ಮಂಗಳೂರು: ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ 62 ಮಂದಿಯನ್ನು ಕ್ವಾರೆಂಟೈನ್ ಮಾಡಲಾಗಿದೆ.
ಮಲೇಷಿಯಾದಿಂದ ಮೇ.22ರಂದು ಬೆಂಗಳೂರಿಗೆ ಬಂದಿದ್ದ ವೈದ್ಯರು ಸರ್ಕಾರಿ ಕ್ವಾರೆಂಟೈನ್ ಮುಗಿಸಿ ಮಂಗಳೂರಿಗೆ ಬಂದಿದ್ದರು. ಭಾನುವಾರ ಅರಂತೋಡು ಗ್ರಾಮದ ಸಂಬಂಧಿಕರ ಮನೆಗೆ ಆಗಮಿಸಿ, ಬಳಿಕ ಯಜಮಾನನ ಕಾರಿನಲ್ಲಿ ತೆರಳಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಂಗಳೂರಿಗೆ ಬಂದ ಬಳಿಕ ಅವರಿಗೆ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಹೀಗಾಗಿ ಈ ವೈದ್ಯರ ಪ್ರಾಥಮಿಕ ಸಂಪರ್ಕಕ್ಕೆ ಬಂದ 62 ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ದಕ್ಷಿಣ ಕನ್ನಡದಲ್ಲಿ ಒಟ್ಟು 129 ಮಂದಿಗೆ ಸೋಂಕು ಬಂದಿದ್ದು, 48 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 74 ಸಕ್ರಿಯ ಪ್ರಕರಣಗಳಿದ್ದು 6 ಮಂದಿ ಕೋವಿಡ್ 19ಗೆ ಮೃತಪಟ್ಟಿದ್ದಾರೆ.
ಹಾಸನ: ರಾಜ್ಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಸಡಿಲ ಮಾಡಿ ಮನೆಯಲ್ಲೇ ಕ್ವಾರಂಟೈನ್ ಮಾಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಮಹಾರಾಷ್ಟ್ರದಿಂದ ಬಂದವರನ್ನು ಕಡ್ಡಾಯವಾಗಿ 7 ದಿನ ಕ್ವಾರಂಟೈನ್ ಮಾಡಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಂ ಕ್ವಾರಂಟೈನ್‍ನಲ್ಲಿ ಇರುವವರ ಬಗ್ಗೆ ನಿಗಾವಹಿಸಲಾಗಿದ್ದು ಸೀಲ್ ಕೂಡ ಹಾಕಲಾಗಿರುತ್ತದೆ. ಕ್ವಾರಂಟೈನ್ ಇರುವವರಿಗೆ ತಂತ್ರಜ್ಞಾನದಿಂದ ಕೂಡಿದ ವಾಚ್ ಹಾಕಿ 10 ರಿಂದ 20 ಲಕ್ಷ ಜನರವರೆಗೂ ನಿಗಾ ಇಡಬಹುದಾಗಿದೆ ಎಂದರು.
ಮನೆಯಿಂದ ನೂರು ಮೀಟರ್ ಮುಂದೆ ಹೋದರೂ ಇದರಿಂದ ನಮಗೆ ಗೊತ್ತಾಗುತ್ತೆ. 14 ದಿ ಆದ ನಂತರ ದೇಹದಲ್ಲಿ ಕೊರೊನಾ ವಿರುದ್ಧ ಹೋರಾಟ ಶಕ್ತಿ ವೃದ್ಧಿ ಆಗುತ್ತೆ. ಅವರ ದೇಹದಲ್ಲಿ ರೋಗಾಣು ಜೀವಂತ ಆಗಿದೆಯಾ ಎಂಬುದನ್ನು ಪರಿಶೀಲನೆ ಮಾಡಬೇಕು. ಅಪರೂಪದ ಪ್ರಕರಣಗಳಲ್ಲಿ 25 ದಿನಗಳ ನಂತರವೂ ಪಾಸಿಟಿವ್ ಬಂದ ಉದಾಹರಣೆಗಳಿವೆ ಎಂದು ಹೇಳಿದ್ರು.
ಇದೇ ವೇಳೆ ಹಾಸನ ಜಿಲ್ಲೆಯ ಶಾಸಕರು ಮಹಾರಾಷ್ಟ್ರದಿಂದ ಬಂದವರನ್ನು ಹೆಚ್ಚು ದಿನ ಕ್ವಾರಂಟೈನ್‍ನಲ್ಲಿ ಇಡಲು ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ರು. ಬೇರೆ ರಾಜ್ಯದಿಂದ ಬಂದವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಿದ್ರು ಕೂಡ ಮಹಾರಾಷ್ಟ್ರದಿಂದ ಇಡೀ ರಾಜ್ಯದಲ್ಲಿ ಯಾವುದೇ ಭಾಗಕ್ಕೆ ಬಂದರೂ ಪ್ರತ್ಯೇಕವಾಗಿ 7 ದಿನಕ್ಕೆ ಬದಲಾಗಿ 14 ದಿನಕ್ಕೆ ಕ್ವಾರಂಟೈನ್ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದ್ರು.
ಉಡುಪಿ: ಜಿಲ್ಲೆಯಲ್ಲಿ ಹೋಟೆಲ್, ಸರ್ಕಾರಿ ಕ್ವಾರಂಟೈನನ್ನು ಏಳು ದಿನಗಳಿಗೆ ಮೊಟಕು ಮಾಡಿ ವರದಿ ಬರುವ ಮೊದಲೇ ಎಲ್ಲರನ್ನು ಹೋಂ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ. ಹೋಂ ಕ್ವಾರಂಟೈನ್ ಹೋದವರ ಪೈಕಿ 13 ಜನಕ್ಕೆ ಕೊರೊನಾ ಆವರಿಸಿದೆ. ಇದರಿಂದ ಆತಂಕಗೊಂಡಿರುವ ಸರ್ಕಾರ ಹೊಸ ಆ್ಯಪ್ ಸಿದ್ಧ ಮಾಡಿದ್ದು, ಹೋಂ ಕ್ವಾರಂಟೈನ್‍ನಲ್ಲಿರುವವರ ಮೇಲೆ ಜಿಲ್ಲಾಡಳಿತ ಕಣ್ಗಾವಲು ಇಟ್ಟಿದೆ.
ವಿದೇಶ, ಹೋರ ರಾಜ್ಯದಿಂದ ಬಂದು ಮನೆ ಸೇರಿರುವ 6,000 ಜನರಿದ್ದು, ಎಲ್ಲರೂ ಕ್ವಾರಂಟೈನ್ ವಾಚ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಳ್ಳಲು ಜಿಲ್ಲಾಡಳಿತ ಸೂಚಿಸಿದೆ. ಹೋಂ ಕ್ವಾರಂಟೈನ್ ಇರುವವರ ಮೇಲೆ ವಾಚ್ ಅಪ್ಲಿಕೇಷನ್ ಮೂಲಕ ಜಿಲ್ಲಾಡಳಿತ ಕಣ್ಗಾವಲು ಇಡಲಿದೆ.
ತಂತ್ರಜ್ಞಾನದ ಮೊರೆ ಹೋದ ಜಿಲ್ಲಾಡಳಿತ, ಮನೆಯ ಸುತ್ತ ಕ್ವಾರಂಟೈನ್ ಆ್ಯಪ್ ಜೊತೆ ಫೆನ್ಸಿಂಗ್ ವ್ಯವಸ್ಥೆ ಜಾರಿ ಮಾಡಿದೆ. ಕ್ವಾರಂಟೈನ್ ಇರುವವರು ಹೊರಗಡೆ ಬಂದ್ರೆ ಜಿಲ್ಲಾಡಳಿತಕ್ಕೆ ತಕ್ಷಣ ಮಾಹಿತಿ ಬರಲಿದೆ. ಮನೆ ಬಿಟ್ಟು ಹೊರಗೆ ಬಂದರೆ ಪ್ರಕರಣ ದಾಖಲು ಮಾಡುವುದಾಗಿ ಡಿಸಿ ಎಚ್ಚರಿಕೆ ನೀಡಿದ್ದಾರೆ. ಹೋಂ ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿ ವಿಎ, ಪಿಡಿಒ ಜೊತೆಗೆ ನಿಂತು ಸೆಲ್ಫಿ ರವಾನೆಗೆ ಸೂಚನೆ ಕೊಡಲಾಗಿದೆ.
ಸ್ಮಾರ್ಟ್ ಫೋನ್ ಇರುವ ಮನೆಗಳಿಗೆ ಅಪ್ಲಿಕೇಷನ್ ಮೂಲಕ ಮೂಲಕ ಕಾವಲು ಇಟ್ಟಿರುವ ಜಿಲ್ಲಾಡಳಿತ, ಸ್ಮಾಟ್ ಫೋನ್‍ಗಳಿಲ್ಲದ ಮನೆಗಳ ಪಟ್ಟಿಯನ್ನು ನೀಡಿ ಗ್ರಾಮ ಪಂಚಾಯ್ ಮೂಲಕ ನಿಗಾ ವಹಿಸಲು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್‍ಪಿ ವಿಷ್ಣುವರ್ಧನ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹೊರನಾಡು ಕನ್ನಡಿಗರು ಉಡುಪಿಗೆ ಬಂದವರು 8 ಸಾವಿರಕ್ಕೂ ಹೆಚ್ಚು. 14 ದಿನ ಪೂರೈಸಿದರೂ ವರದಿ ಬಾರದ ಕಾರಣ ಮನೆಗೆ ಕಳುಹಿಸಲಾಗಿದೆ. ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಬಹಳ ಒತ್ತಡ ಬಂತು. ಮನೆಯಲ್ಲಿ ಜಾಗರೂಕತೆಯಿಂದ ಇರಲು ಸೂಚನೆ ನೀಡಲಾಗಿದೆ. ಪಾಸಿಟಿವ್ ಬಂದವರನ್ನು ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತದೆ ಎಂದರು.
ಚಿಕ್ಕಮಗಳೂರು: ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಕ್ವಾರಂಟೈನ್‍ಗೆ ಒಳಪಡಿಸುವವರನ್ನು ಹೋಂ ಕ್ವಾರಂಟೈನಲ್ಲಿ ಇರಿಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಮುಂಬೈ ಸೇರಿದಂತೆ ಬೇರೆ ರಾಜ್ಯ ಹಾಗೂ ವಿದೇಶಗಳಿಂದ ಸಾಕಷ್ಟು ಜನ ಬರುತ್ತಿದ್ದಾರೆ. ಇಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಉಡುಪಿ-ಚಿಕ್ಕಮಗಳೂರು ಎರಡೂ ಜಿಲ್ಲೆಗಳು ಗ್ರೀನ್‍ಝೋನ್‍ನಲ್ಲಿದ್ದವು. ನಾವು ಯಾವಾಗ ಮುಂಬೈ ಮತ್ತು ದುಬೈನವರನ್ನು ಕರೆಸಿಕೊಂಡೆವೋ ಅಂದಿನಿಂದ ಕೊರೊನಾ ಪಾಸಿಟಿವ್ ಇರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಎರಡು ಜಿಲ್ಲೆಗಳಲ್ಲಿ ಬಹಳ ದೊಡ್ಡ ಸಮಸ್ಯೆ ಎಂದರೆ ಕ್ವಾರಂಟೈನ್‍ಗೆ ಒಳಪಡಿಸುವುದು.
ಮೂಡಿಗೆರೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜನರನ್ನು ಕ್ವಾರಂಟೈನ್‍ಗೆ ಮಾಡಬೇಕಾಗುತ್ತೆ. ವೈದ್ಯರಿಗೂ ಪಾಸಿಟಿವ್ ಬಂದ ಕಾರಣ ಅವರ ಸಂಪರ್ಕಕ್ಕೆ ಬಂದಿದ್ದ ಸುಮಾರು 800 ಜನರನ್ನು ನಾವು ಗುರುತಿಸಿದ್ದೀವಿ. ಇವರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡೋದು ಕಷ್ಟದ ಕೆಲಸ. ಅಷ್ಟೊಂದು ವ್ಯವಸ್ಥೆಗಳು ಮೂಡಿಗೆರೆ ತಾಲೂಕಿನಲ್ಲಿ ಇಲ್ಲ. ಹೋಟೆಲ್, ಸಿಂಗಲ್ ರೂಂಗಳು ಕೂಡ ಇಲ್ಲ. ಹಾಗಾಗಿ, ಉಡುಪಿ, ಚಿಕ್ಕಮಗಳೂರು, ಕೊಡಗು, ಮಂಗಳೂರು ಹಾಗೂ ಶಿವಮೊಗ್ಗದ ಕೆಲ ಭಾಗದಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಿಂದ ಅವರಿಗೆ ವಿನಾಯಿತಿ ಕೊಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಮನವಿ ಮಾಡಿದ್ದಾರೆ.
ಕೈಗೆ ಸೀಲ್ ಹಾಕಿ, ಮನೆಗೆ ಚೀಟಿ ಅಂಟಿಸಿ ಮನೆಯಲ್ಲೇ ಅವರಿಗೆ ಕ್ವಾರಂಟೈನ್ ಮಾಡಬೇಕು. ಸಾಂಸ್ಥಿಕ ಕ್ವಾರಂಟೈನ್ ಮನೆಗಿಂತ ಡೇಂಜರ್ ಆಗಿದೆ. ಒಂದೊಂದು ರೂಮಿನಲ್ಲಿ 10-20 ಜನ ಇರುತ್ತಾರೆ. ಆದ್ದರಿಂದ ಒಬ್ಬರಿಗೆ ಸೋಂಕು ಬಂದರೂ ಉಳಿದವರಿಗೆ ಬರುವ ಸಾಧ್ಯತೆ ಇದೆ. ಮಲೆನಾಡಿನ ಒಂಟಿ ಮನೆ ಹಾಗೂ ಮಲೆನಾಡು ಭಾಗದಲ್ಲಿ ಮನೆಗಳಲ್ಲೇ ಕ್ವಾರಂಟೈನ್ ಮಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ. ಇಲ್ಲಿ ಸಾಕಷ್ಟು ವ್ಯವಸ್ಥೆ ಇಲ್ಲ. ಆದ್ದರಿಂದ ವಿನಾಯಿತಿ ನೀಡಬೇಕೆಂದು ಸಂಸದರು ಮನವಿ ಮಾಡಿದ್ದಾರೆ.
ಸಂಸದರ ಮನವಿಗೆ ಮುಖ್ಯ ಕಾರ್ಯದರ್ಶಿಗಳು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಸಿಎಂ ಬಳಿಯೂ ಮಾತನಾಡುವುದಾಗಿ ಸಂಸದರು ಹೇಳಿದ್ದಾರೆ. ಇದರಿಂದ ಹೆಚ್ಚಿನ ಜನಕ್ಕೆ ಸಹಾಯವಾಗುತ್ತದೆ. ಅವರು ಮನೆಯಲ್ಲೇ ಇರಬೇಕು. ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು. ಯಾರೂ ಮನೆಯಿಂದ ಆಚೆ ಬರಬಾರದೆಂದು ಜನಸಾಮಾನ್ಯರಿಗೂ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು: ಹೊರರಾಜ್ಯಗಳಿಂದ ಬೆಂಗಳೂರಿಗೆ ಸಾಕಷ್ಟು ಮಂದಿ ಬರುತ್ತಿರುವ ಹಿನ್ನೆಲೆ ಅವರಿಂದ ನಗರದಲ್ಲಿ ಕೊರೊನಾ ಸೋಂಕು ಹರಡಬಾರದು ಎಂದು ಬೆಂಗಳೂರು ಜಿಲ್ಲಾಡಳಿತ ಹೊಸ ಪ್ಲಾನ್ ಮಾಡಿದೆ.
ಹೊರ ರಾಜ್ಯದಿಂದ ಸಿಲಿಕಾನ್ ಸಿಟಿಗೆ ಬರುವವರಿಗೆ ಕಡ್ಡಾಯವಾಗಿ ಕೈಗೆ ಸ್ಟಾಂಪಿಂಗ್ ಮಾಡಲಾಗುತ್ತದೆ. ಅವರು 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಇರಲೇಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.
ಹೊರ ರಾಜ್ಯದವರಿಂದ ನಗರದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಬೇರೆ ರಾಜ್ಯದಿಂದ ಬಂದವರ ಕೈಗೆ ಸ್ಟಾಂಪಿಂಗ್ ಹಾಕಿ, ಥರ್ಮಲ್ ಸ್ಕ್ಯಾನಿಂಗ್ ಮಾಡಿ, 14 ದಿನ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ಸೂಚಿಸಲಾಗುತ್ತದೆ. ಬೈಕು, ಕಾರು ಯಾವುದೇ ಖಾಸಗಿ ವಾಹನದಲ್ಲೂ ಬಂದರೂ ಸೀಲ್ ಫಿಕ್ಸ್, ಕ್ವಾರಂಟೈನ್ ಕಡ್ಡಾಯ ಎಂದು ಬೆಂಗಳೂರು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಷರತ್ತು ಪಾಲಿಸಿ: ಲಾಕ್‍ಡೌನ್ ಘೋಷಣೆಗೂ ಮುನ್ನ ನೆರೆ ರಾಜ್ಯಕ್ಕೆ ಹೋಗಿರುವ ಕನ್ನಡಿಗರು ಪಾಸ್ ಪಡೆಯುವ ಮೂಲಕ ಮರಳಿ ಕರ್ನಾಟಕಕ್ಕೆ ಬರಬಹುದಾಗಿದೆ. ರಾಜ್ಯಕ್ಕೆ ಬರುವ ಕನ್ನಡಿಗರು ಸೇವಾ ಸಿಂಧು ವೆಬ್‍ಸೈಟ್‍ಗೆ ತೆರಳಿ ವಿವರಗಳನ್ನು ನೀಡಬೇಕಾಗುತ್ತದೆ. ಈ ಎಲ್ಲ ವಿವರಗಳು ಸರಿಯಾಗಿದ್ದರೆ ಇ ಪಾಸ್ ಡೌನ್‍ಲೋಡ್ ಮಾಡಬಹುದು.
ಇ ಪಾಸ್ ಸಿಕ್ಕಿದ ದಿನದಿಂದ ಒಂದು ವಾರದ ವರೆಗೆ ಮಾತ್ರ ಈ ಪಾಸ್ ಉರ್ಜಿತದಲ್ಲಿರುತ್ತದೆ. ಸ್ವಂತ ವಾಹನ, ಬಾಡಿಗೆ ವಾಹನ ಅಥವಾ ಬಸ್ ಇವುಗಳ ಮೂಲಕ ಬರಬಹುದು. ವಾಹನದಲ್ಲಿ ಬರಬೇಕಾದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕುಳಿತುಕೊಳ್ಳಬೇಕು. ಒಂದು ಕಾರಿನಲ್ಲಿ ಗರಿಷ್ಟ 3 ಮಂದಿ, ಎಸ್‍ಯುವಿ ವಾಹನದಲ್ಲಿ 5, ವ್ಯಾನ್ ನಲ್ಲಿ 10 ಮಂದಿ, ಬಸ್ ನಲ್ಲಿ ಗರಿಷ್ಟ 25 ಮಂದಿ ಪ್ರಯಾಣಿಸಬಹುದು. ಯಾವ ಚೆಕ್ ಪೋಸ್ಟ್ ಮೂಲಕ ಅನುಮತಿ ನೀಡಲಾಗಿದೆಯೋ ಆ ಚೆಕ್ ಪೋಸ್ಟ್ ಮೂಲಕ ಮಾತ್ರ ಪ್ರವೇಶ ನೀಡಲಾಗುತ್ತದೆ.
ಉಡುಪಿ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ನವ ವಿವಾಹಿತ ಜೋಡಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಹನಿಮೂನ್ ಕನಸು ಹೊತ್ತಿದ್ದ ಮದುಮಗ ನಾಲ್ಕು ಗೋಡೆಯ ನಡುವೆ ಲಾಕ್ ಆಗಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.
ಕಾರ್ಕಳದ ಬೋಳ ಗ್ರಾಮದ ನವ ವಿವಾಹಿತ ಮತ್ತು ಮದುವೆಯಲ್ಲಿ ಭಾಗವಹಿಸಿದ್ದ 26ಮಂದಿಗೆ ಹೋಂ ಕ್ವಾರಂಟೈನ್‍ಗೆ ಹಾಕಲಾಗಿದೆ. ಉಡುಪಿ ಜಿಲ್ಲಾ ಗಡಿ ಸಂಪೂರ್ಣ ಬಂದ್ ಮಾಡಿದೆ. ಆದರೂ ಒಳದಾರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನರು ಉಡುಪಿಯ ಕಾರ್ಕಳ ತಾಲೂಕಿಗೆ ಬರುತ್ತಿದ್ದಾರೆ.
ಉಡುಪಿಯಿಂದ ದಕ್ಷಿಣ ಕನ್ನಡಕ್ಕೆ ಹೋಗಿ ಬಂದವರನ್ನು ಕ್ವಾರಂಟೈನ್ ಮಾಡಿರುವ ಆರೋಗ್ಯ ಇಲಾಖೆ, ಕಾರ್ಕಳಕ್ಕೆ ಆಗಮಿಸಿದ ಹೊರ ಜಿಲ್ಲೆಯ ಜನರಿಗೂ ಕ್ವಾರಂಟೈನ್ ಮಾಡಿದ್ದಾರೆ. ಮಂಗಳೂರನಲ್ಲಿ ಖಾಸಗಿ ಉದ್ಯೋಗಿಯಾಗಿರುವ ಮದುಮಗ, ಕಾಪು ತಾಲೂಕು ಕುತ್ಯಾರಿನಲ್ಲಿ ಮದುವೆಯಾಗಿದ್ದರು. ಮದುವೆ ಮುಗಿಸಿ ಸಂಜೆ ಮನೆಗೆ ಬಂದ ವಿವಾಹಿತನಿಗೆ ಕ್ವಾರಂಟೈನ್ ಸೀಲ್ ಹಾಕಿ 28 ದಿನಗಳ ಗೃಹಬಂಧನಕ್ಕೆ ಒಳಪಡಿಸಲಾಗಿದೆ.
ಮದುವೆಯ ಮೊದಲ ರಾತ್ರಿಯೇ ಹೋಮ್ ಕ್ವಾರಂಟೈನ್ ಹಾಕಿದ್ದು, ನವಜೋಡಿಗೆ ನಿರಾಶೆಯಾಗಿದೆ. ಮನೆ ಬಳಿ ಕಾದುಕುಳಿತಿದ್ದ ಆಶಾ ಕಾರ್ಯಕರ್ತೆಯರು ಕ್ವಾರಂಟೈನ್ ಮಾಡಲು ಸಿದ್ಧರಾಗಿದ್ದು, ಮದುವೆ ಮನೆಯವರ ಆತಂಕಕ್ಕೆ ಕಾರಣವಾಗಿತ್ತು.
ಈ ನಡುವೆ ಬೆಂಗಳೂರು, ಮಂಗಳೂರು, ದಾವಣಗೆರೆ, ಬಂಟ್ವಾಳದಿಂದ ಬಂದಿದ್ದ ಒಟ್ಟು 20 ಜನಕ್ಕೆ ಗೃಹ ದಿಗ್ಬಂಧನ ವಿಧಿಸಲಾಗಿದೆ. ಕಾರ್ಕಳದ ಪರಿಸರದ ಜನರಿಂದ ಮಾಹಿತಿ ಪಡೆದ ಆಶಾ ಕಾರ್ಯಕರ್ತೆಯರು ಅಜೆಕಾರ್ ನಲ್ಲಿ ಮಂಗಳೂರಿಗೆ ಮದುವೆಗೆ ಹೋಗಿದ್ದ 8 ಮಂದಿಗೆ ಕ್ವಾರಂಟೈನ್ ವಿಧಿಸಲಾಗಿದೆ.
ಹುಬ್ಬಳ್ಳಿ: ಐವರು ಮಾಧ್ಯಮ ಪ್ರತಿನಿಧಿಗಳು ಮುಂಜಾಗ್ರತಾ ಕ್ರಮವಾಗಿ ಸ್ವಯಂ ಪ್ರೇರಣೆಯಿಂದ ಹುಬ್ಬಳ್ಳಿಯಲ್ಲಿ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.
ನಗರದ ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಸೇರಿದ ಐವರು ಮಾಧ್ಯಮ ಪ್ರತಿನಿಧಿಗಳು ತಮ್ಮಲ್ಲಿ ಕೊರೊನಾದ ಯಾವುದೇ ಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ಸ್ವಯಂ ಪ್ರೇರಣೆಯಿಂದ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಇವರು ಏಪ್ರಿಲ್ 9ರಂದು ಶಬ್ ಎ ಬರಾತ್ ಆಚರಣೆಯ ಕುರಿತು ವರದಿಗಾರಿಕೆಗಾಗಿ ಹುಬ್ಬಳ್ಳಿಯ ತೊರವಿಹಕ್ಕಲದ ಖಬರಸ್ತಾನಕ್ಕೆ ತೆರಳಿದ್ದರು.
ಈ ಸ್ಮಶಾನದ ಕಾವಲುಗಾರನಿಗೆ (ಪಿ- 363) ಕೊರೊನಾ ಸೋಂಕು ಇರುವುದು ಏಪ್ರಿಲ್ 18 ರಂದು ದೃಢಪಟ್ಟತ್ತು. ಈ ಹಿನ್ನೆಲೆಯಲ್ಲಿ ಈ ಎಲ್ಲ ಐವರು ಪ್ರತಿನಿಧಿಗಳನ್ನು ದ್ವಿತೀಯ ಹಂತದ ಸಂಪರ್ಕಿತರು ಎಂದು ಪರಿಗಣಿಸಲಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಹೋಂ ಕ್ವಾರಂಟೈನ್‍ಗೆ ಒಳಪಟ್ಟಿದ್ದಾರೆ. ಈ ಐದೂ ಜನ ಮಾಧ್ಯಮ ಪ್ರತಿನಿಧಿಗಳ ಆರೋಗ್ಯ ಸ್ಥಿರವಾಗಿದೆ.
ಮಂಗಳೂರು: ಕೊರೊನಾ ಸೋಂಕಿತನ ಸಹೋದರ ಗ್ರಾಮ ಪಂಚಾಯತ್ ಸಭೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಗ್ರಾ.ಪಂ. ಅಧ್ಯಕ್ಷೆ ಮತ್ತು ಪಿ.ಡಿ.ಒ ಸಹಿತ ಒಟ್ಟು 44 ಮಂದಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮ ಪಂಚಾಯತ್‍ನಲ್ಲಿ ಕೊರೊನಾ ರಕ್ಷಣಾ ಕಾರ್ಯಪಡೆಯ ಮೀಟಿಂಗ್ ನಡೆದಿತ್ತು. ಈ ಸಭೆಯಲ್ಲಿ ದುಬೈನಿಂದ ಬಂದು ಕೊರೊನಾ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಸಹೋದರ ಕೂಡ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಸಭೆಯಲ್ಲಿದ್ದ ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ.
ಮಾರ್ಚ್ 18ರಂದು ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದ ವ್ಯಕ್ತಿ, ಅಜ್ಜಾವರದ ಮನೆಯಲ್ಲೇ ಕ್ವಾರಂಟೈನ್ ಆಗಿದ್ದ. ನಂತರ ಮಾರ್ಚ್ 28 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಮಾರ್ಚ್ 31ರಂದು ಸೋಂಕು ಇರುವುದು ದೃಢಪಟ್ಟಿತ್ತು. ಇದಕ್ಕೂ ಮೊದಲು ಸೋಂಕಿತ ವ್ಯಕ್ತಿಯ ಸಹೋದರ ಸಭೆಯಲ್ಲಿ ಭಾಗಿಯಾಗಿದ್ದರು.
ಈ ಸೋಂಕಿತ ವ್ಯಕ್ತಿಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 13 ಮಂದಿ ಈಗಾಗಲೇ ಪ್ರತ್ಯೇಕ ಕ್ವಾರಂಟೈನ್ ಮಾಡಲಾಗಿತ್ತು. ಇದರ ಜೊತೆಗೆ ಈಗ ಗ್ರಾ.ಪಂ. ಅಧ್ಯಕ್ಷೆ, ಪಿ.ಡಿ.ಒ ಮತ್ತು ಎಂಟು ಮಂದಿ ಸದಸ್ಯರು ಸೇರಿ ಒಟ್ಟು 44 ಮಂದಿ ಹೋಂ ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ ಸೋಂಕಿತ ಸಂಪರ್ಕದಲ್ಲಿದ್ದ 57 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.
ಹುಬ್ಬಳ್ಳಿ: ಕೈ ಮೇಲೆ ಕ್ವಾರಂಟೈನ್ ಸೀಲ್ ಇದ್ದರೂ ರಾಜಾರೋಷವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿರುವ ಘಟನೆ ಜಿಲ್ಲೆಯ ಚೆನ್ನಮ್ಮ ವೃತ್ತದ ಬಳಿ ನಡೆದಿದೆ.
ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ನಿವಾಸಿ ಹಜರತ್ ಅಲಿ ಜೋಡ್ಮನಿ ಎಂಬಾತ ಹೋಂ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ. ಈತನ ಕೈ ಮೇಲೆ ಸೀಲ್ ಇದ್ದರೂ ಬೇಕಾ ಬಿಟ್ಟಿ ಓಡಾಡುವ ಮೂಲಕ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾನೆ.
ಈತ ಕಳೆದ 10 ದಿನಗಳ ಹಿಂದೆ ಗೋವಾ ರಾಜ್ಯಕ್ಕೆ ಪ್ರವಾಸ ಬೆಳೆಸಿದ್ದನು. ಮಂಗಳವಾರ ಗೋವಾದಿಂದ ಹುಬ್ಬಳ್ಳಿಗೆ ಆಗಮಿಸಿದ್ದ. ಹೀಗಾಗಿ ಬೆಳಗಾವಿ ಗಡಿಯಲ್ಲಿ ಈತನಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ವಾರೈಂಟೈನ್ ಸೀಲ್ ಹಾಕಿದ್ದಾರೆ. ಕೈ ಮೇಲೆ ಸೀಲ್ ಇದ್ದರೂ ಮನೆಯಲ್ಲಿರದ ಜೋಡ್ಮನಿ ರಾತ್ರಿ ಔಷಧಿ ಖರೀದಿಗೆಂದು ಚನ್ನಮ್ಮ ವೃತ್ತದಲ್ಲಿ ಪ್ರತ್ಯಕ್ಷವಾಗಿದ್ದಾನೆ. ಮೆಡಿಕಲ್ ಸ್ಟೋರ್ ಕೆಲಸಗಾರ ನೋಡಿ ತಕ್ಷಣ ಪೊಲೀಸರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾನೆ.
ಮಾಹಿತಿಯ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಕೈ ಮೇಲೆ ಸೀಲ್ ಇರುವುದನ್ನು ದೃಢಪಡಿಸಿಕೊಂಡು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಶಂಕಿತನನ್ನು ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ ತಪಾಸಣೆಗೆ ಒಳಪಡಿಸಿದ್ದಾರೆ. ಹೆಚ್ಚಿನ ತಪಾಸಣೆಗೆ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಬೆಂಗಳೂರು: ಹೋಂ ಕ್ವಾರಂಟೈನ್ ನಲ್ಲಿದ್ದ ವೈದ್ಯನ ಉದ್ದಟತನಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.
ಹೋಂ ಕ್ವಾರಂಟೈನ್ ನಲ್ಲಿ ಇರಿ ಎಂದು ಸೂಚಿಸಿದ್ದರೂ ಮನೆಯಿಂದ ಹೊರಗಡೆ ಬಂದ ವೈದ್ಯ, ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದಾನೆ. ರೋಗಿ ಸಂಖ್ಯೆ 6ರ ಜೊತೆ ಪ್ರಾಥಮಿಕ ಸಂಬಂಧ ಹೊಂದಿದ್ದ ಈ ವೈದ್ಯನನ್ನು 28 ದಿನ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿತ್ತು.
ಹೋಂ ಕ್ವಾರಂಟೈನ್ ಅವಧಿ ಮುಗಿಯುವುದಕ್ಕೂ ಮುನ್ನ ಮನೆಯಿಂದ ಹೊರಗಡೆ ಬಂದ ವೈದ್ಯ ಆಸ್ಪತ್ರೆಯಲ್ಲಿ ಓಡಾಡಿದ್ದಾನೆ. ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಿದ್ದರೂ ಆಸ್ಪತ್ರೆಗೆ ಬರುತ್ತಿದ್ದ ವೈದ್ಯನ ಉದ್ದಟತನಕ್ಕೆ ಬೇಸತ್ತು ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದರು.
ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೈದ್ಯನನ್ನು ಹೋಂ ಅರೆಸ್ಟ್ ಮಾಡಲಾಗಿದೆ. ಈ ದೂರಿನ ಮೇರೆಗೆ ಆರೋಗ್ಯಾಧಿಕಾರಿಗಳು ಕೋರಮಂಗಲದ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಿದ್ದಾರೆ.