ನವದೆಹಲಿ: ನ್ಯೂಜಿಲೆಂಡ್ ಮತ್ತು ಆಸ್ಟೇಲಿಯಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಆರಂಭಗೊಂಡಿದ್ದು, ಬಣ್ಣ ಬಣ್ಣದ ಪಟಾಕಿ, ಲೈಟ್ ಗಳಿಂದ 2021ನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಭಾರತದಲ್ಲಿ ಹೊಸ ವರ್ಷದ ಆಗಮನಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ.

ಆಕಾಲೆಂಡ್ ಜನತೆ ಯಾವುದೇ ನಿಬಂಧನೆ, ಷರತ್ತುಗಳಿಲ್ಲದೇ ಹೊಸ ವರ್ಷ ಆಚರಿಸಿದ್ದಾರೆ. ಸಿಡ್ನಿಯ ಹಾರ್ಬರ್ ಬ್ರಿಡ್ಜ್ ಅತ್ಯಂತ ವೈಭೋಗದಿಂದ ಅಲಂಕರಿಸಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಡಿಸೆಂಬರ್ 31ರ ಮಧ್ಯಾಹ್ನದಿಂದಲೇ ಹೊಸ ವರ್ಷಕ್ಕೆ ಸಿದ್ಧತೆ ನಡೆಸಿಕೊಂಡಿತ್ತು. ಗಲ್ಲಿ ಗಲ್ಲಿಗಳಲ್ಲಿ ಮ್ಯೂಸಿಕಲ್ ಇವೆಂಟ್ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ಮಧ್ಯಾಹ್ನದಿಂದಲೇ ಆರಂಭಗೊಂಡಿವೆ. ಆದ್ರೆ ಕೊರೊನಾದಿಂದಾಗಿ ಜನರು ಒಟ್ಟಾಗಿ ಸೇರುವುದನ್ನ ನಿಷೇಧಿಸಲಾಗಿತ್ತು. ಎಲ್ಲ ಕಾರ್ಯಕ್ರಮಗಳ ನೇರಪ್ರಸಾರ ಮಾಡಲಾಗುತ್ತಿದೆ. ಬ್ರಿಡ್ಜ್ ಬಳಿ ಸೇರಿದ ಕೆಲ ಜನ ಕುಣಿದು ಕುಪ್ಪಳಿಸಿ 2020ಕ್ಕೆ ವಿದಾಯ ಹೇಳಿದರು.

ಭಾರತದಲ್ಲಿ ಸಂಜೆ 4.30 ಆದಾಗ ನ್ಯೂಜಿಲೆಂಡ್ ನಲ್ಲಿ ರಾತ್ರಿ 12ರ ಗಂಟೆ ಬಾರಿಸಿತ್ತು. ಆಕಾಲೆಂಡ್ ನಲ್ಲಿ ಹೊಸ ವರ್ಷದ ಆಚರಣೆಗಾಗಿ ದೊಡ್ಡ ಇವೆಂಟ್ ಆಯೋಜಿಸಲಾಗಿತ್ತು. ಇಲ್ಲಿಯ ಸ್ಕೈ ಟವರ್ ಬಳಿ ಐದು ನಿಮಿಷ ಝಗಮಗಿಸುವ, ಬಣ್ಣದ ಚಿತ್ತಾರಗಳಿಂದ ಹೊಸ ವರ್ಷವನ್ನ ಸ್ವಾಗತಿಸಿಕೊಳ್ಳಲಾಯ್ತು.

ದುಬೈನ ಬುರ್ಜ್ ಖಲೀಫಾದಲ್ಲಿ ಲೈಟ್, ಲೇಸರ್ ಶೋ ಮಾಡಲಾಯ್ತು. ಕೊರೊನಾ ಹಿನ್ನೆಲೆ ಸರ್ಕಾರ ಕಠಿಣ ನಿಯಮಗಳನ್ನ ಹೇರಿದೆ. ಇನ್ನುಳಿದಂತೆ ಸಿಂಗಪುರ, ಪ್ಯಾರೀಸ್ , ಲಂಡನ್, ಮಾಸ್ಕೋ, ಬರ್ಲಿನ್, ಪಟಾಯ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ.











