ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ವರ್ತೂರಿನ ಕೆರೆ ಕೋಡಿ ಭಾಗದಿಂದ ವರ್ತೂರಿನ ವಿಶಾಲ್ ಮಾರ್ಟ್ ವರೆಗೆ ನಿರ್ಮಿಸಲು ಉದ್ದೇಶಿಸಿರುವ 482 ಕೋಟಿ ರೂಪಾಯಿ ಮೊತ್ತದ ಎಲಿವೇಟೆಡ್ ಕಾರಿಡಾರ್ ಯೋಜನೆ ವಿರೋಧಿಸಿ ಹೋರಾಟ ಮಾಡುವುದಾಗಿ ವರ್ತೂರು ನಾಗರಿಕರ ಹಿತರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ವರ್ತೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ 30 ಸಾವಿರಕ್ಕೂ ಹೆಚ್ಚು ಜನರಿಗೆ ಅನಾನುಕೂಲವಾಗುವ ಮೇಲ್ಸೇತುವೆಯ ನಿರ್ಮಾಣ ಕಾಮಗಾರಿಯನ್ನು ಕೈಬಿಡುವಂತೆ ಒತ್ತಾಯಿಸಿ ಸಹಿ ಸಂಗ್ರಹ ಚಳವಳಿ ಆರಂಭಿಸಲಾಗಿದ್ದು, ಬೇಡಿಕೆ ಈಡೇರುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್ ತನಿಖೆ CBIಗೆ ವಹಿಸುವಂತೆ ಬಿಜೆಪಿ ಒತ್ತಾಯ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪದಾಧಿಕಾರಿಗಳು, ಇದಕ್ಕಾಗಿ ‘ನಮ್ಮ ಊರು ನಮ್ಮ ಹಕ್ಕು’ ಎಂಬ ಅಭಿಯಾನ ಆರಂಭಿಸಲಾಗಿದೆ. ಮೇಲ್ಸೇತುವೆಯಿಂದ ವರ್ತೂರಿನ ಜನರ ವ್ಯಾಪಾರ, ವಹಿವಾಟು, ದೈನಂದಿನ ಬದುಕಿಗೆ ತೀವ್ರ ತೊಂದರೆಯಾಗಲಿದೆ. ಜನವಿರೋಧಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೈಬಿಟ್ಟು ತಕ್ಕ ಮಟ್ಟಿಗೆ ರಸ್ತೆ ಅಗಲೀಕರಣದಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್ ತನಿಖೆ CBIಗೆ ವಹಿಸುವಂತೆ ಬಿಜೆಪಿ ಒತ್ತಾಯ
ಸಾರ್ವಜನಿಕರ ಜೊತೆ ಸಮಾಲೋಚನೆ ಮಾಡದೇ ಮೇಲ್ಸೇತುವೆ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದರಿಂದ ಬಾಧಿತರಾದವರಿಗೆ ಸೂಕ್ತ ಪುನರ್ವಸತಿ ಕಲ್ಪಿಸಿಲ್ಲ. ಸುತ್ತಲಿನ ಜನಸಾಮಾನ್ಯರ ವ್ಯವಹಾರಕ್ಕೆ ಧಕ್ಕೆಯಾಗುತ್ತದೆ. ತಲತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ರಥೋತ್ಸವ, ಕರಗ ಮತ್ತಿತರ ಧಾರ್ಮಿಕ ಭಾವನೆಗಳ ಮೇಲೆ ಪ್ರಹಾರ ಮಾಡಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮೇಲ್ಸೇತುವೆ ನಿರ್ಮಾಣದಿಂದ ಅಲ್ಲಿನ ಜಂಕ್ಷನ್‍ಗಳಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಲಿದ್ದು, ಆಸ್ತಿಯ ಮೌಲ್ಯ ಕಡಿಮೆಯಾಗಲಿದೆ. ವರ್ತೂರು, ಸೊರಹುಣಸೆ, ಬಳಗೆರೆ, ವಾಲೇಪುರ, ಮಧುರಾನಗರ, ಹಲಸಹಳ್ಳಿ, ಕತ್ರಿಗುಪ್ಪೆ ಗ್ರಾಮಗಳು ಆರ್ಥಿಕವಾಗಿ ಶಾಶ್ವತವಾಗಿ ತೊಂದರೆಗೆ ಒಳಗಾಗಲಿವೆ. ಮೆಟ್ರೋದಂತಹ ಪರಿಸರ ಸ್ನೇಹಿ ಸಮೂಹ ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗುತ್ತೇವೆ. ಹೀಗಾಗಿ ಸರ್ಕಾರ ಗ್ರಾಮಸ್ಥರ ಮನವಿಗೆ ಮನ್ನಣೆ ನೀಡಿ ಜನಪರವಾದ ನಿರ್ಧಾರಗಳನ್ನು ಕೈಗೊಳ್ಳುವಂತೆ ಕೋರಿದ್ದಾರೆ.



























