ಚಿಕ್ಕಮಗಳೂರು: ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿಯವರ (C.T Ravi) ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ದಾವಣಗೆರೆ ಹಾಗೂ ತುಮಕೂರು ಮೂಲದ ಮೂವರ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಕೀಯ ದುರುದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರಾದೇಶಿಕ ಜಾತಿಗಳ ನಡುವೆ ಹಾಗೂ ವಿವಿಧ ವರ್ಗಗಳ ನಡುವೆ ವೈರತ್ವ ಮೂಡುವ ರೀತಿಯಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ಪೋಸ್ಟ್ ಹಾಕಿದವರ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ದೂರು ದಾಖಲಿಸಿದ್ದು, ದಾವಣಗೆರೆಯ ಹರೀಶ್ ಕೆಂಗನಹಳ್ಳಿ, ಗುರುಪಾಟೀಲ್ ಹಾಗೂ ತುಮಕೂರು ಮೂಲದ ಸುವರ್ಣಗಿರಿ ಕುಮಾರ್ ಎಂಬ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಗುರುವಾರದೊಳಗೆ ಜೆಡಿಎಸ್ 2ನೇ ಪಟ್ಟಿ: ಹೆಚ್‌ಡಿ ಕುಮಾರಸ್ವಾಮಿ
ಪೋಸ್ಟ್‌ನಲ್ಲಿ, ಲಿಂಗಾಯಿತ ಸಮುದಾಯ ಬಿಜೆಪಿಯಿಂದ ದೂರ ಸರಿಯುತ್ತಿದೆ. ಈ ಸಮುದಾಯದ ನಾಯಕರಿಗೆ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ (B.S Yediyurappa) ಅವರ ತಂಡ ಕೂಡ ಹೈಕಮಾಂಡ್ ಹೇಳಿದಂತೆ ನಡೆಯಬೇಕು. ಟಿಕೆಟ್ ವಿಚಾರದಲ್ಲೂ ಯಡಿಯೂರಪ್ಪನವರ ವಿರುದ್ಧ ಸಿ.ಟಿ ರವಿ ಮಾತನಾಡಿದ್ದಾರೆಂದು ಪತ್ರಿಕೆಯಲ್ಲಿ ಪ್ರಕಟವಾದಂತೆ ಮುದ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಸಿ.ಟಿ.ರವಿ ಮಾಧ್ಯಮಕ್ಕೆ ನೀಡಿದ್ದ ಹೇಳಿಕೆಯನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಿಡಿಗೇಡಿಗಳು ಹರಿಬಿಟ್ಟ ಸುದ್ದಿಗೆ ಹಲವಾರು ಜನ ನಾನಾ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಪೋಸ್ಟ್ ಅಪ್‍ಲೋಡ್ ಮಾಡಿರುವ ಲಿಂಕ್ ಕೂಡ ದಾಖಲಿಸಿದ್ದು ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸಿ.ಟಿ.ರವಿ ಹೇಳಿದ್ದಾರೆಂಬ ಆ ಹೇಳಿಕೆ ರಾಜ್ಯ ರಾಜಕೀಯ ಹಾಗೂ ಲಿಂಗಾಯಿತ ಸಮುದಾಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಈ ಬಗ್ಗೆ ಶಾಸಕ ಸಿ.ಟಿ.ರವಿ ಕೂಡ ಪ್ರತಿಕ್ರಿಯಿಸಿ ಮೂರ್ನಾಲ್ಕು ದಶಕಗಳಿಂದ ರಾಜಕೀಯದಲ್ಲಿದ್ದೇನೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ. ಯಾವ ಹೇಳಿಕೆ ಕೊಡಬೇಕು, ಯಾವುದನ್ನ ಕೊಡಬಾರದು ಎಂಬುದು ನನಗೆ ಗೊತ್ತಿದೆ. ಅದರಲ್ಲೂ ಜಾತಿ ವಿಚಾರದಲ್ಲಿ ಅಂತಹ ಹೇಳಿಕೆ ಕೊಡುವಷ್ಟು ದಡ್ಡನಲ್ಲ. ನನ್ನನ್ನ ಗೆಲ್ಲಿಸಿರುವುದೇ ಲಿಂಗಾಯಿತ ಸಮುದಾಯದವರು ಎಂದಿದ್ದರು. ಇದನ್ನೂ ಓದಿ: ಕೋಲಾರ ಕೈ ನಾಯಕ ಶೇಷಾಪುರ ಗೋಪಾಲ್ ಜೆಡಿಎಸ್ ಖಾಸಗಿ ಸಭೆಯಲ್ಲಿ ಭಾಗಿ: ಪಕ್ಷಾಂತರ ಗೊಂದಲಕ್ಕೆ ಸ್ಪಷ್ಟನೆ























