Tag: 100 km Road Show

  • ಹೆಚ್‌.ಡಿ.ದೇವೇಗೌಡರ ಆರೋಗ್ಯ ಸ್ಥಿತಿ ಸರಿಯಿಲ್ಲ ಎಂದ ವೈದ್ಯರು – ಹೆಚ್‌ಡಿಡಿ 100 ಕಿ.ಮೀ ರೋಡ್‌ ಶೋ ರದ್ದು

    ಹೆಚ್‌.ಡಿ.ದೇವೇಗೌಡರ ಆರೋಗ್ಯ ಸ್ಥಿತಿ ಸರಿಯಿಲ್ಲ ಎಂದ ವೈದ್ಯರು – ಹೆಚ್‌ಡಿಡಿ 100 ಕಿ.ಮೀ ರೋಡ್‌ ಶೋ ರದ್ದು

    ಬೆಂಗಳೂರು: ಪಂಚರತ್ನ ರಥಯಾತ್ರೆಯ ಸಮಾರೋಪ ಕಾರ್ಯಕ್ರಮ ನಡೆಯುವ ಮೊದಲು ಜೆಡಿಎಸ್‌ ವರಿಷ್ಠ ಹೆಚ್‌.ಡಿ.ದೇವೇಗೌಡರ (HD Devegowda) ನೇತೃತ್ವದಲ್ಲಿ ನಡೆಯಬೇಕಿದ್ದ 100 ಕಿ.ಮೀ ರೋಡ್‌ ಶೋ ರದ್ದುಗೊಳಿಸಲಾಗಿದೆ.

    ವೈದ್ಯರ ಸಲಹೆ ಮೇರೆಗೆ ದೇವೇಗೌಡರ ರೋಡ್ ಶೋ ರದ್ದುಗೊಳಿಸಿರುವುದಾಗಿ ಜೆಡಿಎಸ್‌ ತಿಳಿಸಿದೆ. ರೋಡ್‌ ಶೋ ಬದಲಿಗೆ ಕೇವಲ ಸಮಾರೋಪ ಸಮಾರಂಭ ಮಾಡಲು ನಿರ್ಧರಿಸಲಾಗಿದೆ ಎಂದು ಪಕ್ಷ ಮಾಹಿತಿ ನೀಡಿದೆ. ಈ ಸಮಾರೋಪ ಸಮಾರಂಭದಲ್ಲಿ ಹೆಚ್‌.ಡಿ.ದೇವೇಗೌಡರು ಪಾಲ್ಗೊಳ್ಳಲಿದ್ದಾರೆ.

    ರೋಡ್‌ ಶೋ ರದ್ದುಗೊಳಿಸಿರುವ ಬಗ್ಗೆ ಮಾತನಾಡಿದ ಮಾಜಿ ಸಿಎಂ ಹೆಚ್‌.ಡಿ.‌ಕುಮಾರಸ್ವಾಮಿ, ವೈದ್ಯರ ಸಲಹೆ ಮೇರೆಗೆ 100 ಕಿಮೀ ರೋಡ್ ಶೋ ರದ್ದು ಮಾಡಲಾಗಿದೆ. ದೇವೇಗೌಡರ ಆರೋಗ್ಯ ಸ್ಥಿತಿ ಸರಿಯಿಲ್ಲ. ವೈದ್ಯರು ಈ‌ ಸಮಯದಲ್ಲಿ ಇಷ್ಟು ದೊಡ್ಡ ರೋಡ್ ಶೋ ಬೇಡ ಅಂತಾ ಹೇಳಿದ್ದಾರೆ. ಹೀಗಾಗಿ ರೋಡ್ ಶೋ ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.‌

    ಸಮಾವೇಶ ಜಾಗದಲ್ಲಿ 2ರಿಂದ 3 ಕಿ.ಮೀ ರೋಡ್ ಶೋ ಮಾಡ್ತೀವಿ ಅಷ್ಟೆ. ಮೈಸೂರಿನಲ್ಲಿ‌‌ ನಿಗದಿಯಂತೆ ಸಮಾರಂಭ ಸಮಾರಂಭ ನಡೆಯುತ್ತದೆ ಎಂದು ಹೇಳಿದ್ದಾರೆ.

    ಕುಂಬಳಗೋಡಿನಿಂದ ಮೈಸೂರಿನವರೆಗೆ ಸುಮಾರು 100 ಕಿಮೀ ದೂರ ಬೃಹತ್ ರೋಡ್ ಶೋ ನಡೆಸುವ ಬಗ್ಗೆ ಈ ಹಿಂದೆ ಜೆಡಿಎಸ್‌ ನಿರ್ಧಾರ ಕೈಗೊಂಡಿತ್ತು. ಆ ರೋಡ್ ಶೋದಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರನ್ನು ತೆರೆದ ವಾಹನದಲ್ಲಿ ಕರೆದುಕೊಂಡು ಹೋಗುವ ಯೋಜನೆ ಕೂಡ ಹಾಕಿಕೊಂಡಿತ್ತು.