Tag: ಹೋಂ ಕ್ವಾರಂಟೈನ್

  • ಹೋಂ ಕ್ವಾರಂಟೈನ್ ಉಲ್ಲಂಘನೆ – ಆರ್‌ಟಿಪಿಎಸ್, ವೈಟಿಪಿಎಸ್ ಅಧಿಕಾರಿ ದಂಪತಿ ಮೇಲೆ ಕೇಸ್

    ಹೋಂ ಕ್ವಾರಂಟೈನ್ ಉಲ್ಲಂಘನೆ – ಆರ್‌ಟಿಪಿಎಸ್, ವೈಟಿಪಿಎಸ್ ಅಧಿಕಾರಿ ದಂಪತಿ ಮೇಲೆ ಕೇಸ್

    ರಾಯಚೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನ ತಡೆಯಲು ವಿದೇಶದಿಂದ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಹೋಂ ಕ್ವಾರಂಟೈನ್ ಇಲ್ಲವೆ ಆಸ್ಪತ್ರೆ ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗುತ್ತಿದೆ. ಆದರೆ ಜಿಲ್ಲೆಯ ಶಕ್ತಿನಗರದ ಆರ್‌ಟಿಪಿಎಸ್ ಕಾಲೋನಿಯಲ್ಲಿ ಹೊಂ ಕ್ವಾರಂಟೈನ್‍ನಲ್ಲಿದ್ದ ಆರ್‌ಟಿಪಿಎಸ್, ವೈಟಿಪಿಎಸ್ ಅಧಿಕಾರಿ ದಂಪತಿ ಹಾಗೂ ಅವರ ಮಗ ಮತ್ತು ಮಗನ ಸ್ನೇಹಿತೆ ಸ್ವತಃ ವೈದ್ಯೆಯಾಗಿದ್ದರೂ ಹೋಂ ಕ್ವಾರಂಟೈನ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

    ಯರಮರಸ್‍ನ ವೈಟಿಪಿಎಸ್ ಸೂಪರಿಡೆಂಟ್ ಇಂಜನೀಯರ್ ಎಸ್.ಆರ್ ಕಬಾಡೆ ಹಾಗೂ ಅವರ ಪತ್ನಿ ಅನುಪಮ ಆರ್‌ಟಿಪಿಎಸ್ ನಲ್ಲಿ ಅಕೌಂಟ್ ಆಫೀಸರ್ ಆಗಿದ್ದು, ಹೋಂ ಕ್ವಾರಂಟೈನ್ ಅವಧಿಯಲ್ಲಿ ಕಚೇರಿಗೆ ತೆರಳಿ ಕೆಲಸ ಮಾಡಿದ್ದಾರೆ. ಮಾರ್ಕೆಟ್ ಸೇರಿ ಜನಸಂದಣಿ ಸ್ಥಳಗಳಲ್ಲಿ ಓಡಾಡಿದ್ದಾರೆ. ಈ ದಂಪತಿ ಮಗನ ಸ್ನೇಹಿತೆ ಜರ್ಮನಿಯಿಂದ ಶಕ್ತಿನಗರಕ್ಕೆ ಬಂದಿದ್ದಳು. ಈ ವಿಚಾರವನ್ನ ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ತಿಳಿಸಿರಲಿಲ್ಲ. ಬಳಿಕ ನಾಲ್ವರನ್ನು ಮಾರ್ಚ 14ರಿಂದ ಮಾರ್ಚ 29ರವರೆಗೆ ಹೋಂ ಕ್ವಾರೆಂಟೈನ್ ಮಾಡಲಾಗಿತ್ತು. ಈ ವೇಳೆ ಇವರು ಮನೆಯಲ್ಲಿರದೆ ಹೊರಗಡೆ ಓಡಾಡಿದ್ದಾರೆ.

    ಜರ್ಮನಿಯಿಂದ ಬಂದಿದ್ದ ದಂಪತಿಯ ಮಗನ ಸ್ನೇಹಿತೆಯ ರಕ್ತ ಹಾಗೂ ಗಂಟಲು ಮಾದರಿಯನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ನೆಗೆಟಿವ್ ಬಂದಿದೆ, ಯಾರಲ್ಲೂ ರೋಗ ಲಕ್ಷಣಗಳಿಲ್ಲ. ಆದರೆ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿದ್ದರಿಂದ ದೇವಸುಗೂರು ಉಪತಹಶೀಲ್ದಾರ್ ಶಕ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ವೈಟಿಪಿಎಸ್ ಹಿರಿಯ ಅಧಿಕಾರಿ, ಪತ್ನಿ, ಮಗ ಹಾಗೂ ಮಗನ ಸ್ನೇಹಿತೆಯ ವಿರುದ್ಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗೌರಿಬಿದನೂರಿನಲ್ಲಿ 1 ಸಾವಿರ ಮಂದಿಗೆ ಹೋಂ ಕ್ವಾರಂಟೈನ್

    ಗೌರಿಬಿದನೂರಿನಲ್ಲಿ 1 ಸಾವಿರ ಮಂದಿಗೆ ಹೋಂ ಕ್ವಾರಂಟೈನ್

    – ಯಾರೂ ಗೌರಿಬಿದನೂರು ನಗರ ಪ್ರವೇಶಿಸುವಂತಿಲ್ಲ

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿನೂರಿನಲ್ಲಿ ಕೊರೊನಾ ಅಬ್ಬರ ಹಿನ್ನೆಲೆ, ತಾಲೂಕಿನಲ್ಲಿ ಹೊಸದಾಗಿ ಸರಿ ಸುಮಾರು 1000 ಮಂದಿಯನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿದೆ.

    ಸೋಂಕಿತರ ಮನೆಗಳಿರುವ ಹಿರೇಬಿದನೂರಿನ 132 ಮನೆಗಳಲ್ಲಿರುವ 872 ಮಂದಿಯನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ. ಮತ್ತೊಂದೆಡೆ ತಾಲೂಕಿನ ತೊಂಡೆಬಾವಿ ಗ್ರಾಮದಲ್ಲೂ ಸಹ 30 ಮನೆಗಳಲ್ಲಿರುವ ಸುಮಾರು 150ಕ್ಕೂ ಹೆಚ್ಚು ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಸೋಂಕಿತರ ಮನೆಗಳಿರುವ ಗ್ರಾಮದ ನಿವಾಸಿಗಳನ್ನು ಸಂಪೂರ್ಣವಾಗಿ ಹೋಂ ಕ್ವಾರಂಟೈನ್ ಗೆ ಗುರಿಪಡಿಸಲಾಗುತ್ತಿದೆ.

    ಈಗಾಗಲೇ ಗೌರಿಬಿದನೂರು ತಾಲೂಕು ಆರೋಗ್ಯಾಧಿಕಾರಿ ರತ್ನಮ್ಮ ನೇತೃತ್ವದಲ್ಲಿ ಮನೆ ಮನೆಗಳಿಗೆ ತೆರಳಿ ಪ್ರತಿಯೊಬ್ಬ ಸದಸ್ಯರಿಗೂ ಕ್ವಾರಂಟೈನ್ ಸ್ಟಾಂಪಿಂಗ್ ಮಾಡಲಾಗುತ್ತಿದೆ ಎಂದು ಪಬ್ಲಿಕ್ ಟಿವಿಗೆ ತಾಲೂಕು ಆರೋಗ್ಯಾಧಿಕಾರಿ ರತ್ಮಮ್ಮ ಮಾಹಿತಿ ನೀಡಿದರು. ಈ ಎಲ್ಲಾ ಮನೆಗಳಲ್ಲಿನ ಸದಸ್ಯರು ಯಾರೂ ಕೂಡ ಮನೆಗಳಿಂದ ಹೊರಬರುವಂತಿಲ್ಲ. ಇವರ ಮನೆಗಳಿಗೆ ಅಗತ್ಯ ಎಲ್ಲಾ ದಿನ ಬಳಕೆ ವಸ್ತುಗಳನ್ನು ದಾನಿಗಳಿಂದ ಪಡೆದು ಮನೆಗಳಿಗೆ ಕಳಿಸಿಕೊಡುವ ಕೆಲಸ ಮಾಡಲಾಗುತ್ತದೆ.

    ಈಗಾಗಲೇ ಅಗತ್ಯ ದಿನಸಿ ವಸ್ತುಗಳನ್ನ ಸಂಗ್ರಹಿಸಲಾಗಿದ್ದು, ತರಕಾರಿಗಳನ್ನು ಸಹ ಪ್ಯಾಕ್ ಮಾಡಿ ನಾಳೆ ಬೆಳಿಗ್ಗೆಯಿಂದಲೇ ಮನೆ ಮನೆಗಳಿಗೆ ವಿತರಿಸುವ ಕಾಯಕ ನಡೆಯಲಿದೆ. ಇವರ್ಯಾರು ಕೂಡ ಗೌರಿಬಿದನೂರು ನಗರಕ್ಕೂ ಕೂಡ ಪ್ರವೇಶ ಮಾಡುವಂತಿಲ್ಲ. ಇವರ ಗ್ರಾಮಗಳನ್ನೇ ಸಂಪೂರ್ಣ ಲಾಕ್ ಡೌನ್ ಮಾಡುವ ಮೂಲಕ ಕೊರೊನಾ ವೈರಸ್ ಹರಡದಂತೆ ತಡೆಯಲು ಹೊಸ ಪ್ಲಾನ್ ರೂಪಿಸಿದೆ.

    ಈ ಕೊರೊನಾ ವೈರಸ್ ಹರಡದಂತೆ ತಡೆಯುವ ಸಲುವಾಗಿ ಮೂಲತಃ ಗೌರಿಬಿದನೂರಿನವರಾದ ಹಿರಿಯ ಕೆಎಎಸ್ ಅಧಿಕಾರಿ ವರಪ್ರಸಾದರೆಡ್ಡಿಯನ್ನ ನೇಮಿಸಿದ್ದು, ಅವರ ಉಸ್ತುವಾರಿಯಲ್ಲಿ ಈ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಅಂದಹಾಗೆ ಗೌರಿಬಿದನೂರಿನಲ್ಲಿ 9 ಮಂದಿಗೆ ಸೋಂಕು ದೃಢವಾಗಿದ್ದು, ಓರ್ವ ವೃದ್ಧೆ ಈಗಾಗಲೇ ಸೋಂಕಿಗೆ ಬಲಿಯಾಗಿದ್ದಾರೆ.

  • ಹೋಂ ಕ್ವಾರಂಟೈನ್‍ನಲ್ಲಿದ್ದವರ ಮೇಲೆ ಜಿಪಿಎಸ್ ಕಣ್ಣು – ಬೆಳ್ತಂಗಡಿಯಲ್ಲಿ ದೇಶದಲ್ಲಿಯೇ ಮೊದಲ ಪ್ರಯತ್ನ

    ಹೋಂ ಕ್ವಾರಂಟೈನ್‍ನಲ್ಲಿದ್ದವರ ಮೇಲೆ ಜಿಪಿಎಸ್ ಕಣ್ಣು – ಬೆಳ್ತಂಗಡಿಯಲ್ಲಿ ದೇಶದಲ್ಲಿಯೇ ಮೊದಲ ಪ್ರಯತ್ನ

    ಬೆಂಗಳೂರು/ಮಂಗಳೂರು: ಹೋಂ ಕ್ವಾರಂಟೈನ್ ಆದವರು ಎಲ್ಲಿದ್ದಾರೆ? ಹೇಗಿದ್ದಾರೆ? ಎನ್ನುವ ಭಾವಚಿತ್ರ ಸಮೇತ ಲೈವ್ ಅಪ್ಡೇಟ್ ಕೊಡುವ ಮಾಹಿತಿ ಮೊದಲ ಬಾರಿಗೆ ಕಾರ್ಯರೂಪಕ್ಕೆ ಬರಲಿದೆ. ವಾರ್ ರೂಮ್‍ನಲ್ಲಿಯೇ ಕೂತು ಗೃಹಬಂಧನದಲ್ಲಿದ್ದವರ ಮೇಲೆ ಹದ್ದಿನಗಣ್ಣು ಇಡಲಾಗುತ್ತದೆ.

    ಕೊರೊನಾ ಸೋಂಕಿತರ ಜೊತೆ ಸಂಪರ್ಕ ಹೊಂದಿರುವವರ ಕೈಗೆ ಸ್ಟಾಂಪ್ ಹಾಕಿದ್ದರೂ ಸಾರ್ವಜನಿಕ ಸ್ಥಳದಲ್ಲಿ ಓಡಾಟ ಮಾಡಿ ಆತಂಕ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಅವರ ಮಾಹಿತಿಗೆ ಜಿಪಿಎಸ್ ಆಧಾರಿತ ಆ್ಯಪ್ ಬಳಕೆಗೆ ದಕ್ಷಿಣ ಕನ್ನಡದ ಬೆಳ್ತಂಗಡಿ ಸಜ್ಜಾಗಿದೆ.

    ಹೋಂ ಕ್ವಾರಂಟೈನ್ ಸ್ಟಾಂಪ್ ಹಾಕಿಸಿಕೊಂಡವರನ್ನು ಮನೆಯಲ್ಲೇ ಇರಿಸಿ ನಿಗಾ ವಹಿಸಲು ಕುಟುಂಬ, ಪೊಲೀಸರು, ಆಶಾ ಕಾರ್ಯಕರ್ತರು, ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆ ಐಸರ್ಚ್ ಎಂಬ ಸಂಸ್ಥೆಯ ನೆರವಿನಿಂದ ಹೊಸ ಆ್ಯಪ್ ಬಿಡುಗಡೆ ಮಾಡಲಾಗಿದೆ. COVID19 BLT DATABASE ಅನ್ನುವ ಈ ಆಪ್ ಬೆಳ್ತಂಗಡಿ ತಾಲೂಕು ಆಡಳಿತ, ತಹಶೀಲ್ದಾರರು, ಪೊಲೀಸ್ ಇಲಾಖೆ, ಆರೋಗ್ಯ, ಕಂದಾಯ, ನಾಗರೀಕ ಸರಬರಾಜು ಇಲಾಖೆ, ಶ್ರಮಿಕ ಬೆಳ್ತಂಗಡಿ ಶಾಸಕರ ಕಚೇರಿ ಹಾಗೂ ಐಸರ್ಚ್ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಜಿಪಿಎಸ್ ಆಧಾರಿತ ಆಪ್ ಬಳಸಿ ಸೋಂಕಿತರ ಮೇಲೆ ನಿಗಾ ಇಡುವ ಕಾರ್ಯಕ್ಕೆ ಮುಂದಾಗಿದೆ.

    ಈ ಪ್ರಯತ್ನ ದೇಶದಲ್ಲೇ ಮೊದಲನೆಯಾದಾಗಿದೆ. ಈಗಾಗಲೇ ಇದರ ಪೂರ್ವ ಸಿದ್ಧತೆ ಮುಗಿದಿದ್ದು, ಇಲಾಖೆಗಳ ಉಪಯೋಗಕ್ಕೆ ನೀಡಲಾಗುತ್ತದೆ. ತಾಲೂಕಿನ ತಣ್ಣೀರುಪಂಥ ಗ್ರಾಮದಲ್ಲಿ ಒಂದು ಕೋವಿಡ್-19 ಪ್ರಕರಣ ಬೆಳಕಿಗೆ ಬಂದ ಬಳಿಕ ಈ ತಂತ್ರಜ್ಞಾನ ಬಳಸಲು ಯೋಜನೆ ಮಾಡಲಾಯಿತು. ಹೋಮ್ ಕ್ವಾರಂಟೈನ್ ಆಗಿರುವವರ ಮೇಲೆ ಅಧಿಕಾರಿಗಳಿಗೆ ನಿಗಾ ಇರಿಸಲು ಈ ವ್ಯವಸ್ಥೆ ನೆರವಾಗಲಿದೆ.

    ಜಿಪಿಎಸ್ ಆಧಾರಿತ ಆಪ್ ಮೂಲಕ ವಾರ್ ರೂಮ್‍ನಲ್ಲಿ ಕೂತು ಹೋಮ್ ಕ್ವಾರಂಟೈನ್ ಆಗಿರುವವರು ಎಲ್ಲಿದ್ದಾರೆ? ಹೇಗಿದ್ದಾರೆ? ಅವರ ಭಾವಚಿತ್ರ ಸಹಿತ ಮಾಹಿತಿಯನ್ನು ಇದರಿಂದ ಪಡೆಯಬಹುದಾಗಿದೆ. ಈ ಆ್ಯಪ್ ಕೋವಿಡ್-19 ಶಂಕಿತರನ್ನು ಟ್ರಾಕ್ ಮಾಡುವ ಮುಖಾಂತರ ಸೋಂಕು ಇತರರಿಗೆ ಹರಡುವುದನ್ನು ತಡೆಗಟ್ಟಲು ಸಹಕರಿಸಲಿದೆ.

  • ಕ್ವಾರಂಟೈನ್‍ನಲ್ಲಿದ್ದು ಹುಚ್ಚನಾದ – ಮನೆಯಿಂದ ಬೆತ್ತಲಾಗಿ ಓಡಿ ವೃದ್ಧೆಯ ಕತ್ತು ಕಚ್ಚಿ ಕೊಂದ

    ಕ್ವಾರಂಟೈನ್‍ನಲ್ಲಿದ್ದು ಹುಚ್ಚನಾದ – ಮನೆಯಿಂದ ಬೆತ್ತಲಾಗಿ ಓಡಿ ವೃದ್ಧೆಯ ಕತ್ತು ಕಚ್ಚಿ ಕೊಂದ

    ಚೆನ್ನೈ: ವಿದೇಶದಿಂದ ಭಾರತಕ್ಕೆ ಬಂದು ಹೋಂ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿಯೋರ್ವ ಮನೆಯಲ್ಲಿಯಿದ್ದು ಹುಚ್ಚನಾಗಿ, ರಾತ್ರಿ ಮನೆಯಿಂದ ಬೆತ್ತಲಾಗಿ ಓಡಿ ಹೋಗಿ ವೃದ್ಧೆಯೊಬ್ಬರ ಕತ್ತು ಕಚ್ಚಿ ಕೊಲೆಮಾಡಿದ ಭಯಾನಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ತಮಿಳುನಾಡಿನ ಥೇನಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಥೇನಿ ನಿವಾಸಿ ನಾಟ್ಚಿಯಮ್ಮಾಲ್(90) ಮೃತ ದುರ್ಧೈವಿ. ಕೆಲವು ದಿನಗಳ ಹಿಂದೆ ಶ್ರೀಲಂಕಾದಿಂದ ಭಾರತಕ್ಕೆ ವಾಪಾಸ್ ಬಂದಿದ್ದ ವ್ಯಕ್ತಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಮನೆಯಲ್ಲೇ ಇದ್ದು ಇದ್ದು ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದನು. ಹುಚ್ಚನಂತೆ ವರ್ತಿಸುತ್ತಿದ್ದ ಆತ ಶುಕ್ರವಾರ ಮನೆಯಿಂದ ಬೆತ್ತಲಾಗಿ ಹೊರಗೆ ಓಡಿಹೋಗಿದ್ದನು.

    ಬೆತ್ತಲಾಗಿ ಮನೆಯಿಂದ ಹೊರಗೆ ಓಡಿಹೋಗಿದ್ದ ವ್ಯಕ್ತಿ ಮನೆಯ ಹೊರಗೆ ಕಟ್ಟೆ ಮೇಲೆ ಮಲಗಿದ್ದ ವೃದ್ಧೆಯ ಕತ್ತನ್ನು ಜೋರಾಗಿ ಕಚ್ಚಿದ್ದಾನೆ. ವ್ಯಕ್ತಿ ಹಲ್ಲೆ ಮಾಡಿದ ತಕ್ಷಣ ವೃದ್ಧೆ ಜೋರಾಗಿ ಕಿರುಚಿಕೊಂಡಿದ್ದು, ಅಕ್ಕಪಕ್ಕದ ಮನೆಯವರೆಲ್ಲಾ ಓಡಿಬಂದು ವೃದ್ಧೆಯನ್ನು ರಕ್ಷಿಸಿ, ತಕ್ಷಣ ಸ್ಥಳೀಯ ಆಸ್ಪತ್ರೆಗೆ ರವಾನಿಸಿದರು.

    ಕತ್ತಿಗೆ ಬಲವಾಗಿ ಪಟ್ಟಾಗಿದ್ದ ಪರಿಣಾಮ ರಕ್ತಸ್ರಾವವಾಗಿ ವೃದ್ಧೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಇತ್ತ ಹಲ್ಲೆ ಮಾಡಿದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಬಾಡಿಗೆ ಮನೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿರೋವರಿಗೆ ಖಾಲಿ ಮಾಡಿ ಅಂದ್ರೆ ಕೇಸ್: ಡಿಸಿ

    ಬಾಡಿಗೆ ಮನೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿರೋವರಿಗೆ ಖಾಲಿ ಮಾಡಿ ಅಂದ್ರೆ ಕೇಸ್: ಡಿಸಿ

    ಚಿಕ್ಕಬಳ್ಳಾಪುರ: ಹೋಂ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಯ ಕುಟುಂಬ ಒಂದು ವೇಳೆ ಬಾಡಿಗೆ ಮನೆಯಲ್ಲಿದ್ದು, ಮನೆಯ ಮಾಲೀಕರು ಅವರನ್ನು ಮನೆ ಖಾಲಿ ಮಾಡುವಂತೆ ಒತ್ತಡ ಹೇರಿ ಕಿರುಕುಳ ನೀಡುತ್ತಿದ್ದರೆ ಅಂತ ಮಾಲೀಕರ ವಿರುದ್ಧ ಕಠಿಣ ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಡಿಸಿ ಆರ್.ಲತಾ ಹೇಳಿದ್ದಾರೆ.

    ಬಾಡಿಗೆ ಮನೆಯಲ್ಲಿರುವ ಹೋಂ ಕ್ವಾರಂಟೈನ್‍ಗೆ ಒಳಗಾದವರಷ್ಟೇ ಅಲ್ಲದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಆಶಾ ಕಾರ್ಯಕರ್ತರು, ಶುಶ್ರೂಷಕಿಯರು ಹಾಗೂ ಕೋವಿಡ್-19ರ ನಿಯಂತ್ರಣದಲ್ಲಿ ಕಾರ್ಯನಿರತರೆಲ್ಲರಿಗೂ ಈ ಕಾನೂನು ಅನ್ವಯವಾಗುತ್ತದೆ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಜನರು ಲಾಕ್‍ಡೌನ್‍ಗೆ ಸಹಕರಿಸುತ್ತಿದ್ದಾರೆ. ಮತ್ತಷ್ಟು ಸಹಕಾರದ ಅಗತ್ಯ ಪೊಲೀಸರಿಗೆ ಬೇಕಾಗಿದೆ ಎಂದು ಮನವಿ ಮಾಡಿಕೊಂಡರು. ವರ್ತಕರು, ತರಕಾರಿ ಮಾರಾಟಗಾರರು ಮತ್ತಿತರರು ಅಗತ್ಯ ಸೇವೆಗಳಲ್ಲಿ ತೊಡಗಿದ್ದು ಅವರಿಗೆ ಓಡಾಡಲು ಅವಕಾಶ ನೀಡಿ ಪಾಸ್ ನೀಡಲಾಗುವುದು ಎಂದರು.

    ಹೋಂ ಕ್ವಾರಂಟೈನ್ ನಡಿ ಇರುವವರು ಹೊರಗೆ ಓಡಾಡುವಂತಿಲ್ಲ. ಒಂದು ವೇಳೆ ಅನುಮತಿ ಇಲ್ಲದೆ ಓಡಾಡಿದರೆ ಅಂತವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ದಿನಸಿ, ಹಾಲು, ಔಷಧಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಲಭ್ಯವಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಸಾಮಾಜಿಕ ಅಂತರವನ್ನು ಕಾಪಾಡುವುದು ಅತ್ಯಗತ್ಯ ಎಂದು ತಿಳಿಸಿದರು.

  • ಹೋಂ ಕ್ವಾರಂಟೈನ್‍ಲ್ಲಿದ್ದ ವ್ಯಕ್ತಿ ಓಡಾಟ- ಜನ ಆಕ್ರೋಶ

    ಹೋಂ ಕ್ವಾರಂಟೈನ್‍ಲ್ಲಿದ್ದ ವ್ಯಕ್ತಿ ಓಡಾಟ- ಜನ ಆಕ್ರೋಶ

    ಹುಬ್ಬಳ್ಳಿ: ಹೋಂ ಕ್ವಾರೆಂಟೈನಲ್ಲಿದ್ದ ವ್ಯಕ್ತಿಯೊಬ್ಬ ಮನೆಯಿಂದ ಹೊರಗಡೆ ಬಂದಿದ್ದರಿಂದ ಸಾರ್ವಜನಿಕರು ಆತಂಕಗೊಂಡ ಘಟನೆ ಕುಂದಗೋಳ ಪಟ್ಟಣದಲ್ಲಿ ನಡೆದಿದೆ.

    ಕೈಗೆ ಸಿ ಕೆಟಗೆರಿ ಸೀಲ್ ಹಾಕಿದ್ರು ಕೂಡ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿದ್ದ. ಇದನ್ನು ಕಂಡ ಸಾರ್ವಜನಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆತನಿಗೆ ತಕ್ಷಣವೇ ಮಾಹಿತಿ ನೀಡಿ ಮನೆಯೊಳಗೆ ಇರುವಂತೆ ಸೂಚನೆ ನೀಡಿದರು. ಇದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

    ಹೋಂ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿ ನಿಯಮ ಉಲ್ಲಂಘನೆ ಮಾಡಿ ಮನೆಯಿಂದ ಓಡಾಡ್ತಾ ಇರೋದ್ರಿಂದ ಆತಂಕ ಸೃಷ್ಠಿಯಾಗಿದೆ. ಹೀಗಾಗಿ ಕೂಡಲೇ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

  • ಸೀಲ್ ಇದ್ರೂ ಮನೆಯಿಂದ ಹೊರ ಬಂದು ತಲೆ ತಿರುಗಿ ಬಿದ್ದ ಯುವತಿ

    ಸೀಲ್ ಇದ್ರೂ ಮನೆಯಿಂದ ಹೊರ ಬಂದು ತಲೆ ತಿರುಗಿ ಬಿದ್ದ ಯುವತಿ

    ಬೆಂಗಳೂರು: ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್‍ಡೌನ್ ಮಾಡಲಾಗಿದೆ. ಲಾಕ್‍ಡೌನ್ ಮಾಡಿದರೂ ಮನೆಯಿಂದ ಹೊರಗೆ ಬಂದವರಿಗೆ ಪೊಲೀಸರು ಲಾಠಿ ಚಾರ್ಚ್ ಕೊಟ್ಟು ಮನೆಗೆ ಕಳುಹಿಸುತ್ತಿದ್ದಾರೆ. ಆದರೆ ಕ್ವಾರಂಟೈನ್ ನಲ್ಲಿ ಇರಬೇಕಾಗಿದ್ದ ಯುವತಿಯೊಬ್ಬಳು ಮನೆಯಿಂದ ಹೊರಬಂದು ಅವಾಂತರ ಸೃಷ್ಟಿಸಿದ್ದಾಳೆ.

    ಆರ್.ಟಿ.ನಗರದಲ್ಲಿ ಯುವತಿಯೊಬ್ಬಳು ಹೋಂ ಕ್ವಾರಂಟೈನ್ ಆಗಿದ್ದರೂ ಮನೆಯಿಂದ ಹೊರ ಬಂದಿದ್ದಾಳೆ. ಬಟ್ಟೆ ಐರನ್ ಕೊಡುವುದಕ್ಕೆ ಯುವತಿ ಮನೆಯಿಂದ ಹೊರ ಬಂದಿದ್ದಾಳೆ. ಬಳಿಕ ವಾಪಸ್ ಹೋಗುವಾಗ ರಸ್ತೆಯಲ್ಲಿಯೇ ತಲೆತಿರುಗಿ ಯುವತಿ ಬಿದ್ದಿದ್ದಾಳೆ.

    ತಕ್ಷಣ ಸ್ಥಳೀಯರು ಆಕೆಯ ಬಳಿ ಓಡಿ ಬಂದಿದ್ದಾರೆ. ಈ ವೇಳೆ ಯುವತಿಯ ಕೈಯಲ್ಲಿ ಸೀಲ್ ಇರುವುದನ್ನು ಗಮನಿಸಿದ್ದಾರೆ. ಇದರಿಂದ ಗಾಬರಿಗೊಂಡ ಸ್ಥಳೀಯರು ಕೂಡಲೇ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಅಂಬುಲೆನ್ಸ್ ಮೂಲಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.