Tag: 100 Day

  • ಪಿಕ್ಚರ್ ಅಭಿ ಬಾಕಿ ಹೈ – ಭ್ರಷ್ಟಾಚಾರಿಗಳ ವಿರುದ್ಧ ಮೋದಿ ಗುಡುಗು

    ಪಿಕ್ಚರ್ ಅಭಿ ಬಾಕಿ ಹೈ – ಭ್ರಷ್ಟಾಚಾರಿಗಳ ವಿರುದ್ಧ ಮೋದಿ ಗುಡುಗು

    – ಮೋದಿ ಸರ್ಕಾರಕ್ಕೆ ನೂರರ ಸಂಭ್ರಮ

    ರಾಂಚಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಅವಧಿಯ ಆಡಳಿತ 100 ದಿನಗಳನ್ನು ಪೂರೈಸಿದ್ದು, ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ರಾಂಚಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

    ಇದೇ ವೇಳೆ ಭ್ರಷ್ಟಾಚಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಭ್ರಷ್ಟಾಚಾರಿಗಳಿಗೆ ತಕ್ಕ ಶಾಸ್ತಿ ಕಾದಿದೆ. ಅವರಿಗೆ ಸೂಕ್ತ ಸ್ಥಳವನ್ನು ತೋರಿಸಲಾಗುವುದು ಎಂದು ಹೇಳುವ ಮೂಲಕ ಭ್ರಷ್ಟಾಚಾರ ಮುಕ್ತ ಸರ್ಕಾರದ ಭರವಸೆಯನ್ನು ಪುನರುಚ್ಚರಿಸಿದ್ದಾರೆ.

    ಭ್ರಷ್ಟಾಚಾರದ ವಿರುದ್ಧ ಈಗಾಗಲೇ ದಾಳಿಗಳು ನಡೆಯುತ್ತಿದ್ದು, ಸಾರ್ವಜನಿಕರನ್ನು ಲೂಟಿ ಮಾಡುವವರಿಗೆ ಸೂಕ್ತ ಸ್ಥಳವನ್ನು ತೋರಿಸಲಾಗುವುದು. ಮೋದಿಯ 2.0 ಸರ್ಕಾದ ಅವಧಿಯಲ್ಲಿ ಇನ್ನೂ ಹೆಚ್ಚು ಉತ್ತಮ ಕೆಲಸಗಳು ಆಗಬೇಕಿದ್ದು, ಈ 100 ದಿನಗಳು ಕೇವಲ ಟ್ರೈಲರ್ ಮಾತ್ರ, ಪಿಕ್ಚರ್ ಅಭಿ ಬಾಕಿ ಹೈ ಎಂದು ಗುಡುಗಿದ್ದಾರೆ.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ರೈತರ ಪಿಂಚಣಿ ಯೋಜನೆಗೆ ಚಾಲನೆ ನೀಡಿ, ‘ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ’ ಅಡಿಯಲ್ಲಿ 18ರಿಂದ 40 ವರ್ಷದೊಳಗಿನ ರೈತರು 60 ವರ್ಷಗಳ ನಂತರ ಮಾಸಿಕ 3,000 ರೂ. ಪಿಂಚಣಿ ಪಡೆಯಬಹುದಾಗಿದೆ ಎಂದರು.

    ಮುಂದಿನ ಮೂರು ವರ್ಷಗಳವರೆಗೆ ಈ ಯೋಜನೆಗೆ 10,774 ಕೋಟಿ ರೂ. ಹಣವನ್ನು ಮೀಸಲಿರಿಸಲಾಗಿದೆ. ಪ್ರಸ್ತುತ 18 ರಿಂದ 40 ವರ್ಷದೊಳಗಿನ ಎಲ್ಲ ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮೋದಿ ತಿಳಿಸಿದರು. ಈ ವರ್ಷದ ಕೊನೆಯಲ್ಲಿ ಜಾರ್ಖಂಡ್‍ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ರ್ಯಾಲಿಗಳು ಹಾಗೂ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ.