Tag: ಹೋಮ್ ಕ್ವಾರಂಟೈನ್

  • ಕೊರೊನಾದಿಂದ ಗುಣಮುಖರಾದ ಮೈಸೂರಿನ 7 ಜನ ಡಿಸ್ಚಾರ್ಜ್

    ಕೊರೊನಾದಿಂದ ಗುಣಮುಖರಾದ ಮೈಸೂರಿನ 7 ಜನ ಡಿಸ್ಚಾರ್ಜ್

    -ಸೆಕೆಂಡರಿ ಸಂಪರ್ಕದಲ್ಲಿರುವ 800 ಮಂದಿಗೆ ಹೋಮ್ ಕ್ವಾರಂಟೈನ್

    ಮೈಸೂರು: ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿರುವ ಏಳು ಜನರು ಇಂದು ಡಿಸ್ಚಾರ್ಜ್ ಆಗಲಿದ್ದರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಾ.ವೆಂಕಟೇಶ್, ಮೈಸೂರಿನ ಜನತೆ ಆತಂಕಕ್ಕೆ ಒಳಗಾಗೋದು ಬೇಡ. ಈಗಾಗಲೇ ಇಬ್ಬರು ಡಿಸ್ಚಾರ್ಜ್ ಆಗಿದ್ದು, ಇಂದು ಏಳು ಜನರು ವರದಿ ನೆಗೆಟಿವ್ ಬಂದಿದೆ. ನೆಗೆಟಿವ್ ವರದಿ ಬಂದಿರುವ ಏಳು ಜನರನ್ನು ಇಂದು ಡಿಸ್ಚಾರ್ಜ್ ಆಗಲಿದ್ದಾರೆ. ನಮ್ಮ ಸಿಬ್ಬಂದಿ ಎಲ್ಲದಕ್ಕೂ ಸಿದ್ಧರಾಗಿದ್ದು, ಸೋಂಕಿತರಿಗೆ ಉತ್ತಮವಾದ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

    ಆರಂಭದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಸರ್ಕಾರ ಸೆಕೆಂಡರಿ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿಸಬೇಕೆಂದು ನಿರ್ದೇಶನ ನೀಡಿದೆ. ನಮ್ಮ ಅಧಿಕಾರಿಗಳು ಸೆಕಂಡರಿ ಸಂಪರ್ಕದಲ್ಲಿದ್ದ ಒಟ್ಟು 800 ಜನರ ಬಗ್ಗೆ ಮಾಹಿತಿ ಸಂಗ್ರಹಿಸಿ ಎಲ್ಲರನ್ನು ಹೋಮ್ ಕ್ವಾರಂಟೈನ್ ನಲ್ಲಿರಿಸಿ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. ಪಾಸಿಟಿವ್ ಪ್ರಕರಣಗಳು ಎಷ್ಟೇ ಬಂದರೂ, ನಾವು ಚಿಕಿತ್ಸೆ ನೀಡಲು ಸಿದ್ಧವಿದ್ದೇವೆ. ಪಾಸಿಟಿವ್ ಪ್ರಕರಣಗಳು ಬರಲಿ, ಬರದೇ ಇರಲಿ ನೀವು ಮನೆಯಲ್ಲಿರಿ ಎಂದು ಜನತೆಗೆ ಸಲಹೆ ನೀಡಿದರು.

    ಮೈಸೂರು ನಗರದಲ್ಲಿ 10 ಫೀವರ್ ಕ್ಲಿನಿಕ್ ಆರಂಭಿಸಲಾಗುತ್ತಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಸದ್ಯ ಇರುವ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ.ವೆಂಕಟೇಶ್ ಮಾಹಿತಿ ನೀಡಿದರು.

  • ಪೊಲೀಸ್ ಇಲಾಖೆಯ ಮೇಲೆ ಕೊರೊನಾ ಛಾಯೆ- ಐವರು ಸಿಬ್ಬಂದಿಗೆ ಕ್ವಾರಂಟೈನ್

    ಪೊಲೀಸ್ ಇಲಾಖೆಯ ಮೇಲೆ ಕೊರೊನಾ ಛಾಯೆ- ಐವರು ಸಿಬ್ಬಂದಿಗೆ ಕ್ವಾರಂಟೈನ್

    ಹುಬ್ಬಳ್ಳಿ: ಕೊರೊನಾ ವೈರಸ್ ಕರಿನೆರಳು ಪೊಲೀಸ್ ಇಲಾಖೆಯ ಮೇಲೆ ಬಿದ್ದಿದ್ದು, ಹುಬ್ಬಳ್ಳಿಯ ಐವರು ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

    ನಗರದ ಕಮರಿಪೇಟೆ ಪೊಲೀಸ್ ಠಾಣೆಯ ಐವರು ಪೊಲೀಸರನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಹುಬ್ಬಳ್ಳಿಯ ಮುಲ್ಲಾ ಓಣಿಯ ಸೋಂಕಿತನ ಜೊತೆ ಪ್ರಾಥಮಿಕ ಸಂರ್ಪಕ ಹೊಂದಿದ ಹಿನ್ನೆಲೆಯಲ್ಲಿ ಐದು ಜನ ಪೊಲೀಸ್ ಸಿಬ್ಬಂದಿ ಕೈಗೆ ಆರೋಗ್ಯ ಇಲಾಖೆ ಸೀಲ್ ಹಾಕಿದೆ. ಮನೆಯಲ್ಲಿ ಪ್ರತ್ಯೇಕವಾಗಿರುವಂತೆ ಸೂಚಿಸಿದೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳ ಮಾಹಿತಿ ಲಭ್ಯವಾಗಿದೆ.

    ಸದ್ಯ ಐವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, ಈ ಠಾಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ. ಮುಲ್ಲಾ ಓಣಿಯ ವ್ಯಕ್ತಿ ಸೋಂಕು ತಗುಲಿರೋದು ದೃಢವಾಗುತ್ತಿದ್ದಂತೆ ಹುಬ್ಬಳ್ಳಿ ಸಂಪೂರ್ಣ ಲಾಕ್‍ಡೌನ್ ಮಾಡಲಾಗಿದೆ. ಶುಕ್ರವಾರ ನಗರದಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ ಜನಕ್ಕೆ ಪೊಲೀಸರು ಲಾಠಿ ರುಚಿ ತೋರಿಸಿದ್ದರು.

  • ಕ್ವಾರಂಟೈನ್‍ಗಳಿಂದ ಬ್ರಾಂಡೆಡ್ ಬೇಡಿಕೆ – ಉಡುಪಿಯಲ್ಲಿ ಹೊಸ ತಲೆನೋವು ಶುರು

    ಕ್ವಾರಂಟೈನ್‍ಗಳಿಂದ ಬ್ರಾಂಡೆಡ್ ಬೇಡಿಕೆ – ಉಡುಪಿಯಲ್ಲಿ ಹೊಸ ತಲೆನೋವು ಶುರು

    ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಕ್ವಾರಂಟೈನ್‍ನಲ್ಲಿರುವ ಜನರ ಕಿರಿಕ್ ಜಾಸ್ತಿಯಾಗುತ್ತಿದೆ. ನಮಗೆ ಬ್ರಾಂಡೆಡ್ ಐಟಂ ಬೇಕು ಅಂತ ಸಿಬ್ಬಂದಿಗೆ ಒತ್ತಡ ಹಾಕುತ್ತಿದ್ದಾರೆ.

    ಉಡುಪಿ ಜಿಲ್ಲೆಯ ನರ್ಸ್, ಆಶಾ ಕಾರ್ಯಕರ್ತರಿಗೆ ಕ್ವಾರಂಟೈನ್‍ಗಳು ದುಂಬಾಲು ಬೀಳುತ್ತಿದ್ದಾರೆ. ವಿದೇಶದಿಂದ ಬಂದ ವ್ಯಕ್ತಿಗಳ ಕುಟುಂಬಕ್ಕೆ ಜಿಲ್ಲಾಡಳಿತ ಒಂದು ತಿಂಗಳ ಕಾಲ ಹೋಂ ಕ್ವಾರಂಟೈನ್ ವಿಧಿಸಿತ್ತು. ಕುಟುಂಬದ ಯಾವ ಸದಸ್ಯರು ಹೊರಗೆ ಬಾರದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಕಾರ್ಯಕರ್ತರು ದಿಗ್ಬಂಧನ ಹಾಕಿದ್ದರು.

    ಒಂದು ಕುಟುಂಬಕ್ಕೆ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ಸರ್ಕಾರದ ಮೂಲಕವೇ ಪೂರೈಸುವ ಬಗ್ಗೆ ಜಿಲ್ಲಾಡಳಿತ ತೀರ್ಮಾನ ತೆಗೆದುಕೊಂಡಿತ್ತು. ಆದರೆ ಇದೇ ಆದೇಶ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಹೋಂ ಕ್ವಾರಂಟೈನ್‍‍ನಲ್ಲಿರುವ ವ್ಯಕ್ತಿಗಳು ಬ್ರಾಂಡೆಡ್ ದಿನಸಿ, ಸೋಪು -ಶ್ಯಾಂಪು ತಂದು ಕೊಡಿ ಅಂತ ಒತ್ತಡ ಹಾಕುತ್ತಿದ್ದಾರೆ.

    ವಿದೇಶದಿಂದ ವ್ಯಕ್ತಿಗೆ ಸೋಂಕು ತಗುಲಿದ ಮೇಲೆ ಆತನ ಸಂಪರ್ಕದಲ್ಲಿದ್ದ ನೂರಾರು ಜನರನ್ನು ಉಡುಪಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಹೈ ರಿಸ್ಕ್ ಇರುವವರನ್ನು ಕೆಲ ಖಾಸಗಿ ಆಸ್ಪತ್ರೆಯಲ್ಲಿ ಇಟ್ಟು ನಿಗಾ ವಹಿಸಲಾಗಿದೆ. ಆದರೆ ಇವರು ನಮಗೆ ಬ್ರಾಂಡೆಡ್ ಮಾಸ್ಕ್, ಸ್ಯಾನಿಟೈಸರ್, ಕೈ ತೊಳೆಯಲು ದುಬಾರಿ ಸೋಪುಗಳ ಬೇಕು ಎಂದು ಒತ್ತಡ ಹೇರುತ್ತಿದ್ದಾರೆ.

    ಕೆಲ ದೇವಸ್ಥಾನ, ಸಾರ್ವಜನಿಕ ಸಂಸ್ಥೆಗಳಿಂದ ಬಂದ ಆಹಾರವನ್ನು ಕ್ವಾರಂಟೈನ್‍‍ನಲ್ಲಿರುವ ವ್ಯಕ್ತಿಗಳಿಗೆ ವಿತರಿಸಲಾಗುತ್ತಿದೆ. ಅದರಲ್ಲೂ ಸಾರಿನಲ್ಲಿ ಉಪ್ಪಿಲ್ಲ, ಪಲ್ಯಕ್ಕೆ ಖಾರ ಇಲ್ಲ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ನಾನ್ ವೆಜ್ ಬೇಕು ಎಂದು ಕೇಳುತ್ತಿದ್ದಾರಂತೆ.

    ವೈದ್ಯಕೀಯ ಸಿಬ್ಬಂದಿಯ ಸಂಘದ ಅಧ್ಯಕ್ಷ ಮಾತನಾಡಿ, ಇದು ಕಷ್ಟದ ಕಾಲ. ಈಗ ನಿಮ್ಮ ಇಚ್ಛೆಯನ್ನು ಪೂರೈಸೋಕೆ ಆಗಲ್ಲ. ಜಿಲ್ಲಾಧಿಕಾರಿಗಳ ಟಾಸ್ಕ್ ಫೋರ್ಸ್ ಜೊತೆ ಕೈ ಜೋಡಿಸಿ. ನಮ್ಮ ಸಿಬ್ಬಂದಿಯ ಜೊತೆ ಸಹಕರಿಸಿ ಎಂದು ಮನವಿ ಮಾಡಿದರು.

  • ಇಡೀ ಊರಿನ ಖರ್ಚು ನೋಡ್ಕೋಬೇಕು: ಕೊರೊನಾ ಸೋಂಕಿತನಿಗೆ ಉಡುಪಿ ಡಿಸಿ ಫೈನ್

    ಇಡೀ ಊರಿನ ಖರ್ಚು ನೋಡ್ಕೋಬೇಕು: ಕೊರೊನಾ ಸೋಂಕಿತನಿಗೆ ಉಡುಪಿ ಡಿಸಿ ಫೈನ್

    – ರೋಗಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

    ಉಡುಪಿ: ಜಿಲ್ಲೆಯ ಕಾಪು ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಮೇಲೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಗರಂ ಆಗಿದ್ದಾರೆ. ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ವೆಚ್ಚ ಅವನೇ ಭರಿಸಬೇಕು ಎಂದು ಗುಡುಗಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕಾದ ವ್ಯಕ್ತಿ ಕ್ರಿಕೆಟ್ ಆಡಿದ್ದಾನೆ. ಆತ ನಿಯಮ ಉಲ್ಲಂಘನೆ ಮಾಡಿ ಎಲ್ಲ ಕಡೆ ಓಡಾಡಿದ್ದಾನೆ. ಹೋಮ್ ಕ್ವಾರಂಟೈನ್‍ನ ಸೂಚನೆ ನೀಡಿದರೂ ಆ ವ್ಯಕ್ತಿ ಹೊರಗಡೆ ತಿರುಗಾಡಿದ್ದಾನೆ. ಆತನಿಂದ ಎಲ್ಲರ ವೆಚ್ಚವನ್ನು ವಸೂಲಿ ಮಾಡುತ್ತೇನೆ ಎಂದರು.

    ಇಡೀ ಊರಿಗೆ ಆದ ವೆಚ್ಚವನ್ನು ಆ ರೋಗಿ ಕೊಡಬೇಕು. ಆ ವ್ಯಕ್ತಿಯ ಮೇಲೆ ಕ್ರಿಮಿನಲ್ ಕೇಸು ಕೂಡ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕ್ವಾರಂಟೈನ್ ಸಂದರ್ಭದಲ್ಲಿ ಉದ್ಧಟತನ ತೋರಿದ ಎಲ್ಲರಿಂದ ವೆಚ್ಚವನ್ನು ವಸೂಲಿ ಮಾಡುತ್ತೇವೆ. ಕಾನೂನು ಉಲ್ಲಂಘಿಸಿದವರಿಗೆ ಎರಡು ವರ್ಷ ಜೈಲುವಾಸ ವಿಧಿಸುವ ಅವಕಾಶ ಇದೆ ಎಂದು ಹೇಳಿದರು.

    ವಿದೇಶದಿಂದ ಬಂದ ವ್ಯಕ್ತಿ ಕೊಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಡಾಡಿದ್ದು, ಪ್ರಕರಣ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಎಂಟು ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಕ್ವಾರಂಟೈನ್‍ನಲ್ಲಿ ಇರುವವರನ್ನು ಅವರ ಕುಟುಂಬದವರು ಹೊರ ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

    ದೆಹಲಿ ಜಮಾತ್ ಸಮಾವೇಶ:
    ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದಿದ್ದ ತಬ್ಲಿಘ್ ಸಮಾವೇಶದಲ್ಲಿ ನಮ್ಮ ಜಿಲ್ಲೆಯಿಂದ ಯಾರೂ ಪಾಲ್ಗೊಂಡಿಲ್ಲ ಎಂದು ಉಡುಪಿ ಡಿಸಿ ಜಿ.ಜಗದೀಶ್ ಸ್ಪಷ್ಟಪಡಿಸಿದರು.

    ದೆಹಲಿಗೆ ಆ ಸಂದರ್ಭದಲ್ಲಿ ಓಡಾಡಿದವರು ಹದಿನಾರು ಮಂದಿ ಇದ್ದಾರೆ. ಮೊಬೈಲ್ ಟವರ್ ಲೊಕೇಶನ್‍ನಲ್ಲಿ ನಮ್ಮ ಜಿಲ್ಲೆಯ ಹದಿನಾರು ಮಂದಿ ಇದ್ದರು. ಈ ಪೈಕಿ ಒಂಬತ್ತು ಮಂದಿಯನ್ನು ಹಾಸ್ಪಿಟಲ್ ಕ್ವಾರಂಟೈನ್ ಮಾಡಿದ್ದೇವೆ. ಉಳಿದ ಏಳು ಮಂದಿ ಬೇರೆ ಬೇರೆ ಊರುಗಳಲ್ಲಿದ್ದಾರೆ. ಸರ್ಕಾರಕ್ಕೆ ಎಲ್ಲಾ ಮಾಹಿತಿಯನ್ನು ರವಾನೆ ಮಾಡಿದ್ದೇವೆ ಎಂದರು.

    ಭಾರತ್ ಬಂದ್ ಸಂದರ್ಭದಲ್ಲಿ ಕೂಲಿ ಕಾರ್ಮಿಕರನ್ನು ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಹೊರ ಜಿಲ್ಲೆಯವರು ಆತಂಕಪಡುವ ಅಗತ್ಯವಿಲ್ಲ. ಮಧ್ಯರಾತ್ರಿ ಎದ್ದು ನಮ್ಮ ಜಿಲ್ಲೆ ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿಕೊಂಡರು. ಜೊತೆಗೆ ಉತ್ತರ ಕರ್ನಾಟಕದಲ್ಲಿರುವ ಸಂಬಂಧಿಕರು ಆತಂಕಪಡುವ ಅಗತ್ಯವಿಲ್ಲ ಎಂದರು.

  • ಹೋಮ್ ಕ್ವಾರಂಟೈನ್ ಆದ ಹುಬ್ಬಳ್ಳಿಯ ಅಯೋಧ್ಯಾ ಹೋಟೆಲ್

    ಹೋಮ್ ಕ್ವಾರಂಟೈನ್ ಆದ ಹುಬ್ಬಳ್ಳಿಯ ಅಯೋಧ್ಯಾ ಹೋಟೆಲ್

    ಧಾರವಾಡ/ಹುಬ್ಬಳ್ಳಿ: ಕೊರೊನಾ ವೈರಸ್ ನಿಯಂತ್ರಿಸುವ ಸದುದ್ದೇಶದಿಂದ ಹಾಗೂ ಜಿಲ್ಲೆಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಹೆಚ್ಚು ಮಾಡುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಹುಬ್ಬಳ್ಳಿಯ ಅಯೋಧ್ಯಾ ಹೋಟೆಲ್‍ನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡಿದೆ.

    ದೆಹಲಿಯ ನಿಜಾಮುದ್ದೀನ್ ತಬ್ಲಿಘ್ ಜಮಾತ್ ಪ್ರಾರ್ಥನಾ ಮಂದಿರದಲ್ಲಿ ಸಭೆ ನಡೆಸಿ ಮರಳಿ ಬಂದ 30 ಜನರು ಸೇರಿ ಒಟ್ಟು 50 ಜನರನ್ನು ಹೋಟೆಲ್ ಗೆ ಶಿಫ್ಟ್ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ಹೊಟೇಲ್ ವಶಕ್ಕೆ ತೆಗೆದುಕೊಂಡಿದೆ.

    ಈಗಾಗಲೇ ಅಯೋಧ್ಯೆ ಹೋಟೆಲ್ ಗೆ ಆರೋಗ್ಯ ಇಲಾಖೆ ಸಿಬ್ಬಂದಿ, ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೋಮ್ ಕ್ವಾರಂಟೈನ ನಲ್ಲಿದ್ದವರನ್ನು ಒಬ್ಬೊಬರನ್ನು ನಿಗಾವಹಿಸಲು ಕಷ್ಟವಾಗುತ್ತಿದ್ದು, ಒಂದೆಡೆಯಲ್ಲಿ ಹೋಮ್ ಕ್ವಾರಂಟೈನ ನಲ್ಲಿದ್ದವರನ್ನು ಹೋಟೆಲ್ ಅಯೋಧ್ಯಾಗೆ ಶಿಫ್ಟ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

  • ಹೋಮ್ ಕ್ವಾರಂಟೈನ್‍ನಲ್ಲಿರೋರು ಫೋಟೋ ಕಳಿಸಿಲ್ಲ ಅಂದ್ರೆ ಮನೆಗೆ ಬರ್ತಾರೆ ಅಧಿಕಾರಿಗಳು

    ಹೋಮ್ ಕ್ವಾರಂಟೈನ್‍ನಲ್ಲಿರೋರು ಫೋಟೋ ಕಳಿಸಿಲ್ಲ ಅಂದ್ರೆ ಮನೆಗೆ ಬರ್ತಾರೆ ಅಧಿಕಾರಿಗಳು

    ಬೆಂಗಳೂರು: ದೇಶದಲ್ಲಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಸರ್ಕಾರ ಏನೇ ಕಠಿಣ ಕ್ರಮ ತೆಗೆದುಕೊಂಡು ಜನರು ಮನೆಯಿಂದ ಹೊರ ಬಂದು ಓಡಾಡುತ್ತಿದ್ದಾರೆ. ಆದ್ದರಿಂದ ಕೊರೊನಾ ಹಬ್ಬುವಿಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೋಮ್ ಕ್ವಾರಂಟೈನ್‍ನಲ್ಲಿರುವವರ ಮೇಲೆ ನಿಗಾ ಬಿಗಿಗೊಳಿಸಿದೆ.

    ಈಗಾಗಲೇ ಕ್ವಾರಂಟೈನ್‍ನಲ್ಲಿರುವವರು ಕೊರೊನಾ ವಾಚ್ ಮೊಬೈಲ್ ಆಪ್ ಡೌನ್‍ಲೋಡ್ ಮಾಡಬೇಕೆಂದು ಸರ್ಕಾರ ಕಡ್ಡಾಯ ಮಾಡಿದೆ. ಇದೀಗ ಪ್ರತಿ ಗಂಟೆಗೆ ಒಮ್ಮೆ ತಮ್ಮ ಫೋಟೋಗಳನ್ನು ಈ ಆಪ್‍ನಲ್ಲಿ ಅಪ್ಲೋಡ್ ಮಾಡುವಂತೆ ಸರ್ಕಾರ ಖಡಕ್ ಸೂಚನೆ ಕೊಟ್ಟಿದೆ.

    ಹೋಮ್ ಕ್ವಾರಂಟೈನ್‍ನಲ್ಲಿರುವವರು ಪ್ರತಿ ಗಂಟೆಗೊಮ್ಮೆ ತಮ್ಮ ಫೋಟೋಗಳನ್ನು ಕೊರೊನಾ ವಾಚ್ ಆಪ್‍ನಲ್ಲಿ ಅಪ್ಲೋಡ್ ಮಾಡಬೇಕು. ಫೊಟೋ ಜೊತೆಗೆ ಲೊಕೇಶನ್ ಸಹ ಕಳಿಸುವುದು ಕಡ್ಡಾಯ. ಒಂದು ವೇಳೆ ಫೋಟೋ ಕಳಿಸದಿದ್ದರೆ ಅಥವಾ ಬೇರೆ ಕಡೆ ಇದ್ದು ಮನೆಯೊಳಗಿರುವ ಹಳೆಯ ಫೋಟೋ ಕಳಿಸಿದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದೆ.

    ಈ ಸೂಚನೆ ಪಾಲಿಸದವರನ್ನು ಮಾಸ್ ಕ್ವಾರಂಟೈನ್‍ಗೆ ಕಳಿಸುವ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿದೆ. ಅಲ್ಲದೇ ಈ ಸೂಚನೆ ಪಾಲಿಸದಿದ್ದರೆ ಕೂಡಲೇ ಅವರ ಮನೆಗೆ ಅಧಿಕಾರಿಗಳು ಬಂದು ಮಾಸ್ ಕ್ವಾರಂಟೈನ್‌ಗೆ ಕರೆದುಕೊಂಡು ಹೋಗುತ್ತಾರೆ ಎಂದು ಖಡಕ್ ಎಚ್ಚರಿಕೆ ನೀಡಿದೆ.

  • ಸೋಂಕಿತನ ಹೇಳಿಕೆ ಮೇಲೆ ಡೌಟ್- ಫೋನ್ ನೆಟ್‌ವರ್ಕ್‌ ಟ್ರ್ಯಾಕ್‍ಗೆ ಉಡುಪಿ ಡಿಸಿ ಆದೇಶ

    ಸೋಂಕಿತನ ಹೇಳಿಕೆ ಮೇಲೆ ಡೌಟ್- ಫೋನ್ ನೆಟ್‌ವರ್ಕ್‌ ಟ್ರ್ಯಾಕ್‍ಗೆ ಉಡುಪಿ ಡಿಸಿ ಆದೇಶ

    ಉಡುಪಿ: ನಗರದಲ್ಲಿ ಪತ್ತೆಯಾದ ಕೊರೊನಾ ಸೋಂಕಿತನ ಫೋನ್ ನೆಟ್‌ವರ್ಕ್‌ ಟ್ರ್ಯಾಕ್ ಮಾಡಲು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ. ಮಣಿಪಾಲ ಕೆಎಂಸಿಯ ಲ್ಯಾಬ್ ಟೆಕ್ನಿಷನ್ ಆಗಿರುವ ಸೋಂಕಿತ ವ್ಯಕ್ತಿ, ಮಾರ್ಚ್ 18ರಂದು ದುಬೈನಿಂದ ಮಂಗಳೂರಿಗೆ ಬಂದು ಇಳಿದಿದ್ದರು.

    ಮಂಗಳೂರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಮೂಲಕ ಮಣಿಪಾಲದಲ್ಲಿರುವ ಮನೆ ಸೇರಿಕೊಂಡಿದ್ದಾರೆ. ಆನಂತರ ನಾನು ಎಲ್ಲೂ ಹೋಗಿಲ್ಲ. ಶೀತ ಕೆಮ್ಮು ಜ್ವರ ಶುರುವಾದ ಬಳಿಕ ನೇರವಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಉಡುಪಿ ಡಿಎಚ್‍ಒ ಜಿಲ್ಲಾಡಳಿತದ ಸಿಬ್ಬಂದಿ, ಪೊಲೀಸರು ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟ್ರಿ ಬಗ್ಗೆ ತರತರನಾಗಿ ವಿಚಾರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೋಂಕಿತ ಮಾತ್ರ ಇಷ್ಟನ್ನೇ ಹೇಳಿಕೊಂಡಿದ್ದಾರೆ.

    ಕೊರೊನಾ ಸೋಂಕಿತ ವ್ಯಕ್ತಿ ಎಂದು ದೃಢವಾದ ಕೂಡಲೇ ಸೋಂಕಿತನ ಪರಿಚಯಸ್ಥರು, ಸುತ್ತಮುತ್ತಲಿನವರು ಜಿಲ್ಲಾಡಳಿತಕ್ಕೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಐದು ದಿನಗಳಲ್ಲಿ ಸೋಂಕಿತ ವ್ಯಕ್ತಿ ಮಣಿಪಾಲ, ಉಡುಪಿ ಸುತ್ತಮುತ್ತ ಓಡಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ಫೋನ್ ನೆಟ್‌ವರ್ಕ್‌ ಟ್ರ್ಯಾಕ್ ಮಾಡಲು ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್‍ಪಿ ವಿಷ್ಣುವರ್ಧನ್ ಅವರಿಗೆ ಆದೇಶಿಸಿದ್ದಾರೆ.

    ದುಬೈನಿಂದ ಮಾರ್ಚ್ 10ರಂದು ಬಂದಿಳಿದಿದ್ದ ಸೋಂಕಿತ ವ್ಯಕ್ತಿಯ ಫೋನ್ ನೆಟ್‌ವರ್ಕ್‌ ಎಲ್ಲೆಲ್ಲಿ ಹರಿದಾಡಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಹೋಂ ಕ್ವಾರಂಟೈನ್‍ನಲ್ಲಿ ಇದ್ದ ಸಂದರ್ಭ ತಾವು ಐದು ದಿನವೂ ಆನ್‍ಲೈನ್ ಮೂಲಕ ಆಹಾರ ತರಿಸಿಕೊಂಡಿರುವುದಾಗಿ ತಿಳಿಸಿದ್ದರು. ಯಾರ ಜೊತೆಯೂ ನೇರವಾಗಿ ಸಂಪರ್ಕ ಮಾಡಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಫೋನ್ ನೆಟ್ವರ್ಕ್ ಟ್ರ್ಯಾಕ್ ಮಾಡಿರುವ ಪೊಲೀಸರಿಗೆ ಸೋಂಕಿತ ವ್ಯಕ್ತಿಯ ಹೇಳಿಕೆ ಮತ್ತು ನೆಟ್ ವರ್ಕ್ ಗೆ ಸಂಬಂಧ ಇದೆಯೋ ಇಲ್ಲವೋ ಎಂದು ಇಂದು ಗೊತ್ತಾಗಲಿದೆ.

    ಮೂಲತಃ ದಾವಣಗೆರೆ ಜಿಲ್ಲೆಯವರಾದ ಸೋಂಕಿತ ವ್ಯಕ್ತಿ ಮಣಿಪಾಲ ಕೆಎಂಸಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದಾರೆ. ಹೋಮ್ ಕ್ವಾರಂಟೈನ್‍ನಲ್ಲಿ ಇದ್ದ ಸಂದರ್ಭದಲ್ಲಿ ಅವರು ಸಾರ್ವಜನಿಕವಾಗಿ ಓಡಾಡಿದ್ದರೆ, ಜನರನ್ನು ಸಂಪರ್ಕಿಸಿದ್ದರೆ, ಅವರಿಗೂ ಸೋಂಕು ತಗಲುವ ಸಾಧ್ಯತೆ ಇದೆ. ಸಂಪರ್ಕ ಮಾಡಿದ ವ್ಯಕ್ತಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಲ್ಯಾಬ್ ಟೆಕ್ನಿಷನ್ ಆಗಿರುವ ಸೋಂಕಿತ ವ್ಯಕ್ತಿ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದರೆ ದೊಡ್ಡ ಅವಘಡ ತಪ್ಪಿದಂತಾಗುತ್ತದೆ. ಉಡುಪಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಪೊಲೀಸರ ಮಾಹಿತಿಗಾಗಿ ಕಾಯುತ್ತಿದೆ.