Tag: ಹೋ ಸ್ಟೇ ಚಾಲೆಂಜ್

  • ಕೊರೊನಾ ಎಫೆಕ್ಟ್ – ಸ್ಟೇ ಹೋಂ ಚಾಲೆಂಜ್ ಸ್ವೀಕರಿಸಿದ ಕೆ.ಎಲ್ ರಾಹುಲ್

    ಕೊರೊನಾ ಎಫೆಕ್ಟ್ – ಸ್ಟೇ ಹೋಂ ಚಾಲೆಂಜ್ ಸ್ವೀಕರಿಸಿದ ಕೆ.ಎಲ್ ರಾಹುಲ್

    ಬೆಂಗಳೂರು: ಕೊರೊನಾ ಭೀತಿಯಿಂದ ಎಲ್ಲರೂ ಮನೆಯೊಳಗೆ ತಮ್ಮನ್ನು ತಾವೇ ಐಸೋಲೇಟೆಡ್ ಮಾಡಿಕೊಳ್ಳುತ್ತಿದ್ದಾರೆ. ಈಗ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಸ್ಟೇ ಹೋಂ ಚಾಲೆಂಜ್ ಸ್ವೀಕರಿಸಿದ್ದಾರೆ.

    ಗುರುವಾರ ದೇಶವನ್ನು ಉದ್ದೇಶಿ ಮಾತನಾಡಿರುವ ಪ್ರಧಾನಿ ಮೋದಿ ಅವರು ಕೊರೊನಾ ವಿರುದ್ಧ ಹೋರಾಡಲು ಭಾನುವಾರ ಒಂದು ದಿನ ಜನತಾ ಕರ್ಫ್ಯೂ ಹಾಕಿದ್ದಾರೆ. ಬಹುತೇಕ ಎಲ್ಲ ಜನರು ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಎಲ್ ರಾಹುಲ್ ಕೂಡ ಮನೆಯಲ್ಲೇ ಉಳಿದು ಕೊರೊನಾ ವೈರಸ್‍ನಿಂದ ರಕ್ಷಣೆ ಪಡೆದಿದ್ದಾರೆ.

    https://www.instagram.com/p/B96uBm_guAf/

    ಮನೆಯಲ್ಲೇ ಕುಳಿತು ಕಾಲಕಳೆಯುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಹಂಚಿಕೊಂಡಿರುವ ರಾಹುಲ್ ಅವರು, ಈ ವಿಡಿಯೋದಲ್ಲಿ ಮೊದಲಿಗೆ ಮನೆಯಲ್ಲೇ ಕುಳಿತು ಬ್ಯಾಟ್ ಮತ್ತು ಬಾಲ್‍ನೊಂದಿಗೆ ಸಮಯ ಕಳೆದಿದ್ದಾರೆ. ನಂತರ ಬುಕ್ ಓದುವುದು, ವಿಡಿಯೋ ಗೇಮ್ ಆಡುವುದು, ಲ್ಯಾಪ್‍ಟಾಪ್ ನೋಡುವುದು, ಫೋನ್ ಅಲ್ಲಿ ಮಾತನಾಡುವುದು ಮಾಡಿ ಒಟ್ಟು ಮನೆಯಲ್ಲೇ ಇರಿ ಎಂಬ ಸಂದೇಶವನ್ನು ರಾಹುಲ್ ನೀಡಿದ್ದಾರೆ.

    ರಾಹುಲ್ ರೀತಿಯಲ್ಲೇ ವಿರಾಟ್ ಕೊಹ್ಲಿ ಕೂಡ ತಮ್ಮ ಪತ್ನಿ ಜೊತೆ ಕುಳಿತು ವಿಡಿಯೋ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಈಗ ನಾವೆಲ್ಲ ಬಹಳ ಕಠಿಣ ಪರಿಸ್ಥಿತಿಯಲ್ಲಿ ಇದ್ದೇವೆ. ನಾವೆಲ್ಲ ಸೇರಿ ಕೊರೊನಾ ವೈರಸ್ ಅನ್ನು ತಡೆಹಿಡಿಯಬೇಕಿದೆ. ನಾವು ನಮ್ಮ ಸುರಕ್ಷತೆಗಾಗಿ ಮನೆಯಲ್ಲೇ ಇದ್ದೇವೆ. ಹಾಗೇ ನೀವು ಕೂಡ ನಿಮ್ಮ ಸುರಕ್ಷತೆಗೆ ಮನೆಯಲ್ಲೇ ಇರಿ. ನಾವೆಲ್ಲರೂ ಸೇರಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟಬೇಕು. ನಾವಾಗಿಯೇ ಐಸೋಲೇಷನ್‍ನಲ್ಲಿ ಇರೋಣ ಎಂದು ವಿರುಷ್ಕಾ ಜೋಡಿ ಮನವಿ ಮಾಡಿಕೊಂಡಿದೆ

    ರಾಹುಲ್ ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಅದ್ಭುತ ಫಾರ್ಮ್‍ನಲ್ಲಿ ಇದ್ದಾರೆ. ಫೆಬ್ರವರಿಯಲ್ಲಿ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ರಾಹುಲ್ ಸೂಪರ್ ಆಗಿ ಬ್ಯಾಟ್ ಬೀಸಿದ್ದರು. ಈ ಸರಣಿಯಲ್ಲಿ 224 ರನ್ ಗಳಿಸುವ ಮೂಲಕ ಟಿ-20 ದ್ವಿಪಕ್ಷೀಯ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಹೊಸ ವಿಶ್ವದಾಖಲೆಯನ್ನು ನಿರ್ಮಿಸಿದ್ದರು.

    ಟಿ-20 ಮಾದರಿಯ ಕ್ರಿಕೆಟ್‍ನಲ್ಲಿ ಉತ್ತಮ ಲಯದಲ್ಲಿ ಇರುವ ರಾಹುಲ್, 823 ಅಂಕಗಳೊಂದಿಗೆ ಐಸಿಸಿ ರ್ಯಾಂಕಿಂಗ್‍ನಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಜೊತೆಗೆ ಎಂ.ಎಸ್ ಧೋನಿಯ ನಂತರ ಟಿ-20ಯಲ್ಲಿ ವಿಕೆಟ್ ಕೀಪರ್ ಆಗಿ ಭಾರತದ ಪರ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟ್ಸ್ ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.