Tag: 1st Indian Woman

  • ರಾಯಲ್ ಸೊಸೈಟಿ ಫೆಲೋಗೆ ಭಾಜನರಾದ ಭಾರತದ ಮೊದಲ ಮಹಿಳಾ ವಿಜ್ಞಾನಿ

    ರಾಯಲ್ ಸೊಸೈಟಿ ಫೆಲೋಗೆ ಭಾಜನರಾದ ಭಾರತದ ಮೊದಲ ಮಹಿಳಾ ವಿಜ್ಞಾನಿ

    ಲಂಡನ್: ಇಂಗ್ಲೆಂಡ್ ಸರ್ಕಾರ ನೀಡುವ ಪ್ರತಿಷ್ಠಿತ ರಾಯಲ್ ಸೊಸೈಟಿ ಫೆಲೋ ಪ್ರಶಸ್ತಿ ಭಾರತೀಯ ವಿಜ್ಞಾನಿ ಗಗನ್‍ದೀಪ್ ಕಾಂಗ್ ಅವರಿಗೆ ಲಭಿಸಿದ್ದು, ಈ ಮೂಲಕ ಈ ಪ್ರಶಸ್ತಿ ಪಡೆದ ಭಾರತದ ಮೊದಲ ಮಹಿಳಾ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಅವರು ಭಾಜನರಾಗಿದ್ದಾರೆ.

    ವಿಜ್ಞಾನ ಕ್ಷೇತ್ರದ ಸಾಧಕರನ್ನು ಗುರುತಿಸಿ ಇಂಗ್ಲೆಂಡ್ ಸರ್ಕಾರ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸುತ್ತದೆ. ವಿಶ್ವದ ಪುರಾತನ ವಿಜ್ಞಾನ ಅಕಾಡೆಮಿ ಎನಿಸಿರುವ ಇಂಗ್ಲೆಂಡ್ ಮತ್ತು ಕಾಮನ್‍ವೆಲ್ತ್ ನ ಸ್ವತಂತ್ರ ವಿಜ್ಞಾನ ಅಕಾಡೆಮಿ ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ವಿಜ್ಞಾನ ಸಂಸ್ಥೆಗೆ 359 ವರ್ಷಗಳ ಇತಿಹಾಸವಿದೆ. ಭಾರತದ ಟ್ರಾನ್ಸ್​ಲೇಷನ್ ಹೆಲ್ತ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್‌ನ ಪ್ರಧಾನ ನಿರ್ದೇಶಕಿಯಾಗಿ ಕಾಂಗ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ ಅವರು ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಇಂಗ್ಲೆಂಡ್ ಸರ್ಕಾರ ಪ್ರತಿಷ್ಠಿತ ರಾಯಲ್ ಸೊಸೈಟಿ ಫೆಲೋ ಪ್ರಶಸ್ತಿ ನೀಡಿ ಗೌರವಿಸಿದೆ.

    ಈ ಬಾರಿ 10 ಹೊಸ ವಿದೇಶಿ ವಿಜ್ಞಾನಿಗಳು ಸೇರಿದಂತೆ 51 ಸಾಧಕರಿಗೆ ರಾಯಲ್ ಸೊಸೈಟಿ ಫೆಲೋ ಪ್ರಶಸ್ತಿ ಲಭಿಸಿದೆ. ಅದರಲ್ಲಿ ನಮ್ಮ ಭಾರತೀಯ ವಿಜ್ಞಾನಿ ಗಗನ್‍ದೀಪ್ ಕಾಂಗ್ ಕೂಡ ಒಬ್ಬರು ಎನ್ನುವುದೆ ಹೆಮ್ಮೆಯ ವಿಷಯವಾಗಿದೆ. ಅಲ್ಲದೆ ಕಾಂಗ್ ಅವರು ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವ ಭಾರತದ ಮೊದಲ ಮಹಿಳಾ ವಿಜ್ಞಾನಿಯಾಗಿದ್ದಾರೆ.

    ಟೈಫೈಡ್ ಮತ್ತು ರೊಟವೈರಸ್ ವಿರುದ್ಧ ಹೋರಾಡುವ ಲಸಿಕೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಕಾಂಗ್ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಸೋಂಕು, ಕರುಳಿನ ಕ್ರಿಯೆ, ದೈಹಿಕವಾಗಿ ಮತ್ತು ಅರಿವಿನ ಬೆಳವಣಿಗೆ, ನಡುವಣ ಸಂಬಂಧದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಅಲ್ಲದೆ ಕಾಂಗ್ ಅವರು ಭಾರತದಲ್ಲಿ ಹ್ಯೂಮನ್ ಇಮ್ಯುನೋಲಜಿ ರೀಸರ್ಚ್ ಅಭಿವೃದ್ಧಿಯ ಸಂಶೋಧನೆ ನಡೆಸುವ ಬಗ್ಗೆ ಪ್ಲಾನ್ ಇಟ್ಟುಕೊಂಟಿದ್ದಾರೆ.

    ಪಾರ್ಸಿ ಮೂಲದ ಅರ್ಡಸೇರ್ ಕರ್ಸೆಟ್ಜಿ ವಾಡಿಯಾ ಅವರಿಗೆ 1841ರಲ್ಲಿ ರಾಯಲ್ ಸೊಸೈಟಿ ಫೆಲೋ ಪ್ರಶಸ್ತಿ ಲಭಿಸಿತ್ತು. ವಾಡಿಯಾ ಹಡಗಿನ ಕಟ್ಟಡದ ಕುಟುಂಬಕ್ಕೆ ಸೇರಿದ ಇವರು, ಭಾರತೀಯ ಹಡಗು ತಯಾರಕ ಮತ್ತು ಇಂಜಿನಿಯರ್ ರಾಯಲ್ ಸೊಸೈಟಿ ಫೆಲೋ ಆಗಿ ಚುನಾಯಿತರಾದ ಮೊದಲ ಭಾರತೀಯರಾಗಿದ್ದರು.

    ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಪ್ರೊ. ಗುರುದ್ಯಾಲ್ ಬೆಸ್ರಾ, ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಮಂಜುಲ್ ಭಾರ್ಗವ, ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಶರೀರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಅನಂತ್ ಪರೇಖ್, ಸ್ಕೂಲ್ ಆಫ್ ಮ್ಯಾಥೆಮ್ಯಾಟಿಕ್ಸ್ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿಯ ಪ್ರೊ. ಅಕಾಶ್ ವೆಂಕಟೇಶ್ ಅವರು ಈ ವರ್ಷದ ರಾಯಲ್ ಸೊಸೈಟಿ ಫೆಲೊ ಪ್ರಶಸ್ತಿಗೆ ಭಾಜನರಾಗಿರುವ ಭಾರತೀಯರಾಗಿದ್ದಾರೆ.