Tag: c t ravi

  • ಸಿ.ಟಿ.ರವಿ ಪ್ರಕರಣದಲ್ಲಿ ಸರ್ಕಾರದ ನಡೆ ಖಂಡನೀಯ – ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಬಿಜೆಪಿ ಮನವಿ

    ಸಿ.ಟಿ.ರವಿ ಪ್ರಕರಣದಲ್ಲಿ ಸರ್ಕಾರದ ನಡೆ ಖಂಡನೀಯ – ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಬಿಜೆಪಿ ಮನವಿ

    ಬೆಂಗಳೂರು: ಎಂಎಲ್‌ಸಿ ಸಿ.ಟಿ.ರವಿ (C.T.Ravi) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದು ಬಿಜೆಪಿ (BJP) ನಿಯೋಗ ಮನವಿ ಮಾಡಿಕೊಂಡಿದೆ.

    ಸಿ.ಟಿ.ರವಿ ಬಂಧನ ಪ್ರಕರಣದಲ್ಲಿ ಸತ್ಯ ಶೋಧನೆ ನಡೆಸಲು ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ಬಿಜೆಪಿ ನಿಯೋಗ ದೂರು ನೀಡಿದೆ. ಇದನ್ನೂ ಓದಿ: ಸಿ.ಟಿ.ರವಿ ಕೇಸ್ ಸಿಬಿಐಗೆ ಒಪ್ಪಿಸಿ: ಆರ್.ಅಶೋಕ್ ಆಗ್ರಹ

    ಬಿಜೆಪಿ ಎಂಎಲ್‌ಸಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ಖಂಡನೀಯ. ಸಾಂವಿಧಾನಿಕ ಹಾಗೂ ಕಾನೂನು ಉಲ್ಲಂಘನೆ ಆಗಿದೆ. ಪೊಲೀಸ್ ಇಲಾಖೆ ಮೂಲಕ ಅಧಿಕಾರ ದುರ್ಬಳಕೆ ಆಗಿದೆ. ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶ ಮಾಡಿ ಬಂಧನ ಪ್ರಕರಣದಲ್ಲಿ ಸತ್ಯ ಶೋಧನೆ ನಡೆಸಬೇಕು ಎಂದು ಮನವಿ ಸಲ್ಲಿಸಿದೆ.

    ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಸದನದಲ್ಲಿ ಆಕ್ಷೇಪಾರ್ಹ ಪದ ಬಳಕೆ ಆರೋಪದಲ್ಲಿ ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿದ್ದರು. ಬಂಧನದ ದಿನ ರಾತ್ರಿ ನಾಟಕೀಯ ಬೆಳವಣಿಗೆಗಳು ನಡೆದವು ಎಂದು ಪೊಲೀಸರ ವಿರುದ್ಧ ಸಿ.ಟಿ.ರವಿ ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: 4 ಜಿಲ್ಲೆ, 50ಕ್ಕೂ ಹೆಚ್ಚು ಗ್ರಾಮ, 14 ಗಂಟೆ ಅಲೆದಾಡಿಸಿದ್ರು.. ಪೊಲೀಸರು ದೌರ್ಜನ್ಯ ಎಸಗಿದ್ರು: ನೋವು ಹೇಳಿಕೊಂಡ ಸಿ.ಟಿ.ರವಿ

    ಸರ್ಕಾರದ ಆಣತಿಯಂತೆ ಪೊಲೀಸರು ನಡೆದುಕೊಂಡಿದ್ದಾರೆ. ನನಗೆ ದೈಹಿಕ, ಮಾನಸಿಕ ಹಿಂಸೆ ನೀಡಿದ್ದಾರೆ. ಎಂದು ಸಿ.ಟಿ.ರವಿ ಆರೋಪಿಸಿದ್ದರು. ಪಕ್ಷದ ನಾಯಕನ ಕೊಲೆಗೆ ಸಂಚು ನಡೆದಿತ್ತು ಎಂದು ಬಿಜೆಪಿ ಹಿರಿಯ ನಾಯಕರು ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ದಾವಣಗೆರೆಯಲ್ಲಿ ಸಿ.ಟಿ.ರವಿ ಬಿಡುಗಡೆ – ಬಿಜೆಪಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ

  • ನಾನು ಹೆದರೋದು ಇಲ್ಲ, ಹೆಬ್ಬಾಳ್ಕರ್ ಕ್ಷಮೆಯ ಅಗತ್ಯವೂ ಇಲ್ಲ: ಸಿ.ಟಿ. ರವಿ

    ನಾನು ಹೆದರೋದು ಇಲ್ಲ, ಹೆಬ್ಬಾಳ್ಕರ್ ಕ್ಷಮೆಯ ಅಗತ್ಯವೂ ಇಲ್ಲ: ಸಿ.ಟಿ. ರವಿ

    ಚಿಕ್ಕಮಗಳೂರು: ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar)  ಅವರ ಕ್ಷಮೆಯ ಅಗತ್ಯವೂ ಇಲ್ಲ. ಅವರ ಬೆದರಿಕೆಗೆ ನಾನು ಹೆದರೋದು ಇಲ್ಲ ಎಂದು ಎಂಎಲ್‌ಸಿ ಸಿ.ಟಿ ರವಿ (C.T Ravi) ಆಕ್ರೋಶ ಹೊರ ಹಾಕಿದ್ದಾರೆ.

    ನಗರದಲ್ಲಿರುವ (Chikkamagaluru) ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಬೆಳಗಾವಿಯನ್ನು ರಿಪಬ್ಲಿಕ್ ಆಗಲು ಜನರೂ ಒಪ್ಪಲ್ಲ. ಅದಕ್ಕೆ ನಾವೂ ಅವಕಾಶ ಕೊಡಲ್ಲ. ನನ್ನ ಮೇಲೆ ದೈಹಿಕ ಹಲ್ಲೆ ನಡೆದ ಸಂಬಂಧ ಕಿಶೋರ್ ಹಾಗೂ ಅರುಣ್ ದೂರು ನೀಡಿದ್ದಾರೆ. ಸುವರ್ಣ ಸೌಧದ ಪಶ್ಚಿಮ ಬಾಗಿಲಿನಲ್ಲಿ ಹಲ್ಲೆಗೆ ಮುಂದಾದ ವೇಳೆ ಅವರಿಬ್ಬರೂ ನನ್ನ ಜೊತೆ ಇದ್ದರು. ಹಾಗಾಗಿ ದೂರು ನೀಡಿದ್ದಾರೆ ಎಂದರು.

    ದೂರಿನ ಅಡಿ, ಏನು ಕ್ರಮಕೈಗೊಳ್ಳುತ್ತಾರೆ ನೋಡೋಣ. ಖಾನಾಪುರದಲ್ಲಿ ನಾನು ದೂರು ನೀಡಿದ್ದೇನೆ. ಎಫ್‌ಐಆರ್ ಪ್ರತಿ ನೀಡಿಲ್ಲ. ಎಫ್‌ಐಆರ್‌ಗಾಗಿ ಎರಡು ದಿನ ನಮ್ಮ ವಕೀಲರು ಹೋಗಿದ್ದಾರೆ. ಕಮಿಷನರ್ 15 ದಿನ ಸಮಯ ಇದೆ ಎಂದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ. ನನ್ನ ದೂರಿಗೂ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು. ಕಮಿಷನರ್ ಆ ಜಾಗದಲ್ಲಿ ಇರಲು ಸೂಕ್ತರಲ್ಲ ಎಂದು ಕಿಡಿಕಾರಿದ್ದಾರೆ.

    ಹಲ್ಲೆಗೆ ಮುಂದಾದಾಗ ಇದ್ದವರು ಲಕ್ಷ್ಮಿ ಹೆಬ್ಬಾಳ್ಕರ್ ಕಡೆಯವರು. ಯಾರೂ ಅಪರಿಚಿತರಲ್ಲ. ಇಬ್ಬರು ಹೆಬ್ಬಾಳ್ಕರ್ ಪಿಎಗಳು ಹಾಗೂ ಬಹುತೇಕ ಮುಸ್ಲಿಮರು ಇದ್ದರು. ಮಾಹಿತಿ ಸಂಗ್ರಹಿಸಿದ್ದೇನೆ ಎಲ್ಲವನ್ನೂ ಸಂಬಂಧಪಟ್ಟವರಿಗೆ ನೀಡುತ್ತೇನೆ. ಎಲ್ಲರ ಹೆಸರು ಹಾಕಿ ದೂರು ನೀಡಿದ್ದೇನೆ. ನನ್ನ ಮೇಲೆ ಕ್ರಮ ಮಾಡ್ತಾರೆ. ಅವರ ಮೇಲೆ ಕ್ರಮ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ.

    ನನಗೆ ಏನೂ ಆಗಿಲ್ಲ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರವಾಗಿ, ಕಾಂಗ್ರೆಸ್‌ನವರು ತುರ್ತು ಪರಿಸ್ಥಿತಿ ಮನಸ್ಥಿತಿಯಿಂದ ಹೊರಬರಬೇಕು. ಹೆಬ್ಬಾಳ್ಕರ್ ಏನು ಡಾಕ್ಟರ್ ಅಲ್ಲ. ತಲೆಗೆ ಗಾಯವಾದ ಬಳಿಕವೂ ಮೂರು ನಾಲ್ಕು ಗಂಟೆಗಳ ಕಾಲ ಚಿಕಿತ್ಸೆ ಕೊಡಿಸಿಲ್ಲ. ಖಾನಾಪುರದಲ್ಲಿ ಗಾಯವಾದರೆ, ರಾಮದುರ್ಗದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅವರ ತಪ್ಪು ಮುಚ್ಚಿಕೊಳ್ಳಲು ಆ ತಾಯಿ ಸುಳ್ಳುಗಳ ಸರಮಾಲೆಯನ್ನು ಸುರಿಸುತ್ತಿದ್ದಾರೆ. ಸುಳ್ಳನ್ನು ಸೋಲಿಸಬಹುದು ಆದರೆ, ಸತ್ಯವನ್ನು ಸೋಲಿಸಲು ಆಗಲ್ಲ ಎಂದು ಟಾಂಗ್ ನೀಡಿದ್ದಾರೆ.

    ಹೆಬ್ಬಾಳ್ಕರ್ ಕಣ್ಣೀರಿನಿಂದ ಲಾಭ ಪಡೆಯಬಹುದು ಅಂದುಕೊಂಡಿರಬಹುದು. ನನ್ನ ಪಿಎಗಳು ಲಂಚ ಕೇಳಿದ ಉದಾಹರಣೆಗಳಿಲ್ಲ. ಯಾರು ಸತ್ತಿಲ್ಲ, ಕೊಲೆಗಡುಕರು ಯಾರು ಎಲ್ಲವನ್ನೂ ಹೇಳುವ ಅಗತ್ಯವಿಲ್ಲ. ಯಾರ ರಾಜಕೀಯ ಹೇಗೆ ಶುರುವಾಯ್ತು ಎಂಬುದನ್ನು ಸ್ಥಳೀಯರಿಂದ ಕೇಳಿ. ಲಕ್ಷ್ಮಿ ಹೆಬ್ಬಾಳ್ಕರ್, ಮೋದಿ ಹತ್ತಿರ ಹೋಗ್ತೀನಿ ಅಂತಾರೆ, ಬಿಜೆಪಿಯವರು ಎಲ್ಲರೂ ದುಶ್ಯಾಸನರಾದರೇ ಅವರ ಬಳಿ ಏಕೆ ನ್ಯಾಯ ಕೇಳ್ತಾರೆ?‌ ಪಕ್ಕೆ, ಬೆನ್ನಿನಲ್ಲಿ ಪೆಟ್ಟಾಗಿರುವ ಮೂರರಿಂದ ನಾಲ್ಕು ಗುರುತುಗಳು ಇನ್ನೂ ಇವೆ. ಹೆಬ್ಬಾಳ್ಕರ್ ಪಿಎಗೆ ಅಷ್ಟು ಸೊಕ್ಕು ಹೇಗೆ?ಎಲ್ಲಿಂದ ಬಂತು? ಆ ಸೊಕ್ಕಿಗೆ ಕಾರಣ ಯಾರು. ಗೂಂಡಾಗಳಿಗೆ ಸುವರ್ಣಸೌಧದೊಳಗೆ ಪಾಸ್ ಕೊಟ್ಟಿದ್ದು ಯಾರು? ಅವರು ಓರ್ವ ಶಾಸಕನಿಗೆ ಸುತ್ತಾಡಿಸಿದ್ದು, ಹಿಂಸೆ ಕೊಟ್ಟಿದ್ದನ್ನ ಆ ಮಹಾತಾಯಿ ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

    ಈ ಘಟನೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಕೂಡ ಸಮರ್ಥಿಸಿಕೊಂಡಿದ್ದಾರೆ, ಈ ಬಗ್ಗೆ ನಾನೇನು ಹೇಳಲ್ಲ, ತನಿಖೆ ಎಲ್ಲವನ್ನೂ ಹೇಳಬೇಕು. ಅವರು ಸ್ವತಂತ್ರರು ಏನೇನು ಕೇಳಿಸಿಕೊಂಡರು ಹೇಳಲಿ. ಆದರೆ, ಜಾಣ ಕುರುಡು, ಜಾಣ ಕಿವುಡು ಆಗೋದು ಬೇಡ ಅವರು ಸ್ವತಂತ್ರರಿದ್ದಾರೆ. ಕಾಲ್ ಲೀಸ್ಟ್ ತೆಗೆದರೇ ಯರ‍್ಯಾರು ಸಂಪರ್ಕದಲ್ಲಿದ್ದರು. ಯಾರು ಫೋನ್ ಮಾಡಿ ಏನೇನು ಹೇಳಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ.

  • ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ – ಕಾರ್ಯಕರ್ತರನ್ನು ಕಂಡು ಸಿ.ಟಿ ರವಿ ಭಾವುಕ

    ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ – ಕಾರ್ಯಕರ್ತರನ್ನು ಕಂಡು ಸಿ.ಟಿ ರವಿ ಭಾವುಕ

    ಚಿಕ್ಕಮಗಳೂರು: ಪೊಲೀಸ್ ಕಸ್ಟಡಿಯಲ್ಲಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (C.T. Ravi) ಬಿಡುಗಡೆಯಾಗಿ ಶನಿವಾರ ರಾತ್ರಿ ಚಿಕ್ಕಮಗಳೂರಿಗೆ (Chikkamagaluru) ಬರುತ್ತಿದ್ದಂತೆ ಬಿಜೆಪಿ (BJP) ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದ್ದಾರೆ.

    ಈ ವೇಳೆ ಸ್ವಕ್ಷೇತ್ರದಲ್ಲಿ ಕಾರ್ಯಕರ್ತರ ಪ್ರೀತಿ ಕಂಡು ಅವರು ಕಣ್ಣೀರಿಟ್ಟಿದ್ದಾರೆ. ಬಳಿಕ ಮಾತನಾಡಿ, ನನ್ನ ಕಷ್ಟದ ಜೊತೆ ನೀವಿದ್ದೀರಿ. ನಿಮ್ಮ ಕಷ್ಟದ ಜೊತೆ ನಾನೂ ಇರುತ್ತೇನೆ. ನಿಮ್ಮ ಪ್ರೀತಿ ಪೂರ್ವಜನ್ಮದ ಪುಣ್ಯ. ತಾಯಿ ಮಕ್ಕಳಿಗೆ ತೋರಿಸುವಂತಹಾ ಪ್ರೀತಿ ತೋರಿಸಿದ್ದೀರಿ. ನಿಮ್ಮ ಪ್ರೀತಿಗೆ ನಾನು ಋಣಿ. ನೀವು ನನಗೆ ಬೆನ್ನು ತೋರಿಸುವುದನ್ನು ಹೇಳಿಕೊಟ್ಟಿಲ್ಲ. ಕಷ್ಟಕ್ಕೆ ಎದೆ ತೋರಿಸುವುದನ್ನು ಹೇಳಿಕೊಟ್ಟಿದ್ದೀರಿ. ನಾನು ಯಾವತ್ತೂ ಯಾರಿಗೂ ಕೆಟ್ಟದ್ದು ಮಾಡಿಲ್ಲ. ಕೆಟ್ಟದ್ದು ಬಯಸಿಲ್ಲ. ಬಂದ ಕಷ್ಟವನ್ನೆಲ್ಲಾ ಎದುರಿಸಿದ್ದೇವೆ. ಆದರೆ, ಎಂದಿಗೂ ಬೆನ್ನು ತೋರಿಸಿ ಹೋಗಿಲ್ಲ ಎಂದಿದ್ದಾರೆ.

    ರಾತ್ರಿ 1 ಗಂಟೆಯಾದರೂ ಸಹಸ್ರಾರು ಸಂಖ್ಯೆಯಲ್ಲಿರೋ ನಿಮ್ಮನ್ನು ನೋಡಿದ್ರೆ ಪುಣ್ಯ ಮಾಡಿದ್ದೇನೆ ಅನ್ನಿಸುತ್ತಿದೆ ಎಂದು ಸಾವಿರಾರು ಕಾರ್ಯಕರ್ತರ ಮಧ್ಯೆ ಕಣ್ಣೀರಿಟ್ಟಿದ್ದಾರೆ. ಇದನ್ನ ಕಣ್ಣೀರು ಎಂದು ತಿಳಿಯಬೇಡಿ. ನಿಮ್ಮ ಪ್ರೀತಿ ನೋಡಿ ಬರುತ್ತಿರುವ ಆನಂದಭಾಷ್ಪ. ರಾಜ್ಯದ ಉದ್ದಗಲಕ್ಕೂ ಕಾರ್ಯಕರ್ತರು, ಪಕ್ಷದ ಮುಖಂಡರು, ಕೇಂದ್ರ ಸಚಿವರು ಧೈರ್ಯ ತುಂಬಿದ್ದಾರೆ. ಯಡಿಯೂರಪ್ಪನವರು ಕೂಡ ಹೆದರಬೇಡ ಎಂದು ವಿಶ್ವಾಸ ತುಂಬಿದ್ದರು. ನನ್ನಮ್ಮ ಕೂಡ ಹೆದರೋದ ಹೇಳಿಕೊಟ್ಟಿಲ್ಲ. ಹೋರಾಡೋದು-ಕಷ್ಟ ಪಡೋದು ಹೇಳಿಕೊಟ್ಟಿದ್ದಾರೆ ಎಂದು ಭಾವುಕರಾಗಿದ್ದಾರೆ.

    ಪತಿಯನ್ನು ತಬ್ಬಿ ಕಣ್ಣೀರಿಟ್ಟ ಪತ್ನಿ: ಪತಿಯನ್ನು ನೋಡಿ ಅವರ ಪತ್ನಿ ಪಲ್ಲವಿ ಕೂಡ ಕಣ್ಣೀರಿಟ್ಟಿದ್ದಾರೆ. ಮೆರವಣಿಗೆಯಲ್ಲಿ ಮನೆಗೆ ಬಂದ ಕೂಡಲೇ ಪತ್ನಿ ಪಲ್ಲವಿ, ಸಿ.ಟಿ.ರವಿಯವರನ್ನ ನೋಡಿ ಕಣ್ಣೀರಿಟ್ಟಿದ್ದಾರೆ. ಬಳಿಕ ಐವರು ಮುತ್ತೈದೆಯರು ಸಿ.ಟಿ.ರವಿಗೆ ಆರತಿ ಮಾಡಿದರು. ಆರತಿ ಬಳಿಕ ಗಂಡ-ಹೆಂಡತಿ ಇಬ್ಬರು ಒಬ್ಬರಿಗೊಬ್ಬರು ತಬ್ಬಿಕೊಂಡು ಕಣ್ಣೀರಿಟ್ಟರು. ಇದೇ ವೇಳೆ, ಅಜ್ಜಿಯೊಬ್ಬರು ಸಿ.ಟಿ.ರವಿಯನ್ನು ಆತ್ಮೀಯವಾಗಿ ತಬ್ಬಿ, ನಿಂಬೆಹಣ್ಣಿನಲ್ಲಿ ದೃಷ್ಠಿ ತೆಗೆದು ಅದೇ ನಿಂಬೆಹಣ್ಣನ್ನ ರವಿಯವರ ಎಡಗಾಲಿನಲ್ಲಿ ತುಳಿಸಿದರು.

    ಕಾರ್ಯಕರ್ತರಿಗೆ 24 ಗಂಟೆಯ ಕಥೆ ಬಿಚ್ಚಿಟ್ಟ ರವಿ: ಮಧ್ಯ ರಾತ್ರಿ 1.30ರ ಸುಮಾರಿಗೆ ಮನೆಗೆ ಬಂದ ಸಿ.ಟಿ.ರವಿ ಕಾರ್ಯಕರ್ತರ ಪ್ರೀತಿ, ಹರ್ಷೋಧ್ಘಾರ, ಹಾರೈಕೆ ಕಂಡು ಭಾವುಕರಾಗಿ ಪೊಲೀಸರ ಜೊತೆಗಿದ್ದ ತನ್ನ 24 ಗಂಟೆ ನರಕವನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅವರ ನಡೆ ನಿಗೂಢ, ಅನುಮಾನಸ್ಪದವಾಗಿತ್ತು. ಮಧ್ಯರಾತ್ರಿ ನನ್ನನ್ನ ಕ್ರಷರ್‌ಗೆ ಕರೆದುಕೊಂಡು ಹೋಗಿದ್ದರು. ಸೇಫ್ಟಿ ಕೊಡೋಕೆ ಕರೆದುಕೊಂಡು ಹೋಗಿದ್ರಾ ಎಂದು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಕಬ್ಬಿನ ಗದ್ದೆ, ಕಾಡಿನಲ್ಲಿ ನನ್ನ ರಕ್ಷಣೆ ಮಾಡಲು ಮುಂದಾಗಿದ್ದರಾ. ನನ್ನ ಹಿಂದೆ ಬರುತ್ತಿದ್ದ 50ಕ್ಕೂ ಹೆಚ್ಚು ವಾಹನಗಳನ್ನ ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. ಆದರೆ, ಜೀವದ ಹಂಗು ತೊರೆದು ಮಾಧ್ಯಮದವರು ಅವರಿಗೆ ಅಗೋ ನಷ್ಟವನ್ನು ಲೆಕ್ಕಿಸದೇ ನನ್ನನ್ನ ಬೆನ್ನತ್ತಿದ್ದರು. ಮಾಧ್ಯಮ ಬೆನ್ನತ್ತಿ-ಬೆನ್ನತ್ತಿ ಎಲ್ಲಾ ಕಡೆ ಪ್ರತ್ಯಕ್ಷ ಆಗಿದ್ರಿಂದ ನನ್ನನ್ನು ಏನೂ ಮಾಡಲು ಆಗಲಿಲ್ಲ. ಹಾಗಾಗಿ, ಅನಿವಾರ್ಯವಾಗಿ ಬೆಳಗ್ಗೆ ಕೋರ್ಟಿಗೆ ಕರೆದುಕೊಂಡು ಬಂದಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆ ಒಳಗೆ ಸರ್ವಾಧಿಕಾರ ಆಡಳಿತ ನಡೆಸ್ತಾ ಇದೆ. ಈ ಸರ್ವಾಧಿಕಾರ ಕೊನೆಯಾಗಲೇಬೇಕು ಎಂದು ಕಿಡಿಕಾರಿದ್ದಾರೆ.

    ಬೆಳಗಾವಿ ಚಲೋ: ಓರ್ವ ದೊಡ್ಡ ಮನುಷ್ಯ ಬೆಳಗಾವಿಯಿಂದ ಬದುಕಿ ಬಂದದ್ದೇ ಪುಣ್ಯ ಎಂದಿದ್ದಾರೆ. ಆದರೆ, ಬೆಳಗಾವಿ ಜನ ನೀನು ಬಾ. ಯಾರು ಏನು ಮಾಡ್ತಾರೆ ನೋಡೋಣ ಎನ್ನುತ್ತಿದ್ದಾರೆ. ನಾನು ಕೊಟ್ಟ ದೂರಿಗೆ ಯಾವುದೇ ಕ್ರಮಕೈಗೊಂಡಿಲ್ಲ. ಯಾರು ಕೊಲೆ ಪ್ರಯತ್ನ ಮಾಡಿದರು, ಯಾರು ಕುಮ್ಮಕ್ಕು ನೀಡಿದರು ಅವರನ್ನೂ ಬಂಧಿಸಿ ಕ್ರಮಕೈಗೊಳ್ಳಬೇಕು. ತಪ್ಪು ಮಾಡಿದ ಮೇಲೆ ಶಿಕ್ಷೆ ಆಗಬೇಕು. ಇಲ್ಲವಾದರೆ, ನಮ್ಮ ಅಧ್ಯಕ್ಷರು, ವಿಪಕ್ಷ ನಾಯಕರು ಹೇಳಿದ್ದಾರೆ. ಹೈಕಮಾಂಡ್ ಗಮನಕ್ಕೆ ತಂದು. ದೊಡ್ಡವರ ಸಲಹೆ ಪಡೆದು ಬೆಳಗಾವಿ ಚಲೋ ಮಾಡೋದಾಗಿ ತಿಳಿಸಿದ್ದಾರೆ. ಕಾನೂನು ಕ್ರಮ ಕೈಗೊಳ್ತೀವಿ, ಹಕ್ಕು ಚ್ಯುತಿ ಮಂಡಿಸ್ತೀವಿ, ಮಾನವ ಹಕ್ಕು ಆಯೋಗಕ್ಕೂ ದೂರು ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.

  • ಅಮಿತ್ ಶಾ ಫೇಕ್ ಎನ್‍ಕೌಂಟರ್‌ಗೆ ಹೆಸರುವಾಸಿ: ಜೋಶಿ ವಿರುದ್ಧ ಹರಿಪ್ರಸಾದ್ ಕಿಡಿ

    ಅಮಿತ್ ಶಾ ಫೇಕ್ ಎನ್‍ಕೌಂಟರ್‌ಗೆ ಹೆಸರುವಾಸಿ: ಜೋಶಿ ವಿರುದ್ಧ ಹರಿಪ್ರಸಾದ್ ಕಿಡಿ

    ಬೆಂಗಳೂರು: ಅಮಿತ್ ಶಾ (Amit Shah) ಫೇಕ್ ಎನ್‍ಕೌಂಟರ್‌ಗೆ ಹೆಸರುವಾಸಿ, ಕಾಂಗ್ರೆಸ್ ಪಕ್ಷ ಅಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಎಂಎಲ್‍ಸಿ ಬಿ.ಕೆ ಹರಿಪ್ರಸಾದ್ (B.K.Hariprasad) ವಾಗ್ದಾಳಿ ನಡೆಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ಸಿ.ಟಿ ರವಿ (C.T Ravi) ಅವರನ್ನು ಈ ಸರ್ಕಾರ ಎನ್‍ಕೌಂಟರ್ ಮಾಡೋ ಪ್ರಯತ್ನ ಮಾಡಿತ್ತು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ (Pralhad Joshi) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಜೋಶಿಯವರು ಅಮಿತ್ ಶಾ ಸಂತತಿಯವರು. ಫೇಕ್ ಎನ್‍ಕೌಂಟರ್‌ಗೆ ಹೆಸರುವಾಸಿ ಆದವರು ಅಮಿತ್ ಶಾ. ಅವರು ಹೇಳಿಕೊಟ್ಟ ಪಾಠವನ್ನ ಜೋಶಿಯವರು ಇಲ್ಲಿ ಹೇಳ್ತಿದ್ದಾರೆ. ಬಿಜೆಪಿಯವರು ಮಾಡಿರೋದನ್ನ ಅವರು ಇಲ್ಲಿ ಮಾಡ್ತೀವಿ ಎಂದು ಅಪಾದನೆ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂಬ ಬಿಜೆಪಿ ಆರೋಪದ ವಿಚಾರಕ್ಕೆ, ಬಿಜೆಪಿಯವರು ಸಂಘಪರಿವಾರದವರು ವ್ಯಸನಿಗಳು, ವಿಕೃತರು. ಗಾಂಧಿಯಿಂದ ಹಿಡಿದು ರಾಹುಲ್ ಗಾಂಧಿ ತನಕ ಇವರು ಅಪಪ್ರಚಾರ ಮಾಡಿಕೊಂಡು ಬರ್ತಿದ್ದಾರೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ. ಬಿಜೆಪಿಯನ್ನು ಬೇರೆ ಅರ್ಥದ ಪಾರ್ಟಿ ಮಾಡೋದಕ್ಕೆ ಇವರು ಹೊರಟಿದ್ದಾರೆ. ರಾಹುಲ್ ಗಾಂಧಿ ಇವರು ಹೇಳಿದ ತರ ಅಡಿಕ್ಟ್ ಆಗಿದ್ದರೆ, 10 ಸಾವಿರ ಕಿಲೋ ಮೀಟರ್ ಭಾರತ್ ಜೋಡೋದಲ್ಲಿ ನಡೆಯೋದಕ್ಕೆ ಆಗುತ್ತಿರಲಿಲ್ಲ. ಈಗ ಅಂಬೇಡ್ಕರ್ ಬಗ್ಗೆಯೂ ಅಪಪ್ರಚಾರ ಮಾಡ್ತಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಲೆಕ್ಕಾಚಾರ ಹಾಕಿಕೊಂಡೇ ಹೇಳಿದ ಮಾತು ಇದು ಎಂದು ಆಕ್ರೋಶ ಹೊರಹಾಕಿದ್ದಾರೆ.

    ಬಿಜೆಪಿಯವರಿಗೆ (BJP) ದಲಿತರು, ಕೇಳವರ್ಗದವರು, ಶೂದ್ರರು ಯಾರೂ ಬೇಕಾಗಿಲ್ಲ. ಇವರು ಮೇಲ್ವರ್ಗದ ಜೊತೆಗೆ ಇರಬೇಕು ಎಂಬ ಉದ್ದೇಶ. ಅವರಿಗೆ ಕೆಳವರ್ಗದ ಅಭಿವೃದ್ಧಿ ಮಾಡುವುದು ಬೇಕಾಗಿಯೂ ಇಲ್ಲ. ಸುಮ್ಮನೆ ಅಮಿತ್ ಶಾ ಈ ಮಾತು ಹೇಳಿದ್ದಾರೆ ಅಂದುಕೊಳ್ಳಬೇಡಿ. ಇದನ್ನ ಪ್ಲ್ಯಾನ್ ಮಾಡಿಯೇ ಹೇಳಿರೋದು ಎಂದು ಆರೋಪಿಸಿದ್ದಾರೆ.

    ಅಮಿತ್ ಶಾ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ಮೊದಲು ಅಂಬೇಡ್ಕರ್ ಬಗ್ಗೆ ಅಪಮಾನ ಮಾಡಿ ಬಳಿಕ ಅದನ್ನ ತಿರುಚೋ ಕೆಲಸ ಮಾಡಿದ್ದಾರೆ. ಅಮಿತ್ ಶಾ ಗುರು ಗೋಲ್ವಾಲ್ಕರ್, ಸಾವರ್ಕರ್ ಯಾವತ್ತು ಮೀಸಲಾತಿ, ತ್ರಿವರ್ಣ ಧ್ವಜ, ಸಂವಿಧಾನವನ್ನ ಒಪ್ಪಿರಲಿಲ್ಲ. ಆರ್‍ಎಸ್‍ಎಸ್ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾಕಿರಲಿಲ್ಲ. ಇದು ಆರ್‍ಎಸ್‍ಎಸ್‍ನ ಹಿಡನ್ ಅಜೆಂಡಾ. ಮುಂದಿನ ವರ್ಷ ಆರ್‍ಎಸ್‍ಎಸ್‍ಗೆ (RSS) 100 ವರ್ಷ ಆಗುತ್ತೆ. ಇದಕ್ಕೆ ಏನಾದರೂ ಮಾಡಬೇಕು ಅಂತ ಹೀಗೆ ಮಾಡ್ತಿದ್ದಾರೆ.

    ಅಮಿತ್ ಶಾ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಇಡೀ ದೇಶ, ರಾಜ್ಯದಲ್ಲಿ ಅವರ ಹೇಳಿಕೆ ವಿರುದ್ಧ ಪ್ರತಿಭಟನೆ ಮಾಡ್ತೀವಿ. ಈ ವಾರದಲ್ಲಿ ಎಲ್ಲಾ ಜಿಲ್ಲಾವಾರು ಪ್ರತಿಭಟನೆ ಮಾಡ್ತೀವಿ. ಸೋಮವಾರದಿಂದಲೇ ಹೋರಾಟಗಳು ಪ್ರಾರಂಭ ಆಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

  • ಪತ್ನಿ ಜೊತೆ ಸಿ.ಟಿ.ರವಿ ಟೆಂಪಲ್‌ ರನ್‌ – ರಾಘವೇಂದ್ರ ಸ್ವಾಮಿ ದೀರ್ಘದಂಡ ನಮಸ್ಕಾರ

    ಪತ್ನಿ ಜೊತೆ ಸಿ.ಟಿ.ರವಿ ಟೆಂಪಲ್‌ ರನ್‌ – ರಾಘವೇಂದ್ರ ಸ್ವಾಮಿ ದೀರ್ಘದಂಡ ನಮಸ್ಕಾರ

    ಚಿಕ್ಕಮಗಳೂರು: ಎಂಎಲ್‌ಸಿ ಸಿ.ಟಿ.ರವಿ (C.T.Ravi) ಅವರು ಪತ್ನಿ ಜೊತೆಗೆ ಟೆಂಪಲ್‌ ರನ್‌ ಮಾಡಿದ್ದಾರೆ. ರಾಘವೇಂದ್ರ ಸ್ವಾಮಿಗೆ (Raghavendra Swamy) ದೀರ್ಘದಂಡ ನಮಸ್ಕಾರ ಹಾಕಿ ಸಿ.ಟಿ.ರವಿ ಭಕ್ತಭಾವ ಮೆರೆದರು.

    ಸದನದಲ್ಲಿ ಆಕ್ಷೇಪಾರ್ಹ ಪದ ಬಳಕೆ ಆರೋಪದಲ್ಲಿ ಬಂಧನಕ್ಕೊಳಗಾಗಿ ನಂತರ ಬಿಡುಗಡೆಯಾದ ನಂತರ ಚಿಕ್ಕಮಗಳೂರಿಗೆ ಶನಿವಾರ ವಾಪಸ್‌ ಆದರು. ತವರಿಗೆ ಮರಳಿದ ಕೂಡಲೇ ಪತ್ನಿ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿ ಹರಕು ಬಾಯಿ ಮನುಷ್ಯ – ಪ್ರಿಯಾಂಕ್‌ ಖರ್ಗೆ ಸಿಡಿಮಿಡಿ

    ನಗರದ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಿ.ಟಿ.ರವಿ ಬಿಡುಗಡೆಗೆ ಹಲವರು ಹರಕೆ ಹೊತ್ತಿದ್ದರು. ರಾತ್ರಿ ಆಗಮಿಸಿದಾಗ ಹಲವು ಕಾರ್ಯಕರ್ತರು ಹರಕೆ ಹೊತ್ತಿದ್ದ ಬಗ್ಗೆ ಮಾಹಿತಿ ಲಭಿಸಿತ್ತು.

    ಪತ್ನಿ, ಕಾರ್ಯಕರ್ತರ ಜೊತೆ ತೆರಳಿ ರಾಘವೇಂದ್ರ ಸ್ವಾಮಿಗೆ ಸಿ.ಟಿ.ರವಿ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸಿ.ಟಿ.ರವಿ ಕೇಸ್ ಸಿಬಿಐಗೆ ಒಪ್ಪಿಸಿ: ಆರ್.ಅಶೋಕ್ ಆಗ್ರಹ

  • ಕಾಂಗ್ರೆಸ್‌ನಲ್ಲಿ ಎರಡು ಪವರ್ ಸೆಂಟರ್‌ಗಳಿವೆ: ಛಲವಾದಿ ನಾರಾಯಣಸ್ವಾಮಿ

    ಕಾಂಗ್ರೆಸ್‌ನಲ್ಲಿ ಎರಡು ಪವರ್ ಸೆಂಟರ್‌ಗಳಿವೆ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಎರಡು ಪವರ್ ಸೆಂಟರ್ ಇವೆ‌. ಈ ಪವರ್ ಸೆಂಟರ್‌ಗಳು ಯಾವಾಗ ಬ್ಲ್ಯಾಸ್ಟ್ ಆಗುತ್ತೋ ಗೊತ್ತಿಲ್ಲ ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಿ.ಟಿ ರವಿ (C.T Ravi) ಕೇಸ್‌ ವಿಚಾರವಾಗಿ ಪೊಲೀಸರ ವರ್ತನೆ ಬಗ್ಗೆ ವಿಧಾನಸೌಧದಲ್ಲಿ ಅವರು ಮಾತನಾಡಿದರು. ಈ ವೇಳೆ, ಕಾಂಗ್ರೆಸ್‌ನಲ್ಲಿ ಎರಡು ಪವರ್ ಸೆಂಟರ್ ಇವೆ. ಸಿಎಂ ಸೆಂಟರ್ ಮತ್ತು ಡಿಸಿಎಂ ಸೆಂಟರ್ ಇದೆ. ಸಿಎಂ ಪವರ್ ಸೆಂಟರ್‌ನ್ನು ಡಿಸಿಎಂ ಪವರ್ ಸೆಂಟರ್ ನುಂಗಿ ಹಾಕಿದೆ ಎಂದಿದ್ದಾರೆ.

    ಈ ವಿಚಾರದ ಬಗ್ಗೆ ಗೃಹ ಸಚಿವರು ನನಗೇನು ಗೊತ್ತಿಲ್ಲ ಅಂದರು. ಸಿಎಂ ಅವರು ಕೂಡಾ ಮಾತಾಡಿಲ್ಲ. ಹೀಗಾಗಿ ಇದರ ಹಿಂದೆ ಇರೋರು ಯಾರು ಎಂದು ಈ‌ ಸರ್ಕಾರ ಹೇಳಬೇಕು. ಯಾವಾಗಾ ಈ ಸರ್ಕಾರ ಬ್ಲ್ಯಾಸ್ಟ್ ಆಗುತ್ತೋ ಗೊತ್ತಿಲ್ಲ. ಸಿಟಿ ರವಿ ಕೇಸ್‌ನಲ್ಲಿ ಪೊಲೀಸರ ವರ್ತನೆ ಈ ಪವರ್ ಸೆಂಟರ್‌ಗಳ ನಡುವಿನ ಪವರ್ ಕಿತ್ತಾಟ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

  • ಸಿ.ಟಿ.ರವಿ ಕೇಸ್ ಸಿಬಿಐಗೆ ಒಪ್ಪಿಸಿ: ಆರ್.ಅಶೋಕ್ ಆಗ್ರಹ

    ಸಿ.ಟಿ.ರವಿ ಕೇಸ್ ಸಿಬಿಐಗೆ ಒಪ್ಪಿಸಿ: ಆರ್.ಅಶೋಕ್ ಆಗ್ರಹ

    ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ವಿರುದ್ಧ ಪೊಲೀಸರು ನಡೆದುಕೊಂಡ ವರ್ತನೆ ಪ್ರಕರಣವನ್ನ ಸಿಬಿಐ (CBI) ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಆರ್‌.ಅಶೋಕ್ (R.Ashok) ಸರ್ಕಾರಕ್ಕೆ ಆಗ್ರಹಿಸಿದರು‌.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಟಿ ರವಿ ಕೇಸ್‌ನಲ್ಲಿ ಆಂಧ್ರ ಸಿನಿಮಾ ರಕ್ತ ಚರಿತ್ರೆ ಮಾಡೆಲ್‌ನಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮಾಡಿದೆ. ವಿರೋಧ ಪಕ್ಷವನ್ನ ಟಾರ್ಗೆಟ್ ಮಾಡೋ ಕೆಲಸ ಶುರುವಾಗಿದೆ. ಆಂಧ್ರ ರಾಜಕೀಯ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಆಗೋ ಸ್ಥಿತಿ ನಿರ್ಮಾಣ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ: ಛಲವಾದಿ ನಾರಾಯಣಸ್ವಾಮಿ

    ಔಟ್ ಗೋಯಿಂಗ್ ಸಿಎಂ ಅವರು ನಮಗೇನು ಆಗಬೇಕು ಅಂತ ಸುಮ್ಮನೆ ಇದ್ದಾರೆ. ಡಿ.ಕೆ.ಶಿವಕುಮಾರ್ ವಿಪಕ್ಷಗಳನ್ನ ಬಡಿದು ಸಿಎಂ ಆಗೋಣ, ಹೈಕಮಾಂಡ್ ಮುಂದೆ ಶಕ್ತಿ ತೋರಿಸೋಕೆ ಹೀಗೆಲ್ಲ ಮಾಡ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

    ಪೊಲೀಸರು ನಡೆದುಕೊಂಡಿರೋ ವರ್ತನೆ ಸಹಿಸಲು ಸಾಧ್ಯವಿಲ್ಲ. ಯಾರದ್ದೋ ಸೂಚನೆ ಮೇಲೆ ಪೊಲೀಸರು ಹೀಗೆ ನಡೆಸಿಕೊಂಡಿದ್ದಾರೆ. ಅವರು ಯಾರು ಅನ್ನೋದನ್ನ ಪತ್ತೆ ಹಚ್ಚಬೇಕು. ಈ ಹಿನ್ನೆಲೆಯಲ್ಲಿ ಸಿ.ಟಿ.ರವಿ ಕೇಸನ್ನ ಸಿಬಿಐಗೆ ಕೊಡಬೇಕು ಎಂದು ಅಶೋಕ್ ಆಗ್ರಹಿಸಿದರು. ಇದನ್ನೂ ಓದಿ: ನನ್ನ ವಿರುದ್ಧ ಸಂಚು: ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಸಿಟಿ ರವಿ

  • ದಾವಣಗೆರೆಯಲ್ಲಿ ಸಿ.ಟಿ.ರವಿ ಬಿಡುಗಡೆ – ಬಿಜೆಪಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ

    ದಾವಣಗೆರೆಯಲ್ಲಿ ಸಿ.ಟಿ.ರವಿ ಬಿಡುಗಡೆ – ಬಿಜೆಪಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ

    ದಾವಣಗೆರೆ: ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಎಂಎಲ್‌ಸಿ ಸಿ.ಟಿ.ರವಿ ಅವರನ್ನು ದಾವಣಗೆರೆಯಲ್ಲಿ ಪೊಲೀಸರು ಬಿಡುಗಡೆ ಮಾಡಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿಗೆ (C.T.Ravi) ಅದ್ದೂರಿ ಸ್ವಾಗತ ಕೋರಿದರು.

    ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆಂದು ಸಿ.ಟಿ.ರವಿ ಅವರನ್ನು ಗುರುವಾರ ಬಂಧಿಸಲಾಗಿತ್ತು. ಖಾನಾಪುರ ಪೊಲೀಸ್‌ ಠಾಣೆಯಲ್ಲಿ ಗುರುವಾರ ವಶದಲ್ಲಿರಿಸಲಾಗಿತ್ತು. ನಂತರ ಶುಕ್ರವಾರ ಬೆಳಗಾವಿಯಿಂದ ಬೆಂಗಳೂರಿಗೆ ಶಿಫ್ಟ್‌ ಮಾಡಲು ಪೊಲೀಸರು ಕಾರಿನಲ್ಲಿ ಕರೆತರುತ್ತಿದ್ದರು. ಇದನ್ನೂ ಓದಿ: ಸತ್ಯಮೇವ ಜಯತೆ: ಕೋರ್ಟ್‌ ಆದೇಶದ ಬೆನ್ನಲ್ಲೇ ಸಿ.ಟಿ.ರವಿ ಫಸ್ಟ್‌ ರಿಯಾಕ್ಷನ್‌

    ಪ್ರಕರಣ ಸಂಬಂಧ ಇಂದು ಮಧ್ಯಾಹ್ನ ಹೈಕೋರ್ಟ್‌ ತುರ್ತು ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿ ತಕ್ಷಣವೇ ಸಿ.ಟಿ.ರವಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿತು.

    ಕೋರ್ಟ್‌ ಆದೇಶದ ಹೊತ್ತಿಗೆ ಸಿ.ಟಿ.ರವಿ ಅವರನ್ನು ಪೊಲೀಸರು ದಾವಣಗೆರೆ ಹತ್ತಿರ ಕಾರಿನಲ್ಲಿ ಕರೆತರುತ್ತಿದ್ದರು. ಕೋರ್ಟ್‌ ಆದೇಶ ಗಮನಿಸಿ ದಾವಣಗೆರೆಯಲ್ಲಿ ರಿಲೀಸ್‌ ಮಾಡಿದರು. ಪಕ್ಷದ ನಾಯಕನನ್ನು ಬೆಳಗಾವಿಯಿಂದಲೂ ಬಿಜೆಪಿ ಕಾರ್ಯಕರ್ತರು ಹಿಂಬಾಲಿಸಿಕೊಂಡು ಬಂದಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಕೂಡ ಹಿಂಬಾಲಿಸಿದ್ದರು. ಇದನ್ನೂ ಓದಿ: ಸಿ.ಟಿ.ರವಿಗೆ ಬಿಗ್‌ ರಿಲೀಫ್‌ – ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್‌ ಆದೇಶ

  • ಸತ್ಯಮೇವ ಜಯತೆ: ಕೋರ್ಟ್‌ ಆದೇಶದ ಬೆನ್ನಲ್ಲೇ ಸಿ.ಟಿ.ರವಿ ಫಸ್ಟ್‌ ರಿಯಾಕ್ಷನ್‌

    ಸತ್ಯಮೇವ ಜಯತೆ: ಕೋರ್ಟ್‌ ಆದೇಶದ ಬೆನ್ನಲ್ಲೇ ಸಿ.ಟಿ.ರವಿ ಫಸ್ಟ್‌ ರಿಯಾಕ್ಷನ್‌

    – ನಿನ್ನೆ ರಾತ್ರಿಯಿಡೀ ನನ್ನ ಮೇಲೆ ದೌರ್ಜನ್ಯ ಎಸಗಿದ್ರು ಎಂದು ಆರೋಪ

    ಬೆಂಗಳೂರು: ಸತ್ಯಮೇವ ಜಯತೆ.. ಸತ್ಯಕ್ಕೆ ಜಯ ಸಿಕ್ಕಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಸಂತಸ ವ್ಯಕ್ತಪಡಿಸಿದ್ದಾರೆ.

    ಹೈಕೋರ್ಟ್‌ನಿಂದ ಬಿಡುಗಡೆಗೆ ಆದೇಶ ಹೊರಡಿಸಿದ ಬೆನ್ನಲ್ಲೇ ‘ಪಬ್ಲಿಕ್‌ ಟಿವಿ’ ಜೊತೆ ಮಾತನಾಡಿದ ಅವರು, ನಾವೇನು ಮಾತನಾಡಿದ್ವಿ ಮತ್ತು ಅವರೇನು ಮಾತನಾಡಿದ್ರು ಎನ್ನುವುದಕ್ಕೆ ಕಸ್ಟೋಡಿಯನ್‌ ನಮ್ಮ ಪರಿಷತ್‌ನ ಸಭಾಪತಿಗಳು. ಸಭಾಪತಿಗಳೇ ರೂಲಿಂಗ್‌ ಕೊಟ್ಟರು. ಅದಾದ ಬಳಿಕವೂ ಅವರು ಸದನದಲ್ಲಿ ಯಾವ ರೀತಿ ನಡೆದುಕೊಂಡರು ಎಂಬುದನ್ನು ನೋಡಿದ್ದೀರಿ. ಹಲ್ಲೆಗೆ ಪ್ರಯತ್ನಿಸಿದರು. ನಿನ್ನೆ ರಾತ್ರಿಯಿಡೀ ನಮ್ಮ ಮೇಲೆ ದೌರ್ಜನ್ಯ ಎಸಗಿದರು ಎಂದು ಬೇಸರ ವ್ಯಕ್ತಪಡಿಸಿದರು.

    ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆಂದು ಸಿ.ಟಿ.ರವಿ ಅವರನ್ನು ಗುರುವಾರ ಬಂಧಿಸಲಾಗಿತ್ತು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್‌, ಆರೋಪಿಗೆ ಜಾಮೀನು ನೀಡಿದೆ. ತಕ್ಷಣವೇ ಅವರನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.

    ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಬಿಡುಗಡೆಗೆ ಹೈಕೋರ್ಟ್‌ ಆದೇಶ ಹೊರಡಿಸಿದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

  • ಸಿ.ಟಿ.ರವಿ ಬಿಡುಗಡೆಗೆ ಕೋರ್ಟ್‌ ಆದೇಶ – ಪಟಾಕಿ ಸಿಡಿಸಿ, ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

    ಸಿ.ಟಿ.ರವಿ ಬಿಡುಗಡೆಗೆ ಕೋರ್ಟ್‌ ಆದೇಶ – ಪಟಾಕಿ ಸಿಡಿಸಿ, ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

    ಚಿಕ್ಕಮಗಳೂರು: ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ (C.T.Ravi) ಬಿಡುಗಡೆಗೆ ಹೈಕೋರ್ಟ್‌ ಆದೇಶ ಹೊರಡಿಸಿದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

    ಚಿಕ್ಕಮಗಳೂರಿನ (Chikkamagaluru) ಬಿಜೆಪಿ ಕಚೇರಿ ಮತ್ತು ಸಿ.ಟಿ.ರವಿ ಅವರ ನಿವಾಸದ ಎದುರು ಕಾರ್ಯಕರ್ತರು ಡ್ಯಾನ್ಸ್‌ ಮಾಡಿ ಖುಷಿ ವ್ಯಕ್ತಪಡಿಸಿದರು. ಸಂಭ್ರಮಾಚರಣೆ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಕ್ಸಮರ ಕೂಡ ನಡೆಯಿತು. ಇದನ್ನೂ ಓದಿ: ಸಿ.ಟಿ.ರವಿಗೆ ಬಿಗ್‌ ರಿಲೀಫ್‌ – ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್‌ ಆದೇಶ

    ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಾ ಕಾರ್ಯಕರ್ತರು ಮೆರವಣಿಗೆ ಸಾಗಿದರು. ಸುಮಾರು 500 ಮೀಟರ್ ದೂರದ ವರೆಗೂ ಕುಣಿದು ಕುಪ್ಪಳಿಸಿದರು.

    ಸಿ.ಟಿ.ರವಿ ಮನೆ ಮುಂದೆ ನೂರಾರು ಕಾರ್ಯಕರ್ತರು ನೆರೆದಿದ್ದರು. ಬಾಗಿಲಲ್ಲಿ ರವಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು. ಇದನ್ನೂ ಓದಿ: ಸಿ.ಟಿ ರವಿ ಕೊಲೆಗಡುಕ ಅಂತ ಹೇಳಿರೋ ಲಕ್ಷ್ಮಿ ಹೆಬ್ಬಾಳ್ಕರ್, ಬೆಂಬಲಿಗರನ್ನು ಬಂಧಿಸಬೇಕು – ಜನಾರ್ದನ ರೆಡ್ಡಿ

    ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆಂದು ಸಿ.ಟಿ.ರವಿ ಅವರನ್ನು ಗುರುವಾರ ಬಂಧಿಸಲಾಗಿತ್ತು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್‌, ಆರೋಪಿಗೆ ಜಾಮೀನು ನೀಡಿದೆ. ತಕ್ಷಣವೇ ಅವರನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.