Tag: ಹೋಂ ಕ್ವಾರಂಟೈನ್

  • ವಿದೇಶಗಳಿಂದ ವಾಪಸ್ಸಾಗುವ ಪ್ರಯಾಣಿಕರಿಗೆ 7 ದಿನ ಹೋಂ ಕ್ವಾರಂಟೈನ್‌ ಕಡ್ಡಾಯ

    ವಿದೇಶಗಳಿಂದ ವಾಪಸ್ಸಾಗುವ ಪ್ರಯಾಣಿಕರಿಗೆ 7 ದಿನ ಹೋಂ ಕ್ವಾರಂಟೈನ್‌ ಕಡ್ಡಾಯ

    ನವದೆಹಲಿ: ದೇಶದಲ್ಲಿ ಕೋವಿಡ್‌ ಮೂರನೇ ಅಲೆ ವ್ಯಾಪಕವಾಗಿರುವ ಬೆನ್ನಲ್ಲೇ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮತ್ತಷ್ಟು ಬಿಗಿ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ವಿದೇಶಗಳಿಂದ ಭಾರತಕ್ಕೆ ಪ್ರಯಾಣ ಬೆಳೆಸುವವರಿಗೆ ಒಂದು ವಾರ ಹೋಂ ಕ್ವಾರಂಟೈನ್‌ ಕಡ್ಡಾಯ. ಅಲ್ಲದೇ ಕ್ವಾರಂಟೈನ್‌ ಆದ 6ನೇ ದಿನಕ್ಕೆ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

    ಅತ್ಯಂತ ಅಪಾಯದ ದೇಶಗಳ ಪಟ್ಟಿ 19ಕ್ಕೆ ಏರಿದೆ. ಡಿಸೆಂಬರ್‌ ತಿಂಗಳಲ್ಲೇ ಈ ಪಟ್ಟಿಗೆ 9 ದೇಶಗಳು ಸೇರಿಕೊಂಡಿವೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಬಿಗಿ ನಿಯಮಗಳನ್ನು ರೂಪಿಸಲಾಗಿದೆ. ಇದನ್ನೂ ಓದಿ: ಸೆಲ್ಫ್ ಕೋವಿಡ್ ಟೆಸ್ಟಿಂಗ್ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ನೀಡಬೇಕು: ಡಾ.ವಿಶಾಲ್ ರಾವ್

    ಹೊರದೇಶಗಳಿಂದ ಬಂದ ಪ್ರಯಾಣಿಕರು ಕಡ್ಡಾಯವಾಗಿ 7 ದಿನ ಹೋಂ ಕ್ವಾರಂಟೈನ್‌ ಆಗಬೇಕು. ಕೊನೆ ದಿನದಲ್ಲಿ ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಿಸಬೇಕು. ಅದರಲ್ಲಿ ಪಾಸಿಟಿವ್‌ ಬಂದರೆ ಅಂತಹವರನ್ನು ಐಸೊಲೇಷನ್‌ ಮಾಡಲಾಗುವುದು. ಅವರ ಮಾದರಿಯನ್ನು ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗುವುದು ಎಂದು ತಿಳಿಸಿದೆ.

    ಸೋಂಕಿತ ಪ್ರಯಾಣಿಕನ ಅಕ್ಕಪಕ್ಕ ಕುಳಿತವರು ಹಾಗೂ ಸಿಬ್ಬಂದಿಯನ್ನು ಸಂಪರ್ಕಿತರು ಎಂದೇ ಪರಿಗಣಿಸಲಾಗುವುದು. ಒಂದು ವೇಳೆ ಪ್ರಯಾಣಿಕರ ವರದಿ ನೆಗೆಟಿವ್‌ ಬಂದರೆ ಮುಂದಿನ ಒಂದು ವಾರ ತಮ್ಮ ಆರೋಗ್ಯದ ಮೇಲೆ ಸ್ವಯಂ ನಿಗಾ ವಹಿಸಬೇಕು ಎಂದು ನಿಯಮದಲ್ಲಿ ಹೇಳಿದೆ. ಇದನ್ನೂ ಓದಿ: 700 ಕುರಿಗಳಿಂದ ವ್ಯಾಕ್ಸಿನ್ ಸಂದೇಶ- ಮೆಚ್ಚಿದ ನೆಟ್ಟಿಗರು

    ತಪಾಸಣೆ ವೇಳೆ ರೋಗಲಕ್ಷಣಗಳು ಕಂಡುಬರುವ ಪ್ರಯಾಣಿಕರನ್ನು ಪ್ರತ್ಯೇಕಿಸಿ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ಯಲಾಗುವುದು. ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದರೆ ಸಂಪರ್ಕಿತರನ್ನು ಗುರುತಿಸಲಾಗುವುದು ಎಂದು ಹೇಳಿದೆ.

    ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,17,100 ಹೊಸ ಪ್ರಕರಣಗಳು ಹೊಸ ಪ್ರಕರಣಗಳು ದೃಢಪಟ್ಟಿವೆ. ಶೇಕವಾರು ಪ್ರಮಾಣ ಶೇ.28ಕ್ಕೇರಿದೆ.

  • ಯಾರೆಲ್ಲ ಹೋಮ್ ಕ್ವಾರಂಟೈನ್ ಆಗಬಹುದು? – ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

    ಯಾರೆಲ್ಲ ಹೋಮ್ ಕ್ವಾರಂಟೈನ್ ಆಗಬಹುದು? – ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

    ಬೆಂಗಳೂರು: ಗಂಭೀರವಾಗಿ ಇಲ್ಲದೇ ಇದ್ದರೂ ಆಸ್ಪತ್ರೆಗಳಿಗೆ ಕೋವಿಡ್ ಸೋಂಕಿತರು ಭಾರೀ ಸಂಖ್ಯೆಯಲ್ಲಿ ಅಡ್ಮಿಟ್ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಸರ್ಕಾರದ ಆರೋಗ್ಯ ಇಲಾಖೆ ಹೋಮ್ ಐಸೋಲೇಷನ್‌ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    – ಮನೆಯಲ್ಲೇ ಕ್ವಾರಂಟೈನ್ ಆಗುವ ವ್ಯಕ್ತಿಗಳು ಕುಟುಂಬ ಸದಸ್ಯರ ಜೊತೆ ಸಂಪರ್ಕ ಹೊಂದಿರಬಾರದು.
    – ಕ್ವಾರಂಟೈನ್ ಸಮಯದಲ್ಲಿ ಸೋಂಕಿತರನ್ನು 24*7 ಸಮಯದಲ್ಲಿ ಸಂಪರ್ಕಿಸುವ ವ್ಯವಸ್ಥೆ ಇರಬೇಕು. ಆರೋಗ್ಯ ಸಿಬ್ಬಂದಿ/ ಮೆಡಿಕಲ್ ಅಧಿಕಾರಿಗೆ ಮಾಹಿತಿ ನೀಡಬೇಕು.
    – ಸಣ್ಣ ಮಟ್ಟಿನ ಜ್ವರ 38 ಡಿಗ್ರಿ ಸೆಲ್ಸಿಯಸ್ ಅಥವಾ 100.4 ಡಿಗ್ರಿ ಫ್ಯಾರನ್‌ಹೀಟ್, ಆಮ್ಲಜನಕದ ಮಟ್ಟ 95% ಇರುವ ವ್ಯಕ್ತಿಗಳು ಕ್ವಾರಂಟೈನ್ ಆಗಬಹುದು.

    – 60 ವರ್ಷ ಮೇಲ್ಪಟ್ಟ ಕೊಮೊರ್ಬಿಡ್ ಸ್ಥಿತಿಯಲ್ಲಿರುವ, ಮಧುಮೇಹ, ರಕ್ತದೊತ್ತಡ, ಹೃದಯ, ಕಿಡ್ನಿ ಸಮಸ್ಯೆ ಇರುವ ವ್ಯಕ್ತಿಗಳು ಮನೆಯಲ್ಲೇ ಕ್ವಾರಂಟೈನ್ ಆಗಬಹುದು. ಆದರೆ ಈ ವ್ಯಕ್ತಿಗಳು ಮೆಡಿಕಲ್ ಅಧಿಕಾರಿ ಅಥವಾ ಕುಟುಂಬದ ವೈದ್ಯರಿಂದ ಅನುಮತಿ ಪಡೆದಿರಬೇಕು.
    – ಮನೆಯಲ್ಲೇ ಕ್ವಾರಂಟೈನ್ ಆಗುವ ವ್ಯಕ್ತಿಯ ಕೊಠಡಿಯಲ್ಲಿ ಪ್ರತ್ಯೇಕ ಶೌಚಾಲಯ ಇರಬೇಕು.

    – ಒಂದು ವೇಳೆ ಮನೆಯಲ್ಲೇ ವ್ಯಕ್ತಿ ಕ್ವಾರಂಟೈನ್ ಆಗಿದ್ದರೂ ಆ ಮನೆ ಕ್ವಾರಂಟೈನ್‌ಗೆ ಪೂರಕವಾಗಿರದೇ ಇದ್ದರೆ ಆ ಸೋಂಕಿತ ವ್ಯಕ್ತಿಯನ್ನು ಕೋವಿಡ್ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗುತ್ತದೆ.
    – ಮನೆಯಲ್ಲಿ ಕ್ವಾರಂಟೈನ್ ಆಗುವ ವ್ಯಕ್ತಿ ಪ್ರತಿನಿತ್ಯ ತನ್ನ ಆರೋಗ್ಯ ಮಾಹಿತಿಯನ್ನು ಮೆಡಿಕಲ್ ಅಧಿಕಾರಿ/ ಕುಟುಂಬದ ವೈದ್ಯರಿಗೆ ತಿಳಿಸಬೇಕು.

  • ಎರಡನೇ ಬಾರಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹೋಂ ಕ್ವಾರಂಟೈನ್

    ಎರಡನೇ ಬಾರಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹೋಂ ಕ್ವಾರಂಟೈನ್

    ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಎರಡನೇ ಬಾರಿ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಮನೆಯಲ್ಲಿ ಅಡುಗೆ ಮಾಡುವವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಜಿಲ್ಲಾಧಿಕಾರಿಗಳು ಕೂಡ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

    ಜಿಲ್ಲಾಧಿಕಾರಿಗಳ ಮನೆಯ ಅಡುಗೆ ಭಟ್ಟರಿಗೆ ಕೊರೊನಾ ಸೋಂಕು ತಗುಲಿದ್ದು, ಪ್ರಾಥಮಿಕ ಸಂಪರ್ಕದಲ್ಲಿ ಇರೋದರಿಂದ ಸ್ವಯಂ ಪ್ರೇರಿತವಾಗಿ ಹೋಂ ಕ್ವಾರಂಟೈನ್‍ನಲ್ಲಿದ್ದಾರೆ. ಬಗಾದಿ ಗೌತಮ್ ಹೋಂ ಕ್ವಾರಂಟೈನ್‍ಗೆ ಒಳಗಾಗ್ತಿರೋದು ಇದು ಎರಡನೇ ಬಾರಿ. ಕಂದಾಯ ಸಚಿವ ಆರ್. ಅಶೋಕ್ ಚಿಕ್ಕಮಗಳೂರಿಗೆ ಬಂದು ಹೋದ ಬಳಿಕ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿಯವರಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಆಗಲೂ ಡಿಸಿ ಬಗಾದಿ ಗೌತಮ್ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದರು. ವೈದ್ಯರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಒಂದು ವಾರಗಳ ಕಾಲ ಹೋಂ ಕ್ವಾರಂಟೈನ್‍ಗೆ ಮುಂದಾಗಿದ್ದಾರೆ.

    ಸದ್ಯಕ್ಕೆ ಡಿಸಿ ಬಗಾದಿ ಗೌತಮ್ ಅವರಿಗೆ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಆದರೂ ಒಂದು ವಾರಗಳ ಕಾಲ ಡಿಸಿ ಹೋಂ ಕ್ವಾರಂಟೈನ್‍ಗೆ ಮುಂದಾಗಿದ್ದಾರೆ. ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಮತ್ತೋರ್ವ ನೌಕರನಿಗೂ ಪಾಸಿಟಿವ್ ಬಂದಿದೆ. ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯ 20ಕ್ಕೂ ಹೆಚ್ಚು ಸಿಬ್ಬಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಅವರೆಲ್ಲರ ವರದಿಯೂ ನೆಗೆಟಿವ್ ಬಂದಿದೆ.

  • ರ‍್ಯಾಪಿಡ್ ಟೆಸ್ಟ್ ನೆಗೆಟಿವ್, ಸ್ವ್ಯಾಬ್ ಟೆಸ್ಟ್ ಪಾಸಿಟಿವ್ – 60ಕ್ಕೂ ಹೆಚ್ಚು ಮಂದಿ ಹೋಂ ಕ್ವಾರಂಟೈನ್

    ರ‍್ಯಾಪಿಡ್ ಟೆಸ್ಟ್ ನೆಗೆಟಿವ್, ಸ್ವ್ಯಾಬ್ ಟೆಸ್ಟ್ ಪಾಸಿಟಿವ್ – 60ಕ್ಕೂ ಹೆಚ್ಚು ಮಂದಿ ಹೋಂ ಕ್ವಾರಂಟೈನ್

    – ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಿ ಎಡವಟ್ಟು ಮಾಡಿದ ಆರೋಗ್ಯ ಇಲಾಖೆ

    ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ವರದಿ ಬರುವ ಮುನ್ನವೆ ಮೃತಪಟ್ಟ ವ್ಯಕ್ತಿಯ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿ ಆರೋಗ್ಯ ಇಲಾಖೆ ಎಡವಟ್ಟು ಮಾಡಿದೆ.

    ಮೃತ ವ್ಯಕ್ತಿಯ ಶವ ಪಡೆದ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿ ಮೇಲೆ ಮೃತವ್ಯಕ್ತಿಗೆ ಕೊರೊನಾ ಪಾಸಿಟಿವ್ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ 60ಕ್ಕೂ ಹೆಚ್ಚು ಮಂದಿಯಲ್ಲಿ ಆತಂಕ ಶುರುವಾಗಿದೆ. ಯಳಂದೂರು ಬಳೇಪೇಟೆ ವರ್ಷದ ವೃದ್ಧರೊಬ್ಬರಿಗೆ ಗ್ಯಾಂಗ್ರಿನ್ ಆಗಿತ್ತು. ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಲು ಬಂದಾಗ ಅವರಿಗೆ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗಿತ್ತು. ವರದಿ ನೆಗೆಟಿವ್ ಬಂದಿತ್ತು. ನಂತರ ಅವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು.

    ಆದರೆ ಅವರಿಗೆ ಕೋವಿಡ್-19 ಲಕ್ಷಣಗಳು ಕಂಡು ಬಂದಿದ್ದರಿಂದ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ವರದಿ ಬರುವ ಮುಂಚಯೇ ಅವರು ಮೃತಪಟ್ಟಿದ್ದರು. ಈ ವೇಳೆ ಎಡವಟ್ಟು ಮಾಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ವರದಿ ಬರುವವರೆಗೂ ಕಾಯದೆ ಮೃತ ವ್ಯಕ್ತಿಯ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಶವವನ್ನು ಯಳಂದೂರಿಗೆ ತೆಗೆದುಕೊಂಡು ಹೋದ ಸಂಬಂಧಿಕರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇದೇ ವೇಳೆ ವರದಿ ಬಂದಿದ್ದು ಮೃತವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ.

    ಈ ವಿಷಯ ತಿಳಿಯುವುದರೊಳಗೆ ಅಂತ್ಯಕ್ರಿಯೆ ಪೂರ್ಣ ಗೊಂಡಿತ್ತು. ಕೊರೊನಾ ಪಾಸಿಟಿವ್ ಸುದ್ದಿ ಕೇಳಿ ಮೃತನ ಕುಟುಂಬಸ್ಥರಲ್ಲಿ ಹಾಗೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರಲ್ಲಿ ಆತಂಕ ಶುರುವಾಗಿದೆ. ಇದೀಗ ಆರೋಗ್ಯ ಇಲಾಖೆ ಯಳಂದೂರಿನ ಬಳೇಪೇಟೆ ಪ್ರದೇಶಕ್ಕೆ ಸೋಂಕುನಿವಾರಕ ದ್ರಾವಣ ಸಿಂಪಡಿಸಿ ಸೀಲ್‍ಡೌನ್ ಮಾಡಿದ್ದಾರೆ. ಜೊತೆಗೆ ಇಲ್ಲಿನ ನಿವಾಸಿಗಳ ಕೊರೊನಾ ಟೆಸ್ಟ್ ಗೆ ಮುಂದಾಗಿದೆ.

  • ಹೋಂ ಕ್ವಾರಂಟೈನ್ ಆದ ಬಳ್ಳಾರಿ ಜಿಲ್ಲಾಧಿಕಾರಿ

    ಹೋಂ ಕ್ವಾರಂಟೈನ್ ಆದ ಬಳ್ಳಾರಿ ಜಿಲ್ಲಾಧಿಕಾರಿ

    ಬಳ್ಳಾರಿ: ತಮ್ಮ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದ್ದರಿಂದ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಇದೀಗ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

    ಹೌದು. ಎಸ್.ಎಸ್ ನಕುಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಒಬ್ಬರಲ್ಲಿ ಕರೋನಾ ಸೋಂಕು ಇರುವುದು ದೃಢವಾಗಿದೆ. ಬಳ್ಳಾರಿಯ ಅನಂತಪುರ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಜಿಲ್ಲಾಧಿಕಾರಿ ಕ್ವಾರಂಟೈನ್‍ಗೆ ಒಳಪಟ್ಟಿದ್ದಾರೆ.

    ಡಿಸಿಯವರ ನಿವಾಸದ ಎದುರು ಅಧಿಕಾರಿಗಳು ಹೋಂ ಕ್ವಾರಂಟೈನ್ ಬೋರ್ಡ್ ಹಾಕಿದ್ದಾರೆ. ಮಂಗಳವಾರದಿಂದ ಶನಿವಾರದವರೆಗೆ ಹೋಂ ಕ್ವಾರಂಟೈನ್‍ನಲ್ಲಿ ಇರಲಿದ್ದು, ಮನೆಯಿಂದಲೇ ಕೆಲಸ ಮಾಡೋದಾಗಿ ಡಿಸಿ ನಕುಲ್ ಮಾಹಿತಿ ನೀಡಿದ್ದಾರೆ.

    ಜೊತೆಗೆ ಮನೆಯಲ್ಲಿ ಎಲ್ಲರೂ ಆರಾಮಾಗಿ ಇದ್ದಾರೆ. ವಿನಾಕಾರಣ ಗೊಂದಲ ಮಾಡಬೇಡಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ.

  • ‘ಮಾಸ್ಕ್ ಹಾಕಲ್ಲ, ಮನೆ ಒಳಗೂ ಇರಲ್ಲ, ಏನ್‌ ಮಾಡ್ತೀರೋ ಮಾಡ್ಕೊಳ್ಳಿʼ – ಹೋಂ ಕ್ವಾರಂಟೈನ್‌ ವ್ಯಕ್ತಿಯಿಂದ ಕಿರಿಕ್‌

    ‘ಮಾಸ್ಕ್ ಹಾಕಲ್ಲ, ಮನೆ ಒಳಗೂ ಇರಲ್ಲ, ಏನ್‌ ಮಾಡ್ತೀರೋ ಮಾಡ್ಕೊಳ್ಳಿʼ – ಹೋಂ ಕ್ವಾರಂಟೈನ್‌ ವ್ಯಕ್ತಿಯಿಂದ ಕಿರಿಕ್‌

    ಬೆಂಗಳೂರು: ಕೋವಿಡ್‌ 19 ನಿಯಮ ಉಲ್ಲಂಘನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಹೋಮ್‌ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾನೆ.

    ಕೆಂಗೇರಿಯ ಅಪಾರ್ಟ್‌ಮೆಂಟ್‌ನಲ್ಲಿದ್ದ ನಿವಾಸಿಗೆ ಕೋವಿಡ್‌ 19 ಪಾಸಿಟಿವ್‌ ಬಂದಿತ್ತು. ಆ  ನಿವಾಸಿಯನ್ನು ಕೋವಿಡ್‌ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಜೊತೆಗಿದ್ದ ವ್ಯಕ್ತಿಯನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗಿತ್ತು.

    ಆತನ ಮನೆಗೆ ಬಿಬಿಎಂಪಿ ಸಿಬ್ಬಂದಿ ಬಂದು ಕ್ವಾರಂಟೈನ್‌ ನೋಟಿಸ್‌ ಅಂಟಿಸಿ ಹೋಗಿದ್ದರು. ಆದರೆ ಕ್ವಾರಂಟೈನ್‌ನಲ್ಲಿದ್ದ ಈ ವ್ಯಕ್ತಿ ಎಂದಿನಂತೆ ವಾಕಿಂಗ್ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಮಾಸ್ಕ್ ಧರಿಸದೇ ಅಪಾರ್ಟ್ ಮೆಂಟ್ ತುಂಬಾ ಓಡಾಟ ಮಾಡಿದ್ದಾನೆ.

    ಓಡಾಟ ಮಾಡುವುದನ್ನು ಕಂಡು ನಿವಾಸಿಗಳು ಆತನನ್ನು ಪ್ರಶ್ನಿಸಿದ್ದಕ್ಕೆ, “ನಾನ್ ಮಾಸ್ಕ್ ಹಾಕಲ್ಲ. ಮನೆ ಒಳಗೂ ಇರಲ್ಲ, ಅದೇನ್ ಮಾಡ್ಕೋತಿರೋ ಮಾಡ್ಕೊಳ್ಳಿ” ಎಂದು ಕಿರಿಕ್‌ ಮಾಡಿದ್ದಾನೆ. ಅಷ್ಟೇ ಅಲ್ಲದೇ “ಬೇಕಾದ್ರೆ ಪೊಲೀಸರಿಗೆ ದೂರು ನೀಡಿ. ನಾನು ಹಿಂಗೆ ಇರ್ತೀನಿ” ಎಂದಿದ್ದಾನೆ. ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿರುವ ವೇಳೆ ನಿವಾಸಿಯೊಬ್ಬರು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    1.51 ಲಕ್ಷ ಮಂದಿಯಿಂದ ಉಲ್ಲಂಘನೆ
    ಸಿಲಿಕಾನ್‌ ಸಿಟಿಯಲ್ಲಿ ಕೊರೊನಾ ರಾಕೆಟ್‌ ವೇಗದಲ್ಲಿ ಏರಿಕೆಯಾಗುತ್ತಿದ್ದು, ಇದಕ್ಕೆ ಕ್ವಾರಂಟೈನ್‌ಗಳು ಒಂದು ರೀತಿಯಲ್ಲಿ ಕಾರಣರಾಗಿದ್ದಾರೆ. ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಬರೋಬ್ಬರಿ 1.51 ಲಕ್ಷ ಮಂದಿ ಕ್ವಾರಂಟೈನ್‌ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕೋವಿಡ್‌ 19 ಸೋಂಕಿತರ ಪ್ರಥಮ ಸಂಪರ್ಕ ಮತ್ತು ದ್ವಿತೀಯ ಸಂಪರ್ಕಿತರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಆದರೆ ಕರ್ನಾಟಕದಲ್ಲಿ 2.25 ಲಕ್ಷ ಮಂದಿ ಈ ನಿಯಮವನ್ನು ಉಲ್ಲಂಘಿಸಿ ಸುತ್ತಾಟ ಮಾಡಿದ್ದಾರೆ.

    ಈ ಪೈಕಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು 1.51 ಲಕ್ಷ ಮಂದಿ ಸುತ್ತಾಟ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದವರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಈಗಾಗಲೇ 1,645 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹೋಮ್‌ ಕ್ವಾರಂಟೈನ್‌ ಉಲ್ಲಂಘಿಸಿದ 2,205 ಮಂದಿಯನ್ನ ಸಾಂಸ್ಥಿಕ ಕ್ವಾರಂಟೈನ್‌ ಒಳಪಡಿಸಲಾಗಿದೆ.

    ಕ್ವಾರಂಟೈನಿಗಳ ಕೈಗೆ ಸೀಲ್, ಮನೆಗೆ ಭಿತ್ತಿಪತ್ರ ಅಂಟಿಸಲಾಗುತ್ತದೆ. ಅವರ ಚಟುವಟಿಕೆ, ಚಲನವಲನಗಳ ಮೇಲೆ ಅಕ್ಕಪಕ್ಕದವರು ನಿಗಾ ಇಡಬೇಕು. ಅವರು ಮನೆಯಿಂದ ಹೊರಬಂದರೆ ಪೊಲೀಸರಿಗೆ ಮಾಹಿತಿ ಕೊಡಬೇಕು. ಆಗ ಮಾತ್ರ ಕೊರೊನಾ ಹಬ್ಬುವುದನ್ನು ತಪ್ಪಿಸಬಹುದು. ಹೋಮ್‌ ಕ್ವಾರಂಟೈನ್‌ ನಿಯಮವನ್ನು ಪದೇ ಪದೇ ಉಲ್ಲಂಘಿಸಿ ಸ್ಥಳೀಯರು ದೂರು ನೀಡಿದರೆ ಸ್ಥಳಕ್ಕೆ ಪೊಲೀಸರು ಬಂದು ವ್ಯಕ್ತಿಯನ್ನು ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಾರೆ.

  • ರಾಯಚೂರು: ಹೊರ ಜಿಲ್ಲೆಯಿಂದ ಬಂದವರಿಗೆ 14 ದಿನ ಕಡ್ಡಾಯ ಹೋಂ ಕ್ವಾರಂಟೈನ್

    ರಾಯಚೂರು: ಹೊರ ಜಿಲ್ಲೆಯಿಂದ ಬಂದವರಿಗೆ 14 ದಿನ ಕಡ್ಡಾಯ ಹೋಂ ಕ್ವಾರಂಟೈನ್

    -ಬೆಂಗಳೂರಿನಿಂದ ಬರುವವರಿಂದ ಹೆಚ್ಚಿದ ಆತಂಕ

    ರಾಯಚೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಗುಳೆ ಹೋದವರು ಸ್ವಗ್ರಾಮಕ್ಕೆ ವಾಪಾಸ್ ಆಗಮಿಸುತ್ತಿದ್ದು, ಇಂತಹವರಿಗೆ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.

    ಕೊರೊನಾ ಭೀತಿಯಿಂದ ಬೆಂಗಳೂರಿನಿಂದ ಬಂದವರಿಗೆ ಹೋಂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಬೆಂಗಳೂರಿನಿಂದ ವಾಪಸ್ ಆಗುವವರಿಗೆ ಹೋಂ ಕ್ವಾರಂಟೈನ್ ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿಗಳ ಮೂಲಕ 14 ದಿನಗಳ ಹೋಂ ಕ್ವಾರಂಟೈನ್ ಬಗ್ಗೆ ಪ್ರತಿ ಗ್ರಾಮಗಳಲ್ಲಿ ಮೈಕ್ ಮೂಲಕ ಪ್ರಚಾರ ಮಾಡಿ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗುತ್ತಿದೆ.

    ಬೆಂಗಳೂರಿನಿಂದ ಬಂದವರ ಜೊತೆ ಸಂಪರ್ಕ ಬೇಡ, ಅಂತರ ಕಾಯ್ದುಕೊಳ್ಳಿ ಎಂದು ಗ್ರಾಮ ಪಂಚಾಯತಿ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ಹೋಂ ಕ್ವಾರಂಟೈನ್ ಅವಧಿ ಮುಗಿಯುವವರೆಗೆ ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ. ಮತ್ತೊಂದೆಡೆ ಕೊರೊನಾ ಭೀತಿಯಿಂದ ಭಯದಲ್ಲಿರುವ ಗ್ರಾಮೀಣ ಭಾಗದ ಜನರು ಬೆಂಗಳೂರಿನಿಂದ ಬಂದವರಿಂದ ನಮಗೆ ಭಯ ಇದೆ ಎನ್ನುತ್ತಿದ್ದಾರೆ. ಗುಳೆ ಕೂಲಿ ಕಾರ್ಮಿಕರು ಸ್ವಗ್ರಾಮದಲ್ಲಿ ಇರಬೇಕಾದರೆ ಹೋಂ ಕ್ವಾರಂಟೈನ್ ನಿಯಮ ಪಾಲಿಸಬೇಕು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

    ಜಿಲ್ಲೆಗೆ ಇಷ್ಟು ದಿನ ಮಹಾರಾಷ್ಟ್ರದ ನಂಟು ಕಂಟಕವಾಗಿತ್ತು. ಈಗ ಬೆಂಗಳೂರು, ಕಲಬುರ್ಗಿ ಸೇರಿದಂತೆ ಹೊರ ಜಿಲ್ಲೆಗಳಿಂದ ಬರುವವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಬೇರೆ ಜಿಲ್ಲೆಯಿಂದ ಬರುವವರ ಮೇಲೆ ಜಿಲ್ಲಾಡಳಿತ ನಿಗಾವಹಿಸಿದೆ. ಪ್ರತಿ ಗ್ರಾಮದಲ್ಲೂ ಹೊರ ಜಿಲ್ಲೆಯಿಂದ ಬಂದಿರುವವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಬೆಂಗಳೂರಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಕೂಲಿ ಕಾರ್ಮಿಕರು, ಬೇರೆ ಬೇರೆ ಉದ್ಯೋಗಿಗಳು ಕೆಲಸ ತೊರೆದು ಜಿಲ್ಲೆಗೆ ಮರಳುತ್ತಿದ್ದಾರೆ. ಹೀಗಾಗಿ ಹೊರ ಜಿಲ್ಲೆ ಹಾಗೂ ಹೊರರಾಜ್ಯದಿಂದ ಬಂದವರಿಗೆಲ್ಲರಿಗೂ ಕ್ವಾರಂಟೈನ್ ಮಾಡಲಾಗುತ್ತಿದೆ.

  • ಮಾಗಡಿ ಜೆಡಿಎಸ್ ಶಾಸಕ ಎ.ಮಂಜುನಾಥ್‍ಗೂ ಕೊರೊನಾ ಭೀತಿ

    ಮಾಗಡಿ ಜೆಡಿಎಸ್ ಶಾಸಕ ಎ.ಮಂಜುನಾಥ್‍ಗೂ ಕೊರೊನಾ ಭೀತಿ

    – ಹೋಂ ಕ್ವಾರಂಟೈನ್ ಆದ ಶಾಸಕ

    ರಾಮನಗರ: ಮಾಗಡಿ ಜೆಡಿಎಸ್ ಶಾಸಕ ಎ.ಮಂಜುನಾಥ್‍ಗೂ ಕೊರೊನಾ ಭೀತಿ ಶುರುವಾಗಿದೆ.

    ಶಾಸಕ ಎ.ಮಂಜುನಾಥ್ ಅವರ ಆಪ್ತ ಕಾರ್ಯದರ್ಶಿ ಹಾಗೂ ಮತ್ತೋರ್ವ ಸ್ನೇಹಿತ ಒಕ್ಕಲಿಗರ ಸಂಘದ ನಿರ್ದೇಶಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕು ಪಾಸಿಟಿವ್ ಬಂದಿರುವ ಇಬ್ಬರು ಕೂಡ ಶಾಸಕರ ಜೊತೆಗಿದ್ದವರು, ಈ ಹಿನ್ನೆಲೆಯಲ್ಲಿ ಎ.ಮಂಜುನಾಥ್ ಅವರು ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

    ಶಾಸಕರ ಆಪ್ತ ಕಾರ್ಯದರ್ಶಿಗೆ ಬೆಂಗಳೂರಿನ ರಾಜರಾಜೇಶ್ವರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಬಗ್ಗೆ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಳ್ಳುವ ಮೂಲಕ ತಾನು ಹೋಂ ಕ್ವಾರಂಟೈನ್ ಆಗಿರುವ ಬಗ್ಗೆ ತಿಳಿಸಿದ್ದಾರೆ. ಜೊತೆಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ನಾಳೆ ಶಾಸಕರ ಪರೀಕ್ಷಾ ವರದಿ ಬರುವ ಸಾಧ್ಯತೆಯಿದೆ. ಜೊತೆಗೆ ನಾನು ಕ್ವಾರಂಟೈನ್ ಆಗುತ್ತಿದ್ದು, ಜನರು ನನ್ನನ್ನು ದೂರವಾಣಿ ಮೂಲಕ ಸಂಪರ್ಕ ಮಾಡಬಹುದು ಎಂದು ಹೇಳಿದ್ದಾರೆ.

  • ಹೋಂ ಕ್ವಾರಂಟೈನ್‍ಲ್ಲಿದ್ರೂ ಕರ್ತವ್ಯ ನಿಭಾಯಿಸಿದ ಸಚಿವ ಸುಧಾಕರ್

    ಹೋಂ ಕ್ವಾರಂಟೈನ್‍ಲ್ಲಿದ್ರೂ ಕರ್ತವ್ಯ ನಿಭಾಯಿಸಿದ ಸಚಿವ ಸುಧಾಕರ್

    ಬೆಂಗಳೂರು: ಹೋಂ ಕ್ವಾರಂಟೈನ್‍ಲ್ಲಿದ್ದರೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಕೊರೊನಾ ನಿಯಂತ್ರಣ ಸಂಬಂಧ ಕರ್ತವ್ಯ ಮಾಡುತ್ತಿದ್ದಾರೆ.

    ಸುಧಾಕರ್ ಅವರ ತಂದೆ, ಪತ್ನಿ ಹಾಗೂ ಮಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಜೊತೆಗೆ ಅವರ ಮನೆಕೆಲಸದವರಿಗೂ ಸೋಂಕು ಇರುವುದು ಖಚಿತವಾಗಿತ್ತು. ಇವರೆಲ್ಲರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಸುಧಾಕರ್ ಅವರು ಸದ್ಯ ಹೋಂ ಕ್ವಾರಂಟೈನ್‍ನಲ್ಲಿ ಇದ್ದಾರೆ.

    ಹೋಂ ಕ್ವಾರಂಟೈನ್ ಅದರೂ ತನ್ನ ಕೊರೊನಾ ವಿರುದ್ಧದ ಹೋರಾಟ ನಿಲ್ಲಿಸದ ಸುಧಾಕರ್, ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿಕೊಂಡು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಗೃಹ ಕ್ವಾರಂಟೈನ್‍ನಲ್ಲಿರುವ ನಾನು ಇಂದು ಮನೆಯಿಂದಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದೆ. ಅನೇಕ ಮಹತ್ವಪೂರ್ಣ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.

    ಜೊತೆಗೆ ಹಿರಿಯ ಅಧಿಕಾರಿಗಳು ಮತ್ತು ವಿಕ್ಟೋರಿಯಾ, ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ, ಬೌರಿಂಗ್ ಮೊದಲಾದ ಕೋವಿಡ್ ಆಸ್ಪತ್ರೆಗಳ ನಿರ್ದೇಶಕರ ಜೊತೆಗೆ ಮಂಗಳವಾರ ನನ್ನ ಮನೆಯಿಂದಲೇ ವಿಡಿಯೋ ಸಂವಾದ ನಡೆಸಿದ್ದೇನೆ. ರೋಗಿಗಳ ದಾಖಲಾತಿ, ಆಹಾರ, ಸ್ವಚ್ಛತೆ, ಚಿಕಿತ್ಸೆಗಳಲ್ಲಿ ಲೋಪಗಳ ದೂರು ಬಂದಲ್ಲಿ ನಿರ್ದೇಶಕರುಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದೇನೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಮಹಾರಾಷ್ಟ್ರದಿಂದ ಬಂದವ್ರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಮಹಾರಾಷ್ಟ್ರದಿಂದ ಬಂದವ್ರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ

    ಬೆಂಗಳೂರು: ಮಹಾರಾಷ್ಟ್ರದಿಂದ ಬಂದವರಿಗೆ ಕೊನೆಗೂ ಹೋಂ ಕ್ವಾರಂಟೈನ್ ರದ್ದು ಮಾಡಲಾಗಿದೆ.

    ಮಹಾರಾಷ್ಟ್ರದಿಂದ ಬಂದವರಲ್ಲಿ ಕೊರೊನಾ ಸ್ಫೋಟವಾಗಿದ್ರೂ ಸಾಂಸ್ಥಿಕ ಕ್ವಾರಂಟೈನ್ ರದ್ದು ಮಾಡಿ ಹೋಂ ಕ್ವಾರಂಟೈನ್ ಮಾಡುವ ನಿರ್ಧಾರವನ್ನು ಸಚಿವರು ಪ್ರಕಟಿಸಿದ್ದರು. ಸರ್ಕಾರದ ಈ ನಡೆ ವಿರೋಧಿಸಿ ಪಬ್ಲಿಕ್ ಟಿವಿ ನಿರಂತರ ಸುದ್ದಿ ಪ್ರಸಾರ ಮಾಡಿತ್ತು.

    ಕೊನೆಗೂ ಪಬ್ಲಿಕ್ ಆಗ್ರಹಕ್ಕೆ ಮಣಿದು ಮಹಾರಾಷ್ಟ್ರದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಬದಲು 7 ದಿನ ಸಾಂಸ್ಥಿಕ ಕ್ವಾರಂಟೈನ್ ನಿರ್ಧಾರ ಪ್ರಕಟಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಮಹಾರಾಷ್ಟ್ರದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ರದ್ದು ಇಲ್ಲ. ಬದಲಾಗಿ 7 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.

    ಐಸಿಎಂಆರ್ ಸೂಚಿತ ಲ್ಯಾಬ್‍ನಲ್ಲಿ ಕೋವಿಡ್ ಟೆಸ್ಟ್ ನೆಗೆಟಿವ್ ಬಂದಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಇಲ್ಲ. 2 ದಿನಗಳ ಹಿಂದಿನ ಲ್ಯಾಬ್ ವರದಿ ಇದ್ದಲ್ಲಿ ಮಾತ್ರ ಸಾಂಸ್ಥಿಕ ಕ್ವಾರಂಟೈನ್ ರದ್ದು ಮಾಡಲಾಗುವುದು. ಬೇರೆ ರಾಜ್ಯದಿಂದ ಬಂದವರಿಗೆ ಮಾತ್ರ 14 ದಿನ ಹೋಂ ಕ್ವಾರಂಟೈನ್ ಕಡ್ಡಾಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಆದೇಶ ಹೊರಡಿಸಿದೆ.