Tag: 1999 Lok Sabha Elections

  • 1999: ಮತ್ತೆ ಪ್ರಧಾನಿಯಾದ ‘ಅಜಾತಶತ್ರು’ – 5 ವರ್ಷ ಪೂರ್ಣ ಆಡಳಿತ ನಡೆಸಿದ ಮೊದಲ ಬಿಜೆಪಿ ನಾಯಕ

    1999: ಮತ್ತೆ ಪ್ರಧಾನಿಯಾದ ‘ಅಜಾತಶತ್ರು’ – 5 ವರ್ಷ ಪೂರ್ಣ ಆಡಳಿತ ನಡೆಸಿದ ಮೊದಲ ಬಿಜೆಪಿ ನಾಯಕ

    – ಕಾರ್ಗಿಲ್ ಯುದ್ಧದ ಜಯ ಬಿಜೆಪಿಗೆ ವರವಾಯ್ತಾ?
    – ಇಟಲಿ ಮೂಲವೇ ಸೋನಿಯಾ ಕಾಂಗ್ರೆಸ್ ಅಧ್ಯಕ್ಷೆಯಾಗಲು ವಿರೋಧ; ಕಾಂಗ್ರೆಸ್ ಹಿನ್ನಡೆಗೆ ಕಾರಣವೇನು?

    ಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅಜಾತಶತ್ರು. ಮೈತ್ರಿ ಆಡಳಿತದ ಸಂದರ್ಭದಲ್ಲಿ ಗೌರವಾನ್ವಿತರಾಗಿದ್ದರು. 90 ರ ದಶಕದ ‘ಲೋಕ’ ಚುನಾವಣೆಗಳ ಸಂದರ್ಭದಲ್ಲಿ ಬಹುಮತ ಸಿಗದಿದ್ದರೂ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಇತರೆ ಪಕ್ಷಗಳೊಂದಿಗೆ ಮೈತ್ರಿಯಾಗಿ ಆಡಳಿತ ನಡೆಸಿತು. ಪ್ರತಿ ಬಾರಿ ಅಧಿಕಾರದಲ್ಲಿ ಉಳಿಯುವುದು ಶೋಚನೀಯವಾಗಿದ್ದರೂ, ಎರಡು ಬಾರಿ ಪ್ರಧಾನಿಯಾಗಿ ವಾಜಪೇಯಿ ಅಧಿಕಾರ ವಹಿಸಿಕೊಂಡರು. ಪ್ರಧಾನಿಯಾಗಿ ವಾಜಪೇಯಿ ಅವರ ಮೊದಲ ಅವಧಿಯು 13 ದಿನಗಳಷ್ಟೇ ಆಡಳಿತ ನಡೆಸಿದರು. ಅವರು 1998 ರ ಚುನಾವಣೆಯಲ್ಲಿ (Lok Sabha Elections) ಬಿಜೆಪಿಯ ಮೈತ್ರಿಕೂಟದ ಪಾಲುದಾರರೊಂದಿಗೆ ಗೆದ್ದು ಮತ್ತೊಮ್ಮೆ ಕುರ್ಚಿಯನ್ನು ಅಲಂಕರಿಸಿದರು.

    ಬಿಜೆಪಿ ಅಲ್ಪಾಯುಷಿ ಆಡಳಿತ
    ಎರಡು ವರ್ಷಗಳಲ್ಲಿ ಎರಡು ಚುನಾವಣೆಗಳು ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಹೆಚ್ಚಿನ ವಿಶ್ವಾಸವನ್ನು ಹುಟ್ಟುಹಾಕಲಿಲ್ಲ. 1998 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ (BJP) ತನ್ನ ಜನಪ್ರಿಯತೆ ಮೇಲೆ 182 ಗೆದ್ದಿತ್ತು. ನ್ಯಾಶನಲ್ ಡೆಮಾಕ್ರಟಿಕ್ ಅಲೈಯನ್ಸ್ (NDA) ಸರ್ಕಾರವನ್ನು ರಚಿಸಿತು. ಆದರೆ ಒಂದು ವರ್ಷಕ್ಕಿಂತ ಕಡಿಮೆ ಅವಧಿ ವರೆಗೆ ಅಧಿಕಾರದಲ್ಲಿ ಉಳಿಯಿತು. ಈ ಅವಧಿಯಲ್ಲಿ ದೇಶದಲ್ಲಿ ಹಲವಾರು ಘಟನಾವಳಿಗಳು ನಡೆದವು. ಆಗ ಸೋನಿಯಾ (Sonia Gandhi) ಪಕ್ಷದ ಅಧ್ಯಕ್ಷರಾಗುವುದಕ್ಕೆ ಕಾಂಗ್ರೆಸ್‌ನೊಳಗೆ ವಿರೋಧವಿತ್ತು. ಅದು ಉತ್ತುಂಗಕ್ಕೆ ಏರುತ್ತಿದ್ದಂತೆ, 1999 ರ ಮೇ ಹೊತ್ತಿಗೆ ಪವಾರ್, ಪಿಎ ಸಂಗ್ಮಾ ಮತ್ತು ತಾರಿಕ್ ಅನ್ವರ್ ಕಾಂಗ್ರೆಸ್ ಪಕ್ಷದಿಂದ ಹೊರಬಂದರು. ಇದನ್ನೂ ಓದಿ: 1998: ಮತ್ತೆ ದಿಲ್ಲಿ ಗದ್ದುಗೆಯೇರಿದ ವಾಜಪೇಯಿ – ಕರ್ನಾಟಕದಲ್ಲಿ ಬಿಜೆಪಿ ಎರಡಂಕಿಗೆ ಜಿಗಿತ

    ಸೋನಿಯಾ ಕಾಂಗ್ರೆಸ್ ಅಧ್ಯಕ್ಷರಾಗಲು ವಿರೋಧ
    1991 ರಲ್ಲಿ ರಾಜೀವ್ ಗಾಂಧಿಯವರ (Rajiv Gandhi) ಹತ್ಯೆಯಿಂದ ಕಾಂಗ್ರೆಸ್ (Congress) ಗಾಂಧಿ ಕುಟುಂಬದಿಂದ ನಾಯಕನನ್ನು ಕಳೆದುಕೊಂಡಿತು. ಇದರಿಂದ ದೇಶದಲ್ಲಿ ಪಕ್ಷದ ಪ್ರಾಬಲ್ಯವೂ ಕುಸಿಯಿತು. ಗಾಂಧಿ ಕುಟುಂಬದ ಯಾವೊಬ್ಬರೂ ಪಕ್ಷದ ಚುಕ್ಕಾಣಿ ಹಿಡಿದಿಲ್ಲದ ಕಾರಣ ಮತ್ತು ಇತರೆ ಅಂಶಗಳ ಕಾರಣ ಪಕ್ಷವು ದುರ್ಬಲವಾಗಿತ್ತು. 1990 ರ ದಶಕದ ಮಧ್ಯಭಾಗದಲ್ಲಿ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬೇಕೆಂದು ಕಾಂಗ್ರೆಸ್‌ನೊಳಗೆ ಬಲವಾದ ಒತ್ತಾಯ ಕೇಳಿಬಂತು. 1996 ರ ಚುನಾವಣೆಯಲ್ಲಿನ ಸೋಲು ಅವರ ಬೆಂಬಲಿಗರು ತಮ್ಮ ಧ್ವನಿಯನ್ನು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡಿತು. ಕಾಂಗ್ರೆಸ್‌ನ ಹಿರಿಯ ನಾಯಕತ್ವವು ಆ ಸಮಯದಲ್ಲಿ ಪಕ್ಷದ ನೇತೃತ್ವ ವಹಿಸಿದ್ದ ಸೀತಾರಾಮ್ ಕೇಸ್ರಿ ಅವರ ಸಾಮರ್ಥ್ಯವನ್ನು ಅನುಮಾನಿಸಿತು. ಅಂತಿಮವಾಗಿ 1997 ರಲ್ಲಿ ಕಾಂಗ್ರೆಸ್‌ನ ಕೋಲ್ಕತ್ತಾದ ಸರ್ವಸದಸ್ಯರ ಅಧಿವೇಶನದಲ್ಲಿ ಸೋನಿಯಾ ಪಕ್ಷಕ್ಕೆ ಸೇರಲು ದಾರಿ ಮಾಡಿಕೊಟ್ಟಿತು. ನಂತರ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷರಾದರು. ಇದಕ್ಕೆ ಅನೇಕರ ವಿರೋಧವೂ ಇತ್ತು.

    ಇಟಾಲಿಯನ್ ಮೂಲದವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಮಾಡಬಾರದು ಎಂದು ಪವಾರ್, ಸಂಗ್ಮಾ ಮತ್ತು ಅನ್ವರ್ ಅವರಂತಹ ಘಟಾನುಘಟಿ ಕಾಂಗ್ರೆಸ್ಸಿಗರು ವಿರೋಧಿಸಿದ್ದು ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಈ ಮೂವರು ಸಹ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ನಂತರ ಪಕ್ಷದ ಮೂವರು ಹಿರಿಯ ನಾಯಕರು ರಾಜೀನಾಮೆ ನೀಡಿದರು. ಇದು ಪಕ್ಷದ ಮೇಲೆ ಗಮನಾರ್ಹ ಪರಿಣಾಮ ಬೀರಿತು. ಇದನ್ನೂ ಓದಿ: 1996: ವಾಜಪೇಯಿ ಪ್ರಧಾನಿಯಾಗಿದ್ದು ಕೇವಲ 16 ದಿನ, ನಂತರ ಬಂದ್ರು ದೇವೇಗೌಡ್ರು!

    ಜಗತ್ತನ್ನು ನಿಬ್ಬೆರಗಾಗಿಸಿದ ಭಾರತದ ಪರಮಾಣ ಪರೀಕ್ಷೆ
    1998 ರ ಮೇ 11 ರಂದು ರಾಜಸ್ಥಾನದ ಪೋಖ್ರಾನ್ ಎಂಬಲ್ಲಿ ಬಾರತ ತನ್ನ 2ನೇ ಪರಮಾಣು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಆಗ ಸ್ವತಃ ಪ್ರಧಾನಿ ವಾಜಪೇಯಿ ಅವರೇ ಹೊರ ಜಗತ್ತಿಗೆ ಈ ಬಗ್ಗೆ ಮಾಹಿತಿ ನೀಡಿದರು. ಭಾರತದ ಈ ಸಾಹಸಕ್ಕೆ ಅಮೆರಿಕ ಸೇರಿದಂತೆ ಇಡೀ ಜಗತ್ತೇ ಒಂದು ಕ್ಷಣ ಆವಕ್ಕಾಯಿತು. ಭಾರತದ ಈ ನಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಪಾಕಿಸ್ತಾನ ಮತ್ತು ಚೀನಾ ಬೆದರಿಕೆಗಳಿಗೆ ಸೆಡ್ಡು ಹೊಡೆಯಲು ಈ ಪರೀಕ್ಷೆ ಅನಿವಾರ್ಯವಾಗಿತ್ತು.

    ಮೈತ್ರಿಯಲ್ಲಿ ಬಿರುಕು
    ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವನ್ನು ವಜಾಗೊಳಿಸಲು ವಾಜಪೇಯಿ ಅವರು ಸಾರಾಸಗಟಾಗಿ ನಿರಾಕರಿಸಿದ್ದರು. ಇಲ್ಲದಿದ್ದರೆ ರಾಜ್ಯದಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಅವಕಾಶ ನೀಡಬಹುದಿತ್ತು. ಜೊತೆಗೆ, ಜಯಲಲಿತಾ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಕೈಬಿಡಲು ಪ್ರಧಾನಿ ನಿರಾಕರಿಸಿದ್ದರು. ಇದು ಎಐಎಡಿಎಂಕೆ ತನ್ನ ಬೆಂಬಲವನ್ನು ಹಿಂತೆಗೆದುಕೊಳ್ಳಲು ಕಾರಣವಾಯಿತು. ಪರಿಣಾಮವಾಗಿ, ವಾಜಪೇಯಿ ನೇತೃತ್ವದ ಸರ್ಕಾರವು ಲೋಕಸಭೆಯಲ್ಲಿ ಏಕಾಂಗಿಯಾಗಿ ವಿಶ್ವಾಸಮತ ಕಳೆದುಕೊಂಡಿತು. ಈಗ ಸೋನಿಯಾ ನೇತೃತ್ವದ ಕಾಂಗ್ರೆಸ್‌ಗೆ ಅಂಕಿಅಂಶ ಸೆಳೆಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ರಾಷ್ಟ್ರಪತಿ ಕೆಆರ್ ನಾರಾಯಣನ್ ಅವರು ಸಂಸತ್ತನ್ನು ವಿಸರ್ಜಿಸಲು ಮತ್ತು ದೇಶದಲ್ಲಿ ಮತ್ತೊಮ್ಮೆ ಚುನಾವಣೆ ನಡೆಸುವಂತೆ ಒತ್ತಾಯಿಸಿದರು.

    13 ತಿಂಗಳಿಗೆ ವಾಜಪೇಯಿ ಸರ್ಕಾರ ಪತನ
    ಬಿಜೆಪಿ ನೇತೃತ್ವದ ಸರ್ಕಾರ ವಿಶ್ವಾಸಮತ ಕಳೆದುಕೊಂಡ ಹಿನ್ನೆಲೆಯಲ್ಲಿ ಪರ್ಯಾಯ ಸರ್ಕಾರ ರಚನೆಯ ಸಾಧ್ಯತೆಗಳು ಪೂರ್ಣವಾಗಿ ವಿಫಲಗೊಂಡಿತು. ಇದರಿಂದ ಕೇಂದ್ರ ಸಂಪುಟದ ಶಿಫಾರಸಿನ ಮೇಲೆ 12ನೇ ಲೋಕಸಭೆಯನ್ನು ರಾಷ್ಟ್ರಪತಿ ಅವರು ವಿಸರ್ಜಿಸಿದರು. 11ನೇ ಲೋಕಸಭೆಯು ಹದಿನೆಂಟು ತಿಂಗಳಿಗೆ ವಿಸರ್ಜನೆಯಾದರೆ, ಅಲ್ಪಾಯುಷಿ 12ನೇ ಲೋಕಸಭೆಯು 13 ತಿಂಗಳಿಗೆ ವಿಸರ್ಜನೆಗೊಂಡಿತು. ಮುಂದಿನ ಚುನಾವಣೆ ನಡೆಯುವವರೆಗೂ ವಾಜಪೇಯಿ ಹಂಗಾಮಿ ಪ್ರಧಾನಿಯಾಗಿ ಮುಂದುವರಿದರು. ಇದನ್ನೂ ಓದಿ: 1989: ಯಾವ ಪಕ್ಷಕ್ಕೂ ಬಹುಮತ ನೀಡದ ಭಾರತದ ಜನ

    ಕಾರ್ಗಿಲ್ ಯುದ್ಧ
    1999 ರ ಮೇ ತಿಂಗಳಲ್ಲಿ ಪಾಕಿಸ್ತಾನ ಸೇನೆಯು ಗಡಿ ನಿಯಂತ್ರಣ ರೇಖೆಯ ಮೂಲಕ (ಎಲ್‌ಒಸಿ) ಭಾರತದೊಳಗೆ ನುಗ್ಗಿ ಆಯಕಟ್ಟಿನ ಪರ್ವತ ಶಿಖರಗಳನ್ನು ವಶಪಡಿಸಿಕೊಂಡಿದ್ದರಿಂದ ಕಾರ್ಗಿಲ್ ಯುದ್ಧ ನಡೆಯಿತು. ಕಾರ್ಗಿಲ್ ಯುದ್ಧದಲ್ಲಿ 500 ಕ್ಕೂ ಹೆಚ್ಚು ಭಾರತೀಯ ಸೈನಿಕರು ಹುತಾತ್ಮರಾದರು. ಸುಮಾರು 11 ವಾರಗಳ ವರೆಗೆ ಯುದ್ಧ ನಡಯಿತು. 1999 ರ ಜುಲೈ 26 ರ ಹೊತ್ತಿಗೆ ಪಾಕ್ ಸೇನೆ ಆಕ್ರಮಿಸಿದ್ದ ಎಲ್ಲಾ ಶಿಖರ ಪ್ರದೇಶಗಳನ್ನು ಪುನಃ ಭಾರತೀಯ ಸೈನಿಕರು ವಶಪಡಿಸಿಕೊಂಡಿತು. ಅಲ್ಲಿಗೆ ಕಾರ್ಗಿಲ್ ಸಂಘರ್ಷ ಕೊನೆಗೊಂಡಿತು. ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯಶಾಲಿಯಾಯಿತು. ಎನ್‌ಡಿಎ ಮೈತ್ರಿಕೂಟದ ವಾಜಪೇಯಿ ಸರ್ಕಾರ ಯುದ್ಧದ ಯಶಸ್ಸಿನೊಂದಿಗೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು. 1999 ರ ಸಾರ್ವತ್ರಿಕ ಚುನಾವಣೆ ಬರುವ ಹೊತ್ತಿಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಯುದ್ಧದ ಗೆಲುವು ಪ್ರಮುಖ ವಿಷಯವಾಯಿತು.

    ಒಂದು ತಿಂಗಳ ಚುನಾವಣೆ
    ದೇಶದ 13ನೇ ಸಾರ್ವತ್ರಿಕ ಚುನಾವಣೆಯು ಸೆ.5 ರಿಂದ ಅ.6 ರ ವರೆಗೆ ನಡೆಯಿತು. 32 ರಾಜ್ಯಗಳಿಗೆ 32 ದಿನಗಳ ಕಾಲ ಮತದಾನವಾಯಿತು.

    7 ರಾಷ್ಟ್ರೀಯ ಪಕ್ಷಗಳು ಮತ್ತು 40 ಪ್ರಾದೇಶಿಕ ಪಕ್ಷಗಳು ಸೇರಿ 169 ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದವು.

    ಕ್ಷೇತ್ರಗಳು: 543

    ಮತದಾರರ ವಿವರ
    ಒಟ್ಟು ಮತದಾರರು: 61,95,36,847
    ಪುರುಷರು: 32,38,13,667
    ಮಹಿಳೆಯರು: 29,57,23,180

    ಚಲಾವಣೆಯಾದ ಮತ: 37,16,69,104
    ಮತದಾನ ಪ್ರಮಾಣ: 59.99%

    ಒಟ್ಟು ಅಭ್ಯರ್ಥಿಗಳು: 4,648
    ಮಹಿಳಾ ಅಭ್ಯರ್ಥಿಗಳು: 284 (49 ಗೆಲುವು)

    ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
    ಬಿಜೆಪಿ – 182
    ಕಾಂಗ್ರೆಸ್ – 114
    ಸಿಪಿಎಂ – 33
    ಜೆಡಿ (ಯು) – 21
    ಬಿಎಸ್‌ಪಿ – 14
    ಪಕ್ಷೇತರ – 6
    ಇತರೆ – 173

    ಅತಂತ್ರ ಫಲಿತಾಂಶ
    ಈ ಚುನಾವಣೆಯಲ್ಲೂ ಯಾವುದೇ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಬಿಜೆಪಿಯು 182 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಆದರೆ ಅದರ ಮತಗಳ ಪ್ರಮಾಣವು ಶೇಕಡಾ 23.8 ಕ್ಕೆ ಸ್ವಲ್ಪ ಕಡಿಮೆಯಾಗಿದೆ. 1998 ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಿದ ಕಾರಣ ಹೀಗಾಗಿತ್ತು. ಪಕ್ಷದ ಟೀಕಾಕಾರರು ಸಹ ಇದನ್ನೇ ಹೈಲೈಟ್ ಮಾಡಲು ಪ್ರಯತ್ನಿಸಿದರು. ಇದನ್ನೂ ಓದಿ: 1984: ಇಂದಿರಾ ಗಾಂಧಿ ಹತ್ಯೆ ಅನುಕಂಪದ ಅಲೆಯಲ್ಲಿ ಕಾಂಗ್ರೆಸ್‌ಗೆ ‘400+ ಪಾರ್’

    ಟಿಡಿಪಿ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ
    1999 ರ ಲೋಕಸಭಾ ಚುನಾವಣೆಯು ದೇಶದ ರಾಜಕೀಯದಲ್ಲಿ ಒಂದು ಮಹತ್ವದ ತಿರುವು. ಎನ್‌ಡಿಎ ಛತ್ರಿಯಡಿಯಲ್ಲಿ ರಾಜಕೀಯ ಪಕ್ಷಗಳು ಒಗ್ಗೂಡಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾದವು. ವಾಜಪೇಯಿ ಅವರು ಮತ್ತೊಮ್ಮೆ ಸರ್ವಾನುಮತದಿಂದ ಪ್ರಧಾನಿಯಾಗಿ ಆಯ್ಕೆಯಾದರು. ಪೂರ್ಣ ಐದು ವರ್ಷಗಳ ವರೆಗೆ ಅಧಿಕಾರ ನಡೆಸಿದರು. ಹಲವು ವರ್ಷಗಳ ರಾಜಕೀಯ ಅನಿರೀಕ್ಷಿತತೆಯ ನಂತರ ಭಾರತಕ್ಕೆ ಸ್ಥಿರತೆ ಒದಗಿಸಿದರು.

    ಕರ್ನಾಟಕ ಫಲಿತಾಂಶ ಏನಾಗಿತ್ತು?
    ಕಾಂಗ್ರೆಸ್ – 18
    ಬಿಜೆಪಿ – 7
    ಜೆಡಿ(ಯು) – 3

    ಒಂದಂಕಿಗೆ ಕುಸಿದ ಬಿಜೆಪಿ
    1998 ರ ಚುನಾವಣೆಯಲ್ಲಿ ಎರಡಂಕಿಗೆ ಜಿಗಿದು ದಾಖಲೆ ಬರೆದಿದ್ದ ಬಿಜೆಪಿ, 1999 ರ ಚುನಾವಣೆಯಲ್ಲಿ ಮತ್ತೆ ಕುಸಿತ ಕಂಡಿತು. ಈ ಚುನಾವಣೆಯಲ್ಲಿ ರಾಜ್ಯದಲ್ಲಿ 7 ಸ್ಥಾನಗಳನ್ನಷ್ಟೇ ಗೆಲ್ಲಲು ಬಿಜೆಪಿ ಸಾಧ್ಯವಾಯಿತು. ಕಾಂಗ್ರೆಸ್ ಮತ್ತೆ 18 ಸ್ಥಾನಗಳನ್ನು ಗೆದ್ದಿತು.