Tag: c t ravi

  • ಸಿದ್ದು ಅಭಿಮಾನಿಗಳಿಗೆ ಹುಲಿಯಾ, ಮತದಾರರ ದೃಷ್ಟಿಯಲ್ಲಿ ಇಲಿಯಾ : ಸಿಟಿ ರವಿ

    ಸಿದ್ದು ಅಭಿಮಾನಿಗಳಿಗೆ ಹುಲಿಯಾ, ಮತದಾರರ ದೃಷ್ಟಿಯಲ್ಲಿ ಇಲಿಯಾ : ಸಿಟಿ ರವಿ

    ಬೆಂಗಳೂರು: ಅಭಿಮಾನಿಗಳ ದೃಷ್ಟಿಯಲ್ಲಿ ಹುಲಿಯಾ, ಮತದಾರರ ದೃಷ್ಟಿಯಲ್ಲಿ ಇಲಿಯಾ ಎಂದು ಸಚಿವ ಸಿಟಿ ರವಿ ಅವರು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಟಾಂಗ್ ಕೊಟ್ಟಿದ್ದಾರೆ.

    ಇಂದು ಉಪಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಮತ ಏಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ 11 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, 1 ಕ್ಷೇತ್ರದಲ್ಲಿ ಭಾರೀ ಅಂತರದಲ್ಲಿ ಗೆಲವು ಸಾಧಿಸಿದೆ. ಇದೇ ಬೆನ್ನಲ್ಲೇ ಸಿಟಿ ರವಿ ಅವರು ಟ್ವೀಟ್ ಮಾಡಿ ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ. ಪ್ರಚಾರದ ವೇಳೆ ಉಪಚುನಾವಣೆಯಲ್ಲಿ ಗೆಲವು ನಮ್ಮದೇ ಎಂದು ಹೇಳುತ್ತಿದ್ದ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿರುವ ಹಿನ್ನೆಲೆ ಅಭಿಮಾನಿಗಳ ದೃಷ್ಟಿಯಲ್ಲಿ ಹುಲಿಯಾ, ಮತದಾರರ ದೃಷ್ಟಿಯಲ್ಲಿ ಇಲಿಯಾ ಎಂದು ಸಿಟಿ ರವಿ ಟೀಕಿಸಿದ್ದಾರೆ.

    ಇತ್ತೀಚೆಗಷ್ಟೇ ಕಾಗವಾಡ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ವೇಳೆ `ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ರು’ ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲೇ ಇದ್ದ ಕುಡುಕನೋರ್ವ `ಹೌದು ಹುಲಿಯಾ’ ಎಂದಿದ್ದರು. ಸದ್ಯ ಕುಡುಕನ `ಹೌದು ಹುಲಿಯಾ’ ಡೈಲಾಗ್ ಈಗ ಸಖತ್ ಟ್ರೆಂಡ್ ಆಗಿದೆ.

    ಇದೇ ಡೈಲಾಗ್ ಇಟ್ಟುಕೊಂಡು ಸಿಟಿ ರವಿ ಅವರು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ಟ್ವೀಟ್ ಮಾಡಿ ಸಚಿವರು ಟಾಂಗ್ ಕೊಟ್ಟಿದ್ದಾರೆ.

  • ಸುಳ್ಳು ಆರೋಪ ಮಾಡೋದ್ರಲ್ಲಿ ಕಾಂಗ್ರೆಸ್-ಜೆಡಿಎಸ್ ಎತ್ತಿದ ಕೈ: ಕಾರಜೋಳ

    ಸುಳ್ಳು ಆರೋಪ ಮಾಡೋದ್ರಲ್ಲಿ ಕಾಂಗ್ರೆಸ್-ಜೆಡಿಎಸ್ ಎತ್ತಿದ ಕೈ: ಕಾರಜೋಳ

    – ಡಿಕೆಶಿ, ಎಚ್‍ಡಿಕೆ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

    ಚಿಕ್ಕಬಳ್ಳಾಪುರ: ಸುಳ್ಳು ಆರೋಪ ಮಾಡುವುದರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಎತ್ತಿದ ಕೈ ಎಂದು ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಹೇಳಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಡಾ ಕೆ.ಸುಧಾಕರ್ ಒಳ್ಳೆಯ ಅಭ್ಯರ್ಥಿ. ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಾರೆ. ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಮಾಡಿಸಿದ್ದು, ಈಗಾಗಲೇ ಕಾಮಗಾರಿ ಸಹ ಆರಂಭವಾಗಿದೆ. ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿಸಿ ಜನರ ಆಸೆ ಈಡೇರಿಸಿದ್ದಾರೆ. ಇದು ಸುಧಾಕರ್ ಜೀವನದ ದೊಡ್ಡ ಸಾಧನೆ ಎಂದು ಹಾಡಿ ಹೊಗಳಿದರು.

    ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಹತಾಶರಾಗಿ ಏನೇನೋ ಆರೋಪಗಳನ್ನ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರು ಸಹ ಸುಳ್ಳು ಆರೋಪಗಳನ್ನ ಮಾಡುತ್ತಿದ್ದಾರೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಆಯ್ತು. ಕಾಂಗ್ರೆಸ್-ಜೆಡಿಎಸ್‍ನವರು ಸಾಧನೆ ಪಟ್ಟಿ ಹಿಡಿದು ಜನರ ಬಳಿ ಹೋಗುವಂತೆ ಅವರಿಗೆ ಹೇಳುತ್ತೇನೆ ಎಂದರು.

    ಅನರ್ಹ ಶಾಸಕ ಕೆ.ಸುಧಾಕರ್ ರಾಜೀನಾಮೆ ಕೊಟ್ಟಿದ್ದು ಆಸೆ, ಆಮಿಷಗಳಿಗಲ್ಲ. ಕ್ಷೇತ್ರದ ಅಭಿವೃದ್ಧಿಯ ಉದ್ದೇಶದಿಂದ ರಾಜೀನಾಮೆ ನೀಡಿ, ತ್ಯಾಗ ಮೆರೆದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸುಳ್ಳು ಆರೋಪಗಳಿಂದಲೇ ಜೀವನ ಮಾಡಿದವರು. ಪ್ರಾದೇಶಿಕ ಪಕ್ಷ ಜೆಡಿಎಸ್ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕುಟುಕಿದರು.

    ಡಿಕೆಶಿಗೆ ಸಿ.ಟಿ.ರವಿ ತಿರುಗೇಟು:
    ಚಿಕ್ಕಬಳ್ಳಾಪುರದಲ್ಲಿ ಪತ್ರಕರ್ತರ ಭವನದಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ, ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ನನ್ನ ವಿರೋಧವಿಲ್ಲ ಎಂಬ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿಗೆ ತಿರುಗೇಟು ನೀಡಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ಅಡ್ಡಿಪಡಿಸುವುದಿಲ್ಲ ಎನ್ನುವುದಾದರೆ ಸುಧಾಕರ್ ಅವರೊಂದಿಗೆ ಯಾಕೆ ವಾಕ್ಸಮರ ನಡೆಸುತ್ತಿದ್ದಾರೆ? ಮೆಡಿಕಲ್ ಕಾಲೇಜು ಆರಂಭಿಸುತ್ತಿರುವುದು ಕಮಿಷನ್‍ಗಾಗಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ವಿಧಾನಸೌಧದಲ್ಲಿ ನಡೆಸಬೇಕಿದ್ದ ಆಡಳಿತವನ್ನ ತಾಜ್ ವೆಸ್ಟೆಂಡ್ ಹೋಟೆಲ್‍ಗೆ ತೆಗೆದುಕೊಂಡು ಹೋಗಿದ್ದರು. ಹಾಗಾದರೆ ಅವರು ರಾಜಕೀಯ ದಲ್ಲಾಳಿಗಳ ಅನುಕೂಲಕ್ಕಾಗಿ ಆ ರೀತಿ ಮಾಡಿದ್ರಾ ಎಂದು ಪ್ರಶ್ನಿಸಿದರು.

    ಬಡವರ ಕಷ್ಟ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ನಿದ್ದೆ ಮಾಡುವವರಿಗೆ, ಹೆಲಿಕಾಪ್ಟರ್ ನಲ್ಲಿ ಓಡಾಡುವ ಶ್ರೀಮಂತರಿಗೆ ಅರ್ಥವಾಗಲ್ಲ ಎಂದು ಸಚಿವರು ಕಾಂಗ್ರೆಸ್-ಜೆಡಿಎಸ್ ನಾಯಕರ ವಿರುದ್ಧ ಗುಡುಗಿದರು.

  • ಸಿದ್ದರಾಮಯ್ಯ ಧರಿಸುವ ಪಂಚೆ ಶಲ್ಯದಷ್ಟು ಸರಳವಾಗಿಲ್ಲ: ಸಿ.ಟಿ ರವಿ

    ಸಿದ್ದರಾಮಯ್ಯ ಧರಿಸುವ ಪಂಚೆ ಶಲ್ಯದಷ್ಟು ಸರಳವಾಗಿಲ್ಲ: ಸಿ.ಟಿ ರವಿ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಸಿ.ಟಿ ರವಿ, ಬಿಜೆಪಿ ಅಭ್ಯರ್ಥಿ ಡಾ ಕೆ. ಸುಧಾಕರ್ ಪರವಾಗಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.

    ಪ್ರಚಾರದ ವೇಳೆ, ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಬೆಂಬಲಿಸಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಪಕ್ಷಾತೀತವಾಗಿ ಬಿಜೆಪಿ ಪಕ್ಷ ಸೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ಡಾ ಕೆ. ಸುಧಾಕರ್ ಅತಿ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸ್ವಾಭಿಮಾನದ ಅಲೆಯಿದ್ದು, ಮೆಡಿಕಲ್ ಕಾಲೇಜು ವಿಚಾರದಲ್ಲಿ ಡಿಕೆಶಿ ಸವಾಲು ಹಾಕಿದಾಗಲೇ ಜನರ ಸ್ವಾಭಿಮಾನ ರೊಚ್ಚಿಗೇಳುವಂತೆ ಮಾಡಿದೆ. ಹೀಗಾಗಿ ದೊಡ್ಡ ನಾಯಕರಾದ ಡಿಕೆಶಿ ದೊಡ್ಡದಾಗಿ ಯೋಚನೆ ಮಾಡಬೇಕು. ಅದು ಬಿಟ್ಟು ಸಣ್ಣತನ ಪ್ರದರ್ಶನ ಮಾಡಿದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ಒನ್ ಸೈಡ್ ಮ್ಯಾಚ್ ಎಂಬ ಪರಿಸ್ಥಿತಿ ಇದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಎರಡನೇ ಸ್ಥಾನಕ್ಕಾಗಿ ಪೈಪೋಟಿಗಿಳಿದಿವೆ ಎಂದರು.

    ಅಲ್ಲದೆ ಸಮಾಜವಾದಿ ಎಂದು ಹೇಳುವ ಸಿದ್ದರಾಮಯ್ಯ ಪಂಚೆ ಶಲ್ಯದಷ್ಟು ಸರಳವಾಗಿಲ್ಲ. ಅವರ ಪಂಚೆ ಹಾಗೂ ಶಲ್ಯಕ್ಕೆ ಅವರ ಐಷಾರಾಮಿ ಜೀವನ ಮಿಸ್ ಮ್ಯಾಚ್ ಆಗುತ್ತಿದೆ. ಸಿದ್ದರಾಮಯ್ಯ ಪ್ರತಿ ದಿನ ಹಾಕುವ ಗಾಗಾಲ್ಸ್ ನ ಬೆಲೆ ಏನು? ಎಂದು ಪ್ರಶ್ನೆ ಮಾಡಿದರು.

    ಯಡಿಯೂರಪ್ಪ ಅವರ ರಾಜೀನಾಮೆ ಕೇಳುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ. ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಒಂದು ಸೀಟು ಬಂದಾಗಲೇ ಸಿದ್ದರಾಮಯ್ಯ ನೈತಿಕತೆ ಇದ್ದಿದ್ರೆ ಅಂದೇ ರಾಜಕೀಯ ನಿವೃತ್ತಿ ಪಡೆಯಬೇಕಿತ್ತು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    ನಾನು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯಷ್ಟು ದೊಡ್ಡ ಲೀಡರ್ ಅಲ್ಲ. ಈಗಲೂ ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಕೆಲವರು ಕೃಪಾಕಟಾಕ್ಷದಿಂದ ನಾಯಕರಾದರೆ, ಕೆಲವರು ವಂಶಪಾರಂಪರ್ಯವಾಗಿ ನಾಯಕರಾಗಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ಗುದ್ದು ನೀಡಿದರು.

  • ನಿಮ್ಮ ಬೇಜವಾಬ್ದಾರಿಯಿಂದ ಒಂದು ಹೆಣ್ಣುಮಗಳ ಪ್ರಾಣ ಹೋಯ್ತು – ಸಿಟಿ ರವಿಗೆ ಜನಸಾಮಾನ್ಯರ ತರಾಟೆ

    ನಿಮ್ಮ ಬೇಜವಾಬ್ದಾರಿಯಿಂದ ಒಂದು ಹೆಣ್ಣುಮಗಳ ಪ್ರಾಣ ಹೋಯ್ತು – ಸಿಟಿ ರವಿಗೆ ಜನಸಾಮಾನ್ಯರ ತರಾಟೆ

    ಚಿಕ್ಕಮಗಳೂರು: ಭಾನುವಾರ ರಸ್ತೆ ಗುಂಡಿಗೆ ಬಿದ್ದು ಯುವತಿ ಸಾವನ್ನಪ್ಪಿದ್ದ ಪ್ರಕರಣದಿಂದ ಜನಸಾಮಾನ್ಯರು ಸಿಟ್ಟಿಗೆದ್ದಿದ್ದು, ಸಚಿವ ಸಿ.ಟಿ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಸಚಿವರ ವಿರುದ್ಧ ಮಹಿಳೆಯೊಬ್ಬರು ಕಿಡಿಕಾರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಮಹಿಳೆ ಸಿಟಿ ರವಿ ಅವರು ಯುವತಿ ಸಾವಿಗೆ ಸಂತಾಪ ಸೂಚಿಸಿರುವ ಟ್ವೀಟ್ ಓದಿ ಹರಿಹಾಯ್ದಿದ್ದಾರೆ. ಭಾನುವಾರ ದಂಡರಮಕ್ಕಿ ಸಮೀಪ ರಸ್ತೆಯಲ್ಲಿ ನಡೆದ ಅಪಘಾತ ದುರದೃಷ್ಟಕರವಲ್ಲ, ಅದು ನಿಮ್ಮ ಬೇಜವಾಬ್ದಾರಿತನ. ಈ ರೀತಿ ಟ್ವೀಟ್ ಮಾಡೋದಕ್ಕೆ ನಿಮ್ಮ ಆತ್ಮಸಾಕ್ಷಿಗೆ ಒಂದು ಸ್ವಲ್ಪವು ಚುಕ್ಕಲಿಲ್ವಾ? ನಿಮ್ಮ ಬೇಜವಾಬ್ದಾರಿಯಿಂದ ಒಂದು ಹೆಣ್ಣುಮಗಳು ಪ್ರಾಣ ಕಳೆದುಕೊಂಡಿದ್ದಾಳೆ ಎಂಬುದು ನಿಮ್ಮ ಪರಿಜ್ಞಾನಕ್ಕೆ ಬರಲಿಲ್ವಾ? ಸುಲಭವಾಗಿ ಅವರ ಸಾವಿನ ದುಃಖ ಬರಿಸುವಂತ ಶಕ್ತಿ ಅವರ ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಹೇಳುತ್ತೀರಲ್ಲಾ, ನಿಮಗೆ ಜೀವದ ಬೆಲೆ ಗೊತ್ತಿದ್ಯಾ? ಈ ಹಿಂದೆ ಹೀಗೆ ಮಾಡಿಯೇ ಇಬ್ಬರ ಪ್ರಾಣ ತೆಗೆದಿದ್ದೀರಿ. ನಿಮಗೆ ಜೀವದ ಬೆಲೆ, ಜೀವನದ ಬೆಲೆ ಗೊತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಕೇಂದ್ರ, ರಾಜ್ಯ ಸಚಿವರಿದ್ರೂ ಹುಬ್ಬಳ್ಳಿಯಲ್ಲಿ ಎಲ್ಲೆಲ್ಲೂ ಗುಂಡಿಗಳ ದರ್ಶನ

    ಇನ್ನುಮುಂದೆ ಟ್ವಿಟ್ಟರ್‌ನಲ್ಲಿ ಬೇರೆಯವರನ್ನು ಟೀಕಿಸುವ ಮುನ್ನ ನೀವು ನಿಮ್ಮ ಕ್ಷೇತ್ರದಲ್ಲಿ ಏನು ಮಾಡಿದ್ದೀರಿ? ಹೇಗೆ ಅಭಿವೃದ್ಧಿ ಮಾಡಿದ್ದೀರಿ ಎನ್ನುವುದನ್ನು ಜನಕ್ಕೆ ಹೇಳಿ. ಇಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ ತೋರಿಸಿ. ಚಿಕ್ಕಮಗಳೂರು ರಸ್ತೆಗಳ ಪರಿಸ್ಥಿತಿ ಹೇಗಿದೆ ಅನ್ನೋದನ್ನ ನೀವೇ ಸುತ್ತಿಕೊಂಡು ಬಂದು ನೋಡಿ. ಆಮೇಲೆ ಯುವತಿ ಸಾವಿಗೆ ನೀವು ಸಂತಾಪ ಸೂಚಿಸಲು ಅರ್ಹರ ಎಂದು ಯೋಚನೆ ಮಾಡಿ, ಟ್ವೀಟ್ ಮಾಡಿ. ನಿಮ್ಮ ಟ್ವೀಟನ್ನು ನಾವು ಖಂಡಿಸುತ್ತೇವೆ. ನೀವು ಸರಿಯಾಗಿ ಕೆಲಸ ಮಾಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಸಿ.ಟಿ ರವಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ:ಲಾರಿಯಿಂದ ಮಣ್ಣು ಸುರಿದು ರಸ್ತೆ ಗುಂಡಿ ಮುಚ್ಚಿದ ಟ್ರಾಫಿಕ್ ಪೊಲೀಸ್

    ಭಾನುವಾರ ಚಿಕ್ಕಮಗಳೂರಿನ ದಂಡರಮಕ್ಕಿ ಸಮೀಪ ರಸ್ತೆ ಗುಂಡಿಗೆ ಬಿದ್ದು ಬಿ.ಇ ವಿದ್ಯಾರ್ಥಿನಿ ಸಿಂಧೂಜ(23) ಸಾವನ್ನಪ್ಪಿದ್ದರು. ಪಾಸ್‌ಪೋರ್ಟ್ ವೆರಿಫಿಕೇಶನ್‌ಗಾಗಿ ತಂದೆಯ ಜೊತೆ ಬೈಕ್‌ನಲ್ಲಿ ಸಿಂಧೂಜ ತೆರಳುತ್ತಿದ್ದರು. ಈ ವೇಳೆ ಘಟನೆ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನ ಗಮನಿಸದೆ ಬೈಕ್‌ನಿಂದ ಬಿದ್ದು ತಂದೆ, ಮಗಳು ಗಾಯಗೊಂಡಿದ್ದರು. ದುರಾದೃಷ್ಟವಶಾತ್ ಗಂಭೀರವಾಗಿ ಗಾಯಗೊಂಡಿದ್ದ ಸಿಂಧೂಜಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದರು. ಇದನ್ನೂ ಓದಿ:ರಸ್ತೆ ಗುಂಡಿಯಲ್ಲಿ ಕಾಲಿಟ್ಟು ತನ್ನ ಎರಡು ಕಾಲು ಕಳೆದುಕೊಂಡ ಎತ್ತು

    ಈ ಸಾವಿನ ಬಳಿಕ ಸರ್ಕಾರದ ವಿರುದ್ಧ ಸಾರ್ವಜನಿಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಚಿಕ್ಕಮಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಳೆಗಿಡ, ಅಡಿಕೆ ಸಸಿ ನೆಟ್ಟು ಪ್ರತಿಭಟನೆ ನಡೆಸಿ, ಸಚಿವ ಸಿ.ಟಿ ರವಿ ಫೋಟೋಗೆ ನೀರು ಹಾಕಿ ಕಿಡಿಕಾರಿದ್ದರು. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಯುವತಿ ಸಾವಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಚಿವರ ಜೊತೆಗೆ ಪಿಡಬ್ಲೂಡಿ ವಿರುದ್ಧವೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

  • ಮದ್ಯ ಕುಡಿದು ಕೊಂದವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿ: ಸಿಟಿ ರವಿಗೆ ಸಿದ್ದರಾಮಯ್ಯ ತಿರುಗೇಟು

    ಮದ್ಯ ಕುಡಿದು ಕೊಂದವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿ: ಸಿಟಿ ರವಿಗೆ ಸಿದ್ದರಾಮಯ್ಯ ತಿರುಗೇಟು

    – ಮಾನಸಿಕ ಅಸ್ವಸ್ಥ ಟ್ವೀಟ್‍ಗೆ ವಿಪಕ್ಷ ನಾಯಕ ಗರಂ

    ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ವಿಚಾರವಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಧ್ಯೆ ಟ್ವೀಟ್ ವಾರ್ ನಡೆದಿದೆ.

    ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿ, ಮಹಾತ್ಮ ಗಾಂಧೀಜಿ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದವರಲ್ಲಿ ಸಾವರ್ಕರ್ ಕೂಡ ಒಬ್ಬರು ಎಂದು ಹೇಳುತ್ತೀರಿ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ನೀವು ಮಾನಸಿಕ ಅಸ್ವಸ್ಥರಾಗಿದ್ದೀರಿ. ಇತಿಹಾಸದ ಬಗ್ಗೆ ನಿಮಗೆ ಅರಿವಿದೆಯಾ? ನೀವ್ಯಾಕೆ ಸೆಲ್ಯೂಲರ್ ಜೈಲಿಗೆ ಹೋಗಬಾರದು. ನಾನೇ ಸ್ಪಾನ್ಸರ್ ಮಾಡುತ್ತೇನೆ ಎಂದು ಗುಡುಗಿದ್ದಾರೆ.

    ಸಚಿವರ ಹೇಳಿಕೆಯಿಂದ ಗರಂ ಆದ ಸಿದ್ದರಾಮಯ್ಯ ಅವರು, ಅಧಿಕಾರ ಇಲ್ಲದಾಗ ಮಾನಸಿಕ ಕಾಯಿಲೆಯಿಂದ ನರಳುವವರು ಕಂಠಪೂರ್ತಿ ಕುಡಿದು ಕಾರು ಅಪಘಾತ ಮಾಡಿ ಅಮಾಯಕರನ್ನು ಸಾಯಿಸುತ್ತಾರೆ. ನಮ್ಮಂತಹವರು ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಇತಿಹಾಸ ಓದಿ, ಸತ್ಯ ತಿಳಿದುಕೊಂಡು ಮಾತಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪಾ ಎಂದು ಕುಟುಕಿದ್ದಾರೆ.

    ಮಂಗಳೂರಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಗಾಂಧೀಜಿ ಹತ್ಯೆಗೆ ಸ್ಕೆಚ್ ಹಾಕಿದ್ದ ಸಾವರ್ಕರ್ ಗೆ ಬಿಜೆಪಿ ಭಾರತ ರತ್ನ ನೀಡಲು ಮುಂದಾಗುತ್ತಿದೆ. ಗೋಡ್ಸೆಯ ಹಿಂದೆ ನಿಂತು ಹತ್ಯೆಗೆ ಸಂಚು ರೂಪಿಸಿದ್ದರು. ಸೂಕ್ತ ಸಾಕ್ಷ್ಯ ಇಲ್ಲದೆ ಆರೋಪಿಯಾಗಿ ಗುರುತಿಸಿರಲಿಲ್ಲ ಅಷ್ಟೇ. ಆದರೆ ಅಂಥ ವ್ಯಕ್ತಿಗೆ ಭಾರತ ರತ್ನ ಕೊಡಲು ಬಿಜೆಪಿ ಮುಂದಾಗಿದೆ. ಗೋಡ್ಸೆಗೂ ಭಾರತ ರತ್ನ ನೀಡಲಿ ಎಂದು ಟೀಕಿಸಿದ್ದರು.

  • ಚುನಾವಣೆ ಮೊದ್ಲು ‘ಶೋಭಾ ಗೋ ಬ್ಯಾಕ್’ ಅಂದೋರು ಆಯಮ್ಮನನ್ನೇ ಗೆಲ್ಲಿಸಿದ್ರು: ಸಿದ್ದರಾಮಯ್ಯ

    ಚುನಾವಣೆ ಮೊದ್ಲು ‘ಶೋಭಾ ಗೋ ಬ್ಯಾಕ್’ ಅಂದೋರು ಆಯಮ್ಮನನ್ನೇ ಗೆಲ್ಲಿಸಿದ್ರು: ಸಿದ್ದರಾಮಯ್ಯ

    ಚಿಕ್ಕಮಗಳೂರು: ಲೋಕಸಭೆ ಚುನಾವಣೆ ವೇಳೆ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರತಿಭಟನೆ ಮಾಡಿ, ಗೋ ಬ್ಯಾಕ್ ಅನ್ನುತ್ತಿದ್ದೋರು ಬಳಿಕ ಆಯಮ್ಮನನ್ನೇ ಗೆಲ್ಲಿಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಜನ ಶೋಭಾ ಅವರ ವಿರುದ್ಧ ಚುನಾವಣೆ ಮುಂಚೆ ಪ್ರತಿಭಟನೆ ಮಾಡುತ್ತಿದ್ದರು. ಆದರೆ ಮತ್ತೆ ಆಯಮ್ಮನಿಗೆ ವೋಟ್ ಹಾಕಿದ್ದಾರಲ್ಲಾ ಹೆಂಗಪ್ಪಾ? ಗೋ ಬ್ಯಾಕ್ ಅನ್ನುತ್ತಿದ್ದೋರು, ಮೂರು ಲಕ್ಷ ಮತಗಳಿಂದ ಗೆಲ್ಲಿಸಿದ್ದಾರೆ. ಇನ್ನ 5 ವರ್ಷ ಈ ಕಡೆ ಅವರು ಬರಲ್ಲ ಎಂದು ಟಾಂಗ್ ಕೊಟ್ಟರು.

    ನೆರೆ ಪರಿಹಾರ ಸಿಗದೇ, ಸಾಲ ಭಾದೆಯಿಂದ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬದ ಪರಿಸ್ಥಿತಿ ಬಗ್ಗೆ ಕೇಳದ ಶೋಭಾ ಕರಂದ್ಲಾಜೆ ಹಾಗೂ ಸಚಿವ ಸಿಟಿ ರವಿ ಅವರನ್ನು ಸಿದ್ದರಾಮಯ್ಯ ಟೀಕಿಸಿದರು. ಚಿಕ್ಕಮಗಳೂರಿನಲ್ಲಿ ಪ್ರವಾಹ ಪರಿಹಾರ ಸಿಗದೇ, ಸಾಲಬಾಧೆಗೆ ಇಬ್ಬರು ರೈತರು ಸಾವನ್ನಪ್ಪಿದ್ದಾರೆ. ಆದರೆ ಈವರೆಗೂ ಶೋಭಾ ಅಥವಾ ಸಚಿವ ಸಿಟಿ ರವಿ ಆ ಕಡೆ ಹೋಗಿಲ್ಲ. ರೈತರ ಕುಟುಂಬದ ಅಳಲನ್ನು ಆಲಿಸಿಲ್ಲ ಎಂದು ಕಿಡಿಕಾರಿದರು. ನಾನು ಚಿಕ್ಕಮಗಳೂರಿಗೆ ಬರುತ್ತಿದ್ದೇನೆ ಎಂದು ಗೊತ್ತಾದ ಬಳಿಕ ಮರುದಿನ ಬೆಳಗ್ಗೆಯೇ ಮೂಡಿಗೆರೆ ಎಂಎಲ್‍ಎ ಕುಮಾರಸ್ವಾಮಿ ರೈತರ ಮನೆಗೆ ಓಡಿ ಹೋದರು. ಅಲ್ಲಿಯವರೆಗೆ ಈ ಬಗ್ಗೆ ನೆನಪಿರಲಿಲ್ಲ ಎಂದು ವ್ಯಂಗ್ಯವಾಡಿದರು.

  • ಚಂದನ್ ಲವ್ ಪ್ರಪೋಸ್ ಬಗ್ಗೆ ವಿಪರೀತ ಅರ್ಥ ಕಲ್ಪಿಸೋದು ಬೇಡ: ಸಿಟಿ ರವಿ

    ಚಂದನ್ ಲವ್ ಪ್ರಪೋಸ್ ಬಗ್ಗೆ ವಿಪರೀತ ಅರ್ಥ ಕಲ್ಪಿಸೋದು ಬೇಡ: ಸಿಟಿ ರವಿ

    ರಾಮನಗರ: ಹೆಣ್ಣು-ಗಂಡಿನ ನಡುವಿನ ಒಲವು ತಡೆಯೋಕ್ಕಾಗಲ್ಲ, ಅದು ಎಲ್ಲದಕ್ಕೂ ಮೀರಿದ್ದು. ಅದಕ್ಕೆ ವಿಪರೀತ ಅರ್ಥ ಕಲ್ಪಿಸುವುದು ಬೇಡ ಎಂದು ಮೈಸೂರು ಯುವ ದಸರದಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಲವ್ ಪ್ರಫೋಸ್ ಮಾಡಿದ್ದ ವಿಚಾರವಾಗಿ ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.

    ದಸರಾ ಹಿನ್ನೆಲೆ ರಾಮನಗರದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಸಿ.ಟಿ ರವಿ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ಬಿಗ್‍ಬಾಸ್ ಖ್ಯಾತಿಯ ರ‍್ಯಾಪರ್ ಚಂದನ್ ಶೆಟ್ಟಿ ನಿವೇದಿತಾಗೆ ರಿಂಗ್ ತೊಡಿಸಿ ಪ್ರೇಮ ನಿವೇದನೆ ಮಾಡಿಕೊಂಡ ವಿಚಾರವಾಗಿ ಮಾತನಾಡಿದರು. ಡಿವಿಜಿಯವರ ಕಗ್ಗದ ಸಾಲುಗಳನ್ನು ಉಲ್ಲೇಖಿಸಿ ಚಂದನ್ ಪರ ಬ್ಯಾಟಿಂಗ್ ಮಾಡಿದರು. ಇದನ್ನೂ ಓದಿ:ಚಂದನ್ ಶೆಟ್ಟಿಯನ್ನು ಮಹಾಪರಾಧ ಮಾಡಿದವನಂತೆ ಕಾಣೋದು ಸಾಕು: ಪ್ರತಾಪ್ ಸಿಂಹ

    ಮಣ್ಣಿನ ಆತುರಕ್ಕಿಂತ ಚಿನ್ನದ ಆತುರ ಲೇಸು, ಚಿನ್ನದ ಆತುರಕ್ಕಿಂತ ಗಂಡು ಹೆಣ್ಣಿನ ಒಲವು ದೊಡ್ಡದು ಎಂದು ಡಿವಿಜಿಯವರು ಹೇಳಿದ್ದಾರೆ. ಹಾಗೆಯೇ ಗಂಡು-ಹೆಣ್ಣಿನ ಒಲವು ತಡೆಯಲು ಸಾಧ್ಯವಿಲ್ಲ, ಅದು ಎಲ್ಲಕ್ಕೂ ಮೀರಿದ್ದು. ಚಂದನ್ ನಿವೇದಿತಾ ವಿಚಾರವನ್ನು ಎಳೆದುಕೊಂಡು ಹೋಗುತ್ತಾ, ಅದಕ್ಕೆ ವಿಪರೀತ ಅರ್ಥ ಕಲ್ಪಿಸುವುದು ಬೇಡ ಎಂದರು. ಇದನ್ನೂ ಓದಿ:ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಬಾರದೆಂಬ ರೂಲ್ಸ್ ಇದ್ಯಾ? ಪ್ರಮೋದ್ ಮುತಾಲಿಕ್

    ಯುವ ದಸರಾ ವೇದಿಕೆ ಮೇಲೆ ಚಂದನ್ ಅವರು ನಿವೇದಿತಾಗೆ ಪ್ರಪೋಸ್ ಮಾಡಿರುವ ವಿಷಯ ಸದ್ಯ ಭಾರೀ ಸುದ್ದಿಯಲ್ಲಿದೆ. ಅಭಿಮಾನಿಗಳು ಈ ಕ್ಯೂಟ್ ಜೋಡಿ ಪ್ರೀತಿ ವಿಚಾರ ತಿಳಿದು ಖುಷಿಪಟ್ಟಿದ್ದರೆ. ಕೆಲವರು ಸಾರ್ವಜನಿಕ ವೇದಿಕೆ ಮೇಲೆ ಚಂದನ್ ತನ್ನ ಪ್ರೀತಿ ನಿವೇದನೆ ಮಾಡಿದ್ದು ತಪ್ಪು ಎಂದು ವಿರೋಧಿಸಿದ್ದಾರೆ.

  • ಸಿದ್ದರಾಮಯ್ಯರನ್ನು ಕಾಂಗ್ರೆಸ್ ಬಿಟ್ಟರೂ ನಾವು ಕೈ ಬಿಡುವುದಿಲ್ಲ: ಸಿಟಿ ರವಿ

    ಸಿದ್ದರಾಮಯ್ಯರನ್ನು ಕಾಂಗ್ರೆಸ್ ಬಿಟ್ಟರೂ ನಾವು ಕೈ ಬಿಡುವುದಿಲ್ಲ: ಸಿಟಿ ರವಿ

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯರನ್ನ ಕಾಂಗ್ರೆಸ್ ಕೈಬಿಟ್ಟರೂ ನಾವು ಕೈ ಬಿಡಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರು ಕಾಲೆಳೆದಿದ್ದಾರೆ.

    ಮೈಸೂರಿನ ಅರಮನೆಯಲ್ಲಿ ಮಾಧ್ಯಮಗಳ ಬಿಜೆಪಿ ನಾಯಕರು ಮಾತನಾಡುತ್ತಿದ್ದರು. ಈ ವೇಳೆ ಸಿದ್ದರಾಮಯ್ಯರನ್ನ ದಸರಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ವಿ. ಸೋಮಣ್ಣ, ಸಿದ್ದರಾಮಯ್ಯರನ್ನು ಸೇರಿಸಿಕೊಂಡೆ ದಸರಾ ಮಾಡುತ್ತೇವೆ. ಸಿದ್ದರಾಮಯ್ಯ ದಿನನಿತ್ಯ ನನ್ನ ಸಂಪರ್ಕದಲ್ಲಿ ಇದ್ದಾರೆ. ಆಹ್ವಾನ ಪತ್ರಿಕೆ ಇನ್ನು ಮುದ್ರಣಕ್ಕೆ ಹೋಗಿಲ್ಲ. ಅವರನ್ನು ಆಹ್ವಾನಿಸಿಯೇ ದಸರಾ ಮಾಡುತ್ತೇವೆ. ನೀವು ಬನ್ನಿ ನಿಮ್ಮ ಜೊತೆ ಸಿದ್ದರಾಮಯ್ಯರ ಮನೆಗೆ ಹೋಗುತ್ತೇನೆ ಎಂದು ಹೇಳಿದರು. ಅವರ ಮಾತಿನ ಮಧ್ಯೆ ಮಾತನಾಡಿ ಸಿದ್ದರಾಮಯ್ಯ ಅವರು ಮೈಸೂರಿನವರು ಅವರೇ ಅತಿಥಿ. ಕಾಂಗ್ರೆಸ್ ಅವರನ್ನು ಕೈ ಬಿಟ್ಟರು ನಾವು ಬಿಡಲ್ಲ ಎಂದು ಸಿಟಿ ರವಿ ಅವರು ಟಾಂಗ್ ಕೊಟ್ಟರು.

    ಈ ಮುಂಚೆ ಮಾಧ್ಯಮಗಳ ಜೊತೆ ಸಿಟಿ ರವಿ ಅವರು ಮಾತನಾಡಿ, ಭ್ರಷ್ಟಾಚಾರ ನಡೆಸದಿದ್ದರೆ ಯಾಕೆ ಹೆದರಬೇಕು. ಯಾರು ಭ್ರಷ್ಟಾಚಾರ ಮಾಡಿರುತ್ತಾರೋ ಅವರಿಗೆ ಭಯ ಇರುತ್ತೆ. ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡೋದೆ ತಪ್ಪಾ? ತನಿಖೆ ನಡೆಸುವುದೇ ಇಲಿ ಹಿಡಿಯುವುದು ಎಂದು ಸಿದ್ದರಾಮಯ್ಯ ಹೇಳಿದರೆ ಅದಕ್ಕೆ ಏನ್ ಹೇಳಬೇಕು ಹೇಳಿ ಎಂದು ಪ್ರಶ್ನಿಸಿ ಮಾಜಿ ಸಿಎಂಗೆ ತಿರುಗೇಟು ಕೊಟ್ಟಿರು.

    ನಾನು ಒಕ್ಕಲಿಗ ಸಮುದಾಯದವನು. ನನ್ನ ಸಮುದಾಯದ ನಾಯಕರಿಗೆ ಹೇಳುತ್ತೇನೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಭಾವನಾತ್ಮಕವಾಗಿ ಯೋಚನೆ ಮಾಡಬೇಡಿ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿ. ವಾಸ್ತವಿಕವಾಗಿ ಯೋಚನೆ ಮಾಡಿ. ಬಂಧನ ಸಮುದಾಯದ ವಿರುದ್ಧ ಎಂದು ಯಾಕೆ ಹೇಳುತ್ತೀರಾ? ನನ್ನ ಮನೆಯಲ್ಲಿ 10 ಕೋಟಿ ದುಡ್ಡು ಸಿಕ್ಕರೆ ನಾನು ಪ್ರಾಮಾಣಿಕ ಎಂದು ಹೇಗೆ ಹೇಳಿಕೊಳ್ಳಲು ಆಗುತ್ತದೆ? ನನ್ನ ಆಸ್ತಿ 18 ಎಕರೆ ಇದೆ. ಅದು 180 ಎಕರೆ ಆದರೆ ಉತ್ತರ ಕೊಡಬೇಕು. ಅದು 1880 ಎಕರೆ ಆದರೂ ಜನರಿಗೆ ಉತ್ತರ ಕೊಡಬಾರದು ಅಂದರೆ ಹೇಗೆ ಎಂದು ಕಿಡಿಕಾರಿದರು.

    ಕೆಆರ್‍ಎಸ್ ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣದ ಬಗ್ಗೆ ಪ್ರತಿಕ್ರಿಯಿಸಿ, ಈ ಯೋಜನೆಗೆ ನಮ್ಮ ವಿರೋಧ ಇಲ್ಲ. ಪ್ರವಾಸೋದ್ಯಮಕ್ಕೆ ಪೂರಕವಾಗುವ ಯೋಜನೆಗೆ ನಾವು ವಿರೋಧ ಮಾಡಲ್ಲ. ಡಿಸ್ನಿಲ್ಯಾಂಡ್ ಯೋಜನೆ ಬ್ಲೂ ಪ್ರಿಂಟ್‍ನಲ್ಲೇ ಇದೆ. ಇದು ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಯೋಜನೆ ಅಲ್ಲ. ಅದರೆ, ಯೋಜನೆ ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ನನ್ನ ಖಾತೆಯ ಬಜೆಟ್ ಎಷ್ಟಿದೆ ಎಂದು ನಾನು ಬಹಿರಂಗವಾಗಿ ಹೇಳುವುದಿಲ್ಲ ಎಂದು ತಿಳಿಸಿದರು.

    ಇಲಾಖೆ ಮಂತ್ರಿ ಆಕ್ಟೀವ್ ಆಗಿದ್ದರೆ ಇಲಾಖೆಯೂ ಆಕ್ಟೀವ್ ಆಗಿರುತ್ತದೆ. ಮಂತ್ರಿ ಸೋಮಾರಿಯಾದರೆ ಇಲಾಖೆಯ ಅಧಿಕಾರಿಗಳು ಸೋಮಾರಿಗಳಾಗುತ್ತಾರೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆಯನ್ನು ವರ್ಷ ಪೂರ್ತಿ ಆಕ್ಟೀವ್ ಆಗಿ ಇಡುತ್ತೇನೆ ಎಂದು ಸಿಟಿ ರವಿ ಹೇಳಿದರು.

  • ಸಿಎಂ ಎದುರೇ ಅಧಿಕಾರಿಗಳಿಗೆ ನೆರೆ ಸಂತ್ರಸ್ತರಿಂದ ತರಾಟೆ

    ಸಿಎಂ ಎದುರೇ ಅಧಿಕಾರಿಗಳಿಗೆ ನೆರೆ ಸಂತ್ರಸ್ತರಿಂದ ತರಾಟೆ

    – ಬಂದ್ರು ಹೋದ್ರು: ಸಿಎಂ ವಿರುದ್ಧವೂ ಕಿಡಿ

    ಚಿಕ್ಕಮಗಳೂರು: ನೆರೆ ಸಂತ್ರಸ್ತರೊಬ್ಬರು ಸಿಎಂ ಎದುರೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ ನಡೆಯಿತು.

    ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿದ ಸಿಎಂ ಯಡಿಯೂಪ್ಪ ಅವರು ನೆರೆ ಹಾನಿ ಪ್ರದೇಶ ವೀಕ್ಷಿಸಿದರು. ಈ ವೇಳೆ ಮೇಗೂರ್ ಗ್ರಾಮದ ಜಯಂತ್ ಅವರು, ಭಾರೀ ಮಳೆಯಿಂದಾಗಿ ನಮ್ಮ ಗ್ರಾಮದಲ್ಲಿ 12 ಮನೆಗಳು ಬಿದ್ದಿವೆ. ಇಲ್ಲಿವರೆಗೂ ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ಅವರು ನಮ್ಮ ಬಗ್ಗೆ ನಿಷ್ಕಾಳಜಿ ತೋರುತ್ತಿದ್ದಾರೆ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

    ಮಲೆಮನೆಯಲ್ಲಿ ಕೇವಲ 8 ಮನೆಗಳು ಮಾತ್ರ ಮಳೆಗೆ ಹಾನಿಯಾಗಿವೆ. ಗದ್ದೆ, ಬೆಳೆಗೆ ಯಾವುದೇ ಹಾನಿಯಾಗಿಲ್ಲ. ಆದರೆ ನಮ್ಮ ಗ್ರಾಮದಲ್ಲಿ 12 ಮನೆಗಳು ಬಿದ್ದಿವೆ. ಗದ್ದೆಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಇಲ್ಲಿವರೆಗೂ ಯಾವ ಅಧಿಕಾರಿಯೂ ಗ್ರಾಮಕ್ಕೆ ಭೇಟಿ ನೀಡಿ ನಮ್ಮ ಸಮಸ್ಯೆ ಆಲಿಸಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

    ಮಲೆಮನೆಗೆ ಸಚಿವರಾದ ಸಿ.ಟಿ.ರವಿ, ಜೆ.ಸಿ.ಮಾಧುಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮಾಜಿ ಸಿಎಂ ಕುಮಾರಸ್ವಾನಿ ಸೇರಿದಂತೆ ಅನೇಕ ನಾಯಕರು ಭೇಟಿ ನೀಡಿದ್ದಾರೆ. ಆದರೆ ನಮ್ಮ ಗ್ರಾಮಕ್ಕೆ ಯಾವುದೇ ನಾಯಕರು ಬರಲಿಲ್ಲ. ಇಲ್ಲಿವರೆಗೂ ಯಾವುದೇ ಪರಿಹಾರ ಸಾಮಗ್ರಿ ನೀಡಿಲ್ಲ. ನೆರೆ ವೀಕ್ಷಣೆಗೆ ಬಂದವರೆಲ್ಲ ಮಲೆಮನೆಗೆ ಮಾತ್ರ ಭೇಟಿ ನೀಡಿ ಹಿಂತಿರುಗುತ್ತಾರೆ. ಮೇಗೂರ್ ಗ್ರಾಮಕ್ಕೆ ಬಾರದಂತೆ ಕೆಲವರು ದಾರಿತಪ್ಪಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

    ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಜಯಂತ್ ಅವರು, ಹಳ್ಳ ಬಂದು ಮೇಗೂರ್ ಗ್ರಾಮದ 13 ಮನೆಗಳ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ವಿದ್ಯುತ್ ಕಡಿತವಾಗಿದೆ. ರಸ್ತೆ ಸಂಪರ್ಕವಿಲ್ಲ. ನಮ್ಮ ಕಷ್ಟವನ್ನು ಐದು-ಹತ್ತು ನಿಮಿಷದಲ್ಲಿ ಹೇಳಿಕೊಳ್ಳುವುದಕ್ಕೆ ಆಗುತ್ತಾ? ಸಿಎಂ ಬಂದ್ರು ಹತ್ತೇ ನಿಮಿಷದಲ್ಲಿ ಮಲೆಮನೆಯಿಂದ ವಾಪಸ್ ಹೋದರು. ನಮ್ಮ ಗ್ರಾಮಕ್ಕೆ ಬರಲೇ ಇಲ್ಲ. ಅವರಿಗೆ ಅವಸ ಏನು ಇತ್ತೋ ಏನೋ ಹೋಗಿ ಬಿಟ್ಟರು ಎಂದು ಸಿಎಂ ವಿರುದ್ಧ ಅಸಮಾಧಾನ ಹೊರ ಹಾಕಿದರು.

  • ಹತ್ತೇ ನಿಮಿಷದಲ್ಲಿ ನೆರೆ ಹಾನಿ ಪ್ರದೇಶ ವೀಕ್ಷಿಸಿ ವಾಪಸ್ಸಾದ ಸಿಎಂ

    ಹತ್ತೇ ನಿಮಿಷದಲ್ಲಿ ನೆರೆ ಹಾನಿ ಪ್ರದೇಶ ವೀಕ್ಷಿಸಿ ವಾಪಸ್ಸಾದ ಸಿಎಂ

    ಚಿಕ್ಕಮಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕೇವಲ ಹತ್ತೇ ನಿಮಿಷದಲ್ಲಿ ಪ್ರವಾಹ ಪೀಡಿತ ಪ್ರದೇಶ ವೀಕ್ಷಿಸಿ, ಸಂತ್ರಸ್ತರನ್ನು ಮಾತನಾಡಿಸಿ ವಾಪಸ್ಸಾದ ಪ್ರಸಂಗ ಇಂದು ಜಿಲ್ಲೆಯಲ್ಲಿ ನಡೆಯಿತು.

    ಭಾರೀ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದ ಜನರ ಜೀವನ ಅಸ್ತವ್ಯಸ್ತವಾಗಿದೆ. ಮಹಾ ಮಳೆಗೆ ಗುಡ್ಡ ಕುಸಿದು 6 ಮನೆ ಹಾಗೂ 2 ದೇವಾಲಯಗಳು ಸಂಪೂರ್ಣ ಕೊಚ್ಚಿ ಹೋಗಿವೆ. ಸದ್ಯ ಸಂತ್ರಸ್ತರು ಪರಿಹಾರ ಕೇಂದ್ರ, ಸಂಬಂಧಿಕರ ಮನೆಯಲ್ಲಿ ಇದ್ದು ಜೀವನ ನಡೆಸುತ್ತಿದ್ದಾರೆ.

    ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸಚಿವ ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರು ಸಾಥ್ ನೀಡಿದರು. ಹತ್ತೇ ನಿಮಿಷದಲ್ಲಿ ನೆರೆ ಹಾನಿ ಪ್ರದೇಶ ವೀಕ್ಷಿಸಿ ವಾಪಸ್ ಹೋದ ಸಿಎಂ ಹಾಗೂ ನಾಯಕರ ವಿರುದ್ಧ ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.

    ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ಅವರು ದೂರದಲ್ಲೇ ನಿಂತು ನೆರೆ ಹಾನಿ ಪ್ರದೇಶ ವೀಕ್ಷಿಸಿದರು. ಈ ವೇಳೆ ಸಂತ್ರಸ್ತರು ಸಿಎಂ ಬಿಎಸ್‍ವೈ ಮುಂದೆ ಕಣ್ಣೀರಿಟ್ಟರು. ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಜನರ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಂತೆ ಸಿಎಂ ಅಲ್ಲಿಂದ ಹೊರಟು ಹೋದರು.

    ಇದಕ್ಕೂ ಮುನ್ನ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಮೂಡಿಗೆರೆ ತಾಲೂಕಿನಲ್ಲಿ ಆಗಿರುವ ಅನಾಹುತ ಬೇರೆಲ್ಲೂ ಆಗಿಲ್ಲ. ಇತರೆ ಅಭಿವೃದ್ಧಿ ಕಾಮಗಾರಿ ನಿಂತರೂ ಪರವಾಗಿಲ್ಲ ಸಂತ್ರಸ್ತರಿಗೆ ಸೂರು ಕಲ್ಪಿಸುವುದು ನಮ್ಮ ಮೊದಲ ಆದ್ಯತೆ. ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರದ ನೆರವಿನ ಜೊತೆಗೆ ರಾಜ್ಯದಿಂದಲೂ ಎಷ್ಟು ಬೇಕಾದರೂ ಹಣ ಕೊಡಲು ಸಿದ್ಧ ಎಂದು ಭರವಸೆ ನೀಡಿದರು.

    ನೆರೆ ಕುರಿತು ಚರ್ಚೆ ನಡೆಸಲು ಅಧಿವೇಶನ ಕರೆಯುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಧಿವೇಶನ ಕರೆಯುವುದಕ್ಕೆ ಯಾವುದೇ ಅಭ್ಯಂತರವಿಲ್ಲ, ಅಧಿವೇಶನ ಕರೆದು ಚರ್ಚೆ ಮಾಡುತ್ತೇನೆ ಎಂದರು. ಇದೇ ವೇಳೆ ಖಾತೆಯ ಹಂಚಿಕೆಯಲ್ಲಿ ಸಚಿವ ಸಿ.ಟಿ.ರವಿ ಅವರ ಅಸಮಾಧಾನದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಸಿಎಂ, ನಾನು ಬಂದಿರುವುದು ನೆರೆ ವೀಕ್ಷಣೆಗೆ ಖಾತೆ ಹಂಚಿಕೆ ವಿಚಾರಕ್ಕಲ್ಲ ಎಂದು ಹೇಳಿದರು.