Tag: ಕೇಂದ್ರ ಸರ್ಕಾರ

  • ನನ್ನ ಸಾವಿಗೆ ಮೋದಿ ಸರ್ಕಾರ ಹೊಣೆ ಎಂದು ಬರೆದು ರೈತ ಆತ್ಮಹತ್ಯೆ

    ನನ್ನ ಸಾವಿಗೆ ಮೋದಿ ಸರ್ಕಾರ ಹೊಣೆ ಎಂದು ಬರೆದು ರೈತ ಆತ್ಮಹತ್ಯೆ

    ಮುಂಬೈ: ಮಹಾರಾಷ್ಟ್ರದ ಯವತ್ಮಾಳ ಜಿಲ್ಲೆಯ 50 ವರ್ಷ ವಯಸ್ಸಿನ ಓರ್ವ ರೈತ ಸಾಲಭಾದೆಯಿಂದ ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಶಂಕರ್ ಭಾಯ್‍ರಾವ್ ಚೇರೆ ಆತ್ಮಹತ್ಯೆಗೆ ಶರಣಾದ ರೈತ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಎನ್‍ಡಿಎ ಸರ್ಕಾರ ನನ್ನ ಆತ್ಮಹತ್ಯೆಗೆ ಕಾರಣ ಎಂದು ಮರಣ ಪತ್ರದಲ್ಲಿ ಬರೆದಿದ್ದಾರೆ.

    ದೇಶದಲ್ಲಿ ಅನಾವೃಷ್ಟಿಯಿಂದ ಹೆಚ್ಚು ಪರಿಣಾಮ ಎದುರಿಸಿರುವ ಗ್ರಾಮಗಳಲ್ಲಿ ಯವತ್ಮಾಳ ಜಿಲ್ಲೆಯ ರಾಜುರಾವಾಡಿ ಗ್ರಾಮ ಒಂದಾಗಿದೆ. ತನ್ನ ಕುಟುಂಬಕ್ಕೆ ಪರಿಹಾರವನ್ನು ಮರಣ ಪತ್ರದಲ್ಲಿ ಮೃತ ಶಂಕರ್ ಭೌರಾವೊ ಚೇರೆ ಅವರು ಕೇಳಿದ್ದಾರೆ.

    ಘಟನೆ ನಡೆದು 12 ಘಂಟೆಗಳು ಕಳೆದರೂ ಶವವನ್ನು ವಸಂತರಾವ್ ನಾಯ್ಕ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಿಂದ ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗಲು ಕುಟುಂಬದವರು ನಿರಾಕರಿಸಿದ್ದಾರೆ. ಇಲ್ಲಿನ ಸಮಸ್ಯೆಗಳನ್ನು ಆಲಿಸಲು ಪ್ರಧಾನಿ ಮೋದಿಯವರು ಸ್ಥಳಕ್ಕೆ ಆಗಮಿಸಬೇಕು ಇಲ್ಲ ರಾಜ್ಯ ಸರ್ಕಾರ ಪರಿಹಾರವನ್ನು ನೀಡುವ ತನಕ ಶವವನ್ನು ಆಸ್ಪತ್ರೆಯಿಂದ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

    ಚೇರೆ ಕುಟುಂಬಕ್ಕೆ ತಕ್ಷಣವೇ 1 ಲಕ್ಷ ರೂ. ಗಳನ್ನು ನೀಡುತ್ತೇವೆ. ಚೇರೆ ತನ್ನ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳು (ಒಬ್ಬರಿಗೆ ಮದುವೆ ಆಗಿದೆ) ಹಾಗೂ ಒಬ್ಬ ಮಗನನ್ನು ತೊರೆದಿದ್ದಾರೆ. ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಈಗಾಗಲೇ ಪದವಿಯನ್ನು ಪಡೆದಿದ್ದಲ್ಲಿ ನೌಕರಿಯನ್ನು ಕೊಡಿಸುತ್ತೇವೆ ಎಂದು ವಸಂತರಾವ್ ನಾಯ್ಕ್ ಶೆಟ್ಟಿ ಸ್ವಾವಲಂಬನ್ ಮಿಷನ್ ಅಧ್ಯಕ್ಷ ಕಿಶೋರ್ ತಿವಾರಿ ಭರವಸೆ ನೀಡಿದ್ದಾರೆ.

    ಬೇಸರಗೊಂಡಿದ್ದ ಚೇರೆ ಮಂಗಳವಾರ ಬೆಳಗ್ಗೆ ತೋಟಕ್ಕೆ ಹೋಗಿದ್ದರು. ಹಗ್ಗ ಬಿಗಿದು ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಷವನ್ನು ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಘಟನೆ ತಿಳಿದ ಕೆಲವರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಸ್ಥಿತಿ ಗಂಭೀರವಾಗಿದೆ ಯವತ್ಮಾಳ ಟೌನ್ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಹೇಳದ್ದಾರೆ. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಪ್ರಾಣ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ತನ್ನ 9 ಎಕರೆ ಜಮೀನಿನಲ್ಲಿ ಹತ್ತಿಯನ್ನು ಬೆಳೆದಿದ್ದೆ. ಸ್ಥಳೀಯ ಸರ್ಕಾರಿ ಸೊಸೈಟಿಯಿಂದ 90 ಸಾವಿರ ಹಾಗೂ 3 ಲಕ್ಷ ರೂ. ಗಳನ್ನು ಬೇರೊಬ್ಬರಿಂದ ಸಾಲವನ್ನು ಪಡೆದಿದ್ದೆ. ವಿದರ್ಭ ಭಾಗದ ಬಹಳಷ್ಟು ಕಡೆ ಬೋಲ್ವರ್ಮ್ ಸೋಂಕಿನಿಂದ ಹತ್ತಿ ಬೆಳೆ ಹಾಳಾಯಿತು. ಹಾಗಾಗಿ ಸಾಲ ಮರುಪಾವತಿ ಕಷ್ಟವಾಯಿತು. ಸಹಾಯ ಮಾಡುವಂತೆ ಶಾಸಕರು, ಸಂಸದರು, ಸರ್ಕಾರಿ ಅಧಿಕಾರಿಗಳನ್ನು ಕೇಳಿಕೊಂಡಿದ್ದರೂ ಎಲ್ಲರೂ ನಿರ್ಲಕ್ಷಿಸಿದ್ದರು ಎಂದು ಮರಣ ಪತ್ರದಲ್ಲಿ ಬರೆದುಕೊಂಡಿದ್ದಾರೆ.

    ನನ್ನ ಮೇಲೆ ಸಾಕಷ್ಟು ಸಾಲವಿದೆ ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳತ್ತಿದ್ದೇನೆ. ಇದಕ್ಕೆ ನೇರ ಹೊಣೆ ನರೇಂದ್ರ ಮೋದಿ ಸರ್ಕಾರ ಎಂದು ಮರಣ ಪತ್ರದಲ್ಲಿ ಬರೆದಿದ್ದಾರೆ.

    ಸರ್ಕಾರಿ ಮತ್ತು ಖಾಸಗಿ ಬ್ಯಾಂಕಗಳಲ್ಲಿನ ಸಾಲವನ್ನು 2017 ಜೂನ್ ನಲ್ಲಿ ಸರ್ಕಾರ ಮನ್ನಾ ಮಾಡಿದೆ ಆದರೆ ಫಲಾನುಭವಿಗಳ ಸಂಖ್ಯೆ ಹೆಚ್ಚಿರುವುದರಿಂದ ಹಣ ತಲುಪಲು ಸಮಯ ತೆಗೆದುಕೊಳ್ಳುತ್ತಿದೆ ಎಂದು ವರದಿಯಾಗಿದೆ.

    2017ರ ಜೂನ್ ನಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 34,000 ಕೋಟಿ ರೂಪಾಯಿಗಳಷ್ಟು ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ರೈತರಿಗೆ 1.5 ಲಕ್ಷದವರೆಗೆ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ಇದರಿಂದ ರಾಜ್ಯದ 89 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದರು.

  • ಕಾವೇರಿ ನೀರು ಹಂಚಿಕೆ – ಮೇ 3ರ ಒಳಗಡೆ ಸ್ಕೀಂ ರಚಿಸಿ: ಕೇಂದ್ರಕ್ಕೆ ಸುಪ್ರೀಂ ಆದೇಶ

    ಕಾವೇರಿ ನೀರು ಹಂಚಿಕೆ – ಮೇ 3ರ ಒಳಗಡೆ ಸ್ಕೀಂ ರಚಿಸಿ: ಕೇಂದ್ರಕ್ಕೆ ಸುಪ್ರೀಂ ಆದೇಶ

    ನವದೆಹಲಿ: ಮತ್ತೆ ಕಾವೇರಿ ನದಿ ನೀರಿನ ಹಂಚಿಕೆ ವಿಚಾರ ಕೇಂದ್ರದ ಅಂಗಳಕ್ಕೆ ತಲುಪಿದೆ. ನಾವು ತೀರ್ಪಿನಲ್ಲಿ ಉಲ್ಲೇಖಿಸಿರುವ ಸ್ಕೀಂ ಅನ್ನು ಕೂಡಲೇ ರಚನೆ ಮಾಡಿ ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೂಚಿಸಿದೆ.

    ನಿರ್ವಹಣಾ ಮಂಡಳಿ ರಚನೆಯ ಕುರಿತು ತಮಿಳುನಾಡು ಸಲ್ಲಿಸಿದ್ದ ನ್ಯಾಯಾಂಗ ನಿಂದನಾ ಅರ್ಜಿ ಜತೆಗೆ ಕೇಂದ್ರದ ಸ್ಪಷ್ಟನಾ ಅರ್ಜಿಯನ್ನು ವಿಚಾರಣೆ ಇಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಯಿತು.

    ಈ ವೇಳೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ನ್ಯಾಯಂಗ ನಿಂದನೆ ಅರ್ಜಿಯನ್ನು ತಿರಸ್ಕರಿಸಿತು. ಅಲ್ಲದೇ ಸ್ಕೀಂ ರಚನೆ ವಿಚಾರವಾಗಿ ಕೇಂದ್ರ ಈಗಾಗಲೇ ಕಾರ್ಯ ಪ್ರವೃತ್ತವಾಗಿದ್ದು ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿತು.

    ಕಾವೇರಿ ನೀರಿನ ಹಂಚಿಕೆ ಕುರಿತು ವಿಚಾರದಲ್ಲಿ ಕೇಂದ್ರ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿಲ್ಲ. ಈಗಾಗಲೇ ಈ ಕುರಿತು ಕ್ರಮಕೈಗೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟಿತು. ಅಲ್ಲದೇ ಮೇ 3 ರ ಒಳಗೆ ಸ್ಕೀಂ ರಚನೆ ಕುರಿತು ಕೇಂದ್ರ ಸರ್ಕಾರ ಕರಡು ಪ್ರತಿಯನ್ನು ಸುಪ್ರಿಂಕೊರ್ಟ್ ಗೆ ಸಲ್ಲಿಸಬೇಕು. ಸುಪ್ರೀಂ ಕೋರ್ಟ್ ಕರಡು ಪ್ರತಿ ಪರಿಶೀಲನೆ ನಡೆಸಿ ಅಂತಿಮಗೊಳಿಸಲಾಗುವುದು ಎಂದು ಹೇಳಿದೆ.

    ಇದೇ ವೇಳೆ ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಧಿಕರಣ ತೀರ್ಪು ವಿಲೀನಗೊಳಿಸಿ ಆದೇಶ ನೀಡಿದ್ದು, ಪದೇ ಪದೇ ನ್ಯಾಯಧಿಕರಣ ಆದೇಶ ಉಲ್ಲೇಖಿಸುವಂತಿಲ್ಲ ಎಂದು ಸೂಚನೆ ನೀಡಿದೆ. ನೀರು ಹಂಚಿಕೆ ಮಾಡಿ ನಾವು ಆದೇಶ ನೀಡಿದ್ದೇವೆ. ಹಂಚಿಕೆ ಕಾರ್ಯರೂಪಕ್ಕೆ ಬರಲು ಕೇಂದ್ರ ಸರ್ಕಾರ ಸ್ಕೀಂ ರಚನೆ ಮಾಡಲಿದೆ. ಕೇಂದ್ರ ರಚಿಸುವ ಸ್ಕೀಂಗೆ ಎಲ್ಲ ರಾಜ್ಯಗಳು ಬದ್ಧವಾಗಿರಬೇಕು ಎಂದು ನ್ಯಾ. ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಸೂಚಿಸಿತು.

    ಅರ್ಜಿ ವಿಚಾರಣೆ ವೇಳೆ ಕಾವೇರಿ ನಿರ್ವಹಣಾ ಮಂಡಳಿ ವಿಚಾರವನ್ನು ಸುಪ್ರೀಂ ಕೋರ್ಟ್ ಪ್ರಸ್ತಾಪಿಸಲಿಲ್ಲ. ತೀರ್ಪು ಪಾಲನೆಗೆ ಯೋಜನೆ ಅವಶ್ಯಕತೆ ಇದ್ದು ಆ ನಿಟ್ಟಿನಲ್ಲಿ ಸ್ಕೀಂ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಈ ಮೂಲಕ ತಮಿಳುನಾಡಿನ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ ಹೋರಾಟಕ್ಕೆ ಸುಪ್ರೀಂ ಕೋರ್ಟ್  ಪರೋಕ್ಷ ಚಾಟಿ ಬೀಸಿತು. ಎಲ್ಲ ರಾಜ್ಯಗಳನ್ನು ಸಮಾನವಾಗಿ ಪರಿಗಣಿಸಿಲಾಗಿದೆ. ರಾಜ್ಯಗಳ ಜನರು ಶಾಂತಿ ರೀತಿಯಿಂದ ವರ್ತಿಸುವಂತೆ ಮನವಿ ಮಾಡಲು ಸುಪ್ರೀಂ ಕೋರ್ಟ್ ರಾಜ್ಯಗಳಿಗೂ ಸೂಚಿಸಿತು.

  • ಶೀಘ್ರವೇ ಪ್ರತಿಪಕ್ಷಗಳ 100 ಸಂಸದರು ರಾಜೀನಾಮೆ!

    ಶೀಘ್ರವೇ ಪ್ರತಿಪಕ್ಷಗಳ 100 ಸಂಸದರು ರಾಜೀನಾಮೆ!

    ನವದೆಹಲಿ: ಕೇಂದ್ರದ ವೈಫಲ್ಯವನ್ನು ಖಂಡಿಸಿ ದೇಶದಲ್ಲಿ ಶೀಘ್ರವೇ ಲೋಕಸಭೆ ಚುನಾವಣೆಗೆ ಆಗ್ರಹಿಸಿ 100 ಮಂದಿ ಸಂಸದರು ರಾಜೀನಾಮೆ ನೀಡುವ ಸಾಧ್ಯತೆಯಿದೆ.

    ಹೌದು. 2019ರ ಲೋಕಸಭಾ ಚುನಾವಣೆ ಸಂಬಂಧ ಮೋದಿ ಅವರನ್ನು ಮಣಿಸಲು ಪ್ರತಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸಿರುವುದು ಹಳೇ ಸುದ್ದಿ. ಆದರೆ ಈಗ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು 100 ಮಂದಿ ಸಂಸದರು ರಾಜೀನಾಮೆ ನೀಡಲಿದ್ದಾರೆ ಎಂದು ರಾಷ್ಟ್ರೀಯ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದೆ.

    ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಸುಪ್ರೀಂ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ ಸೇರಿದಂತೆ ಇನ್ನಿತರ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ಸದಸ್ಯರು ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದೆ.

    ಈ ಪ್ರತಿಭಟನೆಯ ಅಂಗವಾಗಿ ಇಂದು ವೈಎಸ್‍ಆರ್ ಕಾಂಗ್ರೆಸ್ 5 ಮಂದಿ ಸಂಸದರು ರಾಜೀನಾಮೆ ನೀಡಿದ್ದು ಮುಂದಿನ ದಿನದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ನೇತೃತ್ವದಲ್ಲಿ ವಿಪಕ್ಷಗಳು ಈ ತಂತ್ರವನ್ನು ಹೆಣೆದಿವೆ ಎನ್ನಲಾಗಿದೆ.

    ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗುತ್ತಿರುವ ವಿಚಾರವನ್ನು ಕಾಂಗ್ರೆಸ್ ಮೂಲಗಳು ಖಚಿತ ಪಡಿಸಿದೆ ಎಂದು ವಾಹಿನಿ ಹೇಳಿದೆ. ಎನ್‍ಡಿಎ ಒಕ್ಕೂಟದಿಂದ ಹೊರಬಂದಿರುವ ಚಂದ್ರಬಾಬು ನಾಯ್ಡು ಈ ವಾರ ದೆಹಲಿಯಲ್ಲಿ ಶರದ್ ಪವಾರ್ ಮತ್ತು ಇತರೇ ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದು ಈ ವೇಳೆ ಸಾಮೂಹಿಕ ರಾಜೀನಾಮೆ ನೀಡುವ ವಿಚಾರವನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ.

    ಪ್ರತಿಪಕ್ಷಗಳ ಪ್ಲಾನ್ ಏನು?
    2019ಕ್ಕೂ ಮೊದಲೇ ಚುನಾವಣೆ ನಡೆಸಲು ಪ್ರತಿಪಕ್ಷಗಳು ಮುಂದಾಗಿದ್ದು, ಇದಕ್ಕಾಗಿ ಈಗಿನಿಂದಲೇ ತಯಾರಿ ನಡೆಸಿವೆ. ಈಗ ಈ ತಂತ್ರವನ್ನು ಅನುಸರಿಸಿದರೆ ಜನರನ್ನು ತಲುಪಲು ಸುಲಭವಾಗುತ್ತದೆ. ಅಷ್ಟೇ ಅಲ್ಲದೇ ಮೋದಿ ವಿರೋಧಿ ಅಲೆಯನ್ನು ದೇಶದೆಲ್ಲೆಡೆ ಪಸರಿಸಲು ಈ ನಿರ್ಧಾರ ಸೂಕ್ತ ಎನ್ನುವ ತೀರ್ಮಾನಕ್ಕೆ ಬಂದಿದೆ.

    ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಈಗ ಒಂದಾಗಿದ್ದರೂ ಚುನಾವಣೆಯ ಸಂದರ್ಭದಲ್ಲಿ ಆರ್ ಜೆಡಿ, ಕಾಂಗ್ರೆಸ್, ಜೆಡಿಯು ಮಹಾಘಟಬಂಧನ್ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಈ ತಂತ್ರದ ಮುಂದುವರಿದ ಭಾಗವಾಗಿ ದೇಶದೆಲ್ಲೆಡೆ ಮೈತ್ರಿ ಮಾಡಿಕೊಂಡರೆ ಹಂಚಿಕೆಯಾಗಲಿರುವ ಮತಗಳು ಓರ್ವ ಅಭ್ಯರ್ಥಿಗೆ ಬೀಳಬಹುದು. ಮೈತ್ರಿಯ ಪೂರ್ವಭಾವಿಯಾಗಿ ಈ ರಾಜೀನಾಮೆ ನೀಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಲು ವಿಪಕ್ಷಗಳು ಸಿದ್ಧತೆ ನಡೆಸಿವೆ ಎಂದು ಹೇಳಲಾಗುತ್ತಿದೆ.

    ಈ ಬಾರಿಯ ಕಲಾಪ ಸರಿಯಾಗಿ ನಡೆಯದೇ ಇದ್ದ ಕಾರಣ ಎನ್‍ಡಿಎ ಸಂಸದರು ಸಂಬಳವನ್ನು ಪಡೆಯದೇ ಇರುವ ತೀರ್ಮಾನವನ್ನು ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೇ ವಿಪಕ್ಷಗಳಿಂದಾಗಿ ಕಲಾಪ ಹಾಳಾಗಿದೆ ಎನ್ನುವುದನ್ನು ತೋರಿಸಲು ಜನರ ತೆರಿಗೆ ಹಣವನ್ನು ಪಡೆಯುವುದು ಸಮಂಜಸ ಅಲ್ಲ ಎನ್ನುವ ನಿರ್ಧಾರಕ್ಕೆ ಎನ್‍ಡಿಎ ಬಂದಿದೆ. ನಮ್ಮ ಮೇಲೆ ಬಂದಿರುವ ಈ ಆರೋಪಕ್ಕೆ ತಿರುಗೇಟು ನೀಡಲು ಸದನ ಸರಿಯಾಗಿ ನಡೆಯದೇ ಇರಲು ನಾವು ಕಾರಣವಲ್ಲ. ಸರ್ಕಾರದ ನೀತಿಯಿಂದಲೇ ಕಲಾಪ ವ್ಯರ್ಥವಾಗಿದೆ ಎನ್ನುವುದನ್ನು ಜನರಿಗೆ ವಿವರಿಸಲು ಸಾಮೂಹಿಕ ರಾಜೀನಾಮೆಯ ನಿರ್ಧಾರಕ್ಕೆ ವಿಪಕ್ಷಗಳು ಬಂದಿವೆ ಎನ್ನಲಾಗಿದೆ.

    ಆಂಧ್ರದ ಪ್ರತ್ಯೇಕ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲು ಟಿಡಿಪಿ, ವೈಎಸ್ ಆರ್ ಕಾಂಗ್ರೆಸ್, ಕಾಂಗ್ರೆಸ್ ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ. ಹೀಗಾಗಿ ಕೊನೆಯ ಅಸ್ತ್ರ ಎಂಬಂತೆ ಕೇಂದ್ರ ವಿರುದ್ಧ ಹೋರಾಟ ನಡೆಸಲು ವಿಪಕ್ಷಗಳು ಸಾಮೂಹಿಕ ರಾಜೀನಾಮೆಯ ತಂತ್ರಕ್ಕೆ ಬಂದಿದೆ ಎಂದು ಹೇಳಲಾಗುತ್ತದೆ.

    ಸಾಮೂಹಿಕ ರಾಜೀನಾಮೆ ಯಶಸ್ವಿಯಾಗುತ್ತಾ?
    ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರವನ್ನು ಚಂದ್ರಬಾಬು ನಾಯ್ಡು, ರಾಹುಲ್ ಗಾಂಧಿ, ಶರದ್ ಪವಾರ್ ತೆಗೆದುಕೊಂಡಿದ್ದರೂ ಉಳಿದ ನಾಯಕರು ಒಪ್ಪಿಗೆ ಸೂಚಿಸುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬಹಿರಂಗವಾಗಿಯೇ ರಾಹುಲ್ ಗಾಂಧಿ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಹೊರತಾಗಿರುವ ಮೂರನೇ ಮೈತ್ರಿಕೂಟ ರಚನೆಯಾಗಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಒಡಿಶಾದಲ್ಲಿ ಬಿಜೆಡಿ ಬೆಂಬಲಿಸುತ್ತಾ ಎನ್ನುವ ಪ್ರಶ್ನೆಯೂ ಎದ್ದಿದೆ.

    ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತಲೂ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರವಹಿಸುತ್ತದೆ. ಹೀಗಾಗಿ ಶಿವಸೇನೆ, ಡಿಎಂಕೆ, ಎಐಡಿಎಂಕೆ, ಬಿಜೆಡಿ, ಟಿಎಂಸಿ ನಾಯಕರ ನಿರ್ಧಾರದ ಮೇಲೆ ಸಾಮೂಹಿಕ ರಾಜೀನಾಮೆ ತಂತ್ರ ನಿಂತಿದೆ ಎನ್ನುವ ವಿಶ್ಲೇಷಣೆ ಈಗ ಕೇಳಿಬಂದಿದೆ.

  • ಒಬ್ಬ ಅಭ್ಯರ್ಥಿ, ಒಂದೇ ಕ್ಷೇತ್ರದಿಂದ ಸ್ಪರ್ಧಿಸಲಿ: ಸುಪ್ರೀಂಗೆ ಚುನಾವಣಾ ಆಯೋಗದಿಂದ ಅಫಿಡವಿಟ್

    ಒಬ್ಬ ಅಭ್ಯರ್ಥಿ, ಒಂದೇ ಕ್ಷೇತ್ರದಿಂದ ಸ್ಪರ್ಧಿಸಲಿ: ಸುಪ್ರೀಂಗೆ ಚುನಾವಣಾ ಆಯೋಗದಿಂದ ಅಫಿಡವಿಟ್

    ನವದೆಹಲಿ: ಒಬ್ಬ ಅಭ್ಯರ್ಥಿ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುವ ಪ್ರಸ್ತಾಪಕ್ಕೆ ಕೇಂದ್ರ ಚುನಾವಣಾ ಆಯೋಗ ಬೆಂಬಲ ನೀಡಿ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದೆ.

    ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಆಭ್ಯರ್ಥಿಗಳು ಒಂದೇ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾನೂನು ತಿದ್ದುಪಡಿ ಮಾಡಬೇಕೆಂದು ಬಿಜೆಪಿ ಮುಖಂಡ ಅಶ್ವನಿ ಕುಮಾರ್ ಉಪಾಧ್ಯಾಯ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ಸುಪ್ರೀಂ 2017ರ ಡಿಸೆಂಬರ್ ನಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂದು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಸುಪ್ರೀಂಗೆ ಅಫಿಡವಿಟ್ ಸಲ್ಲಿಸಿದ್ದು, ನಿಯಮ ರೂಪಿಸಲು 1951 ರ ಜನಪ್ರತಿನಿಧಿಗಳ ಕಾಯ್ದೆಗೆ ತಿದ್ದುಪಡಿ ತರಬೇಕು. ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವ ಪದ್ಧತಿಯಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಈ ಕುರಿತು 2004 ಮತ್ತು 2016 ರಲ್ಲಿ ಎರಡು ಬಾರಿ ಕೇಂದ್ರ ಸರ್ಕಾರಕ್ಕೆ ತನ್ನ ಅಭಿಪ್ರಾಯವನ್ನು ತಿಳಿಸಲಾಗಿದೆ ಎಂದು ಉಲ್ಲೇಖಿಸಿದೆ.

    ಒಂದು ಕ್ಷೇತ್ರವನ್ನು ಉಳಿಸಿಕೊಂಡು ಇನ್ನೊಂದು ಕ್ಷೇತ್ರವನ್ನು ಬಿಡುವುದು ಮತದಾರರಿಗೆ ಮಾಡುವ ಅನ್ಯಾಯವಾಗಿದೆ. ಅಭ್ಯರ್ಥಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಬಾರದು ಎನ್ನುವುದು ಆಯೋಗದ ನಿಲುವಾಗಿದೆ ಎಂದು ಅಫಿಡವಿಟ್‍ನಲ್ಲಿ ಆಯೋಗ ತನ್ನ ಅಭಿಪ್ರಾಯವನ್ನು ತಿಳಿಸಿದೆ.

    ಚುನಾವಣಾ ಸುಧಾರಣೆಗೆ ಸಂಬಂಧಪಟ್ಟಂತೆ 255 ನೇ ವರದಿಯಲ್ಲೂ ಕೂಡ ಇದೇ ಅಭಿಪ್ರಾಯವನ್ನು ಕಾನೂನು ಆಯೋಗ ವ್ಯಕ್ತಪಡಿಸಿತ್ತು. ಎರಡು ಕ್ಷೇತ್ರಗಳಿಂದ ಒಬ್ಬ ಅಭ್ಯರ್ಥಿ ಸ್ಪರ್ಧೆ ಮಾಡುವುದು ಸರಿಯಲ್ಲ. ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಗಳೇ ಉಪಚುನಾವಣೆ ವೆಚ್ಚವನ್ನು ಭರಿಸುವಂತೆ ತನ್ನ ವರದಿಯಲ್ಲಿ ಆಯೋಗ ಸಲಹೆ ನೀಡಿತ್ತು.

    ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವ ಪದ್ಧತಿಯಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಮುಖ್ಯ ಚುನಾವಣೆ ನಡೆದ 6 ತಿಂಗಳ ಒಳಗಡೆ ಉಪಚುನಾವಣೆ ನಡೆಸಬೇಕಾಗಿದೆ. 1951ರ ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 33(7) ರಲ್ಲಿ ಅಭ್ಯರ್ಥಿಗಳು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಪದ್ಧತಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಈ ಕಾಯ್ದೆಯನ್ನು ತಿದ್ದುಪಡಿ ಮಾಡುವಂತೆ ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಉಪಾಧ್ಯಾಯ ಪಿಐಎಲ್ ನಲ್ಲಿ ಮನವಿ ಮಾಡಿದ್ದರು.

    ದೇಶಾದ್ಯಂತ ರಾಜಕೀಯ ಪಕ್ಷದ ಹಿರಿಯ ನಾಯಕರುಗಳು ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತಿರುತ್ತಾರೆ. ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದಲ್ಲಿ ಒಂದು ಕ್ಷೇತ್ರವನ್ನು ಉಳಿಸಿಕೊಂಡು ಇನ್ನೊಂದನ್ನು ಬಿಡಬೇಕಾಗುತ್ತದೆ. ಮುಖ್ಯ ಚುನಾವಣೆ ನಂತರ ಕಡಿಮೆ ಕಾಲಾವಧಿಯಲ್ಲಿ ಉಪಚುನಾವಣೆಗಳು ನಡೆಯುತ್ತಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

  • ಡೀಸೆಲ್, ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳ – ನಾಲ್ಕು ವರ್ಷಗಳಲ್ಲೇ ಹೆಚ್ಚು

    ಡೀಸೆಲ್, ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳ – ನಾಲ್ಕು ವರ್ಷಗಳಲ್ಲೇ ಹೆಚ್ಚು

    ನವದೆಹಲಿ: ನಿತ್ಯ ತೈಲ ಬೆಲೆ ಪರಿಷ್ಕರಣೆ ನೀತಿ ಜಾರಿಯಾದ ಬಳಿಕ, ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ನಾಲ್ಕು ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 73.83 ರೂ. ಮತ್ತು ಡೀಸೆಲ್ ಬೆಲೆ 64.69 ರೂ. ತಲುಪಿದೆ

    ಗರಿಷ್ಠ ಮಟ್ಟದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆಗಿರುವುದರಿಂದ ಸರ್ಕಾರ ವಿಧಿಸುವ ಅಬಕಾರಿ ಸುಂಕವನ್ನು ಕಡಿತಗೊಳಿಸುವಂತೆ ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿ ಬಂದಿದೆ.

    ಕಳೆದ ಜುಲೈನಿಂದ ಪ್ರತಿ ನಿತ್ಯ ಪೆಟ್ರೋಲ್ ಬೆಲೆ ಪರಿಷ್ಕರಣೆ ಮಾಡುವ ನೀತಿಯನ್ನು ಜಾರಿ ಮಾಡಲಾಗಿದ್ದು, ಭಾರತದ ತೈಲ ಕಂಪನಿಗಳ ಒಕ್ಕೂಟ ಸೋಮವಾರ ಪೆಟ್ರೋಲ್ ಮೇಲೆ 10 ಪೈಸೆ, ಡೀಸೆಲ್ ಮೇಲೆ 11 ಪೈಸೆ ಹೆಚ್ಚಳ ಮಾಡಿದೆ. ಇದರೊಂದಿಗೆ 2017 ಸೆಪ್ಟೆಂಬರ್ 4 ರಲ್ಲಿ 76.06 ರೂ. ಇದ್ದ ಪೆಟ್ರೋಲ್ ಬೆಲೆ ಗರಿಷ್ಠ ಪ್ರಮಾಣ ತಲುಪಿದೆ. ಡೀಸೆಲ್ ಬೆಲೆಯೂ ಲೀಟರ್ ಗೆ 64.69 ರೂ. ತಲುಪಿದ್ದು ಸಾರ್ವಕಾಲಿಕ ದಾಖಲೆ ಬರೆದಿದೆ. ಅದೇ ರೀತಿ ಡೀಸೆಲ್ ಬೆಲೆ ಲೀಟರ್ ಗೆ 64.22 ರೂ. ಗೆ ತಲುಪಿದ್ದು ಇದುವರೆಗಿನ ದಾಖಲೆಯಾಗಿತ್ತು.

    ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ದೇಶದಲ್ಲಿ ಇಂಧನ ಬೆಲೆ ಗರಿಷ್ಠ ಮಟ್ಟ ತಲುಪಲು ಕಾರಣ ಎಂದು ಕೆಲ ವರದಿಗಳು ಸ್ಪಷ್ಟ ಪಡಿಸಿವೆ. ಕಳೆದ ಜನವರಿಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಶೇ.4 ರಷ್ಟು ಹೆಚ್ಚಳವಾಗಿದೆ. ವಾಣಿಜ್ಯ ನಗರಿ ಮುಂಬೈ ನಲ್ಲಿ ದೇಶದಲ್ಲೇ ಹೆಚ್ಚು ತೈಲ ಬೆಲೆ ಹೊಂದಿದ್ದು, ಪತ್ರಿ ಲೀಟರ್ ಪೆಟ್ರೋಲ್ ಬೆಲೆ ಗರಿಷ್ಟ 81.69 ರೂ. ತಲುಪಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 67.43 ರೂ ತಲುಪಿದೆ.

    2017 ಅಕ್ಟೋಬರ್ ನಲ್ಲಿ ಕೇಂದ್ರ ಸರ್ಕಾರ ತೈಲಗಳ ಮೇಲೆ 2 ರೂ. ಅಬಕಾರಿ ಸುಂಕ ಕಡಿತಗೊಳಿತ್ತು. ಈ ವೇಳೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70.88 ರೂ., ಡೀಸೆಲ್ ಲೀಟರ್ 59.1 ರೂ. ಹೊಂದಿತ್ತು. ಅಬಕಾರಿ ಸುಂಕದ ಕಡಿತದಿಂದ ಸರ್ಕಾರ ವಾರ್ಷಿಕ ಆದಾಯದಲ್ಲಿ 26 ಸಾವಿರ ಕೋಟಿ ರೂ. ಹೊರೆಯಾಗಿತ್ತು. ಪ್ರಸ್ತುತ ವರ್ಷದಲ್ಲಿ ಇದುವರೆಗೆ 17 ಸಾವಿರ ಕೋಟಿ ರೂ. ಹೊರೆಯಾಗಿದೆ.

    ಬೆಂಗಳೂರಿನಲ್ಲಿ ಎಷ್ಟಿದೆ?
    ಬೆಂಗಳೂರಿನಲ್ಲಿ ಏಪ್ರಿಲ್ 2 ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 75 ರೂ. ಇದ್ದರೆ, ಡೀಸೆಲ್ ಬೆಲೆ 65.78 ರೂ. ಇದೆ.

    ಯಾವ ನಗರದಲ್ಲಿ ಎಷ್ಟಿದೆ?

    ಪೆಟ್ರೋಲ್:
    ಕೋಲ್ಕತ್ತಾ -76.54 ರೂ.
    ಮುಂಬೈ -81.69 ರೂ.
    ಚೆನ್ನೈ -76.59 ರೂ.

    ಡೀಸೆಲ್:
    ಕೋಲ್ಕತ್ತಾ – 67.38 ರೂ.
    ಮುಂಬೈ -68.89 ರೂ.
    ಚೆನ್ನೈ – 68.24 ರೂ.

  • ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಬಿಎಸ್‍ವೈ, ಅನಂತ್ ಕುಮಾರ್, ಡಿವಿಎಸ್ ಸಹಾಯ ಮಾಡ್ಬೇಕು- ಎಂ.ಬಿ ಪಾಟೀಲ್

    ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಬಿಎಸ್‍ವೈ, ಅನಂತ್ ಕುಮಾರ್, ಡಿವಿಎಸ್ ಸಹಾಯ ಮಾಡ್ಬೇಕು- ಎಂ.ಬಿ ಪಾಟೀಲ್

    ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಶಿಫಾರಸ್ಸು ಪತ್ರವನ್ನು ರಾಜ್ಯ ಸರ್ಕಾರ, ಕೇಂದ್ರಕ್ಕೆ ಕಳುಹಿಸಿದೆ. ಆದ್ರೆ ಆ ವಿಚಾರದಲ್ಲಿ ಹಾಲಲ್ಲಿ ಉಪ್ಪು ಹಾಕುವ ಕೆಲಸವನ್ನು ಮಾಡಬೇಡಿ ಎಂದು ಪರೋಕ್ಷವಾಗಿ ಯಡಿಯೂರಪ್ಪ, ಅನಂತಕುಮಾರ್ ಹಾಗೂ ಸದಾನಂದಗೌಡ ಅವ್ರಿಗೆ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ಪುರಾವೆಗಳನ್ನು, ಸಾಕ್ಷ್ಯಗಳನ್ನು ನೀಡಿ ಕೇಂದ್ರಕ್ಕೆ ಕಳುಹಿಸಿದ್ದೇವೆ. ಕೇಂದ್ರ ಸರ್ಕಾರ ಕೂಡ ನಮ್ಮ ಮನವಿಗೆ ಸ್ಪಂದಿಸುತ್ತದೆಯೆಂಬ ಅಚಲ ವಿಶ್ವಾಸವಿದೆ. ಆದ್ರೆ ಅದ್ರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಅನಂತಕುಮಾರ್, ಸದಾನಂದಗೌಡ ಅವರು ನಮಗೆ ಸಹಾಯ ಮಾಡಬೇಕೆಂದು ಅವರು ಮನವಿ ಮಾಡಿದ್ರು. ಇದನ್ನೂ ಓದಿ: ಸಿಎಂ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ: ರಂಭಾಪುರಿ ಶ್ರೀ

    ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೂ ಚುನಾವಣೆಗೂ ಸಂಬಂಧವಿಲ್ಲ. ಚುನಾವಣೆಗಾಗಿ ನಾವು ಮಾಡೋದಿದ್ರೆ ನಾವು ಯಾವಾಗಲೋ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸುತ್ತಿದ್ದೆವು. ರಾಜ್ಯದಲ್ಲಿ ಅದಕ್ಕೆ ಮಾನ್ಯತೆ ಕೊಟ್ಟು ಬಳಿಕ ನಾವು ಕೇಂದ್ರಕ್ಕೆ ಶಿಫಾರಸ್ಸು ಕಳಿಸಿದ್ದೇವೆ. ಆರಂಭದಲ್ಲಿ ಬಹಳ ಜನ ಎಂಬಿ ಪಾಟೀಲರು ಚುನಾವಣೆಗಾಗಿ ಪ್ರತ್ಯೇಕತೆ ಕೂಗು ಎತ್ತಿದ್ದಾರೆಂದು ಮಾತನಾಡಿದ್ರು. ಆದ್ರೆ ಅದಕ್ಕೆ ನಾವು ಬದ್ಧತೆಯಿಂದ ರಾಜ್ಯದಲ್ಲಿ ಮಾನ್ಯತೆ ನೀಡಿ ಕೇಂದ್ರಕ್ಕೆ ಶಿಫಾರಸ್ಸು ಕಳಿಸಿದ್ದೆವೆ. ಇದ್ರಲ್ಲಿ ರಾಜಕೀಯ ಮಾಡುವುದು ಬೇಡ. ನಾವು ಯಡಿಯೂರಪ್ಪ, ಅನಂತಕುಮಾರ್, ಸದಾನಂದಗೌಡ ಅವರಿಗೆ ತಲೆ ಬಾಗಿಸುತ್ತೆವೆ.ವಿನಂಮ್ರತೆಯಿಂದ ಮುನ್ನಡೆಯಬೇಕಿದೆ ಅಂದ್ರು. ಇದನ್ನೂ ಓದಿ: ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ – ಕೇಂದ್ರಕ್ಕೆ ಶೀಘ್ರವೇ ಸಿದ್ದು ಸರ್ಕಾರದಿಂದ ಶಿಫಾರಸ್ಸು

    ರಂಭಾಪುರಿ ಶ್ರೀಗಳೂ ನಮ್ಮ ಗುರುಗಳು. ಅವರು ನಮ್ಮ ಬಸವ ತತ್ವಕ್ಕೆ ಒಪ್ಪಿಕೊಳ್ಳುವುದಿಲ್ಲ. ಅವ್ರಿಗೆ ಅವರದ್ದೇ ಆದ ತಾತ್ವಿಕ ಅಭಿಪ್ರಾಯ ಇದೆ. ಹೀಗಾಗಿ ಶೀಘ್ರದಲ್ಲೇ ರಂಭಾಪುರಿ ಶ್ರೀಗಳನ್ನು ಭೇಟಿ ಮಾಡಿ ಅವರ ಮನವೊಲಿಸುತ್ತೆವೆ ಅಂತ ತಿಳಿಸಿದ್ರು.  ಇದನ್ನೂ ಓದಿ: ಲಿಂಗಾಯತ, ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನ ಸಿಕ್ಕಿದ್ರೆ ಯಾವ ಸೌಲಭ್ಯ ಸಿಗುತ್ತೆ?

    ಈಗ ಜಾಗತಿಕ ಧರ್ಮ ಆಗಲು ಕಾಲ ಪಕ್ವವಾಗಿದೆ. ಜಯದ ಜೊತೆಗೆ ನಾವು ವಿನಂಮ್ರವಾಗಿ ಎಲ್ಲರನ್ನು ಕೂಡಿಸಿಕೊಂಡು ಬಸವ ಧರ್ಮಗಾಗಿ ಒಟ್ಟಾಗಲಿದ್ದೆವೆ. ನಮಗೆ ಬೈದವ್ರನ್ನು ಸೇರಿಸಿಕೊಂಡು ಒಟ್ಟಾಗಿ ಹೋಗುತ್ತೇವೆ. ಈಶ್ವರ ಖಂಡ್ರೆ, ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ ಹೀಗೆ ಎಲ್ಲರನ್ನು ಸೇರಿಸಿಕೊಂಡು ಧರ್ಮ ಸ್ಥಾಪನೆಗೆ ಮುನ್ನಡೆಯಲಿದ್ದೇವೆ ಎಂದರು.

  • ಬಸವ ತತ್ವ ಪರಿಪಾಲಕರಿಗೆ ಪ್ರತ್ಯೇಕ ಧರ್ಮ- ಕ್ಯಾಬಿನೆಟ್ ಸಭೆಯ ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಬಸವ ತತ್ವ ಪರಿಪಾಲಕರಿಗೆ ಪ್ರತ್ಯೇಕ ಧರ್ಮ- ಕ್ಯಾಬಿನೆಟ್ ಸಭೆಯ ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಬೆಂಗಳೂರು: ರಾಜ್ಯದಲ್ಲಿ ಇತಿಹಾಸದಲ್ಲೇ ಅತಿದೊಡ್ಡ, ಐತಿಹಾಸಿಕ ವಿದ್ಯಮಾನವೊಂದು ಜರುಗಿದೆ. ಶತ ಶತಮಾನಗಳಿಂದ ಹಿಂದೂ ಧರ್ಮದ ಭಾಗವಾಗಿ ಇದ್ದ ವೀರಶೈವ-ಲಿಂಗಾಯತರು ಇನ್ನು ಮುಂದೆ ಹಿಂದೂಗಳಲ್ಲ. ಅವರು ಅಲ್ಪಸಂಖ್ಯಾತರು. ಹೀಗೆಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಣಯ ತೆಗೆದುಕೊಂಡಿದೆ.

    ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದು,  ಧರ್ಮ ಇಬ್ಭಾಗದ ತಂತ್ರ ಅನುಕರಿಸಿದೆ. ನ್ಯಾಯಮೂರ್ತಿ ನಾಗಮೋಹನ್‍ದಾಸ್ 2ನೇ ಶಿಫಾರಸ್ಸಿನ ಅನ್ವಯ, ಪ್ರತ್ಯೇಕ ಲಿಂಗಾಯತ ಧರ್ಮದ ಬದಲಿಗೆ, ಲಿಂಗಾಯತ ಮತ್ತು ವೀರಶೈವ, ಬಸವತತ್ವದಡಿ ನಂಬಿಕೆ ಇರುವವರಿಗೆ ಪ್ರತ್ಯೇಕ ಧರ್ಮಕ್ಕೆ ರಾಜ್ಯಸರ್ಕಾರ ಶಿಫಾರಸು ಮಾಡಿದೆ. ನಾಗಮೋಹನ್‍ದಾಸ್ ವರದಿ ಪ್ರಕಾರ ಅಲ್ಪಸಂಖ್ಯಾತ ಕೋಟಾದಡಿ ಮುಸ್ಲಿಮರಿಗೆ ಸಿಗುತ್ತಿರುವ ಸೌಲಭ್ಯಗಳು ಲಿಂಗಾಯತ-ವೀರಶೈವ ಧರ್ಮಕ್ಕೆ ಸಿಗುವುದಿಲ್ಲ.

    ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರೀ ನಾಟಕೀಯ ಬೆಳವಣಿಗೆಗಳು ನಡೆದಿತ್ತು. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಈ ಸಭೆಯಲ್ಲಿ ಭಾರೀ ಚರ್ಚೆಗಳು ನಡೆದು ಸಂಜೆ 3.30ರ ವೇಳೆಗೆ ಅಂತಿಮ ನಿರ್ಧಾರಕ್ಕೆ ಬರಲಾಯಿತು. ಹೀಗಾಗಿ ಸಭೆಯಲ್ಲಿ ಏನು ಚರ್ಚೆ ನಡೆಯಿತು, ಯಾರು ಏನು ಹೇಳಿದರು ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಇಬ್ಬರು ಸಚಿವರು ರಾಜೀನಾಮೆ ನೀಡಿದ್ರೆ ಏನಾಗುತ್ತೆ ಅಂತ ವಿನಯ್ ಕುಲಕರ್ಣಿ ಹೇಳಿದ್ದಾನೆ. ನಾವು ಏಕೆ ರಾಜೀನಾಮೆ ಕೊಡಬೇಕು. ಅವನೇ ರಾಜೀನಾಮೆ ಕೊಟ್ಟು ಹೋಗಲಿ ಎಂದು ಹೇಳಿದ್ದಾರೆ. ಇದಕ್ಕೆ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್, ನಮ್ಮ ಜೊತೆ ನೀವು ಬರುವುದಾದರೆ ಬನ್ನಿ. ಇಲ್ಲಾಂದ್ರೆ ಸುಮ್ಮನಿರಿ. ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಮರು ಉತ್ತರ ನೀಡಿದ್ದಾರೆ.

    ಈ ಉತ್ತರಕ್ಕೆ ಗರಂ ಆದ ಎಸ್.ಎಸ್. ಮಲ್ಲಿಕಾರ್ಜುನ್, ಅನಗತ್ಯವಾಗಿ ಸಮುದಾಯವನ್ನು ಹಾಳ್ ಮಾಡ್ತಾ ಇದ್ದೀರಿ. ನಿಮ್ ಇಬ್ರಿಂದಾನೆ (ಎಂ.ಬಿ. ಪಾಟೀಲ್, ಕುಲಕರ್ಣಿ) ಏನೋ ಮಾಡೋಕೆ ಹೋಗಿ ಏನೋ ಆಗಿದೆ. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಹಾಸಭಾ ಮನವಿ ಕೊಟ್ಟಿದ್ದು. ಆದ್ರೀಗ, ಲಿಂಗಾಯತ ಸ್ವತಂತ್ರ ಧರ್ಮ ಅಂತ ಗುಲ್ಲೆಬ್ಬಿಸಿ ಹಾಳ್ ಮಾಡಕ ಹತ್ತೀರಿ ಎಂದಿದ್ದಾರೆ.

    ಮಲ್ಲಿಕಾರ್ಜುನ್ ಆರೋಪಕ್ಕೆ ವಿನಯ ಕುಲಕರ್ಣಿ, ಹಾಳ್ ಮಾಡ್ತಿರೋದು ನಾವಲ್ಲ, ನೀವು. ನಮ್ಮ ಬಸವಣ್ಣ ಸ್ಥಾಪನೆ ಮಾಡಿದ್ದೇ ನಿಜವಾದ ಧರ್ಮ. ಬಸವ ಧರ್ಮ. ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕು ಅಂತ ಸ್ವಾಮೀಜಿಗಳೇ ಸಿಎಂ ಹತ್ರ ಬಂದು ಒತ್ತಾಯ ಮಾಡ್ತಿದ್ದಾರೆ. ನೀವು ಅದನ್ನ ದಿಕ್ಕು ತಪ್ಪಿಸ್ತಾ ಇದ್ದೀರಿ ಎಂದು ಸಿಟ್ಟಿನಿಂದ ಹೇಳಿದರು.  ಇದಾದ ಬಳಿಕ ಸಂಪುಟ ಸಭೆಯಿಂದ ಸಚಿವ ವಿನಯ ಕುಲಕರ್ಣಿ ಸಿಟ್ಟಿನಿಂದ ಹೊರಬಂದು 10 ನಿಮಿಷಗಳ ಬಳಿಕ ಮತ್ತೆ ವಾಪಸ್ ಹಾಜರಾದರು.

    ಈ ವೇಳೆ ಆರೋಗ್ಯ ಸಚಿವ ರಮೇಶ್ ಕುಮಾರ್ ಮಾತನಾಡಿ, ಎಲ್ಲರೂ ನಿಮ್ಮ ಅಭಿಪ್ರಾಯಗಳನ್ನಷ್ಟೇ ತಿಳಿಸಿ. ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಸುಮ್ಮನೆ ಕೂಗಾಟ-ಕಿತ್ತಾಟ ಸರಿಯಲ್ಲ ಎಂದು ಸಲಹೆ ನೀಡಿದರು.

    ಈ ಚರ್ಚೆ ವೇಳೆ ಮಧ್ಯಪ್ರವೇಶಿಸಿ ಸಿಎಂ ಸಿದ್ದರಾಮಯ್ಯ, ಲಾಭ ನಷ್ಟದ ಲೆಕ್ಕಚಾರದ ಬಗ್ಗೆ ನನಗೆ ಹೇಳ್ತೀರಾ ನೀವು. ರಾಜಕೀಯ ಲಾಭ-ನಷ್ಟ ನನಗೂ ಗೊತ್ತಿದೆ. ಇದೇನ್ ಕ್ಯಾಬಿನೆಟ್ ಅಂತಾ ತಿಳ್ಕೊಂಡಿದ್ದೀರೋ? ಏನು? ಇಷ್ಟೊಂದು ವೈಯಕ್ತಿಕ ಮಟ್ಟಕ್ಕೆ ಇಳಿದು ಜಗಳ ಮಾಡಿದ್ರೆ ಏನು ಆಗಲ್ಲ. ಸುಮ್ಮನಿರಿ. ಈ ವಿಚಾರದ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯಗಳನ್ನಷ್ಟೇ ತಿಳಿಸಿ ಎಂದರು. ಈ ಸಂದರ್ಭದಲ್ಲಿ ಪ್ರತ್ಯೇಕ ಧರ್ಮದ ಸಾಧಕ-ಬಾಧಕ ಬಗ್ಗೆ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಅವರನ್ನು ಸಂಪುಟ ಸಭೆಗೆ ಕರೆಸಿ ಸಿದ್ದರಾಮಯ್ಯ ಮಾಹಿತಿ ಪಡೆದರು.

    ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬಹುತೇಕ ಸಚಿವರು ಒಪ್ಪಿಗೆ ನೀಡಿದರು. ಆದರೆ ಸಚಿವ ಈಶ್ವರ ಖಂಡ್ರೆ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಈಶ್ವರ ಖಂಡ್ರೆ ಮಾತನಾಡಿ, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸರ್ಕಾರ ಶಿಫಾರಸು ಮಾಡಿದರೆ ಕನಿಷ್ಠ 20 ಸ್ಥಾನಗಳನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ ಎಂದಾಗ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ನನಗೂ ಕೂಡ ಹೀಗೆ ಅನಿಸುತ್ತಿದೆ. ಈಡಿಗರಿಗೂ ಪ್ರತ್ಯೇಕ ಧರ್ಮದ ಸ್ಥಾನ ನೀಡುತ್ತೀರಾ ಎಂದು ಪ್ರಶ್ನಿಸಿದರು.

    ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ನೀವು ಅಲ್ಪಸಂಖ್ಯಾತರ ಸ್ಥಾನಮಾನ ನೀಡಿ. ಆದರೆ, ಅಲ್ಪಸಂಖ್ಯಾತರಿಗೆ ಯಾವುದೇ ದುಷ್ಪರಿಣಾಮ ಆಗದಂತೆ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು. ಎಲ್ಲರ ಮಾತು ಕೇಳಿ ಕೊನೆಗೆ ಪ್ರತ್ಯೇಕ ಲಿಂಗಾಯತ ಧರ್ಮದ ಬದಲಿಗೆ ಲಿಂಗಾಯತ ಮತ್ತು ವೀರಶೈವ ಲಿಂಗಾಯತ, ಬಸವ ತತ್ವ ಪಾಲಕರಿಗೆ ಪ್ರತ್ಯೇಕ ಧರ್ಮ ಎನ್ನುವ ಸಾಲು ಸೇರಿಸಿ. ಮುಂದೆ ಏನಾಗುತ್ತೋ ಅಂತ ನೋಡೋಣ ಎಂದು ಹೇಳಿ ಸಭೆಯನ್ನು ಮುಕ್ತಾಯಗೊಳಿಸಿದರು ಎಂದು ಹೇಳಲಾಗುತ್ತಿದೆ.

    ಸಚಿವ ಸಂಪುಟದ ನಿರ್ಣಯಗಳೇನು?
    * ಬಸವ ತತ್ವ ಒಪ್ಪಿ ಬರುವವರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ
    * ಲಿಂಗಾಯತ ಮತ್ತು ವೀರಶೈವ, ಬಸವತತ್ವದಡಿ ನಂಬಿಕೆ ಇರುವವರಿಗೆ ಅನ್ವಯ
    * ಪ್ರತ್ಯೇಕ ಧರ್ಮಕ್ಕೆ ಒಳಗಾಗುವವರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ
    * ಕರ್ನಾಟಕ ಅಲ್ಪಸಂಖ್ಯಾತ ಕಾಯ್ದೆಯ ಸೆಕ್ಷನ್ 2ಡಿ ಅಡಿ ಶಿಫಾರಸು
    * ಕೇಂದ್ರದ ಅಲ್ಪಸಂಖ್ಯಾತ ಆಯೋಗದ 2 (ಸಿ) ಕಾಯ್ದೆ ಅನ್ವಯ

    ಅಲ್ಪಸಂಖ್ಯಾತರ ಸ್ಥಾನಮಾನ ಯಾರಿಗೆ?
    * ರಾಜ್ಯ ಸರ್ಕಾರವೇನೋ ಶಿಫಾರಸು ಮಾಡಿದೆ ಆದ್ರೆ ಕೇಂದ್ರ ಸಂಪುಟ ಒಪ್ಪಿಗೆ ನೀಡಬೇಕು
    * ಅಲ್ಪಸಂಖ್ಯಾತರ ಸ್ಥಾನಮಾನ ಬೇಕಾದರೆ ವೀರಶೈವರು ಕೂಡ ಬಸವ ತತ್ವ ಪಾಲನೆ ಮಾಡಬೇಕು
    * ವೀರಶೈವರು ತಮ್ಮದೇ ಆದ ತತ್ವ ಸಿದ್ಧಾಂತ ಹೊಂದಿರುವುದರಿಂದ ಬಸವ ತತ್ವ ಅನುಕರಣೆ ಅಸಾಧ್ಯ
    * ಅಲ್ಪಸಂಖ್ಯಾತರ ಸ್ಥಾನಮಾನ ಸಿಕ್ಕಿದ್ರೆ, ಲಿಂಗಾಯತರು ಮತ್ತು ವೀರಶೈವರು ಹಿಂದುಗಳಲ್ಲ!

  • ಸಿಎಂ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ: ರಂಭಾಪುರಿ ಶ್ರೀ

    ಸಿಎಂ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ: ರಂಭಾಪುರಿ ಶ್ರೀ

    ಹುಬ್ಬಳ್ಳಿ: ಪ್ರತ್ಯೇಕ ಲಿಂಗಾಯತ ಧರ್ಮ ಕುರಿತ ನಾಗಮೋಹನ ದಾಸ್ ಸಮಿತಿ ವರದಿಯನ್ನು ಒಪ್ಪಿದ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ನಿರ್ಧಾರವನ್ನು ಕೈಗೊಂಡ ಹಿನ್ನೆಲೆಯಲ್ಲಿ ರಂಭಾಪುರಿ ಶ್ರೀ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ರಂಭಾಪುರಿ ಶ್ರೀಗಳು, ಮುಖ್ಯಮಂತ್ರಿಗಳು ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ. ಲಿಂಗಾಯತ ವೀರಶೈವ ಧರ್ಮವನ್ನ ಛಿದ್ರ ಮಾಡಿದ್ದಾರೆ. ಇವರಿಗೆ ಜನರು ತಕ್ಕಪಾಠ ಕಲಿಸುತ್ತಾರೆ. ಅತ್ಯಂತ ಅವೈಜ್ಞಾನಿಕ ಹಾಗೂ ರಾಜಕೀಯ ಪ್ರೇರಿತರಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಕಿಡಿಕಾರಿದರು.

    ಸಿಎಂ ಸಿದ್ದರಾಮಯ್ಯ ಅವರು ಪ್ರತ್ಯೇಕ ಧರ್ಮ ಸ್ಥಾಪನೆ ಮಾಡುವ ವಿಚಾರದಲ್ಲಿ ಅತುರದ ನಿರ್ಧಾರ ಮಾಡಿದ್ದಾರೆ. ಕ್ಯಾಬಿನೆಟ್ ನಿರ್ಧಾರವನ್ನು ವೀರಶೈವ ಲಿಂಗಾಯತ ಧರ್ಮ ರಾಷ್ಟ್ರೀಯ ಮಠ ಪರಿಷತ್ ಖಂಡಿಸುತ್ತದೆ. ಅಲ್ಲದೇ ವೀರಶೈವ ಮಠಾಧೀಶರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ವೀರಶೈವದಿಂದ ಲಿಂಗಾಯತವನ್ನು ಯಾರು ಬೇರ್ಪಡಿಸಲು ಸಾಧ್ಯವಿಲ್ಲ. ಧರ್ಮವನ್ನು ಒಡೆಯುವ ಕೆಲಸ ಮಾಡಿದ ರಾಜಕಾರಣಿಗಳಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ರಾಜ್ಯದ ಶಿಫಾರಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸುವುದಿಲ್ಲ ಎಂದು ಹೇಳಿದರು.

    ಸಮಿತಿಯ ಮುಂದೆ ಈಗಾಗಲೇ ನಾವು ಸಾವಿರಾರು ಪುಟಗಳ ಮಾಹಿತಿ ನೀಡಿದ್ದೆವು. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರು ಸಹ ವೀರಶೈವ ಹಾಗೂ ಲಿಂಗಾಯತ ಧರ್ಮದ ಎಲ್ಲರು ಒಟ್ಟಿಗೆ ಬಂದರೆ ಮಾತ್ರ ಶಿಫಾರಸು ಮಾಡುವ ಕುರಿತು ಹೇಳಿದ್ದರು. ಆದರೆ ಇಂದು ಅವರು ತಮ್ಮ ಮಾತನ್ನು ತಪ್ಪಿದ್ದಾರೆ. ಅವರ ಮಾತಿನ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದು ಆರೋಪಿಸಿದರು.

    ಸಮಿತಿಗೆ ಸಾವಿರಾರು ಪುಟ ವೀರಶೈವ ಇತಿಹಾಸದ ಕುರಿತು ಮಾಹಿತಿ ನೀಡಲಾಗಿದೆ. ಆದರೆ ಇಲ್ಲಿ ಏಕಪಕ್ಷೀಯ ನಿರ್ಧಾರ ಮಾಡಿ. ಸ್ವಾತಂತ್ರ್ಯ ಲಿಂಗಾಯತರು ನೀಡಿದ ಮಾಹಿತಿಯನ್ನೇ ಸಮಿತಿ ನೀಡಿದೆ ಎಂದರು.

    ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ. ವೀರಶೈವ ಮಠದ ರಾಷ್ಟ್ರೀಯ ಪರಿಷತ್ ಹಾಗೂ ವೀರಶೈವ ಮುಂಖಡರ ಸಮಾವೇಶ ಕರೆದು ಚರ್ಚೆ ನಡೆಸಲಾಗುತ್ತದೆ. ಅಲ್ಲದೇ ಈ ಕುರಿತು ಕೇಂದ್ರ ಸರ್ಕಾರಕ್ಕೂ ಮಾಹಿತಿ ಸಲ್ಲಿಸಲಾಗುತ್ತದೆ. ಕಾನೂನು ಹೋರಾಟಕ್ಕೂ ನಾವು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.   ಇದನ್ನು ಓದಿ: ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ – ಕೇಂದ್ರಕ್ಕೆ ಶೀಘ್ರವೇ ಸಿದ್ದು ಸರ್ಕಾರದಿಂದ ಶಿಫಾರಸ್ಸು

  • ಇನ್ನು ಮುಂದೆ ನಗರ ಮತ್ತು ಹೈವೇಯಲ್ಲಿ ಕಾರು, ಬೈಕ್‍ಗಳು ಮತ್ತಷ್ಟು ಜಾಸ್ತಿ ವೇಗದಲ್ಲಿ ಹೋಗಬಹುದು!

    ಇನ್ನು ಮುಂದೆ ನಗರ ಮತ್ತು ಹೈವೇಯಲ್ಲಿ ಕಾರು, ಬೈಕ್‍ಗಳು ಮತ್ತಷ್ಟು ಜಾಸ್ತಿ ವೇಗದಲ್ಲಿ ಹೋಗಬಹುದು!

    ನವದೆಹಲಿ: ನಗರ ರಸ್ತೆ ಮತ್ತು ಹೆದ್ದಾರಿಯಲ್ಲಿ ವೇಗದ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೊಸ ನಿಯಮದ ಪ್ರಕಾರ ನಗರದಲ್ಲಿ ಕಾರುಗಳು ಗಂಟೆಗೆ 70 ಕಿ.ಮೀ. ವೇಗ ಮತ್ತು ಬೈಕುಗಳಿಗೆ 60 ಕಿ.ಮೀ. ವೇಗದ ಮಿತಿಯನ್ನು ನಿಗದಿ ಪಡಿಸಿದೆ.

    ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಿ ನಿತಿನ್ ಗಡ್ಕರಿ ಬುಧವಾರದಂದು ನಗರದ ರಸ್ತೆಗಳು ಮಾತ್ರವಲ್ಲದೇ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇಗಳಲ್ಲೂ ವೇಗದ ಮಿತಿಯನ್ನು ಹೆಚ್ಚಿಸಲು ಒಪ್ಪಿಗೆ ನೀಡಿದ್ದಾರೆ. ಅಧಿಸೂಚನೆ ಹೊರಡಿಸಲು ಈ ಪ್ರಸ್ತಾವನೆಯನ್ನು ಕಾನೂನು ಸಚಿವಾಲಯಕ್ಕೆ ಈಗ ಕಳುಹಿಸಲಾಗಿದೆ.

    ಹೊಸ ವ್ಯವಸ್ಥೆಯ ಪ್ರಕಾರ ಒಂದು ವೇಳೆ ನಿಗದಿಯಾಗಿರುವ ಮಿತಿಯ 5% ರಷ್ಟು ಜಾಸ್ತಿ ವೇಗದಲ್ಲಿ ಸಂಚರಿಸಿದ್ದಲ್ಲಿ ಎಚ್ಚರಿಕೆ ನೀಡಲಾಗುತ್ತದೆ ಅಷ್ಟೇ ಅಲ್ಲದೇ ದಂಡ ವಿಧಿಸಲಾಗುವುದಿಲ್ಲ. ನಗರದಲ್ಲಿ ಗಂಟೆಗೆ 70 ಕಿ.ಮೀ ವೇಗದಲ್ಲಿ ಸಂಚರಿಸುವುದು ಪ್ರಯೋಗಿಕವಾಗಿ ಸಾಧ್ಯವಾಗದೇ ಇದ್ದರೂ ಹಲವು ನಗರಗಳಲ್ಲಿ ರಿಂಗ್ ರಸ್ತೆಗಳು ಇರುವ ಕಾರಣ ವೇಗದ ಮಿತಿಯನ್ನು ಏರಿಸಲಾಗಿದೆ.

    ದೇಶಾದ್ಯಂತ ವೇಗ ಮಿತಿಯನ್ನ ಹೆಚ್ಚಿಸುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಇದ್ದು, ರಾಜ್ಯ ಸರ್ಕಾರ ಮತ್ತು ಇನ್ನಿತರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ರಸ್ತೆಯ ಮೇಲೆ ವೇಗದ ಮಿತಿಯನ್ನು ಹೇರಲು ಅನುಮತಿ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ನಿಗದಿ ಪಡಿಸಿದ ಗರಿಷ್ಟ ವೇಗದ ಮಿತಿಯನ್ನು ಮೀರುವಂತಿಲ್ಲ.

    ಬದಲಾಗಿರುವ ನಿಯಮಗಳ ಪ್ರಕಾರ ಎಕ್ಸ್ ಪ್ರೆಸ್ ವೇನಲ್ಲಿ ಇಲ್ಲಿಯವರೆಗೆ ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದ್ದ ಕಾರು ಇನ್ನು ಮುಂದೆ ಪ್ರತಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಸಂಚರಿಸಬಹುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಹೋಗುತ್ತಿದ್ದ ಕಾರುಗಳು ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸಬಹುದಾಗಿದೆ.

  • ದಂಪತಿಗೆ ಎರಡು ಮಕ್ಕಳ ನೀತಿ ಕಡ್ಡಾಯಗೊಳಿಸಿ – ಸುಪ್ರೀಂನಲ್ಲಿ ಅರ್ಜಿ ವಜಾ

    ದಂಪತಿಗೆ ಎರಡು ಮಕ್ಕಳ ನೀತಿ ಕಡ್ಡಾಯಗೊಳಿಸಿ – ಸುಪ್ರೀಂನಲ್ಲಿ ಅರ್ಜಿ ವಜಾ

    ನವದೆಹಲಿ: ದೇಶದಲ್ಲಿನ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವ ದೃಷ್ಟಿಯಿಂದ ಕಡ್ಡಾಯವಾಗಿ ದಂಪತಿಗೆ ಎರಡು ಮಕ್ಕಳ ನೀತಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಕಾಯ್ದೆ ರೂಪಿಸಲು ನಿರ್ದೇಶನ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

    ಇಬ್ಬರು ಮಕ್ಕಳ ನೀತಿ ಕಡ್ಡಾಯ ವಿಚಾರವನ್ನು ತೀರ್ಮಾನ ಮಾಡುವುದು ಸಂಸತ್ ಕಾರ್ಯವಾಗಿದ್ದು, ನ್ಯಾಯಾಲಯ ಈ ಕುರಿತು ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.

    ವಕೀಲರಾದ ಅನುಜ್ ಸಕ್ಸೇನಾ, ಪೃಥ್ವಿ ರಾಜ್ ಚೌಹಣ್ ಮತ್ತು ಪ್ರಿಯಾ ಶರ್ಮಾ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಸರ್ಕಾರವು ಕಡ್ಡಾಯವಾಗಿ ಕುಟುಂಬ ನಿಯಂತ್ರಣ ಕಾನೂನು ರಚಿಸಿ, ಇಬ್ಬರು ಮಕ್ಕಳ ನೀತಿಯನ್ನು ಜಾರಿ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದರು.

    ಅರ್ಜಿಯಲ್ಲಿ 2022 ರ ವೇಳೆ ಭಾರತದ ಜನಸಂಖ್ಯೆ 1.5 ಶತಕೋಟಿಗಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ ಜನಸಂಖ್ಯೆ ಹೆಚ್ಚಳವಾಗುವುದರಿಂದ ನಾಗರೀಕರ ಮಧ್ಯೆ ಯುದ್ಧ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದರು. ಯಾವ ಕುಟುಂಬಗಳು ಇಬ್ಬರು ಮಕ್ಕಳ ನೀತಿಯನ್ನು ಅನುಸರಿಸುತ್ತದೋ ಆ ಕುಟುಂಬಗಳಿಗೆ ಪ್ರೋತ್ಸಾಹ/ಬಹುಮಾನ ನೀಡಬೇಕು. ನಿಯಮಗಳನ್ನು ಪಾಲಿಸದ ಕುಟುಂಬಗಳಿಗೆ ಶಿಕ್ಷೆ ನೀಡುವ ಕುರಿತು ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದರು.

    ಜನಸಂಖ್ಯೆ ಹೆಚ್ಚಳದಿಂದ ದೇಶಾದ್ಯಂತ ನಿರುದ್ಯೋಗ, ಬಡತನ, ಅನಕ್ಷರತೆ, ಅನಾರೋಗ್ಯ ಸಮಸ್ಯೆಗಳು ಹೆಚ್ಚಳವಾಗುತ್ತಿದೆ. ಪ್ರಸ್ತುತ ಪ್ರಪಂಚದಲ್ಲಿ ಭಾರತ ಯುವ ದೇಶವಾಗಿದೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.