Tag: ಹೋಮ್ ಕ್ವಾರಂಟೈನ್

  • ಹೋಮ್ ಕ್ವಾರಂಟೈನ್‍ನಿಂದಾಗಿಯೇ ಜಿಲ್ಲೆಯಲ್ಲಿ ಕೋವಿಡ್ ಹೆಚ್ಚುತ್ತಿದೆ: ಸೋಮಣ್ಣ

    ಹೋಮ್ ಕ್ವಾರಂಟೈನ್‍ನಿಂದಾಗಿಯೇ ಜಿಲ್ಲೆಯಲ್ಲಿ ಕೋವಿಡ್ ಹೆಚ್ಚುತ್ತಿದೆ: ಸೋಮಣ್ಣ

    ಮಡಿಕೇರಿ: ಹೋಮ್ ಕ್ವಾರಂಟೈನ್ ನಿಂದಾಗಿಯೇ ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ಅತಂಕ ವ್ಯಕ್ತಪಡಿಸಿದ್ದಾರೆ.

    ಕಳೆದ ನಾಲ್ಕು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳವಾಗುತ್ತಿದ್ದು, ಡೆತ್ ರೇಟ್ ಸಹ ಜಾಸ್ತಿ ಆಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಹೋಮ್ ಕ್ವಾರಂಟೈನ್ ನಲ್ಲಿರುವವರನ್ನು ಮುಲಾಜಿಲ್ಲದೆ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಿ ಎಂದು ನಗರದಲ್ಲಿ ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.

    ಹೋಮ್ ಕ್ವಾರಂಟೈನ್ ನಿಂದ ಜಿಲ್ಲೆಯಲ್ಲಿ ಸಾವುಗಳು ಸಂಭವಿಸುತ್ತಿವೆ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಸಚಿವರ ಗಮನ ಸೇಳೆದರು. ಹೀಗಾಗಿ ಯಾರೇ ಹೋಮ್ ಕ್ವಾರಂಟೈನ್ ನಲ್ಲಿ ಇದ್ದರೂ ಅವರನ್ನು ಮನೆಯಲ್ಲಿ ಇರಿಸದೇ ಕೋವಿಡ್ ಕೇರ್ ಸೆಂಟರ್ ಗಳಿಗೆ ಕರೆ ತರಬೇಕು, ಯಾರ ಒತ್ತಡಕ್ಕೂ ಒಳಗಾಗಬರದು. ಈ ರೀತಿಯಲ್ಲಿ ಪಾಸಿಟಿವ್ ಸಂಖ್ಯೆ ಹೆಚ್ಚಾಗಿರುವುದರಿಂದಲೇ ಸಿಎಂ ಗಮನಕ್ಕೆ ತಂದು ಕೊಡಗು ಜಿಲ್ಲೆಯನ್ನು ಮತ್ತೆ ಒಂದುವಾರ ಲಾಕ್‍ಡೌನ್ ಮಾಡಲು ಮನವಿ ಮಾಡಿದೇವೆ ಎಂದು ಸಚಿವ ಸೋಮಣ್ಣ ತಿಳಿಸಿದರು.

  • ಕೊಡಗಿನಲ್ಲಿ ಪಾಸಿಟಿವ್, ಕೇರಳದಲ್ಲಿ ನೆಗೆಟಿವ್ – ಮದ್ವೆಯಾದ ದಿನವೇ ವಧು ಕ್ವಾರಂಟೈನ್

    ಕೊಡಗಿನಲ್ಲಿ ಪಾಸಿಟಿವ್, ಕೇರಳದಲ್ಲಿ ನೆಗೆಟಿವ್ – ಮದ್ವೆಯಾದ ದಿನವೇ ವಧು ಕ್ವಾರಂಟೈನ್

    ಮಡಿಕೇರಿ: ಕೊರೊನಾದಿಂದ ಮದುವೆಯಾದ ದಿನವೇ ವಧು ಹೋಮ್ ಕ್ವಾರಂಟೈನ್ ಆಗಿದ್ದಾರೆ. ತವರು ಕೊಡಗಿನ ವರದಿಯಲ್ಲಿ ಪಾಸಿಟಿವ್ ಬಂದ್ರೆ, ಪತಿಯ ಊರಿನಲ್ಲಿ ನೆಗೆಟಿವ್ ಬಂದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ಸುಂಟಿಕೊಪ್ಪ ಸಮೀಪದ ಕೆದಕಲ್ ನಿವಾಸಿ ರಾಜನ್ ಪುತ್ರಿ ಸಿಮ್ನಾ ಮದುವೆ ಕೇರಳದ ಕಣ್ಣೂರಿನ ಯುವಕನ ಜೊತೆ ಏಪ್ರಿಲ್ 25ರಂದು ನಿಗದಿಯಾಗಿತ್ತು. ಕೊರೊನಾ ಮಾರ್ಗಸೂಚಿ ಹಿನ್ನೆಲೆ ವಧು-ವರ ಏಪ್ರಿಲ್ 23ರಂದು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಎರಡು ದಿನವಾದ್ರೂ ವರದಿ ಬಾರದಿದ್ದಾಗ ಏನು ಆಗದೆಂಬ ನಂಬಿಕೆಯಲ್ಲಿ ಕುಟುಂಬಸ್ಥರು ಮದುವೆ ಮಾಡಿದ್ದರು.

    ಮದುವೆಯಾಗಿ ಪತಿ ಮನೆ ಸೇರುತ್ತಿದ್ದಂತೆ ಮೊಬೈಲ್ ಗೆ ಕೊರೊನಾ ಪಾಸಿಟಿವ್ ಇರೋದರ ಮೆಸೇಜ್ ಬಂದಿದೆ. ಹೀಗಾಗಿ ವರನ ಕುಟುಂಬಸ್ಥರು ವಧುವನ್ನ ಪ್ರತ್ಯೇಕ ಕೋಣೆಯಲ್ಲಿರಿಸಿದ್ದರು. ಕೇರಳದಲ್ಲಿ ವಧುವನ್ನ ಮತ್ತೊಮ್ಮೆ ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ವರದಿ ನೆಗೆಟಿವ್ ಬಂದಿದೆ.

    ಕೇರಳದಲ್ಲಿ ವರದಿ ನೆಗಟಿವ್ ಬಂದಾಗ ರಾಜನ್ ಕುಟುಂಬಸ್ಥರು ಸ್ಥಳೀಯ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದಾರೆ. ನಮ್ಮಲ್ಲಿ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ. ಕೇರಳದಲ್ಲಿ ಯಾವ ಪರೀಕ್ಷೆ ಮಾಡಿದ್ದಾರೆ ಎಂಬುದರ ಬಗ್ಗೆ ಗೊತ್ತಿಲ್ಲ. ನಾವು ತಪ್ಪು ರಿಪೋರ್ಟ್ ನೀಡಿದ್ದೇವೆ ಅಂತ ಹೇಳೋದು ಸರಿಯಲ್ಲ. ಕೆಲವರಿಗೆ ಲಕ್ಷಣಗಳು ಇರತ್ತೆ, ಕೆಲವರಿಗೆ ಇರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಕ್ವಾರಂಟೈನ್‌ ನಿಯಮ ಬ್ರೇಕ್‌ – 1.51ಲಕ್ಷ ಬೆಂಗಳೂರಿಗರಿಗೆ ಎಚ್ಚರಿಕೆ

    ಕ್ವಾರಂಟೈನ್‌ ನಿಯಮ ಬ್ರೇಕ್‌ – 1.51ಲಕ್ಷ ಬೆಂಗಳೂರಿಗರಿಗೆ ಎಚ್ಚರಿಕೆ

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಕೊರೊನಾ ರಾಕೆಟ್‌ ವೇಗದಲ್ಲಿ ಏರಿಕೆಯಾಗುತ್ತಿದ್ದು, ಇದಕ್ಕೆ ಕ್ವಾರಂಟೈನ್‌ಗಳು ಒಂದು ರೀತಿಯಲ್ಲಿ ಕಾರಣರಾಗಿದ್ದಾರೆ. ಇಲ್ಲಿಯವರೆಗೆ ಬರೋಬ್ಬರಿ 1.51 ಲಕ್ಷ ಮಂದಿ ಕ್ವಾರಂಟೈನ್‌ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

    ಹೌದು. ಕೋವಿಡ್‌ 19 ಸೋಂಕಿತರ ಪ್ರಥಮ ಸಂಪರ್ಕ ಮತ್ತು ದ್ವಿತೀಯ ಸಂಪರ್ಕಿತರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಆದರೆ ಕರ್ನಾಟಕದಲ್ಲಿ 2.25 ಲಕ್ಷ ಮಂದಿ ಈ ನಿಯಮವನ್ನು ಉಲ್ಲಂಘಿಸಿ ಸುತ್ತಾಟ ಮಾಡಿದ್ದಾರೆ.

    ಈ ಪೈಕಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು 1.51 ಲಕ್ಷ ಮಂದಿ ಸುತ್ತಾಟ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದವರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಈಗಾಗಲೇ 1,645 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹೋಮ್‌ ಕ್ವಾರಂಟೈನ್‌ ಉಲ್ಲಂಘಿಸಿದ 2,205 ಮಂದಿಯನ್ನ ಸಾಂಸ್ಥಿಕ ಕ್ವಾರಂಟೈನ್‌ ಒಳಪಡಿಸಲಾಗಿದೆ.

    ಕ್ವಾರಂಟೈನಿಗಳ ಕೈಗೆ ಸೀಲ್, ಮನೆಗೆ ಭಿತ್ತಿಪತ್ರ ಅಂಟಿಸಲಾಗುತ್ತದೆ. ಅವರ ಚಟುವಟಿಕೆ, ಚಲನವಲನಗಳ ಮೇಲೆ ಅಕ್ಕಪಕ್ಕದವರು ನಿಗಾ ಇಡಬೇಕು. ಅವರು ಮನೆಯಿಂದ ಹೊರಬಂದರೆ ಪೊಲೀಸರಿಗೆ ಮಾಹಿತಿ ಕೊಡಬೇಕು. ಆಗ ಮಾತ್ರ ಕೊರೊನಾ ಹಬ್ಬುವುದನ್ನು ತಪ್ಪಿಸಬಹುದು.

    ಹೋಮ್‌ ಕ್ವಾರಂಟೈನ್‌ ನಿಯಮವನ್ನು ಪದೇ ಪದೇ ಉಲ್ಲಂಘಿಸಿ ಸ್ಥಳೀಯರು ದೂರು ನೀಡಿದರೆ ಸ್ಥಳಕ್ಕೆ ಪೊಲೀಸರು ಬಂದು ವ್ಯಕ್ತಿಯನ್ನು ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಾರೆ.

    ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ್ದಕ್ಕೆ ಬೆಳಗಾವಿಯಲ್ಲಿ 124, ಕಲಬುರಗಿಯಲ್ಲಿ 106 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

  • 7 ದಿನ ಶೌಚಾಲಯದಲ್ಲಿ ಹೋಮ್ ಕ್ವಾರಂಟೈನ್ ಕಳೆದ ಯುವಕ

    7 ದಿನ ಶೌಚಾಲಯದಲ್ಲಿ ಹೋಮ್ ಕ್ವಾರಂಟೈನ್ ಕಳೆದ ಯುವಕ

    – ಕುಟುಂಬಸ್ಥರ ಸುರಕ್ಷತೆಗಾಗಿ ಟಾಯ್ಲೆಟ್ ಕ್ವಾರಂಟೈನ್

    ಭುವನೇಶ್ವರ: ಸಾಂಸ್ಥಿಕ ಕ್ವಾರಂಟೈನ್ ಬಳಿಕ ಹೋಮ್ ಕ್ವಾರಂಟೈನ್ ಆಗಬೇಕೆಂಬ ನಿಯಮವಿರುವುದರಿಂದ ವ್ಯಕ್ತಿಯೊಬ್ಬ ಮನೆಯಲ್ಲಿ ಜಾಗ ಇಲ್ಲದ್ದಕ್ಕೆ ಶೌಚಾಲಯದಲ್ಲೇ 7 ದಿನಗಳ ಹೋಮ್ ಕ್ವಾರಂಟೈನ್ ಅವಧಿಯನ್ನು ಕಳೆದಿರುವ ವಿಚಿತ್ರ ಘಟನೆ ನಡೆದಿದೆ.

    ಒಡಿಶಾದ ಜಗತ್‍ಸಿಂಗ್‍ಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, 28 ವರ್ಷದ ವ್ಯಕ್ತಿ ತಮಿಳುನಾಡಿನಿಂದ ಒಡಿಶಾಗೆ ತೆರಳಿದ್ದಾನೆ. ಒಡಿಶಾದಲ್ಲಿ ಸಹ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಮ್ ಕ್ವಾರಂಟೈನ್ ಎಂಬ ನಿಯಮವಿದೆ. 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿದ ವ್ಯಕ್ತಿ ಹೋಮ್ ಕ್ವಾರಂಟೈನ್ ಆಗಲು ಮನೆಗೆ ತೆರೆಳಿದ್ದು, ಮನೆ ಚಿಕ್ಕದಿರುವುದರಿಂದ ಶೌಚಾಲಯದಲ್ಲೇ 7 ದಿನ ಜೀವನ ಕಳೆದಿದ್ದಾನೆ.

    ಸುದುಕಂತಿ ಶಾಲೆಯಲ್ಲಿ ಏಳು ದಿನ ಸಾಂಸ್ಥಿಕ ಕ್ವಾರಂಟೈನ್ ಮುಗಿಯುತ್ತಿದ್ದಂತೆ ಮಾನಸ್ ಪಾತ್ರಾ ನುಗಾಂವ್ ಬ್ಲಾಕ್‍ನ ಜಮುಗಾಂವ್‍ನಲ್ಲಿರುವ ತಮ್ಮ ಮನೆಗೆ ತೆರಳಿದ್ದು, ಹೋಮ್ ಕ್ವಾರಂಟೈನ್ ಕಡ್ಡಾಯದ ಹಿನ್ನೆಲೆ ಈ ಏಳು ದಿನಗಳ ಅವಧಿಯನ್ನು ಶೌಚಾಲಯದಲ್ಲಿ ಕಳೆದಿದ್ದಾನೆ.

    ಮಾನಸ್ ಪಾತ್ರಾ ಅವರ ಮನೆ ಚಿಕ್ಕದಾಗಿದ್ದು, 6 ಜನ ವಾಸಿಸುತ್ತಿದ್ದಾರೆ. ಹೀಗಾಗಿ ಮನೆಯಲ್ಲಿರಲು ಅವಕಾಶ ನೀಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಬೇರೆ ದಾರಿ ಇಲ್ಲದೆ ಅನಿವಾರ್ಯವಾಗಿ ಮನೆಯ ಬಳಿ ಇರುವ ಸ್ವಚ್ಛ್ ಭಾರತ್‍ನ ಶೌಚಾಲಯದ ಶೆಲ್ಟರ್ ನಲ್ಲೇ ಕಾಲ ಕಳೆದಿದ್ದಾರೆ.

    ಮನೆಯವರ ಸುರಕ್ಷತೆಗಾಗಿ ಶೌಚಾಲಯದಲ್ಲೇ ಕಾಲ ಕಳೆಯಬೇಕು ಎಂದು ಒತ್ತಾಯಿಸಿದರು. ಹೀಗಾಗಿ ಅಲ್ಲೇ ಇದ್ದೆ ಎಂದು ತಿಳಿಸಿದ್ದಾರೆ. ಜೂ.9ರಿಂದ 15ರ ವರೆಗೆ ಶೌಚಾಲಯದಲ್ಲೇ ಕಾಲ ಕಳೆದಿದ್ದಾರೆ. ಇದೀಗ ರೋಗ ಲಕ್ಷಣಗಳು ಕಾಣದ ಹಿನ್ನೆಲೆ ಅವರನ್ನು ಬಿಡುಗಡೆ ಮಾಡಲಾಗಿದೆ.

  • ಹೋಮ್ ಕ್ವಾರಂಟೈನ್‍ನಲ್ಲಿದ್ದವರ ಓಡಾಟ- ಯಾದಗಿರಿ ನಗರಕ್ಕೆ ಕಾಲಿಟ್ಟ ಡೆಡ್ಲಿ ಕೊರೊನಾ

    ಹೋಮ್ ಕ್ವಾರಂಟೈನ್‍ನಲ್ಲಿದ್ದವರ ಓಡಾಟ- ಯಾದಗಿರಿ ನಗರಕ್ಕೆ ಕಾಲಿಟ್ಟ ಡೆಡ್ಲಿ ಕೊರೊನಾ

    – ನಗರದ ಜನರಲ್ಲಿ ಶುರುವಾಗಿದೆ ಢವ ಢವ

    ಯಾದಗಿರಿ: ಮಹಾರಾಷ್ಟ್ರ ಕಂಟಕದಿಂದ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದು, ಈಗ ಮತ್ತೊಂದು ಆತಂಕ ಎದುರಾಗಿದೆ. ವರದಿ ಬರುವ ಮುನ್ನವೇ ಕ್ವಾರಂಟೈನ್ ಕೇಂದ್ರದಲ್ಲಿದ್ದವರನ್ನು ಮನೆಗೆ ಕಳುಹಿಸಿದ ಪರಿಣಾಮ ಯಾದಗಿರಿ ನಗರದಲ್ಲಿ ಕೊರೊನಾ ಭೀತಿ ಶುರುವಾಗಿದೆ.

    ಕೊರೊನಾ ಪರೀಕ್ಷೆಯ ವರದಿ ಬರುವ ಮುನ್ನವೇ ಮಹಾರಾಷ್ಟ್ರದಿಂದ ಬಂದವರನ್ನು ಮನೆಗೆ ಕಳುಹಿಸಲಾಗಿದೆ. ನಗರದ ವಿವಿಧ ವಾರ್ಡ್ ಗಳಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದ 18 ಜನರಿಗೆ, ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕು ಪತ್ತೆಯಾದ 18 ಜನ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ, ನಗರದ ವಿವಿಧೆಡೆ ಸಂಚಾರ ಮಾಡಿದ್ದಾರೆ. ಇದರಿಂದಾಗಿ ಜಿಲ್ಲಾಡಳಿತಕ್ಕೆ ಹೊಸ ತಲೆ ನೋವು ಶುರುವಾಗಿದೆ.

    ನಗರದ ವಾರ್ಡ್ ನಂ.9ರ ತಪಾಡಗೇರಾದಲ್ಲಿ ಒಂದೇ ಕುಟುಂಬದ 15 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರ ಜೊತೆ ಕೋಳಿವಾಡದ ಇಬ್ಬರಿಗೆ, ವಾರ್ಡ್ ನಂ.25ರ ಲಕ್ಷ್ಮಿ ನಗರದ ಒಬ್ಬರಿಗೆ ಕೊರೊನಾ ಪತ್ತೆಯಾಗಿದೆ. ಇವರೆಲ್ಲರೂ ಹೋಮ್ ಕ್ವಾರಂಟೈನ್ ನಿಯಮ ಪಾಲಿಸದೆ ನಗರದಲ್ಲಿ ಸಂಚರಿಸಿದ್ದಾರೆ. ಹೀಗಾಗಿ ಇವರು ಎಲ್ಲೆಲ್ಲಿ ಓಡಾಡಿದ್ದಾರೋ ಎಂಬ ಭಯ ಇದೀಗ ಶುರುವಾಗಿದೆ.

    ಮುನ್ನೆಚ್ಚರಿಕಾ ಕ್ರಮವಾಗಿ ಲಕ್ಷ್ಮಿ ನಗರ ಹಾಗೂ ಕೋಳಿವಾಡ ಬಡವಾವಣೆಯ 100 ಮೀಟರ್ ವ್ಯಾಪ್ತಿಯನ್ನು ಕಂಟ್ಮೋನೆಂಟ್ ಝೋನ್ ಎಂದು ಘೋಷಣೆ ಮಾಡಿ, ಸೀಲ್ ಡೌನ್ ಮಾಡಲಾಗಿದೆ. ಹೀಗಾಗಿ ಹಳ್ಳಿ, ತಾಂಡಾಗಳಿಗಲ್ಲದೇ ಈಗ ನಗರ ಪ್ರದೇಶಕ್ಕೂ ಕೊರೊನಾ ಎಂಟ್ರಿ ಕೊಟ್ಟಿದ್ದು, ಯಾದಗಿರಿ ಜನ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.

  • ಹೋಮ್ ಕ್ವಾರಂಟೈನ್‍ನಲ್ಲಿದ್ದವರು ಹೊರಗಡೆ ಓಡಾಟ- ನಾಲ್ವರ ವಿರುದ್ಧ ಎಫ್‍ಐಆರ್

    ಹೋಮ್ ಕ್ವಾರಂಟೈನ್‍ನಲ್ಲಿದ್ದವರು ಹೊರಗಡೆ ಓಡಾಟ- ನಾಲ್ವರ ವಿರುದ್ಧ ಎಫ್‍ಐಆರ್

    ಯಾದಗಿರಿ: ಹೋಮ್ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಿದರೆ ಹೊರಗಡೆ ಓಡಾಡುತ್ತಿದ್ದು, ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

    ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ವಿವಿಧ ತಾಂಡಗಳ 4 ಜನರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಭಾನು(42), ಲಕ್ಕರ್(52), ಶಂಕರ್(27), ರವಿ(26)ಯವರ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದು, ಈಗಾಗಲೇ ಹಾಸ್ಟೆಲ್ ಕ್ವಾರೆಂಟನ್ ಮುಗಿಸಿದ್ದಾರೆ. ಇನ್ನೂ 14 ದಿನಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿರುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಆದರೆ ಬೇಕಾಬಿಟ್ಟಿಯಾಗಿ ಓಡಾಡಿದ್ದಾರೆ.

     

    ಜಿಲ್ಲಾಡಳಿತದ ಸೂಚನೆಯನ್ನು ನಿರ್ಲಕ್ಷಿಸಿ, ಲಾಕ್‍ಡೌನ್ ನಿಯಮಗಳನ್ನು ಮೀರಿ ತಮ್ಮ ತಾಂಡಗಳಲ್ಲಿ ತಿರುಗಾಟ ನಡೆಸಿದ್ದರು. ಈ ಹಿನ್ನೆಲೆ ಇವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ ಎಂದು ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ಮಾತೃಭಾಷೆ ಕಲಿಯುವಲ್ಲಿ ಮಿಲ್ಕಿ ಬ್ಯೂಟಿ ಫುಲ್ ಬ್ಯುಸಿ

    ಮಾತೃಭಾಷೆ ಕಲಿಯುವಲ್ಲಿ ಮಿಲ್ಕಿ ಬ್ಯೂಟಿ ಫುಲ್ ಬ್ಯುಸಿ

    ಹೈದರಾಬಾದ್: ಲಾಕ್‍ಡೌನ್ ಅವಧಿಯಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಸಖತ್ ಬ್ಯುಸಿಯಾಗಿದ್ದು, ತಮಗಿಷ್ಟದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಹೋಮ್ ಕ್ವಾರಂಟೈನ್ ವಿಧಿಸಿಕೊಂಡಿದ್ದಾರೆ. ವಿವಿಧ ಚಟುವಟಿಕೆಗಳಲ್ಲಿ ತೊಡಗಿರುವ ತಮನ್ನಾ ಕುಟುಂಬದೊಂದಿಗೂ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಮಹತ್ವದ ಕೆಲಸವೊಂದನ್ನು ಮಾಡುತ್ತಿದ್ದಾರೆ.

    ಬಹುಭಾಷಾ ನಟಿ ತಮನ್ನಾ ಭಾಟಿಯಾ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಮನೆಯಲ್ಲಿ ಇರುವುದೇ ಕಡಿಮೆಯಾಗಿತ್ತು. ಆದರೆ ಕೊರೊನಾ ವೈರಸ್‍ನಿಂದಾಗಿ ಇದೀಗ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದು, ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇದರೊಂದಿಗೆ ಮಹತ್ವದ ಕೆಲಸವೊಂದನ್ನು ಮಾಡುತ್ತಿದ್ದು, ತಮ್ಮ ಮಾತೃಭಾಷೆ ಕಲಿಯಲು ಮುಂದಾಗಿದ್ದಾರೆ.

    ತಮನ್ನಾ ಮಾತೃಭಾಷೆ ಸಿಂಧಿ, ಆದರೆ ಅವರಿಗೆ ಈ ಭಾಷೆ ಅಷ್ಟೇನು ಬರುವುದಿಲ್ಲ. ಹೀಗಾಗಿ ಲಾಕ್‍ಡೌನ್ ಸಮಯದಲ್ಲಿ ಸಿಂಧಿ ಭಾಷೆ ಕಲಿಯುವ ಪಣ ತೊಟ್ಟಿದ್ದಾರೆ. ಇದಕ್ಕಾಗಿಯೇ ಹೆಚ್ಚು ಸಮಯ ಕಳೆಯುತ್ತಿದ್ದಾರಂತೆ. ಈ ಹಿಂದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಬಡ ಜನರಿಗೆ ಆಹಾರ ಪದಾರ್ಥ ವಿತರಿಸಿದ್ದರು. ಲಾಕ್‍ಡೌನ್ ಅವಧಿಯಲ್ಲಿ ಮುಂಬೈನ ಸ್ಲಂ ನಿವಾಸಿಗಳಿಗೆ ಟನ್‍ನಷ್ಟು ಆಹಾರ ಒದಿಗಿಸಿದ್ದರು. ಈ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಇದೀಗ ತಮ್ಮ ಮಾತೃಭಾಷೆ ಕಲಿಯಲು ಒಲವು ತೋರಿದ್ದಾರೆ. ಇದಕ್ಕಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದು, ಹೆಚ್ಚು ಸಮಯ ಇದಕ್ಕೇ ಕಳಿಯುತ್ತಿದ್ದಾರೆ.

    ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ತಮನ್ನಾ ಸಹ ಒಬ್ಬರು. ತಮಿಳು, ತೆಲುಗಿನಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಅಲ್ಲದೆ ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುವ ಮೂಲಕ ತಮ್ಮ ಸಾಮಥ್ರ್ಯವನ್ನು ತೋರಿಸಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಿದ್ದ ತಮನ್ನಾ ಇತರೆ ಚಟುವಟಿಕೆಗಳನ್ನು ಮಾಡಲು ಸಮಯವಿರುತ್ತಿರಲಿಲ್ಲ. ಇದೀಗ ತಮಗಿಷ್ಟದ ಕೆಲಸದಲ್ಲಿ ತೊಡಗಿದ್ದು, ಇದರ ಭಾಗವಾಗಿ ಸಿಂಧಿ ಭಾಷೆ ಕಲಿಯುತ್ತಿದ್ದಾರಂತೆ.

    ಕನ್ನಡದಲ್ಲಿಯೂ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ತಮನ್ನಾ ಜಾಗ್ವಾರ್ ಹಾಗೂ ಕೆಜಿಎಫ್ ಚಿತ್ರಗಳಲ್ಲಿ ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಕನ್ನಡದಲ್ಲಿಯೂ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್- ಶ್ರೀಮನ್ನಾರಾಯಣನ ಹೊಸ ಅವತಾರ

    ಲಾಕ್‍ಡೌನ್ ಎಫೆಕ್ಟ್- ಶ್ರೀಮನ್ನಾರಾಯಣನ ಹೊಸ ಅವತಾರ

    ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆ ಸಿನಿಮಾ ರಂಗ ಸಂಪೂರ್ಣ ಸ್ತಬ್ಧವಾಗಿದ್ದು, ನಟ, ನಟಿಯರು ಸಹ ತಮ್ಮದೇ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹಲವರು ಬೇಜಾರಲ್ಲಿ ಸಮಯ ಕಳೆದರೆ, ಇನ್ನೂ ಹಲವರು ತಮ್ಮ ಮುಂದಿನ ಪ್ರಾಜೆಕ್ಟ್‍ಗೆ ಸಿದ್ಧತೆ ನಡೆಸಿದ್ದಾರೆ, ಇನ್ನೂ ಹಲವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಹೀಗೆ ಎಲ್ಲ ತಾರೆಯರು ತಮ್ಮದೇ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ನಟ ರಕ್ಷಿತ್ ಶೆಟ್ಟಿ ಸಹ ತಮ್ಮದೇ ಕಾರ್ಯದಲ್ಲಿ ತೊಡಗಿದ್ದು, ತಮ್ಮ ಹೊಸ ಅವತಾರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಈ ಹಿಂದೆ ತಮ್ಮ ಎರಡ್ಮೂರು ಸಿನಿಮಾಗಳ ಕಾರ್ಯದಲ್ಲಿ ತೊಡಗಿರುವ ಕುರಿತು ಮಾಹಿತಿ ನೀಡಿದ್ದ ರಕ್ಷಿತ್ ಶೆಟ್ಟಿ, ಇದೀಗ ತಮ್ಮ ಸ್ಥಿತಿ ಕುರಿತು ಫೋಟೋ ಹಾಕಿದ್ದಾರೆ. ರಕ್ಷಿತ್ ಶೆಟ್ಟಿ ತಾವೇ ನಿರ್ದೇಶಿಸುತ್ತಿರುವ ಪುಣ್ಯಕೋಟಿ ಚಿತ್ರದ ಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದು, ಇತ್ತೀಚೆಗೆ ಕಾಡಿಗೆ ಸಹ ಹೋಗಿದ್ದರು. ಇದೀಗ ಹೋಮ್ ಕ್ವಾರಂಟೈನ್‍ನಲ್ಲಿದ್ದು, ಇದರ ನಡುವೆಯೇ ಸಿನಿಮಾ ಕಾರ್ಯಗಳನ್ನು ಮಾಡುತ್ತಿದ್ದಾರೆ.

    ರಕ್ಷಿತ್ ಶೆಟ್ಟಿ ತಮ್ಮ ಮೂವರು ರೂಮ್ ಮೇಟ್ಸ್ ಜೊತೆಗೆ ಬೆಂಗಳೂರಿನ ಮನೆಯಲ್ಲಿ ಬ್ಯಾಚ್ಯುಲರ್ ಲೈಫ್ ಕಳೆಯುತ್ತಿದ್ದಾರೆ. ಈ ಮಧ್ಯೆ ಹತ್ತು ಹಲವು ಕೆಲಸಗಳಲ್ಲಿ ತೊಡಗಿದ್ದಾರೆ. ಕಥೆಗಳನ್ನು ಬರೆಯುವುದು, ಜೊತೆಗೆ ಚಾರ್ಲಿ ಸಿನಿಮಾದ ಕೆಲಸಗಳನ್ನು ಸಹ ಮಾಡುವುದು, ಪುಸ್ತಕ ಓದುವುದು, ಕಥೆ ಬರೆಯುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿರುವುದಾಗಿ ಈ ಹಿಂದೆ ಲೈವ್‍ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು.

    ಚಾರ್ಲಿ ಚಿತ್ರೀಕರಣವನ್ನು ಸದ್ಯಕ್ಕೆ ನಿಲ್ಲಿಸಿದ್ದು, ಯಾವಾಗ ಪ್ರಾರಂಭವಾಗುತ್ತದೆ ತಿಳಿದಿಲ್ಲ. ವಾತಾವರಣ ಸರಿಯಾಗಿದೆ ಎಂದು ಸರ್ಕಾರ ಹೇಳುವವರೆಗೆ ಚಿತ್ರೀಕರಣ ಪ್ರಾರಂಭಿಸುವುದಿಲ್ಲ. ಎಲ್ಲರೂ ಅವರ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದೇವೆ. ಕಿರಣ್ ರಾಜ್ ಅವರು ಚಾರ್ಲಿ ಸಿನಿಮಾದ ಫಸ್ಟ್ ಹಾಫ್‍ನ್ನು ಎಡಿಟ್ ಮಾಡಿ, ಬ್ಯಾಗ್ರೌಂಡ್ ಸ್ಕೋರ್ ಮಾಡುತ್ತಿದ್ದಾರೆ. ಡಬ್ಬಿಂಗ್ ಸಹ ಅರ್ಧ ಆಗಿದ್ದು, ಇನ್ನೂ ಅರ್ಧ ಬಾಕಿ ಇದೆ. ಇದೀಗ ಡಬ್ಬಿಂಗ್ ಮಾಡುವ ಹಾಗಿಲ್ಲ ಹೀಗಾಗಿ ಚಾರ್ಲಿ ಸಿನಿಮಾದ ಬ್ಯಾಗ್ರೌಂಡ್ ಸ್ಕೋರ್ ಕೆಲಸವನ್ನು ಮುಂದುವರಿಸಿದ್ದಾರೆ ಎಂದು ತಿಳಿಸಿದ್ದರು.

    ಹೇಮಂತ್ ರಾವ್ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾಗೆ ಕಥೆ ಬರೆಯುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಸಿನಿಮಾ ಆಗಿದ್ದು, ಒಳ್ಳೆಯ ಚಿತ್ರ ಆಗಲಿದೆ ಎಂದು ಭರವಸೆ ನೀಡಿದ್ದಾರೆ. ಚಾರ್ಲಿ, ನಂತರ ಪುಣ್ಯಕೋಟಿ ಮಾಡುವ ಕುರಿತು ಯೋಚನೆ ಇದೆ. ಈ ಸಿನಿಮಾಗಳ ಕುರಿತು ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದರು. ಅಲ್ಲದೆ ಪುಣ್ಯಕೋಟಿ ಕಥೆಗೆ ಪೂರಕವಾಗುವಂಥ ಪುಸ್ತಕಗಳನ್ನು ಓದುತ್ತಿರುವುದಾಗಿ ತಿಳಿಸಿದ್ದರು.

    ಇದೀಗ ಇದ್ದಕ್ಕಿದ್ದಂತೆ ಗಡ್ಡಬಿಟ್ಟಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ಮೂಲಕ ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಹೇರ್ ಕಟಿಂಗ್ ಸಲೂನ್ ತೆರೆದಿಲ್ಲ. ಅಲ್ಲದೆ ಸಿನಿಮಾಗಳ ಸಿದ್ಧತೆಯಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ ಗಡ್ಡಕ್ಕೆ ಕತ್ತರಿ ಹಾಕಿಲ್ಲ. ಇದೇ ಚಿತ್ರಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‍ಗೆ ಹ್ಯಾಶ್ ಟ್ಯಾಗ್‍ನೊಂದಿಗೆ ಲಾಕ್‍ಡೌನ್ ಎಫೆಕ್ಟ್ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕಮೆಂಟ್ ಮಾಡಿ, ಇದು ನಿಮ್ಮ ಮುಂದಿನ ಚಿತ್ರದ ಓಪನಿಂಗ್ ಸೀನ್ ಲುಕ್ ಅನ್ಸುತ್ತೆ ಎಂದು ಕಮೆಂಟ್ ಮಾಡಿದ್ದಾರೆ.

     

    View this post on Instagram

     

    #lockdowneffect

    A post shared by Rakshit Shetty (@rakshitshetty) on

  • ಕ್ವಾರಂಟೈನ್ ಉಲ್ಲಂಘಿಸಿ ಮನೆಯಿಂದ ಹೊರ ಬಂದವರ ಮೇಲೆ ಎಫ್‍ಐಆರ್

    ಕ್ವಾರಂಟೈನ್ ಉಲ್ಲಂಘಿಸಿ ಮನೆಯಿಂದ ಹೊರ ಬಂದವರ ಮೇಲೆ ಎಫ್‍ಐಆರ್

    ಕಲಬುರಗಿ: ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಮನೆಯಿಂದ ಹೊರ ಬಂದ 8 ಜನರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್ ಸತೀಶ್ ಕುಮಾರ್ ಆದೇಶಿಸಿದ್ದಾರೆ.

    ಕಲಬುರಗಿ ನಗರ, ಆರ್.ಜೆ.ನಗರ ಠಾಣೆ ವ್ಯಾಪ್ತಿಯಲ್ಲಿ ತಲಾ ಮೂವರು, ಎಂಬಿ ನಗರ ಮತ್ತು ರೋಜಾ ಠಾಣೆ ವ್ಯಾಪ್ತಿಯಲ್ಲಿ ತಲಾ ಒಬ್ಬರು ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾರೆ. ಇವರೆಲ್ಲರಿಗೆ ಹೋಮ್ ಕ್ವಾರಂಟೈನ್ ವಿಧಿಸಲಾಗಿತ್ತು. 14 ದಿನ ಪೂರ್ಣಗೊಂಡ ನಂತ್ರ ವೈದ್ಯರ ಸಲಹೆ ಪಡೆದು ಮನೆಯಿಂದ ಹೊರ ಬರುವಂತೆ ಅಧಿಕಾರಿಗಳು ಸೂಚಿಸಿದ್ದರು. ಆದ್ರೆ ಕ್ವಾರಂಟೈನ್ ಅವಧಿ ಮುಗಿಯುವ ಮೊದಲೇ ಮನೆಯಿಂದ ಹೊರ ಬಂದಿದ್ದರು.

    ಸದ್ಯ ಎಲ್ಲರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಕ್ವಾರಂಟೈನ್ ಅವಧಿ ಮುಗಿದ ಬಳಿಕ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಆಯುಕ್ತಾಲಯದ ಆದೇಶವನ್ನ ಉಲ್ಲಂಘಿಸಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

  • ಹಾವೇರಿಗೆ ಬಂದಿದ್ದ ವಿಜಯಪುರದ ಕೊರೊನಾ ಸೋಂಕಿತರು

    ಹಾವೇರಿಗೆ ಬಂದಿದ್ದ ವಿಜಯಪುರದ ಕೊರೊನಾ ಸೋಂಕಿತರು

    – 21 ಜನಕ್ಕೆ ಹೋಮ್ ಕ್ವಾರಂಟೈನ್

    ಹಾವೇರಿ: ವಿಜಯಪುರ ಜಿಲ್ಲೆಯ ಕೊರೊನಾ ಸೋಂಕಿತರಿಬ್ಬರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರಿಗೆ ಬಂದು ಹೋಗಿದ್ದಾರೆ ಎಂಬ ವಿಷಯ ಬಹಿರಂಗವಾಗಿದ್ದು, ಗ್ರಾಮದ 21 ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಹೋಮ್ ಕ್ವಾರಂಟೈನ್‍ನಲ್ಲಿಡಲಾಗಿದೆ.

    ವಿಜಯಪುರ ಜಿಲ್ಲೆಯ ರೋಗಿ ನಂಬರ್ 306 ಮತ್ತು 308 ಟ್ರಾವೆಲ್ ಹಿಸ್ಟರಿ ಪರಿಶೀಲಿಸಲಾಗಿದ್ದು, ಈ ವೇಳೆ ಆಡೂರಿಗೆ ಭೇಟಿ ನೀಡಿರುವುದು ಬಹಿರಂಗವಾಗಿದೆ. ಏಪ್ರಿಲ್ 5 ರಂದು ಆಡೂರಿನ ತಮ್ಮ ಸಂಬಂಧಿಕರ ಮನೆಗೆ ಬಂದು ಊಟ ಮಾಡಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ಆಧಾರದ ಮೇಲೆ 21 ಜನರನ್ನು ಜಿಲ್ಲಾಸ್ಪತ್ರೆಗೆ ಕರೆತಂದು ತಪಾಸಣೆಗೆ ಒಳಪಡಿಸಲಾಗಿದೆ.

    ಈ 21 ಜನರಲ್ಲಿ ಯಾರಲ್ಲೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಇವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅಲ್ಲದೆ ಇವರ ರಕ್ತ ಮತ್ತು ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷಿಸಲು ಲ್ಯಾಬ್‍ಗೆ ಕಳುಹಿಸಿದೆ. ಪರೀಕ್ಷೆ ನಂತರ 21 ಜನರನ್ನು ಆರೋಗ್ಯ ಇಲಾಖೆ ಕ್ವಾರಂಟೈನ್ ಮಾಡಿದೆ. ಲ್ಯಾಬ್ ವರದಿ ಸೋಮವಾರ ಸಂಜೆ ಅಥವಾ ಮಂಗಳವಾರ ಆರೋಗ್ಯ ಇಲಾಖೆಯ ಕೈ ಸೇರಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ಮಾಹಿತಿ ನೀಡಿದ್ದಾರೆ.