ಬೆಂಗಳೂರು: ದೇಶದ ಜನರು 2024 ವರ್ಷವನ್ನು (New Year 2024) ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ರಾಜ್ಯಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು.
ಸಂಭ್ರಮದಿಂದ ಸಡಗರದಿಂದ ಹೊಸ ವರ್ಷವನ್ನ ವೆಲ್‍ಕಂ ಮಾಡಿಕೊಂಡ್ರು. ಅದರಲ್ಲೂ ಬೆಂಗಳೂರಿನಲ್ಲಿ ಹೊಸ ವರ್ಷ ಝಗಮಗಿಸಿತು. ಎಂ.ಜಿ. ರಸ್ತೆ (MG Road), ಬ್ರಿಗೇಡ್ ರಸ್ತೆ (Vrigade Road), ಚರ್ಚ್ ಸ್ಟ್ರೀಟ್ (Church Street) ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಪಟಾಕಿ ಸಿಡಿಸಿ, ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವ ಮೂಲಕ ಯುವ ಜನರು ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡರು.
ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‍ನ ಪಬ್‍ಗಳು, ಹೋಟೆಲ್‍ಗಳು ತುಂಬಿ ತುಳುಕಿದವು. ಇನ್ನು ರಸ್ತೆಗಳಲ್ಲಿ ಯುವಕ-ಯುವತಿಯರು ರಾತ್ರಿಯಿಡೀ ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು. ಜನಸಂದಣಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧ ಮಾಡಲಾಗಿತ್ತು. ಬ್ರಿಗೇಡ್ ರಸ್ತೆಯಲ್ಲಿ ತಳ್ಳಾಟ ನೂಕಾಟ ಹೆಚ್ಚಾಗಿದ್ದರಿಂದ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಇದನ್ನೂ ಓದಿ: ಕುಣಿದು ತೂರಾಡಿದ ಯುವತಿ – ಅಸಭ್ಯ ವರ್ತನೆ ತೋರಿದ್ದಕ್ಕೆ ಲವ್ವರ್‌ನಿಂದ ಯುವಕನಿಗೆ ಏಟು
ಮತ್ತೆ ಹೊಸ ವರ್ಷ ಬಂದಿದೆ. ಮತ್ತೆ ಎನ್ನುವುದೇ ಹೊಸ ಒಲವಿನ ಸಂಕೇತ. ಹೊಸದು ಯಾವಾಗಲೂ ಹೊಸದೇ. ಹಾಗಾಗಿ ಹಳೆಯ ಹಾಳೆಯ ಹರಿದು, ಹೊಸ ನೂಲು ಹೊಸೆದು, ಹೊಸ ಕನಸುಗಳ ಜೊತೆ ಹೆಜ್ಜೆ ಹಾಕೋಣ. ಆ ಹೆಜ್ಜೆಗಳು ಸದಾ ಹೊಸ ಹಾದಿಯನ್ನೇ ಹುಡುಕುತಿರಲಿ ಎಂದು ಪ್ರಾರ್ಥಿಸೋಣ.
2023ನ್ನೂ ಸ್ವಾಗತಿಸಿ ಸಂಭ್ರಮಿಸಿದ ನೆನಪೇ ಇನ್ನೂ ಕಳೆದಿಲ್ಲ… ಈಗ 2024ಕ್ಕೆ (New Year 2024) ಹೆಜ್ಜೆ ಇಟ್ಟಿದ್ದೇವೆ. ಈಗಾಗಲೇ ಗೋಡೆಗಳ ಮೇಲೆ ಹೊಸ ಕ್ಯಾಲೆಂಡರ್ ತೂಗಿ ಹಾಕಲಾಗಿದೆ. ಅದು ಕೇವಲ ಅಂಕಿ ಸಂಖ್ಯೆಗಳ ಕ್ಯಾಲೆಂಡರ್ ಆಗದೇ, ಅಸಂಖ್ಯೆ ಕನಸುಗಳು ತೂಗುಯ್ಯಾಲಿ ಆಗಲಿ ಎಂದು ಬಯಸೋಣ. ಕಳೆದ ವರ್ಷ ಏನೇ ಕಹಿ ಘಟನೆ ನಡೆದಿದ್ದರೂ ಈಗ ಕ್ಯಾಲೆಂಡರ್‌ನಂತೆ ಆ ಕಹಿ ಘಟನೆಗಳ ಜಾಗಕ್ಕೆ ಹೊಸ ಉತ್ಸಾಹವನ್ನೂ ತೂಗಿ ಹಾಕಿ, ಹೊಸ ತೊಟ್ಟಿಲೊಳಗೆ ಭರವಸೆಯನ್ನು ತೂಗೋಣ.
ಗತಿಸಿದ ವರ್ಷ ಎಷ್ಟೋ ನೋವು ಹಾಗೂ ನಲಿವುಗಳನ್ನು ಕೊಟ್ಟಿರಬಹುದು, ಆದರೆ ಈಗ ನಮಗೆ ಸಾಗಲು ಬೇಕಿರುವುದು ನಲಿವಿನ ಇಂಧನ ಮಾತ್ರ. ಹಾಗೇಯೇ ನಮ್ಮನ್ನು ಹತಾಶೆಗೆ ಸಿಲುಕಿಸಿದ ಎಡವಿದ ಹೆಜ್ಜೆಗಳನ್ನು ಮರಳಿ ಇಡಬಾರದೆಂಬ ಎಚ್ಚರಿಕೆ. ಕಳೆದ ವರ್ಷಗಳ ನಿರ್ಧಾರಗಳು ಏನಾದವೋ? ಈ ಬಗ್ಗೆ ಚಿಂತೆ ಬೇಡ. ಈ ಬಾರಿಯ ನಿರ್ಧಾರಗಳು ಹಳಿ ತಪ್ಪದಂತೆ ಹೇಗೆ ಸ್ಟೇರಿಂಗ್ ಹಿಡಿಯಬೇಕು ಎಂಬ ಬಲವಾದ ನಿರ್ಧಾರದೊಂದಿಗೆ ಹೆಜ್ಜೆ ಇಡಬೇಕಾದ ಸಮಯ ಇದು. ಪ್ರತಿ ಹೆಜ್ಜೆಯಲ್ಲೂ ಗೆಲುವನ್ನು ಹುಡುಕಬೇಕಿದೆ. ಆ ಹುಡುಕುವಿಕೆಯಲ್ಲಿ ನೂರು ಸಂಭ್ರಮದ ಹೆಜ್ಜೆಗಳು ಇಣುಕಬೇಕಿದೆ.
ಮನುಷ್ಯ ಬದುಕಿನಲ್ಲಿ ಕಳೆದುಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದೇ ಹೆಚ್ಚು. ಹೀಗಿರುವಾಗ ಯಾವ ಬೆಲೆಯೇ ಇಲ್ಲದ ನೋವುಗಳಿಗೆ ನಮ್ಮ ಕಿಸೆಯಲ್ಲಿ ಏನು ಕೆಲಸ ಹೇಳಿ? ಕೈತಪ್ಪಿದ ಯಾವ ಕ್ಷಣವೂ ನಮ್ಮದಲ್ಲ! ಮತ್ಯಾಕೆ ಮೊಬೈಲ್‍ನಲ್ಲಿ ಅದೇ ನೋವುಗಳನ್ನು ನೆನಪಿಸುವ ಆ.. ಸಾಂಗ್ಸ್? ಎದೆಯಲ್ಲಿ ನೋವು ಕರೆಗಿಸುವ ಹಾಡು ರಿಂಗಣಿಸಲು, ಪ್ರತಿ ಹಾಡೂ ಎಚ್ಚರಿಕೆಯ ಸುಪ್ರಭಾತ ಹಾಡಲಿ. ಮತ್ಯಾಕೆ ಎದೆ ಪಂಜರದಿಂದ ಹೊರಟ ನೋವಿನ ಹಕ್ಕಿಯನ್ನು ಕರೆ ತರುವ ಯತ್ನ! ಸಾಕಲ್ಲವೇ.. ಕತ್ತಲೆಯಲ್ಲಿ ಕತ್ತಲಾಗುವ ಹುಚ್ಚು, ಇನ್ನಾದರೂ ಬೆಳಕಿನ ದಿಕ್ಕಿನ ಕಿಟಕಿಯನ್ನು ತೆಗೆದಿಡೋಣ. ಕಿಟಕಿ ಮೂಲಕ ಬಂದ ಬೆಳಕು, ಬದುಕನ್ನು ಬೆಳಗಲಿ. ಸೊಡರೆಣ್ಣೆ ತೀರದಂತೆ ನಮ್ಮ ಮನಸುಗಳು ಕಾಪಾಡಿಕೊಳ್ಳಲಿ.
ಜೀವನದಲ್ಲಿ ಏರು-ಇಳಿವು, ಸುಖ-ದುಃಖ, ಮಾನ-ಅಪಮಾನ, ಸಿರಿತನ-ಬಡತನ ಎಲ್ಲವೂ ಇದ್ದದ್ದೆ. ಏರಿದವರು ಇಳಿಯಲೇಬೇಕು. ಇಳಿದವರು ಏರಲೇಬೇಕು. ಜೀವನವು ಒಂದುರೀತಿ ಜೋಕಾಲಿ ಇದ್ದಂತೆ. ಆ ಜೋಕಾಲಿಯಲ್ಲಿ ಕಷ್ಟಗಳು ಇಳಿಯಲಿ, ಸುಖವು ಏರಲಿ. ಏರಳಿತದ ಜೀಕಾಟದಲ್ಲಿ ಗೆಲುವು ನಮ್ಮದಾಗಲಿ.
ನಮ್ಮೊಳಗೆ ಏನಾಗಬೇಕು ಎಂಬುದು ಡೈರಿಯ ಮೊದಲ ಪುಟದಲ್ಲಿ ಬರೆಯುವುದಕ್ಕಿಂತ ಹಾಗೆಯೇ ಬದುಕಿ ಬಿಡುವುದು ಉತ್ತಮ. ಜೊತೆಗೆ ಕಗ್ಗದ ಕವಿ ಡಿವಿಜಿಯವರು ಹೇಳುವಂತೆ ನಗುವ ನಗಿಸುವ ನಗಿಸಿ ನಗುತ ಬಾಳುವ ವರವನ್ನು ಬೇಡಿಕೊಳ್ಳೋಣ. ಆ ವರವು ವರ್ಷಪೂರ್ತಿ ನಮ್ಮನ್ನು ಕಾಪಿಡಲಿ, ಆ ಕಾವು ಸದಾ ನಮ್ಮೊಳಗೆ ಪುಳಕ ಪುಟಿಸಲಿ.
ಜನ ಅಭಿವೃದ್ಧಿಯಾದರೆ ರಾಜ್ಯಗಳು ಅಭಿವೃದ್ಧಿಯಾದಂತೆ. ರಾಜ್ಯ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ಭಾರತದ (India) ಚಂದ್ರಯಾನ-3 (Chandrayaan-3) ಯಶಸ್ವಿಯಾಗಿದೆ. ಈ ವರ್ಷವೂ ಭಾರತದ ಸಾಧನೆ ವಿಶ್ವಕ್ಕೆ ಪಸರಿಸಲಿ. ಈ ಸಾಧನೆಯಲ್ಲಿ ನಮ್ಮ ನೆರಳು ಕಾಣಿಸಿಕೊಳ್ಳಲಿ. ಮತ್ತೆ ಹೊಸ ವರ್ಷ ಬಂದಿದೆ, ಮತ್ತೊಂದು ವರ್ಷ ಬರಲಿದೆ. ಲೆಕ್ಕ ಇಡುವುದ್ಯಾಕೆ? ಬದುಕು ಚೊಕ್ಕವಾಗಿಡೋಣವಷ್ಟೆ.
ಹೊಸ ವರ್ಷ 2024ರ (New Year 2024) ಶುರುವಿಗೆ ಕೌಂಟ್‌ಡೌನ್ ಶುರುವಾಗಿದೆ. ಕೊರೋನಾ ಹಾವಳಿ ಮಧ್ಯೆ ಹೊಸ ವರ್ಷ ಸೆಲೆಬ್ರೇಟ್ ಮಾಡಲು ಯುವಕ-ಯವತಿಯರ ಸಖತ್ ಆಗಿ ಪ್ಲ್ಯಾನ್ ನಡೆಯುತ್ತಿದೆ. ಇದರ ನಡುವೆ ಹೊಸ ವರ್ಷಕ್ಕೆ ಸರಿದೂಗುವ ಪಾರ್ಟಿ ಗೌನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಹೌದು.. ಹೊಸ ವರ್ಷ ಸೆಲೆಬ್ರೇಷನ್‌ಗೆ ಸಾಥ್ ನೀಡುವ 3 ಶೈಲಿಯ ಪಾರ್ಟಿ ಗೌನ್‌ಗಳು ಫ್ಯಾಷನ್ ಲೋಕಕ್ಕೆ ಎಂಟ್ರಿ ನೀಡಿವೆ. ಅದರಲ್ಲೂ ಈ ಜನರೇಷನ್ ಯುವತಿಯರಿಗೆ ಇಷ್ಟವಾಗುವಂತಹ ಗೌನ್‌ಗಳು ವಿಭಿನ್ನ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ. ಇದನ್ನೂ ಓದಿ:‘ಡಂಕಿ’ ಬಾಕ್ಸಾಫೀಸಿನ ಲೆಕ್ಕಾಚಾರ: 7 ದಿನದಲ್ಲಿ ಗಳಿಸಿದ್ದೆಷ್ಟು?
ಇನ್ನೇನೂ ಹೊಸ ವರ್ಷ ಆಗಮಿಸುತ್ತಿದೆ. ಸೆಲೆಬ್ರೇಷನ್ ಪಾರ್ಟಿಗೆ ಹೊಂದುವಂತೆ ಈಗಾಗಲೇ ನಾನಾ ಶೈಲಿಯ ಗೌನ್‌ಗಳು ಕಾಲಿಟ್ಟಿವೆ. ಅವುಗಳಲ್ಲಿ 3 ಶೈಲಿಯ ಮಾಡರ್ನ್ ವಿನ್ಯಾಸದ ಗೌನ್‌ಗಳು (Gowns) ಬೇಡಿಕೆ ಹೆಚ್ಚಿಸಿಕೊಂಡಿವೆ. ಅದರಲ್ಲೂ ಯಂಗ್ ಹುಡುಗಿಯರು ಹಾಗೂ ಕಾರ್ಪೋರೇಟ್ ಕ್ಷೇತ್ರದ ಯುವತಿಯರ ಮನ ಸೆಳೆದಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಇವು ಗ್ಲ್ಯಾಮರಸ್ ಟಚ್ ನೀಡುವುದರೊಂದಿಗೆ ಹಾಟ್ ಲುಕ್ ನೀಡುವ ಸ್ಯಾಟಿನ್ ಬಾಡಿಕಾನ್ ಗೌನ್ಸ್, ಶಿಮ್ಮರಿಂಗ್ ಸಾಫ್ಟ್ ಫ್ಯಾಬ್ರಿಕ್ ಗೌನ್ಸ್ ಹಾಗೂ ಶೈನಿಂಗ್ ಸಿಕ್ವೀನ್ಸ್ ಗೌನ್ಸ್ ನ್ಯೂ ಇಯರ್ ಪಾರ್ಟಿ ಗೌನ್ ಲಿಸ್ಟ್‌ನಲ್ಲಿ ಟಾಪ್ ಲಿಸ್ಟ್ ಸೇರಿವೆ ಎನ್ನುತ್ತಾರೆ.
ಹೊಸ ಶೈಲಿಯ ಗೌನ್‌ಗಳು ಈ ಬಾರಿ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಮ್ಯಾಚ್ ಆಗುವಂತಹ ಡಿಸೈನ್‌ಗಳಲ್ಲಿ ಬಂದಿವೆ. ಕೋಲ್ಡ್ ಶೋಲ್ಡರ್, ಆಫ್ ಶೋಲ್ಡರ್ ಸ್ಯಾಟಿನ್ ಗೌನ್‌ಗಳು ಹೊಸ ವಿನ್ಯಾಸದಲ್ಲಿ ಆಗಮಿಸಿವೆ. ಹೊಸ ವರ್ಷಕ್ಕೆ ಮೆರುಗು ತುಂಬಲು ಹೊಂದುವಂತೆ ಶೈನಿಂಗ್ ಕಲರ್ ಶೇಡ್‌ಗಳಲ್ಲಿ, ಸ್ಲಿಟ್ ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ಹೆಚ್ಚು ಹೆವ್ವಿ ವಿನ್ಯಾಸವಿಲ್ಲದ ಹುಡುಗಿಯರಿಗೆ ಇಷ್ಟವಾಗಲಿದೆ.
ನೋಡಿದಾಕ್ಷಣ ಕಣ್ಣು ಕೊರೈಸುವ ಶಿಮ್ಮರಿಂಗ್ ಫ್ಯಾಬ್ರಿಕ್‌ನ ಸಿಲ್ವರ್, ಗೋಲ್ಡ್, ಮಜೆಂಟಾ ಸೇರಿದಂತೆ ನಾನಾ ಶೇಡ್‌ಗಳ ಶೈನಿಂಗ್ ಗೌನ್‌ಗಳು ಹೊಸ ವರ್ಷದ ಹರ್ಷವನ್ನು ಹೆಚ್ಚಿಸಲು ಬಂದಿವೆ. ಯುವತಿಯರಿಗೆ ಇಷ್ಟವಾಗುವಂತಹ ಸ್ಲೀವ್, ಬಾಡಿ ಫಿಟ್ ವಿನ್ಯಾಸದಲ್ಲಿ, ಕಟೌಟ್ ಡಿಸೈನ್‌ಗಳಲ್ಲಿ ಮಾರುಕಟ್ಟಿಗೆ ಎಂಟ್ರಿ ಕೊಟ್ಟಿದೆ.
ಪಾರ್ಟಿಯಲ್ಲಿ ನೂರು ಜನರ ಮಧ್ಯೆಯೂ ಎದ್ದು ಕಾಣಬಹುದಾದ ಫ್ಯಾಬ್ರಿಕ್‌ನಲ್ಲಿ ಸಿದ್ಧಪಡಿಸಿರುವ ಸಿಕ್ವೀನ್ಸ್ ಗೌನ್‌ಗಳು ಈ ಬಾರಿ ಲೆಕ್ಕವಿಲ್ಲದಷ್ಟೂ ಮಿಕ್ಸ್ ಮ್ಯಾಚ್ ಶೇಡ್‌ಗಳಲ್ಲಿ ಬಂದಿವೆ. ನೋಡಲು ಸಿಂಪಲ್ ಡಿಸೈನ್‌ನಲ್ಲಿ ಆಗಮಿಸಿರುವ ಇವು ಈಗಾಗಲೇ ಬೇಡಿಕೆ ಹೆಚ್ಚಿಸಿಕೊಂಡಿವೆ.
ಬೆಂಗಳೂರು: ಹೊಸ ವರ್ಷದ (New Year 2024) ಪಾರ್ಟಿ ಮೂಡ್‌ನ ಬೆಂಗಳೂರಿಗೆ ‘ನಮ್ಮ ಮೆಟ್ರೋ’ (Namma Metro) ಗುಡ್ ನ್ಯೂಸ್ ಕೊಟ್ಟಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಡಿ.31 ರ ಮಧ್ಯರಾತ್ರಿಯಿಂದ ಜನವರಿ 1 ರ ಬೆಳಗಿನ ಜಾವ 2:15 ರವರೆಗೆ ಮೆಟ್ರೋ ಸೇವೆ ಅವಧಿ ವಿಸ್ತರಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಕಟಣೆ ಹೊರಡಿಸಿದೆ.
2024 ರ ಹೊಸ ವರ್ಷದ ಮುನ್ನಾದಿನ, ನಿಗಮವು ಮೆಟ್ರೋ ರೈಲು ಸೇವೆಗಳನ್ನು ನೇರಳೆ ಮತ್ತು ಹಸಿರು ಮಾರ್ಗದಲ್ಲಿ ವಿಸ್ತರಿಸುತ್ತಿದೆ. ಜ.1 ರ ಮಧ್ಯರಾತ್ರಿ 1:30 ಗಂಟೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲು ಸೇವೆ ಇರಲಿದೆ. 15 ನಿಮಿಷದ ಅವಧಿಗೆ ಒಂದರಂತೆ ಮೆಟ್ರೋ ಸಂಚರಿಸಲಿವೆ. ಮೆಜೆಸ್ಟಿಕ್‌ನಿಂದ ಜ.1 ರ ಬೆಳಗಿನ ಜಾವ 2:15 ರ ವರೆಗೆ ಎಲ್ಲಾ ನಾಲ್ಕು ದಿಕ್ಕುಗಳಿಗೂ ಕೊನೆಯ ರೈಲು ಸೇವೆ ಇರಲಿದೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್-2ರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಚಾಲನೆ
ಸಾರ್ವಜನಿಕರ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಎಂ.ಜಿ. ರೋಡ್ ಮೆಟ್ರೋ ನಿಲ್ದಾಣವನ್ನು ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನಕ್ಕೆ ಡಿ.31 ರ ರಾತ್ರಿ 11 ಗಂಟೆಗೆ ಮುಚ್ಚಲಾಗುವುದು. ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ಇರುವುದಿಲ್ಲ. ಮೆಟ್ರೋ ರೈಲುಗಳು ಪಕ್ಕದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಎಂದಿನಂತೆ ನಿಲ್ಲುತ್ತವೆ.
ಯಾವುದೇ ಮೆಟ್ರೋ ನಿಲ್ದಾಣಗಳಿಂದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್‌ಗೆ ವಿಸ್ತರಿಸಿದ ಅವಧಿಯಲ್ಲಿ ಟೋಕನ್, ಸ್ಮಾರ್ಟ್ ಕಾರ್ಡ್, ಎನ್‌ಸಿಎಂಸಿ ಕಾರ್ಡ್ ಮತ್ತು ಕ್ಯೂಆರ್ ಟಿಕೆಟ್‌ಗಳ ಮೂಲಕ ಪ್ರಯಾಣ ಮಾಡಬಹುದಾಗಿದೆ. ಜನದಟ್ಟಣೆಯನ್ನು ತಪ್ಪಿಸಲು ಮತ್ತು ಸಹ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವೈಟ್‌ಫೀಲ್ಡ್ (ಕಾಡುಗೋಡಿ) ಕಡೆಗೆ ಪ್ರಯಾಣಿಕರು ಟ್ರಿನಿಟಿ ಮೆಟ್ರೋ ನಿಲ್ದಾಣವನ್ನು ಬಳಸಬೇಕು. ಹಾಗೆಯೇ ಚಲ್ಲಘಟ್ಟ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ಕಡೆಗೆ ಪ್ರಯಾಣಿಸುವವರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಬಳಸಲು ಸೂಚಿಸಲಾಗಿದೆ. ಈ ಎರಡೂ ನಿಲ್ದಾಣಗಳು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಸಮಾನ ಅಂತರದಲ್ಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ‘ಬಾಟಲ್ ತಾರೋ’ ಅಂತಿದ್ದಾರೆ ನೀನಾಸಂ ಸತೀಶ್