Tag: c t ravi

  • ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಯ ಸುಳಿವು ಕೊಟ್ಟ ಸಿಟಿ ರವಿ

    ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಯ ಸುಳಿವು ಕೊಟ್ಟ ಸಿಟಿ ರವಿ

    – ಮೈತ್ರಿ ಸರ್ಕಾರದ ಕೆಲ ಯೋಜನೆಗಳನ್ನ ಮುಂದುವರಿಸಲ್ಲ
    – ಸ್ಪೀಕರ್ ನಿರ್ಧಾರ ಅನುಮಾನಾಸ್ಪದ, ಪೂರ್ವಾಗ್ರಹ ಪೀಡಿತ

    ಬೆಂಗಳೂರು: ಇಂದಿರಾ ಕ್ಯಾಂಟೀನ್‍ಗಳಿಗೆ ಅನ್ನಪೂರ್ಣ ಕ್ಯಾಂಟೀನ್ ಎಂದು ಹೆಸರು ಬದಲಾಯಿಸುವ ನಿರ್ಧಾರದ ಸುಳಿವನ್ನು ಬಿಜೆಪಿ ಶಾಸಕ ಸಿ.ಟಿ.ರವಿ ನೀಡಿದ್ದಾರೆ.

    ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಮಾತನಾಡಿದ ಶಾಸಕರು, ಮೈತ್ರಿ ಅವಧಿಯಲ್ಲಿ ಕೆಲವು ರಾಜಕೀಯ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ನಾವು ಕೂಡ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಕ್ಯಾಬಿನೆಟ್ ಸಭೆಯಲ್ಲಿ ಕೆಲವೊಂದು ವಿಷಯಗಳ ಬಗ್ಗೆ ನಿರ್ಧಾರ ತಗೆದುಕೊಳ್ಳಲಾಗುತ್ತದೆ. ಮೈತ್ರಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಕೈಬಿಡಲು ಬರಲ್ಲ. ಹಾಗೇ ಎಲ್ಲಾ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ. ಈ ಸಂಬಂಧ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗೆ ನೀಡಿರುವ ಅನುದಾನದಲ್ಲಿ ತಾರತಮ್ಯವಿದೆ. ಇಂತಹ ಕೆಲವು ನಿರ್ಧಾರಗಳನ್ನು ಕೈಬಿಡಬೇಕಿದೆ. ಇವತ್ತಿಗೇ ಎಲ್ಲವೂ ಮುಗಿಲಿಲ್ಲ. ಸೋಮವಾರ ವಿಶ್ವಾಸ ಮತಯಾಚನೆಯಾದ ಬಳಿಕ ಮತ್ತೆ ಚರ್ಚೆ ಮಾಡಿಲಿದ್ದೇವೆ ಎಂದರು.

    ರೆಬೆಲ್ ಶಾಸಕರನ್ನು ಅಮಾನತುಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರವನ್ನು ಖಂಡಿಸಿದ ಶಾಸಕರು, ಸ್ಪೀಕರ್ ನಿರ್ಧಾರ ಅನುಮಾನಾಸ್ಪದ, ಪೂರ್ವಾಗ್ರಹ ಪೀಡಿತ. ಯಾವುದೋ ಒತ್ತಡಕ್ಕೆ ಮಣಿದು ಇಂತಹ ತೀರ್ಪು ಕೊಟ್ಟಿದ್ದಾರೆ. ಹಳೇ ಋಣ ತೀರಿಸಲು ಅಮಾನತು ಆದೇಶ ಹೊರಡಿಸಿದ್ದಾರೆ. ಈ ಪ್ರಕರಣ ಸುಪ್ರೀಂಕೋರ್ಟ್ ಗೆ ಹೋಗಬಹುದು. ಅಲ್ಲಿಯೇ ಅಂತಿಮ ತೀರ್ಮಾನ ಬರಲಿದೆ ಎಂದು ತಿಳಿಸಿದರು.

  • ಜನರ ಸಮಸ್ಯೆ ಅರ್ಥವಾಗೋಕೆ ಇನ್ನೆಷ್ಟು ತಲೆಮಾರಿನ ಅಧಿಕಾರ ಬೇಕು: ಸಿಎಂಗೆ ಸಿಟಿ ರವಿ ಪ್ರಶ್ನೆ

    ಜನರ ಸಮಸ್ಯೆ ಅರ್ಥವಾಗೋಕೆ ಇನ್ನೆಷ್ಟು ತಲೆಮಾರಿನ ಅಧಿಕಾರ ಬೇಕು: ಸಿಎಂಗೆ ಸಿಟಿ ರವಿ ಪ್ರಶ್ನೆ

    ಮಡಿಕೇರಿ: 2 ತಲೆಮಾರುಗಳು ಅಧಿಕಾರ ನಡೆಸಿದ್ದರೂ ಸಿಎಂ ಅವರಿಗೆ ರಾಜ್ಯದ ಸಮಸ್ಯೆಗಳು ಇನ್ನೂ ಅರ್ಥವಾಗದಿರುವುದು ರಾಜ್ಯದ ಜನತೆಯ ದುರಾದೃಷ್ಟ ಎಂದು ಗ್ರಾಮ ವಾಸ್ತವ್ಯವನ್ನು ಶಾಸಕ ಸಿ.ಟಿ ರವಿ ಟೀಕಿಸಿದ್ದಾರೆ.

    ಮಡಿಕೇರಿ ನಗರದ ಬಾಲ ಭವನದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸಂಘಟನಾ ಪರ್ವ ಸದಸ್ಯತಾ ಅಭಿಯಾನ ಕಾರ್ಯಕ್ರಮಕ್ಕೆ ಸಿ.ಟಿ ರವಿ ಆಗಮಿಸಿದ್ದರು. ಅಲ್ಲಿ ಮಾಧ್ಯಮಗಳ ಜೊತೆ ಮಾತಾನಾಡಿದ ಅವರು, ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಅಧಿಕಾರ ಸಿಎಂ ಅವರಿಗೆ ಅನಿರೀಕ್ಷಿತವಾಗಿ ಸಿಕ್ಕಿದೆ. ಮಹತ್ಮಾ ಗಾಂಧಿಜಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ದೇಶಸುತ್ತಿ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ನಾಯಕತ್ವ ವಹಿಸಿಕೊಳ್ಳಲಿಲ್ಲವೇ? ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಇವರಿಗೆ ಇನ್ನೂ ಎಷ್ಟು ತಲೆಮಾರುಗಳು ಬೇಕು ಎಂದು ಪ್ರಶ್ನಿಸಿದರು.

    ಬಳಿಕ ನಿಖಿಲ್ ಕುಮಾರಸ್ವಾಮಿ ಅವರು ಸಿನಿಮಾ ಕ್ಷೇತ್ರದಲ್ಲಿದ್ದವರು. ಅವರು ಒಂದು ವೇಳೆ ಗ್ರಾಮ ವಾಸ್ತವ್ಯ ಮಾಡುವುದರಲ್ಲಿ ಅರ್ಥವಿದೆ. ಆದರೆ ದೇವೇಗೌಡರು ಒಮ್ಮೆ ಪ್ರಧಾನಿ ಹಾಗೂ ಸಿಎಂ ಆಗಿದ್ದಾರೆ. ಸಿಎಂ ಅವರು ಈಗ ಎರಡನೇ ಬಾರಿ ಆ ಸ್ಥಾನವನ್ನು ಅಲಂಕರಿಸಿದ್ದಾರೆ. ಎರಡು ತಲೆಮಾರು ಆಡಳಿತ ನಡೆಸಿದರು ಇನ್ನೂ ಜನರ ಸಮಸ್ಯೆ ಬಗ್ಗೆ ಅವರಿಗೆ ಅರ್ಥವಾಗಿಲ್ಲ. ಇದು ರಾಜ್ಯದ ಜನತೆಯ ದುರಾದೃಷ್ಟ ಎಂದು ಟಾಂಗ್ ಕೊಟ್ಟರು.

    ಬಿಜೆಪಿ ವಿರುದ್ಧ ಸಿಎಂ ಹಾಗೂ ಮಾಜಿ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಇವರಂತೆ ಮೋದಿ ಅವರೇನು ನಾಟಕ ಆಡಿದ್ದಾರೆಯೇ? ಅವರೇನೂ ಜನತೆಯ ವಿಶ್ವಾಸ ಗಳಿಸಿಲ್ಲವೇ? ಜನ ಯಾವುದನ್ನು ಪ್ರಧಾನಿ ಅವರನ್ನು ಕೇಳಬೇಕು ಎಂಬುದು ಗೊತ್ತಿದೆ. ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಇಬ್ಬರಿಗೂ ಜವಾಬ್ದಾರಿ ಇದೆ. ಸಂವಿಧಾನದ ಅಡಿಯಲ್ಲಿ ಸಿಎಂ ಆದವರಿಗೆ ಪಕ್ಷದ ತಾರತಮ್ಯ ಮಾಡುವ ಅಧಿಕಾರವನ್ನು ಕೊಟ್ಟಿಲ್ಲ. ದೇಶದ ಜನತೆ ಪ್ರಾಮಾಣಿಕ, ದೇಶಭಕ್ತಿ ನೋಡಿ ಬಿಜೆಪಿ ಬೆಂಬಲಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ನಂತೆ ಜಾತಿ ರಾಜಕಾರಣ ಮಾಡಿದ್ದರೆ ಮೋದಿ ಅವರನ್ನೂ ಸೋಲಿಸುತ್ತಿದ್ದರು. ಜಾತಿ ರಾಜಕಾರಣ ಮಾಡಿದ್ದರಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತಿದ್ದು ಎಂದು ತಿರುಗೇಟು ನೀಡಿದರು.

    ರಾಜ್ಯಾಧ್ಯಕ್ಷ ಎಂಬುದು ಅಧಿಕಾರದ ಹುದ್ದೆಯಲ್ಲ. ಅದೊಂದು ಪಕ್ಷ ಸಂಘಟಿಸುವ ಜಬಾಬ್ದಾರಿ. ಅಧಿಕಾರದ ಹುದ್ದೆಯಾಗಿದ್ದರೆ ಅದಕ್ಕೆ ಸ್ಪರ್ಧೆ ಇರುತ್ತದೆ. ಸಂಘಟನೆಗೆ ಸ್ಪರ್ಧೆಯ ಅಗತ್ಯವಿಲ್ಲ. ರಾಜ್ಯಾಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಲು ಹಲವರಿಗೆ ಯೋಗ್ಯತೆ ಇದ್ದು, ಸಮಯ ಬಂದಾಗ ಪಕ್ಷದ ನಾಯಕರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

    ಜುಲೈ 6 ರಿಂದ ದೇಶಾದ್ಯಂತ ಸದಸ್ಯತ್ವ ಅಭಿಯಾನ ಪ್ರಾರಂಭವಾಗಲಿದೆ. ಈ ಬಾರಿ ರಾಜ್ಯದಲ್ಲಿ 50 ಲಕ್ಷ ಹೊಸ ಮತಗಳ ನೊಂದಣಿ ಗುರಿ ಹೊಂದಿದ್ದೇವೆ. ದುರ್ಬಲ ಮತಗಟ್ಟೆಗಳನ್ನು ಕೇಂದ್ರೀಕರಿಸಿ ಶಕ್ತಿ ತುಂಬುವ ಹಾಗೂ ಮಡಿಕೇರಿಯಲ್ಲಿ ಶೇ. 20 ಮತಗಳನ್ನು ಹೆಚ್ಚಿಸುವ ಉದ್ದೇಶ ಹೊಂದಿದ್ದೇವೆ. ನಮ್ಮ ಟಾರ್ಗೆಟ್ 18% ಇರುವ ನವ ಮತದಾರರು. ಎಲ್ಲಾ ವರ್ಗದ ಮತದಾರರ ವಿಶ್ವಾಸ ಗಳಿಸಲು ಸದಸ್ಯತ್ವ ಆಂದೋಲನ ನಡೆಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಫೀಲ್ಡಿಗೆ ಇಳಿಯಲಾಗಿದೆ ಎಂದು ತಿಳಿಸಿದರು.

  • ಸಿಎಂ ಆರೋಗ್ಯವನ್ನು ರಿಪೇರಿ ಮಾಡಲು ರವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರೇ – ಎಚ್‍ಡಿಡಿ ಕಿಡಿ

    ಸಿಎಂ ಆರೋಗ್ಯವನ್ನು ರಿಪೇರಿ ಮಾಡಲು ರವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರೇ – ಎಚ್‍ಡಿಡಿ ಕಿಡಿ

    – ಯಾಕೆ ಮಾತಾಡ್ತಾರೋ ಗೊತ್ತಿಲ್ಲ
    – ಪಾಪ ಸಿಎಂ ಮುಖ ನೋಡೊಕೆ ಆಗ್ತಾ ಇಲ್ಲ

    ಬೆಂಗಳೂರು: ಸಿಎಂ ಆರೋಗ್ಯವನ್ನು ಬಿಜೆಪಿಯ ಸಿ.ಟಿ.ರವಿ ರಿಪೇರಿ ಮಾಡುತ್ತಾರಾ? ಅವರೇನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಡಾಕ್ಟರಾ? ಯಾಕೆ ಈ ರೀತಿ ಎಲ್ಲಾ ಮಾತನಾಡುತ್ತಾರೋ ಗೊತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಿರುಗೇಟು ನೀಡಿದ್ದಾರೆ.

    ಸಿಎಂ ಹತಾಶರಾಗಿ ವರ್ತನೆ ಮಾಡುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಸಿ.ಟಿ.ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಗ್ರಾಮ ವಾಸ್ತವ್ಯ ಸಹಿಸುವುದಕ್ಕೆ ಆಗದೆ, ಯಾವುದೋ ಒಂದು ಶಕ್ತಿ ಮೂಲಕ ಅಡಚಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಾಯಚೂರು ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ತಲುಪುವುದಕ್ಕೂ ಮುನ್ನವೇ ತಡೆದು ನಮ್ಮ ಕೆಲಸ ಈಗಲೇ ಮಾಡಿಕೊಡಿ ಎನ್ನುವುದು ಎಷ್ಟು ಸರಿ? ಅದು ಹೇಗೆ ಸಾಧ್ಯ? ಇದಕ್ಕೆ ಯಾರದ್ದೋ ಪ್ರೇರಣೆ ಇದೆ ಎಂದರು. ಇದನ್ನೂ ಓದಿ: ಕರ್ನಾಟಕದ ಮುಖ್ಯಮಂತ್ರಿ ನೀವಾ, ಇಲ್ಲ ಮೋದಿನಾ? – ಸಿಎಂಗೆ ಪ್ರಶ್ನೆ

    ನನಗೆ ಯಾಕೆ ಹೀಗೆ ಮಾಡುತ್ತೀರಾ? ಲಾಠಿ ಚಾರ್ಜ್ ಮಾಡಿಸಬೇಕಾ ಎಂದು ಸಿಎಂ ಪಾಪ ಪೇಚಾಡುತ್ತಿದ್ದಾರೆ. ಪ್ರತಿಭಟನೆಯನ್ನು ತಡೆದು ತಡೆದು ಪೊಲೀಸರಿಗೂ ಸಾಕಾಗಿದೆ. ಅವರಿಗೂ ತಾಳ್ಮೆ ಇರುತ್ತದೆ. ಈ ಪ್ರತಿಭಟನೆಯಿಂದ ಮುಖ್ಯಮಂತ್ರಿಗಳು ಒದ್ದಾಡುತ್ತಿದ್ದಾರೆ. ಸಿಎಂ ವಿನೂತನ ಗ್ರಾಮ ವಾಸ್ತವ್ಯ ಮಾಡುವುದಕ್ಕೆ ಹೊರಟಿದ್ದಾರೆ. ಆದರೆ ಇದನ್ನು ಸಹಿಸದ ಯಾವುದೋ ಒಂದು ಶಕ್ತಿ ಅದಕ್ಕೆ ಅಡಚಣೆ ಮಾಡಲು ಮುಂದಾಗುತ್ತಿದೆ ಎಂದು ಕಿಡಿಕಾರಿದರು.

    ಪ್ರತಿಭಟನೆಯನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿಯವರ ಷಡ್ಯಂತ್ರವಿದೆ. ಪಾಪ ಮುಖ್ಯಮಂತ್ರಿಗಳ ಮುಖ ನೋಡುವುದಕ್ಕೆ ಆಗುತ್ತಿಲ್ಲ. ಅವರು ಜನರ ಸಮಸ್ಯೆ ಪರಿಹಾರ ಮಾಡುವುದಕ್ಕೆ ಹೋಗುತ್ತಿದ್ದಾರೆ. ಆದರೆ ದಾರಿ ಮಧ್ಯೆ ಹೀಗೆ ಪ್ರತಿಭಟನೆ ಮಾಡಿದರೆ ಸಿಎಂ ಏನು ಮಾಡಬೇಕು ಎಂದು ಪ್ರಶ್ನಿಸಿದರು.

    ಜೆಡಿಎಸ್ ರಾಜ್ಯಾಧ್ಯಕ್ಷರ ನೇಮಕದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎರಡ್ಮೂರು ದಿನಗಳಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ. ನಮ್ಮ ಪಕ್ಷದಲ್ಲಿ ಆರು ಜನ ಪರಿಶಿಷ್ಟರು ಗೆದ್ದಿದ್ದಾರೆ. ನಮ್ಮನ್ನ ಏನೂ ಮಾಡಿಲ್ಲ ಎನ್ನುವ ಅಸಮಾಧಾನ ಅವರಲ್ಲಿದೆ. ಅದು ನನಗೆ ಗೊತ್ತಾಗುತ್ತದೆ. ಹೀಗಾಗಿ ಪರಿಶಿಷ್ಟರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಚಿಂತಿಸಿದ್ದೇನೆ. ಮಧು ಬಂಗಾರಪ್ಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದಾರೆ. ಅವರಿಗೆ ಪಕ್ಷದ ಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿ ಇದೆ. ಎಲ್ಲರನ್ನೂ ಕರೆದು ಸಭೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ಹೇಳುವ ಮೂಲಕ ಪರಿಶಿಷ್ಟರಿಗೆ ಸಚಿವ ಸ್ಥಾನದ ಸುಳಿವು ಬಿಚ್ಚಿಟ್ಟಿದ್ದಾರೆ.

    ಕಾಂಗ್ರೆಸ್‍ನವರು ಮಾಡಿದ ಅಪಪ್ರಚಾರದಿಂದ ಸಿಎಂ ಕೇವಲ 37 ಸೀಟು ಗೆದ್ದರು. ಆದರೂ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿರುವ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು, ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಜುಲೈ 30ರೊಳಗೆ ಸಾಲ ಮನ್ನಾ ಪ್ರಕ್ರಿಯೆ ಪೂರ್ಣ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಯಾವನೊ ಒಬ್ಬ 10 ಲಕ್ಷ ರೂ. 20 ಲಕ್ಷ ರೂ. ಸಾಲ ತಗೊಂಡರೆ ಪಾಪ ಸಿಎಂ ಇದನ್ನು ತೀರಿಸುವುಕ್ಕೆ ಆಗುತ್ತಾ? ವರ್ಷಕ್ಕೆ 6 ಸಾವಿರ ರೂ. ಕೊಟ್ಟು ಇಡೀ ಹಿಂದೂಸ್ತಾನದಲ್ಲಿ ದೊಡ್ಡ ಪ್ರಚಾರ ಮಾಡುತ್ತೀರಿ. ಸುಮ್ಮನೆ ಮಾತನಾಡಲು ನಮಗೂ ಬರುತ್ತದೆ. ಜನರಿಗೆ ನಾವು ಸದಾ ಕಾಲ ಮೋಸ ಮಾಡುವುಕ್ಕೆ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದರು.

  • ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ರಾಜೀನಾಮೆ ನೀಡಲಿ – ಸಿಟಿ ರವಿ

    ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ರಾಜೀನಾಮೆ ನೀಡಲಿ – ಸಿಟಿ ರವಿ

    – ಲೋಕಸಭೆ ಫಲಿತಾಂಶದಿಂದ ಸಿಎಂ ಪಾಠ ಕಲಿತಿಲ್ಲ
    – ಅನುದಾನ ಹಂಚಿಕೆಯಲ್ಲಿ ತಾರತಮ್ಯ ಬೇಡ

    ಬೆಂಗಳೂರು: ನೀವು ಹತಾಶರಾಗಿ ಈ ರೀತಿ ವರ್ತನೆ ಮಾಡುತ್ತಿರುವಿರಿ. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಿಮ್ಮ ಹಾಗೂ ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.

    ಪ್ರತಿಭಟನಾಕಾರರ ಮೇಲೆ ಆಕ್ರೋಷ ವ್ಯಕ್ತಪಡಿಸಿದ ವಿಚಾರವಾಗಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಲೋಕಸಭೆ ಫಲಿತಾಂಶದಿಂದ ಸಿಎಂ ಪಾಠ ಕಲಿತಿಲ್ಲ. ಸಿಂಗಲ್ ನಂಬರ್ ಕೂಡ ಅವರಿಗೆ ಬೇಕಾಗಿಲ್ಲ ಅಂತ ಅನ್ನಿಸುತ್ತದೆ. ಹೀಗಾಗಿ ಸಿಎಂ ಹೀಗೆಲ್ಲ ಮಾತಾಡಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಮ್ಮ ಮಗನಿಗೆ ರಾಜೀನಾಮೆ ನೀಡುವ ಸಲಹೆ ನೀಡಲಿ. ಈ ಮೂಲಕ ಸಿಎಂ ರಾಜ್ಯದ ಜನರ ಹಿತ ಕಾಪಾಡಲಿ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದ ಮುಖ್ಯಮಂತ್ರಿ ನೀವಾ, ಇಲ್ಲ ಮೋದಿನಾ? – ಸಿಎಂಗೆ ಪ್ರಶ್ನೆ

    ಸಿಎಂ ಅವರಿಗೆ ಅಧಿಕಾರಲ್ಲಿ ಮುಂದುವರೆಯುವ ಯೋಗ್ಯತೆ, ಅರ್ಹತೆ ಏನಿದೆ? ಈ ಬಗ್ಗೆ ರಾಜ್ಯದ ಜನರಿಗೆ ಉತ್ತರ ಕೊಡಲಿ. ಇದು ಕರ್ನಾಟಕ ಸರ್ಕಾರ. ಬಿಜೆಪಿ, ಜೆಡಿಎಸ್ ಸರ್ಕಾರ ಅಂತ ಇರುವುದಿಲ್ಲ. ಸಂವಿಧಾನದತ್ತವಾಗಿ ಸಿಎಂ ಅಧಿಕಾರ ನಿಮಗೆ ನೀಡಲಾಗಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಬೇಡಿ ಎಂದು ಕಿಡಿಕಾರಿದರು.

    ಸಿಎಂ ಇಂದು ಸಣ್ಣತನದ ಮಾತುಗಳನ್ನು ಆಡಿದ್ದಾರೆ. ಶಾಸಕ ಶಿವನಗೌಡ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿರುವ ಹಿನ್ನೆಲೆ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಅವರ ಬಗ್ಗೆಯೂ ಸಿಎಂ ಏಕವಚನದಲ್ಲಿ ಮಾತಾಡಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿಯೋ ಅಥವಾ ಜೆಡಿಎಸ್ ಮುಖ್ಯಮಂತ್ರಿಯೋ? ಸಂವಿಧಾನದ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದಾರಾ? ಅಥವಾ ಜೆಡಿಎಸ್ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

    ಹೋರಾಟಗಾರರು ನಿಮ್ಮ ತಂದೆಯ ಆಸ್ತಿ ಕೇಳಿಲ್ಲ. ರಾಜ್ಯದ ಮುಖ್ಯಮಂತ್ರಿ ಆಗಲು ನಿಮಗೆ ಯೋಗ್ಯತೆ ಇಲ್ಲ. ನೀವು ಜೆಡಿಎಸ್ ಮುಖ್ಯಮಂತ್ರಿಗಳಾಗಿದ್ದರೆ ನಿಮಗೆ ನೀಡುತ್ತಿರುವ ಸೌಲಭ್ಯಗಳನ್ನು ರಾಜ್ಯಪಾಲರು ವಾಪಸ್ ಪಡೆಯಲಿ. ನಿಮ್ಮ ಮಾತು ಅಸಂವಿಧಾನಿಕ ಮಾತು. ಜನರನ್ನ ಕೆರಳಿಸುವ ಮಾತುಗಳನ್ನು ಆಡುತ್ತಿರುವಿರಿ ಎಂದು ಸಿಎಂ ವಿರುದ್ಧ ಗುಡುಗಿದರು.

    ಎಚ್‍ಆರ್ ಬಿಆರ್ ಲೇಔಟ್‍ನಲ್ಲಿ 2006ರಂದು ಬಿಡಿಎ ನಿಂದ ನಿವೇಶನ ಪಡೆದಿದ್ದೆ. ಆದರೆ ಈಗ ಅದನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಬಳಿಕ ಬದಲಿ ನಿವೇಶನಕ್ಕೆ ಮನವಿ ಸಲ್ಲಿಸಿದ್ದೆ. ಆದರೆ ಇಲ್ಲಿಯವರೆಗೂ ನಿವೇಶನ ನೀಡಿಲ್ಲ. ಒಂದು ವಾರದಲ್ಲಿ ಬದಲಿ ನಿವೇಶನ ಕೊಡಿ, ಇಲ್ಲವೇ ನನ್ನ ಹಳೆಯ ನಿವೇಶನ ಕೊಡಿ. ಒಂದು ವೇಳೆ ನೀವು ನಿವೇಶನ ನೀಡದಿದ್ದರೆ ಬಿಡಿಎ ಮುಂದೆ ಧರಣಿ ಮಾಡುತ್ತೇನೆ ಎಂದು ಶಾಸಕರು ಎಚ್ಚರಿಕೆ ಕೊಟ್ಟಿದ್ದಾರೆ.

    ಬಿಡಿಎಯಲ್ಲಿ ದಂಧೆ ನಡೆಯುತ್ತಿದೆ. ಸಿಬ್ಬಂದಿ, ಅಧಿಕಾರಿಗಳು ಶ್ರೀಮಂತರಾಗುತ್ತಿದ್ದಾರೆ. ಬಿಡಿಎ ಮಾತ್ರ ಸಾಲದಲ್ಲಿ ಇದೆ. ಈ ದಂಧೆ ನಿಲ್ಲಿಸುವ ಅಧಿಕಾರಿಯೊಬ್ಬನ್ನು ನೇಮಕವಾಗಬೇಕಿದೆ ಎಂದು ಒತ್ತಾಯಿಸಿದರು.

  • ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ ಸಿಟಿ ರವಿ

    ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ ಸಿಟಿ ರವಿ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಶಾಸಕ ಸಿ.ಟಿ.ರವಿ ಅವರು ಇಂದು ಟ್ವಿಟ್ಟರ್ ನಲ್ಲಿ ಹಾಡಿಹೊಗಳಿದ್ದಾರೆ.

    ಪತ್ರಕರ್ತೆ ಬರ್ಕಾ ದತ್ ಅವರು 2018ರ ಕರ್ನಾಟಕ ಚುನಾವಣೆಯ ಸಮಯದಲ್ಲಿ ವಾಷಿಂಗ್ಟನ್ ಪೋಸ್ಟ್ ಗೆ ಲೇಖನ ಬರೆದು ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಇಂದು ಪ್ರತಿಕ್ರಿಯೆ ನೀಡುವ ವೇಳೆ ಸಿ.ಟಿ. ರವಿ ಸಿದ್ದರಾಮಯ್ಯನವರನ್ನು ಸ್ವಶಕ್ತಿಯಿಂದಲೇ ಬೆಳೆದು ಮೇಲಕ್ಕೆ ಬಂದಿದ್ದಾರೆ ಎಂದು ಹೇಳಿ ಪ್ರಶಂಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?:
    ಇದು ಎಂತಹ ಪತ್ರಿಕೋದ್ಯಮ? ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ವಶಕ್ತಿಯಿಂದಲೇ ಬೆಳೆದವರು. ಅವರು ಜನರೇ ಬೆಳೆಸಿದ ವ್ಯಕ್ತಿ. ಅವರನ್ನ ಯಾಕೆ ಕುರಿಗಾಹಿ ಮಗನೆಂದು ಕರೆಯುತ್ತೀರಿ? ಈ ರೀತಿಯಾಗಿ ಕನ್ನಡಿಗರ ಬಗ್ಗೆ ದುರುದ್ದೇಶಪೂರ್ವಕವಾಗಿ ಮಾತನಾಡುವುದನ್ನು ನಾನು ಸಹಿಸುವುದಿಲ್ಲ ಎಂದು ಹೇಳಿ ಕಿಡಿಕಾರಿದ್ದಾರೆ.

    ಬರ್ಕಾ ದತ್ ಹೇಳಿದ್ದೇನು?:
    ಕರ್ನಾಟಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದಕ್ಷಿಣ ಭಾರತದಲ್ಲಿ ಕುರಿಗಾಹಿಯ ಮಗ ಮಾಜಿ ಸಿಎಂ ಸಿದ್ದರಾಮಯ್ಯ ತಡೆಯುತ್ತಾರಾ? ಈ ಸಂಬಂಧ ನಾನು ಲೇಖನ ಬರೆದಿದ್ದೇನೆ ಎಂದು ಬರ್ಕಾ ದತ್ ಅವರು ಮೇ 10, 2018ರಲ್ಲಿ ಟ್ವೀಟ್ ಮಾಡಿದ್ದರು.

  • ರಾಹುಲ್ ಗಾಂಧಿ ಭಾರತೀಯ ಹೌದಾ, ಅಲ್ವಾ: ಕಾಂಗ್ರೆಸ್‍ಗೆ ಸಿ.ಟಿ.ರವಿ ಪ್ರಶ್ನೆ

    ರಾಹುಲ್ ಗಾಂಧಿ ಭಾರತೀಯ ಹೌದಾ, ಅಲ್ವಾ: ಕಾಂಗ್ರೆಸ್‍ಗೆ ಸಿ.ಟಿ.ರವಿ ಪ್ರಶ್ನೆ

    – ರಾಹುಲ್ ಮಿಂಚಿ, ರಾಹುಲ್ ಗಾಂಧಿ ಒಬ್ಬರೇನಾ?
    – ಸಿಎಂ ಇಬ್ರಾಹಿಂ ನಾಲಗೆಯನ್ನ ಗಟಾರದಲ್ಲಿರೋ ಹಂದಿಗೆ ಹೋಲಿಸ್ತೀರಾ?

    ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತೀಯರು ಹೌದಾ, ಅಲ್ವಾ? ರಾಹುಲ್ ಮಿಂಚಿ ಹಾಗೂ ರಾಹುಲ್ ಗಾಂಧಿ ಒಬ್ಬರೇನಾ ಅಂತ ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಭಾರತದೊಳಗೆ ರಾಹುಲ್ ಗಾಂಧಿ, ಗಡಿ ಹೊರಗೆ ರಾಹುಲ್ ಮಿಂಚಿ ಆಗುತ್ತಾರಾ? ಅವರು ಭಾರತದವರು ಹೌದಾ ಅಲ್ವಾ ಎನ್ನುವ ಅಕ್ಷೇಪಣೆಗೆ ಉತ್ತರ ಕೊಡಲು ಕಾಲಾವಕಾಶ ಯಾಕೆ ಬೇಕು? ರಾಹುಲ್ ಗಾಂಧಿ ಅವರಲ್ಲಿ ನಾನು ಭಾರತೀಯನಾ ಎನ್ನುವ ವಿಚಾರದ ಬಗ್ಗೆ ಗೊಂದಲವಿದೆ ಎಂದು ಹೇಳಿದರು.

    ಶ್ರೀಲಂಕಾದಲ್ಲಿ ನಡೆದ ಉಗ್ರರ ಅಟ್ಟಹಾಸವನ್ನು ಬಿಜೆಪಿ ಖಂಡಿಸುತ್ತದೆ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಎಸೆಯಬೇಕಾಗಿದೆ. ಪ್ರಧಾನಿ ಮೋದಿ ಅವರಿಂದ ದೇಶ ಸುಭದ್ರವಾಗಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ್ರೋಹಿಗಳಿಗೆ ನಿಯಂತ್ರಣ ಇಲ್ಲದಂತಾಗುತ್ತದೆ. ಕಾಂಗ್ರೆಸ್ ಸೈನ್ಯದ ಪರಮಾಧಿಕಾರ ಹಿಂಪಡೆಯುವ ಭರವಸೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ದೇಶದ ಜನರ ಎದುರು ಕ್ಷಮೆ ಕೇಳಿ ಪ್ರಣಾಳಿಕೆಯಲ್ಲಿರುವ ಈ ಅಂಶವನ್ನು ಹಿಂಪಡೆಯಬೇಕು. ಭಯೋತ್ಪಾದಕ ದಾಳಿಗೆ ಬೀದಿಗಿಳಿಯದ ಮೈತ್ರಿ ಸರ್ಕಾರ ಐಟಿ ದಾಳಿಗೆ ಬೀದಿಗಿಳಿದಿದೆ ಎಂದು ವಾಗ್ದಾಳಿ ನಡೆಸಿದರು.

    ತಾಯಿ ಗಂಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ ಅವರು, ಆಡು ಭಾಷೆಯ ವಾಕ್ಯವನ್ನು ಬಳಸಿದ್ದೇನೆ. ಉಂಡ ಮನೆಗೆ ದ್ರೋಹ ಎನ್ನುವ ಅರ್ಥದಲ್ಲಿ ಹೇಳಿದ್ದೆ. ಸಚಿವೆ ಜಯಮಾಲಾ ಅವರು ನನ್ನ ನಾಲಿಗೆಯನ್ನು ಚಪ್ಪಲಿಗೆ ಹೋಲಿಸಿದ್ದಾರೆ. ಪ್ರತಿದಿನ ಹೊಲಸು ಮಾತನಾಡುವ ಕಾಂಗ್ರೆಸ್ ನಾಯಕರ ನಾಲಿಗೆ ಹಾಗಾದರೆ ಏನು? ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ನಾಲಗೆಯನ್ನು ಯಾವುದಕ್ಕೆ ಹೋಲಿಸುತ್ತೀರಿ? ಗಟಾರದಲ್ಲಿರುವ ಹಂದಿಗೆ ಹೋಲಿಸುತ್ತೀರಾ? ಅಥವಾ ಟಾಯ್ಲೆಟ್‍ನಲ್ಲಿರುವ ಹುಳಕ್ಕೆ ಹೋಲಿಸುತ್ತೀರಾ ಎಂದು ಪ್ರಶ್ನಿಸಿ ಕಾಂಗ್ರೆಸ್ ವಿರುದ್ಧ ಗುಡುಗಿದರು.

    ಸಚಿವೆ ಜಯಮಾಲಾ ಅವರು ನನ್ನ ನಾಲಿಗೆಗೆ ಬಜೆ ತಿಕ್ಕಿಸಿಲ್ಲ ಅಂತ ಹೇಳಿದ್ದಾರೆ. ಸರ್.ಎಂ.ವಿಶ್ವೇಶ್ವರಯ್ಯ, ಕನಕದಾಸ ಹೆಸರು ಹೇಳಲಿಕ್ಕೆ ಬಾರದ ರಾಹುಲ್ ನಾಲಿಗೆಗೆ ಬಜೆ ತಿಕ್ಕಿಸಿ ಎಂದು ಕಿಡಿಕಾರಿದರು.

    ಮೈತ್ರಿ ನಾಯಕರೇ ಸರ್ಕಾರಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರು ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದಾರೆ. ತುಮಕೂರು, ಹಾಸನ, ಮಂಡ್ಯ, ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಸರ್ಕಾರ ಬಿದ್ದರೆ ಅದಕ್ಕೆ ಯಾರು ಹೊಣೆ ಎನ್ನುವುದು ಗೊತ್ತಾಗುತ್ತಿದೆ. ರಾಜ್ಯದ 23 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಪ್ರಾಮಾಣಿಕವಾಗಿ ದುಡಿಯುವ ಎತ್ತುಗಳು ಐಟಿ ದಾಳಿಗೆ ಹೆದರಲ್ಲ: ಸಿಎಂಗೆ ಸಿಟಿ ರವಿ ಟಾಂಗ್

    ಪ್ರಾಮಾಣಿಕವಾಗಿ ದುಡಿಯುವ ಎತ್ತುಗಳು ಐಟಿ ದಾಳಿಗೆ ಹೆದರಲ್ಲ: ಸಿಎಂಗೆ ಸಿಟಿ ರವಿ ಟಾಂಗ್

    ಬೆಂಗಳೂರು: ಮಂಡ್ಯ ಚುನಾವಣೆಯಲ್ಲಿ ಸದ್ಯ ಜೋರಾಗಿ ಸದ್ದು ಮಾಡುತ್ತಿರುವ ‘ಎತ್ತು’ಗಳ ವಿಚಾರವನ್ನು ಪ್ರಸ್ತಾಪಿಸಿ ಶಾಸಕ ಸಿಟಿ ರವಿ ಅವರು ಐಟಿ ದಾಳಿ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ದೂರಿದ ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.

    ಸಿಟಿ ರವಿ “ಪ್ರಾಮಾಣಿಕವಾಗಿ ದುಡಿಯುವ ಎತ್ತುಗಳು ಎಂದಿಗೂ ಐಟಿ ದಾಳಿಗೆ ಹೆದರುವುದಿಲ್ಲ. ಕದಿಯುವ ಎತ್ತುಗಳು ಮಾತ್ರ ಐಟಿ ದಾಳಿಗೆ ಹೆದರುತ್ತವೆ” ಎಂದು ಟ್ವೀಟ್ ಮಾಡುವ ಮೂಲಕ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

    ರಾಮನಗರದಲ್ಲಿ ಮಾತನಾಡಿದ್ದ ಸಿಎಂ, ಜನರು ದುಡಿಯುವ ಎತ್ತುಗಳನ್ನು ಉಳಿಸಬೇಕು. ಮೇವು ಹಾಕುವುದು ನಿಮ್ಮ ಕರ್ತವ್ಯ. ಈಗ ಹಲವಾರು ಎತ್ತುಗಳು ಬರುತ್ತೆ ಎಂದು ಹೇಳುತ್ತಾರೆ. ಆದರೆ ಆ ಎತ್ತುಗಳಿಗೆ ಹೊಲ ಉಳುವುದಕ್ಕೆ ಬರುವುದಿಲ್ಲ. ಕಳ್ಳ ಎತ್ತುಗಳು. ನೀವು ಹಾಕಿರುವ ಬೆಳೆಯನ್ನು ತಿಂದುಕೊಂಡು ಹೋಗಲು ಬರುತ್ತಿವೆ. ದುಡಿಯುವ ಎತ್ತುಗಳು ಯಾವುದು ಕಳ್ಳ ಎತ್ತುಗಳ ಯಾವುದು ಎನ್ನುವುದು ನೀವೇ ಯೋಚನೆ ಮಾಡಿ. ಈಗ ನಿಮ್ಮ ಅಭಿವೃದ್ಧಿಗೆ ನಾವು ಒಂದಾಗಿದ್ದೇವೆ. ಇಲ್ಲಿ ಯಾವುದೇ ರಾಜಕೀಯ ಇಲ್ಲ ಹೇಳಿ ದರ್ಶನ್ ಮತ್ತು ಯಶ್ ಅವರಿಗೆ ಟಾಂಗ್ ಕೊಟ್ಟಿದ್ದರು. ಸಿಟಿ ರವಿ ಅವರು ಸಿಎಂ ಅವರು ನೀಡಿದ್ದ ಹೇಳಿಕೆಯನ್ನು ಬಳಸಿಕೊಂಡು ಟಾಂಗ್ ನೀಡಿದ್ದಾರೆ.

    ಮಾಜಿ ಸಿಎಂಗೂ ಟಾಂಗ್: ಸಿಎಂ ಸಿದ್ದರಾಮಯ್ಯ ಕೂಡ ಐಟಿ ದಾಳಿ ಬಗ್ಗೆ ತಮ್ಮ ಟ್ವಿಟ್ಟರಿನಲ್ಲಿ, ಈಗಾಗಲೇ ಹೇಳಿದಂತೆ, ಹೋರಾಟವು ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರದ ನಡುವೆ ಇದೆ. ವಿರೋಧ ಪಕ್ಷದ ನಾಯಕರ ಮೇಲೆ ಯಾವುದೇ ಐಟಿ ದಾಳಿ ನಡೆದಿಲ್ಲ. ಚುನಾವಣಾ ಸಂದರ್ಭದಲ್ಲಿ ನಮ್ಮ ಬೆಂಬಲಿಗರನ್ನು ಹೆದರಿಸಲು ಪ್ರಯತ್ನ ನಡೆಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದರು.

    ಈ ಟ್ವೀಟ್‍ಗೆ ಸಿ.ಟಿ ರವಿ, “ಆದಾಯ ತೆರಿಗೆ ಇಲಾಖೆಯನ್ನು ‘ಸರ್ವಾಧಿಕಾರಿ ನೆಹರು’ ಸೃಷ್ಟಿ ಮಾಡಿದ್ದು. ಐಟಿ ದಾಳಿ ಮೂಲಕ ಎಲ್ಲರನ್ನು ಹೆದರಿಸುತ್ತಿರುವುದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನೆಹರು ಅವರನ್ನು ದೂಷಿಸಬೇಕು” ಎಂದು ಬರೆದು ರೀ-ಟ್ವೀಟ್ ಮಾಡಿದ್ದಾರೆ.

    ‘ಮಿಶನ್ ಶಕ್ತಿ’ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು, ಮೋದಿಗೆ ಕ್ರೆಡಿಟ್ ನೀಡುವ ಅಗತ್ಯವಿಲ್ಲ. ಇಸ್ರೋವನ್ನು ಸ್ಥಾಪನೆ ಮಾಡಿದ್ದು ನೆಹರು ಎಂದು ಹೇಳಿ ತಿರುಗೇಟು ನೀಡಿದ್ದರು. ಈ ವಿಚಾರವನ್ನೇ ಸಿಟಿ ರವಿ ಪ್ರಸ್ತಾಪ ಮಾಡಿ ಟಾಂಗ್ ಕೊಟ್ಟಿದ್ದಾರೆ.

    ಬಿಜೆಪಿ ಟಾಂಗ್: ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಆದಾಯ ತೆರಿಗೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ, ರಾಜಕೀಯ ಮತ್ತು ಸಿದ್ಧಾಂತದಲ್ಲಿ ಬೇರೆ ಬೇರೆಯಾಗಿದ್ದರು ಭ್ರಷ್ಟಾಚಾರದಲ್ಲಿ ಒಂದಾಗುವುದು ಮಹಾಘಟಬಂದನ ಗುಣಲಕ್ಷ್ಮಣ. ಈಗ ಇದು ಆದಾಯ ತೆರಿಗೆ ಕಚೇರಿ ಮುಂಭಾಗ ನಿಜವಾಗಿದೆ ಎಂದು ಬರೆದು ಜೆಡಿಎಸ್ ಕಾಂಗ್ರೆಸ್ ಚೋರ್‍ಹೇ ಎಂದು ಹ್ಯಾಶ್ ಟ್ಯಾಗ್ ಹಾಕಿ ಕರ್ನಾಟಕ ಬಿಜೆಪಿ ಟಾಂಗ್ ಕೊಟ್ಟಿದೆ.

  • ಬಿಎಸ್‍ವೈ ಡೈರಿ ಪ್ರಕರಣ- ಕಾಂಗ್ರೆಸ್ ಮುಂದೆ 10 ಪ್ರಶ್ನೆಗಳನ್ನಿಟ್ಟ ಸಿ.ಟಿ.ರವಿ

    ಬಿಎಸ್‍ವೈ ಡೈರಿ ಪ್ರಕರಣ- ಕಾಂಗ್ರೆಸ್ ಮುಂದೆ 10 ಪ್ರಶ್ನೆಗಳನ್ನಿಟ್ಟ ಸಿ.ಟಿ.ರವಿ

    ಬೆಂಗಳೂರು: ಕಾಂಗ್ರೆಸ್ಸಿನಿಂದ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ವಿರುದ್ಧ ಡೈರಿ ಆರೋಪ ವಿಚಾರ, ಕಾಂಗ್ರೆಸ್ಸಿಗೆ 10 ಪ್ರಶ್ನೆ ಕೇಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡೈರಿಯ ಪ್ರತಿ ಹಾಳೆಯಲ್ಲೂ ಯಾರೂ ಸಹಿ ಮಾಡಲ್ಲ. ಡೈರಿಯಲ್ಲಿ ಹಣ ಕೊಟ್ಟಿರೋದು ಬರೆದಿರೋರು, ತಮ್ಮಗೆ ಬಂದಿರೋ ಹಣದ ಬಗ್ಗೆಯೂ ಬರೆಯಬೇಕಲ್ಲವಾ? 2010 ಪೂರ್ವದಲ್ಲಿ ಯಡಿಯೂರಪ್ಪ ಅವರು ಸಂಖ್ಯಾಶಾಸ್ತ್ರದ ಪ್ರಕಾರ ‘ಯಡ್ಯೂರಪ್ಪ’ ಅಂತಾ ಸಹಿ ಮಾಡುತ್ತಿದ್ದರು. ಇದೊಂದು ಕಾಂಗ್ರೆಸ್ ಸಂಚು. ಚೌಕಿದಾರರು ವರ್ಸಸ್ ಚೋರ್‍ದಾರರ ನಡುವಿನ ಚುನಾವಣೆ ಇದು ಎಂದು ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ಬಿಎಸ್ ವೈ ಡೈರಿ ಪ್ರಕರಣ- ಇದು ಜೋಕ್ ಆಫ್ ದಿ ಇಯರ್ ಅಂದ್ರು ಬಿ.ವೈ.ರಾಘವೇಂದ್ರ

    ಮೂರು ಬಾರಿ ಸಹಿ ಬದಲಾವಣೆ:
    ಮೊದಲು ಬಿಎಸ್‍ವೈ “ಯಡಿಯೂರಪ್ಪ ” ಎಂದು ಸಹಿ ಮಾಡುತ್ತಿದ್ದರು. ಬಳಿಕ ಸಂಖ್ಯಾಶಾಸ್ತ್ರದ ಪ್ರಕಾರ “ಯಡ್ಯೂರಪ್ಪ” ಎಂದು ಬದಲಾಯಿಸಿಕೊಂಡರು. ಆದರೇ ಇತ್ತೀಚಿಗೆ ಮತ್ತೆ “ಬಿ.ಎಸ್.ಯಡಿಯೂರಪ್ಪ” ಎಂದು ಮತ್ತೆ ಹಳೆಯ ಸಹಿಯನ್ನೇ ಮಾಡುತ್ತಿದ್ದಾರೆ ಎಂದು ಸಿ.ಟಿ ರವಿ ತಿಳಿಸಿದ್ದಾರೆ.  ಇದನ್ನೂ ಓದಿ:ಫೇಕ್ ಡೈರಿ ಮುದ್ರಿಸುವ ಅವಸರದಲ್ಲಿ ಕಾಂಗ್ರೆಸ್ ತಪ್ಪು ಮಾಡಿದೆ: ಬಿಎಸ್‍ವೈ ವ್ಯಂಗ್ಯ

    ಕಾಂಗ್ರೆಸ್ ಮುಂದಿಟ್ಟ ಪ್ರಶ್ನೆಗಳು:
    1. ಡೈರಿ ನಿಮಗೆ ಸಿಕ್ಕಿದ್ದು ಯಾವಾಗ?
    2. ಯಾರು ಈ ಡೈರಿಯನ್ನು ತಂದುಕೊಟ್ಟರು?
    3. ಡೈರಿಯನ್ನು ಎಲ್ಲಿ ಕೊಟ್ಟರು?
    4. ಒರಿಜಿನಲ್ ಡೈರಿ ಎಲ್ಲಿ?
    5. ಏಕೆ ಇದುವರೆಗೂ ಈ ಡೈರಿ ಆದರಿಸಿ ಲೋಕಾಯುಕ್ತ ಅಥವಾ ಎಸಿಬಿಗೆ ದೂರು ಕೊಡಲಿಲ್ಲ?


    6. 2013 ಮೇ ತಿಂಗಳಿನಿಂದ ನಿಮ್ಮದೇ ಪಕ್ಷದ ಆಡಳಿತ ಇದ್ದರೂ ಯಾವುದೇ ತನಿಖೆ ನಡೆಸದೇ ಇರಲು ಕಾರಣವೇನು?
    7. ಯಡಿಯೂರಪ್ಪನವರದ್ದೆಂದು ಹೇಳಲಾದ ಡೈರಿಯು ಡಿ.ಕೆ.ಶಿವಕುಮಾರ್ ಮನೆಯಲ್ಲಿ ಪತ್ತೆಯಾಗಿದ್ದು ಹೇಗೆ? ಇದಕ್ಕೆ ಡಿ.ಕೆ.ಶಿವಕುಮಾರ್ ಉತ್ತರಿಸಬೇಕಾಗಿದೆ.
    8. ಈ ಹಿಂದೆ ಪ್ರಕರಣವೊಂದರ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಕಾಂಗ್ರೆಸ್ ಈಗ ಏಕೆ ದೂರು ನೀಡದಿರಲು ಕಾರಣವೇನು?
    9 ಎಂಎಲ್ ಸಿ ಗೋವಿಂದರಾಜುಮನೆಯಲ್ಲಿ ಐಟಿ ಅಧಿಕಾರಿಗಳು ವಶಪಡಿಸಿಕೊಂಡ ಡೈರಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಹಣ ಸಂದಾಯವಾಗಿತ್ತು ಎಂದು ನಮೂದಾಗಿತ್ತು. ಆಗ ಯಡಿಯೂರಪ್ಪ ಡೈರಿ ಕಾಂಗ್ರೆಸ್ ಪ್ರಾಯೋಜಕತ್ವದಲ್ಲಿ ಸೃಷ್ಟಿಯಾಗಿದ್ದು ನಿಜವಲ್ಲವೇ?
    10. ಡೈರಿ ಪ್ರಕರಣ ಜನಲೋಕಪಾಲ್ ತನಿಖೆಗೆ ಸೂಕ್ತವಾದುದು ಎಂದು ಕಾಂಗ್ರೆಸ್ ಹೇಳುತ್ತಿದೆ. ಆರೋಪ ಮಾಡಿದವರು ದೂರು ನೀಡಬೇಕೆ ಅಥವಾ ದೂರಿಗೆ ಒಳಗಾದವರು ನೀಡಬೇಕೆ? ಎಂದು ಪ್ರಶ್ನಿಸಿದ್ದಾರೆ.

    ಬಿಎಸ್‍ವೈ ಡೈರಿ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಒಂದೆಡೆ ಕಾಂಗ್ರೆಸ್ ಬಿಎಸ್‍ವೈ ವಿರುದ್ಧ ಆರೋಪಿಸುತ್ತಿದ್ದಾರೆ. ಆದ್ರೆ ಇನ್ನೊಂದೆಡೆ ಬಿಜೆಪಿ ನಾಯಕರು ಬಿಎಸ್‍ವೈ ಪರ ನಿಂತು ಇದು ಕಾಂಗ್ರೆಸ್ ಅವರ ಸಂಚು ಎಂದು ಕಿಡಿಕಾರುತ್ತಿದ್ದಾರೆ.

  • ಜನ್ರು ಕಷ್ಟದಲ್ಲಿದ್ದಾಗ ಬಾರದ ಕಣ್ಣೀರು ಈಗ ಮೊಮ್ಮಕ್ಕಳು ಚುನಾವಣೆಗೆ ನಿಂತಾಗ ಬಂದಿದೆ: ಸಿ.ಟಿ ರವಿ ಟಾಂಗ್

    ಜನ್ರು ಕಷ್ಟದಲ್ಲಿದ್ದಾಗ ಬಾರದ ಕಣ್ಣೀರು ಈಗ ಮೊಮ್ಮಕ್ಕಳು ಚುನಾವಣೆಗೆ ನಿಂತಾಗ ಬಂದಿದೆ: ಸಿ.ಟಿ ರವಿ ಟಾಂಗ್

    ಶಿವಮೊಗ್ಗ: ಮಾಜಿ ಪ್ರಧಾನಿ ದೇವೇಗೌಡರು ಮಣ್ಣಿನ ಮಗ, ರೈತ ನಾಯಕ ಎಂದು ಟ್ಯಾಗ್ ಲೈನ್ ಇಟ್ಟುಕೊಂಡವರು. ಅವರಿಗೆ ಜನರು ಸಂಕಷ್ಟದಲ್ಲಿದ್ದಾಗ ಕಣ್ಣೀರು ಬಾರದೇ, ಈಗ ತಮ್ಮ ಮೊಮ್ಮಕ್ಕಳು ಚುನಾವಣೆಗೆ ನಿಂತಾಗ ಕಣ್ಣೀರು ಬಂದಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಟಿ ರವಿ ಟೀಕಿಸಿದ್ದಾರೆ.

    ತೀರ್ಥಹಳ್ಳಿಯಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಅಪಹಾಸ್ಯವಾಗಿದೆ. ಮಣ್ಣಿನ ಮಗ, ರೈತ ನಾಯಕ ಎಂದು ಟ್ಯಾಗ್ ಲೈನ್ ಇಟ್ಟುಕೊಂಡಿರುವ ದೇವೇಗೌಡರು, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅಥವಾ ಯೋಧರು ವೀರ ಮರಣ ಹೊಂದಿದಾಗ ಅತ್ತಿರಲಿಲ್ಲ. ಜನರು ಸಂಕಷ್ಟದಲ್ಲಿದ್ದಾಗ ಕಣ್ಣೀರು ಬಾರದೇ, ಈಗ ತಮ್ಮ ಮೊಮ್ಮಕ್ಕಳು ಚುನಾವಣೆಗೆ ನಿಂತಾಗ ಕಣ್ಣೀರು ಬಂದಿದೆ. ಇದೊಂದು ಅಪಹಾಸ್ಯಕ್ಕೆ ಒಳಗಾದ ಹೈಡ್ರಾಮ ಎಂದು ದೇವೇಗೌಡರ ಕುಟುಂಬದ ಕಣ್ಣೀರಿಗೆ ಲೇವಡಿ ಮಾಡಿದ್ದಾರೆ. ಈ ರೀತಿ ನಟನೆ, ಮೊಮ್ಮಕ್ಕಳ ಭವಿಷ್ಯಕ್ಕೋ, ಜನರ ಬಗ್ಗೆ ಚಿಂತನೆಗೋ ಎಂದು ದೇವೇಗೌಡರೇ ಸ್ಪಷ್ಟಪಡಿಸಲಿ ಎಂದು ಟಾಂಗ್ ನೀಡಿದ್ದಾರೆ.

    ಬಿಜೆಪಿ ಕೋರ್ ಕಮಿಟಿ ಸಭೆ ಈ ತಿಂಗಳ 18 ಮತ್ತು 19ಕ್ಕೆ ನಡೆಯಲಿದೆ. ಅಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಲಿದೆ. ಚಿಕ್ಕಮಗಳೂರು ಹಾಗೂ ಉಡುಪಿ ಬಿಜೆಪಿಯ ಭದ್ರಕೋಟೆ. ಇಲ್ಲಿ ಆಕಾಂಕ್ಷಿಗಳು ಬಹಳ ಜನ ಇದ್ದಾರೆ. ನಮ್ಮ ಹೈಕಮಾಂಡ್ ತೀರ್ಮಾನವೇ ಅಂತಿಮ. ದೇಶದ ಹಾಗೂ ರಾಜ್ಯದ ಜನ ಬಿಜೆಪಿ ಜೊತೆಗಿದ್ದಾರೆ. ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕೆಂಬುದು ದೇಶದ ಜನರ ಬಯಸುತ್ತಿದ್ದಾರೆ ಎಂದು ತಿಳಿಸಿದರು.

    ರಾಜ್ಯದಲ್ಲೂ 1998 ರಿಂದಲೂ ನಂ.1 ಸ್ಥಾನದಲ್ಲಿ ಬಿಜೆಪಿಯೇ ಗೆಲ್ಲುತ್ತಾ ಬಂದಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅತಿರಥ ಮಹಾರಥರನ್ನು ಸೋಲಿಸಿ ಮನೆಗೆ ಕಳಿಸುತ್ತೇವೆ. 28ಕ್ಕೆ 28 ಸ್ಥಾನಗಳನ್ನು ಕೂಡ ಬಿಜೆಪಿಯೇ ಗೆಲ್ಲಲಿದೆ. ಜಾತಿ, ಕುಟುಂಬದ ಬಗ್ಗೆ ಚರ್ಚೆ ನಡೆಯದೇ, ಈಗ ದೇಶದ ಬಗ್ಗೆ ಚರ್ಚೆ ನಡೆಯುತ್ತಿದೆ. ಎಂಥಹ ನಾಯಕ ಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ದೇಶ ಗೆಲ್ಲಬೇಕು ಎಂದರೆ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಸಿ.ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇವರು ತಿಲಕವಿಟ್ಟುಕೊಂಡ ಹಿಂದೂಗಳನ್ನು ಕಂಡರೆ ಗಾಬರಿಯಾಗುವ ನಮ್ಮ ಸಿದ್ದಣ್ಣ: ಅನಂತ್ ಕುಮಾರ್ ಹೆಗ್ಡೆ ವ್ಯಂಗ್ಯ

    ಇವರು ತಿಲಕವಿಟ್ಟುಕೊಂಡ ಹಿಂದೂಗಳನ್ನು ಕಂಡರೆ ಗಾಬರಿಯಾಗುವ ನಮ್ಮ ಸಿದ್ದಣ್ಣ: ಅನಂತ್ ಕುಮಾರ್ ಹೆಗ್ಡೆ ವ್ಯಂಗ್ಯ

    ಬೆಂಗಳೂರು: ಕುಂಕುಮವನ್ನು ನೋಡಿದರೆ ಜನರಿಗೆ ಭಯ ಹುಟ್ಟದೆ, ಗೌರವ ಹುಟ್ಟತ್ತಾ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್‍ಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದಾರೆ.

    ಸಿದ್ದರಾಮಯ್ಯ ಅವರು ಹಿಂದೂ ಹಾಗೂ ಬಿಜೆಪಿ ವಿರುದ್ಧ ಮಾತನಾಡಿರುವುದಕ್ಕೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಅನಂತ್ ಕುಮಾರ್ ಹೆಗ್ಡೆ ಅವರು ಸಿದ್ದರಾಮಯ್ಯ ಅವರು ಕುಂಕುಮ ಇಟ್ಟಿಕೊಂಡಿರುವ ಫೋಟೋವೊದನ್ನು ಹಾಕಿ “ಅಯ್ಯೋ! ಭಯ, ಭೀತಿಗೊಳ್ಳಬೇಡಿ. ಇವರು ಹಣೆಯಲ್ಲಿ ತಿಲಕವಿಟ್ಟುಕೊಂಡ ಹಿಂದೂಗಳನ್ನು ಕಂಡರೆ ಗಾಬರಿಯಾಗುವ ನಮ್ಮ ಸಿದ್ದಣ್ಣ #selfie with tilak” ಅಂತ ಬರೆದು ಟ್ವೀಟ್ ಮಾಡಿದ್ದಾರೆ.ಇದನ್ನೂ ಓದಿ: ಕುಂಕುಮಧಾರಿಯನ್ನ ನೋಡಿದಾಗ ಭಯ ಹುಟ್ಟದೆ, ಗೌರವ ಹುಟ್ಟುತ್ತಾ: ಸಿದ್ದರಾಮಯ್ಯ ಪ್ರಶ್ನೆ

    ಅಷ್ಟೇ ಅಲ್ಲದೆ ಸಿದ್ದರಾಮಯ್ಯ ಅವರ ಟ್ವೀಟ್ ಬಗ್ಗೆ ಬಿಜೆಪಿ ನಾಯಕ ಸಿ.ಟಿ ರವಿ ಅವರು ಕೂಡ ರೀ-ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. “ಚುನಾವಣೆ ವೇಳೆ ಇದೇ ಕುಂಕುಮ ತಾನೆ ನಿಮ್ಮ ಹಣೆಮೇಲೆ ಇದ್ದಿದ್ದು. ಆಗ ನಿಮಗೆ ಭಯವಿರಲಿಲ್ಲವೇ? ಬೇಕಾದಾಗ ಕುಂಕುಮ, ತಿಲಕ ಹಚ್ಚಿ ಬೇಡವಾದಾಗ ಅದೇ ಸಂಪ್ರದಾಯದ ವಿರುದ್ಧ ಕೇವಲ ಮತಗಳಿಕೆಗೋಸ್ಕರ ಜನರನ್ನು ಎತ್ತಿಕಟ್ಟುವ ನಿಮ್ಮ ಕೀಳು ಮನಸ್ಥಿತಿಗೆ ಭಾರತದ ಯಾವ ಭಾಗದಲ್ಲೂ ಬೆಲೆ ಇಲ್ಲ. ಇನ್ನೂ ಎಷ್ಟು ನೀಚ ರಾಜಕಾರಣ ಮಾಡುತ್ತೀರ ಸಿದ್ದರಾಮಯ್ಯ ಸಾರ್?” ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv