Tag: 16th Finance Commission

  • 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಆದ ಅನ್ಯಾಯ ಸರಿಪಡಿಸಿ: ಸಿದ್ದರಾಮಯ್ಯ

    15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಆದ ಅನ್ಯಾಯ ಸರಿಪಡಿಸಿ: ಸಿದ್ದರಾಮಯ್ಯ

    ಬೆಂಗಳೂರು: 15ನೇ ಹಣಕಾಸು ಆಯೋಗದಲ್ಲಿ (15th Finance Commission) ರಾಜ್ಯಕ್ಕೆ ಆದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ (16th Finance Commission) 16ನೇ ಹಣಕಾಸು ಆಯೋಗಕ್ಕೆ ಮನವಿ ಮಾಡಿದ್ದಾರೆ. ಖಾಸಗಿ ಹೊಟೇಲ್‌ನಲ್ಲಿ ನಡೆದ 16ನೇ ಹಣಕಾಸು ಆಯೋಗದ (16th Finance Commission) ಸಭೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಆಯೋಗಕ್ಕೆ ತಿಳಿಸಿದರು. ಜೊತೆಗೆ 15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಆದ ನಷ್ಟವನ್ನು ಅಂಕಿಅಂಶಗಳ ಸಮೇತ ಆಯೋಗದ ಮುಂದಿಟ್ಟು ರಾಜ್ಯಕ್ಕೆ ನ್ಯಾಯ ಕೊಡುವಂತೆ  ಮನವಿ ಮಾಡಿದರು.

    ಭಾರತದ ಅಭಿವೃದ್ಧಿಗೆ ಕರ್ನಾಟಕ ಪ್ರಧಾನ ಪಾತ್ರ ವಹಿಸುತ್ತಿದೆ. ಒಟ್ಟು ಜನಸಂಖ್ಯೆಯ ಶೇ.5ರಷ್ಟಿದ್ದರೂ ರಾಷ್ಟ್ರೀಯ ಜಿಡಿಪಿಗೆ ಕರ್ನಾಟಕ ಅಂದಾಜು ಶೇ.8.4 ರಷ್ಟು ಪಾಲು ನೀಡುತ್ತಿದೆ. ಇಡೀ ದೇಶದಲ್ಲೇ ಜಿಡಿಪಿ ದೇಣಿಗೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಪ್ರತಿ ವರ್ಷ ದೇಶದ ಒಟ್ಟು ತೆರಿಗೆ ಆದಾಯಕ್ಕೆ ಕರ್ನಾಟಕ ಸುಮಾರು ರೂ.4 ಲಕ್ಷ ಕೋಟಿಯಷ್ಟು ಪಾಲು ನೀಡುತ್ತಿದ್ದರೂ ರಾಜ್ಯಕ್ಕೆ ತೆರಿಗೆ ಪಾಲಿನ ರೂಪದಲ್ಲಿ 45ಸಾವಿರ ಕೋಟಿ ರೂ. ಹಾಗೂ ಅನುದಾನದ ರೂಪದಲ್ಲಿ 15 ಸಾವಿರ ಕೋಟಿ ರೂ. ದೊರಕುತ್ತಿದೆ. ಅಂದರೆ ಕರ್ನಾಟಕ ನೀಡುವ ಪ್ರತಿ ಒಂದು ರೂಪಾಯಿಗೆ ರಾಜ್ಯ ಕೇವಲ 15 ಪೈಸೆಯನ್ನು ಮಾತ್ರ ಹಿಂದಕ್ಕೆ ಪಡೆಯುತ್ತಿದೆ ಎಂದು ಅವರು ಆರೋಪಿಸಿದರು.

    15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನೀಡುವ ಪಾಲು 4.713 ಯಿಂದ 3.647 ಗೆ ತಗ್ಗಿದೆ. ಇದರಿಂದಾಗಿ 2021-26ರ 5 ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ರೂ.68,275 ಕೋಟಿ ರೂ. ನಷ್ಟ ಉಂಟಾಗಿದೆ. ಕರ್ನಾಟಕಕ್ಕೆ ದೊರೆತ ಪಾಲಿನಲ್ಲಿ ಉಂಟಾದ ಇಷ್ಟು ದೊಡ್ಡ ಮೊತ್ತದ ಕಡಿತದ ಬಗ್ಗೆ ಹಣಕಾಸು ಆಯೋಗಕ್ಕೆ ಅರಿವಿದ್ದು, ರಾಜ್ಯಕ್ಕೆ 11,495 ಕೋಟಿ ರೂ. ನಿರ್ದಿಷ್ಟ ಅನುದಾನ ಒದಗಿಸಲು ಶಿಫಾರಸ್ಸು ಮಾಡಿದೆ. ಆದರೆ ಕೇಂದ್ರ ಸರ್ಕಾರ ಆಯೋಗದ ಈ ಶಿಫಾರಸ್ಸನ್ನು ಒಪ್ಪಿಕೊಂಡಿಲ್ಲ. ಆದ್ದರಿಂದ ಕರ್ನಾಟಕ ಈ ಅನುದಾನ ಪಡೆಯುವಲ್ಲಿಯೂ ವಂಚಿತವಾಗಿದೆ. ಈ ಎಲ್ಲಾ ಕಾರಣಗಳಿಂದ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು 79770ಕೋಟಿ ರೂ. ನಷ್ಟ ಉಂಟಾಗಿದೆ ಅಂತ ಅಂಕಿಅಂಶಗಳನ್ನ ಆಯೋಗದ ಮುಂದಿಟ್ಟರು.

    15ನೇ ಹಣಕಾಸು ಆಯೋಗದ ಅವಧಿಯಲ್ಲಿ ಇತರ ರಾಜ್ಯಗಳಿಗೆ ಪ್ರತಿ ವರ್ಷ 35 ಸಾವಿರ ರೂ. ನಿಂದ 40 ಸಾವಿರ ಕೋಟಿ ರೂ. ಇತರ ರಾಜ್ಯಗಳಿಗೆ ಆದಾಯ ವರ್ಗಾವಣೆ ಮಾಡಿರುವುದನ್ನು ಕರ್ನಾಟಕ ಗಮನಿಸಿದೆ. ಇದು ಜಿಎಸ್‌ಡಿಪಿಯ ಶೇ.1.8ರಷ್ಟಿದೆ. ರಾಜ್ಯದಿಂದ ಹೊರಗೆ ವರ್ಗಾವಣೆಯಾಗುತ್ತಿರುವ ಈ ಮೊತ್ತ ರಾಜ್ಯದ ಒಟ್ಟು ಆದಾಯದ ಶೇ.50ರಿಂದ 55ರಷ್ಟಾಗಿದೆ. ಈ ರೀತಿ ಪಾಲಿನ ಪರಿಗಣನೆಯಲ್ಲಿನ ಅಸಮತೋಲನದಿಂದಾಗಿ ಆರ್ಥಿಕವಾಗಿ ಹಾಗೂ ಜನಸಂಖ್ಯೆ ನಿಯಂತ್ರಣ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಕರ್ನಾಟಕ ಹಾಗೂ ಈ ರೀತಿಯ ರಾಜ್ಯಗಳು ದಂಡ ಎದುರಿಸುವಂತಾಗಿದೆ. ಸೆಸ್‌ ಮತ್ತು ಸರ್ಚಾರ್ಜ್‌ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೊಳ್ಳುವ ಬಾಬ್ತಿನಲ್ಲಿ ಬರುವುದಿಲ್ಲ. ವರ್ಷದಿಂದ ವರ್ಷಕ್ಕೆ ಕೇಂದ್ರ ಸರ್ಕಾರ ಸೆಸ್‌ ಮತ್ತು ಸರ್ಚಾರ್ಜ್‌ ಮೇಲಿನ ಅವಲಂಬನೆಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಬಂದಿದೆ. ಇದರಿಂದಾಗಿ ಒಟ್ಟು ತೆರಿಗೆ ಆದಾಯಕ್ಕೆ ಅನುಗುಣವಾಗಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಹಂಚಿಕೊಳ್ಳಬಹುದಾದ ಬಾಬ್ತಿನ ಪ್ರಮಾಣ ಹೆಚ್ಚಾಗುತ್ತಿಲ್ಲ. ಇದರಿಂದಾಗಿ ರಾಜ್ಯಗಳಿಗೆ ಬಹಳಷ್ಟು ನಷ್ಟ ಉಂಟಾಗುತ್ತಿದೆ ಅಂತ ಆಯೋಗದ ಗಮನಕ್ಕೆ ತಂದರು.

    ಹಂಚಿಕೊಳ್ಳಬಹುದಾದ ಬಾಬ್ತಿನಲ್ಲಿ ಸೆಸ್‌ ಮತ್ತು ಸರ್ಚಾರ್ಜ್ ನಿಂದಾಗಿ ರಾಜ್ಯಕ್ಕೆ 2017-18 ರಿಂದ 2024-25 ನೇ ಅವಧಿಯಲ್ಲಿ 53,359 ಕೋಟಿ ರೂ. ನಷ್ಟ ಉಂಟಾಗಿದೆ. ಕೇಂದ್ರ ಸರ್ಕಾರದ ಪಾಲಿನಲ್ಲಿ ಇಷ್ಟೆಲ್ಲಾ ಕಡಿತ ಉಂಟಾಗಿದ್ದರೂ, ರಾಜ್ಯ ಸರ್ಕಾರ ತಾನು ನುಡಿದಂತೆ ಐದು ಗ್ಯಾರಂಟಿಯಂತಹ ಪ್ರಮುಖ ಯೋಜನೆಗಳ ಜಾರಿಯಲ್ಲಿ ಬದ್ಧತೆಯನ್ನು ತೋರಿಸಿದೆ. ಬಂಡವಾಳ ವೆಚ್ಚದಲ್ಲಿ ಸಹ ನಾವು ಯಾವುದೇ ಹೊಂದಾಣಿಕೆಯನ್ನು ಮಾಡಿಲ್ಲ. ಬಂಡವಾಳ ವೆಚ್ಚದಲ್ಲಿ ಹೆಚ್ಚಳ ಉಂಟಾಗಿದ್ದರೂ, ಕರ್ನಾಟಕ 2013-14 ರ ಅವಧಿಯಿಂದಲೂ ಬಂಡವಾಳ ವೆಚ್ಚದ ಮೊತ್ತವನ್ನು ತನ್ನ ಜಿಎಸ್‌ಡಿಪಿಯ ಶೇ.2ರ ಮಿತಿಯಲ್ಲಿಯೇ ನಿರ್ವಹಿಸಿದೆ. ಬಂಡವಾಳ ವೆಚ್ಚದಲ್ಲಿ ರಾಜ್ಯ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಆದರೆ ಕೇಂದ್ರ ಹಣಕಾಸು ಪಾಲಿನಲ್ಲಿನ ಕಡಿತದಿಂದಾಗಿ ರಾಜ್ಯಗಳಿಗೆ ಭೌತಿಕ ಮತ್ತು ಮಾನವ ಮೂಲಸೌಲಭ್ಯಗಳ ಮೇಲೆ ಹೂಡಿಕೆಗೆ ಅನೇಕ ಮಿತಿಗಳು ಎದುರಾಗಿವೆ. ಈ ವಿಷಯವನ್ನು ಪರಿಹರಿಸಬೇಕಾಗಿದೆ ಎಂದು ಮನವಿ ಮಾಡಿದರು.

    ಆರ್ಥಿಕವಾಗಿ ಬಲಿಷ್ಠವಾಗಿರುವ ರಾಜ್ಯಗಳು ಇತರ ಬಡ ರಾಜ್ಯಗಳಿಗೆ ನೆರವಾಗಲು ಬದ್ಧವಾಗಿವೆ. ಆದರೆ ಇದು ತಮ್ಮದೇ ನಾಡಿನ ಜನರನ್ನು ಅಥವಾ ಆರ್ಥಿಕ ದಕ್ಷತೆಯನ್ನು ಸಂಕಷ್ಟಕ್ಕೆ ಸಿಲುಕಿಸಬಾರದು. ರಾಜ್ಯಗಳು ಗಳಿಸುವ ಸಂಪನ್ಮೂಲದ ಒಂದು ದೊಡ್ಡ ಪಾಲು ಅವುಗಳ ನಡುವೆಯೇ ಹಂಚಿಕೆಯಾಗಬೇಕು. ರಾಜ್ಯವು ಸಹ ಪ್ರಾದೇಶಿಕ ಅಸಮಾನತೆಯನ್ನು ಎದುರಿಸುತ್ತಿವೆ. ಉದಾಹರಣೆಗೆ ಕಲ್ಯಾಣ ಕರ್ನಾಟಕದ ಪ್ರದೇಶ. ಇದರೊಂದಿಗೆ ನಗರೀಕರಣದ ಸವಾಲುಗಳನ್ನು ಎದುರಿಸುತ್ತಿವೆ. ಈ ಕುರಿತು ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಮನವಿ ಮಾಡಿದರು.

  • ವಿತ್ತೀಯ ಹಂಚಿಕೆ ವಿಷಯಗಳಲ್ಲಿ 16ನೇ ಹಣಕಾಸು ಆಯೋಗಕ್ಕೆ ಪ್ರಮುಖ ಶಿಫಾರಸು ಮಾಡಿದ ರಾಜ್ಯ ಸರ್ಕಾರ

    ವಿತ್ತೀಯ ಹಂಚಿಕೆ ವಿಷಯಗಳಲ್ಲಿ 16ನೇ ಹಣಕಾಸು ಆಯೋಗಕ್ಕೆ ಪ್ರಮುಖ ಶಿಫಾರಸು ಮಾಡಿದ ರಾಜ್ಯ ಸರ್ಕಾರ

    ಬೆಂಗಳೂರು: 16ನೇ ಹಣಕಾಸು ಆಯೋಗಕ್ಕೆ ವಿತ್ತೀಯ ಹಂಚಿಕೆ ವಿಷಯಗಳಲ್ಲಿ ರಾಜ್ಯ ಸರ್ಕಾರ ಹಲವು ಶಿಫಾರಸು ಮಾಡಿದೆ. 16ನೇ ಹಣಕಾಸು ಆಯೋಗದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಆಯೋಗದ ಅಧ್ಯಕ್ಷರ ಮುಂದೆ ಶಿಫಾರಸುಗಳನ್ನು ಮಂಡನೆ ಮಾಡಿದರು.

    ಹಂಚಿಕೆ ಮಾಡುವ ಬಾಬ್ತಿನಲ್ಲಿ (central divisible pool) ಕನಿಷ್ಟ ಶೇ.50ರಷ್ಟು ಪಾಲನ್ನು ಸಂಬಂಧಿಸಿದ ರಾಜ್ಯಗಳಿಗೆ ನಿಗದಿಪಡಿಸಬೇಕು. ಸೆಸ್‌ ಮತ್ತು ಸರ್ಚಾರ್ಜ್‌ ಒಟ್ಟು ತೆರಿಗೆ ಆದಾಯದ ಶೇ.5ಕ್ಕೆ ಮಿತಿಗೊಳಿಸಬೇಕು. ಇದಕ್ಕಿಂತ ಹೆಚ್ಚಾಗುವ ಯಾವುದೇ ಮೊತ್ತವನ್ನು ಹಂಚಿಕೊಳ್ಳುವ ಬಾಬ್ತಿಗೆ ಪರಿಗಣಿಸಬೇಕು. ಇದನ್ನೂ ಓದಿ: 16th Finance Commission | ಬೆಂಗಳೂರು ಅಭಿವೃದ್ಧಿಗೆ 27,000 ಕೋಟಿ ಅನುದಾನ ಬೇಡಿಕೆ ಇಟ್ಟ ಸಿಎಂ

    ಕೇಂದ್ರ ಸರ್ಕಾರದ ತೆರಿಗೇತರ ಆದಾಯವನ್ನು ಹಂಚಿಕೊಳ್ಳುವ ತೆರಿಗೆ ಬಾಬ್ತಿನ ವ್ಯಾಪ್ತಿಗೆ ತರುವ ಕುರಿತು ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರಬೇಕು. ಪಾಲಿನ ಹಂಚಿಕೆ ಸಂದರ್ಭದಲ್ಲಿ ದಕ್ಷತೆ ಮತ್ತು ನಿರ್ವಹಣೆಗೆ ಸೂಕ್ತ ಪುರಸ್ಕಾರ ನೀಡುವ ಬಗ್ಗೆ ಆಯೋಗ ದಿಟ್ಟ ನಿಲುವು ತಳೆಯಬೇಕು ಎಂದು ಸಿಎಂ ಆಯೋಗದ ಶಿಫಾರಸು ಮಾಡಿದರು.

  • 16th Finance Commission | ಬೆಂಗಳೂರು ಅಭಿವೃದ್ಧಿಗೆ 27,000 ಕೋಟಿ ಅನುದಾನ ಬೇಡಿಕೆ ಇಟ್ಟ ಸಿಎಂ

    16th Finance Commission | ಬೆಂಗಳೂರು ಅಭಿವೃದ್ಧಿಗೆ 27,000 ಕೋಟಿ ಅನುದಾನ ಬೇಡಿಕೆ ಇಟ್ಟ ಸಿಎಂ

    ಬೆಂಗಳೂರು: 5 ವರ್ಷಗಳ ಅವಧಿಗೆ ನಗರದ (Bengaluru) ಅಭಿವೃದ್ಧಿಗಾಗಿ 16ನೇ ಹಣಕಾಸು ಆಯೋಗದ (16th Finance Commission) ಮುಂದೆ ರಾಜ್ಯ ಸರ್ಕಾರ 27 ಸಾವಿರ ಕೋಟಿ ರೂ. ಅನುದಾನ ಕೇಳಿದೆ.

    ರಾಜ್ಯಕ್ಕೆ ಆಗಮಿಸಿರುವ 16ನೇ ಹಣಕಾಸು ಆಯೋಗದ ಮುಂದೆ ತಮ್ಮ ಬೇಡಿಕೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ಬೆಂಗಳೂರಿಗೆ 27 ಸಾವಿರ ಕೋಟಿ ರೂ. ಅನುದಾನ ಕೊಡುವಂತೆ ಮನವಿ ಮಾಡಿದರು. ಬೆಂಗಳೂರಿಗೆ ಮುಂದಿನ 5 ವರ್ಷಗಳಲ್ಲಿ 55,586 ಕೋಟಿ ರೂ. ಅನುದಾನ ಅವಶ್ಯಕತೆ ಇದೆ. ಇದರಲ್ಲಿ 27,799 ಕೋಟಿ ರೂ. ಅನುದಾನ ಕೊಡುವಂತೆ ಹಣಕಾಸು ಆಯೋಗಕ್ಕೆ ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಜೀವನ ಸಂಗಾತಿಯನ್ನು ಪರಿಚಯಿಸಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ರಂಜನಿ ರಾಘವನ್

    ಕಲ್ಯಾಣ ಕರ್ನಾಟಕದ ಸಮಾನ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 25 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಆಯೋಗದಿಂದ 25 ಸಾವಿರ ಕೋಟಿ ರೂ. ಹೊಂದಾಣಿಕೆ ಅನುದಾನ ಬೇಕಿದೆ. ಇದರ ಜೊತೆಗೆ ಪಶ್ಚಿಮ ಘಟ್ಟಗಳ ಅತ್ಯಂತ ದುರ್ಬಲ ಪ್ರದೇಶಗಳಲ್ಲಿ ಪರಿಣಾಮಕಾರಿ ವಿಪತ್ತು ತಗ್ಗಿಸುವಿಕೆ ಮತ್ತು ಸಕಾಲ ಪರಿಹಾರ ಮತ್ತು ಪುನರ್ವಸತಿ ಕ್ರಮಗಳಿಗೆ 10 ಸಾವಿರ ಕೋಟಿ ರೂ. ಅನುದಾನದ ಬೇಡಿಕೆಯನ್ನ ಸಿಎಂ ಹಣಕಾಸು ಆಯೋಗದ ಮುಂದೆ ಇಟ್ಟಿದ್ದಾರೆ. ಇದನ್ನೂ ಓದಿ: ಹಿಂಡಲಗಾ ಜೈಲಿನ ಅತಿ ಭದ್ರತಾ ವಿಭಾಗಕ್ಕೆ ಪ್ರದೂಷ್ ಶಿಫ್ಟ್: ವಿ.ಕೃಷ್ಣಮೂರ್ತಿ

  • ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸುವ ವಿಶ್ವಾಸವಿದೆ: ಸಿದ್ದರಾಮಯ್ಯ

    ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸುವ ವಿಶ್ವಾಸವಿದೆ: ಸಿದ್ದರಾಮಯ್ಯ

    – ತೆರಿಗೆ ಹಂಚಿಕೆಯನ್ನು ಶೇ.50ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಲಾಗುವುದು ಎಂದ ಸಿಎಂ

    ಬೆಂಗಳೂರು: 16ನೇ ಕೇಂದ್ರ ಹಣಕಾಸಿನ ಆಯೋಗದವರೊಂದಿಗೆ (16th Finance Commission) ಗುರುವಾರ (ಆ.29) ಸಭೆ ನಡೆಯಲಿದ್ದು, 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದರು.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ವಿವರಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: 12 ನೂತನ ಕೈಗಾರಿಕಾ ಸ್ಮಾರ್ಟ್ ಸಿಟಿ, 10 ಲಕ್ಷ ಹೊಸ ಉದ್ಯೋಗ ಸೃಷ್ಟಿ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ

    ಕರ್ನಾಟಕ, ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ರಾಜ್ಯ ಎಂದು ಮನದಟ್ಟು ಮಾಡಿ, ತೆರಿಗೆ ಹಂಚಿಕೆಯನ್ನು ಶೇ.41 ರಿಂದ ಶೇ.50ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಲಾಗುವುದು. ಸೆಸ್ ಮತ್ತು ಸರ್ಚಾಜ್ ಗಳಲ್ಲಿ ರಾಜ್ಯಗಳಿಗೂ ಪಾಲು ನೀಡಬೇಕು. ಸೆಸ್ ಮತ್ತು ಸರ್ಚಾಜುಗಳು ಹೆಚ್ಚುತ್ತಿದ್ದು, ರಾಜ್ಯಕ್ಕೆ ತೆರಿಗೆ ಹಂಚಿಕೆ ಕಡಿಮೆಯಾಗುತ್ತಿರುವುದನ್ನು ಹಣಕಾಸು ಆಯೋಗದ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ: IPL 2025 | ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ನೂತನ ಮೆಂಟರ್‌ ಆಗಿ ಜಹೀರ್‌ ಖಾನ್‌ ನೇಮಕ