Tag: ಕೇಂದ್ರ ಸರ್ಕಾರ

  • ಅಂಚೆ ಕಚೇರಿಯ ಠೇವಣಿಗಳಿಗೂ ಆಧಾರ್ ಕಡ್ಡಾಯ

    ಅಂಚೆ ಕಚೇರಿಯ ಠೇವಣಿಗಳಿಗೂ ಆಧಾರ್ ಕಡ್ಡಾಯ

    ನವದೆಹಲಿ: ಈಗಾಗಲೇ ಸರ್ಕಾರ ಪಾನ್, ಮೊಬೈಲ್, ಬ್ಯಾಂಕ್ ಹಾಗೂ ಸರ್ಕಾರಿ ದಾಖಲಾತಿಗಳಿಗೆ ಆಧಾರ್ ಅನ್ನು ಕಡ್ಡಾಯಗೊಳಿಸಿ ಅದಕ್ಕೆ ಸಂಬಂಧಿಸಿದಂತೆ ಗಡುವನ್ನು ನೀಡಿದ್ದು, ಈಗ ಅಂಚೆ ಕಚೇರಿಯಲ್ಲಿರುವ ಉಳಿತಾಯ ಖಾತೆಗಳಿಗೂ ಆಧಾರ್ ಕಡ್ಡಾಯಗೊಳಿಸಿದೆ.

    ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆ (ಎನ್‍ಎಸ್‍ಸಿಎಸ್) ಹಾಗೂ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಮತ್ತು ಅಂಚೆ ಕಚೇರಿ ಯಲ್ಲಿರುವ ಎಲ್ಲಾ ಠೇವಣಿಗಳಿಗೂ ಆಧಾರ್ ಕಡ್ಡಾಯವಾಗಿ ಇರಲೇಬೇಕು ಎಂದು ಆದೇಶ ಹೊರಡಿಸಿದೆ.

    ಅಂಚೆಯಲ್ಲಿರುವ ಉಳಿತಾಯ ಖಾತೆ, ಪಿಪಿಎಫ್, ಎನ್‍ಎಸ್‍ಸಿಎಸ್, ಕೆವಿಪಿಗಳಿಗೆ ಡಿಸೆಂಬರ್ 31 ರ ಒಳಗಡೆ ಆಧಾರ್ ಜೋಡಣೆ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

    ಹಣಕಾಸು ಸಚಿವಾಲಯ ಎಲ್ಲಾ ಅಂಚೆ ಠೇವಣಿ ಖಾತೆಗಳಿಗೆ ಆಧಾರ್ ನಂಬರ್ ನೀಡಬೇಕು ಎಂದು ಸೆ. 29 ಗೆಜೆಟೆಡ್ ನೋಟಿಫಿಕೇಶನ್ ಹೊರಡಿಸಿದ್ದು, ಈ ಯೋಜನೆಗಳಿಗೆ ಹೊಸದಾಗಿ ಸೇರುವವರಿಗೆ ಮಾತ್ರವಲ್ಲದೆ ಈಗಾಗಲೇ ಖಾತೆಗಳನ್ನು ಹೊಂದಿರುವಂತಹ ಗ್ರಾಹಕರೂ ಕೂಡ ಸಮೀಪದ ಅಂಚೆ ಕಚೇರಿಗಳಿಗೆ ಹೋಗಿ ಡಿ. 31 ರೊಳಗೆ ಆಧಾರ್ ನಂಬರ್ ಜೋಡಿಸಬೇಕೆಂದು ತಿಳಿಸಿದೆ.

    ಒಂದು ವೇಳೆ ಆಧಾರ್ ಹೊಂದಿಲ್ಲದವರು ಅಥವಾ ಆಧಾರ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿರುವವರು ತಮಗೆ ನೀಡಿರುವ ಆಧಾರ್ ಅರ್ಜಿಯ ನಕಲು ಪ್ರತಿಯನ್ನು ಸಲ್ಲಿಸಬೇಕು ಎಂದು ಹೇಳಿದೆ.

  • ಗಲ್ಲುಶಿಕ್ಷೆ ಬದಲು ಬೇರೆ ವಿಧಾನದ ಮೂಲಕ ಶಿಕ್ಷೆ ನೀಡಬಹುದೇ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

    ಗಲ್ಲುಶಿಕ್ಷೆ ಬದಲು ಬೇರೆ ವಿಧಾನದ ಮೂಲಕ ಶಿಕ್ಷೆ ನೀಡಬಹುದೇ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

    ನವದೆಹಲಿ: ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯ ಬದಲು ಬೇರೆ ಯಾವುದಾದರೂ ಮಾರ್ಗದ ಮೂಲಕ ಶಿಕ್ಷೆ ನೀಡಲು ಸಾಧ್ಯವೇ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

    ಮರಣದಂಡನೆಗೆ ಒಳಗಾಗಿರುವ ಅಪರಾಧಿಗಳಿಗೆ ಈಗಿರುವ ಮಾರ್ಗದ ಬದಲು ವೈಜ್ಞಾನಿಕವಾಗಿ ಬೇರೆ ಮಾರ್ಗಗಳನ್ನು ಬಳಸುವ ಸಾಧ್ಯತೆಗಳ ಕುರಿತು ಮೂರು ತಿಂಗಳ ಒಳಗೆ ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಶುಕ್ರವಾರ ನೋಟಿಸ್ ನೀಡಿದೆ.

    ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎಎಮ್ ಖನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.

    ಭಾರತದ ಸಂವಿಧಾನವು ಪ್ರಜೆಗಳ ಕುರಿತು ಸಹಾನುಭೂತಿಯುಳ್ಳದ್ದಾಗಿದ್ದು, ಪ್ರತಿಯೊಬ್ಬರ ಜೀವನದ ಪವಿತ್ರತೆಯನ್ನು ಗೌರವಿಸುತ್ತದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗಲ್ಲು ಶಿಕ್ಷೆಗೆ ಗುರಿಯಾದವರಿಗೆ ಬೇರೆ ವಿಧಾನಗಳ ಮೂಲಕ ಶಿಕ್ಷೆ ನೀಡುವ ಸಾಧ್ಯತೆಗಳ ಕುರಿತು ಸಂವಿಧಾನದಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ಯೋಚಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.

    ವಕೀಲ ರಿಷಿ ಮಲ್ಹೋತ್ರಾ ರವರು ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯ ವಿಚಾರಣೆ(ಪಿಐಎಲ್) ವೇಳೆ ಪೀಠ ಕೇಂದ್ರ ನೋಟಿಸ್ ಜಾರಿ ಮಾಡಿ, ಈಗ ವಿಜ್ಞಾನ ಸಾಕಷ್ಟು ಬದಲಾಗಿದೆ. ಹೀಗಾಗಿ ಕಾನೂನು ಬದಲಾವಣೆ ಮಾಡಲು ಸಾಧ್ಯವಿದೆಯೇ ಎಂದು ಕೇಳಿದೆ.

    ಭಾರತೀಯ ಸಂವಿಧಾನದ 21ನೇ ಪರಿಚ್ಛೇದದ ಪ್ರಕಾರ ಬದುಕುವ ಹಕ್ಕನ್ನು ಕಲ್ಪಿಸಲಾಗಿದೆ. ಈ ಹಕ್ಕಿನ ಪ್ರಕಾರ ನೋವಾಗದಂತೆ ಅಪರಾಧಿ ಸಾಯಬೇಕೆಂದು ಹೇಳುತ್ತದೆ. ಆದರೆ ಭಾರತೀಯ ದಂಡ ಸಂಹಿತೆಯ ಮರಣದಂಡನೆ ಶಿಕ್ಷೆ ಯನ್ನು ಅನುಭವಿಸುವ ವ್ಯಕ್ತಿ ನೋವಿನಿಂದ ಮೃತಪಡುತ್ತಾನೆ. ಹೀಗಾಗಿ ಮರಣ ದಂಡನೆ ಶಿಕ್ಷೆಯ ಸಾವಿಂಧಾನಿಕ ಸಿಂಧುತ್ವವನ್ನು ಅರ್ಜಿದಾರರು ಪ್ರಶ್ನಿಸಿ ಪಿಐಎಲ್‍ನಲ್ಲಿ ಕಾನೂನು ಬದಲಾವಣೆ ಮಾಡುವಂತೆ ಮನವಿ ಮಾಡಿದ್ದರು.

  • ನಾವು ಅಬಕಾರಿ ಸುಂಕ ಇಳಿಸಿದ್ದೇವೆ, ನೀವು ವ್ಯಾಟ್ ಇಳಿಸಿ: ಧರ್ಮೇಂದ್ರ ಪ್ರಧಾನ್

    ನಾವು ಅಬಕಾರಿ ಸುಂಕ ಇಳಿಸಿದ್ದೇವೆ, ನೀವು ವ್ಯಾಟ್ ಇಳಿಸಿ: ಧರ್ಮೇಂದ್ರ ಪ್ರಧಾನ್

    ಬೆಂಗಳೂರು: ಮಂಗಳವಾರವಷ್ಟೇ ಪ್ರತಿ ಲೀಟರ್ ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು 2 ರೂ. ಕಡಿತಗೊಳಿಸಿದ್ದು ಕೇಂದ್ರ ಸರ್ಕಾರ ಇದೀಗ ರಾಜ್ಯ ಸರ್ಕಾರಗಳಿಗೆ ಮೌಲ್ಯವರ್ಧಿತ ತೆರಿಗೆ ಕಡಿತಗೊಳಿಸುವಂತೆ ಹೇಳಿದೆ.

    ಕಳೆದ 3 ತಿಂಗಳಿಂದ ನಾಗಾಲೋಟದಲ್ಲಿ ಸಾಗುತ್ತಿದ್ದ ತೈಲ ಬೆಲೆ ಇಳಿಕೆಗೆ ಅಬಕಾರಿ ಸುಂಕದಲ್ಲಿ 2 ರೂಪಾಯಿ ಕಡಿತ ಮಾಡಿದ್ದ ಕೇಂದ್ರ ಸರ್ಕಾರ ಈಗ ರಾಜ್ಯಗಳೂ ಶೇ.5ರಷ್ಟು ಕಡಿತಗೊಳಿಸಿ ಅಂತ ಹೇಳಿ ಜಾಣತನ ಮೆರೆದಿದೆ.

    ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ರಾಜ್ಯ ಸರ್ಕಾರಗಳು ವ್ಯಾಟ್ ಮೂಲಕ ಹೇರುತ್ತಿರುವ ತೆರಿಗೆಗಳನ್ನು ಇಳಿಕೆ ಮಾಡುವಂತೆ ಸೂಚಿಸಿದೆ. ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೆಂದ್ರ ಪ್ರಧಾನ್ ಕೂಡ ಪತ್ರ ಬರೆದಿದ್ದಾರೆ. ಅಬಕಾರಿ ಸುಂಕವನ್ನು ನಾವು ಇಳಿಕೆ ಮಾಡಿರೋದ್ರಿಂದ ಪೆಟ್ರೋಲ್ ಬೆಲೆ ಲೀಟರ್‍ಗೆ 2 ರೂಪಾಯಿ 50 ಪೈಸೆ ಹಾಗೂ ಡೀಸೆಲ್ ಬೆಲೆ 2 ರೂಪಾಯಿ 25 ಪೈಸೆ ಇಳಿಕೆಯಾಗಿದೆ. ನೀವು ಕೂಡ ವ್ಯಾಟ್ ರೂಪದಲ್ಲಿ ಹಾಕುತ್ತಿರುವ ತೆರಿಗೆಯನ್ನು ಇಳಿಕೆ ಮಾಡಿದ್ರೆ ಪೆಟ್ರೋಲ್ ಬೆಲೆ ಲೀಟರ್‍ಗೆ 5 ರೂಪಾಯಿ ಇಳಿಕೆಯಾಗಲಿದೆ ಅಂತ ಜಾರಿಕೊಂಡಿದ್ದಾರೆ. ಇಷ್ಟಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಾಕುತ್ತಿರುವ ತೆರಿಗೆಯನ್ನು ಇಳಿಸಿದ್ರೆ ಅರ್ಧಕರ್ಧ ಬೆಲೆ ಇಳಿಕೆಯಾಗುವುದಂತೂ ಸತ್ಯ.

    ಯಾವ ರಾಜ್ಯದಲ್ಲಿ ವ್ಯಾಟ್ ಎಷ್ಟಿದೆ?
    ಕರ್ನಾಟಕ: ಪೆಟ್ರೋಲ್ – ಶೇ.30, ಡೀಸೆಲ್ – ಶೇ.19
    ಮಹಾರಾಷ್ಟ್ರ: ಪೆಟ್ರೋಲ್ – ಶೇ.47.64, ಡೀಸೆಲ್ – ಶೇ.28.39
    ಆಂಧ್ರ ಪ್ರದೇಶ: ಪೆಟ್ರೋಲ್ – ಶೇ. 38.83, ಡೀಸೆಲ್ – ಶೇ. 30.82
    ಮಧ್ಯಪ್ರದೇಶ: ಪೆಟ್ರೋಲ್ – ಶೇ. 38.79, ಡೀಸೆಲ್ – ಶೇ. 30.22
    ತೆಲಂಗಾಣ: ಪೆಟ್ರೋಲ್ – ಶೇ. 35.20, ಡೀಸೆಲ್ – ಶೇ.27.00
    ಕೇರಳ: ಪೆಟ್ರೋಲ್ – ಶೇ. 34.06

    ಪೆಟ್ರೋಲ್ ಹಾಗೂ ಡೀಸೆಲ್ ಮೂಲಕ ಆದಾಯ ಸಂಗ್ರಹ ಮಾಡುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ದೇಶದಲ್ಲೇ ಐದನೇ ಸ್ಥಾನವಿದೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸೋ ಮಹಾರಾಷ್ಟ್ರ ಸರ್ಕಾರ ಆದಾಯ ಸಂಗ್ರಹದಲ್ಲಿ ಮೊದಲ ಸ್ಥಾನವಿದೆ. ಸೇವಾ ತೆರಿಗೆ, ಪ್ರವೇಶ ತೆರಿಗೆಗಳ ಮೂಲಕ ರಾಜ್ಯಗಳು ಸಂಗ್ರಹ ಮಾಡುವ ಹಣ ಈ ಕೆಳಗಿನಂತಿದೆ.

    ತೆರಿಗೆ ಸಂಗ್ರಹದಲ್ಲಿ ಯಾರು ಮೊದಲು:
    ನಂ.1 ಮಹಾರಾಷ್ಟ್ರ: 23,160 ಕೋಟಿ ರೂ.
    ನಂ.2 ಗುಜರಾತ್: 15,958 ಕೋಟಿ ರೂ.
    ನಂ.3 ಉತ್ತರಪ್ರದೇಶ: 15, 850 ಕೋಟಿ ರೂ.
    ನಂ.4 ತಮಿಳುನಾಡು: 12, 563 ಕೋಟಿ ರೂ.
    ನಂ.5 ಕರ್ನಾಟಕ: 11,103 ಕೋಟಿ ರೂ.

    ಯಾರಿಗೆ ಎಷ್ಟು?
    ಪೆಟ್ರೋಲ್ ಮೇಲೆ ಅಬಕಾರಿ ಸುಂಕ: 21.48 ಪೈಸೆ (ಲೀಟರ್‍ಗೆ)
    ಪೆಟ್ರೋಲ್ ಮೇಲೆ ವ್ಯಾಟ್: ಶೇ.27
    ಡೀಲರ್ಸ್‍ಗಳ ಕಮಿಷನ್: 3.23 (ಲೀಟರ್‍ಗೆ)

    ಡೀಸೆಲ್ ಮೇಲೆ ಅಬಕಾರಿ ಸುಂಕ: 17.33 (ಲೀಟರ್‍ಗೆ)
    ಡೀಸೆಲ್ ಮೇಲಿನ ವ್ಯಾಟ್: ಶೇ.27
    ಡೀಲರ್ಸ್‍ಗಳ ಕಮಿಷನ್: 2.17 (ಲೀಟರ್‍ಗೆ)

  • ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ ಸಂಸತ್ತಿನ ಅಧಿಕಾರಕ್ಕೆ ಬಿಟ್ಟದ್ದು: ಕೇಂದ್ರ ಸರ್ಕಾರ

    ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ ಸಂಸತ್ತಿನ ಅಧಿಕಾರಕ್ಕೆ ಬಿಟ್ಟದ್ದು: ಕೇಂದ್ರ ಸರ್ಕಾರ

    ನವದೆಹಲಿ: ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೋ ಬೇಡವೋ ಎನ್ನುವ ನಿರ್ಧಾರ ಸಂಸತ್ತಿನ ಅಧಿಕಾರಕ್ಕೆ ಬಿಟ್ಟದ್ದು. ಸಂಸತ್ತು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿದೆ.

    ಕಾವೇರಿ ಮೇಲ್ಮನವಿ ಅರ್ಜಿಗಳ ವಿಚಾರಣೆ ವೇಳೆ ನಿರ್ವಹಣಾ ಮಂಡಳಿ ರಚನೆ ಬಗ್ಗೆ ಕೇಂದ್ರ ತನ್ನ ನಿಲುವು ಸ್ಪಷ್ಟಪಡಿಸಿದೆ. ನಿರ್ವಹಣಾ ಮಂಡಳಿ ರಚನೆ ನ್ಯಾಯಾಧಿಕರಣದ ವ್ಯಾಪ್ತಿಗೆ ಬರುವುದಿಲ್ಲ. ಸರ್ಕಾರ ಈ ಬಗ್ಗೆ ಕರಡು ಸಿದ್ಧಪಡಿಸಿ ಸಂಸತ್ತಿನ ಮುಂದಿಡಲಿದೆ. ಇದಕ್ಕೆ ತಿದ್ದುಪಡಿ, ಬದಲಾವಣೆ ಮಾಡುವುದಿದ್ದರೆ ಸಂಸತ್ತು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದೆ.

    ಒಂದು ವೇಳೆ ಸುಪ್ರೀಂಕೋರ್ಟ್ ನೀರು ಹಂಚಿಕೆ, ಮಂಡಳಿ ರಚನೆ ಬಗ್ಗೆ ತೀರ್ಪು ನೀಡಿದರೆ ನಾವು ಅದನ್ನ ಪಾಲಿಸುತ್ತೇವೆ ಎಂದು ಕೇಂದ್ರ ಸರ್ಕಾರದ ವಕೀಲ ರಂಜಿತ್ ಕುಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನಾವು ತೀರ್ಪು ನೀಡಿದರೆ ನೀವು ಪಾಲಿಸಲೇಬೇಕು ಎಂದು ಸೂಚಿಸಿದ್ದಾರೆ.

  • ಕೇಂದ್ರವೇ ನಮ್ಮ ಫೋನ್ ಕದ್ದಾಲಿಸುತ್ತಿದೆ – ಸಚಿವ ರಾಮಲಿಂಗಾರೆಡ್ಡಿ ಸ್ಫೋಟಕ ಆರೋಪ

    ಕೇಂದ್ರವೇ ನಮ್ಮ ಫೋನ್ ಕದ್ದಾಲಿಸುತ್ತಿದೆ – ಸಚಿವ ರಾಮಲಿಂಗಾರೆಡ್ಡಿ ಸ್ಫೋಟಕ ಆರೋಪ

    ಬೆಂಗಳೂರು: ನಮ್ಮ ಸರ್ಕಾರ ವಿಪಕ್ಷದ ಯಾವ ನಾಯಕರ ದೂರವಾಣಿಯನ್ನು ಕದ್ದಾಲಿಸಿಲ್ಲ. ಕೇಂದ್ರ ಸರ್ಕಾರವೇ ನಮ್ಮ ಸುಮಾರು 35 ಮುಖಂಡರ ಹಾಗೂ ಸಚಿವರ ಫೋನ್ ಕದ್ದಾಲಿಕೆ ಮಾಡುತ್ತಿದೆ ಅಂತ ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ನೀಡಿರೋ ಹೇಳಿಕೆ ಸುಳ್ಳಾಗಿದೆ. ಕೇಂದ್ರ ಸರ್ಕಾರ ನಿರಂತರವಾಗಿ ರಾಜ್ಯ ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ಮಾಡುತ್ತಿದೆ. ಅಲ್ಲದೆ ಐಟಿ, ಇಡಿ, ಸಿಬಿಐ, ರಿಸರ್ವ್ ಬ್ಯಾಂಕ್ ಎಲ್ಲವನ್ನೂ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರ ವಿರುದ್ಧ ಪಿತೂರಿ ನಡೆಸುತ್ತಿದೆ ಅಂತ ಕಿಡಿಕಾರಿದ್ರು.

    ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸಚಿವರ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ಮಾಡುತ್ತೇವೆಂಬ ಬಿಎಸ್‍ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಬಳಿ ದಾಖಲೆ ಇದ್ರೆ ಬಿಡುಗಡೆ ಮಾಡಲಿ. ನಮ್ಮ ಸಚಿವರ ವಿರುದ್ಧ ಆರೋಪ ಇದ್ರೆ ಲೋಕಾಯುಕ್ತ ಸಂಸ್ಥೆ ಇದೆ ಅಲ್ಲಿ ಹೊಗಿ ದೂರು ಕೊಡಲಿ. ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಮೊದಲು ತಮ್ಮ ಮೇಲಿರುವ ಪ್ರಕರಣದ ಕುರಿತು ಜನತೆಗೆ ಉತ್ತರ ನೀಡಲಿ. ಆ ಬಳಿಕ ನಮ್ಮ ಬಗ್ಗೆ ಮಾತನಾಡಲಿ ಅಂತ ಹೇಳಿದ್ರು.

    ಇನ್ನು ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯ ಸುಳಿವು ಸಿಕ್ಕಿದೆ. ಸಾಕ್ಷ್ಯವನ್ನು ಸಂಗ್ರಹಿಸುತ್ತಿದ್ದು, ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ರು.

  • ಬೆಳಕು ಫಲಶೃತಿ: ಅಂಗವಿಕಲ ಮಹಿಳೆಗೆ ಸಿಕ್ತು ಆಧಾರ್ ಕಾರ್ಡ್

    ಬೆಳಕು ಫಲಶೃತಿ: ಅಂಗವಿಕಲ ಮಹಿಳೆಗೆ ಸಿಕ್ತು ಆಧಾರ್ ಕಾರ್ಡ್

    ಮಂಗಳೂರು: ದೇಶದ ಪ್ರತಿಯೊಬ್ಬ ಪ್ರಜೆಯೂ ಆಧಾರ್ ಕಾರ್ಡ್ ಹೊಂದಲೇ ಬೇಕು ಅನ್ನೋದು ಕೇಂದ್ರ ಸರ್ಕಾರದ ಆದೇಶ. ಆದರೆ ಅದೆಷ್ಟೋ ಮಂದಿ ನಾನಾ ಕಾರಣಗಳಿಂದ ಆಧಾರ್ ಕಾರ್ಡ್ ಪಡೆಯಲಾಗದೆ ಈ ದೇಶದ ಪ್ರಜೆಯೇ ಅಲ್ಲದಂತಾಗಿದ್ದಾರೆ.

    ಮಂಗಳೂರಿನಲ್ಲೂ ಇಂತಹದೊಂದು ಕರುಣಾಜನಕ ಪ್ರಕರಣದಲ್ಲಿ ಆಧಾರ್ ಕಾರ್ಡ್ ಇಲ್ಲದ ಅಂಗವಿಕಲ ಮಹಿಳೆಯೋರ್ವರಿಗೆ ಬೆಳಕು ಕಾರ್ಯಕ್ರಮದ ಮೂಲಕ ಕ್ಷಣ ಮಾತ್ರದಲ್ಲಿ ಆಧಾರ್ ಕಾರ್ಡ್ ದೊರೆತಿದೆ. ಇದು ಬೆಳಕು ಕಾರ್ಯಕ್ರಮದ ಇಂಪ್ಯಾಕ್ಟ್.

    ಕಳೆದ ವಾರದ ಬೆಳಕು ಕಾರ್ಯಕ್ರಮದಲ್ಲಿ ಮಂಗಳೂರಿನ ಕರುಣಾಜನಕ ಕಥೆಯನ್ನು ನಾವು ನಿಮ್ಗೆ ತೋರಿಸಿದ್ದೀವಿ. ಮಂಗಳೂರಿನ ಮಣ್ಣಗುಡ್ಡೆಯಲ್ಲಿ ವಾಸವಾಗಿರುವ ತಾಯಿ ಮಗಳ ಕಥೆ ಅದು. 85 ವರ್ಷದ ಚಂಚಲಾಕ್ಷಿ ಎಂಬ ತಾಯಿ ಆಕೆಯ 58 ವರ್ಷದ ಮಗಳನ್ನು ಪ್ರತಿ ದಿನ ಮನೆಯಲ್ಲಿ ಅತ್ತಿಂದಿತ್ತ ಎಳೆದಾಡಿಕೊಂಡೇ ಹೋಗುತ್ತಿದ್ದಾರೆ.

    ಚಂಚಲಾಕ್ಷಿಯವರ ಮಗಳು ಮಾಲಿನಿ 6 ತಿಂಗಳ ಮಗುವಾಗಿದ್ದಾಗ ಪಿಡ್ಸ್ ಕಾಯಿಲೆಗೆಂದು ವೈದ್ಯರ ಬಳಿಗೆ ಹೋಗಿದ್ದಾಗ ಮಗುವಿನ ಬೆನ್ನು ಮೂಳೆಯ ನೀರು ತೆಗೆದಿದ್ದರಂತೆ. ಅಂದಿನಿಂದ ಇಂದಿನವರೆಗೆ ಅಂದರೆ 58 ವರ್ಷಗಳ ಕಾಲ ಆ ಮಗು ಎದ್ದು ನಿಲ್ಲಲೇ ಇಲ್ಲ. ಹೀಗಾಗಿ ಇಳಿ ವಯಸ್ಸಿನ ತಾಯಿ ಮನೆಯೊಳಗೆ ಎಳೆದಾಡಿಕೊಂಡೇ ಹೋಗುತ್ತಿದ್ದರು. ಮಾಲಿನಿಗೆ ಅಂಗವಿಕಲ ವೇತನ ಬರುತ್ತಿದ್ದರೂ ಇದೀಗ ಆಧಾರ ಕಾರ್ಡ್ ಕಡ್ಡಾಯವಾಗಿದ್ದರಿಂದ ಅದಕ್ಕೂ ಕೊಕ್ಕೆ ಬಿದ್ದಿತ್ತು. ಎದ್ದು ಆಚೀಚೆ ಹೋಗಲು ಅಸಾಧ್ಯವಾಗಿದ್ದ ಮಾಲಿನಿಗೆ ಆಧಾರ ಕಾರ್ಡ್ ಮಾಡಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ.

    ಹೀಗಾಗಿ ಬೆಳಕು ತಂಡ ಈಕೆಯ ಕರುಣಾಜನಕ ಕಥೆಯ ಬಗ್ಗೆ ವರದಿ ಮಾಡಿದ್ದು ಜಿಲ್ಲಾಡಳಿತ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಜಗದೀಶ್‍ರಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ವಿನಂತಿಸಿಕೊಂಡಿದ್ದರು. ಅದರಂತೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ಒಂದೇ ದಿನದಲ್ಲಿ ಮಾಲಿನಿಗೆ ಆಧಾರ್ ಕಾರ್ಡ್ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲಾಧಿಕಾರಿ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ತಕ್ಷಣ ಮಂಗಳೂರು ತಹಶೀಲ್ದಾರ್ ಅವರನ್ನು ಮನೆಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರು. ಬಳಿಕ ಆಧಾರ್ ಕಾರ್ಡ್‍ನ ಮೊಬೈಲ್ ಸೇವೆ ಸ್ಥಗಿತಗೊಂಡಿದ್ದರೂ, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲೆಯ ಏಕೈಕ ಆಧಾರ್ ಕೇಂದ್ರದ ಎಲ್ಲಾ ಉಪಕರಣಗಳನ್ನು ಮಾಲಿನಿಯವರ ಮನೆಗೆ ಅಧಿಕಾರಿಗಳ ತಂಡ ತಂದು ಅವರ ಮನೆಯಲ್ಲೇ ಆಧಾರ್ ಕಾರ್ಡ್‍ನ ನೊಂದಾವಣಿಯನ್ನು ಮಾಡಿಕೊಂಡರು.

    ಆಧಾರ್ ಕಾರ್ಡ್‍ನ ದಾಖಲಾತಿಯ ವಿವರವನ್ನು ತಕ್ಷಣದಲ್ಲೇ ನೀಡಿದ್ದು ಇನ್ನು 15 ದಿನದೊಳಗೆ ಮಾಲಿನಿಗೆ ಆಧಾರ್ ಕಾರ್ಡ್ ಲಭ್ಯವಾಗಲಿದೆ. ಮಾತ್ರವಲ್ಲ ಈ ಬಡ ಕುಟುಂಬಕ್ಕೆ ಇರುವ ಎಪಿಎಲ್ ಕಾರ್ಡ್‍ನ್ನು ರದ್ದುಗೊಳಿಸಿ ಬಿಪಿಎಲ್ ಕಾರ್ಡ್ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಮಾಲಿನಿಯ ಹೆಸರನ್ನೂ ಪಡಿತರ ಚೀಟಿಗೆ ಸೇರಿಸಲು ತಹಶೀಲ್ದಾರ್ ಇಲಾಖೆಗೆ ಸೂಚಿಸಿದ್ದಾರೆ. ಜೊತೆಗೆ ಮಾಲಿನಿಗೆ ಬೇಕಾದ ಆರೋಗ್ಯದ ಸೇವೆಯನ್ನೂ, ಸರ್ಕಾರದಿಂದ ಬರುವ ಅಂಗವಿಕಲ ವೇತನವನ್ನೂ ಸರಿಯಾಗಿ ಸಿಗುವಂತೆ ಆಯಾ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

    ಈ ನಡುವೆ ಅಂಗವಿಕಲರ ಪುನರ್ವಸತಿ ಕೇಂದ್ರದ ಅಧಿಕಾರಿಗಳೂ ಭೇಟಿ ನೀಡಿದ್ದು ಮಾಳಿನಿಗೆ ಸಿಗಬೇಕಾದ ಎಲ್ಲಾ ಸೌಲಭ್ಯವನ್ನೂ ನೀಡಲೂ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈಕೆಯ ಕರುಣಾಜನಕ ಕಥೆಯನ್ನು ತೆರೆದಿಟ್ಟ ಪಬ್ಲಿಕ್ ಟಿವಿಯ ಬೆಳಕು ತಂಡಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.

    ಬೆಳಕು ತಂಡದ ಪ್ರಯತ್ನಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತಕ್ಷಣಕ್ಕೆ ಸ್ಪಂದಿಸಿ ಮಾಲಿನಿಯ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಮಾಲಿನಿಗೂ ತಾನೊಬ್ಬ ಭಾರತದ ಪ್ರಜೆ ಅನ್ನೋ ದಕ್ಕೆ ಆಧಾರ ಸಿಕ್ಕಿದೆ. ನಮ್ಮ ಪ್ರಯತ್ನದಿಂದಾಗಿ ಇನ್ನಾದರೂ ಮಾಲಿನಿಯ ಜೀವನದಲ್ಲಿ ಹೊಸ “ಬೆಳಕು” ಮೂಡಲಿ ಅನ್ನೋದು ಪಬ್ಲಿಕ್ ಟಿವಿಯ ಆಶಯ.

    https://youtu.be/qkSZDSLwI6w

  • ನಮ್ಮದು ಮಿಷನ್ 150 ಅಲ್ಲ, ಮಿಷನ್ 150 ಪ್ಲಸ್: ಪ್ರಕಾಶ್ ಜಾವ್ಡೇಕರ್

    ನಮ್ಮದು ಮಿಷನ್ 150 ಅಲ್ಲ, ಮಿಷನ್ 150 ಪ್ಲಸ್: ಪ್ರಕಾಶ್ ಜಾವ್ಡೇಕರ್

    ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ, ಜನ ವಿರೋಧಿ ಸರ್ಕಾರ. ಸಿದ್ದರಾಮಯ್ಯ ಅಲ್ಲ ನಿದ್ದೆರಾಮಯ್ಯ. ರಾಜ್ಯದಲ್ಲಿ ಸುರಕ್ಷತೆ ಇಲ್ಲ. ಆಡಳಿತ ವಿರೋಧಿ ಅಲೆ ಇದೆ. ನಮ್ಮದು ಮಿಷನ್ 150 ಅಲ್ಲ, ಮಿಷನ್ 150 ಪ್ಲಸ್ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.

    ಬೆಂಗಳೂರಿನ ಶೇಷಾದ್ರಿಪುರಂನ ಗುರುರಾಜ ಕಲ್ಯಾಣ ಮಂಟಪದಲ್ಲಿ ರಾಜ್ಯ ಬಿಜೆಪಿ ನಾಯಕರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಚುನಾವಣೆಗೂ, 2018 ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಆಗ ಯುಪಿಎ ಸರ್ಕಾರ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈಗ ಪರಿಸ್ಥಿತಿ ಬೇರೆ ಆಗಿದೆ. ಪಕ್ಷದಿಂದ ದೂರ ಸರಿದವರೆಲ್ಲಾ ವಾಪಸ್ ಬಂದಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‍ಡಿಎ ಸರ್ಕಾರವಿದೆ. ಇಡೀ ರಾಷ್ಟ್ರದಲ್ಲಿ ಒಂದೊಂದೇ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಕರ್ನಾಟಕದಲ್ಲೂ ಅಧಿಕಾರಕ್ಕೆ ಬರಲೇಬೇಕು ಎಂದು ಹೇಳಿದರು.

    ರೈತರ ಸಾಲ ಮನ್ನಾ ಎಂಬುದು ಅದು ಬರೀ ನಾಟಕ. ರೈತರು ಪೂರ್ಣ ಸಾಲ ಮನ್ನಾ ಕೇಳಿದ್ರೆ, ಈ ಸರ್ಕಾರ ಸ್ವಲ್ಪ ಭಾಗ ಮಾತ್ರ ಸಾಲ ಮನ್ನಾ ಮಾಡಿದೆ. ರಾಜ್ಯದಲ್ಲಿ ಬರ ಪರಿಹಾರದ ಹಣ ಚಾಕೋಲೆಟ್, ಲಾಲಿಪಾಪ್ ಕೊಳ್ಳಲೂ ಸಾಧ್ಯವಾಗಷ್ಟು ಕಡಿಮೆ ಪ್ರಮಾಣದಲ್ಲಿ ವಿತರಣೆಯಾಗಿದೆ. ಕರ್ನಾಟಕದಲ್ಲಿ ಸಾಮಾಜಿಕ ಕಾರ್ಯಕರ್ತರ ಹತ್ಯೆಗಳಾಗುತ್ತಿವೆ. 18ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಹತ್ಯೆಗಳಾಗಿವೆ. ಇದರ ಬಗ್ಗೆ ಅರಿವು ಮೂಡಿಸಲು ನಾವು ಬೈಕ್ ರ‍್ಯಾಲಿ ಮಾಡಿದರೆ ಅದನ್ನು ಪ್ರತಿಬಂಧಿಸುತ್ತಾರೆ ಎಂದರು.

    ಇದೇ ವೇಳೆ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾತನಾಡಿ, ನವೆಂಬರ್ ನಿಂದ ಡಿಸೆಂಬರ್ ಒಳಗಾಗಿ ಎಲ್ಲಾ 224 ಕ್ಷೇತ್ರಗಳಿಗೆ ಪ್ರವಾಸ ಮಾಡಿ. ಚುನಾವಣಾ ಸಿದ್ಧತೆ ಮಾಡಬೇಕು, ಕಾರ್ಯಕರ್ತರನ್ನು ಅಣಿಗೊಳಿಸಬೇಕು. ಆ ಜವಾಬ್ದಾರಿಯನ್ನು ಹಾಲಿ ಮತ್ತು ಮಾಜಿ ಶಾಸಕರು ಮತ್ತು ಸಂಸದರು ನಿರ್ವಹಿಸಬೇಕು. ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ಗೊಂದಲ ಬೇಡ. ಒಂದು ಕ್ಷೇತ್ರಗಳಲ್ಲಿ ಎಷ್ಟು ಜನ ಆಕಾಂಕ್ಷಿಗಳು ಇರ್ತಾರೋ ಎಲ್ಲರೂ ಒಂದೇ ಕಾರಿನಲ್ಲಿ ಓಡಾಡಿ. ಬಿಜೆಪಿ ಅಭ್ಯರ್ಥಿಯ ಗೆಲುವು ನಮಗೆ ಮುಖ್ಯವಾಗಬೇಕು ಅಷ್ಟೇ ಎಂದು ಹೆಳಿದರು.

    224 ಕ್ಷೇತ್ರಗಳ ಚುನಾವಣಾ ಸಿದ್ಧತೆ ಕುರಿತು ಮಾಹಿತಿ ಪಡೆಯಲಿರುವ ಚುನಾವಣಾ ಉಸ್ತುವಾರಿಗಳು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಸಹ-ಉಸ್ತುವಾರಿ ಪಿಯೂಷ್ ಗೋಯೆಲ್, ರಾಜ್ಯಾಧ್ಯಕ್ಷ ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಹಾಗೂ ಸಭೆಯಲ್ಲಿ ಬಿಜೆಪಿಯ ಮಾಜಿ, ಹಾಲಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಭಾಗಿಯಾಗಿದ್ದರು.

  • ದೆಹಲಿ ಬಿಟ್ಟು ಗುಜರಾತ್ ನಲ್ಲಿ ಜಪಾನ್ ಪ್ರಧಾನಿಗೆ ರಾಜಾತಿಥ್ಯ ನೀಡಿದ್ದು ಯಾಕೆ: ಕಾಂಗ್ರೆಸ್ ಪ್ರಶ್ನೆ

    ದೆಹಲಿ ಬಿಟ್ಟು ಗುಜರಾತ್ ನಲ್ಲಿ ಜಪಾನ್ ಪ್ರಧಾನಿಗೆ ರಾಜಾತಿಥ್ಯ ನೀಡಿದ್ದು ಯಾಕೆ: ಕಾಂಗ್ರೆಸ್ ಪ್ರಶ್ನೆ

    ನವದೆಹಲಿ: ಜಪಾನ್ ಪ್ರಧಾನಿ ಅಬೆ ಜೊತೆಗಿನ ಎರಡು ದಿನಗಳ ಭಾರತದ ಭೇಟಿಯನ್ನು ಮೋದಿ ಸರ್ಕಾರವು ತನ್ನ ರಾಜಕೀಯ ಲಾಭವನ್ನು ಹೆಚ್ಚಿಸಿಕೊಳ್ಳಲು ಬಳಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

    ಕಾಂಗ್ರೆಸ್ ಪಕ್ಷದ ಮುಖಂಡ ಮನೀಷ್ ತಿವಾರಿ ಪ್ರತಿಕ್ರಿಯಿಸಿ, ಯಾವುದೇ ಪ್ರತಿಷ್ಟಿತ ದೇಶದ ಪ್ರಧಾನಿಗಳು ದೇಶಕ್ಕೆ ಆಗಮಿಸಿದರೆ ಅವರಿಗೆ ದೆಹಲಿಯಲ್ಲಿ ಅತಿಥ್ಯವನ್ನು ನೀಡಲಾಗುತ್ತದೆ. ಆದರೆ ಈ ಬಾರಿ ಗುಜರಾತ್ ನಲ್ಲಿ ರಾಜಾತಿಥ್ಯ ನೀಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

    ಜಪಾನ್ ಪ್ರಧಾನಿ ಅವರು ಗುಜರಾತ್‍ಗೆ ಭೇಟಿ ನೀಡಿದ ಬಗ್ಗೆ ನಮ್ಮ ಆಕ್ಷೇಪ ಇಲ್ಲ. ಅದರೆ ಮುಂದಿನ ದಿನಗಳಲ್ಲಿ ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿಷ್ಠಿತ ದೇಶದ ಪ್ರಧಾನಿಗಳ ಜೊತೆ ರೋಡ್ ಶೋ ನಡೆಸುವ ಅಗತ್ಯತೆಯನ್ನು ಪ್ರಶ್ನಿಸುತ್ತಿದ್ದೇವೆ ಎಂದರು.

    ಬಿಜೆಪಿಯ ಈ ನಡೆಯು ಮುಂದಿನ ಚುನಾವಣೆಯಲ್ಲಿ ರಾಜಕೀಯ ಲಾಭವನ್ನು ಪಡೆಯುವ ಉದ್ದೇಶವನ್ನು ಹೊಂದಿರುವುದಿಲ್ಲ ಎಂದು ಆಶಿಸುತ್ತೇವೆ. ಜಪಾನ್ ಹಾಗೂ ಭಾರತದ ನಡುವೆ ಹಲವು ವರ್ಷಗಳಿಂದಲೂ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದು, ಹಲವು ಬಾರಿ ಜಪಾನ್ ನಮಗೇ ಸಹಾಯದ ಹಸ್ತವನ್ನು ಚಾಚಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವೇಳೆಯಲ್ಲೂ ಉತ್ತಮ ಸಂಬಂಧಗಳನ್ನು ಏರ್ಪಡಿಸಲಾಗಿತ್ತು ಎಂದು ಮನೀಷ್ ತಿವಾರಿ ತಿಳಿಸಿದರು.

    ರೋಹಿಂಗ್ಯಾ ಮುಸ್ಲಿಮ್ ನಿರಾಶ್ರಿತರ ವಿಚಾರದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಟೀಕೆ ಭಾರತ ಒಳಗಾಗಬೇಕಾಯಿತು. ಸರ್ಕಾರದ ಈ ನಡೆಯು ಭಾರತೀಯ ಸಂಸ್ಕೃತಿಗೆ ಸಂಪೂರ್ಣ ವಿರುದ್ಧವಾಗಿದ್ದು. ನೆರೆಯ ದೇಶಗಳೊಂದಿಗೆ ಉತ್ತಮ ಸಂಬಂಧಗಳನ್ನು ಏರ್ಪಡಿಸಲು ಈ ಕ್ರಮಗಳು ಋಣಾತ್ಮಾಕ ಪರಿಣಾಮಗಳನ್ನು ಬೀರುತ್ತದೆ. ಭಾರತವು ಎಂದು ಈ ರೀತಿಯ ಪರಿಸ್ಥಿತಿಯನ್ನು ಎದುರಿಸಲಿಲ್ಲ ಎಂದರು.

    ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ತಮ್ಮ ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದು, ಭಾರತ-ಜಪಾನ್ ಸಹಕಾರದ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಅಹಮದಾಬಾದ್ ನಲ್ಲಿ ಶಂಕುಸ್ಥಾಪನೆ ಮಾಡಿದರು.

  • ನಿವೃತ್ತರಾಗಿರೋ ಪ್ರಾಧ್ಯಾಪಕರಿಗೆ ಗುಡ್‍ನ್ಯೂಸ್, ನೀವು ಮತ್ತೆ ಪಾಠ ಮಾಡಬಹದು!

    ನಿವೃತ್ತರಾಗಿರೋ ಪ್ರಾಧ್ಯಾಪಕರಿಗೆ ಗುಡ್‍ನ್ಯೂಸ್, ನೀವು ಮತ್ತೆ ಪಾಠ ಮಾಡಬಹದು!

    ಆಗ್ರಾ: ಈಗಾಗಲೇ ಸೇವೆಯಿಂದ ನಿವೃತ್ತರಾಗಿದ್ದುಕೊಂಡು 75 ವರ್ಷ ಮೀರದ ಪ್ರಾಧ್ಯಾಪಕರಿಗೆ ಗುಡ್ ನ್ಯೂಸ್. ನೀವು ಬಯಸಿದ್ದಲ್ಲಿ ಮತ್ತೊಮ್ಮೆ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಮಾಡಬಹುದು.

    ಹೌದು. ಕೇಂದ್ರ ಸರ್ಕಾರ ಈಗಾಗಲೇ ನಿವೃತ್ತರಾಗಿರುವ ಪ್ರಾಧ್ಯಾಪಕರಿಗೆ ಮತ್ತೊಮ್ಮೆ ಬೋಧನೆ ಮಾಡುವ ಅವಕಾಶ ನೀಡಲು ಮುಂದಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಈ ವಿಚಾರವನ್ನು ತಿಳಿಸಿದ್ದು, 75 ವರ್ಷ ಮೀರದ ಹಾಗೂ ಉತ್ತಮ ಸೇವಾ ದಾಖಲೆಯನ್ನು ಹೊಂದಿರುವ ನಿವೃತ್ತ ಪ್ರಾಧ್ಯಾಪಕರಿಗೆ ಮತ್ತೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

    42 ವಿಶ್ವವಿದ್ಯಾಲಯ ಅಧಿಕಾರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ವೇಳೆ ವಿವಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಪ್ರಾಧ್ಯಾಪಕರನ್ನು ಮರಳಿ ಕರೆತರುವ ಬಗ್ಗೆ ಚರ್ಚೆ ಸಚಿವರು ನಡೆಸಿದ್ದಾರೆ. ಕೇಂದ್ರ ಸರ್ಕಾರ ಅನುದಾನ ಪಡೆಯುವ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇದೆ. ಹೀಗಾಗಿ ಉತ್ತಮ ಸೇವಾ ದಾಖಲೆ ಹೊಂದಿರುವ ಪ್ರಾಧ್ಯಾಪಕರಿಗೆ ಅವಕಾಶ ನೀಡಲು ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದರು.

    ವಿವಿಗಳಲ್ಲಿನ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ವಿದೇಶದಲ್ಲಿರುವ ಪ್ರಸಿದ್ಧ ವಿವಿಗಳಲ್ಲಿರುವ ಸಂಶೋಧಕರಿಗೂ ಅವಕಾಶ ನೀಡಲಾಗುವುದು. ವೈದ್ಯಕೀಯವಾಗಿ ಯಾರು ಆರೋಗ್ಯವಾಗಿರುತ್ತಾರೋ ಅಂತಹವರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

    ಪ್ರಸ್ತುತ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಶೇ.53.28 ಮತ್ತು ನ್ಯಾಷನಲ್ ಇನ್ಸ್ ಟ್ಯೂಟ್ ಟೆಕ್ನಾಲಜಿ(ಎನ್‍ಐಟಿ) ಗಳಲ್ಲಿ ಶೇ.47% ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗುತ್ತಿದೆ.

    ಮಾನವ ಸಂಪನ್ಮೂಲ ಸಚಿವಾಲಯದ ದಾಖಲೆಗಳ ಪ್ರಕಾರ ಹರ್ಯಾಣ ಕೇಂದ್ರೀಯ ವಿವಿಯಲ್ಲಿ ಏಪ್ರಿಲ್ 1,2017 ರ ಅವಧಿ ವರೆಗೆ ಶೇ.75.11 ಹುದ್ದೆಗಳು ಖಾಲಿ ಇದ್ದರೆ, ದೆಹಲಿಯ ವಿವಿಯಲ್ಲಿ ಶೇ.54.75% ಹುದ್ದೆಗಳು ಖಾಲಿಯಿವೆ.

  • ಮೈಸೂರು ದಸರಾಗೆ ಕೇಂದ್ರ ವಿಮಾನಯಾನ ಇಲಾಖೆಯಿಂದ ಗಿಫ್ಟ್!

    ಮೈಸೂರು ದಸರಾಗೆ ಕೇಂದ್ರ ವಿಮಾನಯಾನ ಇಲಾಖೆಯಿಂದ ಗಿಫ್ಟ್!

    ಮೈಸೂರು: ದಸರಾಗೆ ಕೇಂದ್ರ ವಿಮಾನಯಾನ ಇಲಾಖೆಯಿಂದ ಗಿಫ್ಟ್ ಸಿಕ್ಕಿದೆ. ಸೆಪ್ಟೆಂಬರ್ 15 ರಿಂದ ಮೈಸೂರು ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಆರಂಭವಾಗಲಿದೆ.

    ಹಲವು ತಿಂಗಳಿಂದ ನಿಷ್ಕ್ರಿಯಗೊಂಡಿದ್ದ ಮೈಸೂರಿನ ವಿಮಾನ ನಿಲ್ದಾಣವೂ ಸೆಪ್ಟೆಂಬರ್ 15 ರಿಂದ ಮೈಸೂರು-ಚೆನ್ನೈ ನಡುವೆ ವಿಮಾನ ಹಾರಾಟ ಆರಂಭವಾಗುವ ಮೂಲಕ ಮತ್ತೆ ನಿಲ್ದಾಣ ಕಾರ್ಯೋನ್ಮುಖವಾಗಲಿದೆ.

    ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿಯಲ್ಲಿ ವಿಮಾನ ಸೇವೆ ಆರಂಭವಾಗುತ್ತಿದ್ದು ಮುಂದಿನ ಮೂರು ವರ್ಷಗಳ ಕಾಲ ವಿಮಾನ ಹಾರಾಟ ನಡೆಯಲಿದೆ. ಸಂಜೆ ವೇಳೆಯಲ್ಲಿ ಚೆನ್ನೈನಿಂದ ಮೈಸೂರಿಗೆ ಆಗಮಿಸಿ ಮತ್ತೆ ಮೈಸೂರಿನಿಂದ ಚೆನ್ನೈಗೆ ಹಾರಾಟ ನಡೆಸಲಿದೆ.

    ಮೈಸೂರು ವಿಮಾನ ನಿಲ್ದಾಣದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ನೇರ ಹಾರಾಟ ನಡೆಯಲಿದೆ. ವಿಮಾನ ಹಾರಾಟ ವಿಷಯವನ್ನು ಸಂಸದ ಪ್ರತಾಪ್ ಸಿಂಹ ಖಚಿತಪಡಿಸಿದ್ದು ತಮ್ಮ ಟ್ವಿಟರ್‍ನಲ್ಲಿ ವಿಮಾನಯಾನ ಸಚಿವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.