ಚಿಕ್ಕಮಗಳೂರು: ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವನ ಬಂಧನಕ್ಕೆ 3 ದಿನ ಮಾಡಿದ್ರಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಸಿ.ಟಿ.ರವಿ (C.T.Ravi) ವಾಗ್ದಾಳಿ ನಡೆಸಿದರು.
ಬಿಜೆಪಿ (BJP) ಶಾಸಕ ಮುನಿರತ್ನ ಬಂಧನ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವನ ಬಂಧನಕ್ಕೆ 3 ದಿನ ಮಾಡಿದ್ರಿ. ಎಫ್‌ಎಸ್‌ಎಲ್ ರಿಪೋರ್ಟ್ ಬರಲಿ ಎಂದು ಕಾದಿದ್ರಿ. ಮುನಿರತ್ನ ಅವರು ನನ್ನ ವಾಯ್ಸ್ ಅಲ್ಲ, ನಕಲು ಮಾಡಿದ್ದಾರೆ ಎಂದಿದ್ದಾರೆ. ಮಾಜಿ ಸಂಸದ ಡಿ.ಕೆ.ಸುರೇಶ್, ಡಿಸಿಎಂ ಡಿಕೆಶಿ ಒತ್ತಡದ ಪ್ಲ್ಯಾನ್ ಎಂದು ಆರೋಪಿಸಿದ್ದಾರೆ. ಗೃಹ ಸಚಿವರೇ, ಈ ವಾಯ್ಸ್ ಮುನಿರತ್ನ ಅವರದ್ದೇ ಎಂದು ಎಫ್‌ಎಸ್‌ಎಗೆ ಕಳಿಸಿದ್ರಾ, ವರದಿ ಬಂದಿದ್ಯಾ? ವರದಿ ಬರುವ ಮುನ್ನವೇ ನಿಮ್ಮ ಅರೆಸ್ಟ್ ಆತುರ ತೋರಿಸುತ್ತೆ. ನಿಮ್ಮ ದ್ವೇಷದ ರಾಜಕಾರಣ ತೋರಿಸುತ್ತೆ ಎಂದು ಟೀಕಿಸಿದರು. ಇದನ್ನೂ ಓದಿ: ಬೆಂಗಳೂರಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ನಿಫಾಗೆ ಬಲಿ – ರಾಜ್ಯದಲ್ಲಿ ಆತಂಕ
ಯಾದಗಿರಿ ಶಾಸಕನ ಮೇಲೆ ಮೃತ ಪಿಎಎಸ್‌ಐ ಪತ್ನಿ ದೂರು ನೀಡಿದ್ರು. ಅರೆಸ್ಟ್ ಮಾಡಿದ್ರಾ? ಅರೆಸ್ಟ್ ಮಾಡುವ ಬದಲು ಸಿಎಂ ಮನೆಗೆ ಭೋಜನ ಕೂಟಕ್ಕೆ ಆಹ್ವಾನ ನೀಡಿದ್ರಿ. ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಅಧಿಕಾರಿ ರಾಜ್ಯಪಾಲರಕ್ಕೆ ದೂರು ನೀಡಿದ್ರು. ನಿಮ್ಮ ಕೃಷಿ ಸಚಿವರನ್ನ ನೀವು ಅರೆಸ್ಟ್ ಮಾಡಿದ್ರಾ? ಗೃಹ ಸಚಿವರೇ ನಿಮಗೆ ಅವರ ಬಗ್ಗೆ ಮೌನ. ಬಿಜೆಪಿ ಶಾಸಕರ ಬಗ್ಗೆ ಆತುರ ಎಂದು ತರಾಟೆಗೆ ತೆಗೆದುಕೊಂಡರು.
ಪ್ರಜಾಪ್ರಭುತ್ವ ದಿನ, ಒಳ್ಳೆ ಕಾರ್ಯಕ್ರಮ, ಆದ್ರೆ ಅವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಅನ್ನೋದು ಸಂವಿಧಾನದ ಆಶಯ. ಈಗ ಆಗಿರೋದು ಏನು? ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಅನ್ನೋ ರೀತಿ ರಾಜಕಾರಣ ಬದಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಐದು ಕಡೆ ಕುಟುಂಬದವರಿಗೆ ಟಿಕೆಟ್ ಕೊಟ್ಟಿತ್ತು. ಬೀದರ್‌ನಿಂದ ಚಾಮರಾಜನಗರದವರೆಗೂ ಕಾಂಗ್ರೆಸ್ 21 ಕಡೆ ಕುಟುಂಬದವರಿಗೆ ಟಿಕೆಟ್ ಕೊಟ್ಟಿತ್ತು. ಪ್ರಜಾಪ್ರಭುತ್ವದ ಆಶಯ ಏನಾಗುತ್ತೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಅಂತ ಹೇಗಂತೀರಾ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ಭಾರತದ ನಂ.1 ಭಯೋತ್ಪಾದಕ: ಕೇಂದ್ರ ಸಚಿವ ವಿವಾದಾತ್ಮಕ ಹೇಳಿಕೆ
ವಂಶವಾದ, ವಂಶವಾದದ ರಾಜಕಾರಣವನ್ನ ಪ್ರಜಾಪ್ರಭುತ್ವದಲ್ಲಿ ಬೆರೆಸಿದ್ದು ಯಾರು? ಕಾಂಗ್ರೆಸ್ಸಿನ ಓನರ್ ಯಾರು, ನೆಹರೂರಿಂದ ಸೋನಿಯಾ ಗಾಂಧಿಗೆ ಬಂದು ನಿಂತಿದೆ. ನಿಮ್ಮ ಪಕ್ಷದಲ್ಲೇ ಪ್ರಜಾಪ್ರಭುತ್ವ ಇಲ್ಲ. ಇನ್ನು ಪ್ರಜಾಪ್ರಭುತ್ವ ಉಳಿಸೋದೆಲ್ಲಿ ಎಂದು ಪ್ರಶ್ನಿಸಿದರು.
ಬೆಂಗಳೂರು: ನಾಳೆ ಎತ್ತಿನಹೊಳೆ ಯೋಜನೆಯ (Yettinahole Project) ಮೊದಲ ಹಂತಕ್ಕೆ ಚಾಲನೆ ಕೊಡಲು ಸರ್ಕಾರ ಮುಂದಾಗಿದೆ. ಈ ಬೆನ್ನಲ್ಲೇ ಯೋಜನೆಯಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯಗೆ (Siddaramaiah) ಪರಿಷತ್ ಸದಸ್ಯ ಸಿ.ಟಿ.ರವಿ ಇಂದು ಬಹಿರಂಗ ಪತ್ರ ಬರೆದಿದ್ದಾರೆ.
ಎತ್ತಿನಹೊಳೆ ಯೋಜನೆಯಲ್ಲಿ ಸಾವಿರಾರು ಕೋಟಿ ರೂಪಾಯಿ ದುರುಪಯೋಗವಾಗಿದೆ. ಅಕ್ರಮ ವಿರುದ್ಧ ಕ್ರಮಕೈಗೊಳ್ಳಿ ಎಂದು ಸಿಟಿ ರವಿ (C.T.Ravi) ಪತ್ರದಲ್ಲಿ ಆಗ್ರಹಿಸಿದ್ದಾರೆ. ನೀರಿನ ಲಭ್ಯತೆ, ಪೂರೈಕೆ, ಕೊಟ್ಟ ಭರವಸೆ ಬಗ್ಗೆ ಗೊಂದಲಗಳಿವೆ. ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವೈಜ್ಞಾನಿಕ ಸಂಸ್ಥೆಗಳು, ತಾಂತ್ರಿಕ ಸಂಸ್ಥೆ ಮತ್ತು ಐಐಎಸ್ಸಿ ಸಂಸ್ಥೆ ನೆರವಿನಿಂದ ಸಮಗ್ರ ಅಧ್ಯಯನ ನಡೆಸಲು ಸಿಟಿ ರವಿ ಒತ್ತಾಯಿಸಿದ್ದಾರೆ. ಸಿ.ಟಿ.ರವಿ ಬರೆದ ಪತ್ರದ ಪೂರ್ಣ ಯಥಾವತ್ ಅಂಶ ಇಲ್ಲಿದೆ. ಇದನ್ನೂ ಓದಿ: ಶಿಕ್ಷಕರ ಸಮಸ್ಯೆಗೆ ಶೀಘ್ರವೇ ಪರಿಹಾರ: ಸಿದ್ದರಾಮಯ್ಯ
ಪತ್ರದಲ್ಲಿ ಏನಿದೆ?
ಬೆಟ್ಟ ಅಗೆದು ಇಲಿ ಹಿಡಿದ ಎತ್ತಿನಹೊಳೆ ಯೋಜನೆ ಕುರಿತಂತೆ 7 ಜಿಲ್ಲೆಯ ಜನರ ಪರವಾಗಿ ನಿಮಗೊಂದು ಬಹಿರಂಗ ಪತ್ರ. ಎತ್ತಿನಹೊಳೆ ಯೋಜನೆ ಕುರಿತಂತೆ ತಾವು ಮತ್ತು ಉಪಮುಖ್ಯಮಂತ್ರಿಗಳು ನೀಡಿದ ಸಾರ್ವಜನಿಕ ಹೇಳಿಕೆ ಮತ್ತು ಜಾಹೀರಾತನ್ನು ನೋಡಿ, ನಮಗಿರುವ ಸಾರ್ವಜನಿಕರ ಆತಂಕವನ್ನು ದೂರ ಮಾಡಬೇಕೆಂದು ಆಗ್ರಹಿಸಿ ಈ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ.
ಆರಂಭದಲ್ಲಿ ಈ ಯೋಜನೆಯ ಉದ್ದೇಶವೇ ನಿರಂತರ ಬರದ ದವಡೆಗೆ ಸಿಲುಕಿರುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ ಮತ್ತು ರಾಮನಗರ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸುವುದು. 38 ಪಟ್ಟಣಗಳಿಗೆ, 6,657 ಗ್ರಾಮಗಳಿಗೆ, 527 ಕೆರೆ ತುಂಬಿಸುವುದು, 75 ಲಕ್ಷ ಜನರಿಗೆ, ಶುದ್ಧ ಕುಡಿಯುವ ನೀರು, ಆಗಿತ್ತು. ಇದಕ್ಕಾಗಿ ಆರಂಭಿಕ ಯೋಜನೆ ಮೊತ್ತ 8,323 ಕೋಟಿ. ನಂತರ ಪರಿಷ್ಕೃತ ಮೊತ್ತ 12912 ಕೋಟಿ ರೂ. ಗಳು. ಈಗ ಮತ್ತೊಮ್ಮೆ ಮೊತ್ತವನ್ನು ಪರಿಷ್ಕೃತ 23,251 ಕೋಟಿ ರೂ.ಗೆ ಹೆಚ್ಚಳ ಮಾಡಿದ್ದೀರಿ. ಈಗಾಗಲೇ ನೀವೆ ಹೇಳಿರುವ ಹಾಗೆ ದಿನಾಂಕ 30.06.2024 ರವರೆಗೆ ರೂ. 16,076 ಕೋಟಿ ವೆಚ್ಚವನ್ನು ಮಾಡಿದ್ದೀರಿ. ಈಗ ಮಾಡಿರುವ ವೆಚ್ಚದಲ್ಲಿ ಎಷ್ಟು ಹಳ್ಳಿಯ ಜನರಿಗೆ ಕುಡಿಯುವ ನೀರು, ಎಷ್ಟು ಕೆರೆಗಳಿಗೆ ನೀರು ತುಂಬಿಸುತ್ತೀರಿ? ಸ್ಪಷ್ಟಪಡಿಸಿ. ಇದನ್ನೂ ಓದಿ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ – ಡಿಕೆಶಿ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಯತ್ನಾಳ್
10 ವರ್ಷದಲ್ಲಿ ಯೋಜನೆಯ ವೆಚ್ಚ 8,323 ಕೋಟಿಯಿಂದ 23,251 ಕೋಟಿಗೆ ಹೆಚ್ಚಾಯ್ತು. ಆದ್ರೆ ನೀರಿನ ಇಳುವರಿ 24 ಟಿಎಂಸಿಯಿಂದ 8.5 ಟಿಎಂಸಿಗೆ ಇಳಿದಿದೆ. ಇದೊಂದು ಅವೈಜ್ಞಾನಿಕ ಯೋಜನೆ ಅಂತಾ ಅನಿಸುತ್ತಾ ಇಲ್ವಾ? 2014ರ ಲೋಕಸಭಾ ಚುನಾವಣೆಯ ಮುಂಚೆ ಚಿಕ್ಕಬಳ್ಳಾಪುರದಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿ, ಈ ಮೂಲಕ ಸಾರ್ವಜನಿಕವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜನಪ್ರತಿನಿಧಿಗಳ ಸಮಕ್ಷಮದಲ್ಲಿ ಜನರಿಗೆ 3 ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿ, ಮೊದಲ ಹಂತದಲ್ಲಿ ಕುಡಿಯುವ ನೀರು ಒದಗಿಸುವುದಾಗಿ ಹೇಳಿದ್ದೀರಿ. ಈಗ ಈ ಯೋಜನೆಗೆ ಶಂಕುಸ್ಥಾಪನೆಯಾಗಿ 10 ವರ್ಷ ಕಳೆದರೂ ಯಾವ ಹಳ್ಳಿಯ ಜನರಿಗೆ ನೀರನ್ನು ಒದಗಿಸಿದ್ದೀರಿ? ಸ್ಪಷ್ಟಪಡಿಸಿ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಕಟ್ಟಕಡೆಯ ಗ್ರಾಮ ನಂಗಲಿ ಜನ ಎತ್ತಿನಹೊಳೆ ನೀರಿಗಾಗಿ ರಾಮನನ್ನು ಕಾಯ್ದ ಶಬರಿಯಂತೆ ನಿಮ್ಮ ಮಾತನ್ನು ನಂಬಿ ಕಾಯುತ್ತಿದ್ದಾರೆ. ಯಾವಾಗ ನೀರು ಕೊಡ್ತೀರಿ? ಆರಂಭದಲ್ಲಿ ಹೇಳಿರುವ ಹಾಗೆ 24 ಟಿಎಂಸಿ ನೀರು ಲಭ್ಯವಿದೆ. ಅದಕ್ಕಾಗಿ ಜಿಲ್ಲಾವಾರು ನೀರನ್ನು ಹಂಚಿಕೆ ಮಾಡಿದ್ರಿ. Central Water Commission (ಕೇಂದ್ರೀಯ ಜಲ ಆಯೋಗ) ವರದಿಯ ಪ್ರಕಾರ ನೀವು ಹೇಳಿರುವ ಹಾಗೆ 24 ಟಿಎಂಸಿ ನೀರು ಲಭ್ಯವಿಲ್ಲ ಎಂದು 2012 ರಲ್ಲಿಯೇ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿತ್ತು. Indian Institute of Science (ಭಾರತೀಯ ವಿಜ್ಞಾನ ಸಂಸ್ಥೆ) 24 ಟಿಎಂಸಿ ನೀರು ಇಳುವರಿ ಸಾಧ್ಯವಿಲ್ಲ, ಕೇವಲ ಕಾಲ್ಪನಿಕ. 3 ರಿಂದ 4 ಟಿಎಂಸಿ ನೀರು ಮಾತ್ರ ಎಂದು ತಿಳಿಸಿತ್ತು. 2018-23 ರವರೆಗೆ ನೀರಾವರಿ ಇಲಾಖೆ ನೇಮಿಸಿದ್ದ ಟೆಲಿಮೆಟ್ರಿಕ್ ಗೇಜ್ ಅಧ್ಯಯನದ ವರದಿಯ ಪ್ರಕಾರ 8.5 ಟಿಎಂಸಿ ನೀರು ಮಾತ್ರ. ನಂತರ ಸತತ ಅಧ್ಯಯನದ ನಂತರ ಟೆಲಿಮೆಟ್ರಿಕ್ ಗೇಜ್ ವರದಿ 24 ಟಿಎಂಸಿ ಕೇವಲ ಊಹಾತ್ಮಕ ಎನ್ನುವುದನ್ನು ಖಾತ್ರಿ ಪಡಿಸಿದೆ. Institute of Science (ಭಾರತೀಯ ವಿಜ್ಞಾನ ಸಂಸ್ಥೆ) ಕೊಟ್ಟ ವರದಿ, Central Water Commission (ಕೇಂದ್ರೀಯ ಜಲ ಆಯೋಗ) ಕೊಟ್ಟ ಎಚ್ಚರಿಕೆ, National Institute of Hydrology ವರದಿಯನ್ನು ಪರಿಗಣಿಸದೇ, ಗುತ್ತಿಗೆದಾರರು ಗುತ್ತಿಗೆ ಪಡೆಯುವ ಉದ್ದೇಶದಿಂದ 24 ಟಿಎಂಸಿ ನೀರು ಸಿಗುತ್ತದೆ ಎಂಬ ಖಾಸಗಿಯಾಗಿ ಮಾಡಿಕೊಟ್ಟ ವರದಿಯನ್ನೇ ಇಟ್ಟುಕೊಂಡು, ಕರ್ನಾಟಕ ಸರ್ಕಾರ 23,251 ಕೋಟಿ ಯೋಜನೆ ರೂಪಿಸಿ, 16,076 ಕೋಟಿ ಈಗಾಗಲೇ ವೆಚ್ಚ ಮಾಡಿದೆ, ಯೋಜನೆ ಉದ್ದೇಶವೇನು? ಎಲ್ಲೆಲ್ಲಿಗೆ ನೀರು ಕೊಡಬೇಕಿತ್ತು? ಆ ಎಲ್ಲ ಹಳ್ಳಿಗಳಿಗೂ ನೀರು ಕೊಡುವ ವಿಶ್ವಾಸ ಈಗಲೂ ನಿಮಗೆ ಉಳಿದಿದೆಯಾ? ಯೋಜನೆಯ ಆರಂಭದಲ್ಲಿ ಪ್ರಸ್ತಾಪಿಸಿದಂತೆ 24 ಟಿಎಂಸಿ ನೀರು ಇಲ್ಲ ಎಂದು ಮಾನ್ಯ ಸದಸ್ಯರೊಬ್ಬರ ಪ್ರಶ್ನೆಗೆ ವಿಧಾನಸಭೆಯಲ್ಲಿ ನೀರಾವರಿ ಸಚಿವರೇ ದಿನಾಂಕ: 16.07.2024ರಂದು ಉತ್ತರ ಕೊಟ್ಟಿದ್ದಾರೆ. ಇದಕ್ಕೆ ನಿಮ್ಮ ಉತ್ತರವೇನು? ಇದನ್ನೂ ಓದಿ: ದರ ಏರಿಕೆ ನಿಯಂತ್ರಿಸಲು ಕಡಿಮೆ ಬೆಲೆಗೆ ಈರುಳ್ಳಿ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ
ಅನುಬಂಧ-2ರಲ್ಲಿ Actual Flow in the Streams ಅದರಲ್ಲಿ ನೀರಿನ ಲಭ್ಯವಿರುವುದೇ 8.85 ಟಿಎಂಸಿ ಎಂದು ಟೆಲಿಮೆಟ್ರಿಕ್ ಗೇಜ್ ವರದಿ ಹೇಳಿದೆ. ಅದನ್ನ ಲಿಪ್ಟ್ ಮಾಡುವುದೇ 3 ರಿಂದ 4 ಟಿಎಂಸಿ ನೀರು ಮಾತ್ರ. ಇದನ್ನು ನೋಡಿದಾಗ ಮೂಗಿಗಿಂತ ಮೂಗುತಿ ಭಾರ ಅನ್ನುವ ನಾನ್ನುಡಿ ಅನ್ವಯವಾಗುತ್ತೆ. ಯೋಜನೆ ಲಾಭಕ್ಕಿಂತ ಯೋಜನಾ ವೆಚ್ಚವೇ ಅಧಿಕವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆಸೆ ತೋರಿಸಿದ್ದು ಬರಪೀಡಿತ ಜನರಿಗೆ, ಹೊಟ್ಟೆ ತುಂಬಿಸಿದ್ದು, ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಭ್ರಷ್ಟ ರಾಜಕಾರಿಣಿಗಳಿಗೆ ಅಂತ ಸಂಶಯ ಬರುತ್ತದೆ. ನೀವು ಈ ಭಾಗದ ಪ್ರದೇಶಗಳಿಗೆ ನೀರು ಕೊಡಲು ಈಗಲೂ ಬದ್ಧರಿದ್ದೀರಾ? ಈಗಲಾದರೂ ನೈಜ ಅಧ್ಯಯನ ನಡೆಸಿ, ತಪ್ಪು ಯೋಜನೆ ರೂಪಿಸಿ, ಸಾವಿರಾರು ಕೋಟಿ ರೂಪಾಯಿ ದುರುಪಯೋಗವಾಗಿರುವುದರ ವಿರುದ್ಧ ಕ್ರಮಕೈಗೊಳ್ಳಿ ಮತ್ತು ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವೈಜ್ಞಾನಿಕ ಸಂಸ್ಥೆಗಳು, ತಾಂತ್ರಿಕ ಸಂಸ್ಥೆಗಳು ಮತ್ತು Indian Institute of Science (ಭಾರತೀಯ ವಿಜ್ಞಾನ ಸಂಸ್ಥೆ)ಗಳನ್ನು ಬಳಕೆ ಮಾಡಿಕೊಂಡು ಒಂದು ಸಮಗ್ರ ಅಧ್ಯಯನ ನಡೆಸಿ. ಈ ಯೋಜನೆ ಬೆಟ್ಟ ಅಗೆದು ಇಲಿ ಹಿಡಿದ ಹಾಗೆ ಆಗಿದೆ ಅಲ್ಲವೇ ಮಾನ್ಯ ಮುಖ್ಯಮಂತ್ರಿಗಳೆ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಬೆಂಗಳೂರು: ಈ ಹಿಂದೆ ಜಿಂದಾಲ್‌ಗೆ (Jindal) ಭೂಮಿ ಕೊಡಲು ಕಾಂಗ್ರೆಸ್ಸಿಗರು ವಿರೋಧಿಸಿದ್ದರು. ಈಗ ಕೊಡುತ್ತಿದ್ದಾರೆ ಅಂದ್ರೆ ಕಾಂಗ್ರೆಸ್ಸಿಗರಿಗೂ, ಅವರ ಹೈಕಮಾಂಡಿಗೂ ದೊಡ್ಡ ಪ್ರಮಾಣದ ಮೊತ್ತ ಸಂದಾಯ ಆಗಿರಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C T Ravi) ಸಂಶಯ ವ್ಯಕ್ತಪಡಿಸಿದ್ದಾರೆ.
ನಗರದ ಮಲ್ಲೇಶ್ವರ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಂದಾಲ್ ಕಂಪನಿಗೆ ಸುಮಾರು 3,677 ಎಕರೆ ಭೂಮಿ ಕೊಡುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.ಇದನ್ನೂ ಓದಿ: ಐಸಿಸಿ ಮುಖ್ಯಸ್ಥರಾಗಿ ಜಯ್ ಶಾ ಅವಿರೋಧ ಆಯ್ಕೆ
ಬಿಜೆಪಿ ಆಡಳಿತದಲ್ಲಿ ಇದ್ದಾಗ ಈ ಪ್ರಸ್ತಾವನೆ ಬಂದಿತ್ತು. ನಾವೆಲ್ಲರೂ ಒಳಗಡೆಯೂ ವಿರೋಧ ಮಾಡಿದ್ದೆವು. ಕಾಂಗ್ರೆಸ್‌ನವರು (Congress) ಬಹಿರಂಗವಾಗಿ ಭೂ ಮಾರಾಟವನ್ನು ವಿರೋಧಿಸಿದ್ದರು. ಇದು ದೊಡ್ಡ ಪ್ರಮಾಣದ ಕಿಕ್‌ಬ್ಯಾಕ್ ಎಂದು ನಮ್ಮ ಮೇಲೆ ಕಾಂಗ್ರೆಸ್‌ನವರು ಆರೋಪಿಸಿದ್ದರು. ಒಂದು ಎಕರೆಗೆ 1.22 ಲಕ್ಷ ರೂ. ಕೊಡುವುದು ಎಂದರೇನು? ಎಂಬ ಮಾತನ್ನು ನಮ್ಮ ಮೇಲೆ ಆರೋಪಿಸಿದ್ದರು. ಆಗ ಆರೋಪಿಸಿದವರೇ ಭೂಮಿ ಕೊಟ್ಟಿದ್ದಾರೆ. ಹಾಗಿದ್ದರೆ ನೀವು ಎಷ್ಟು ಕಿಕ್‌ಬ್ಯಾಕ್ ಪಡೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಕೈಗಾರಿಕೆ ಖಾತೆ ಸಚಿವರು ಈ ಕುರಿತು ಬಿಜೆಪಿ (BJP) ಆಡಳಿತದಲ್ಲಿರುವಾಗಲೇ ನಿರ್ಧಾರ ಆಗಿತ್ತು ಎಂದಿದ್ದರು. ಮಾನ್ಯ ಎಂ.ಬಿ.ಪಾಟೀಲರೇ, (M B Patil) ನಮ್ಮ ಅವಧಿಯಲ್ಲಿ ಪ್ರಸ್ತಾಪ ಬಂದಿದ್ದು ನಿಜ. ನಮ್ಮಂಥ ಹಲವರು ವಿರೋಧಿಸಿದ್ದ ಕಾರಣಕ್ಕೆ ಪ್ರಸ್ತಾಪವನ್ನು ಅಲ್ಲಿಗೇ ಕೈಬಿಟ್ಟಿದ್ದೆವು. ನೀವ್ಯಾಕೆ ಅದನ್ನು ಮಾಡುತ್ತೀರಿ? ಬಿಜೆಪಿ ಕಂಡರೆ ಆಗದವರು ಬಿಜೆಪಿ ನಿರ್ಧಾರವನ್ನು ಯಾಕೆ ಮುಂದುವರೆಸಬೇಕು ಎಂದು ಕೆಣಕಿದ್ದಾರೆ.ಇದನ್ನೂ ಓದಿ: ತುಮಕೂರು ಜಿಲ್ಲೆಗೆ ಮೂರು ರೈಲ್ವೆ ಸೇತುವೆ ಮಂಜೂರು
ಹೂಡಿಕೆದಾರರು ಜನರಿಗೆ ಸೇವೆ ಮಾಡಲು ಬರುತ್ತಿಲ್ಲ..
ಹೆಚ್.ಕೆ.ಪಾಟೀಲರೇ (H K Patil) ಅವತ್ತು ಉದ್ದದ ಪತ್ರ ಬರೆದಿದ್ದಿರಿ. ಪತ್ರಿಕಾಗೋಷ್ಠಿ ಮಾಡಿದ್ದೀರಿ. ಈಗ ಕ್ಯಾಬಿನೆಟ್ ನಿರ್ಣಯವನ್ನು ಹೊರಗಡೆ ಬಂದು ಪತ್ರಿಕಾಗೋಷ್ಠಿ ಮಾಡಿ ನಿಮ್ಮ ಬಾಯಿಂದಲೇ ಹೇಳಿದ್ದೀರಿ ಎಂದಿರಿ. 90 ಸಾವಿರ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಿ, 50 ಸಾವಿರ ಜನರಿಗೆ ಉದ್ಯೋಗ ಕೊಡಲಾಗಿದೆ ಎಂದು ಹೇಳಿದ್ದಾರೆ. ಜಿಂದಾಲ್ ಏನೂ ನಾನ್ ಪ್ರಾಫಿಟ್ ಆರ್ಗನೈಸೇಶನ್ ಅಲ್ಲ. ಅವರು ಕಂಪನಿ ನಡೆಸುತ್ತಿದ್ದಾರೆ. ಲಾಭದ ಲೆಕ್ಕಾಚಾರ ಹಾಕಿ ಹೂಡಿಕೆ ಮಾಡುತ್ತಾರೆ. ಜಿಂದಾಲ್ ಅಥವಾ ಇತರ ಕಂಪನಿಗಳು, ಹೂಡಿಕೆದಾರರು ಕರ್ನಾಟಕದ 7 ಕೋಟಿ ಜನರಿಗೆ ಸೇವೆ ಮಾಡಲು ಬರುತ್ತಿಲ್ಲ. ಅವರು ಲಾಭದ ಉದ್ದೇಶ ಇಟ್ಟುಕೊಂಡೇ ಹೂಡಿಕೆ ಮಾಡುತ್ತಾರೆ ಎಂದು ವಿಶ್ಲೇಷಿಸಿದ್ದಾರೆ.
ಜಿಂದಾಲ್ ಮತ್ತು ಕರ್ನಾಟಕ ಸರ್ಕಾರದ ನಡುವೆ ಯಾವ ಒಪ್ಪಂದ ಪತ್ರ ಆಗಿತ್ತು? ನಾವು ಕಡಿಮೆ ಬೆಲೆಗೆ ಜಮೀನು ಕೊಟ್ಟಿದ್ದೇವೆ. ಅಣೆಕಟ್ಟಿನಿಂದ ನೀರು ಕೊಡುತ್ತೇವೆ. ಪ್ರಾಕೃತಿಕ ಸಂಪನ್ಮೂಲ ತೆಗೆಯಲು ಅವಕಾಶ ನೀಡಿದ್ದೇವೆ. ಅವರು ಎಷ್ಟು ಉದ್ಯೋಗ ಸಿಗಲಿದೆ ಎಂದು ತೋರಿಸಿದ್ದರು? ಯಾವ ಭರವಸೆ ಕೊಟ್ಟಿದ್ದರು? ಈಗ ಎಷ್ಟು ಉದ್ಯೋಗ ಸೃಷ್ಟಿ ಆಗಿದೆ? ಉದ್ಯೋಗಿಗಳಲ್ಲಿ ಕರ್ನಾಟಕದವರು, ಕನ್ನಡಿಗರು ಎಷ್ಟು ಜನ ಎಂಬ ಬಗ್ಗೆ ಜಾಬ್ ಆಡಿಟ್ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಕೊಡುವ ಉದ್ದೇಶ ಇದ್ದರೆ ಇವತ್ತಿನ ಮಾರುಕಟ್ಟೆ ದರ ವಿಧಿಸಿ..
ಆವತ್ತು ಕಿಕ್‌ಬ್ಯಾಕ್ ಆರೋಪ ಮಾಡಿ, ಈಗ ನೀವು ಅನುಮತಿ ಕೊಟ್ಟ ಕಾರಣ ನೀವೆಷ್ಟು ಕಿಕ್‌ಬ್ಯಾಕ್ ಪಡೆದಿದ್ದೀರಿ ಎಂಬ ಸಂಶಯ ಬಂದೇ ಬರುತ್ತದೆ. ಇದರ ಜೊತೆಜೊತೆಗೇ ಯಾವತ್ತಿನದೋ ಮಾರುಕಟ್ಟೆ ದರ ಅಳವಡಿಸಿ, ಇವತ್ತು 1.22 ಲಕ್ಷ ರೂ. ನಿಗದಿ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಯಾವ ಮೂಲೆಯಲ್ಲೂ ಈ ದರಕ್ಕೆ ಭೂಮಿ ಸಿಗುವುದಿಲ್ಲ. ಪ್ರತಿ ಎಕರೆ ಜಮೀನಿಗೆ ಕಡಿಮೆ ಎಂದರೂ 20-25 ಲಕ್ಷ ರೂ. ಬೆಲೆ ಇದೆ. ಹಾಗಿರುವಾಗ 1.22 ಲಕ್ಷ ರೂ. ನಿಗದಿ ಮಾಡಿದ್ದು ಸಮರ್ಥನೀಯವಲ್ಲ ಎಂದು ಆಕ್ಷೇಪಿಸಿದ್ದಾರೆ.ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿಗೆ ಆಗ್ರಹ: ಆ.31 ರಂದು ರಾಜಭವನಕ್ಕೆ ಕಾಂಗ್ರೆಸ್ ಶಾಸಕರ ಪರೇಡ್
ಕೊಡುವ ಉದ್ದೇಶ ಇದ್ದರೆ ಇವತ್ತಿನ ಮಾರುಕಟ್ಟೆ ದರದಲ್ಲಿ ಕೊಡಬೇಕು. ಅಲ್ಲಿರುವ ಅದಿರು ನಿಕ್ಷೇಪಗಳ ಮೇಲೆ ಸರ್ಕಾರದ ಹಕ್ಕು ಎಂದು ಷರತ್ತಿನೊಂದಿಗೆ ಕೊಡಬೇಕು. ಹಾಗಾಗಿ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ತಿಳಿಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ಸಿನವರದ್ದು ಸರ್ಕಾರ ಪ್ರಾಯೋಜಿತ ಭಯೋತ್ಪಾದನೆಯೇ ಅಥವಾ ಸರ್ಕಾರಿ ಪ್ರಾಯೋಜಿತ ಬೆದರಿಕೆಯೇ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರು ಅನುಮತಿ ಕೊಟ್ಟದ್ದನ್ನೇ ಅಪರಾಧ ಎಂದು ಬಿಂಬಿಸಿ ಸರ್ಕಾರವೇ ನೇತೃತ್ವ ವಹಿಸಿ ದಂಗೆ ಎಬ್ಬಿಸುವ ಮಾತು ದುರುದೃಷ್ಟಕರ ಮತ್ತು ಸಂವಿಧಾನ ವಿರೋಧಿ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ರಾಜ್ಯಪಾಲರಿಗೆ ನಿಂದನೆ; ಕಾಂಗ್ರೆಸ್ ನಾಯಕರ ವಿರುದ್ಧ ಡಿಜಿಪಿಗೆ ಬಿಜೆಪಿ ದೂರು
ಒಬ್ಬ ಎಂಎಲ್‍ಸಿ ಐವಾನ್ ಡಿಸೋಜ ಅವರು ಬಾಂಗ್ಲಾ ಮಾದರಿ ದಾಳಿ ಮಾಡಬೇಕಾಗುತ್ತದೆ ಎನ್ನುತ್ತಾರೆ. ಇದರರ್ಥ ಏನು? ಇನ್ನೊಬ್ಬರು ರಾಜ್ಯಪಾಲರು ಹಾಸಿಗೆ ದಿಂಬು ಕಟ್ಟಿಕೊಂಡು ಓಡಬೇಕಾಗುತ್ತದೆ ಎನ್ನುತ್ತಾರೆ. ರಾಜ್ಯಪಾಲರ ತೀರ್ಮಾನ ಸರಿಯೇ ತಪ್ಪೇ ಎಂದು ಪ್ರಶ್ನಿಸಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಪ್ರಶ್ನಿಸಲು ಅವಕಾಶವಿದೆ. ನ್ಯಾಯಾಲಯಕ್ಕೆ ಹೋದಾಗ ಅಲ್ಲಿ 29ರವರೆಗೆ ಅಂದರೆ 10 ದಿನ ತಡೆಯಾಜ್ಞೆ ನೀಡಿದ್ದಾರೆ. ಹಾಗಿದ್ದರೆ ಈ ದೂರುದಾರರು ನ್ಯಾಯಾಧೀಶರ ಮೇಲೆ ಸ್ಟ್ರೈಕ್ ಮಾಡಿದರೆ ಹೇಗಿದ್ದೀತು ಎಂದು ಕೇಳಿದರು. ಕಾಂಗ್ರೆಸ್ ಪಕ್ಷ ತನಿಖೆಯನ್ನೇ ಯಾಕೆ ವಿರೋಧಿಸುತ್ತಿದೆ?
ಒಂದು ವೇಳೆ ನ್ಯಾಯಾಧೀಶರು ಸಿದ್ದರಾಮಯ್ಯನವರ ವಿರುದ್ಧ ತೀರ್ಪು ಕೊಟ್ಟರೆ ನ್ಯಾಯಾಧೀಶರ ವಿರುದ್ಧ ಇವರು ದಂಗೆ ಏಳಿಸ್ತಾರಾ? ಅವರ ಪ್ರತಿಕೃತಿ ದಹನ ಮಾಡುವರೇ? ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರಾ ಎಂದು ಸಿ.ಟಿ.ರವಿ ಅವರು ಪ್ರಶ್ನೆಗಳನ್ನು ಮುಂದಿಟ್ಟರು.
ರಾಜ್ಯಪಾಲರದು ಸಾಂವಿಧಾನಿಕ ಹುದ್ದೆ. ಸಂವಿಧಾನದತ್ತ ಅಧಿಕಾರ ಬಳಸಿ ಅವರು ಪ್ರಾಸಿಕ್ಯೂಷನ್‍ಗೆ ಅನುಮತಿ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ತನಿಖೆಯನ್ನೇ ಯಾಕೆ ವಿರೋಧಿಸುತ್ತಿದೆ ಎಂದು ಕೇಳಿದರು. ರಾಜ್ಯಪಾಲರು ಸಿದ್ದರಾಮಯ್ಯನವರು ಅಪರಾಧಿ ಎಂದು ಹೇಳಿಲ್ಲ ಎಂದರು. ಪ್ರತಿಭಟನೆ ವೇಳೆ ಕಲ್ಲು ತೂರಾಟ ಮಾಡಿದ್ದಾರೆ. ಟೈರ್‌ಗಳನ್ನು ಸುಟ್ಟಿದ್ದಾರೆ. ಇವರು ಕರ್ನಾಟಕವನ್ನು ಏನು ಮಾಡಲು ಹೊರಟಿದ್ದಾರೆ ಎಂದು ಕೇಳಿದರು. ಈ ದೇಶದಲ್ಲಿ ಎರಡು ಬಾರಿ ಸಿಎಂ ಆದ, ಅಗಾಧ ಅನುಭವವುಳ್ಳ ಸಿದ್ದರಾಮಯ್ಯನವರು ಸೇರಿ ಯಾರು ಕೂಡ ಸಂವಿಧಾನಕ್ಕಿಂತ ಮೇಲಲ್ಲ ಎಂದು ಸಿ.ಟಿ.ರವಿ ನೆನಪಿಸಿಕೊಟ್ಟರು. ಇದನ್ನೂ ಓದಿ: ಚಾರ್ಜ್‌ಶೀಟ್‌ನಲ್ಲಿ ಹೆಸರಿರುವ ಕುಮಾರಸ್ವಾಮಿ ಕೇಂದ್ರ ಸಚಿವರಾಗಬಹುದಾ: ಪೊನ್ನಣ್ಣ ಪ್ರಶ್ನೆ
ಸಿದ್ದರಾಮಯ್ಯನವರು ಸಂವಿಧಾನಕ್ಕಿಂತ ಮೇಲೆ ಎಂದು ತಿಳಿದುಕೊಳ್ಳುವುದು ಅಹಂಕಾರದ ಭಾವನೆ. ಐವಾನ್ ಡಿಸೋಜ ಸೇರಿದಂತೆ ಯಾರ‍್ಯಾರು ರಾಜ್ಯಪಾಲರಿಗೆ ಬೆದರಿಕೆ ಹಾಕಿದ್ದರೋ, ಯಾರ‍್ಯಾರು ದಾಳಿ ಮಾಡುವುದಾಗಿ ಬೆದರಿಸಿದ್ದಾರೋ, ಭಯೋತ್ಪಾದಕರ ಥರ ಮಾತನಾಡಿದ್ದಾರೋ ಅವರ ವಿರುದ್ಧ ಪೊಲೀಸ್ ಮಹಾ ನಿರ್ದೇಶಕರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕಿತ್ತು. ಎಷ್ಟೋ ಪ್ರಕರಣಗಳಲ್ಲಿ ದೂರುದಾರರೇ ಇಲ್ಲದೆ, ನೀವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದೀರಿ. ಆದರೆ, ಇಲ್ಲಿ ಇನ್ನೂ ಯಾಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಲ್ಲ ಎಂದು ಕಿಡಿಕಾರಿದರು.
– ಸಿಎಂ ಎಕ್ಸ್ ಖಾತೆ ವಂಧಿಮಾಗದರ ಮುಖವಾಣಿ – ಕಾಂಗ್ರೆಸ್ ಕಾರ್ಯಕರ್ತರು ಖಾತೆ ನಿರ್ವಹಣೆ ಮಾಡುತ್ತಿದ್ದಾರಾ?
ಬೆಂಗಳೂರು: ಸಿಎಂ ಆಫ್ ಕರ್ನಾಟಕ ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿಯವರನ್ನು (Narendra Modi) ನಿಂದಿಸಲಾಗಿದೆ ಎಂದು ಪರಿಷತ್ ಸದಸ್ಯ ಸಿ.ಟಿ ರವಿ (C.T Ravi) ಕಿಡಿಕಾರಿದ್ದಾರೆ.
“@CMofKarnataka” ಎಂಬ ಸಾಮಾಜಿಕ ಜಾಲತಾಣದ ಖಾತೆ ಸಂವಿಧಾನತ್ಮಕವಾದುದು, ಮುಖ್ಯಮಂತ್ರಿಯಾದವರ ದೈನಂದಿನ ಸರಕಾರದ ಕಾರ್ಯ ಚಟುವಟಿಕೆಗಳು ಜನಸಾಮಾನ್ಯರಿಗೆ ನೇರವಾಗಿ ತಲುಪಬೇಕು ಎಂಬ ನಿಟ್ಟಿನಲ್ಲಿ ವಾರ್ತಾ ಇಲಾಖೆ ಸೃಷ್ಟಿಸಿದ ಖಾತೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸಿಎಂ ಆಫ್ ಕರ್ನಾಟಕ ಎಂಬ ಎಕ್ಸ್ ಖಾತೆ ಸಂವಿಧಾನಾತ್ಮಕವಾದದ್ದು. ಮುಖ್ಯಮಂತ್ರಿಯಾದವರ ದೈನಂದಿನ ಸರ್ಕಾರದ ಕಾರ್ಯಚಟುವಟಿಕೆಗಳು ಜನಸಾಮಾನ್ಯರಿಗೆ ನೇರವಾಗಿ ತಲುಪಬೇಕು ಎಂಬ ನಿಟ್ಟಿನಲ್ಲಿ ವಾರ್ತಾ ಇಲಾಖೆ ಸೃಷ್ಟಿಸಿದ ಖಾತೆಯಾಗಿದೆ. ಆದರೆ ಈಗ ಏನಾಗಿದೆ ನೋಡಿ, ಪ್ರಧಾನಿ ಮೋದಿ ಹಾಗೂ ರಾಜ್ಯಪಾಲರನ್ನು ನಿಂದಿಸಲು ಈ ಖಾತೆಯ ಬಳಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೇ ಆ ಎಕ್ಸ್ ಖಾತೆಯನ್ನು, ಸಿಎಂ ಸಿದ್ದರಾಮಯ್ಯ ಅವರ ವಂಧಿಮಾಗದರು ಕಾಂಗ್ರೆಸ್ ಮುಖವಾಣಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ಸಾಮಾಜಿಕ ಜಾಲತಾಣದ ಖಾತೆಯನ್ನು ವಾರ್ತಾ ಇಲಾಖೆಯ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೊ? ಅಥವಾ ಕೆಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರೊ? ಎಂದು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗೆ ಕಾಂಗ್ರೆಸ್ ಉತ್ತರಿಸಬೇಕು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಇದನ್ನು ಗಮನಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
– ಸರ್ಕಾರದ ವಿರುದ್ಧ ವರ್ಗಾವಣೆ ರೇಟ್ ಕಾರ್ಡ್ ಫಿಕ್ಸ್ ಆರೋಪ ; ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಬೆಂಗಳೂರು: ಮುಡಾ, ವಾಲ್ಮೀಕಿ ನಿಗಮದ ಅಕ್ರಮಗಳ ಬೆನ್ನಲ್ಲೇ ಈಗ ದೋಸ್ತಿಗಳು ಸರ್ಕಾರದ ವಿರುದ್ಧ ವರ್ಗಾವಣೆಗೆ ರೇಟ್ ಕಾರ್ಡ್ ಫಿಕ್ಸ್ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪರಿಷತ್‌ನ ಬಿಜೆಪಿ, ಜೆಡಿಎಸ್ ಸದಸ್ಯರು ಸರ್ಕಾರದ ರೇಟ್ ಕಾರ್ಡ್ ವಿರುದ್ಧ ಧರಣಿ ನಡೆಸಿದರು.
ಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದ ಎಲ್ಲೆ ಮೀರಿದೆ. ಸಿದ್ದರಾಮಯ್ಯ ಅವರದ್ದು ಪಾರದರ್ಶಕ ಭ್ರಷ್ಟ ಸರ್ಕಾರ. ಇಲಾಖೆಗಳಲ್ಲಿ ವರ್ಗಾವಣೆಗೆ ರೇಟ್ ಕಾರ್ಡ್ ಫಿಕ್ಸ್ ಮಾಡಲಾಗಿದೆ. ಈ ರೇಟ್ ಕಾರ್ಡ್ ಫಿಕ್ಸ್ ಸತ್ಯ ಎಂದು ಆರೋಪಿಸಿದರು.
ನಗರಾಭಿವೃದ್ಧಿ ಇಲಾಖೆಯಲ್ಲಿ ಚದರಡಿಗೆ 100 ರೂ. ಕೊಡಬೇಕು. ಭೂ ಪರಿವರ್ತನೆಗೆ ಎಕರೆಗೆ 27 ಲಕ್ಷ ರೂ. ಫಿಕ್ಸ್. ಪೊಲೀಸ್ ಇನ್‌ಸ್ಪೆಕ್ಟರ್ ವರ್ಗಾವಣೆಗೆ 50 ಲಕ್ಷದಿಂದ 1 ಕೋಟಿ ರೂ., ಎಇ 50 ಲಕ್ಷದಿಂದ 75 ಲಕ್ಷ. ತಹಶಿಲ್ದಾರ್ 50 ಲಕ್ಷದಿಂದ 1 ಕೋಟಿ ರೂ. ಬೆಂಗಳೂರು ಎಸಿ 5 ಕೋಟಿ ರೂ. ಎಸಿಪಿ 1.5 ಕೋಟಿಯಿಂದ 2 ಕೋಟಿ. ಎಇ 20-25 ಲಕ್ಷ, ಎಸಿ (ಬೆಂಗಳೂರು) 5-7 ಕೋಟಿ, ಡಿಸಿ 1-1.5 ಕೋಟಿ ರೂ. ಕೊಡಬೇಕು ಸಬ್ ರಿಜಿಸ್ಟ್ರಾರ್ ಹರಾಜು ಹೋಲ್‌ಸೇಲ್ ಬಿಡ್ ನಡೆಸಲಾಗ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಾಸನದ ಮಲೆನಾಡು ಭಾಗದಲ್ಲೂ ಮಳೆಯಬ್ಬರ; ಶಿರಾಡಿಘಾಟ್‌ನಲ್ಲಿ ಸರಣಿ ಭೂಕುಸಿತ – ಬೆಂಗಳೂರು, ಮಂಗಳೂರು ಸಂಚಾರ ಬಂದ್
ರೇಟ್ ಕಾರ್ಡ್ ಸತ್ಯ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಇವರ ಭ್ರಷ್ಟಾಚಾರ ಬರಿಗಣ್ಣಿಗೆ ಕಾಣತ್ತೆ. ನಲವತ್ತು ವರ್ಷಗಳ ಸಾರ್ವಜನಿಕ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ ಅಂತಾರೆ ಸಿದ್ದರಾಮಯ್ಯ. ಇದನ್ನ ಯಾರೂ ಒಪ್ಪಲ್ಲ ಎಂದು ಟಾಂಗ್ ಕೊಟ್ಟರು.
ದಾವಣಗೆರೆ: ಪ್ರಜಾಪ್ರಭುತ್ವ ಎಂದರೆ ಸಂವಿಧಾನದಲ್ಲಿ ಪ್ರಜೆಗಳಿಂದ, ಪ್ರಜೆಗಳಿಗಾಗಿ ಇರುವ ಸರ್ಕಾರ ಎಂಬ ಅರ್ಪಣೆಯಾಗಿದೆ. ಅದನ್ನು ಮತಾಂಧರಿಂದ, ಮತಾಂಧರಿಗಾಗಿ, ಮತಾಂಧರಿಗೋಸ್ಕರ ಇರುವ ಸರ್ಕಾರವೆಂದು ಕಾಂಗ್ರೆಸ್‍ನವರು (Congress) ತಿರುಚಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ ರವಿ (C.T Ravi) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ (Davanagere) ಬಿಜೆಪಿ (BJP) ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪರ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮೋದಿ ಪ್ರಧಾನಿಯಾದ ಮೇಲೆ ದೇಶ ಜಗತ್ತಿನ ಎದುರು ತಲೆ ಎತ್ತಿ ನಿಂತಿದೆ. ಗಾಯತ್ರಿ ಸಿದ್ದೇಶ್ವರ್ ಅವರನ್ನು ಗೆಲ್ಲಿಸಿ, ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಿ ಎಂದ ಮನವಿ ಮಾಡಿದ್ದಾರೆ. ಇದನ್ನೂ ಓದಿ: General Elections2024: ನೆಚ್ಚಿನ ಅಭ್ಯರ್ಥಿಗಳ ಮೇಲೆ ಲಕ್ಷ ಲಕ್ಷ ಬೆಟ್ಟಿಂಗ್ ಕಟ್ಟಿದ ವಕೀಲರು!
ನಗರದ ಅರಳಿಮರ ಸರ್ಕಲ್‍ನಿಂದ ರೋಡ್ ಶೋ ಪ್ರಾರಂಭವಾಗಿ ಆನೆಕೊಂಡ, ಮಟ್ಟಿಕಲ್ಲು, ಅಣ್ಣ ನಗರ, ಬಂಬೂ ಬಜಾರ್ ಸೇರಿ ವಿವಿಧ ಬಡಾವಣೆಗಳಲ್ಲಿ ನಡೆಯಿತು. ಸಾವಿರಾರು ಬಿಜೆಪಿ ಕಾರ್ಯಕರ್ತರು, ಮಹಿಳೆಯರು ರೋಡ್ ಶೋನಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಿ.ಟಿ ರವಿ ಅವರಿಗೆ ಮಾಜಿ ಸಚಿವ ಭೈರತಿ ಬಸವರಾಜ್, ಎಂಎಲ್‍ಸಿ ಎನ್.ರವಿಕುಮಾರ್ ಸೇರಿ ಅನೇಕರು ಸಾಥ್ ನೀಡಿದ್ದಾರೆ. ಇದನ್ನೂ ಓದಿ: ನಾಡಾದಿಂದ ಕುಸ್ತಿಪಟು ಭಜರಂಗ್ ಪುನಿಯಾ ಅಮಾನತು
ಬೆಳಗಾವಿ: ಪ್ರಜ್ವಲ್ ರೇವಣ್ಣ (Prajwal Revanna) ಪೆನ್‍ಡ್ರೈವ್ ಪ್ರಕರಣದಲ್ಲಿ ವೀಡಿಯೋಗಳು ನಾಲ್ಕೈದು ವರ್ಷಗಳ ಹಿಂದಿನದು ಎಂದು ಸಿ.ಟಿ ರವಿ (C.T Ravi) ಹೇಳಿರಬಹುದು. ಇಲ್ಲಿಯವರೆಗೂ ಯಾರು ಸಂತ್ರಸ್ತೆಯರು ದೂರು ಕೊಟ್ಟಿರಲಿಲ್ಲ ಈಗ ದೂರು ದಾಖಲಿಸಿದ್ದಾರೆ. ಪ್ರಜ್ವಲ್ ಬಂಧನಕ್ಕೆ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಾಜಿ ಸಚಿವ ಸಿ.ಟಿ ರವಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ಅವರು ಸುಳ್ಳು ಹೇಳುತ್ತಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಪ್ರಜ್ವಲ್ ರೇವಣ್ಣನಿಗೆ ಸೇರಿದ ಅಶ್ಲೀಲ ವೀಡಿಯೋಗಳಿವೆ ಎಂಬ ಚರ್ಚೆಗಳು ನಡೆದಿವೆ. ಈ ವಿಚಾರ ಗೊತ್ತಿದ್ದರೂ ಬಿಜೆಪಿಯವರು (BJP) ಜೆಡಿಎಸ್ (JDS) ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಅಲ್ಲದೇ ಪ್ರಜ್ವಲ್ ರೇವಣ್ಣಗೆ ಮೈತ್ರಿ ಅಭ್ಯರ್ಥಿ ಎಂದು ಟಿಕೆಟ್ ಕೊಟ್ಟಿದ್ದಾರೆ. ಪ್ರಜ್ವಲ್ ಪರವಾಗಿ ಪ್ರಧಾನಿ ಮೋದಿ (Narendra Modi) ಹಾಗೂ ಅಮಿತ್ ಶಾ ಪ್ರಚಾರ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ಹಣೆಬರಹ ಚೆನ್ನಾಗಿ ಗೊತ್ತು: ತಂಗಡಗಿ ಕಿಡಿ
ಜೆಡಿಎಸ್‍ನವರು ಈ ಮೊದಲು ಕಮ್ಯುನಲ್ ಪಾರ್ಟಿ ಎಂದು ಹೇಳಿಕೊಳ್ಳುತ್ತಿದ್ದರು. ಯಾವುದೇ ಕಾರಣಕ್ಕೂ ಬಿಜೆಪಿ ಜೊತೆಗೆ ಸೇರಲ್ಲ ಎಂದಿದ್ದರು. ಮೋದಿ ಪ್ರಧಾನಿ ಆಗಲ್ಲ, ಆದರೆ ನಾನು ದೇಶ ಬಿಟ್ಟು ಹೋಗ್ತಿನಿ ಎಂದು ದೇವೇಗೌಡರು ಹೇಳಿದ್ರು. ಮೋದಿ ಪ್ರಧಾನಿ ಆದ ಬಳಿಕ ದೇವೆಗೌಡರು ದೇಶ ಬಿಟ್ಟು ಹೋದ್ರಾ ಎಂದು ಅವರು ಪ್ರಶ್ನಿಸಿದ್ದಾರೆ.
ಸಿ.ಟಿ ರವಿ ಏನು ಹೇಳಿದ್ರು?
ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ರಾಯಚೂರಿನ ಸಿಂಧನೂರಿನಲ್ಲಿ ಮಾತನಾಡಿದ್ದ ಸಿ.ಟಿ ರವಿ, ಕಾಂಗ್ರೆಸ್ ಇದನ್ನು ಇಡೀ ಎನ್‍ಡಿಎ ಅಪರಾಧ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಸರ್ಕಾರವೇ ಎಸ್‍ಐಟಿ ರಚನೆ ಮಾಡಿದೆ, ತನಿಖೆಯಾಗಲಿ. ಬಳಿಕ ಸತ್ಯಾಂಶ ಹೊರಬೀಳಲಿದೆ. ತನಿಖೆಗೂ ಮುಂಚೆ ನಾವು ಯಾರನ್ನೂ ಅಪರಾಧಿ ಎಂದು ಘೋಷಣೆ ಮಾಡುವಂತಿಲ್ಲ. ದೂರುದಾರರ ದೂರಿನಲ್ಲಿನ ಹೇಳಿಕೆ ಪ್ರಕಾರ, ಇದು ನಾಲ್ಕೈದು ವರ್ಷದ ಹಿಂದಿನ ಘಟನೆ. ನಾಲ್ಕೈದು ವರ್ಷದ ಹಿಂದೆ ಜನತಾದಳ ಕಾಂಗ್ರೆಸ್ ಜೊತೆ ಇತ್ತು ಎಂಬುದನ್ನು ಇವರು ಮರೆತಿದ್ದಾರೆ ಎಂದು ಕಿಡಿಕಾರಿದ್ದರು. ಇದನ್ನೂ ಓದಿ: Exclusive: ರೇವಣ್ಣ ಕಿಡ್ನ್ಯಾಪ್ ಕೇಸ್ – ಅಪಹರಿಸಿ ಸಂತ್ರಸ್ತೆಯನ್ನಿರಿಸಿದ್ದ ತೋಟದ ಮನೆ ಪತ್ತೆ; ಕೂಲಿ ಕಾರ್ಮಿಕರಿಂದ ಸ್ಫೋಟಕ ಮಾಹಿತಿ!
ಕೊಪ್ಪಳ: ಕಳೆದ 2019 ರ ಲೋಕಸಭೆ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಕೂಡಾ ಪ್ರಜ್ವಲ್ ರೇವಣ್ಣ (Prajwal Revanna) ಪರ ಪ್ರಚಾರ ಮಾಡಿದ್ದಾರೆ. ಅದರಂತೆ ಈ ಬಾರಿ ಎನ್‌ಡಿಎ ಒಕ್ಕೂಟದಿಂದ ರಾಜ್ಯದಲ್ಲಿ ಮೂರು ಸ್ಥಾನ ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದೇವೆ. ಪ್ರಜ್ವಲ್ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ (C.T.Ravi) ಸ್ಪಷ್ಟಪಡಿಸಿದರು.
ಕೊಪ್ಪಳದಲ್ಲಿ (Koppal) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಎಲ್ಲ ಘಟನೆ ಪ್ರಜ್ವಲ್ ಎನ್‌ಡಿಎ ಅಭ್ಯರ್ಥಿಯಾದ ನಂತರ ನಡೆದಿಲ್ಲ. ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬುದು ಜೆಡಿಎಸ್‌ಗೆ ಬಿಟ್ಟ ವಿಚಾರ ಆಗಿತ್ತು. ನಾವು ಪ್ರಕರಣವನ್ನು ಖಂಡಿಸಿದ್ದೇವೆ. ಒಂದೊಮ್ಮೆ ತಪ್ಪು ಮಾಡಿದ್ದರೆ, ಉಪ್ಪು ತಿಂದವನು ನೀರು ಕುಡಿಯಲೇಬೇಕು. ಇದು ಎಲ್ಲರಿಗೂ ಅನ್ವಯವಾಗುತ್ತದೆ. ಮಾತೃಶಕ್ತಿ ಜೊತೆ ಬಿಜೆಪಿ ನಿಲ್ಲುತ್ತದೆ. ಮಹಿಳೆಯರಿಗೆ ಆಗುವ ಯಾವುದೇ ಅನ್ಯಾಯವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಡ್ರೈವರ್ ಕಾರ್ತಿಕ್ ಮಲೇಷ್ಯಾದಲ್ಲಿದ್ದಾನೆ, ಆತನನ್ನು ಅಲ್ಲಿಗೆ ಕಳುಹಿಸಿದ್ದು ಯಾರು: ಹೆಚ್‌ಡಿಕೆ ಪ್ರಶ್ನೆ
ನಾವು ಪ್ರಜ್ವಲ್ ರೇವಣ್ಣ ಪರ ವಕಾಲತ್ತು ಮಾಡಲ್ಲ. ತಪ್ಪು ಮಾಡಿದ್ರೆ ಅವರಿಗೆ ಖಂಡಿತ ಶಿಕ್ಷೆಯಾಗಲಿ. ಆದರೆ ನೇಹಾ ಪ್ರಕರಣ ಮತ್ತು ಹಾಸನ ಘಟನೆಯನ್ನು ಒಂದೇ ತಕ್ಕಡಿಯಲ್ಲಿ ತೂಗಬಾರದು. ಹಾಸನ ಘಟನೆ ತನಿಖೆಯಾಗಬೇಕಿದೆ. ತನಿಖೆ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ. ನೇಹಾ ಘಟನೆ ಕಣ್ಣ ಮುಂದೆ ನಡೆದಿರೋದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ತನಿಖೆ ಮಾಡಿ ಕ್ರಮ ಕೈಗೊಳ್ಳಲಿ. ತನಿಖೆ ಮೇಲೆ ಯಾರು ಪ್ರಭಾವ ಬೀರುವ ಕೆಲಸ ಮಾಡಲ್ಲ. ಆದರೆ, ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ವರ್ತನೆ ಸರಿ ಇರಲಿಲ್ಲ. ಅದಕ್ಕಾಗಿ ನಾವು ಹೋರಾಟ ಮಾಡಬೇಕಾಯಿತು ಎಂದರು.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಶಾಸಕ ರಾಜು ಕಾಗೆ ಹೇಳಿಕೆ ವಿಚಾರವಾಗಿ ಮಾತನಾಡಿ, ಮೋದಿ ಮೋದಿ ಎಂದು ಜನ ಹೇಳುವುದು ನೋಡಿಯೇ ಕಾಂಗ್ರೆಸ್‌ನವರಿಗೆ ಲೂಸ್ ಮೋಷನ್ ಆಗಿದೆ. ಹೀಗಾಗಿಯೇ ಅವರು ಚೊಂಬು ಹಿಡಿದುಕೊಂಡು ಓಡಾಡುತ್ತಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಮಾಡದ ಹಗರಣಗಳಿಲ್ಲ. ಅಭಿವೃದ್ಧಿಯ ಜೊತೆಗೆ ಸುಭದ್ರ ಜೀವನ ಸಂಕಲ್ಪವೇ ಬಿಜೆಪಿ ಉದ್ದೇಶ. ಇನ್ನೆರಡು ವರ್ಷದಲ್ಲಿ ಜರ್ಮನ್ ಮತ್ತು ಜಪಾನ್ ಹಿಂದಿಕ್ಕುತ್ತೇವೆ. ಮುಂದಿನ 25 ವರ್ಷದ ನಂತರ ಭಾರತ ಜಗತ್ತಿನ ನಂಬರ್ 1 ರಾಷ್ಟ್ರ ಆಗುತ್ತೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಲ್ಲ ಗೊತ್ತಿದ್ದರೂ ಹೆಣ್ಣನ್ನು ಶೋಷಿಸುವ ರಾಕ್ಷಸನ ಪರ ಪ್ರಚಾರ ಮಾಡಿದ್ಯಾಕೆ: ಪ್ರಜ್ವಲ್ ಕೇಸ್‌ನಲ್ಲಿ ಮೋದಿ ವಿರುದ್ಧ ರಾಗಾ ಕಿಡಿ
ಮಾಜಿ ಸಂಸದ ಸಂಗಣ್ಣ ಕರಡಿ ಟೀಕೆಗೆ ಪ್ರತಿಕ್ರಿಯಿಸಿ, ಮೋದಿ ಮಾಯೆಯೇ ಸಂಗಣ್ಣ ಕರಡಿ ಅವರನ್ನು ಗೆಲ್ಲಿಸಿತ್ತು. ಕರಡಿ ಸಂಗಣ್ಣಗೆ ಸತ್ಯದ ದರ್ಶನ ಆಗುವುದಕ್ಕೆ ಹೆಚ್ಚು ಕಾಲ ಹಿಡಿಯಲ್ಲ. ಅದಕ್ಕೆ ನಾವು ಹಳೆ ಕ್ಯಾಸೆಟ್ ಹಾಕಿ ತೋರಿಸಬೇಕಿಲ್ಲ. ಕಾಂಗ್ರೆಸ್‌ನಲ್ಲಿ ವಿಶ್ವಾಸಾರ್ಹ ನಾಯಕತ್ವ ಇಲ್ಲ. ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದರೆ ಬರುವ ಮತಗಳೂ ಬರುವುದಿಲ್ಲ. ಮತ ಆಧಾರಿತ ಮೀಸಲಾತಿಯನ್ನು ಅಂಬೇಡ್ಕರ್ ವಿರೋಧಿಸಿದ್ದರು. ಜಾತಿ ಆಧಾರಿತ ಮೀಸಲಾತಿಗೆ ಈಗಲೂ ನಮ್ಮ ವಿರೋಧ ಇಲ್ಲ. ಈ ಬಗ್ಗೆ ಕಾಂಗ್ರೆಸ್ ಸಂವಿಧಾನ ಬಾಹಿರವಾಗಿ ವರ್ತಿಸುತ್ತಿದೆ. ರಾಜ್ಯ ಸರ್ಕಾರ ತಮ್ಮ ಖಜಾನೆಯಿಂದ ಬರ ಪರಿಹಾರಕ್ಕೆ ಎಷ್ಟು ಕೊಟ್ಟಿದೆ ಎಂಬುದನ್ನು ಹೇಳಲಿ ಎಂದರು.
– ಇನ್ನಾದರೂ ಎದ್ದು ನಿಲ್ಲು ಹಿಂದೂ, ಸುಮ್ಮನಿದ್ದರೆ ದೇಶವೂ ಇರದು, ಜಾತಿಯು ಇರದು ಎಂದ ಬಿಜೆಪಿ ನಾಯಕ
ಬೆಂಗಳೂರು: ಹುಬ್ಬಳ್ಳಿಯಲ್ಲಿ ಯುವತಿ (Hubballi Murder) ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ (C.T.Ravi) ಕಿಡಿಕಾರಿದ್ದಾರೆ. ಅವರು ಅವಳ ಕುತ್ತಿಗೆಗೆ ಚಾಕು ಹಾಕಿ ಸಾಯಿಸುತ್ತಾರೆ. ಸರ್ಕಾರ ಮೂಕಪ್ರೇಕ್ಷಕನಂತಿರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ಸಿನ ತುಘಲಕ್ ದರ್ಬಾರ್ ನಲ್ಲಿ ನಮ್ಮ ದುರ್ದೈವ.
*ಹನುಮಾನ್ ಚಾಲೀಸಾ ಕೇಳುತ್ತೀರಾ???
ಅವರು ನಿಮ್ಮ ಮೇಲೆ ಹಲ್ಲೆ ಮಾಡುತ್ತಾರೆ ಮತ್ತು ಕಾಂಗ್ರೆಸ್ ಸರ್ಕಾರ ನಿಮ್ಮ ಮೇಲೆಯೇ ಕೇಸ್ ಹಾಕುತ್ತಾರೆ.
*ರಾಮಮಂದಿರ ಉದ್ಘಾಟನೆ ವಿಜೃಂಭಣೆಯಿಂದ ಮಾಡ್ತೀರಾ????
ಅವರು ರಾಮೇಶ್ವರ ಕೆಫೆಗೆ ಬಾಂಬ್ ಇಡುತ್ತಾರೆ ಮತ್ತು ಕಾಂಗ್ರೆಸ್…
— C T Ravi ???????? ಸಿ ಟಿ ರವಿ (Modi Ka Parivar) (@CTRavi_BJP) April 19, 2024
ರಾಮಮಂದಿರ ಉದ್ಘಾಟನೆ ವಿಜೃಂಭಣೆಯಿಂದ ಮಾಡ್ತೀರಾ? ಅವರು ರಾಮೇಶ್ವರ ಕೆಫೆಗೆ ಬಾಂಬ್ ಇಡುತ್ತಾರೆ ಮತ್ತು ಕಾಂಗ್ರೆಸ್ ಸರ್ಕಾರ ಅದನ್ನು ಲೋ ಇಂಟೆನ್ಸಿಟಿ ಬಾಂಬ್ ಎಂದು ಮೂಲೆಗುಂಪು ಮಾಡುತ್ತದೆ.
ನಿಮ್ಮ ಮನೆ ಮಗಳು ನಿನ್ನ ಲವ್ ಜಿಹಾದ್‌ಗೆ ಬಲಿಯಾಗುವುದಿಲ್ಲ ಎಂದು ತಿರಸ್ಕರಿಸುತ್ತಾಳಾ? ಅವರು ಅವಳ ಕುತ್ತಿಗೆಗೆ ಚಾಕು ಹಾಕಿ ಸಾಯಿಸುತ್ತಾರೆ. ಮತ್ತು ಸರ್ಕಾರ ಮೂಕಪ್ರೇಕ್ಷಕನಂತಿರುತ್ತದೆ.
ಬಿಜೆಪಿ ಪರ ಚುನಾವಣಾ ಪ್ರಚಾರ ಕೈಗೊಳ್ಳುತ್ತೀರಾ ? ಅವರು ನಿಮ್ಮ ಮೇಲೆ ಕಾರು ಹರಿಸಿ ಸಾಯಿಸುತ್ತಾರೆ ಮತ್ತು ಎಲ್ಲರು ಮೌನವಾಗಿರುತ್ತಾರೆ. ನನಗಲ್ಲ ಎನ್ನುವ ಕಾಲ ಇದಲ್ಲ. ಪ್ರತಿಯೊಂದು ಬೆಳವಣಿಗೆಗೂ ನಮ್ಮ ಮೌನವು ಒಂದು ಕಾರಣ. ಇನ್ನಾದರೂ ಎದ್ದು ನಿಲ್ಲು ಹಿಂದೂ, ಸುಮ್ಮನಿದ್ದರೆ ದೇಶವೂ ಇರದು, ಜಾತಿಯು ಇರದು, ನಾನು ಇರೆನು, ನೀನು ಇರಲಾರೆ ಎಂದು ಸಿ.ಟಿ.ರವಿ ಬರೆದುಕೊಂಡಿದ್ದಾರೆ.