾಗಿರಿ. ಪಂಚಮಸಾಲಿ ಮೀಸಲಾತಿ ಹೋರಾಟದ ಕಹಳೆಯಿಂದಾಗಿ ಇಂದು ಬೆಂಗಳೂರಿಗೆ ಟ್ರಾಫಿಕ್ ಬಿಸಿ ತಟ್ಟಲಿದೆ. ಬಳ್ಳಾರಿ, ತುಮಕೂರು ರೋಡ್ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಎದುರಾಗಲಿದೆ. ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು 8 ಪ್ರಮುಖ ರಸ್ತೆಗಳ ಬದಲಾವಣೆ ಮಾಡಿದ್ದಾರೆ. ಬೈಕ್, ಕಾರುಗಳಿಗೆ ತ್ರಿಪುರ ವಾಸಿನಿ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿಐಪಿ ವಾಹನಗಳಿಗೆ ರಮಣಶ್ರೀ ರೋಡ್, ಕೃಷ್ಣ ವಿಹಾರ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.

    8 ಮಾರ್ಗಗಳ ಬದಲಾವಣೆ
    1) ಮೈಸೂರ್ ರೋಡ್: ನಾಯಂಡಹಳ್ಳಿ – ಸುಮನಹಳ್ಳಿ, ರಾಜ್ ಕುಮಾರ್ ಸಮಾಧಿ ರೋಡ್,ತುಮಕೂರ್ ರೋಡ್ – ಗೊರಗುಂಟೆಪಾಳ್ಯ ಜಂಕ್ಷನ್-ಬಿಇಎಲ್ – ಹೆಬ್ಬಾಳ ಮೇಲ್ಸೇತುವೆ- ಮೇಕ್ರಿ ಸರ್ಕಲ್ – ಜಯಮಹಲ್ ರೋಡ್ – ಅರಮನೆ ಮೈದಾನ

    2) ತುಮಕೂರು ರೋಡ್: ಗೊರಗುಂಟೆ ಪಾಳ್ಯ ಜಂಕ್ಷನ್ – ಬಿಇಎಲ್ – ಹೆಬ್ಬಾಳ – ಮೇಕ್ರಿ ಸರ್ಕಲ್ ಸರ್ವಿಸ್ ರೋಡ್- ಅರಮನೆ ಮೈದಾನ

    3) ಕನಕಪುರ ರೋಡ್: ಬನಶಂಕರಿ ದೇವಸ್ಥಾನ ಬಸ್ ನಿಲ್ದಾಣ – ರಾಜಲಕ್ಷ್ಮಿ ಜಂಕ್ಷನ್ ಜಯನಗರ 4 ಮೈನ್ – ಸೌಥ್ ಅಂಡ್ ಸರ್ಕಲ್ – ಆರ್ ವಿ ಜಂಕ್ಷನ್ – ಲಾಲ್ ಬಾಗ್ ವೆಸ್ಟ್ ಗೇಟ್ – ಮಿನರ್ವ ಸರ್ಕಲ್ – ಜೆ ಸಿ ರೋಡ್ – ಟೌನ್ ಹಾಲ್ – ಕೆಜಿ ರೋಡ್ – ಮೈಸೂರ್ ಬ್ಯಾಂಕ್ ಸರ್ಕಲ್ – ಪ್ಯಾಲೇಸ್ ರೋಡ್ -ಬಸವೇಶ್ವರ ಸರ್ಕಲ್ – ವಸಂತನಗರ ರೋಡ್ – ಕಂಟೋನ್ಮೆಂಟ್ ಅಂಡರ್ ಪಾಸ್ – ಜಯಮಹಲ್ ರೋಡ್ – ಅರಮನೆ ಮೈದಾನ

    4) ಬನ್ನೇರುಘಟ್ಟ ರೋಡ್: ಡೈರಿ ಸರ್ಕಲ್ – ಲಾಲ್ ಬಾಗ್ ಮೈನ್ ಗೇಟ್ – ಮಿನರ್ವ ಸರ್ಕಲ್ – ಜೆ ಸಿ ರೋಡ್ – ಟೌನ್ ಹಾಲ್ – ಕೆಜಿ ರೋಡ್ – ಮೈಸೂರ್ ಬ್ಯಾಂಕ್ ಸರ್ಕಲ್ – ಪ್ಯಾಲೇಸ್ ರೋಡ್ -ಬಸವೇಶ್ವರ ಸರ್ಕಲ್ – ವಸಂತನಗರ ರೋಡ್ – ಕಂಟೋನ್ಮೆಂಟ್ ಅಂಡರ್ ಪಾಸ್ – ಜಯಮಹಲ್ ರೋಡ್ – ಅರಮನೆ ಮೈದಾನ

    5) ಹಳೇ ಮದ್ರಾಸ್ ರೋಡ್: ಕೆಆರ್ ಪುರಂ ಮೇಲ್ಸೇತುವೆ- ಹೆಣ್ಣೂರು ಕ್ರಾಸ್ – ನಾಗವಾರ- ಹೆಬ್ಬಾಳ ಫ್ಲೈ ಓವರ್ – ಬಳ್ಳಾರಿ ರೋಡ್ – ಮೇಕ್ರಿ ಸರ್ಕಲ್ ಸರ್ವಿಸ್ ರೋಡ್ – ಅರಮನೆ ಮೈದಾನ

    6) ಹೊಸೂರು ರೋಡ್ : ಹೊಸೂರು ರೋಡ್ – ಮಡಿವಾಳ ಚೆಕ್ ಪೋಸ್ಟ್- ಹಳೇ ಮದ್ರಾಸ್- ಡೈರಿ ಸರ್ಕಲ್ ರೋಡ್ – ಲಾಲ್ ಬಾಗ್ ಮೈನ್ ಗೇಟ್ – ಮಿನರ್ವ ಸರ್ಕಲ್ – ಜೆ ಸಿ ರೋಡ್ – ಟೌನ್ ಹಾಲ್ – ಕೆಜಿ ರೋಡ್ – ಮೈಸೂರ್ ಬ್ಯಾಂಕ್ ಸರ್ಕಲ್ – ಪ್ಯಾಲೇಸ್ ರೋಡ್ -ಬಸವೇಶ್ವರ ಸರ್ಕಲ್ – ವಸಂತನಗರ ರೋಡ್ – ಕಂಟೋನ್ಮೆಂಟ್ ಅಂಡರ್ ಪಾಸ್ – ಜಯಮಹಲ್ ರೋಡ್ – ಅರಮನೆ ಮೈದಾನ

    7) ಬಳ್ಳಾರಿ ರೋಡ್: ದೇವನಹಳ್ಳಿ ಮಾರ್ಗ – ಚಿಕ್ಕಜಾಲ – ಹುಣಿಸೇಮಾರನಹಳ್ಳಿ -ಕೋಗಿಲು ಜಂಕ್ಷನ್ – ಕೊಡಿಗೇಹಳ್ಳಿ ಗೇಟ್ – ಹೆಬ್ಬಾಳ ಮೇಲ್ಸೇತುವೆ – ಮೇಕ್ರಿ ಸರ್ಕಲ್ – ಅರಮನೆ ಮೈದಾನ

    8) ದೊಡ್ಡಬಳ್ಳಾಪುರ: ಮೇಜರ್ ಉನ್ನಿಕೃಷ್ಣನ್ ರೋಡ್ – ಯಲಹಂಕ ಪೊಲೀಸ್ ಸ್ಟೇಷನ್ ಜಂಕ್ಷನ್ – ಬೈಪಾಸ್ – ಬಳ್ಳಾರಿ ರೋಡ್ – ಹೆಬ್ಬಾಳ ಮೇಲ್ಸೇತುವೆ – ಮೇಕ್ರಿ ಸರ್ಕಲ್ – ಅರಮನೆ ಮೈದಾನ.

  • ಪಂಚಮಸಾಲಿ ಸಭೆಯಲ್ಲಿ ಹೈ ಡ್ರಾಮಾ- ವಿಧಾನಸೌಧಕ್ಕೆ ಮುತ್ತಿಗೆ ವಿಚಾರಕ್ಕೆ ಕಾಂಗ್ರೆಸ್, ಬಿಜೆಪಿ ನಾಯಕರ ನಡುವೆ ವಾಕ್ಸಮರ

    ಪಂಚಮಸಾಲಿ ಸಭೆಯಲ್ಲಿ ಹೈ ಡ್ರಾಮಾ- ವಿಧಾನಸೌಧಕ್ಕೆ ಮುತ್ತಿಗೆ ವಿಚಾರಕ್ಕೆ ಕಾಂಗ್ರೆಸ್, ಬಿಜೆಪಿ ನಾಯಕರ ನಡುವೆ ವಾಕ್ಸಮರ

    ತುಮಕೂರು: ಪಂಚಮಸಾಲಿಗೆ 2ಎ ಮೀಸಲಾತಿ ಕುರಿತು ಸ್ವಾಮೀಜಿಗಳು ಪಾದಯಾತ್ರೆ ನಡೆಸುತ್ತಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಹ ನಿರ್ಧರಿಸಲಾಗಿತ್ತು. ಈ ಸಂಬಂಧ ಪಂಚಮಸಾಲಿಯ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಇಂದು ತುಮಕೂರಿನಲ್ಲಿ ಸಭೆ ನಡೆಸಿ ಜಯಮೃತ್ಯುಂಜಯ ಸ್ವಾಮೀಜಿಗಳನ್ನು ಮನವೊಲಿಸಲು ಸಚಿವ ಮುರುಗೇಶ್ ನಿರಾಣಿ ತೆರಳಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ಕೈ ಬಿಟ್ಟು ಕೇವಲ ಸಮಾವೇಶ ನಡೆಸಿ ಪಾದಯಾತ್ರೆ ಮುಗಿಸಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ವಿಜಯಾನಂದ ಕಾಶಪ್ಪನವರ್ ವಿರೋಧ ವ್ಯಕ್ತಪಡಿಸಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಿಯೇ ಸಿದ್ಧ ಎಂದು ಹೇಳಿದ್ದಾರೆ. ಹೀಗಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.

    ಸಚಿವ ನಿರಾಣಿ ಮನವೊಲಿಕೆ ಬಳಿಕ ವಿಧಾನಸೌಧ ಮುತ್ತಿಗೆಯನ್ನು ಕೈ ಬಿಡುವುದಾಗಿ ಸಭೆಯಲ್ಲಿ ಒಪ್ಪಿಕೊಳ್ಳಲಾಗಿದೆ. ಈ ಮೂಲಕ ಸಚಿವ ಮುರುಗೇಶ್ ನಿರಾಣಿ ಕೊನೆಗೆ ಮೇಲುಗೈ ಸಾಧಿಸಿದಂತಾಗಿದೆ. ಈ ಘಟನೆ ನಡೆಯುತ್ತಿದ್ದಂತೆ ವಿಜಯಾನಂದ ಕಾಶಪ್ಪನವರ್ ಸಭೆಯಿಂದ ಹೊರ ಬರಲು ಮುಂದಾಗಿದ್ದಾರೆ. ಮುಖಂಡರು ಮತ್ತೆ ಸಭೆಯೊಳಗೆ ಕರೆದೊಯ್ದಿದ್ದಾರೆ.

    ಈ ಮೂಲಕ ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕೊನೆಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನ ಸೌಧ ಮುತ್ತಿಗೆ ಕೈ ಬಿಡಲಾಗಿದೆ. ಫೆ.21 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಸಭೆಯ ನಿರ್ಣಯ ಪ್ರಕಟಿಸಿದ್ದಾರೆ.

    ಈ ಮೂಲಕ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಸ್ವಾಮೀಜಿಗಳ ಹೋರಾಟವನ್ನು ತಣ್ಣಗೆ ಮಾಡುವಲ್ಲಿ ಸಚಿವ ಮುರುಗೇಶ್ ನಿರಾಣಿ ಯಶಸ್ವಿಯಾಗಿದ್ದು, ಬೆಂಗಳೂರಿಗೆ ಆಗಮಿಸಲಿರುವ ಪಾದಯಾತ್ರೆಯನ್ನು ಕೇವಲ ಸಮಾವೇಶಕ್ಕೆ ಸೀಮಿತ ಮಾಡುವಂತೆ ಮಾಡಿದ್ದಾರೆ.

  • ಉಲ್ಟಾ ಹೊಡೆದ ಸಿಎಂ – ಪಂಚಮಸಾಲಿ 2ಎ ಮೀಸಲಾತಿ ಸಮಗ್ರ ಅಧ್ಯಯನಕ್ಕೆ ಸೂಚನೆ

    ಉಲ್ಟಾ ಹೊಡೆದ ಸಿಎಂ – ಪಂಚಮಸಾಲಿ 2ಎ ಮೀಸಲಾತಿ ಸಮಗ್ರ ಅಧ್ಯಯನಕ್ಕೆ ಸೂಚನೆ

    ಬೆಂಗಳೂರು: ಪಂಚಮಸಾಲಿ ಜನಾಂಗವನ್ನು ಹಿಂದುಳಿದ ವರ್ಗ 2ಎ ಮೀಸಲಾತಿಗೆ ಒಳಪಡಿಸುವ ಕುರಿತು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ.

    ನಮ್ಮದು ರಾಷ್ಟ್ರೀಯ ಪಕ್ಷ, ಕೇಂದ್ರ ನಾಯಕರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬೆಳಗ್ಗೆಯಷ್ಟೇ ಸದನದಲ್ಲಿ ಹೇಳಿದ್ದ ಸಿಎಂ ಇದೀಗ ರಾತ್ರಿ ಆಗುತ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ. ರಾಜ್ಯದ ಲಿಂಗಾಯತ ಪಂಚಮಸಾಲಿ ಜನಾಂಗದವರು ತಮ್ಮ ಸಮಾಜ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಹಿಂದುಳಿದಿದೆ ಮತ್ತು ಸಮಾಜದ ಕಡುಬಡವರಿಗೆ ತೊಂದರೆಯಾಗುವುದರಿಂದ ಸಮಾಜವನ್ನು ಹಿಂದುಳಿದ ವರ್ಗ 2ಎ ಮೀಸಲಾತಿಗೆ ಒಳಪಡಿಸಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ ನಿಡಿದ್ದಾರೆ.

    ಬೆಳಗ್ಗೆಯಷ್ಟೇ ವಿಧಾನಸಭೆಯಲ್ಲಿ ನಮ್ಮದು ರಾಷ್ಟ್ರೀಯ ಪಕ್ಷ ಎಂದು ಕೇಂದ್ರ ನಾಯಕರ ಮೇಲೆ ಬೊಟ್ಟು ಮಾಡಿದ್ದ ಯಡಿಯೂರಪ್ಪ, ಇದೀಗ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ರಾತ್ರಿ ಆದೇಶ ಹೊರಡಿಸಿದ್ದಾರೆ.

    ಈ ಕುರಿತು ಸ್ಪಷ್ಟೀಕರಣ ನೀಡಿರುವ ಸಿಎಂ, ಅಧಿವೇಶನದಲ್ಲಿ ನನ್ನ ಹೇಳಿಕೆಯನ್ನು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅಪಾರ್ಥ ಮಾಡಿಕೊಂಡಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ನಾನು ಈಗಾಗಲೇ ಸಮಾಜದ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್ ಮತ್ತು ಶಾಸಕರ ಜೊತೆ ಚರ್ಚಿಸಿದ್ದೇನೆ. ಬಳಿಕ ಸಮಾಜದ ಇಬ್ಬರು ಸ್ವಾಮೀಜಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡುವಂತೆ ಫೆ.4ರಂದು ಕಳುಹಿಸಿದ್ದೆ ಎಂದು ತಿಳಿಸಿದ್ದಾರೆ.

    ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಸೇರಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ವಿಷಯ ನೀಡಿ ಅಧ್ಯಯನ ಮಾಡಿ, ವರದಿ ಸಲ್ಲಿಸಲು ಕೋರಲಾಗಿದೆ. ನಾನು ಅಧಿವೇಶನದಲ್ಲಿ ಹೇಳಿದ್ದು, ನಮ್ಮದು ರಾಷ್ಟ್ರೀಯ ಪಕ್ಷ, ಸಂಸತ್ ಸದಸ್ಯರ ಜೊತೆ ಚರ್ಚಿಸಿ, ರಾಷ್ಟ್ರೀಯ ನಾಯಕರೊಂದಿಗೆ ವಿಷಯ ಮನವರಿಕೆ ಮಾಡಿಕೊಡಬೇಕು. ನಮ್ಮ ಸರ್ಕಾರ ಈ ಹಿಂದೆ ಪಂಚಮಸಾಲಿ ಸಮಾಜವನ್ನು 3ಬಿಗೆ ಸೇರಿಸುವುದನ್ನು ನೆನಪಿಸಿಕೊಳ್ಳಬಹುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲ ಸಮುದಾಯಗಳ ಒಳಿತಿಗೆ ನಾನು ಬದ್ಧನಾಗಿದ್ದೇನೆ. ಇಂತಹ ಗಂಭೀರ ವಿಷಯಗಳ ಬಗ್ಗೆ ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳದೆ, ತಜ್ಞರೊಂದಿಗೆ ಸಮಗ್ರವಾಗಿ ಚರ್ಚಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂದು ವಿವರಿಸಿದ್ದಾರೆ.