Tag: ಹೋರಾಟ

  • ವೈಟಿಪಿಎಸ್ ಖಾಸಗೀಕರಣಕ್ಕೆ ವಿರೋಧ: ಭೂಸಂತ್ರಸ್ಥರಿಂದ ಉಗ್ರ ಹೋರಾಟದ ಎಚ್ಚರಿಕೆ

    ವೈಟಿಪಿಎಸ್ ಖಾಸಗೀಕರಣಕ್ಕೆ ವಿರೋಧ: ಭೂಸಂತ್ರಸ್ಥರಿಂದ ಉಗ್ರ ಹೋರಾಟದ ಎಚ್ಚರಿಕೆ

    ರಾಯಚೂರು: ಜಿಲ್ಲೆಯ ಯರಮರಸ್‍ನಲ್ಲಿರುವ ಸೂಪರ್ ಕ್ರಿಟಿಕಲ್ ಥರ್ಮಲ್ ವಿದ್ಯುತ್ ಕೇಂದ್ರ ವೈಟಿಪಿಎಸ್‍ನ್ನು ಸರ್ಕಾರ ಖಾಸಗೀಕರಣ ಮಾಡಲು ಹೊರಟಿರುವುದಕ್ಕೆ ಭೂಸಂತ್ರಸ್ತರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.

    ಈ ಹಿಂದಿನ ಸರ್ಕಾರ ಪವರ್ ಮೇಕ್ ಕಂಪನಿಗೆ ಮೆಂಟೇನೆನ್ಸ್ ಮತ್ತು ಆಪರೇಷನ್ ಖಾಸಗೀಕರಣಕ್ಕೆ ಮುಂದಾಗಿತ್ತು. ಭೂಸಂತ್ರಸ್ಥರ ಹೋರಾಟ ಹಿನ್ನೆಲೆ ತಾತ್ಕಾಲಿಕವಾಗಿ ಒಪ್ಪಂದ ರದ್ದಾಗಿತ್ತು. ಈಗ ಪುನಃ ಸರ್ಕಾರ ವಿದ್ಯುತ್ ಕೇಂದ್ರವನ್ನು ಖಾಸಗಿಯವರಿಗೆ ನೀಡಲು ಮುಂದಾಗಿದೆ ಎಂದು ಹೋರಾಟಗಳು ಆರಂಭವಾಗಿದ್ದು, ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಭೂಸಂತ್ರಸ್ಥರು ಎಚ್ಚರಿಕೆ ನೀಡಿದ್ದಾರೆ.

    ಇದುವರೆಗೆ ವಿದ್ಯುತ್ ಕೇಂದ್ರಕ್ಕೆ 13 ಸಾವಿರದ 250 ಕೋಟಿ ಖರ್ಚು ಮಾಡಿದ್ದಾರೆ. 1600 ಮೆಗಾ ವ್ಯಾಟ್ ಸಾಮಥ್ರ್ಯದ ವಿದ್ಯುತ್ ಕೇಂದ್ರವನ್ನು 2018 ರಲ್ಲೇ ಆರಂಭಿಸಬೇಕಾಗಿತ್ತು ಆದರೆ ಇನ್ನೂ ಆರಂಭಿಸಿಲ್ಲ. ಸರ್ಕಾರ ಸ್ಥಳೀಯರಿಗೆ, ಭೂಸಂತ್ರಸ್ಥರಿಗೆ ಉದ್ಯೋಗ ಕೊಡುತ್ತೇವೆ ಎಂದು ಭರವಸೆ ನೀಡಿದ್ದಕ್ಕೆ ಕಾರ್ಯಾರಂಭಕ್ಕೆ ಎಲ್ಲರೂ ಒಪ್ಪಿಗೆ ಕೊಟ್ಟಿದ್ದರು. ಈಗ ಪವರ್ ಮೇಕ್ ಕಂಪನಿಗೆ ನೀಡಲು ಮುಂದಾಗಿರುವುದಕ್ಕೆ ಬಿಡುವುದಿಲ್ಲ ಎಂದು ಸ್ಥಳೀಯ ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

  • ಏಕಾಏಕಿ ಗಣೇಶ ದೇವಸ್ಥಾನ ಧ್ವಂಸ – ಪಾರ್ಕ್ ನಿರ್ಮಿಸಿರುವ ಮಹಿಳೆಯರ ಕಣ್ಣೀರು

    ಏಕಾಏಕಿ ಗಣೇಶ ದೇವಸ್ಥಾನ ಧ್ವಂಸ – ಪಾರ್ಕ್ ನಿರ್ಮಿಸಿರುವ ಮಹಿಳೆಯರ ಕಣ್ಣೀರು

    ರಾಯಚೂರು: ಸಾರ್ವಜನಿಕರೆಲ್ಲಾ ಕೈಯಿಂದ ದುಡ್ಡು ಹಾಕಿ ನಿರ್ಮಿಸಿದ್ದ ಉದ್ಯಾನವನವನ್ನು ಪುರಸಭೆ ಮುಖ್ಯಾಧಿಕಾರಿಯೇ ಹಾಳು ಮಾಡಲು ಮುಂದಾಗಿರುವುದಕ್ಕೆ ಮಹಿಳೆಯರೆಲ್ಲ ಆಕ್ರೋಶ ವ್ಯಕ್ತಪಡಿಸಿ ಹೋರಾಟಕ್ಕೆ ಮುಂದಾಗಿರುವ ಘಟನೆ ರಾಯಚೂರಿನ ಮಸ್ಕಿಯಲ್ಲಿ ನಡೆದಿದೆ.

    ಸಾರ್ವಜನಿಕ ಸ್ಥಳಗಳಲ್ಲಿನ ದೇವಸ್ಥಾನಗಳನ್ನು ತೆರವುಗೊಳಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ ಮಸ್ಕಿ ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ರಾತ್ರೋ ರಾತ್ರಿ ಮಸ್ಕಿಯ ಬಸವೇಶ್ವರ ನಗರದಲ್ಲಿನ ಬಲಮೂರಿ ಗಣೇಶ ದೇವಸ್ಥಾನವನ್ನು ಹೊಡೆದು ಹಾಕುವ ಮೂಲಕ ಸ್ಥಳೀಯ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

    ಪುರಸಭೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಉದ್ಯಾನವನವನ್ನು ಸಾರ್ವಜನಿಕರೇ ಲಕ್ಷಾಂತರ ರೂಪಾಯಿ ದುಡ್ಡು ಹಾಕಿ ಇಡೀ ಜಿಲ್ಲೆಗೆ ಮಾದರಿ ಉದ್ಯಾನವನವನ್ನಾಗಿ ನಿರ್ಮಿಸಿದ್ದರು. ಕಿಡಿಗೇಡಿಗಳು, ಪುಂಡರು ಉದ್ಯಾನವನ ಹಾಳು ಮಾಡಬಾರದು ಎಂದು ಗಣೇಶನ ಪುಟ್ಟ ದೇವಾಲಯ ನಿರ್ಮಿಸಿ ಸಾರ್ವಜನಿಕರು ಪೂಜಿಸುತ್ತಿದ್ದರು. ಆದರೆ ಏಕಾಏಕಿ ದೇವಸ್ಥಾನ ತೆರವುಗೊಳಿಸಿರುವುದಲ್ಲದೆ ಜೆಸಿಬಿಯನ್ನು ಉದ್ಯಾನವನದಲ್ಲಿ ಓಡಾಡಿಸಿ ಗಿಡಮರಗಳು, ಲಾನ್, ಕಾಂಪೌಂಡ್ ಹಾಳು ಮಾಡಲಾಗಿದೆ. ದೇವಸ್ಥಾನದ ವಿಗ್ರಹವನ್ನು ಸ್ವತಃ ತೆರುವುಮಾಡಿಕೊಳ್ಳುವುದಾಗಿ ಸಾರ್ವಜನಿಕರು ಹೇಳಿದ್ದರೂ ರಾತ್ರೋರಾತ್ರಿ ಧ್ವಂಸಮಾಡಲಾಗಿದೆ. ಇದರಿಂದ ರೊಚ್ಚಿಗೆದ್ದಿರುವ ಇಲ್ಲಿನ ಮಹಿಳೆಯರು ಕಣ್ಣೀರು ಹಾಕುತ್ತಲೇ ಹೋರಾಟಕ್ಕೆ ಮುಂದಾಗಿದ್ದಾರೆ.

    ದೇವಸ್ಥಾನಗಳನ್ನು ತೆರವುಗೊಳಿಸುವುದಕ್ಕಿಂತ ಮುಂಚೆ ಅನಧಿಕೃತ ಕಟ್ಟಡಗಳ ಸಮೀಕ್ಷೆ ಮಾಡಬೇಕು. ಅದನ್ನು ಮಾಧ್ಯಮಗಳಲ್ಲಿ ಪ್ರಕಟಿಸಿ ಸಂಬಂಧ ಪಟ್ಟವರಿಗೆ ಒಂದು ವಾರಗಳ ಕಾಲವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸೂಚಿಸಿದ್ದರೂ ಸಹ ಮುಖ್ಯಾಧಿಕಾರಿಗಳು ಸುಪ್ರೀಂ ಆದೇಶವನ್ನೇ ಉಲ್ಲಂಘನೆ ಮಾಡಿದ್ದಾರೆ. ದೇವಸ್ಥಾನದ ಒಳಗಿನ ಮೂರ್ತಿಗಳನ್ನು ಎಲ್ಲೆಂದರಲ್ಲಿ ಬಿಸಾಕಿ ದೇವಸ್ಥಾನ ದ್ವಂಸಗೊಳಸಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪ ಮಾಡಿದ್ದಾರೆ.

    ಸುಪ್ರೀಂ ಕೋರ್ಟ್ ಆದೇಶಕ್ಕೆ ನಾವು ತಲೆಬಾಗುತ್ತೇವೆ. ಸುಪ್ರೀಂ ಆದೇಶದಂತೆ ದೇವಸ್ಥಾನ ತೆರವುಗೊಳಿಸಲು ನಾವು ಸಿದ್ಧರಿದ್ದೇವು. ಆದರೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ರಾತ್ರೋ ರಾತ್ರಿ ದೇವಸ್ಥಾನ ದ್ವಂಸಗೊಳಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಕಿಡಿಕಾರಿದ್ದಾರೆ.

  • ಕೊಡಗಿನ ದಿಡ್ಡಳ್ಳಿಯ ಆದಿವಾಸಿ ಬುಡಕಟ್ಟು ಮಾದರಿಯಲ್ಲೇ ಮತ್ತೊಂದು ಹೋರಾಟಕ್ಕೆ ಸಿದ್ಧತೆ

    ಕೊಡಗಿನ ದಿಡ್ಡಳ್ಳಿಯ ಆದಿವಾಸಿ ಬುಡಕಟ್ಟು ಮಾದರಿಯಲ್ಲೇ ಮತ್ತೊಂದು ಹೋರಾಟಕ್ಕೆ ಸಿದ್ಧತೆ

    ಮಡಿಕೇರಿ: ಕಳೆದ ನಾಲ್ಕು ವರ್ಷಗಳ ಹಿಂದೆ ದೇಶದ ಗಮನವನ್ನೇ ಸೆಳೆದಿದ್ದ ಕೊಡಗಿನ ದಿಡ್ಡಳ್ಳಿಯ ಆದಿವಾಸಿ ಬುಡಕಟ್ಟು ಜನರ ಹೋರಾಟ ಇನ್ನೂ ಮಾಸಿಲ್ಲ. ಆಗಲೇ ಇದೇ ಮಾದರಿಯ ಮತ್ತೊಂದು ಹೋರಾಟವನ್ನು ಬುಡಕಟ್ಟು ಮತ್ತು ದಲಿತ ಸಮುದಾಯದ 40 ಕುಟುಂಬಗಳು ನಡೆಸುತ್ತಿವೆ. ಆಹೋರಾತ್ರಿಯ ಈ ಹೋರಾಟಕ್ಕೆ ಅಧಿಕಾರಿಗಳು ಮಾತ್ರ ದರ್ಪ ತೋರಿಸುತ್ತಿದ್ದಾರೆ.

    ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡಿನಲ್ಲಿ. 2016 ರಲ್ಲಿ ದಿಡ್ಡಳ್ಳಿಯ ಆದಿವಾಸಿ ಬುಡಕಟ್ಟು ಜನರು ಸ್ವಂತ ಸೂರಿಗಾಗಿ ಆಹೋರಾತ್ರಿ ಮತ್ತು ಬೆತ್ತಲೆ ಹೋರಾಟ ಮಾಡಿ ಇಡೀ ದೇಶದ ಗಮನಸೆಳೆದಿದ್ದರು. ಇದೀಗ ಪೆರಂಬಾಡಿ, ಕೆದಮುಳ್ಳೂರು, ಬಿಟ್ಟಂಗಾಲ, ಆರ್ಜಿ ಪಂಚಾಯಿತಿ ವ್ಯಾಪ್ತಿಯ 40 ದಲಿತ ಮತ್ತು ಆದಿವಾಸಿ ಬುಡಕಟ್ಟು ಸಮುದಾಯದ ಕುಟುಂಬಗಳು ಹೋರಾಟ ನಡೆಸುತ್ತಿವೆ. ಬಾಳುಗೋಡಿನ ಸರ್ವೇನಂಬರ್ 337/1 ರಲ್ಲಿರುವ 30 ಎಕರೆ ಸರ್ಕಾರಿ ಪೈಸಾರಿ ಜಾಗದ ಪೈಕಿ ಎರಡು ಎಕರೆಯಷ್ಟು ಪ್ರದೇಶದಲ್ಲಿ ಕಳೆದ ಐದು ದಿನಗಳ ಹಿಂದೆ ಗುಡಿಸಲು ನಿರ್ಮಿಸಿ ವಾಸಿಸಲು ಮುಂದಾಗಿದ್ದರು.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋದ ವಿರಾಜಪೇಟೆ ಕಂದಾಯ ಅಧಿಕಾರಿ ಮತ್ತು ಪಂಚಾಯಿತಿಯ ಅಧಿಕಾರಿಗಳು ಗುಡಿಸಲುಗಳನ್ನು ಕಿತ್ತೆಸೆದು ದರ್ಪ ಮೆರೆದಿದ್ದಾರೆ. ಹೀಗಾಗಿ ಅಷ್ಟು ಕುಟುಂಬಗಳು ನಮಗೆ ಸ್ವಂತ ಮನೆ ನಿರ್ಮಿಸಿಕೊಡುವವರಗೆ ಎಲ್ಲಾ ರೀತಿಯ ಹೋರಾಟಕ್ಕೆ ಸಿದ್ಧರಿದ್ದೇವೆ ಎನ್ನುತ್ತಿದ್ದಾರೆ.

    ತಂದೆ ಅಜ್ಜನ ಕಾಲದಿಂದಲೂ ಕಾಫಿ ಎಸ್ಟೇಟ್‍ನ ಲೈನ್‍ಮನೆಯಲ್ಲೇ ಬೆಳೆದಿದ್ದೇವೆ. ಅಲ್ಲಿಯ ಸಮಸ್ಯೆಗಳನ್ನು ಅನುಭವಿಸಿ ಹಲವು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿದ್ದೇವೆ. ಬಾಡಿಗೆ ಕಟ್ಟೋದಕ್ಕೆ ನಮ್ಮ ಬಳಿ ಹಣವೂ ಇಲ್ಲದೆ ಸೂರು ಕಲ್ಪಿಸಿಕೊಡುವಂತೆ ಹತ್ತು ವರ್ಷಗಳಿಂದ ಪಂಚಾಯಿತಿಗೆ ಅರ್ಜಿ ಸಲ್ಲಿಸುತ್ತಾ ಬಂದಿದ್ದೇವೆ. ಖಾಲಿ ಇರುವ ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಿದರೆ ಅಧಿಕಾರಿಗಳು ಬಂದು ಎಲ್ಲವನ್ನು ಕಿತ್ತೆಸೆದು ದರ್ಪ ಮೆರೆಯುತ್ತಿದ್ದಾರೆ. ನಮಗೆ ಸ್ವಂತ ಸೂರು ನಿರ್ಮಿಸಿಕೊಡದ ಹೊರತ್ತು ಇಲ್ಲಿಂದ ಹೋಗೋದಿಲ್ಲ ಅಂತಾ ಪಟ್ಟು ಹಿಡಿದು ಕುಳಿತಿದ್ದಾರೆ.

    ಅಧಿಕಾರಿಗಳು ಮಾತ್ರ ಇದು ಸರ್ಕಾರಿ ಜಾಗ, ಅಲ್ಲಿ ಸ್ಮಶಾನಕ್ಕೆ ಜಾಗ ಕೊಡಬೇಕಾಗಿದೆ. ಜೊತೆಗೆ ವಿರಾಜಪೇಟೆ ನಗರದ ಕಸವಿಲೇವಾರಿಗೆ ಜಾಗಕೊಡಬೇಕಾಗಿದೆ. ಹೀಗಾಗಿ ಆ ಸ್ಥಳದಲ್ಲಿ ಯಾರನ್ನೂ ಕೂರಲು ಬಿಡುವುದಿಲ್ಲ. ಒಂದು ವೇಳೆ ಅವರ ಪ್ರತಿಭಟನೆ ಮುಂದುವರಿದು ಕುಳಿತರೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಎಲ್ಲೆಲ್ಲಿಂದಲೋ ಜನರು ಬಂದು ಕುಳಿತಿದ್ದಾರೆ. ಅವರೆಲ್ಲರ ಪೂರ್ವಾಪರ ಪರಿಶೀಲನೆ ಮಾಡಿ, ಒಂದು ವೇಳೆ ನಿಜವಾಗಿಯೂ ಅವರು ನಿರಾಶ್ರಿತರೇ ಆಗಿದ್ದರೆ, ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಕೊಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಡಿ.24ರಂದು ಮಹದಾಯಿ ಹೋರಾಟ- ಶಂಕರ್ ಅಂಬಲಿ

    ಡಿ.24ರಂದು ಮಹದಾಯಿ ಹೋರಾಟ- ಶಂಕರ್ ಅಂಬಲಿ

    ಧಾರವಾಡ: ಮಹಾದಾಯಿ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವು ಖಂಡಿಸಿ ಡಿಸೆಂಬರ್ 24ರಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಹದಾಯಿಗಾಗಿ ಮಹಾವೇದಿಕೆ ರಾಜ್ಯ ಸಂಚಾಲಕ ಶಂಕರ ಅಂಬಲಿ ತಿಳಿಸಿದರು.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಪರಿಸರ ಇಲಾಖೆಯಿಂದ ಕಳಸಾ ಬಂಡೂರಿ ಅನುಮತಿಯನ್ನು ಹಿಂಪಡೆಯಲಾಗಿದೆ. ಈ ಕ್ರಮವನ್ನು ಖಂಡಿಸಿ ಡಿಸೆಂಬರ್ 24ರಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಗುವುದು. ರೈತರು, ವ್ಯಾಪಾರಿಗಳು, ಸಂಘ ಸಂಸ್ಥೆಗಳವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

    ಧಾರವಾಡ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ಮಾಡುತ್ತೇವೆ. ಕಳಸಾ ಬಂಡೂರಿಗೆ ಅನುಮತಿ ನೀಡಿ ನಂತರ ವಾಪಸ್ ಪಡೆಯಲು ನೀಡಿರುವ ಕಾರಣ ಸೂಕ್ತವಾಗಿಲ್ಲ. ಏಕೆಂದರೆ ಅನುಮತಿ ಕೊಡುವಾಗ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿರುವ ಕುರಿತು ಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದರು.

    ಈಗ ಅನುಮತಿ ಹಿಂಪಡೆಯಲು ನೀಡಿದ ಕಾರಣ ನೋಡಿದರೆ ನಮಗೆ ಮೋಸವಾಗುತ್ತಿದೆ ಎಂದು ಅನ್ನಿಸುತ್ತಿದೆ. 2002ರಲ್ಲಿ ವಾಜಪೇಯಿ ಕಾಲದಲ್ಲಿಯೂ ಹೀಗೆ ಮಾಡಿದ್ದರು. ಅನುಮತಿ ಕೊಟ್ಟ ನಾಲ್ಕು ತಿಂಗಳ ಬಳಿಕ ಗೋವಾ ಸರ್ಕಾರದ ಕಾರಣ ನೀಡಿ ವಾಪಸ್ ಪಡೆದಿದ್ದರು. ಇದರಿಂದಾಗಿ 17 ವರ್ಷ ತಡವಾಗಿದೆ, ಈಗ ಮತ್ತೆ ಅನುಮತಿ ಕೊಟ್ಟು ವಾಪಸ್ ಪಡೆದಿದ್ದೀರಿ. ಹಾಗಾದರೆ ಇದಕ್ಕೆ ಇನ್ನು ಎಷ್ಟು ವರ್ಷ ಬೇಕಾಗುತ್ತದೆ ಎಂದು ಪ್ರಶ್ನಿಸಿದರು.

  • ನನ್ನ ನಂಬಿ 20 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ, ಅವರಿಗಾಗಿ ಹೋರಾಡುತ್ತೇನೆ: ರಮೇಶ್ ಜಾರಕಿಹೊಳಿ

    ನನ್ನ ನಂಬಿ 20 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ, ಅವರಿಗಾಗಿ ಹೋರಾಡುತ್ತೇನೆ: ರಮೇಶ್ ಜಾರಕಿಹೊಳಿ

    -ಇನ್ನೂ 10 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ

    ಬೆಳಗಾವಿ: ನನ್ನ ನಂಬಿ 20 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಅವರ ಪರವಾಗಿ ಕಾನೂನು ಹೋರಾಟ ಮಾಡಲು ನಾನು ದಿಲ್ಲಿಗೆ ಹೋಗಿದ್ದೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಇಂದು ನಡೆದ ಸಮಾವೇಷದಲ್ಲಿ ಮಾತನಾಡಿದ ಅವರು, ನಾನು ಪ್ರವಾಹ ಪಿಡಿತ ಪ್ರದೇಶಗಳಿಗೆ ಹೋಗಿ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತೇನೆ. ಮೈತ್ರಿ ಸರ್ಕಾರದಲ್ಲಿ ಇದ್ದಂತಹ ವ್ಯವಸ್ಥೆ ನೋಡಿ ನನಗೆ ಅಲ್ಲಿ ಇರಲಿಕ್ಕೆ ಮನಸ್ಸು ಆಗಲಿಲ್ಲ. ಗೋಕಾಕ್ ಮತಕ್ಷೇತ್ರಕ್ಕೆ ಮೈತ್ರಿ ಸರ್ಕಾರದಲ್ಲಿ ಸ್ಪಂದನೆ ಸಿಗಲಿಲ್ಲ. ಮೈತ್ರಿ ಸರ್ಕಾರದಲ್ಲಿರಲು ನನಗೆ ಒಂದು ಕ್ಷಣನೂ ಮನಸ್ಸು ಇರಲಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಚಮಚಾಗಿರಿ ಜನರ ಮಾತುಗಳನ್ನು ಕೇಳಿದ್ದಾರೆ. ನನ್ನ ಜೊತೆ ಸದ್ಯ 20 ಶಾಸಕರು ಇದ್ದಾರೆ, ಜೊತೆಗೆ ಕೋರ್ಟ್ ನಲ್ಲಿ ನ್ಯಾಯ ಸಿಕ್ಕ ಮೆಲೆ ನಮ್ಮ ಹೋರಾಟದ ರೂಪುರೇಷಗಳು ಬೇರೆ ಇರುತ್ತೆ ಎಂದು ಹೇಳಿದರು.

    ಇನ್ನೂ 10 ಶಾಸಕರು ನನ್ನ ಜೊತೆ ಸಂಪರ್ಕದಲ್ಲಿ ಇದ್ದಾರೆ. ಇವತ್ತೆ ಚುನಾವಣೆ ಆದರೂ ನಾನು ಗೋಕಾಕ್ ನಲ್ಲಿ ಸ್ಪರ್ಧೆ ಮಾಡಬಹುದು. ಈ ಅಪರೇಷನ್ ಆಗಬೇಕೆಂದರೆ ಸತೀಶ್ ಜಾರಕಿಹೊಳಿ, ಮತ್ತು ಎಂ.ಬಿ.ಪಾಟೀಲ್ ಕಾರಣ. ನಾನು ಲಕ್ಷ್ಮಿ ದೇವರ ಮುಟ್ಟಿ ಹೇಳುತ್ತೇನೆ ಸತೀಶ್ ಮೋಸಗಾರ, ಆತನಿಂದಲೇ ಅಪರೇಷನ್ ನಡೆದಿದೆ. ಲಖನ್ ಜಾರಕಿಹೊಳಿ ಮತ್ತು ನನ್ನ ಮಧ್ಯೆ ಜಗಳ ಹಚ್ಚುವ ಕೆಲಸ ಸತೀಶ್ ಮಾಡುತ್ತಿದ್ದಾನೆ. ಮುಂದಿನ ದಿನದಲ್ಲಿ ಸತೀಶ್‍ಗೆ ಯಮಕನಮರಡಿ ಜನ ಒದ್ದು ಓಡಿಸುತ್ತಾರೆ. ನಮ್ಮ ಕುಟುಂಬದಲ್ಲಿ ಸತೀಶ್ ಸತ್ಯಹರಿಶ್ಚಂದ್ರ ಅಲ್ಲ ಎಂದು ಗುಡುಗಿದರು.

    ಡಿಕೆಶಿ ಕಾನೂನು ಹೋರಾಟ ಮಾಡಿ ಹೊರಬರಲಿ. ಆತ ನನ್ನ ಆತ್ಮೀಯ ಗೆಳೆಯ ಎಂದ ರಮೇಶ್ ಜಾರಕಿಹೊಳಿ, ಗೋಕಾಕ್‍ನಲ್ಲಿ ಏನೇ ಕುತಂತ್ರ ಮಾಡಿದರೂ ಸತೀಶನದ್ದು ನಡೆಯಲ್ಲ. ಕಾನೂನಿನ ಹೋರಾಟದ ಬಳಿಕ ನಾನು ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

  • ಸರ್ಕಾರ ಯಾವುದೇ ಇರಲಿ, ನಮ್ಮ ಬೇಡಿಕೆ ಪೂರೈಕೆ ಆಗ್ಬೇಕು: ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ

    ಸರ್ಕಾರ ಯಾವುದೇ ಇರಲಿ, ನಮ್ಮ ಬೇಡಿಕೆ ಪೂರೈಕೆ ಆಗ್ಬೇಕು: ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ

    ದಾವಣಗೆರೆ: ಸರ್ಕಾರ ಯಾವುದೇ ಇರಲಿ. ನಮ್ಮ ಬೇಡಿಕೆ ಎರಡು ತಿಂಗಳಲ್ಲಿ ಪೂರೈಕೆ ಆಗಬೇಕು ಎಂದು ಮತ್ತೆ ಸರ್ಕಾರದ ವಿರುದ್ಧ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಗುಡುಗಿದ್ದಾರೆ.

    ಇಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮ ಬೇಡಿಕೆಯನ್ನು ನೆರವೇರಿಸುವಲ್ಲಿ ವಿಳಂಬವಾದರೆ ನಮ್ಮ 15 ಶಾಸಕರು ಪಕ್ಷಾತೀತವಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

    ಕೆಲ ದಿನಗಳ ಹಿಂದೆ ಪರಿಶಿಷ್ಟ ಪಂಗಡಕ್ಕೆ ಈಗ ಇರುವ ಶೇ 3.5 ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರದ ಮಾದರಿಯಲ್ಲಿ ಶೇಕಡಾ 7.5ಕ್ಕೆ ಏರಿಸುವಂತೆ ಆಗ್ರಹಿಸಿ ಸ್ವಾಮೀಜಿ ಪಾದಯಾತ್ರೆ ಮಾಡಿದ್ದರು. ಅ ಸಮಯದಲ್ಲಿ ರಾಜ್ಯ ಸರ್ಕಾರ ಸ್ವಾಮೀಜಿ ಅವರ ಬಳಿ ಎರಡು ತಿಂಗಳು ಗಡುವು ಕೇಳಿತ್ತು. ಆದರೆ ಈಗ ಶಾಸಕರ ರಾಜೀನಾಮೆ ಇಂದ ಸರ್ಕಾರವೇ ಪತನವಾಗುತ್ತಿದೆ.

    ಈ ಸಮಯದಲ್ಲಿ ಸರ್ಕಾರ ಯಾವುದೇ ಇರಲಿ. ನಮ್ಮ ಬೇಡಿಕೆ ಪೂರೈಕೆ ಆಗಬೇಕು. ವಿಳಂಬವಾದರೆ ಮತ್ತೆ ಹೋರಾಟ ಮಾಡುತ್ತೇವೆ. ಇಲ್ಲದಿದ್ದರೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‍ನಲ್ಲಿ ಇರುವ ವಾಲ್ಮೀಕಿ ಸಮಾಜದ 15 ಜನ ಶಾಸಕರು ರಾಜೀನಾಮೆ ಕೊಡುವುದು ಶತಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.

  • ಜನರನ್ನ ಸೆಳೆಯುವ ದುಂದು ವೆಚ್ಚದ ಕಾರ್ಯಕ್ರಮವೇ ಗ್ರಾಮ ವಾಸ್ತವ್ಯ: ಕೊಡಿಹಳ್ಳಿ ಚಂದ್ರಶೇಖರ್

    ಜನರನ್ನ ಸೆಳೆಯುವ ದುಂದು ವೆಚ್ಚದ ಕಾರ್ಯಕ್ರಮವೇ ಗ್ರಾಮ ವಾಸ್ತವ್ಯ: ಕೊಡಿಹಳ್ಳಿ ಚಂದ್ರಶೇಖರ್

    ಯಾದಗಿರಿ: ಸಿಎಂ ಮಾಡುತ್ತಿರುವ ಗ್ರಾಮ ವಾಸ್ತವ್ಯ ದುಂದು ವೆಚ್ಚವಾಗಿದ್ದು, ಜನರ ಗಮನವನ್ನು ತಮ್ಮತ್ತ ಸೆಳೆಯಲು ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆಂದು ರೈತ ಸಂಘದ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್ ಟೀಕಿಸಿದ್ದಾರೆ.

    ಜಿಲ್ಲೆಯಲ್ಲಿ ರೈತ ಸಂಘದ ಕಚೇರಿ ಉದ್ಘಾಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ಮೈತ್ರಿ ಸರ್ಕಾರ ರಾಜ್ಯದ ಜನರ ಮನಸ್ಸಿನಲ್ಲಿ ಅಸ್ಥಿರಗೊಂಡಿದೆ. ಹೀಗಾಗಿ ಜನರ ಗಮನ ಸೆಳೆಯಲು ಸಿಎಂ ಈ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಸಿಎಂ ವಿಧಾನಸೌಧಲ್ಲಿಯೇ ಕುಳಿತು ಗ್ರಾಮಗಳ ಅಭಿವೃದ್ಧಿಗೆ ಸೂಕ್ತ ಕಾನೂನು ತಂದು ಹಳ್ಳಿಗಳನ್ನು ಅಭಿವೃದ್ಧಿಪಡಿಸಬಹುದು. ಆದರೆ ಗ್ರಾಮ ವಾಸ್ತವ್ಯ ಮಾಡಿ ಜನರ ಮನಸ್ಸು ಬೇರೆ ರೀತಿಗೆ ತಿರುಗಿಸಲು ಸಿಎಂ ಮುಂದಾಗಿದ್ದಾರೆ. ಇನ್ನೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡದೆ, ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಗುಡುಗಿದರು.

    ಸಿಎಂ ಜಿಲ್ಲೆಗೆ ಗ್ರಾಮ ವಾಸ್ತವ್ಯಕ್ಕೆ ಬರುವ ದಿನ ರೈತ ಸಂಘದಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು.

  • ಕಾವೇರಿ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್-1,016 ಹೋರಾಟಗಾರರು ಪ್ರಕರಣದಿಂದ ಖುಲಾಸೆ

    ಕಾವೇರಿ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್-1,016 ಹೋರಾಟಗಾರರು ಪ್ರಕರಣದಿಂದ ಖುಲಾಸೆ

    ಬೆಂಗಳೂರು: ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯ ಕಾವೇರಿ ಹೋರಾಟಗಾರರಿಗೆ ಸಂತಸದ ಸುದ್ದಿ ನೀಡಿದ್ದು, ಕಾವೇರಿ ನದಿ ನೀರಿನ ವಿಷಯವಾಗಿ ನಡೆದ ಪ್ರತಿಭಟನೆಗಳಲ್ಲಿ ದಾಖಲಾಗಿದ್ದ 51 ಪಕ್ರರಣಗಳನ್ನ ಹಿಂಪಡೆದಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಮಾಹಿತಿ ನೀಡಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವರು, ಸರ್ಕಾರದ ನಿರ್ಧಾರದಿಂದ ಒಟ್ಟು 1,016 ಹೋರಾಟಗಾರರಿಗೆ ಪ್ರಕರಣಗಳಿಂದ ಮುಕ್ತಿ ಸಿಗಲಿದೆ. ಆದರೆ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಮಾಡಿದವರ ವಿರುದ್ಧದ ಪ್ರಕರಣಗಳನ್ನ ಸರ್ಕಾರ ವಾಪಸ್ ಪಡೆಯದೇ ಇರಲು ನಿರ್ಧಾರ ಮಾಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಮಂಡ್ಯದಲ್ಲಿ 14 ಪ್ರಕರಣಗಳಲ್ಲಿ 180 ಆರೋಪಿಗಳು, ಮದ್ದೂರಿನಲ್ಲಿ 6 ಪ್ರಕರಣಗಳಲ್ಲಿ 94 ಆರೋಪಿಗಳು, ಮಳವಳ್ಳಿಯಲ್ಲಿ 3 ಪ್ರಕರಣಗಳಲ್ಲಿ 36 ಆರೋಪಿಗಳು, ಶ್ರೀರಂಗಪಟ್ಟಣದಲ್ಲಿ 11 ಪ್ರಕರಣಗಳಲ್ಲಿ 74 ಆರೋಪಿಗಳು, ಕೆಆರ್ ಪೇಟೆಯಲ್ಲಿ 1 ಪ್ರಕರಣದಲ್ಲಿ ಒಬ್ಬ ಆರೋಪಿ, ಇನ್ನು ಪಾಂಡವಪುರದಲ್ಲಿ ದಾಖಲಾಗಿದ್ದ 16 ಪ್ರಕರಣಗಳಲ್ಲಿ 631 ಆರೋಪಿಗಳು ಖುಲಾಸೆಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

    ಮಂಡ್ಯ ಕಾವೇರಿ ಹೋರಾಟಗಾರರ ವಿರುದ್ಧ ಪ್ರಕರಣಗಳ ಬಗ್ಗೆ ಇಂದು ಮಾತನಾಡಿದ್ದ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಅವರು, ಕಾವೇರಿ ಹೋರಾಟಗಾರರ ಮೇಲಿನ ಕೇಸನ್ನು ಸರ್ಕಾರ ವಾಪಸ್ ಪಡೆದ ಹಿನ್ನೆಲೆ ರೈತರು ಸ್ವಂತಕ್ಕೇನು ಹೋರಾಟ ಮಾಡಲಿಲ್ಲ. ಕಾವೇರಿ ನೀರಿಗಾಗಿ ಹೋರಾಡಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬ ರೈತರು. ಅವರಿಗೆ ರೈತರ ಕಷ್ಟ ಗೊತ್ತು. ರೈತರು ಸ್ವಂತಕ್ಕೇನು ಹೋರಾಟ ಮಾಡಲಿಲ್ಲ. ಕಾವೇರಿ ನೀರಿಗಾಗಿ ಹೋರಾಡಿದ್ದರು. ರೈತರ ಕಷ್ಟ ಅರ್ಥ ಮಾಡಿಕೊಂಡು ಕೇಸುಗಳನ್ನು ಸಿಎಂ ವಾಪಸ್ ಪಡೆದಿದ್ದಾರೆ. ಆದರಿಂದ ಸಿಎಂ ಕುಮಾರಸ್ವಾಮಿ ಅವರಿಗೆ ಕೇಸು ವಾಪಸ್ ಪಡೆದಿದ್ದಕ್ಕೆ ರೈತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಳ್ಳಾರಿ ಆಯ್ತು ಈಗ ಜಾರಕಿಹೊಳಿ ಕೋಟೆಯಲ್ಲಿ ಹವಾ – ರೈತರ ಜೊತೆ ಡಿಕೆಶಿ ಸಂಧಾನ ಯಶಸ್ವಿ

    ಬಳ್ಳಾರಿ ಆಯ್ತು ಈಗ ಜಾರಕಿಹೊಳಿ ಕೋಟೆಯಲ್ಲಿ ಹವಾ – ರೈತರ ಜೊತೆ ಡಿಕೆಶಿ ಸಂಧಾನ ಯಶಸ್ವಿ

    – ಕಾರ್ಖಾನೆ ಮಾಲೀಕರನ್ನ ಬಿಡುತ್ತೇವೆ ಹೊರತು ರೈತರನ್ನ ಬಿಡುವ ಪ್ರಶ್ನೆಯೇ ಇಲ್ಲ
    – ಡಿಕೆಶಿ ಸಂಧಾನಕ್ಕೆ ಬಗ್ಗಿ ರೈತರ ಪ್ರತಿಭಟನೆ ವಾಪಸ್

    ಬೆಳಗಾವಿ: ಬಳ್ಳಾರಿಯಲ್ಲಿ ಗಣಿಧಣಿಗಳ ಕೋಟೆಯನ್ನು ಉರುಳಿಸಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಈಗ ಜಾರಕಿಹೊಳಿ ಸಹೋದರರ ಕೋಟೆಗೆ ಲಗ್ಗೆ ಇಟ್ಟು ಯಶಸ್ವಿಯಾಗಿದ್ದಾರೆ. ನಾಲ್ಕು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಬ್ಬಿನ ಬಾಕಿ ಹಣವನ್ನು ಪಾವತಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಮನ ಒಲಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ.

    ಬೆಳಗಾವಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಡಿಕೆಶಿ ಸಮಾಧಾನ ಮಾಡಿದ್ದಾರೆ. ರೈತರು ಕೂಡ ಡಿಕೆಶಿ ಅವರ ಮಾತಿಗೆ ಬೆಲೆಕೊಟ್ಟು ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.

    ಈ ವೇಳೆ ಹೋರಾಟ ನಡೆಸುತ್ತಿದ್ದ ರೈತರು ಡಿ.ಕೆ.ಶಿವಕುಮಾರ್ ಅವರಲ್ಲಿ ಸಚಿವ ಜಾರಕಿಹೊಳಿ ಮತ್ತು ಡಿಸಿ ಬೊಮ್ಮನಹಳ್ಳಿ ವಿರುದ್ಧ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ನಾವೂ ಪ್ರತಿ ಸಲ ಡಿಸಿ ಅವರಿಗೆ ಮನವಿ ಕೊಡಬೇಕೇ? ನ್ಯಾಯಕ್ಕಾಗಿ ಸಾಯುವವರೆಗೂ ಮನವಿ, ಅರ್ಜಿ ಕೊಡುತ್ತಾ ಇರಬೇಕು ಎಂದು ಕಬ್ಬಿನ ಹೋರಾಟಗಾರರು ಅಳಲು ತೋಡಿಕೊಂಡಿದ್ದಾರೆ. ಕಬ್ಬಿನ ಬಾಕಿ ಉಳಿದಿರುವ ಹಣವನ್ನ ಕೊಡಿಸಿ, ಅಲ್ಲದೇ ಜಿಲ್ಲಾಡಳಿತಕ್ಕೆ ರೈತರ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಈ ವೇಳೆ ಪ್ರತಿಕ್ರಿಯಿಸಿದ ಡಿಕೆಶಿ, ನಮ್ಮ ರೈತರು ರಾತ್ರೋರಾತ್ರಿ ಬೆಳಗಾವಿಯಲ್ಲಿ ಧರಣಿಯನ್ನು ನಡೆಸುತ್ತಿದ್ದಾರೆ. ಸರ್ಕಾರದ ಗಮನವನ್ನು ಸೆಳೆದಿದ್ದಾರೆ. ಅದಕ್ಕೆ ಸ್ಪಂದಿಸಬೇಕಾದದ್ದು ನಮ್ಮ ಧರ್ಮ. ಈಗಾಗಲೇ ಮುಖ್ಯಮಂತ್ರಿಗಳು ಮೂರು ದಿನಗಳಿಂದ ಹಗಲು-ರಾತ್ರಿ ಕುಳಿತುಕೊಂಡು ಮಾಲೀಕರು, ಅಧಿಕಾರಿಗಳು ಮತ್ತು ರೈತರ ಬಳಿ ಚರ್ಚೆ ಮಾಡಿದ್ದಾರೆ. ಜೊತೆಗೆ ಇನ್ನೂ 15 ದಿನದ ಒಳಗಡೆ ರೈತರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕಟ್ಟುನಿಟ್ಟಿನ ಆದೇಶವನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.

    ಸರ್ಕಾರ ನ್ಯಾಯಬದ್ಧವಾದ ಹಣ, ಬಾಕಿಯನ್ನ ಕೊಡಿಸುವ ಕೆಲಸ ಮಾಡುತ್ತದೆ. ನಮ್ಮ ಸರ್ಕಾರಕ್ಕೆ ರೈತರ ಸಮಸ್ಯೆ ಗೊತ್ತಿದೆ. ಆದರೆ ದುರದೃಷ್ಟಕರ ಸಕ್ಕರೆ ಮಾಲೀಕರು ರೈತರಿಗೆ ಕೊಡಬೇಕಾದ ಹಣ ಕೊಟ್ಟಿಲ್ಲ. ಯಾವುದೇ ಕಾರಣಕ್ಕೂ ನಾವು ಕಾರ್ಖಾನೆ ಮಾಲೀಕರನ್ನು ಬಿಡುತ್ತೇವೆ ಹೊರತು ರೈತರನ್ನು ಬಿಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಜೀವನಾಡಿ ರೈತರು, ರೈತರಿಂದಲೇ ನಮ್ಮ ಸರ್ಕಾರ. ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತೇವೆ ಎಂದು ಡಿಕೆಶಿ ಹೇಳಿದರು.


    ನಾನು ಕೂಡ ರೈತರ ಮುಖಂಡರ ಜೊತೆ ಮಾತನಾಡಿದ್ದೇನೆ. ಕಾನೂನನ್ನು ಕೈಯಲ್ಲಿ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದೇನೆ. ನಮ್ಮ ಮನವಿಗೆ ರೈತರು ಸ್ಪಂದಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಜೊತೆಗೆ ಕಬ್ಬಿನ ಬಾಕಿ ಬಿಲ್ ಕೊಡಿಸುವ ಭರವಸೆಯನ್ನು ಕೂಡ ನೀಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರೈತರನ್ನೇ ಗೂಂಡಾಗಳೆಂದರೆ, ಅಧಿಕಾರದಲ್ಲಿರುವ ಬಹುತೇಕರು ಕ್ರಿಮಿನಲ್ ಹಿನ್ನೆಲೆಯವ್ರು : ವಾಟಾಳ್ ನಾಗರಾಜ್

    ರೈತರನ್ನೇ ಗೂಂಡಾಗಳೆಂದರೆ, ಅಧಿಕಾರದಲ್ಲಿರುವ ಬಹುತೇಕರು ಕ್ರಿಮಿನಲ್ ಹಿನ್ನೆಲೆಯವ್ರು : ವಾಟಾಳ್ ನಾಗರಾಜ್

    ಮಂಡ್ಯ: ರೈತರನ್ನು ಗೂಂಡಾಗಳೆಂದು ಕರೆಯುವುದಾದರೆ, ಅಧಿಕಾರದಲ್ಲಿರುವ ಬಹುತೇಕ ಸಚಿವರು ಹಾಗೂ ಶಾಸಕರು ಸಹ ಕ್ರಿಮಿನಲ್ ಹಿನ್ನೆಲೆಯುಳ್ಳವರೇ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

    ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಸಮಸ್ಯೆಯನ್ನು ಕೇವಲ ಒಂದು ಗಂಟೆಯಲ್ಲೇ ಬಗೆ ಹರಿಸಬಹುದು. ಏಕೆಂದರೆ ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಒಡೆತನದಲ್ಲಿವೆ. ಕಾರ್ಖಾನೆಗಳನ್ನು ಹರಾಜು ಮಾಡುತ್ತೀವಿ ಎಂದು ನೋಟಿಸ್ ಕೊಟ್ಟರೇ, ರೈತರ ಹಣ ಬೇಗನೆ ವಸೂಲಿಯಾಗುತ್ತದೆ. ಆದರೆ ಈ ಬಗ್ಗೆ ಸರ್ಕಾರ ಇಚ್ಚಾಶಕ್ತಿ ತೋರುತ್ತಿಲ್ಲ. ಕಬ್ಬು ಬೆಳೆಗಾರರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿದಿದ್ದರೆ, ಕರ್ನಾಟಕ ಬಂದ್ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಇದೇ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರೈತರನ್ನು ಗೂಂಡಾಗಳು ಎನ್ನುವುದಾದರೇ, ಅಧಿಕಾರದಲ್ಲಿರುವ ಬಹುತೇಕ ಸಚಿವರು ಹಾಗೂ ಶಾಸಕರು ಕ್ರಿಮಿನಲ್ ಹಿನ್ನೆಲೆಯನ್ನು ಉಳ್ಳವರಾಗಿದ್ದಾರೆ. ಹೋರಾಟದ ವಿಷಯದಲ್ಲಿ ಎಲ್ಲರನ್ನು ದುರ್ಬಿನ್ ಹಾಕಿ ನೋಡಲು ಸಾಧ್ಯವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews