Tag: 112

  • ಇನ್ಮುಂದೆ ರಾಜ್ಯಾದ್ಯಂತ ತುರ್ತು ಸೇವೆಗೆ ಒಂದೇ ನಂಬರ್

    ಇನ್ಮುಂದೆ ರಾಜ್ಯಾದ್ಯಂತ ತುರ್ತು ಸೇವೆಗೆ ಒಂದೇ ನಂಬರ್

    ಬೆಂಗಳೂರು: ಇನ್ಮುಂದೆ ರಾಜ್ಯಾದ್ಯಂತ ಎಲ್ಲ ತುರ್ತು ಸೇವೆಗಳಿಗಾಗಿ ಒಂದೇ ನಂಬರ್‌ಗೆ ಕರೆ ಮಾಡಬಹುದು.

    ಕೇರಳ ಮಾದರಿಯ ಒನ್‍ಒನ್‍ಟೂ (112) ವ್ಯವಸ್ಥೆಯನ್ನು ಕರ್ನಾಟಕದಲ್ಲೂ ಜಾರಿಗೆ ತರಲಾಗಿದೆ. ಈ ಮೂಲಕ ತುರ್ತು ಸೇವೆಗಳಾದ ಪೊಲೀಸ್, ಅಗ್ನಿಶಾಮಕ, ಅಂಬುಲೆನ್ಸ್ ಗಾಗಿ ಒಂದೇ ನಂಬರ್‌ಗೆ ಮಾಡಬಹುದು. ಈ ಸೇವೆಗೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದರು.

    ಕರ್ನಾಟಕದ ಪ್ರತಿ ಜಿಲ್ಲಾ ಕೇಂದ್ರಕ್ಕೂ ಒಂದರಂತೆ ಒಟ್ಟು 32 ಒನ್‍ಒನ್‍ಟೂ ವಾಹನಕ್ಕೆ ಚಾಲನೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್ ರಾಜು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸ್ಥಳೀಯ ಶಾಸಕ ಎನ್ ಎ ಹ್ಯಾರೀಸ್ ಉಪಸ್ಥಿತರಿದ್ದರು.

    ಏನಿದು 112?
    “ಒನ್ ಇಂಡಿಯಾ ಒನ್ ಎಮರ್ಜೆನ್ಸಿ”. ರಾಜ್ಯದ ಯಾವುದೇ ಮೂಲೆಯಿಂದ ತುರ್ತು ಸೇವೆಗಾಗಿ 112 ನಂಬರ್‌ಗೆ ಕರೆ ಮಾಡಬಹುದು. 112 ಸಿಬ್ಬಂದಿಯು ಮಾಹಿತಿ ಪಡೆದು, ಸಂಬಂಧಪಟ್ಟ ಇಲಾಖೆಗೆ ಸಂದೇಶ ರವಾನಿಸಿ, ತುರ್ತು ಸೇವೆ ಒದಗಿಸುತ್ತಾರೆ.

    ಈ ಮೊದಲು ಪೊಲೀಸ್ ಸೇವೆಗಾಗಿ 100ಕ್ಕೆ, ಅಗ್ನಿಶಾಮಕ ನೆರವು ಪಡೆಯಲು 101ಕ್ಕೆ, ಆರೋಗ್ಯ ಸೇವೆಗೆ 108ಕ್ಕೆ ಹೀಗೆ ಬೇರೆ ಬೇರೆ ಸೇವೆಗಳಿಗೆ ವಿವಿಧ ತುರ್ತು ಸಹಾಯವಾಣಿ ಸಂಖ್ಯೆ ಇತ್ತು. ಆದರೆ ಇನ್ಮುಂದೆ ಎಲ್ಲಾ ವ್ಯವಸ್ಥೆಗೂ 112 ಏಕೈಕ ತುರ್ತು ಸಹಾಯವಾಣಿ ವ್ಯವಸ್ಥೆಯನ್ನು ಆರಂಭಿಸಲಾಗಿದೆ.

    ಹೇಗೆ ಕೆಲಸ ಮಾಡುತ್ತೆ?
    * ಸ್ಮಾರ್ಟ್ ಫೋನ್ ನಲ್ಲಿ 112 ನಂಬರ್ ಡಯಲ್ ಮಾಡಬಹುದು ಅಥವಾ ಪವರ್ ಬಟನ್ ಅನ್ನು ಮೂರು ಬಾರಿ ಒತ್ತಿ ತಕ್ಷಣವೇ ಇ.ಆರ್.ಸಿ. ಕರೆಯನ್ನು ಸಕ್ರಿಯಗೊಳಿಸಬಹುದು. ಹಾಗೆಯೇ ಫೀಚರ್ ಫೋನ್‍ನಲ್ಲಿ ಸಂಖ್ಯೆ 5 ಅಥವಾ 9 ಅನ್ನು ದೀರ್ಘವಾಗಿ ಒತ್ತಿದರೆ ಇ.ಆರ್.ಸಿ. ಕರೆಯನ್ನು ಸಕ್ರಿಯಗೊಳಿಸಬಹುದಾಗಿದೆ.
    * ಸಂಬಂಧ ಪಟ್ಟ ರಾಜ್ಯಗಳ ಇಆರ್ ಎಸ್‍ಎಸ್ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಸಮಸ್ಯೆಯನ್ನು ಇ-ಮೇಲ್ ಹಾಗೂ ಎಸ್‍ಓಎಸ್ ಸಂದೇಶದ ಮೂಲಕ ರಾಜ್ಯ ಎ.ಆರ್‍ಸಿಗೆ ಕಳುಹಿಸಬಹುದು.

    * 112 ಸಹಾಯವಾಣಿಗೆ ಕರೆ ಮಾಡಿದರೆ ನೇರವಾಗಿ ಜಿಲ್ಲಾ ಕಮಾಂಡ್ ಕೇಂದ್ರದೊಂದಿಗೆ ಸಂಪರ್ಕಿಸಲಾಗಿರುತ್ತದೆ. ಹೀಗೆ ಸಂತ್ರಸ್ತರಿಗೆ ಸಂಬಂಧ ಪಟ್ಟ ಪ್ರದೇಶಗಳಿಂದ ತಕ್ಷಣ ನೆರವು ಒದಗಿಸಲಾಗುತ್ತದೆ.
    * ಈ ತುರ್ತುಸೇವೆಗಾಗಿ ನಿರ್ಭಯ ನಿಧಿಯಡಿ 321 ಕೋಟಿ ರೂಪಾಯಿಗಳ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
    * 112 ಇಂಡಿಯಾ ಮೊಬೈಲ್ ಆಪ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಸ್ಟೋರ್ ಗಳಲ್ಲಿ ಲಭ್ಯವಿದೆ.