Tag: ಕೇಂದ್ರ ಸರ್ಕಾರ

  • ಕರ್ನಾಟಕದ ಅರಣ್ಯ ಪಡೆಗಳ ಮೊದಲ ಮಹಿಳಾ ಮುಖ್ಯಸ್ಥರಾಗಿ ಮೀನಾಕ್ಷಿ ನೇಗಿ ನೇಮಕ

    ಕರ್ನಾಟಕದ ಅರಣ್ಯ ಪಡೆಗಳ ಮೊದಲ ಮಹಿಳಾ ಮುಖ್ಯಸ್ಥರಾಗಿ ಮೀನಾಕ್ಷಿ ನೇಗಿ ನೇಮಕ

    ಬೆಂಗಳೂರು: ಕರ್ನಾಟಕ ಅರಣ್ಯ ಪಡೆಗಳ(Forest Force) ಮುಖ್ಯಸ್ಥರಾಗಿ ಮೀನಾಕ್ಷಿ ನೇಗಿ(Meenakshi Negi) ನೇಮಕಗೊಂಡಿದ್ದಾರೆ. ಮೊದಲ ಬಾರಿಗೆ ಮಹಿಳಾ ಅಧಿಕಾರಿ ಚುಕ್ಕಾಣಿ ಹಿಡಿದಿದ್ದಾರೆ.

    ಹಿರಿಯ ಐಎಫ್‌ಎಸ್(IFS) ಅಧಿಕಾರಿಯಾಗಿದ್ದ ಮೀನಾಕ್ಷಿ ನೇಗಿ ಉತ್ತರಾಖಂಡ ರಾಜ್ಯದವರು. ಐಎಫ್‌ಎಸ್ ಅಧಿಕಾರಿಯಾಗಿ ಕರ್ನಾಟಕಕ್ಕೆ ನಿಯೋಜನೆಯಾಗಿದ್ದ ಅವರು 1989ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಅಧಿಕಾರಿಯಾಗಿ ಮೂರೂವರೆ ದಶಕದಿಂದ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಮಹಿಳಾ ಐಪಿಎಲ್; ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ವೀಕ್ಷಣೆಗೆ ಮೆಟ್ರೋ ಸೇವೆ ವಿಸ್ತರಣೆ

    ಬಳ್ಳಾರಿ, ಮಂಡ್ಯ, ಚಿಕ್ಕಮಗಳೂರಿನಲ್ಲಿಯೂ ಡಿಸಿಎಫ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಮೀನಾಕ್ಷಿ ನೇಗಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿ ಆಗಿದ್ದರು. ಇದನ್ನೂ ಓದಿ: ಕುಂಭಮೇಳಕ್ಕೆ ತೆರಳುತ್ತಿದ್ದಾಗ ಅಪಘಾತ: ಹಾಸನದ ಬಿಜೆಪಿ ಯುವ ಕಾರ್ಯಕರ್ತ ಸಾವು

    ಕರ್ನಾಟಕ ಅರಣ್ಯ ಪಡೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಕುರಿತು ಉನ್ನತ ಮಟ್ಟದ ಸಮಿತಿ ಸಭೆ ಸೇರಿ ತೀರ್ಮಾನಿಸಲಾಗಿತ್ತು. ಬಳಿಕ ಕೇಂದ್ರ ಸರ್ಕಾರಕ್ಕೂ ವರದಿ ಸಲ್ಲಿಸಲಾಗಿದೆ. ಆದಾದ ಬಳಿಕ ಮೀನಾಕ್ಷಿ ವೇಗಿ ಅವರನ್ನು ಕೇಂದ್ರ ಸರ್ಕಾರದ ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ಇದನ್ನೂ ಓದಿ: ʻಮಹಾʼ ಡಿಸಿಎಂ ಏಕನಾಥ್ ಶಿಂಧೆಗೆ ಬಾಂಬ್ ಬೆದರಿಕೆ – ಮುಂಬೈ ಪೊಲೀಸರಿಂದ ತನಿಖೆ ಶುರು

  • ಅನ್ನಭಾಗ್ಯ ಯೋಜನೆ ಅಡಿ ಇನ್ಮುಂದೆ ಹಣದ ಬದಲು 10 ಕೆಜಿ ಅಕ್ಕಿ – ಸಚಿವ ಮುನಿಯಪ್ಪ

    ಅನ್ನಭಾಗ್ಯ ಯೋಜನೆ ಅಡಿ ಇನ್ಮುಂದೆ ಹಣದ ಬದಲು 10 ಕೆಜಿ ಅಕ್ಕಿ – ಸಚಿವ ಮುನಿಯಪ್ಪ

    – ಹಣದ ಬದಲು ಅಕ್ಕಿ ಕೊಟ್ಟರೆ ಯೋಜನೆ ಖರ್ಚು ವೆಚ್ಚ ಎಷ್ಟು?

    ಬೆಂಗಳೂರು: ಅನ್ನಭಾಗ್ಯ ಯೋಜನೆ (Anna Bhagya Scheme) ಅಡಿ ಇನ್ನು ಮುಂದೆ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ಸಿಗಲಿದೆ. ಇಷ್ಟು ದಿನ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿ ಬದಲಿಗೆ 170 ರೂ. ಕೊಡ್ತಿದ್ದ ಸರ್ಕಾರ ಇನ್ನು ಮುಂದೆ ಹಣದ ಬದಲಾಗಿ 10 ಕೆಜಿ ಅಕ್ಕಿಯೇ ನೀಡಲಿದೆ ಅಂತ ಆಹಾರ ಸಚಿವ ಮುನಿಯಪ್ಪ (KH Muniyappa) ತಿಳಿಸಿದ್ದಾರೆ. ಈ ತಿಂಗಳಿಂದಲೇ 10 ಕೆಜಿ ಅಕ್ಕಿ ಹಂಚಿಕೆಯಾಗಲಿದೆ.

    ವಿಧಾನಸೌಧದಲ್ಲಿ (Vidhana Soudha) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಇಷ್ಟು ದಿನ ಕೇಂದ್ರ ಸರ್ಕಾರ ಅಕ್ಕಿ ಕೊಡಲು ಒಪ್ಪದೇ ಇರೋದ್ರೀಂದ 5 ಕೆಜಿ ಅಕ್ಕಿ ಮತ್ತು 5 ಕೆಜಿಗೆ ಹಣ ಕೊಡ್ತಿದ್ವಿ. ಈಗ ಕೇಂದ್ರ ಸರ್ಕಾರ 22.50 ರೂಪಾಯಿ ಕಡಿಮೆ ಬೆಲೆಯಲ್ಲಿ ಅಕ್ಕಿ ಕೊಡಲು ‌ಒಪ್ಪಿದೆ. ಹೀಗಾಗಿ ಇನ್ನು ಮುಂದೆ 10 ಕೆಜಿ ಅಕ್ಕಿ ಕೊಡೋದಾಗಿ ಸ್ಪಷ್ಟಪಡಿಸಿದರು.

    ನಮಗೆ ಪ್ರತಿ ತಿಂಗಳು 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ. ಇದಕ್ಕಾಗಿ 536.71 ಕೋಟಿ ಹಣ ಖರ್ಚಾಗಲಿದೆ. ಈ ಹಣ ನಾವು ಕೇಂದ್ರಕ್ಕೆ ಕೊಡಲು ಒಪ್ಪಿದ್ದೇವೆ. ರಾಜ್ಯದಲ್ಲಿ ಸುಮಾರು 1.53 ಕೋಟಿಗೂ ಹೆಚ್ಚು ಬಿಪಿಎಲ್‌ ಕಾರ್ಡ್ ಇದ್ದು, 4.50 ಕೋಟಿ ಜನರಿಗೆ ಅಕ್ಕಿ ಕೊಡ್ತಿದ್ದೇವೆ. ಸಾಗಣೆ ವೆಚ್ಚವೂ ಸೇರಿ 25 ರೂ.ಗೆ ನಮಗೆ ಅಕ್ಕಿ ಸಿಗಲಿದೆ. ಹಣದ ಬದಲಾಗಿ ಅಕ್ಕಿ ಕೊಡೋದ್ರೀಂದ ಸರ್ಕಾರಕ್ಕೆ ಪ್ರತಿ ತಿಂಗಳು 150 ರಿಂದ 190 ಕೋಟಿ ರೂ. ಉಳಿತಾಯವಾಗಲಿದೆ ಅಂತ ಸಚಿವರು ತಿಳಿಸಿದರು.

    ಈಗಾಗಲೇ ಅಕ್ಟೋಬರ್ ವರೆಗೆ ಹಣ ಪಾವತಿ ಮಾಡಿದ್ದು ನವೆಂಬರ್, ಡಿಸೆಂಬರ್, ಜನವರಿ ಹಣ ಸಕಾಲಕ್ಕೆ ಫಲಾನುಭವಿಗಳಿಗೆ ಸೇರಲಿದೆ. ಅಲ್ಲದೇ ಈಗಾಗಲೇ ಫೆಬ್ರವರಿ ತಿಂಗಳ ಪಡಿತರ ಪಡೆದಿದ್ದರೆ ಹೆಚ್ಚುವರಿ ಅಕ್ಕಿಯನ್ನ ಮಾರ್ಚ್ ತಿಂಗಳು ಕೊಡಲಿದ್ದೇವೆ ಅಂತ ಸಚಿವರು ತಿಳಿಸಿದರು.

    ಹಣದ ಬದಲು ಅಕ್ಕಿ ಕೊಟ್ಟರೆ ಅನ್ನಭಾಗ್ಯ ಯೋಜನೆ ಖರ್ಚು ವೆಚ್ಚ ಎಷ್ಟು?

    >. ಕರ್ನಾಟಕಕ್ಕೆ ಅಗತ್ಯ ಇರುವ ಅಕ್ಕಿ 2.10 ಲಕ್ಷ ಮೆಟ್ರಿಕ್ ಟನ್
    >. ಒಟ್ಟು 1,16,39,179 ಕಾರ್ಡ್ ಗಳು, 4,12,16,838 ಮಂದಿ ಫಲಾನುಭವಿಗಳು
    >. ಎಫ್‌ಸಿಐನಿಂದ 22 ರೂ. 50 ಪೈಸೆಗೆ ಅಕ್ಕಿ ಖರೀದಿಸಲಿರುವ ರಾಜ್ಯ ಸರ್ಕಾರ
    >. ಸಾಗಾಣಿಕಾ ವೆಚ್ಚ ಸೇರಿಸಿದ್ರೆ ಪ್ರತಿ ಕೆಜಿ ಅಕ್ಕಿಗೆ ಒಟ್ಟು 25 ರೂಪಾಯಿ ಅಂದಾಜು ವೆಚ್ಚ
    >. ಈ ಹಿಂದೆ ಅನ್ನಭಾಗ್ಯಕ್ಕೆ ತಿಂಗಳಿಗೆ 890 ಕೋಟಿ ವೆಚ್ಚ, ವರ್ಷಕ್ಕೆ 10,092 ಕೋಟಿ ವೆಚ್ಚ
    >. 5 ಕೆಜಿ ಅಕ್ಕಿಗೆ ಬದಲಾಗಿ ಪ್ರತಿ ಫಲಾನುಭವಿಗೆ ಖಾತೆಗೆ ತಿಂಗಳಿಗೆ 170 ರೂಪಾಯಿ ಜಮೆ ಮಾಡ್ತಿದ್ದ ಸರ್ಕಾರ
    >. ಈಗ ಅಕ್ಕಿ ಕೊಟ್ಟರೆ ಸರ್ಕಾರಕ್ಕೆ ಪ್ರತಿ ತಿಂಗಳಿಗೆ 537 ಕೋಟಿ, ವರ್ಷಕ್ಕೆ 6,444 ಕೋಟಿ ವೆಚ್ಚ
    >. ಪ್ರತಿ ಫಲಾನುಭವಿಯಿಂದ 50 ರೂಪಾಯಿ ಉಳಿತಾಯ
    >. ತಿಂಗಳಿಗೆ ಅಂದಾಜು 150 ರಿಂದ 190 ಕೋಟಿ ರೂ., ವಾರ್ಷಿಕ 1,600 ರಿಂದ 2,000 ಕೋಟಿ ಉಳಿತಾಯ.

  • ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – ಮೃತರ ಕುಟುಂಬಗಳಿಗೆ ಕೇಂದ್ರದಿಂದ ತಲಾ 10 ಲಕ್ಷ ಪರಿಹಾರ ಘೋಷಣೆ

    ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – ಮೃತರ ಕುಟುಂಬಗಳಿಗೆ ಕೇಂದ್ರದಿಂದ ತಲಾ 10 ಲಕ್ಷ ಪರಿಹಾರ ಘೋಷಣೆ

    – ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ. ಪರಿಹಾರ

    ನವದೆಹಲಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ 2.5 ಲಕ್ಷ ರೂ. ಪರಿಹಾರವನ್ನು ಕೇಂದ್ರ ಸರ್ಕಾರ (Central Government) ಘೋಷಿಸಿದೆ.

    ದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಭೀಕರ ಕಾಲ್ತುಳಿತದಿಂದ ಕುಂಭಮೇಳಕ್ಕೆ ಹೊರಟಿದ್ದ 18 ಜನ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮೃತರಲ್ಲಿ 11 ಮಹಿಳೆಯರು ಹಾಗೂ ನಾಲ್ಕು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.ಇದನ್ನೂ ಓದಿ: ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – ಕುಂಭಮೇಳಕ್ಕೆ ಹೊರಟಿದ್ದ 18 ಭಕ್ತರು ಸಾವು

    ಕಾಲ್ತುಳಿತ ಸಂಭವಿಸಿದ್ದು ಹೇಗೆ?
    ಕುಂಭಮೇಳಕ್ಕೆ ಹೊರಟಿದ್ದ ಭಕ್ತರಿಂದ ನವದೆಹಲಿ ರೈಲು ನಿಲ್ದಾಣ ತುಂಬಿ ತುಳುಕುತ್ತಿತ್ತು. ಅದಕ್ಕಾಗಿ 2 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ರೈಲುಗಳಿಗೂ ಮೊದಲು ಭುವನೇಶ್ವರಕ್ಕೆ ತೆರಳಬೇಕಿದ್ದ ರಾಜಧಾನಿ ಮತ್ತು ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ ರೈಲುಗಳು ತಡವಾಗಿ ನಿಲ್ದಾಣವನ್ನು ತಲುಪಿದವು. ಹೀಗಾಗಿ ರೈಲು ನಿಲ್ದಾಣದಲ್ಲಿ ಒಮ್ಮೆಗೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಯಿತು.

    ಇದೇ ಸಮಯಕ್ಕೆ ಪ್ಲಾಟ್‌ಫಾರ್ಮ್ 14 ಮತ್ತು 15ಕ್ಕೆ ಪ್ರಯಾಗ್ ರಾಜ್‌ಗೆ ಹೊರಟ ವಿಶೇಷ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಈ ವೇಳೆ ಸಾವಿರಾರು ಜನರು ಏಕಾಏಕಿ ರೈಲಿಗೆ ನುಗ್ಗಿದ್ದಾರೆ. ಹೀಗಾಗಿ ರೈಲಿನ ಒಳಗೆ ಮತ್ತು ಹೊರಗೆ ಕಾಲ್ತುಳಿತ ಸಂಭವಿಸಿದೆ. ಈ ಅವಘಡದಲ್ಲಿ 18 ಮಂದಿ ಸಾವಿಗೀಡಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದಾರೆ. ಘಟನೆ ಸಂಬಂಧ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

    ಕಳೆದ ಜ.29ರಂದು ಮೌನಿ ಅಮವಾಸ್ಯೆ ದಿನ ಪ್ರಯಾಗ್‌ರಾಜ್‌ನ ಕುಂಭಮೇಳದ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿ 30 ಜನ ಸಾವನ್ನಪ್ಪಿದ್ದರು.ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಕ್ಟರ್ & ಡಾಕ್ಟರ್ – ಮೈಸೂರಲ್ಲಿ ಅದ್ದೂರಿಯಾಗಿ ನಡೆದ ಡಾಲಿ, ಧನ್ಯತಾ ಮದುವೆ

  • 2007ರ ನಂತ್ರ ಇದೇ ಮೊದಲ ಬಾರಿಗೆ BSNLಗೆ ಭಾರೀ ಲಾಭ

    2007ರ ನಂತ್ರ ಇದೇ ಮೊದಲ ಬಾರಿಗೆ BSNLಗೆ ಭಾರೀ ಲಾಭ

    – ಆರ್ಥಿಕ ವರ್ಷದ ತ್ರೈಮಾಸಿಕದಲ್ಲಿ 262 ಕೋಟಿ ರೂ. ಗಳಿಕೆ

    ನವದೆಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (BSNL) 2007ರ ಬಳಿಕ ಇದೇ ಮೊದಲ ಬಾರಿಗೆ ಲಾಭದತ್ತ ಮರಳಿದೆ. ಜಿಯೋ, ಏರ್‌ಟೆಲ್‌ ಸೇವೆಗಳಲ್ಲಿ ಏರಿಕೆ ಕಂಡ ಬಳಿಕ ಗ್ರಾಹಕರು ಬಿಎಸ್‌ಎನ್‌ಎಲ್‌ನತ್ತ ಮರಳುತ್ತಿದ್ದು, ಲಾಭ ಗಳಿಕೆಗೆ ಕಾರಣವಾಗಿದೆ.

    ಹೌದು. 2025ರ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಬರೋಬ್ಬರಿ 262 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಆಕ್ರಮಣಕಾರಿ ನೆಟ್‌ವರ್ಕ್ ವಿಸ್ತರಣೆ ಮತ್ತು ಗ್ರಾಹಕ ಸೇರ್ಪಡೆಯಂತಹ ಕ್ರಮಗಳು ಲಾಭ ಗಳಿಕೆಗೆ ಕಾರಣವಾಗಿದೆ. ಇದರಿಂದ ಅರ್ಥಿಕ ವರ್ಷದ ಅಂತ್ಯದ ವೇಳೆಗೆ ಆದಾಯ ಬೆಳವಣಿಗೆಯು ಶೇ.20ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಸುಧಾರಣೆಯಾಗಲಿದೆ ಎಂದು ಸಂಸ್ಥೆ ಹೇಳಿದೆ.

    ಈ ಕುರಿತು ಬಿಎಸ್‌ಎನ್‌ಎಲ್‌ CMD ಎ. ರಾಬರ್ಟ್ J. ರವಿ, ಇಂತಹ ಪ್ರಯತ್ನಗಳೊಂದಿಗೆ ಅರ್ಥಿಕ ವರ್ಷಾಂತ್ಯದ ವೇಳೆಗೆ ಆದಾಯ ಬೆಳವಣಿಗೆ ಶೇ.20ಕ್ಕಿಂತ ಹೆಚ್ಚು ಸುಧಾರಿಸಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಅಲ್ಲದೇ ಹೆಚ್ಚುವರಿಯಾಗಿ ಬಿಎಸ್‌ಎನ್‌ಎಲ್‌ ತನ್ನ ಹಣಕಾಸಿನ ವೆಚ್ಚ ಮತ್ತು ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದ್ರೆ ಪ್ರಸಕ್ತ ವರ್ಷದಲ್ಲಿ 1,800 ಕೋಟಿ ರೂ. ನಷ್ಟ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.

    BSNLನ ಮೊಬಿಲಿಟಿ ಸೇವೆಗಳ ಆದಾಯವು ವರ್ಷದಿಂದ ವರ್ಷಕ್ಕೆ 15% ರಷ್ಟು ಹೆಚ್ಚಾಗಿದೆ. ಆದ್ರೆ ಫೈಬರ್-ಟು-ದಿ-ಹೋಮ್ (FTTH) ಮತ್ತು ಲೀಸ್ಡ್ ಲೈನ್ ಸೇವೆಗಳ ಆದಾಯವು ಅನುಕ್ರಮವಾಗಿ 18% ಮತ್ತು 14% ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.

    ಮುಂದುವರಿದು ಮಾತನಾಡಿರುವ ಜೆ. ರವಿ, ನಮ್ಮ ಗ್ರಾಹಕರ ಅನುಭವವನ್ನು ಹೆಚ್ಚಿಸಲು, ಬಿಎಸ್ಎನ್ಎಲ್ ಇತ್ತೀಚೆಗೆ ರಾಷ್ಟ್ರೀಯ ವೈಫೈ ರೋಮಿಂಗ್, ಎಲ್ಲಾ ಮೊಬೈಲ್ ಗ್ರಾಹಕರಿಗೆ ಉಚಿತ ಮನರಂಜನೆ ನೀಡುವ ಬಿಐಟಿವಿ ಮತ್ತು ಎಲ್ಲಾ ಎಫ್‌ಟಿಟಿಎಚ್ ಗ್ರಾಹಕರಿಗೆ ಐಎಫ್‌ಟಿವಿ ಮುಂತಾದ ನಾವೀನ್ಯತೆಗಳನ್ನು ಪರಿಚಯಿಸಿದೆ. ಸೇವೆಯ ಗುಣಮಟ್ಟ ಮತ್ತು ಸೇವಾ ಭರವಸೆಯ ಮೇಲಿನ ನಮ್ಮ ನಿರಂತರ ಗಮನವು ಗ್ರಾಹಕರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಭಾರತದಲ್ಲಿ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರಾಗಿ ಬಿಎಸ್‌ಎನ್‌ಎಲ್‌ನ ಸ್ಥಾನವನ್ನು ಬಲಪಡಿಸಿದೆ ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರವು ಟೆಲಿಕಾಂ ಕಂಪನಿಗೆ ಸಾಕಷ್ಟು ಬೆಂಬಲ ನೀಡಿದೆ. 2023ರಲ್ಲಿ ಕೇಂದ್ರ ಸರ್ಕಾರ 89,000 ಕೋಟಿ ರೂ.ಗಳ ಪ್ಯಾಕೇಜ್‌ಗೆ ಅನುಮೋದನೆ ನೀಡಿತ್ತು. ಅದಕ್ಕೂ ಮುನ್ನ 2021ರಲ್ಲಿ 1.64 ಲಕ್ಷ ಕೋಟಿ ರೂ. ಹಾಗೂ 2019ರಲ್ಲಿ 69,000 ಕೋಟಿ ರೂ. ಗಳ ಪ್ಯಾಕೇಜ್‌ ಅನ್ನು ಘೋಷಣೆ ಮಾಡಿತ್ತು ಎಂಬುದು ಗಮನಾರ್ಹ.

  • ಟಿಬೆಟನ್‌ ಧರ್ಮಗುರು ದಲೈ ಲಾಮಾಗೆ ಜೀವ ಬೆದರಿಕೆ – ಕೇಂದ್ರದಿಂದ ʻZʼ ಶ್ರೇಣಿಯ ಭದ್ರತೆ

    ಟಿಬೆಟನ್‌ ಧರ್ಮಗುರು ದಲೈ ಲಾಮಾಗೆ ಜೀವ ಬೆದರಿಕೆ – ಕೇಂದ್ರದಿಂದ ʻZʼ ಶ್ರೇಣಿಯ ಭದ್ರತೆ

    ನವದೆಹಲಿ: ಟಿಬೆಟನ್‌ ಧರ್ಮಗುರು ದಲೈ ಲಾಮಾ (Tibetan Spiritual leader Dalai Lama) ಅವರಿಗೆ ಜೀವ ಬೆದರಿಕೆ ಇರುವುದರಿಂದ ಕೇಂದ್ರ ಸರ್ಕಾರವು ‘ಜೆಡ್‌’ ಶ್ರೇಣಿಯ ಭದ್ರತೆಯನ್ನು (Z Category Protection) ಒದಗಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿದೆ.

    89 ವರ್ಷದ ಆಧಾತ್ಮಿಕ ನಾಯಕನಿಗೆ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವಾಲಯವು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ವಿಐಪಿ ಭದ್ರತಾ ವಿಭಾಗಕ್ಕೆ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: Manipur | ಬಿರೇನ್‌ ಸಿಂಗ್‌ ರಾಜೀನಾಮೆ ಬೆನ್ನಲ್ಲೇ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ

    ದಲೈ ಲಾಮಾ ಅವರು ಹಿಮಾಚಲ ಪ್ರದೇಶ ಪೊಲೀಸರ ಭದ್ರತೆ ಹೊಂದಿದ್ದರು. ಆದ್ರೆ ದೆಹಲಿ ಮತ್ತು ಇತರ ಯಾವುದೇ ಸ್ಥಳಗಳಿಗೆ ಭೇಟಿ ನೀಡುವಾಗ ಪೊಲೀಸ್‌ ಭದ್ರತೆಯನ್ನು ವಿಸ್ತರಿಸಲಾಗುತ್ತಿತ್ತು. ಆದ್ರೆ ಕೇಂದ್ರ ಗುಪ್ತಚರ ಸಂಸ್ಥೆಗಳ ಪರಿಶೀಲನೆಯ ನಂತರ ಸರ್ಕಾರ ಏಕರೂಪದ ಭದ್ರತೆಗೆ ಸೂಚನೆ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸುಮಾರು 30 ಸಿಆರ್‌ಪಿಎಫ್‌ ಕಮಾಂಡೋಗಳ ತಂಡವು ದಲೈ ಲಾಮಾಗೆ ರಕ್ಷಣೆ ನೀಡಲಿದೆ. ಅಲ್ಲದೇ ಮಣಿಪುರದ ಬಿಜೆಪಿ ನಾಯಕ ಸಂಬಿತ್ ಪಾತ್ರ ಅವರಿಗೂ ʻಜೆಡ್‌ʼ ಶ್ರೇಣಿಯ ಭದ್ರತೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕೈಕಾಲು ಕಟ್ಟಿ, ಕಂಪಾಸ್‌ನಿಂದ ಚುಚ್ಚಿ ಚಿತ್ರಹಿಂಸೆ – ನರ್ಸಿಂಗ್‌ ಕಾಲೇಜಿನಲ್ಲಿ ರ‍್ಯಾಗಿಂಗ್‌ ಕ್ರೂರತೆಯ ವಿಡಿಯೋ ವೈರಲ್‌

  • ರಾಜ್ಯಕ್ಕೆ ಕಳೆದ ಬಾರಿಗಿಂತ ಶೇ.10ರಷ್ಟು ಹೆಚ್ಚು ತೆರಿಗೆ ಹಂಚಿಕೆ: ಜೋಶಿ

    ರಾಜ್ಯಕ್ಕೆ ಕಳೆದ ಬಾರಿಗಿಂತ ಶೇ.10ರಷ್ಟು ಹೆಚ್ಚು ತೆರಿಗೆ ಹಂಚಿಕೆ: ಜೋಶಿ

    – 51,876 ಕೋಟಿ ತೆರಿಗೆ ಹಂಚಿದ ಕೇಂದ್ರ

    ನವದೆಹಲಿ: ಕೇಂದ್ರ ಸರ್ಕಾರ (Union Government) ಕರ್ನಾಟಕಕ್ಕೆ (Karnataka) ಕಳೆದ ವರ್ಷಕ್ಕಿಂತ 10%ರಷ್ಟು ಹೆಚ್ಚಿಗೆ ತೆರಿಗೆ ಹಂಚಿಕೆ ಮಾಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಈ ಬಗ್ಗೆ ಅಗತ್ಯ ಮಾಹಿತಿ ಹಂಚಿಕೊಂಡಿರುವ ಸಚಿವರು, 2025-26ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕಕ್ಕೆ 51,876 ಕೋಟಿ ರೂ. ತೆರಿಗೆ ಹಂಚಿಕೆ ಮಾಡಿದೆ ಎಂದಿದ್ದಾರೆ.

    2014-15ರಲ್ಲಿ 24,789.78 ಕೋಟಿ ರೂ. ತೆರಿಗೆ ಹಂಚಿಕೆ ಆಗಿದ್ದರೆ, 2025-2 6ರ ಆರ್ಥಿಕ ವರ್ಷ ಇದಕ್ಕಿಂತ 108% ರಷ್ಟು (5,1876 ಕೋಟಿ ರೂ.)ಅಧಿಕ ತೆರಿಗೆ ಹಂಚಿಕೆ ಮೊತ್ತವನ್ನು ಕರ್ನಾಟಕಕ್ಕೆ ಭರಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪ್ರಧಾನಮಂತ್ರಿ ನರೇಂದ್ರ ‌ಮೋದಿ (PM Narendra Modi) ಅವರ ನಾಯಕತ್ವದಲ್ಲಿ ಕರ್ನಾಟಕ ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದೆ. ರಾಜ್ಯಕ್ಕೆ ಅತ್ಯಧಿಕ ರೈಲ್ವೆ ಯೋಜನೆಗಳ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಡವರ ಮನೆಯಲ್ಲಿ ಫೋಟೋಶೂಟ್‌ ಮಾಡಿಸಿ ಮನರಂಜನೆ ತೆಗೆದುಕೊಳ್ತಾರೆ: ರಾಹುಲ್‌ಗೆ ಮೋದಿ ಕುಟುಕು

    15ನೇ ಹಣಕಾಸು ಆಯೋಗದಿಂದ ಕರ್ನಾಟಕದ ತೆರಿಗೆ ಪಾಲು 3.647% ರಷ್ಟು ಎಂದು ನಿಗದಿಪಡಿಸಲಾಗಿದೆ. 2004-2014ರ ದಶಕದ ಅವಧಿಯಲ್ಲಿ ರಾಜ್ಯಕ್ಕೆ ಕೇವಲ 81,795 ಕೋಟಿ ರೂ. ನೀಡಲಾಗಿತ್ತು. 2014-2024ರ‌‌ ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬರೋಬ್ಬರಿ 2,85,452 ಕೋಟಿ ರೂ. ತೆರಿಗೆ ಹಂಚಿಕೆ ಮಾಡಿದೆ ಎಂದು ಅಂಕಿ ಅಂಶ ಸಹಿತ ವಿವರಣೆ ನೀಡಿದ್ದಾರೆ.

    15 ರೈಲ್ವೆ ಯೋಜನೆ: ಕೇಂದ್ರ ಸರ್ಕಾರ ರಾಜ್ಯಕ್ಕೆ ಬರೊಬ್ಬರಿ 7,564 ಕೋಟಿ ರೂ. ವೆಚ್ಚದಲ್ಲಿ 15 ನಿರ್ಣಾಯಕ ರೈಲ್ವೆ ಯೋಜನೆಗಳನ್ನು ನೀಡಿದೆ. ಇದು ರಾಜ್ಯಕ್ಕೆ ಅತ್ಯಧಿಕ ರೈಲ್ವೆ ಯೋಜನೆಗಳ ಕೊಡುಗೆಯಾಗಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

    ಸ್ಟಾರ್ಟ್ ಅಪ್ ಗೆ ತೆರಿಗೆ ವಿನಾಯಿತಿ: ಸ್ಟಾರ್ಟ್‌ ಅಪ್‌ಗಳಿಗೆ 10 ವರ್ಷಗಳ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿದ್ದು, (ಏಪ್ರಿಲ್ 2030 ರವರೆಗೆ ಅನ್ವಯಿಸಲಿದೆ) ಜತೆಗೆ 10,000 ಕೋಟಿ ರೂ. ಅನುದಾನ ಸಹ ನೀಡಲಾಗಿದೆ ಎಂದಿದ್ದಾರೆ.

    ಕರ್ನಾಟಕದ ಬೆಳವಣಿಗೆಗೆ ಈ ಬಲಿಷ್ಠ ಸುಧಾರಣೆ ಕ್ರಮಗಳು ಮತ್ತು ದೊಡ್ಡ ಅವಕಾಶಗಳು‌ ಉಜ್ವಲ ಭವಿಷ್ಯ ರೂಪಿಸಲಿವೆ. ಇದರೊಂದಿಗೆ ಕರ್ನಾಟಕ ನಾವೀನ್ಯತೆಯ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಜೋಶಿ ಆಶಿಸಿದ್ದಾರೆ.

  • ಯೋಧರ ಪಿಂಚಣಿ ಬಾಕಿ ಉಳಿಸಿಕೊಂಡ ಕೇಂದ್ರ ಸರ್ಕಾರ – ಪಂಜಾಬ್ ಹೈಕೋರ್ಟ್ ಕೆಂಡಾಮಂಡಲ

    ಯೋಧರ ಪಿಂಚಣಿ ಬಾಕಿ ಉಳಿಸಿಕೊಂಡ ಕೇಂದ್ರ ಸರ್ಕಾರ – ಪಂಜಾಬ್ ಹೈಕೋರ್ಟ್ ಕೆಂಡಾಮಂಡಲ

    ಚಂಡೀಗಢ: ಭಾರತ-ಪಾಕಿಸ್ತಾನ ನಡುವೆ 1965ರಲ್ಲಿ ನಡೆದಿದ್ದ ಯುದ್ಧದಲ್ಲಿ ಹೋರಾಡಿ ವೀರ ಚಕ್ರ ಪುರಸ್ಕಾರಕ್ಕೆ ಭಾಜನರಾಗಿರುವ ಯೋಧರ ಪಿಂಚಣಿ ಬಾಕಿಯನ್ನು ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಆದೇಶದಂತೆ ಒಂದು ತಿಂಗಳೊಳಗೆ ಪಾವತಿಸಬೇಕು. ಇಲ್ಲದೇ ಹೋದರೆ ಶೇ.15ರಷ್ಟು ಬಡ್ಡಿ ತೆರಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಎಚ್ಚರಿಕೆ ನೀಡಿದೆ.

    ಈ ಸಂಬಂಧ 2018 ರಲ್ಲಿಯೇ ತೀರ್ಪು ನೀಡಲಾಗಿದ್ದರೂ 7 ವರ್ಷಗಳಿಂದ ಬಾಕಿ ಮೊತ್ತ ಪಾವತಿಸದೇ ಇರುವ ಕೇಂದ್ರ ಸರ್ಕಾರದ ಧೋರಣೆ ಬಗ್ಗೆ ನ್ಯಾ. ಸಂಜೀವ್ ಪ್ರಕಾಶ್ ಶರ್ಮಾ ಮತ್ತು ಮೀನಾಕ್ಷಿ ಐ ಮೆಹ್ತಾ ಅವರಿದ್ದ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಇದನ್ನೂ ಓದಿ: Microfinance Bill | ರಾಜ್ಯಪಾಲರ ಅಂಕಿತಕ್ಕೆ ಸುಗ್ರೀವಾಜ್ಞೆ ಬಿಲ್ – ಅನಧೀಕೃತವಾಗಿ ಕೊಟ್ಟಿದ್ದರೆ ಸಾಲ ಮನ್ನಾ

    ಪುರುಷೋತ್ತಮ್ ದಾಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಆಧರಿಸಿ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ಪದೇ ಪದೇ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಕೂಡ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್‌ನವರು ರೌಡಿಗಳನ್ನಿಟ್ಟುಕೊಂಡು ಹಣ ವಸೂಲಿ ಮಾಡ್ತಿದ್ದಾರೆ: ಡಿಕೆಶಿ

    ಇದು ಎಎಫ್‌ಟಿ ಆದೇಶಗಳನ್ನು ಪ್ರಶ್ನಿಸಿ 226ನೇ ವಿಧಿಯಡಿ ಅರ್ಜಿಗಳನ್ನು ಆಲಿಸಲು ಹೈಕೋರ್ಟ್‌ಗಳಿಗೆ ಅಧಿಕಾರವಿಲ್ಲ ಎಂದು ತಿಳಿಸಿ ಕೇಂದ್ರ ಸರ್ಕಾರ ಮತ್ತು ಮೇಜರ್ ಜನರಲ್ ಶ್ರೀಕಾಂತ್ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ 2015ರಲ್ಲಿ ನೀಡಿದ್ದ ತೀರ್ಪನ್ನು ಆ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.

    ಭಾರತ- ಪಾಕಿಸ್ತಾನ ನಡುವೆ 1965ರಲ್ಲಿ ನಡೆದಿದ್ದ ಯುದ್ಧದ ವೇಳೆ ಅಂಗವೈಕಲ್ಯಕ್ಕೆ ತುತ್ತಾದ ಪ್ರತಿಷ್ಠಿತ ʻವೀರ ಚಕ್ರʼ ಪುರಸ್ಕಾರಕ್ಕೆ ಭಾಜನರಾದ ನಿವೃತ್ತ ಸೇನಾ ಅಧಿಕಾರಿ ಕ್ಯಾಪ್ಟನ್ ರೀತ್ ಎಂ.ಪಿ ಸಿಂಗ್ ಹಾಗೂ ಇನ್ನಿತರ ಯೋಧರಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಅವರು ಅರ್ಹರಾಗಿದ್ದ ಶೇ.100ರಷ್ಟು ಪಿಂಚಣಿ ಬದಲಿಗೆ ಕೇವಲ ಶೇ.80ರಷ್ಟು ಪಿಂಚಣಿ ನೀಡಲು ನಿರ್ಧರಿಸಲಾಗಿತ್ತು. ಆದರೆ 2014 ರಲ್ಲಿ ಭಾರತ ಒಕ್ಕೂಟ ಸರ್ಕಾರ ಮತ್ತು ರಾಮ್ ಅವತಾರ್ ಪ್ರಕರಣದಲ್ಲಿ ಇಂತಹ ಘಟನೆಗಳಲ್ಲಿ ಅಂಗವೈಕಲ್ಯಕ್ಕೆ ತುತ್ತಾದ ಯೋಧರಿಗೆ ಶೇ.100ರಷ್ಟು ಪಿಂಚಣಿ ಒದಗಿಸಬೇಕು ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ಹಿನ್ನೆಲೆಯಲ್ಲಿ ಪೂರ್ವಾನ್ವಯವಾಗುವಂತೆ ತಮ್ಮ ಪಿಂಚಣಿಯನ್ನೂ ಪರಿಷ್ಕರಿಸಬೇಕು ಎಂದು ರೀತ್ ಸಿಂಗ್ ಕೋರಿದ್ದರು.

  • ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ಅಗತ್ಯ – ಹೆಚ್‌ಡಿಡಿ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ

    ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ಅಗತ್ಯ – ಹೆಚ್‌ಡಿಡಿ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ

    – ಹೊಸೂರಿನಲ್ಲಿ ವಿಮಾನ ನಿಲ್ದಾಣಕ್ಕೆ ತಮಿಳುನಾಡು ಆಗ್ರಹ

    ನವದೆಹಲಿ: ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನಕ್ಕೆ ಬೆಂಗಳೂರು ನಗರ ಜಾಗತಿಕ ಹಬ್ ಆಗಿದ್ದು, ಸುಲಭ ಸಂಪರ್ಕಕ್ಕೆ ಮತ್ತೊಂದು ವಿಮಾನ ನಿಲ್ದಾಣ (Airport) ನಗರಕ್ಕೆ ಅಗತ್ಯವಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Devegowda) ಪ್ರತಿಪಾದಿಸಿದರು.

    ರಾಜ್ಯಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿಗಳು, ಕರ್ನಾಟಕ ಸರ್ಕಾರ ಈಗಾಗಲೇ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಈಗಾಗಲೇ ನಾಗರಿಕ ವಿಮಾನಯಾನ ಸಚಿವರನ್ನು ಸಂಪರ್ಕಿಸಿ ಈ ಬಗ್ಗೆ ಚರ್ಚೆ ನಡೆಸಿದೆ. ಬೆಂಗಳೂರು ನಗರಕ್ಕೆ, ಅದರಲ್ಲಿಯೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮತ್ತೊಂದು ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ಒತ್ತಿ ಹೇಳಿದರು.

    ಈ ನಿಟ್ಟಿನಲ್ಲಿ ಕೇಂದ್ರವು ಕರ್ನಾಟಕದಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ನಿರ್ಮಿಸುವ ಬಗ್ಗೆ ಗಮನ ಹರಿಸಬೇಕು. ಕರ್ನಾಟಕಕ್ಕೆ ಸಂಬಂಧಿಸಿ ನಾನು ಮಂಜೂರು ಮಾಡಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈಗ ಪ್ರಯಾಣಿಕರ ದಟ್ಟಣೆಯಿಂದ ವಿಪರೀತ ಒತ್ತಡ ಎದುರಿಸುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಇನ್ನೂ ಒಂದು ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ಅವರು ಹೇಳಿದರು.

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಅಗತ್ಯವಿದೆ ಎಂಬ ಮಾಜಿ ಪ್ರಧಾನಿಗಳ ಮಾತಿಗೆ ವಿಮಾನಯಾನ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಸಮ್ಮತಿ ಸೂಚಿಸಿದರು.

    ಮಾಜಿ ಪ್ರಧಾನಿಗಳ ಮಾತಿಗೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ ಕೇಂದ್ರದ ನಾಗರಿಕ ವಿಮಾನಯಾನ ಖಾತೆ ಸಚಿವ ರಾಮಮೋಹನ್ ನಾಯ್ಡು ಅವರು, ಬೆಂಗಳೂರು ವಿಮಾನ ನಿಲ್ದಾಣವು ದಿನದಿಂದ ದಿನಕ್ಕೆ ಬಹಳಷ್ಟು ಪ್ರಯಾಣಿಕರ ದಟ್ಟಣೆಯನ್ನು ಎದುರಿಸುತ್ತಿದೆ. ಇದನ್ನು ನಾವೆಲ್ಲರೂ ಒಪ್ಪುತ್ತೇವೆ. ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಬಯಸಿದೆ. ಅದಕ್ಕೆ ಸೂಕ್ತ ಸ್ಥಳ ಗುರುತಿಸಿ, ಕೇಂದ್ರ ಸರ್ಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಿದರೆ ಆ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತವೆ ಎಂದು ಭರವಸೆ ನೀಡಿದರು.

    ಹೊಸೂರಿನಲ್ಲಿ ವಿಮಾನ ನಿಲ್ದಾಣ:
    ಬೆಂಗಳೂರು ವಿಮಾನ ನಿಲ್ದಾಣಕ್ಕೆ ಜನದಟ್ಟಣೆಯ ಹೆಚ್ಚಾಗಿದೆ, ಹೀಗಾಗಿ ತಮಿಳುನಾಡಿನ ಹೊಸೂರಿನಲ್ಲಿ ವಿಮಾನ ನಿಲ್ದಾಣ ಒತ್ತಡ ಬರುತ್ತಿದೆ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ಎಐಡಿಎಂಕೆ ಸಂಸದ ತಂಬಿದೊರೈ ಆಗ್ರಹಿಸಿದರು.

    ವಿಮಾನ ನಿಲ್ದಾಣದ ಚರ್ಚೆಯಲ್ಲಿ ಮಾತನಾಡಿದ ಅವರು, ದೆಹಲಿ ನೊಯ್ಡಾ ರೀತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬಹುದು, 25 ವರ್ಷಗಳೊಗೆ ಮತ್ತೊಂದು ವಿಮಾನ ನಿಲ್ದಾಣ ಮಾಡಬಾರದು ಎನ್ನುವ ನಿಯಮ ಸಡಿಲಗೊಳಿಸಬೇಕು, ಹೊಸೂರಿನಲ್ಲಿ ವಿಮಾನ ನಿಲ್ದಾಣಕ್ಕೆ ತಮಿಳುನಾಡು ಸರ್ಕಾರ ಕೂಡಾ ಶಿಫಾರಸು ಮಾಡಿದೆ ಎಂದರು.

    ತಂಬಿದೊರೈ ಪ್ರಶ್ನೆಗೆ ಉತ್ತರಿಸಿದ ವಿಮಾನಯಾನ ಸಚಿವ ರಾಮಮೋಹನಗ ನಾಯ್ಡು, ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣ ಆಗಬೇಕು ಎನ್ನುವ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಕೂತು ಈ ಸಮಸ್ಯೆ ಬಗೆಹರಿಸಬೇಕು, ಹೊಸ ವಿಮಾನ ನಿಲ್ದಾಣ ಮಾಡುವುದು ನಮ್ಮ ಉದ್ದೇಶವಿದೆ ಆದರೆ 150km ವ್ಯಾಪ್ತಿಯಲ್ಲಿ ಮತ್ತೊಂದು ನಿಲ್ದಾಣ ಮಾಡಬಾರದು ಎನ್ನುವ ನಿಯಮ ಇದೆ ಹೀಗಾಗಿ ಕೂತು ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಬೇಕಿದೆ ಎಂದರು.

  • ಕೇಂದ್ರ ಸರ್ಕಾರದ ಬಜೆಟ್ ದೊಡ್ಡ ದೊಡ್ಡ ಘೋಷಣೆಗಳಿಗಷ್ಟೇ ಸೀಮಿತ: ಪ್ರಿಯಾಂಕ್‌ ಖರ್ಗೆ

    ಕೇಂದ್ರ ಸರ್ಕಾರದ ಬಜೆಟ್ ದೊಡ್ಡ ದೊಡ್ಡ ಘೋಷಣೆಗಳಿಗಷ್ಟೇ ಸೀಮಿತ: ಪ್ರಿಯಾಂಕ್‌ ಖರ್ಗೆ

    ಕಲಬುರಗಿ: ಕೇಂದ್ರ ಸರ್ಕಾರದ (Union Government) ಇಂತಹ 10 ಬಜೆಟ್ ನೋಡಿದ್ದೇವೆ. ಎಲ್ಲ ಬಜೆಟ್‌ನಲ್ಲಿಯೂ ಘೋಷಣೆಗಳು ಮಾತ್ರವೇ ಇರುತ್ತವೆಯೇ ಹೊರತು, ಅದರಲ್ಲಿ ಜನರಿಗೆ ಗಣನೀಯವಾಗಿ ಅನುಕೂಲ ಆಗುವಂತಹದ್ದು ಇಲ್ಲ. ಕಾರ್ಮಿಕರು, ಮಹಿಳೆಯರು, ಯುವಕರಿಗೆ, ಆದಾಯ ತೆರಿಗೆ ಪಾವತಿದಾರರು, ಎಸ್‌ಎಂಇ, ಎಂಎಸ್‌ಎಂಇ, ನವೋದ್ಯಮಿಗಳಿಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ಸ್ಲ್ಯಾಬ್ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಜಿಎಸ್‌ಟಿ (GST) ಬಗ್ಗೆ, ಆದಾಯ ತೆರಿಗೆ ಬಗ್ಗೆಯೂ ಹೀಗೆ ಮಾತನಾಡಿದ್ದರು. ಈವರೆಗೂ ಅವರು ಟ್ಯಾಕ್ಸೇಷನ್ ಪದ್ದತಿಯನ್ನು ಸರಿಯಾಗಿ ಅಳವಡಿಸಿಕೊಂಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ರಕ್ತಾಭಿಷೇಕ ನಡೆದಿದ್ದು ಬಲಪಡಿಸೋದಕ್ಕಲ್ಲ, ನನ್ನ ವಶೀಕರಣಕ್ಕೆ – ಸ್ನೇಹಮಯಿ ಕೃಷ್ಣ ದೂರು

    ಕೇಂದ್ರದ ಯಾವ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾಗಿದೆ? ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯಲ್ಲಿ 9 ವರ್ಷದ ಹಿಂದೆ ನೆರವು ಘೋಷಣೆ ಮಾಡಿದ್ದರು. ಈವರೆಗೂ ಕೊಟ್ಟಿದ್ದು 454 ಕೋಟಿ ರೂ. ಅಷ್ಟೆ. ಅವರು ಅಲಂಕಾರಿಕ ಪದಗಳನ್ನ ಬಳಸಿ ಘೋಷಣೆಗಳನ್ನು ಮಾಡುವುದರಲ್ಲಿ ಮುಂದಿದ್ದಾರೆ. ಆದರೆ ತಳಮಟ್ಟದಿಂದ ಅನುಷ್ಠಾನ ಶೂನ್ಯ ಎಂದು ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: ಅನಗತ್ಯ ವೆಚ್ಚ, ಲೂಟಿಗೆ ಕಡಿವಾಣ ಹಾಕಿ ಅತ್ಯಧಿಕ ಗಾತ್ರದ ಬಜೆಟ್‌ ಮಂಡಿಸಿದ ಕೇಂದ್ರ ಸರ್ಕಾರ: ಆರ್‌.ಅಶೋಕ್

    ಕೇಂದ್ರದ ಬಳಿ ಬಳಿ ದುಡ್ಡಿಲ್ಲ. ಕರ್ನಾಟಕದಲ್ಲಿ ಜಲಜೀವನ್ ಮಿಷನ್‌ಗೆ 3,500 ಕೋಟಿ ರೂ. ಕೊಡಬೇಕು. ಆದ್ರೆ ಕೊಟ್ಟಿರೋದು 500 ಕೋಟಿ ರೂ. ಮಾತ್ರ. ನಾವು ಕೇಳಿದಾಗ, ನಮ್ಮ ಬಳಿ ದುಡ್ಡಿಲ್ಲ ಎನ್ನುತ್ತಾರೆ. ಕೆಲಸ ನಿಲ್ಲಬಾರದು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಜವಾಬ್ದಾರಿಯನ್ನು ರಾಜ್ಯ ಸರ್ಕಾರವೇ ನಿಭಾಯಿಸುತ್ತಿದೆ. ಉಳಿದ 3,000 ಕೋಟಿ ಮೊತ್ತವನ್ನು ನಾವೇ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರದ ಬಜೆಟ್ ದೊಡ್ಡ ದೊಡ್ಡ ಘೋಷಣೆಗಳಿಗೆ ಸೀಮಿತವಾಗಿದೆ. ಆದರೆ ಅವುಗಳ ಪರಿಪೂರ್ಣ ಅನುಷ್ಠಾನ ಎಂದಿಗೂ ನಡೆದಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

  • ಕೇಂದ್ರ ಸರ್ಕಾರ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಅನುದಾನ ಕೊಡಲಿ ಸಾಕು – ಕೃಷ್ಣಬೈರೇಗೌಡ

    ಕೇಂದ್ರ ಸರ್ಕಾರ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಅನುದಾನ ಕೊಡಲಿ ಸಾಕು – ಕೃಷ್ಣಬೈರೇಗೌಡ

    ಬೆಂಗಳೂರು: ಕೇಂದ್ರ ಸರ್ಕಾರದ ಹಿಂದಿನ ಬಜೆಟ್‌ನಲ್ಲಿ ರಾಜ್ಯಕ್ಕೆ ಘೋಷಿಸಿರುವ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byregowda) ತಿಳಿಸಿದ್ದಾರೆ.

    ಶನಿವಾರ ಮಂಡನೆ ಆಗಲಿರುವ ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ರಾಜ್ಯದ ಬೇಡಿಕೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ನಮ್ಮ ಬೇಡಿಕೆಗಳನ್ನು ಲಿಖಿತವಾಗಿ ಮತ್ತು ಮನವಿ ರೂಪದಲ್ಲಿ ಸಲ್ಲಿಸಿದ್ದೇವೆ. ಈ ಹಿಂದಿನ ವರ್ಷಗಳಲ್ಲಿ ಕೇಂದ್ರ, ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡಿದೆ. ಆದರೂ ಜನರ ಪರವಾಗಿ ನಮ್ಮ ಹಕ್ಕು ಪ್ರತಿಪಾದನೆ ಮಾಡುವ ಕೆಲಸ ಮಾಡಿದ್ದೇವೆ. ನಮಗೆ ಹೊಸಸ ನುದಾನ ಕೊಡದೇ ಹೋದರೂ ಹಿಂದಿನ ವರ್ಷಗಳಲ್ಲಿ ಘೋಷಣೆ ಮಾಡಿರುವ ಅನುದಾನ ಕೊಟ್ಟರೆ ಸಾಕಾಗಿದೆ ಎಂದರು.ಇದನ್ನೂ ಓದಿ: ಫಿಲ್ಮಿ ಸ್ಟೈಲ್‌ ರೌಡಿಗಳಂತೆ ಯುವತಿಯರಿದ್ದ ಕಾರನ್ನ ಬೆನ್ನಟ್ಟಿದ್ದ ಯುವಕರು – ವಿಡಿಯೋ ವೈರಲ್‌

    ರಾಜ್ಯಕ್ಕೆ ಹಿಂದಿನ ಹಣಕಾಸು ಆಯೋಗ 11,495 ಸಾವಿರ ಕೋಟಿ ರೂ. ವಿಶೇಷ ಅನುದಾನ ಕೊಡಲು ಶಿಫಾರಸು ಮಾಡಿತ್ತು. ಅದನ್ನ ಕೊಡಲಿಲ್ಲ. ಈ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ 5 ಸಾವಿರ ಕೋಟಿ ರೂ. ಹಣ ಕೊಡಬೇಕು. ಮೇಕೆದಾಟು ಯೋಜನೆ, ಕಳಸಾ-ಬಂಡೂರಿ ಯೋಜನೆಗೆ ಅನುಮತಿ ಕೊಡಬೇಕು. ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗ, ಮಲೆನಾಡು ಕರ್ನಾಟಕ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಕೊಡಬೇಕು. ಪಿಂಚಣಿ ಯೋಜನೆಗೆ ಕೇಂದ್ರ ಕೊಡುವ ಮೊತ್ತವನ್ನು ಹೆಚ್ಚಳ ಮಾಡಲು ಮನವಿ ಮಾಡ್ತಿದ್ದೇವೆ. ಪ್ರಧಾನಿಮಂತ್ರಿ ಆವಾಸ್ ಯೋಜನಡಿ ಮನೆ ಕಟ್ಟಿಕೊಡಲು ಕೇಂದ್ರ ಕೊಡುವ ಹಣವನ್ನು ಹೆಚ್ಚಳ ಮಾಡಬೇಕು. ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಬಿಸಿಯೂಟ ಮಾರುವವರಿಗೆ ಕೇಂದ್ರದ ಗೌರವ ಧನ ಹೆಚ್ಚಳ ಮಾಡಬೇಕು ಎಂದು ಒತ್ತಾಯ ಮಾಡಿದ್ದೇವೆ ಎದು ಹೇಳಿದರು.

    ಇನ್ನೂ ಇದೇ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಕುಟುಂಬದವರಿಂದ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಪ್ರಕರಣದ ತನಿಖೆಗೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಹೈಕೋರ್ಟ್ ಸರ್ಕಾರಿ ಜಮೀನು ಒತ್ತುವರಿ ಆಗಿರುವ ಬಗ್ಗೆ ತೀಕ್ಷ್ಣವಾಗಿ ಸೂಚನೆಯನ್ನು ಕೊಟ್ಟಿದೆ. ಫೆಬ್ರವರಿ 21ರ ಒಳಗೆ ತನಿಖಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸುತ್ತೇನೆ. ತನಿಖೆಗೆ 3 ತಿಂಗಳು ಸಮಯ ಕೇಳಿದ್ದೆವು. ಆದರೆ ಕೋರ್ಟ್ ಸಮಯ ಕೊಡಲಿಲ್ಲ. ಹೀಗಾಗಿ ಕೋರ್ಟ್ ಕೊಟ್ಟಿರುವ ಅವಧಿಯಲ್ಲಿ ತನಿಖೆ ಮಾಡಿ ವರದಿ ಕೋರ್ಟ್‌ಗೆ ಸಲ್ಲಿಕೆ ಮಾಡ್ತೀವಿ ಎಂದು ತಿಳಿಸಿದರು.ಇದನ್ನೂ ಓದಿ: ಅತ್ಯಾಚಾರ ಪ್ರಕರಣ; ಕಾಂಗ್ರೆಸ್‌ ಸಂಸದ ರಾಕೇಶ್‌ ರಾಥೋಡ್‌ ಬಂಧನ