Tag: ಹೋಟೆಲ್ ಮಾಲೀಕ

  • ಹೋಟೆಲ್‌ನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕನ ಕೂಡಿಹಾಕಿ ಹಿಂಸೆ, ಹಲ್ಲೆ – ಚಿಕಿತ್ಸೆ ಫಲಿಸದೇ ಸಾವು

    ಹೋಟೆಲ್‌ನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕನ ಕೂಡಿಹಾಕಿ ಹಿಂಸೆ, ಹಲ್ಲೆ – ಚಿಕಿತ್ಸೆ ಫಲಿಸದೇ ಸಾವು

    ಬೆಳಗಾವಿ: ಹೋಟೆಲ್‌ನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕನ ಕೂಡಿಹಾಕಿ ಹಿಂಸೆ ನೀಡಿ, ಹಲ್ಲೆ ಮಾಡಿದ ಪರಿಣಾಮ ಗಂಭೀರ ಗಾಯಗೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಖಾನಾಪುರ (Khanapura) ತಾಲೂಕಿನಲ್ಲಿ ನಡೆದಿದೆ.

    ಮಾಣಿಕವಾಡಿ ನಿವಾಸಿ ವೆಂಕಪ್ಪ ಮೈಯೆಕರ್(18) ಸಾವನ್ನಪ್ಪಿದ ಕಾರ್ಮಿಕ ಎಂದು ಗುರುತಿಸಲಾಗಿದೆ. ಖಾನಾಪುರ ಹೊರವಲಯದ ಸ್ವರಾಜ್ ಹೋಟೆಲ್‌ನಲ್ಲಿ ಮೂರು ತಿಂಗಳಿನಿಂದ ಯುವಕ ಕೆಲಸ ಮಾಡುತ್ತಿದ್ದ. ಆ.20 ರಂದು ಯುವಕನ ಮೇಲೆ ಕಳ್ಳತನ ಆರೋಪ ಹೊರಿಸಿ, ಆತನನ್ನು ಕೂಡಿ ಹಾಕಿ ಹೋಟೆಲ್ ಮಾಲೀಕ ನಾಗೇಶ್ ಗುಂಡು ಬೆಡರೆ, ಸಹೋದರ ವಿಜಯ್ ಬೆಡರೆ ಕಿರುಕುಳ ನೀಡಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸ್ಪೈ ಕ್ಯಾಮೆರಾ ಬಳಸಿ ಮಹಿಳೆ ವೀಡಿಯೋ ರೆಕಾರ್ಡ್‌ – ದೆಹಲಿಯಲ್ಲಿ ಪೈಲಟ್‌ ಬಂಧನ

     ತೀವ್ರವಾಗಿ ಗಾಯಗೊಂಡ ಯುವಕನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಈ ಬಗ್ಗೆ ಪ್ರಶ್ನೆ ಮಾಡಲು ಹೋದ ಯುವಕನ ಪೋಷಕರಿಗೆ ಹೋಟೆಲ್ ಮಾಲೀಕ 10 ಸಾವಿರ ರೂ. ಹಣ ನೀಡಿ, ದೂರು ನೀಡದಂತೆ ಧಮ್ಕಿ ಹಾಕಿದ್ದ ಎನ್ನಲಾಗಿದೆ. ಹೋಟೆಲ್ ಮಾಲೀಕನ ಧಮ್ಕಿಗೆ ಹೆದರಿ ಪೊಲೀಸರಿಗೆ ದೂರು ನೀಡಲು ಯುವಕನ ತಂದೆ, ತಾಯಿ ಹಿಂಜರಿದಿದ್ದರು. ಇದನ್ನೂ ಓದಿ: ಸಿಗರೇಟ್ ವಿಚಾರಕ್ಕೆ ಗಲಾಟೆ – ರಿಪೀಸ್‌ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ, ಇಬ್ಬರು ಅರೆಸ್ಟ್

    ಈ ವಿಚಾರ ತಿಳಿದ ಗ್ರಾಮಸ್ಥರು ಯುವಕನ ತಂದೆಯ ಬೆನ್ನಿಗೆ ನಿಂತು, ಖಾನಾಪುರ ಪೊಲೀಸ್ (Khanapura Police) ಠಾಣೆಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಪೋಷಕರು ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ಕಣ್ಣೀರಿಟ್ಟಿದ್ದಾರೆ.

  • ಕೋವಿಡ್ ನಷ್ಟ- ಹೋಟೆಲ್ ಉದ್ಯಮಿ ಆತ್ಮಹತ್ಯೆ

    ಕೋವಿಡ್ ನಷ್ಟ- ಹೋಟೆಲ್ ಉದ್ಯಮಿ ಆತ್ಮಹತ್ಯೆ

    ವಿಜಯಪುರ: ಇಂಡಿ ನಗರದ ಅಮರ್ ಹೋಟೆಲ್ ಮಾಲೀಕ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಗಣೇಶ್ ಆತ್ಮಹತ್ಯೆಗೆ ಶರಣಾದ ಹೋಟೆಲ್ ಉದ್ಯಮಿ. ಮಂಗಳೂರು ಮೂಲದವರಾಗಿರುವ ಗಣೇಶ್, ಇಂಡಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. 30 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡು ಬಾಡಿಗೆ ಕಟ್ಟಡದಲ್ಲಿ ಹೋಟೆಲ್ ಮತ್ತು ಲಾಡ್ಜಿಂಗ್ ಆರಂಭಿಸಿದ್ದರು. ಕೋವಿಡ್ ಕಾರಣದಿಂದ ಹೋಟೆಲ್ ಉದ್ಯಮದ ಮೇಲೆ ಭಾರೀ ಹೊಡೆತ ಬಿದ್ದಿದ್ದರಿಂದ ಗಣೇಶ್ ಆರ್ಥಿಕ ಸಂಕಷ್ಟದಲ್ಲಿದ್ದರು ಎನ್ನಲಾಗಿದೆ.

    ಹೋಟೆಲ್ ನಡೆಸಲು ಪಡೆದ ಸಾಲ ಹಿಂದಿರುಗಿಸಲಾಗದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊಠಡಿಯಲ್ಲಿ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದ ಹೋಟೆಲ್ ಮಾಲೀಕ

    ಕೊಠಡಿಯಲ್ಲಿ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದ ಹೋಟೆಲ್ ಮಾಲೀಕ

    ಲಕ್ನೋ: ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿಎಚ್‍ಯೂ) ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದಿದ್ದಕ್ಕೆ ಹೋಟೆಲ್ ಮಾಲೀಕನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

    ಶ್ವೇತಾ ಸಿಂಗ್ (22) ಕೊಲೆಯಾದ ವಿದ್ಯಾರ್ಥಿನಿ. ಶ್ವೇತಾ ಸಿಂಗ್ ಬಿಎಚ್‍ಯೂ ವಿದ್ಯಾರ್ಥಿನಿಯಾಗಿದ್ದು, ವಾರಣಾಸಿಯ ಅಶೋಕ ಹೋಟೆಲ್ ಮಾಲೀಕ, ಆರೋಪಿ ಅಮಿತ್ ಆಕೆಯ ಸ್ನೇಹಿತ ಎಂದು ಪೊಲೀಸರು ಹೇಳಿದ್ದಾರೆ.

    ಶ್ವೇತಾ ಸಿಂಗ್ ಆರೋಪಿ ಅಮಿತ್‍ನನ್ನು ಭೇಟಿ ಮಾಡಲು ಆಗಾಗ ಹೋಟೆಲ್‍ಗೆ ಹೋಗುತ್ತಿದ್ದಳು. ಇಂದು ಬೆಳಗ್ಗೆ ಶ್ವೇತಾ ತನ್ನ ಗೆಳೆಯ ಅಮಿತ್‍ನನ್ನು ಭೇಟಿ ಮಾಡಲು ಹೋಟೆಲ್‍ಗೆ ಬಂದಿದ್ದಳು. ಈ ವೇಳೆ ಹೋಟೆಲಿನ ರೂಮಿನಲ್ಲಿ ಗುಂಡಿನ ಸದ್ದು ಕೇಳಿತ್ತು. ಆಗ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಶ್ವೇತಾ ಮೃತದೇಹ ಬೆಡ್ ಮೇಲೆ ಬಿದ್ದಿತ್ತು.

    ಮೃತ ಶ್ವೇತಾಳ ತಂದೆ ಉತ್ತರಪ್ರದೇಶದಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ಮೂರು ವರ್ಷಗಳ ಹಿಂದೆ ದಶಾಶ್ವಮೇಧ ಘಾಟ್‍ನಲ್ಲಿ ಸ್ನಾನಕ್ಕೆ ಎಂದು ತೆರಳಿದ್ದಾಗ ಅಲ್ಲಿ ಮುಳುಗಿ ಮೃತಪಟ್ಟಿದ್ದರು. ಅಲ್ಲದೆ ಶ್ವೇತಾ ತಾಯಿ ಕೂಡ ಮೃತಪಟ್ಟಿದ್ದಾರೆ. ಶ್ವೇತಾ ತನ್ನ ತಾತ ರಾಮ್ ಇಕ್ಬಾಲ್ ಸಿಂಗ್ ಜೊತೆ ವಾಸಿಸುತ್ತಿದ್ದಳು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೋಟೆಲ್ ಮಾಲೀಕ ಅಮಿತ್‍ನನ್ನು ಬಂಧಿಸಿದ್ದಾರೆ. ಬಳಿಕ ಶ್ವೇತಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ತಂಡ ಕ್ಯಾಮೆರಾವನ್ನು ಪರಿಶೀಲಿಸಿದೆ.