Tag: ಹೋಂ ಸ್ಟೇ

  • ವಯನಾಡು ದುರಂತದ ಬಳಿಕ ಸರ್ಕಾರ ಅಲರ್ಟ್- ಕಾಫಿನಾಡಲ್ಲಿ 40 ಅನಧಿಕೃತ ಹೋಂ ಸ್ಟೇ,  ರೆಸಾರ್ಟ್‌ಗಳಿಗೆ ನೋಟಿಸ್

    ವಯನಾಡು ದುರಂತದ ಬಳಿಕ ಸರ್ಕಾರ ಅಲರ್ಟ್- ಕಾಫಿನಾಡಲ್ಲಿ 40 ಅನಧಿಕೃತ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ನೋಟಿಸ್

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದ 40ಕ್ಕೂ ಹೆಚ್ಚು ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಅರಣ್ಯ ಇಲಾಖೆ ದಾಖಲೆಗಳನ್ನು ನೀಡುವಂತೆ ನೋಟಿಸ್ ನೀಡಿದೆ.

    2015 ರಿಂದ ಈಚೆಗೆ ಮಲೆನಾಡು ಭಾಗದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿ ಹೋಂ ಸ್ಟೇ, ರೆಸಾರ್ಟ್, ಮನೆ, ತೋಟ ನಿರ್ಮಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ (Eshwara Khandre) ಆದೇಶಿಸಿದ್ದರು. ಅರಣ್ಯ ಸಚಿವರ ಆದೇಶದ ಬೆನ್ನಲ್ಲೇ ಚಿಕ್ಕಮಗಳೂರು ಅರಣ್ಯ ಇಲಾಖೆ 40ಕ್ಕೂ ಹೆಚ್ಚು ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ನೀಡಿದೆ. ಇದನ್ನೂ ಓದಿ: Hit-and-Run Case | ಬಾರ್‌ನಿಂದ ಬಂದು ಹಲವು ಕಾರುಗಳಿಗೆ ಡಿಕ್ಕಿ – ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷನ ಪುತ್ರ ಪರಾರಿ

    ಚಿಕ್ಕಮಗಳೂರು, ಮೂಡಿಗೆರೆ, ಮುತ್ತೋಡಿ, ಮುಳ್ಳಯ್ಯನಗಿರಿ ಭಾಗದ ಹೋಂ ಸ್ಟೇಗಳಿಗೆ ನೋಟಿಸ್ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಧಿಕೃತವಾಗಿ 650ಕ್ಕೂ ಹೆಚ್ಚು ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿವೆ. ಆದರೆ ಸರ್ಕಾರದ ಅನುಮತಿ ಪಡೆಯದಂತಹ 800ಕ್ಕೂ ಅಧಿಕ ಅನಧಿಕೃತ ಹೋಂ ಸ್ಟೇಗಳಿವೆ. ಅದರಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಗುಡ್ಡಗಾಡು ಪ್ರದೇಶದಂತಹ ಎತ್ತರದ ಪ್ರದೇಶ ಹಾಗೂ ಗುಡ್ಡದ ತಪ್ಪಲಿನಲ್ಲೇ ಹೆಚ್ಚಾಗಿ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳನ್ನು ನಿರ್ಮಿಸಿದ್ದಾರೆ.

    ವಯನಾಡು ದುರಂತದ ಬಳಿಕ ಮುಂಜಾಗ್ರತ ಕ್ರಮವಾಗಿ ಸಚಿವರ ಆದೇಶದನ್ವಯ ಆರಂಭಿಕವಾಗಿ ಜಿಲ್ಲೆಯಲ್ಲಿರುವ 40 ಅನಧಿಕೃತ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಆರಂಭಿಕ ಹಂತವಾಗಿ ದಾಖಲೆ ಸಲ್ಲಿಸುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಇರುವಂತಹ ಎಲ್ಲಾ ಅನಧಿಕೃತ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಇದನ್ನೂ ಓದಿ: ನಿಯಂತ್ರಣಕ್ಕೆ ಬಾರದ ಹಿಂಸಾಚಾರ – ಮಣಿಪುರದ ಮೂರು ಜಿಲ್ಲೆಗಳಲ್ಲಿ ಕರ್ಫ್ಯೂ

  • ಕೊಡಗು ಪ್ರವಾಸಕ್ಕೆ ಬಂದಿದ್ದ ಯುವತಿ ಅನುಮಾನಾಸ್ಪದ ಸಾವು

    ಕೊಡಗು ಪ್ರವಾಸಕ್ಕೆ ಬಂದಿದ್ದ ಯುವತಿ ಅನುಮಾನಾಸ್ಪದ ಸಾವು

    ಮಡಿಕೇರಿ: ಪ್ರವಾಸಕ್ಕೆಂದು ಕೊಡಗಿಗೆ ಬಂದು ಮಡಿಕೇರಿಯ ಹೋಂಸ್ಟೇಯಲ್ಲಿ ತಂಗಿದ್ದ ಯುವತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

    ಮುಂಬೈ ಮೂಲದ ಈಶ್ವರ್ ಅವರ ಮಗಳು ವಿಘ್ನೇಶ್ವರಿ(24) ಮೃತ ಯುವತಿಯಾಗಿದ್ದು, ಇದೇ ಶನಿವಾರ ಕೊಡಗು ಜಿಲ್ಲೆಗೆ ತನ್ನ ನಾಲ್ವರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದರು. ಮಡಿಕೇರಿ ನಗರದ ನ್ಯೂ ಕೂರ್ಗ್ ವ್ಯಾಲಿ ಹೋಂಸ್ಟೇನಲ್ಲಿ ತಂಗಿದ್ದರು. ಬಳಿಕ ಕೊಡಗಿನ ಪ್ರವಾಸಿತಾಣಗಳಿಗೆ ಭೇಟಿ ನೀಡಿದ ಯುವತಿಯರ ತಂಡ ಭಾನುವಾರವೂ ಜಿಲ್ಲೆಯ ವಿವಿಧ ಪ್ರವಾಸಿತಾಣಗಳಿಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಬೇರೆ ಮನೆ ಮಾಡಲು ಒಪ್ಪದ ಪತಿ -ಕಂದನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ

    ಭಾನುವಾರ ರಾತ್ರಿ ಸ್ನಾನಕ್ಕೆಂದು ವಿಘ್ನೇಶ್ವರಿ ಬಾತ್ ರೂಮಿಗೆ ತೆರಳಿದ್ದ ಯುವತಿ ಬಾತ್ ರೂಮಿನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬಾತ್ ರೂಮಿಗೆ ಅಳವಡಿಸಿದ್ದ ಗೀಸರ್ ನಿಂದ ಗ್ಯಾಸ್ ಲೀಕ್ ಆಗಿ ಯುವತಿ ಮೃತಪಟ್ಟಿರಬಹುದು ಎನ್ನಲಾಗಿದೆ. ಯುವತಿ ಮೃತಪಟ್ಟಿರುವುದು ತಿಳಿಯುತ್ತಿದ್ದಂತೆ ಜೊತೆಯಲ್ಲಿದ್ದ ಉಳಿದ ನಾಲ್ವರು ಯುವತಿಯರು ಹೋಂಸ್ಟೇ ಮಾಲೀಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ತಕ್ಷಣವೇ ಮಾಲೀಕ ಮುಕ್ತರ್ ಸ್ಥಳಕ್ಕೆ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಯುವತಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ:  ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳಲು ವಿರೋಧಿಸಿದ್ದಕ್ಕೆ ತಂಗಿಯನ್ನೇ ಕೊಂದ ಅಕ್ಕ!

    ಯುವತಿಯ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಿ ಬಳಿಕ ಪೋಷಕರಿಗೆ ಹಸ್ತಾಂತರ ಮಾಡಿದ್ದಾರೆ. ಘಟನೆ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕರಿತಂತೆ ಮಾತನಾಡಿರುವ ಯುವತಿಯ ತಂದೆ ಈಶ್ವರ್, ನನ್ನ ಮಗಳು ಆರೋಗ್ಯವಾಗಿದ್ದಳು. ನಿತ್ಯ ವಾಕ್ ಕೂಡ ಮಾಡುತ್ತಿದ್ದಳು. ಎರಡು ದಿನ ಕೊಡಗಿನ ಪ್ರವಾಸಿ ಸ್ಥಳಗಳಲ್ಲಿ ಚೆನ್ನಾಗಿಯೇ ಓಡಾಡಿ ನೋಡಿದ್ದಾಳೆ. ಆದರೆ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಮೃತಪಟ್ಟಿರುವುದು ಅನುಮಾನ ಮೂಡಿಸಿದೆ. ಈ ಕುರಿತು ಸರಿಯಾದ ತನಿಖೆ ಮಾಡಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಹೋಂಸ್ಟೇ ಮಾಲೀಕ ಮುಕ್ತರ್ ಗ್ಯಾಸ್ ಗೀಜರ್ ಗೆ ಕನೆಕ್ಷನ್ ಕೊಟ್ಟಿಲ್ಲ. ಹೇಗೆ ಮೃತಪಟ್ಟಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.

  • ಕೊಡಗಿನ ಅನಧಿಕೃತ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮ

    ಕೊಡಗಿನ ಅನಧಿಕೃತ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮ

    – 935 ಹೋಂ ಸ್ಟೇಗಳಿಗಾಗಿ ಅರ್ಜಿ

    ಮಡಿಕೇರಿ: ಕೊರೊನಾ ಲಾಕ್‍ಡೌನ್ ಸಡಿಲಿಕೆಯ ನಂತರ ಹೋಂಸ್ಟೇಗಳ ಪುನರ್ ಆರಂಭಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೆ ಕೊರೊನಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸುವುದಕ್ಕಾಗಿ ಹೋಂಸ್ಟೇಗಳಲ್ಲಿ ಕೊರೊನಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಿಣಿ ಜಾಯ್ ಎಚ್ಚರಿಸಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ ಈ ವರೆಗೆ 935 ಹೋಂಸ್ಟೇಗಳು ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದು, 480 ಹೋಂಸ್ಟೇಗಳಿಗೆ ಅನುಮೋದನೆ ನೀಡಲಾಗಿದೆ. ಉಳಿದ 397 ಹೋಂಸ್ಟೇಗಳಿಗೆ ಇನ್ನೂ ಅನುಮೋದನೆ ದೊರೆತಿಲ್ಲ. ಉಳಿದ ಹೋಂಸ್ಟೇಗಳನ್ನು ತೆರೆದಲ್ಲಿ ಅವುಗಳ ಮೇಲೂ ಕಾನೂನಾತ್ಮಕವಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಇದಕ್ಕೆ ಹೋಂಸ್ಟೇ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ನೋಂದಾಯಿತ ಹೋಂಸ್ಟೇಗಳಲ್ಲದಿದ್ದರೆ, ಅವುಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

    ನೋಂದಣಿಗಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿವೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಹೋಂಸ್ಟೇಗಳ ನೋಂದಣಿ ಮಾಡಲು ತುಂಬಾ ವಿಳಂಬವಾಗುತ್ತಿದೆ. ಇದನ್ನು ಸರಿಮಾಡಲು, ಕಂದಾಯ ಇಲಾಖೆ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಆದರೆ ಕಂದಾಯ ಇಲಾಖೆ ಮತ್ತು ಪಿಡಿಓಗಳಿಗೆ ಹೋಂಸ್ಟೇಗಳ ನಿಯಮಗಳ ಬಗ್ಗೆ ತಿಳುವಳಿಕೆ ಇಲ್ಲ. ಹೀಗಾಗಿ ನೋಂದಣಿಯಲ್ಲಿ ಗೊಂದಲವಾಗುತ್ತಿದ್ದು, ಹೋಂಸ್ಟೇ ಮಾಲೀಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ಹೋಂಸ್ಟೇ ಮಾಲೀಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

  • ಹಾಸನದ ಬಳಿಕ ಕಾಫಿನಾಡಿನ ಹೋಂ ಸ್ಟೇ, ರೆಸಾರ್ಟ್ ಬಂದ್

    ಹಾಸನದ ಬಳಿಕ ಕಾಫಿನಾಡಿನ ಹೋಂ ಸ್ಟೇ, ರೆಸಾರ್ಟ್ ಬಂದ್

    ಚಿಕ್ಕಮಗಳೂರು: ಹಾಸನ, ಕೊಡಗು ಬಳಿಕ ಚಿಕ್ಕಮಗಳೂರಿನ ಹೋಂ ಸ್ಟೇ ಮತ್ತು ರೆಸಾರ್ಟ್ ಗಳು ಬಂದ್ ಮಾಡಲಾಗಿದೆ

    ಕಾಫಿನಾಡಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚುತ್ತಲೇ ಇದೆ. ಜನಸಾಮಾನ್ಯರು ತೀವ್ರ ಆತಂಕಕ್ಕೀಡಾಗಿ ಕೊರೊನಾ ಭಯದಲ್ಲೇ ಬದುಕುತ್ತಿದ್ದಾರೆ. ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಕಾಫಿನಾಡಲ್ಲಿ ಒಂದೇ ಒಂದು ಪ್ರಕರಣ ಇರಲಿಲ್ಲ. ಆದರೆ ಲಾಕ್‍ಡೌನ್ ಸಡಿಲಗೊಂಡ ಮೇಲೆ ಕಾಫಿ ನಾಡಿನಲ್ಲಿ ಒಂದೇ ತಿಂಗಳಿಗೆ ಸೋಂಕಿತರ ಸಂಖ್ಯೆ 81ಕ್ಕೇ ಏರಿದೆ.

    ಕೊರೊನಾ ನಡುವೆಯೂ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುತ್ತಿರೋ ಪ್ರವಾಸಿಗರನ್ನ ಕಂಡು ಸ್ಥಳೀಯರು ಆತಂಕಕ್ಕೀಡಾಗಿದ್ದರು. ಸರ್ಕಾರ ಪ್ರವಾಸಿಗರನ್ನ ನಿರ್ಬಂಧಗೊಳಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದರು. ಈ ಹಿನ್ನೆಲೆ ನಿನ್ನೆ ಜಿಲ್ಲೆಯ ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರ ಸಂಘ ಸಭೆ ಸೇರಿ ಜುಲೈ 31ರವರಗೆ ಹೋಂಸ್ಟೇ ಹಾಗು ರೆಸಾರ್ಟ್‍ಗಳನ್ನ ಬಂದ್ ಮಾಡುವಂತೆ ನಿರ್ಧರಿಸಿದ್ದಾರೆ. ಜಿಲ್ಲೆಯಲ್ಲಿ ಪ್ರತಿದಿನ ಐದು-ಹತ್ತು ಕೇಸ್‍ಗಳು ಬರುತ್ತಿದ್ದು ಜನ ಕಂಗಾಲಾಗಿದ್ದರು.

    ಜಿಲ್ಲೆಯಲ್ಲಿ ಇತ್ತೀಚೆಗೆ ಬಂದ ಬಹುತೇಕ ಪ್ರಕರಣಗಳಿಗೆ ಬೆಂಗಳೂರಿನ ನಂಟಿದೆ. ಬೆಂಗಳೂರಿಗೆ ಹೋಗಿ ಬರುತ್ತಿರೋ ಬಹುತೇಕರಲ್ಲಿ ಸೋಂಕು ಪತ್ತೆಯಾಗಿದೆ. ಇದು ಜಿಲ್ಲೆಯ ಜನರನ್ನ ಮತ್ತಷ್ಟು ಕಂಗಾಲಾಗಿಸಿತ್ತು. ಈ ಹಿನ್ನೆಲೆ ಸ್ಥಳೀಯ ಯುವಕರು ಪ್ರವಾಸಿಗರನ್ನು ಭೇಟಿ ನೀಡಿ ಕೊರೊನಾ ಕಡಿಮೆಯಾಗೋವರೆಗೂ ಬರಬೇಡಿ ಎಂದು ಮನವಿ ಮಾಡಿದ್ದರು. ತಾಲೂಕು ಹಾಗೂ ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದರು. ಗ್ರಾಮೀಣ ಭಾಗದ ಜನ ಗ್ರಾಮ ಪಂಚಾಯಿತಿಗಳಿಗೆ ಲಿಖಿತ ದೂರು ನೀಡಿದ್ದರು.

    ಈ ಹಿನ್ನೆಲೆ ಜನರ ಭಯ ಅರಿತ ಮಾಲೀಕರು ಜುಲೈ ತಿಂಗಳಲ್ಲಿ ತಮ್ಮ ಹೋಂ ಸ್ಟೇ ಹಾಗೂ ರೆಸಾರ್ಟ್‍ಗಳನ್ನ ಬಂದ್ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ಜಿಲ್ಲೆಗೆ ಬರೋ ಪ್ರವಾಸಿಗರ ಸಂಖ್ಯೆ ಕಡಿಮೆಯಾಗೋದ್ರ ಜೊತೆ ಜನಸಾಮಾನ್ಯರ ಆತಂಕವೂ ದೂರಾಗುತ್ತೆ ಅನ್ನೋದು ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ನಂಬಿಕೆಯಾಗಿದೆ.

  • ಜುಲೈ 4ರಿಂದ ಹಾಸನದ ಹೋಂಸ್ಟೇ, ರೆಸಾರ್ಟ್ ಬಂದ್

    ಜುಲೈ 4ರಿಂದ ಹಾಸನದ ಹೋಂಸ್ಟೇ, ರೆಸಾರ್ಟ್ ಬಂದ್

    -ಜಿಲ್ಲಾಧಿಕಾರಿಗಳ ಆದೇಶ

    ಹಾಸನ: ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹಾಸನ ಜಿಲ್ಲೆಯ, ಸಕಲೇಶಪುರ, ಆಲೂರು, ಬೇಲೂರು ತಾಲೂಕಿನ ಹೋಂ ಸ್ಟೇ ಮತ್ತು ರೆಸಾರ್ಟ್‍ಗಳನ್ನು ತೆರೆಯದಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ.

    ರಾಜ್ಯದ ವಿವಿಧ ಕಡೆಯಿಂದ ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗೆ ಪ್ರವಾಸಿಗರು ಬರುತ್ತಿದ್ದಾರೆ. ಅವರಲ್ಲಿ ಕೆಲವರು ಕುಡಿದು ನಡು ರಸ್ತೆಯಲ್ಲೇ ಕುಣಿಯುತ್ತಾರೆ. ಕೇಳಲು ಹೋದರೆ ಗಲಾಟೆ ಮಾಡುತ್ತಾರೆ. ಅವರಲ್ಲಿ ಯಾರಿಗಾದರೂ ಕೊರೊನಾ ಬಂದಿದ್ದರೆ ಅದು ಸ್ಥಳೀಯರಿಗೆ ಹರಡೋ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಕೂಡಲೇ ರೆಸಾರ್ಟ್ ಮತ್ತು ಹೋಂ ಸ್ಟೇಗಳನ್ನು ಬಂದ್ ಮಾಡಿಸಿ ಎಂದು ಸಕಲೇಶಪುರ ತಾಲೂಕಿನ ವಿವಿಧ ಗ್ರಾಮದ ಜನರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

    In this photo illustration a coronavirus (COVID-19) blood sample is displayed

    ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಆರ್.ಗಿರೀಶ್, ಇದೇ ಜುಲೈ ನಾಲ್ಕರಿಂದ ಮುಂದಿನ ಆದೇಶದವರೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಸಕಲೇಶಪುರ, ಆಲೂರು, ಬೇಲೂರು ತಾಲೂಕಿನ ಎಲ್ಲಾ ಹೋಂ ಸ್ಟೇ, ರೆಸಾರ್ಟ್ ಮುಚ್ಚಲು ಆದೇಶಿಸಿದ್ದಾರೆ.

  • 21 ದಿನ ಕೊಡಗಿನಲ್ಲಿ ಹೋಂ ಸ್ಟೇ, ರೆಸಾರ್ಟ್ ಬಂದ್

    21 ದಿನ ಕೊಡಗಿನಲ್ಲಿ ಹೋಂ ಸ್ಟೇ, ರೆಸಾರ್ಟ್ ಬಂದ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹೋಂ ಸ್ಟೇ, ರೆಸಾರ್ಟ್ ಮತ್ತು ಹೊಟೇಲ್ ಗಳನ್ನು ಇಂದಿನಿಂದ 21 ದಿನಗಳ ಕಾಲ ಬಂದ್ ಆಗಲಿವೆ. ಕೊರೊನಾ ತಡೆಗಾಗಿ ಬಂದ್ ಮಾಡಲು ಹೋಂ ಸ್ಟೇ, ರೆಸಾರ್ಟ್ ಮತ್ತು ಹೊಟೇಲ್ ಮಾಲೀಕರ ಸಂಘವು ನಿರ್ಧರಿಸಿದೆ.

    ಎರಡೂವರೆ ತಿಂಗಳ ಕಾಲ ಬಂದ್ ಆಗಿದ್ದ, ಹೋಂ ಸ್ಟೇ, ರೆಸಾರ್ಟ್ ಮತ್ತು ಹೊಟೇಲ್ ಗಳು ಇತ್ತೀಚೆಗಷ್ಟೇ ಓಪನ್ ಆಗಿದ್ದವು. ಈ ನಡುವೆ ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ಹೋಂ ಸ್ಟೇ ನಡೆಸುತ್ತಿದ್ದ 70 ವರ್ಷದ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಆಗಿದೆ. ಮಹಿಳೆಗೆ ಯಾವುದೇ ಟ್ರಾವಲ್ ಹಿಸ್ಟ್ರಿ ಇಲ್ಲ. ಆದರೂ ಕೊರೊನಾ ಪಾಸಿಟಿವ್ ಬಂದಿರುವುದು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಹೀಗಾಗಿ ಜನರು ಮತ್ತು ಹೋಂ ಸ್ಟೇ ರೆಸಾರ್ಟ್ ಹಾಗೂ ಹೊಟೇಲ್ ಗಳಿಗೆ ಬರುವ ಅತಿಥಿಗಳ ಹಿತದೃಷ್ಟಿಯಿಂದಲೂ ಬಂದ್ ಮಾಡಲಾಗುತ್ತಿದೆ.

     

    ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು, ಹೊಟೇಲ್ ರೆಸಾರ್ಟ್ ಮತ್ತು ಹೋಂಸ್ಟೇ ಗಳನ್ನು ಜಿಲ್ಲೆಯಲ್ಲಿ ತೆರೆಯುವುದರಿಂದ ಜನತೆಯ ಆರೋಗ್ಯಕ್ಕೆ ಸಮಸ್ಯೆ ಆಗುವುದಾದರೆ ಸಂಘವು ನಿರ್ಧರಿಸಿರುವ ತೀರ್ಮಾನವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಅಲ್ಲದೆ ಸಂಘವೇ ನಿರ್ಧರಿಸಿರುವುದರಿಂದ ಬಂದ್ ಆಗಲಿವೆ ಎಂದಿದ್ದಾರೆ. ಆದರೆ ವಿವಿಧ ಪ್ರಮುಖವಾದ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರಿಗೆ ಊಟದ ವ್ಯವಸ್ಥೆಯ ಸಮಸ್ಯೆ ಆಗಬಾರದೆಂಬ ದೃಷ್ಟಿಯಿಂದ ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸಿಕೊಂಡು ರೆಸ್ಟೋರೆಂಟ್ ಮಾತ್ರ ತೆರೆಯಲಿದ್ದೇವೆ ಎಂದು ಹೊಟೇಲ್ ಮಾಲೀಕರ ಸಂಘ ತಿಳಿಸಿದೆ.

  • ಲಾಕ್‍ಡೌನ್ ಉಲ್ಲಂಘಿಸಿದ ಹೋಂ ಸ್ಟೇಗೆ ಬೀಗ ಹಾಕಿದ ಪಂಚಾಯತಿ ಪಿಡಿಒ

    ಲಾಕ್‍ಡೌನ್ ಉಲ್ಲಂಘಿಸಿದ ಹೋಂ ಸ್ಟೇಗೆ ಬೀಗ ಹಾಕಿದ ಪಂಚಾಯತಿ ಪಿಡಿಒ

    – ಡಿಜಿ, ಐಜಿ ಗೊತ್ತು ಎಂದು ಫೋನ್‍ನಲ್ಲೇ ದರ್ಪ ಮೇರೆದ ಮಾಲೀಕ!

    ಮಡಿಕೇರಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶಕ್ಕೆ ನಷ್ಟವಾದರೂ ಸರ್ಕಾರ ದೇಶವನ್ನೇ ಲಾಕ್‍ಡೌನ್ ಮಾಡಿದೆ. ಆದರೆ ದೊಡ್ಡವರ ಮಕ್ಕಳು ಮಾತ್ರ ಲಾಕ್‍ಡೌನ್ ಕಾನೂನನ್ನೇ ಉಲ್ಲಂಘಿಸಿ ತಮ್ಮಿಚ್ಚೆಯಂತೆ ಓಡಾಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಇದಕ್ಕೆ ಕೊಡಗು ಜಿಲ್ಲೆಯಲ್ಲಿ ನಡೆದಿರುವ ಒಂದು ಘಟನೆ ಸಾಕ್ಷಿಯಾಗಿದೆ.

    ನಿವೃತ್ತ ಪೊಲೀಸ್ ಅಧಿಕಾರಿ ಎನ್ನಲಾಗಿರುವ ನವೀನ್ ಚೆಲ್ಲಮ್ ಎಂಬುವವರ ಮಗ ರೋಷನ್ ಬೆಂಗಳೂರಿನ ತನ್ನ ಇಬ್ಬರು ಸ್ನೇಹಿತರಾದ ಬೆಂಗಳೂರಿನ ಗೌಡನಪಾಳ್ಯದ ಸುಜನ್ ಮತ್ತು ಜಯನಗರದ ರಘುರಾಮ್ ಜೊತೆಗೆ ಕೊಡಗಿನಲ್ಲಿರುವ ತಮ್ಮದೇ ರೆಸಾರ್ಟಿಗೆ ಬಂದು ಎಂಜಾಯ್ ಮಾಡಲು ಮುಂದಾಗಿದ್ದು ಬಯಲಾಗಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಂಗದೂರಿನಲ್ಲಿರುವ ವುಡ್ ಪೇಕರ್ ಎಂಬ ಹೋಂ ಸ್ಟೇಂಗೆ ಬುಧವಾರ ಸಂಜೆ ಬಂದಿದ್ದಾರೆ. ಬಳಿಕ ಅಂದು ರಾತ್ರಿಯೇ ಡಿಜೆ ಸೌಂಡ್ ಹಾಕಿ ಎಂಜಾಯ್ ಮಾಡಿರೋದು ಊರಿನವರಿಗೆ ಗೊತ್ತಾಗಿದೆ.

    ಇದರಿಂದ ಎಚ್ಚೆತ್ತುಕೊಂಡ ಊರಿನವರು ನವೀನ್ ಚೆಲ್ಲಮ್ ಅವರಿಗೆ ಕರೆ ಮಾಡಿ ಕೇಳಿದ್ದಾರೆ. ಆದರೆ ನವೀನ್ ಚೆಲ್ಲಮ್ ನನಗೆ ಐಜಿ ಗೊತ್ತು, ಸಿಎಂ ಗೊತ್ತು. ನನ್ನ ತಂಟೆಗೆ ಯಾರೇ ಬಂದರೂ ಅವರಿಗೆ ಬೂಟ್ ಕಾಲಿನಲ್ಲಿ ಒದ್ದು ಕೇಸ್ ಹಾಕಿ ಬಿಡ್ತೇನೆ ಎಂದು ಧಮ್ಕಿ ಹಾಕಿದ್ದಾರೆ. ನನ್ನ ಮಗ ಅಷ್ಟೇ ಅಲ್ಲ ಮುಂದಿನ ವಾರದಲ್ಲಿ ಐಜಿ ಜೊತೆಗೆ ಇನ್ನೂ ಮೂರು ಜನರನ್ನು ಅಲ್ಲಿಗೆ ಕರೆದುಕೊಂಡು ಬರುತ್ತೇನೆ. ಆವಾಗ ಅದ್ಯಾವನು ಏನ್ ಮಾಡ್ತಾನೋ ಮಾಡ್ಲಿ ಎಂದು ಊರಿನವರಿಗೆ ಧಮ್ಕಿ ಹಾಕಿದ್ದಾರೆ. ಇದೆಲ್ಲವೂ ಫೋನ್‍ನಲ್ಲಿ ರೆಕಾರ್ಡ್ ಆಗಿದೆ.

    ವಿಷಯ ತಿಳಿದು ಹರದೂರು ಗ್ರಾಮ ಪಂಚಾಯಿತಿ ಪಿಡಿಒ ಸೇರಿದಂತೆ ಟಾಸ್ಕ್ ಪೋರ್ಸ್ ಟೀಂ ಇಂದು ಹೋಂ ಸ್ಪೇಗೆ ಬೀಗ ಜಡಿದು ಸೀಲ್ ಮಾಡಿದ್ದಾರೆ. ಬುಧವಾರ ಸಂಜೆ ಬಂದು ಹೋಂ ಸ್ಟೇನಲ್ಲಿ ತಂಗಿದ್ದು ನಿನ್ನೆಯೇ ಅಧಿಕಾರಿಗಳು ಹೋಂ ಸ್ಟೇ ಬಳಿಗೆ ಹೋಗಿ ವಿಚಾರಣೆ ಮಾಡಿದ್ದಾರೆ. ಇವರನ್ನು ಕ್ವಾರಂಟೈನ್ ಮಾಡದೆ ಬೆಂಗಳೂರಿಗೆ ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ಸದ್ಯ ಅಧಿಕಾರಿಗಳ ನಡೆಯ ಮೇಲೆ ಸಾಕಷ್ಟು ಅನುಮಾನ ಮೂಡಿಸಿದೆ.

  • ಹೋಂ ಸ್ಟೇಯಲ್ಲಿ ವಾಸ್ತವ್ಯ ಮಾಡಿದ್ದ 6 ಮಂದಿ ವಿರುದ್ಧ ಎಫ್‍ಐಆರ್

    ಹೋಂ ಸ್ಟೇಯಲ್ಲಿ ವಾಸ್ತವ್ಯ ಮಾಡಿದ್ದ 6 ಮಂದಿ ವಿರುದ್ಧ ಎಫ್‍ಐಆರ್

    – ವೈದ್ಯಕೀಯ ಪಾಸ್ ಪಡೆದು ಬೆಂಗಳೂರಿನಿಂದ ಆಗಮನ

    ಮಡಿಕೇರಿ: ಕೊರೊನಾ ವೈರಸ್ ಹಿನ್ನೆಲೆ ರಾಜ್ಯಾದ್ಯಂತ ಲಾಕ್‍ಡೌನ್ ಇದೆ. ಜನ ಸಾಮಾನ್ಯರಿಗೆ ವೈದ್ಯಕೀಯ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಪಾಸ್ ಪಡೆದು ಕೊಡಗು ಜಿಲ್ಲೆಗೆ ಆಗಮಿಸಿ ಹೋಮ್ ಸ್ಟೇವೊಂದರಲ್ಲಿ ವಾಸ್ತವ್ಯ ಹೂಡಿದ್ದವರ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಜಿಲ್ಲಾ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

    ಹೊದ್ದೂರು ಗ್ರಾಮ ಪಂಚಾಯಿತಿಗೆ ಒಳಪಡುವ ಚಿನ್ನಪ್ಪ ಮಾಲೀಕತ್ವದ ರಿವರ್ ವ್ಯಾಲಿ ಬಂಗಲೋ ಹೋಮ್ ಸ್ಟೇಗೆ 15 ದಿನಗಳ ಹಿಂದೆ ತುಮಕೂರು ಮೂಲದ ಇಬ್ಬರು ವ್ಯಕ್ತಿಗಳು ಬೆಂಗಳೂರಿನಿಂದ ಬಂದು ವಾಸ್ತವ್ಯ ಹೂಡಿರುವುದು ಕಂಡುಬಂದಿದೆ. ಅವರನ್ನು ಹೋಮ್ ಸ್ಟೇನಲ್ಲಿಯೇ ಕ್ವಾರಂಟೈನ್ ಮಾಡಿ ಹೋಮ್ ಸ್ಟೇ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿತ್ತು.

    17ರಂದು ಬೆಂಗಳೂರು ಮೂಲದ ಒಬ್ಬರು ಮಹಿಳೆಯರು ಬೆಂಗಳೂರು ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ವೈದ್ಯಕೀಯ ಪಾಸ್ ಪಡೆದಿದ್ದಾರೆ. ನಂತರ ತುಮಕೂರು ಮೂಲದ ವ್ಯಕ್ತಿ ಹಾಗೂ ಮಹಿಳೆಯೊಂದಿಗೆ ರಿವರ್ ವ್ಯಾಲಿ ಬಂಗಲೋ ಹೋಮ್ ಸ್ಟೇಗೆ ಬಂದು ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ ಅನಧಿಕೃತವಾಗಿ ವಾಸ್ತವ್ಯ ಹೂಡಿದ್ದವರ ಹಾಗೂ ಮಾಲೀಕರನ್ನು ವಶಕ್ಕೆ ಪಡೆದು, ಜಿಲ್ಲಾ ಕ್ವಾರಂಟೈನ್‍ಗೆ ಸೇರಿಸಲಾಗಿದೆ.

    ಶನಿವಾರ ರಾತ್ರಿಯೇ ಹೋಮ್ ಸ್ಟೇಗೆ ಸೀಲ್ ಮಾಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದ ಇತರೆಡೆಗಳಿಂದ ಬಂದು ಕೊಡಗಿನ ಹೋಮ್ ಸ್ಟೇ, ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡುವ ಬಗ್ಗೆ ಕೆಲವು ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವ ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಚಟುವಟಿಕೆಗಳ ಬಗ್ಗೆ ಕೊಡಗು ಪೊಲೀಸ್ ತೀವ್ರ ನಿಗಾ ವಹಿಸಿದೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪನ್ನೇಕರ್ ತಿಳಿಸಿದ್ದಾರೆ.

  • ಸರ್ಕಾರಿ ಆದೇಶದ ಮೊದಲೇ ಕೊಡಗಿನ ಹೋಂ ಸ್ಟೇ ಬಂದ್

    ಸರ್ಕಾರಿ ಆದೇಶದ ಮೊದಲೇ ಕೊಡಗಿನ ಹೋಂ ಸ್ಟೇ ಬಂದ್

    ಮಡಿಕೇರಿ: ರಾಜ್ಯ ಸರ್ಕಾರ ಆದೇಶ ಹೊರಡಿಸುವ ಮೊದಲೇ ಕೊಡಗಿನ ಹೋಂ ಸ್ಟೇಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದಾರೆ.

    ಹೌದು. ದಕ್ಷಿಣ ಕಾಶ್ಮೀರ, ಮಂಜಿನ ನಗರಿ ಮಡಿಕೇರಿಗೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಇಲ್ಲಿನ ಪ್ರವಾಸಿತಾಣಗಳನ್ನು ನೋಡಲು ಎಂಜಾಯ್ ಮಾಡಲು ದೇಶ ವಿದೇಶಗಳಿಂದ ಪ್ರವಾಸಿಗರು ಕೊಡಗಿನ ಸೌಂದರ್ಯ ಸವಿಯಲು ಬರುತ್ತಿದ್ದರು. ಇದೀಗ ಕೊರೊನಾ ವೈರಸ್ ಭೀತಿ ಪ್ರವಾಸಿಗರಿಗೂ ಕಾಡುತ್ತಿದ್ದು, ಮನೆಯಿಂದ ಹೋರಗೆ ಬರಲು ಹಿಂದೆಟ್ಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರವಾಸಿಗರಿಲ್ಲದೇ ಕೊಡಗಿನ ಪ್ರವಾಸಿತಾಣಗಳು ಬಿಕೋ ಎನ್ನುತ್ತಿದೆ.

    ಈ ಹಿನ್ನೆಲೆಯಲ್ಲಿ ಹೋಂ ಸ್ಟೇ ಮಾಲೀಕರು ಸ್ವಯಂ ಪ್ರೇರಿತರಾಗಿ ಕಳೆದ 1 ವಾದದಿಂದ ಬಂದ್ ಮಾಡಿದ್ದಾರೆ. ಹೋಂ ಸ್ಟೇಗೆ ಈಗಾಗಲೇ ಬುಕ್ ಮಾಡುವವರು ಸಂಖ್ಯೆ ವಿರಳವಾಗಿದ್ದು, ಕೆಲವೇ ಕೆಲವು ಮಂದಿ ಮಾತ್ರ ಬುಕ್ಕಿಂಗ್ ಮಾಡುತ್ತಿದ್ದಾರೆ. ಆದರೆ ಈ ಬುಕ್ಕಿಂಗ್‍ಗಳನ್ನೂ ಹೋಂ ಸ್ಟೇ ಮಾಲೀಕರು ನಿರಾಕರಣೆ ಮಾಡುತ್ತಿದ್ದಾರೆ. ತಮ್ಮಗೆ ನಷ್ಟ ಆದ್ರೂ ಪರವಾಗಿಲ್ಲ ನಾಡಿನ ಜನರ ಆರೋಗ್ಯ ಮುಖ್ಯ, ಹೀಗಾಗಿ ನಾವೇ ಸ್ವಯಂ ಪ್ರೇರಿತವಾಗಿ ಬಂದ್ ಮಾಡುತ್ತಿದ್ದೇವೆ ಎಂದು ಮಾಲೀಕರು ತಿಳಿಸಿದ್ದಾರೆ.

    ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಿಂದ ಆದ ಪ್ರಾಕೃತಿಕ ವಿಕೋಪದಿಂದ ಸಾಕಷ್ಟು ನಷ್ಟ ಅನುಭವಿಸಿದ್ದೆವು. ಆದರೆ ಈ ಕೊರೊನಾ ವೈರಸ್ ಭೀತಿ ರಾಜ್ಯವನ್ನು ಕಾಡುತ್ತಿದೆ. ನಮಗೆ ನಷ್ಟ ಆದ್ರೂ ಪರವಾಗಿಲ್ಲ ಎಂದು ಕೊಡಗಿನಲ್ಲಿ ಸುಮಾರು 700ಕ್ಕೂ ಅಧಿಕ ಹೋಂ ಸ್ಟೇಗಳನ್ನು ಮಾಲೀಕರು ಬಂದ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಂದಿನಿಂದ ಗ್ರಾಮಪಂಚಾಯ್ತಿ ಪಿಡಿಓಗಳು ಹೋಂ ಸ್ಟೇ ಮಾಲೀಕರಿಗೆ ಬಂದ್ ಮಾಡಲು ನೋಟಿಸ್ ಕೂಡ ನೀಡಲಾಗುತ್ತಿದೆ. ಇದರಿಂದ ಹೋಂ ಸ್ಟೇ ಉದ್ಯಮ ಹಾಗೂ ಸಿಬ್ಬಂದಿಗಳ ಕುಟುಂಬಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಎನ್ನಲಾಗಿದೆ.

  • ಕೊರೊನಾಗೆ ತತ್ತರಿಸಿದ ಕೊಡಗಿನ ಹೋಂ ಸ್ಟೇ, ರೆಸಾರ್ಟ್ ಉದ್ಯಮ

    ಕೊರೊನಾಗೆ ತತ್ತರಿಸಿದ ಕೊಡಗಿನ ಹೋಂ ಸ್ಟೇ, ರೆಸಾರ್ಟ್ ಉದ್ಯಮ

    ಮಡಿಕೇರಿ: ವಿಶ್ವದೆಲ್ಲೆಡೆ ಭಯ ಹುಟ್ಟಿಸಿರುವ ಕೊರೊನಾ ವೈರಸ್ ರಾಜ್ಯದ ಪ್ರವಾಸೋದ್ಯಮದ ಮೇಲೂ ದುಷ್ಪರಿಣಾಮ ಬೀರಿದೆ. ಅದರಲ್ಲೂ ಪ್ರವಾಸೋದ್ಯಮವನ್ನೇ ನಂಬಿರುವ ಕೊಡಗಿನ ವ್ಯಾಪಾರೋದ್ಯಮಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

    ಕರ್ನಾಟಕದಲ್ಲೂ ಕೊರೊನಾ ವೈರಸ್ ಹರಡಿರುವ ಪ್ರಕರಣಗಳು ಹೊರಬರುತ್ತಿದ್ದಂತೆ ಕೊಡಗಿನ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದೆ. ಜಿಲ್ಲೆಯಲ್ಲಿ ಇರುವ 4 ಸಾವಿರಕ್ಕೂ ಹೆಚ್ಚು ಹೋಂ ಸ್ಟೇ ಮತ್ತು ರೆಸಾರ್ಟ್‍ಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ವೈರಸ್ ರೋಗ ಹರಡುವುದಕ್ಕೂ ಮುನ್ನವೇ ಪ್ರವಾಸಿಗರು ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಬುಕ್ಕಿಂಗ್ ಮಾಡಿಕೊಂಡಿದ್ದನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಪರಿಣಾಮ ಇದನ್ನೇ ನಂಬಿಕೊಂಡಿದ್ದ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರು ಸಿಬ್ಬಂದಿಗೆ ಸಂಬಳ ನೀಡುವುದು ಹೇಗೆ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.

    ಮತ್ತೊಂದೆಡೆ ಜಿಲ್ಲಾಧಿಕಾರಿ ಕೂಡ ಹೋಂ ಸ್ಟೇ, ರೆಸಾರ್ಟ್ ಮತ್ತು ಪ್ರವಾಸಿ ತಾಣಗಳ ಮೇಲೆ ತೀವ್ರ ನಿಗಾ ಇಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೊರ ದೇಶಗಳಿಂದ ಯಾರಾದರೂ ಪ್ರವಾಸಿಗರು ಬಂದರೆ ಅವರ ಬಗ್ಗೆಯೂ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಇದೆಲ್ಲವೂ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರಿದೆ.