Tag: ಹೋಮ್ ಸ್ಟೇ

  • ವಯನಾಡು ದುರಂತದಿಂದ ಎಚ್ಚೆತ್ತ ಸರ್ಕಾರ – ಅಕ್ರಮ ರೆಸಾರ್ಟ್, ಹೋಮ್‌ ಸ್ಟೇ, ಬಡಾವಣೆ ತೆರವಿಗೆ ಸೂಚನೆ

    ವಯನಾಡು ದುರಂತದಿಂದ ಎಚ್ಚೆತ್ತ ಸರ್ಕಾರ – ಅಕ್ರಮ ರೆಸಾರ್ಟ್, ಹೋಮ್‌ ಸ್ಟೇ, ಬಡಾವಣೆ ತೆರವಿಗೆ ಸೂಚನೆ

    ಬೆಂಗಳೂರು: ಪಶ್ಚಿಮ ಘಟ್ಟದಲ್ಲಿ 2015ರ ನಂತರದ ಅರಣ್ಯ ಒತ್ತುವರಿ (Forest Encroachment) ತೆರವಿಗೆ ಮತ್ತು ಅನಧಿಕೃತ ಹೋಮ್‌ ಸ್ಟೇ, ರೆಸಾರ್ಟ್ ವಿರುದ್ಧ ಕ್ರಮಕ್ಕೆ ಅರಣ್ಯ ಸಚಿವರ ಈಶ್ವರ್ ಖಂಡ್ರೆ (Eshwar Khandre) ಸೂಚನೆ ನೀಡಿದ್ದಾರೆ.

    ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟದಲ್ಲಿ 2015 ರಿಂದ ಆಗಿರುವ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

    ಪಶ್ಚಿಮ ಘಟ್ಟದ ಎಲ್ಲ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ತೋಟ, ಹೋಂ ಸ್ಟೇ, ರೆಸಾರ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅರಣ್ಯ ಒತ್ತುವರಿಯನ್ನು ತಕ್ಷಣದಿಂದಲೇ ತೆರವುಗೊಳಿಸಬೇಕು. ಒಂದು ತಿಂಗಳ ಒಳಗಡೆ ಕೈಗೊಂಡ ಕ್ರಮದ ವಿವರದೊಂದಿಗೆ ಕಡತದಲ್ಲಿ ವರದಿ ಸಲ್ಲಿಸಬೇಕೆಂದು ಸೂಚಿಸಿದ್ದಾರೆ. ಇದನ್ನೂ ಓದಿ: Electoral Bonds | ತನಿಖೆಗೆ ಎಸ್‌ಐಟಿ ರಚನೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಜಾ

    ರಾಜ್ಯದ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತದಲ್ಲಿ 11 ಅಮೂಲ್ಯ ಜೀವಗಳು ಬಲಿಯಾಗಿದ್ದರೆ, ನೆರೆ ರಾಜ್ಯ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತದಲ್ಲಿ 250 ಮುಗ್ಧ ಜನರು ಮೃತಪಟ್ಟಿದ್ದು 200ಕ್ಕೂ ಹೆಚ್ಚು ಜನರು ಕಣ್ಮರೆಯಾಗಿರುವುದು ಅತ್ಯಂತ ನೋವಿನ ಸಂಗತಿ. ಈ ದುರಂತಗಳು ನಮಗೂ ಎಚ್ಚರಿಕೆಯ ಗಂಟೆಯಾಗಿದೆ.

    ಪಶ್ಚಿಮ ಘಟ್ಟದ ಉಳಿವು ಹಿಂದೆಂಗಿಂತಲೂ ಇಂದು ಹೆಚ್ಚಾಗಿದೆ. ಸ್ವಾಭಾವಿಕ, ಪ್ರಕೃತಿ ದತ್ತವಾದ ಪಶ್ಚಿಮ ಘಟ್ಟದ ಗುಡ್ಡಗಳು ಮತ್ತು ಶೋಲಾ ಅರಣ್ಯಗಳ ತಲೆ ಕಡಿದು ಕಾಫಿ ತೋಟ, ಮನೆ, ಹೋಂಸ್ಟೇ, ರೆಸಾರ್ಟ್ ಮಾಡುತ್ತಿರುವುದರಿಂದ ಹಾಗೂ ಬೇರಿನಿಂದ ಗಟ್ಟಿಯಾಗಿ ಮಣ್ಣು ಹಿಡಿದಿಡುವ ಬೃಹತ್ ಮರಗಳ ಕಡಿತಲೆ, ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸುವ ರಸ್ತೆಗಳಿಂದ ಇಂತಹ ದುರಂತ ಮರುಕಳಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದೂ ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

    ಗಿರಿ ಮತ್ತು ಘಟ್ಟ ಪ್ರದೇಶದಲ್ಲಿ ವಿಪರೀತ ವಾಹನಗಳ ಸಂಚಾರದಿಂದಲೂ ಅಪಾಯ ಎದುರಾಗುತ್ತಿದೆ. ವಾರಾಂತ್ಯದಲ್ಲಿ ಪ್ರವಾಸ, ಚಾರಣದ ಹೆಸರಲ್ಲಿ ಗಿರಿ ಮತ್ತು ಕಾನನ ಪ್ರದೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುವುದೂ ಇಂತಹ ದುರಂತಗಳಿಗೆ ಪೂರಕವಾಗಿದೆ ಎಂದು ಉಲ್ಲೇಖಿಸಿದ್ದು ಚಾರಣಕ್ಕೂ ಕಡಿವಾಣ ಬೀಳುವ ಸಾಧ್ಯತೆ ಇದೆ.

     

  • ಅನಧಿಕೃತ ಹೋಮ್ ಸ್ಟೇ ಮೇಲೆ ದಾಳಿ- ಮಾಲೀಕನ ವಿರುದ್ಧ ಪ್ರಕರಣ ದಾಖಲು

    ಅನಧಿಕೃತ ಹೋಮ್ ಸ್ಟೇ ಮೇಲೆ ದಾಳಿ- ಮಾಲೀಕನ ವಿರುದ್ಧ ಪ್ರಕರಣ ದಾಖಲು

    – ಬೆಂಗಳೂರು ಮೂಲದ ಐವರು ವಿದ್ಯಾರ್ಥಿಗಳು ವಾಸ್ತವ್ಯ

    ಮಡಿಕೇರಿ: ಅನಧಿಕೃತ ಹೋಮ್ ಸ್ಟೇಗಳನ್ನು ತೆರೆಯದಂತೆ ಆದೇಶವಿದ್ದರೂ, ನಿಯಮ ಉಲ್ಲಂಘಿಸಿ ಹೋಮ್ ಸ್ಟೇ ತೆರೆದು ಪ್ರವಾಸಿಗರಿಗೆ ಆಶ್ರಯ ನೀಡಿದ್ದ ಹೋಮ್ ಸ್ಟೇ ಮೇಲೆ ಪ್ರವಾಸೋದ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ವಶಪಡಿಸಿಕೊಂಡಿದ್ದಾರೆ.

    ನಗರದ ಚಾಮುಂಡೇಶ್ವರಿ ನಗರದಲ್ಲಿರುವ ಹೋಮ್ ಸ್ಟೇ ಮೇಲೆ ದಾಳಿ ನಡೆಸಿದ್ದು, ಬೆಂಗಳೂರು ಮೂಲದ ಐವರು ವಿದ್ಯಾರ್ಥಿಗಳು ಹೋಮ್ ಸ್ಟೇಯಲ್ಲಿ ಆಶ್ರಯ ಪಡೆದಿದ್ದು, ಗುರುವಾರ ಜಿಲ್ಲೆಗೆ ಆಗಮಿಸಿದ್ದರು ಎನ್ನಲಾಗಿದೆ. ಹರೀಶ್ ಅವರಿಗೆ ಸೇರಿದ ಮನೆಯನ್ನು ಕಲಂದರ್ ಪಡೆದು ಹೋಮ್ ಸ್ಟೇ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

    ಜೂ.8ರಿಂದ ಪ್ರವಾಸೋದ್ಯಮ ಪೂರಕ ಚಟುವಟಿಕೆಗಳಿಗೆ ಷರತ್ತುಬದ್ಧ ವಿನಾಯಿತಿ ನೀಡಲಾಗಿದೆ. ಕೇವಲ ನೋಂದಾಯಿತ 800 ಹೋಮ್ ಸ್ಟೇಗಳನ್ನು ಮಾತ್ರ ತೆರೆಯುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ಆದೇಶ ಉಲ್ಲಂಘಿಸಿ ನೋಂದಾಯಿಸದ ಹೋಮ್ ಸ್ಟೇಯಲ್ಲಿ ಪ್ರವಾಸಿಗರಿಗೆ ಆಶ್ರಯ ಕಲ್ಪಿಸಿದ್ದರು. ಜೊತೆಗೆ ಯಾವುದೇ ರೀತಿಯ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಹೋಮ್ ಸ್ಟೇಯನ್ನು ಸೀಜ್ ಮಾಡಿದ್ದಾರೆ.

    ಈ ಸಂಬಂಧ ಮಡಿಕೇರಿ ನಗರ ಠಾಣೆಗೆ ಪ್ರವಾಸೋದ್ಯಮ ಇಲಾಖೆಯಿಂದ ದೂರು ದಾಖಲಿಸಲಾಗಿದೆ. ವಿಚಾರಣೆ ನಡೆಸಲಾಗುತ್ತಿದ್ದು, ಹೋಮ್ ಸ್ಟೇ ಮಾಲೀಕನ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

    ಅನಧಿಕೃತ ಹೋಮ್ ಸ್ಟೇ ಬಂದ್ ಮಾಡಿ
    ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಅನಧಿಕೃತ ಹೋಮ್ ಸ್ಟೇ ಮೇಲೆ ದಾಳಿ ನಡೆಸಿದ್ದನ್ನು ಕೊಡಗು ಜಿಲ್ಲಾ ಹೋಮ್ ಸ್ಟೇ ಅಸೋಸಿಯೇಶನ್ ಸ್ವಾಗತಿಸಿದೆ. ರಾಜಾ ಸೀಟ್ ಸುತ್ತಮುತ್ತ ಹಾಗೂ ಹಲವೆಡೆ, ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಅನಧಿಕೃತ ಹೋಮ್ ಸ್ಟೇಗಳು ರಾಜಾರೋಷವಾಗಿ ವ್ಯವಹಾರ ನಡೆಸುತ್ತಿದ್ದು, ಎಲ್ಲವನ್ನೂ ಮುಚ್ಚಿಸುವಂತೆ ಅಸೋಸಿಯೇಶನ್ ಅಧ್ಯಕ್ಷ ಬಿ.ಜಿ.ಅನಂತಶಯನ ಒತ್ತಾಯಿಸಿದ್ದಾರೆ. ಕೊರೊನಾ ಹರಡದಂತೆ ಮುಂಜಾಗೃತೆ ವಹಿಸದ ಎಲ್ಲರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

  • ಮತ್ತೆ ಜೋಡುಪಾಲ, ಮದೆನಾಡಿನಲ್ಲಿ ಗುಡ್ಡ ಕುಸಿತ ಸಾಧ್ಯತೆ: ವಿಜ್ಞಾನಿಗಳು ಹೇಳೋದು ಏನು? ವಿಡಿಯೋ ನೋಡಿ

    ಮತ್ತೆ ಜೋಡುಪಾಲ, ಮದೆನಾಡಿನಲ್ಲಿ ಗುಡ್ಡ ಕುಸಿತ ಸಾಧ್ಯತೆ: ವಿಜ್ಞಾನಿಗಳು ಹೇಳೋದು ಏನು? ವಿಡಿಯೋ ನೋಡಿ

    ಮಡಿಕೇರಿ: ಕೊಡಗಿನ ಜೋಡುಪಾಲ, ಮದೆನಾಡು ಪ್ರದೇಶಗಳು ವಾಸಕ್ಕೆ ಯೋಗ್ಯವಾಗಿಲ್ಲ ಎಂದು ರಾಜ್ಯ ನೈಸರ್ಗಿಕ ನಿರ್ವಹಣೆ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳು ಹೇಳಿದ್ದಾರೆ.

    ಭೂ ಕುಸಿತಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ, ಗುಡ್ಡ ಪ್ರದೇಶದಲ್ಲಿ ನೀರು ಇಂಗಿ ಸ್ಫೋಟಗೊಂಡು ಹೊರಬಂದಿದೆ. ಮತ್ತೆ ಕೆಲವು ಕಡೆ ಗುಡ್ಡಗಳು ಕುಸಿದು ಬೀಳುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

    ಭಾರೀ ಮಳೆಯಿಂದಾಗಿ ಮಣ್ಣು ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಕಳೆದುಕೊಂಡ ಪರಿಣಾಮ ಅಂತರ್ಜಲ ಮಟ್ಟ ಏರಿ ಈ ಕುಸಿತ ಸಂಭವಿಸಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ಮುಂದೆ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಬೇಕು ಎಂಬುದಕ್ಕೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲಿನ ವಾತಾವರಣವನ್ನು ನೋಡಿದರೆ ಜನರಿಂದ ಯಾವುದೇ ರೀತಿಯ ತೊಂದರೆ ಆಗಿಲ್ಲ. ಈಗ ನಾವು ಪ್ರಾಥಮಿಕ ಮಾಹಿತಿ ಕಲೆ ಹಾಕಲು ಬಂದಿದ್ದು ಮುಂದೆ ಸಮಗ್ರ ಅಧ್ಯಯನಕ್ಕೆ ತಂಡ ಬರಲಿದೆ. ಘಟನೆಗೆ ಏನು ಕಾರಣ ಎಂಬ ಬಗ್ಗೆ 2 ತಿಂಗಳು ಅಧ್ಯಯನ ನಡೆಸಿ ವರದಿ ನೀಡಲಾಗುತ್ತದೆ ಎಂದು ವಿವರಿಸಿದರು.

    ಇಲ್ಲಿ ಜನರು ವಾಸಿಸಬಹುದೇ ಇಲ್ಲವೇ ಎಂಬುದನ್ನು ನೋಡಲು ಬಂದಿದ್ದೇವೆ. ಬಳಿಕ ಪರಿಸ್ಥಿತಿಯನ್ನು ಹೇಗೆ ಸರಿಪಡಿಸಲಾಗುತ್ತದೆ ಎಂಬುದನ್ನು ಕಂಡು ಕೊಳ್ಳಬೇಕಿದೆ ಪ್ರಕೃತಿ ವಿಕೋಪವನ್ನು ತಡೆಯಲು ಸಾಧ್ಯವಿಲ್ಲ. ಆದರೆ ನಾವು ಮಾಡಿರುವ ತಪ್ಪನ್ನು ಮುಂದೆ ಮಾಡದೇ ಇರುವ ಹಾಗೇ ನೋಡಿಕೊಳ್ಳಬೇಕಿದೆ ಎಂದು ಶ್ರೀನಿವಾಸರೆಡ್ಡಿ ಹೇಳಿದರು.

    ಬೋಪಯ್ಯ ತಿರುಗೇಟು: ಜೋಡುಪಾಲ ವಾಸ ಯೋಗ್ಯ ಅಲ್ಲವೆಂಬ ತಜ್ಞರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಬೋಪಯ್ಯ ಹತ್ತಾರು ವರ್ಷಗಳಿಂದ ವಾಸವಿದ್ದವರನ್ನು ಎಬ್ಬಿಸುವುದು ಸರಿಯಲ್ಲ ಎಂದಿದ್ದಾರೆ.

    ಸಂಪಾಜೆಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸಿದ ಅವರು, ಯಾವುದೇ ಹೋಮ್ ಸ್ಟೇಗಳಿದ್ದಲ್ಲಿ ಭೂ ಕುಸಿತ ಆಗಿಲ್ಲ, ಬರೀ ಬಡವರ ಮನೆಗಳಿರುವಲ್ಲಿ ಹೆಚ್ಚು ಭೂಕುಸಿತವಾಗಿ ನಾಶ ಆಗಿದೆ. ಹೋಮ್ ಸ್ಟೇ ಇಲ್ಲದ ಮೊಣ್ಣಂಗೇರಿ ಸ್ಥಳಗಳಲ್ಲಿ ಪೂರ್ತಿ ನಾಶವಾಗಿದೆ. ಒಂದು ವರ್ಷದಲ್ಲಿ ಬೀಳಬೇಕಾಗಿದ್ದ ಮಳೆ 15 ದಿನದಲ್ಲಿ ಬಿದ್ದ ಪರಿಣಾಮ ಈ ದುರ್ಘಟನೆಯಾಗಿದೆ ಎಂದು ಎಂದು ವಿಜ್ಞಾನಿಗಳ ಹೇಳಿಕೆಗೆ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv