Tag: 13th year Death anniversary

  • ಅಪ್ಪಾಜಿಯ ಜೊತೆಗಿನ ಅಪರೂಪದ ನೆನಪು ಹಂಚಿಕೊಂಡ ಪವರ್ ಸ್ಟಾರ್

    ಅಪ್ಪಾಜಿಯ ಜೊತೆಗಿನ ಅಪರೂಪದ ನೆನಪು ಹಂಚಿಕೊಂಡ ಪವರ್ ಸ್ಟಾರ್

    ಬೆಂಗಳೂರು: ಡಾ. ರಾಜ್‍ಕುಮಾರ್ ಅವರ 13ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ತಂದೆಯ ಸಮಾಧಿಗೆ ನಮನ ಸಲ್ಲಿಸಿ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಪ್ಪಾಜಿ ನೆನಪನ್ನು ಹಂಚಿಕೊಂಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತಿಗೆ ಅಪ್ಪಾಜಿ ಅವರ 13ನೇ ವರ್ಷದ ಪುಣ್ಯ ಸ್ಮರಣೆ. ನಮಗೂ ನಮ್ಮ ತಂದೆ ಒಳ್ಳೆಯ ಜೀವನ ಕೊಟ್ಟಿದ್ದಾರೆ. ಅಪ್ಪನ ಅಂಗಿ ಅಂದ್ರೆ ನನಗೆ ಬಿಳಿ ಬಣ್ಣ ನೆನಪಾಗುತ್ತದೆ. ಅವರು ವೈಟ್ ಬಿಟ್ಟು ಬೇರೆ ಬಣ್ಣದ ಬಟ್ಟೆ ಹಾಕಿದ್ದು ಕಡಿಮೆ. ನಾನು ಅಪ್ಪಾಜಿಗೆ ಬಟ್ಟೆ ಗಿಫ್ಟ್ ಮಾಡಿಲ್ಲ. ಟಿವಿ, ಶೂ, ಸೋಫಾ ಮಾತ್ರ ಗಿಫ್ಟ್ ಕೊಟ್ಟಿದ್ದೆ. ಅಲ್ಲದೆ ಜಾಸ್ತಿ ಬೆಲೆ ಇರುವ ವಸ್ತು ಕೊಟ್ಟರೆ ಅವರು ಬಳಸುತ್ತಿರಲಿಲ್ಲ. ಅದಕ್ಕೆ ಬೆಲೆ ಕಡಿಮೆ ಮಾಡಲು ಪ್ರೈಸ್ ಟ್ಯಾಗ್‍ನಲ್ಲಿ ಒಂದು ಝೀರೊ ಅಳಿಸಿ ಕೊಡುತ್ತಿದ್ದೆ ಎಂದು ತಂದೆಯ ನೆನಪನ್ನು ಹಂಚಿಕೊಂಡರು.

    ನಂತರ ರಾಜ್‍ಕುಮಾರ್ ಅವರ ಫಿಟ್‍ನೆಸ್ ಬಗ್ಗೆ ಮಾತನಾಡುತ್ತಾ, ಅಪ್ಪಾಜಿ ದಿನಕ್ಕೆ 40, 50 ಬಾರಿ ಮರದ ಡಂಬಲ್ಸ್ ನಲ್ಲಿ ಹೊಡೆಯುತ್ತಿದ್ದರು. ಅದೇ ನನಗೆ ಫಿಟ್‍ನೆಸ್ ಕಾಪಾಡಲು ಸ್ಫೂರ್ತಿ ಎಂದರು. ಬಳಿಕ ನಮ್ಮದು ವಜ್ರೇಶ್ವರಿ ಪ್ರೊಡಕ್ಷನ್ ಹೌಸ್ ಇದೆ. ಅದರಲ್ಲಿ ಸುಮಾರು 80ರಿಂದ 90 ಸಿನಿಮಾ ನಿರ್ಮಾಣವಾಗಿದೆ. ಪಿ.ಆರ್.ಕೆ ಪ್ರೊಡಕ್ಷನ್ ಹೌಸ್ ಒಂದು ಹೊಸ ಹೆಸರು ಅಷ್ಟೇ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.

    ಅಪ್ಪಾಜಿ ಬಯೋಪಿಕ್ ಮಾಡುವುದು ತುಂಬಾ ಕಷ್ಟ. ಸಾಧ್ಯವಾದ್ರೆ ಮುಂದೆ ನೊಡೋಣ. ಅಲ್ಲದೆ ಒಳ್ಳೆಯ ಚಿತ್ರ ಬಂದರೆ ಮೂರು ಜನ ಸಹೋದರರು ಒಟ್ಟಾಗಿ ಚಿತ್ರ ಮಾಡ್ತೀವಿ ಎಂದು ತಿಳಿಸಿದರು. ಆರಾಧ್ಯ ದೈವ ಮುತ್ತುರಾಜ ಬಳಗದಿಂದ ವೀಲ್ ಚೇರ್ ವಿತರಣೆ ಮಾಡಿರುವುದಕ್ಕೆ ಧನ್ಯವಾದಗಳು. ದೈಹಿಕ ಸಮರ್ಥರಲ್ಲದವರಿಗೆ ಇದು ಬಳಕೆ ಆಗಲಿದೆ ಎಂದು ಹೇಳಿದರು.

    ಅಮ್ಮನಿಗೆ ಮೊದಲು ನಮಸ್ಕಾರ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ತಾಯಿ ಮೊದಲು ಅದೇ ದಾರಿಯಲ್ಲಿ ಬಂದೆ ಅದಕ್ಕೆ ಮೊದಲು ಅವರಿಗೆ ನಮಸ್ಕಾರ ಮಾಡಿದೆ ಅಷ್ಟೇ ಎಂದರು. ನಾನು ಕಪ್ಪು ಬಣ್ಣದ ಬಟ್ಟೆ ಜಾಸ್ತಿ ಹಾಕುತ್ತೇನೆ ಅಂತ ಅಪ್ಪ, ಅಮ್ಮ ಹೇಳ್ತಾ ಇದ್ದರು. ಆದ್ರೆ ಅವರಿಗೆ ಇಷ್ಟ ಅಂತಲೇ ಇಂದು ವೈಟ್ ಹಾಕಿದ್ದೇನೆ ಎಂದು ತಂದೆ ತಾಯಿಯನ್ನು ಪುನೀತ್ ನೆನಪಿಸಿಕೊಂಡರು.